ಅಂಕಲ್, ನಿಮ್ಮನ್ನು ತಬ್ಕೊಳ್ಳಾ?
Team Udayavani, Feb 26, 2019, 12:30 AM IST
ಸೆಕ್ಯೂರಿಟಿ ಗಾರ್ಡ್ ಅಂದ್ರೆ, ಅದೇನೋ ಕನಿಷ್ಠ ಹುದ್ದೆ ಅಂತ ಅಂದಾಜಿಸಿ, ಮೂಗು ಮುರಿಯುವ ಮಂದಿಗೇನೂ ಕಡಿಮೆ ಇಲ್ಲ. ಆದರೆ, ಆತ ಎಂಥ ಗ್ರೇಟ್ ವ್ಯಕ್ತಿ ಅನ್ನೋದನ್ನು ಇತ್ತೀಚೆಗೆ ಪುಟ್ಟ ಮಗುವೊಂದು ಜಗತ್ತಿಗೆ ತೋರಿಸಿಕೊಟ್ಟಿತು! ಅದೊಂದು ಮಾಲ್. ಸೆಕ್ಯೂರಿಟಿ ತನ್ನ ಪಾಡಿಗೆ ತಾನು ಬಂದವರಿಗೆಲ್ಲ ಸೆಲ್ಯೂಟ್ ಹೊಡೆದು, ಡೋರ್ ತೆಗೆಯುತ್ತಾ ನಿಂತಿದ್ದ. ಅವನ ಬಳಿ 4 ವರುಷದ ಪುಟಾಣಿಯೊಂದು ಬಂದು ನಿಂತಿತು. ಅದಕ್ಕೂ ಅವನು ಸೆಲ್ಯೂಟ್ ಹೊಡೆದ. ತನ್ನ ಪಾಡಿಗೆ ತಾನು ಅತ್ತಿತ್ತ ನೋಡುತ್ತಾ, ಆತ ಡ್ನೂಟಿ ಮುಂದುವರಿಸಿದ್ದ. 10 ನಿಮಿಷ ಕಳೆಯಿತು… ಸೆಕ್ಯೂರಿಟಿ, ಯಾಕೋ ತನ್ನ ಕಾಲ ಕೆಳಗೆ ನೋಡಿದ. ಯಾರೋ ನಿಂತಿದ್ದಾರಲ್ಲ, ಅಂತನ್ನಿಸಿತು… ನೋಡಿದರೇ, ಅದೇ ಪುಟಾಣಿಯೇ ನಗುತ್ತಾ ನಿಂತಿತ್ತು. ಕರಿ ಕೋಟು ತೊಟ್ಟು, ಕತ್ತಿನಲ್ಲಿ ಬಂಗಾರದ ಚೈನು ತೊಟ್ಟಿದ್ದ ಸಿರಿವಂತ ಪುಟಾಣಿ, ಯಾಕೆ ತನ್ನನ್ನೇ ನೋಡುತ್ತಿದೆ ಅನ್ನೋದೇ ಈತನಿಗೆ ತಿಳಿಯದಾಯಿತು.
“ಏನ್ ಬೇಕು ಪುಟ್ಟಾ?’ ಅಂತ ಕೇಳಿದ, ಸೆಕ್ಯೂರಿಟಿ. ಆ ಮಗು ಮಾತೇ ಆಡಲಿಲ್ಲ. ನಗುತ್ತಲೇ ಇತ್ತು. “ಚಾಕ್ಲೆಟ್ ಬೇಕಾ? ಐಸ್ ಕ್ರೀಮ್ ತಿಂತೀಯಾ?’ ಎಂದು ಕೇಳಿ, ಪರ್ಸ್ ನೋಡಿಕೊಂಡ. ಪಾಪ, ಪರ್ಸ್ನಲ್ಲಿ ದುಡ್ಡೇ ಇದ್ದಿರಲಿಲ್ಲ! ಆಗ ಪುಟಾಣಿಯೇ ಮುಗ್ಧವಾಗಿ ಹೇಳಿತು… “ಅಂಕಲ್, ನನಗೆ ಏನೂ ಬೇಡ. ನೀವು ಗನ್ ಹಿಡಿದು, ನನ್ನ ಕಣ್ಣಿಗೆ ಹೀರೋ ಥರ ಕಾಣಿ¤ದ್ದೀರ. ನಿಮ್ಮ ನಗು ನಂಗೆ ತುಂಬಾ ಇಷ್ಟ ಆಯ್ತು. ಬೇಜಾರಿಲ್ಲ ಅಂದ್ರೆ, ನಾನು ನಿಮ್ಮನ್ನು ಅಪ್ಪಿಕೊಳ್ಳಾ?’. ಅಂದಹಾಗೆ, ಈ ಘಟನೆ ನಡೆದಿದ್ದು ಚೀನಾದ ಬೀಜಿಂಗ್ನ ಮಾಲ್ ಒಂದರಲ್ಲಿ.