ಆ ದಿವ್ಯ ಮೌನದ ಒಳಗಿರುವುದೇನು?

Team Udayavani, Jun 18, 2019, 5:00 AM IST

ಧೈರ್ಯಸ್ಥೆ ಎನಿಸಿಕೊಂಡ ನಾನೇ ಇದೊಂದು ವಿಷಯದಲ್ಲಿ ಮಾತ್ರ ಅಂಜುಬುರುಕಿಯಾಗುತ್ತೇನೆ. ನಾಲಗೆಯ ತುದಿಯವರೆಗೂ ಬಂದ ಮಾತುಗಳು ಒಮ್ಮೆಲೇ ಮೌನದ ಶಿಖರವನ್ನೇರಿ ಕುಳಿತುಬಿಡುತ್ತವೆ. ಆಶ್ಚರ್ಯವೆಂದರೆ, ನಾನು ಮೌನಗೌರಿಯಾಗಿ ಕುಳಿತಾಗೆಲ್ಲ ನೀನೂ ಮೂಗನಂತೆ ಸುಮ್ಮನಿದ್ದುಬಿಡುತ್ತೀಯ.

ಮಾಧವ,
ನೆನಪಿದೆಯಾ? ಜೊತೆ ಜೊತೆಯಾಗಿ ಕುಳಿತು ನಾವಾಡಿರುವ ಮಾತುಗಳಿಗೆ, ಕಾಡುಹರಟೆಗಳಿಗೆ ಲೆಕ್ಕವೇ ಇಲ್ಲ. ಒಮ್ಮೊಮ್ಮೆ ಅರಳು ಹುರಿದಂತೆ ಹರಟೆ ಕೊಚ್ಚಿದರೆ, ಇನ್ನೊಮ್ಮೆ ಗಂಭೀರವಾದ ಚರ್ಚೆಗಳು. ಒಂದಷ್ಟು ಬಾರಿ ಒಬ್ಬರ ಕಾಲನ್ನೊಬ್ಬರು ಎಳೆಯುತ್ತಿದ್ದರೆ, ಮತ್ತೂಂದಷ್ಟು ಬಾರಿ ಭವಿಷ್ಯದ ಕುರಿತು ಸಲಹೆ-ಸಾಂತ್ವನಗಳು. ಹೊಟ್ಟೆ ಹುಣ್ಣಾಗುವಷ್ಟು ನಕ್ಕಿದ್ದಿದೆ, ಕರುಳು ಕಿತ್ತುಬರುವಂತೆ ದುಃಖ ತೋಡಿಕೊಂಡದ್ದೂ ಇದೆ. ಮಾತುಗಳಿಂದ ಕೋಪಗೊಂಡದ್ದು, ಬೇಸರಿಸಿಕೊಂಡದ್ದು… ಮತ್ತೆ ಮಾತಾಡಿ ಅವುಗಳನ್ನು ಬಗೆಹರಿಸಿಕೊಂಡದ್ದೂ ಇದೆ.

ಹೀಗೆ ನಮ್ಮ ನಡುವೆ ವಿನಿಮಯವಾಗುವ ಮಾತುಗಳ ಬಗ್ಗೆ ಬೇಕಷ್ಟು ಹೇಳಿಬಿಡಬಹುದು. ಆದರೆ ಮೌನದ ಬಗ್ಗೆ?

ನನ್ನ ಬಾಳಲ್ಲಿ ನೀನು ಅನಿರೀಕ್ಷಿತವಾಗಿ ದಕ್ಕಿದ ಅಮೂಲ್ಯ ರತ್ನ. ನಮ್ಮ ನಡುವಿನ ಬಾಂಧವ್ಯಕ್ಕೆ ಸ್ನೇಹವೆಂದು ನಾವೇ ಹೆಸರಿಟ್ಟು ಹೇಳಿಕೊಂಡಿದ್ದರೂ, ನಮ್ಮದು ಬರಿಯ ಸ್ನೇಹವೇ ಎಂಬ ಪ್ರಶ್ನೆಗೆ ನಮ್ಮಿಬ್ಬರಲ್ಲೂ ಉತ್ತರವಿಲ್ಲ. “ಸ್ನೇಹದ ಪರಿಧಿಗೂ ಮೀರಿದ ಆತ್ಮೀಯ ಬಂಧ ನಮ್ಮದು’ ಎಂದು ಹೇಳಿ ನೀನು ಸುಲಭವಾಗಿ ನುಣುಚಿಕೊಳ್ಳುತ್ತೀಯ. ಆದರೆ ನಾನು, ಆ ಬಂಧಕ್ಕೆ ಪ್ರೀತಿಯ ನಾಮಕರಣ ಮಾಡಿಬಿಟ್ಟಿದ್ದೆ. ಯಾವಾಗ, ಹೇಗೆ, ಯಾಕೆ ಎಂಬ ಪ್ರಶ್ನೆಗಳಿಗೆ ನಿರ್ದಿಷ್ಟ ಉತ್ತರಗಳಿಲ್ಲ ಅಥವಾ ಉತ್ತರ ಹೆಣೆಯಲು ಮಾತುಗಳಿಂದ ಸಾಧ್ಯವಿಲ್ಲ.

ಸಣ್ಣಪುಟ್ಟ ವಿಷಯಗಳನ್ನೂ ನಿನ್ನ ಕಿವಿಗೂದುವ ನಾನು, ಅದ್ಯಾಕೋ ಎಷ್ಟೇ ಪ್ರಯತ್ನಪಟ್ಟರೂ ಇದೊಂದು ವಿಷಯವನ್ನು ಮಾತ್ರ ನಿನಗೆ ಹೇಳಿಕೊಳ್ಳದೆ ನನ್ನಲ್ಲೇ ಉಳಿಸಿಕೊಂಡಿದ್ದೇನೆ. ಧೈರ್ಯ ಸಾಲದೋ ಅಥವಾ ಭಯವೋ ಗೊತ್ತಿಲ್ಲ. ಬಹುಶಃ ಎರಡೂ ಇರಬಹುದೇನೋ! ಆದರೆ, ಎಷ್ಟು ದಿನಗಳ ಮಟ್ಟಿಗೆ ಭಾವನೆಗಳಿಗೆ ಬೀಗ ಹಾಕಬಲ್ಲೆ? ಎಂದಾದರೊಮ್ಮೆ ಜಡಿದ ಬಾಗಿಲನೊಡೆದು ಈ ಒಲವ ರಾಗ ನಿನ್ನ ಕಿವಿ ತಲುಪಲೇಬೇಕಲ್ಲವೇ?

ಧೈರ್ಯಸ್ಥೆ ಎನಿಸಿಕೊಂಡ ನಾನೇ ಇದೊಂದು ವಿಷಯದಲ್ಲಿ ಮಾತ್ರ ಅಂಜುಬುರುಕಿಯಾಗುತ್ತೇನೆ. ನಾಲಿಗೆಯ ತುದಿಯವರೆಗೂ ಬಂದ ಮಾತುಗಳು ಒಮ್ಮೆಲೇ ಮೌನದ ಶಿಖರವನ್ನೇರಿ ಕುಳಿತುಬಿಡುತ್ತವೆ. ಆಗೆಲ್ಲ, ನಮ್ಮ ನಡುವೆ ಅಧಿಪತ್ಯ ಸಾಧಿಸುವುದು…. ದಿವ್ಯಮೌನ!!

ಆಶ್ಚರ್ಯವೆಂದರೆ, ನಾನು ಮೌನಗೌರಿಯಾಗಿ ಕುಳಿತಾಗೆಲ್ಲ ನೀನೂ ಮೂಗನಂತೆ ಸುಮ್ಮನಿದ್ದುಬಿಡುತ್ತೀಯ. ಅದು ನನ್ನ ಮೌನಕ್ಕೆ ನೀನು ನೀಡುವ ಮೌನ ಸಾಂತ್ವನವೋ ಅಥವಾ ನೀನೂ ನನ್ನನ್ನು ಪ್ರೀತಿಸುತ್ತಿದ್ದು, ಹೇಳಿಕೊಳ್ಳಲಾರದೆ ಒದ್ದಾಡುತ್ತಿರಬಹುದಾ?… ಈ ಆಲೋಚನೆ ಬಂದಾಗೆಲ್ಲ ನಿನ್ನ ಕಣ್ಣುಗಳಲ್ಲಿ ಹುಡುಕಾಡುತ್ತೇನೆ, ಏನಾದರೂ ಸುಳಿವು ಕಾಣಬಹುದಾ ಅಂತ. ನಿನ್ನ ಆ ಮೌನ ಸ್ನೇಹದ ಸುಧೆಯೋ, ಪ್ರೇಮದ ಪ್ರವಾಹವೋ ಅಂತ ನಿರ್ಧರಿಸಲಾಗದೆ ಸೋತು ಸುಮ್ಮನಾಗುತ್ತೇನೆ.

ನಮ್ಮ ಈ ಮೌನದ ಪರಿಗೆ ಒಂದಷ್ಟು ಅಸ್ಪಷ್ಟತೆಗಳಿವೆ ಗೆಳೆಯ. ಸ್ಪಷ್ಟತೆಗಾಗಿ ಇಲ್ಲಿ ಮಾತುಗಳ ಪ್ರವೇಶವಾಗಬೇಕೆಂಬ ಅನಿವಾರ್ಯವೂ ಇಲ್ಲ. ಮೌನಿಯಾಗೇ ನನ್ನ ಅಂಗೈಗೆ, ನಿನ್ನ ಅಂಗೈಯೊಳಗೊಂದಿಷ್ಟು ಬೆಚ್ಚಗಿನ ಜಾಗ ಕೊಟ್ಟರೂ ಸಾಕು…ಅಷ್ಟೇ ಸಾಕು…

ಕೇಳ್ಳೋ ಹುಡುಗಾ, ಮಾತುಗಳು ನಿರಂತರವಾಗಿ ಬಂದಪ್ಪುವ ಶರಧಿಯ ಅಲೆಗಳಂತೆ. ಮೌನ, ಅದೇ ಅಲೆಯೊಳಗೆ ಹುದುಗಿಕೊಂಡು ಬರುವ ಮರಳ ಕಣಗಳಂತೆ. ನಮ್ಮ ನಡುವಿನ ಪ್ರತಿಯೊಂದು ಮಾತಿನ ಅಲೆಯ ಒಡಲಲ್ಲೂ, ಮೌನದಿ ಅಭಿವ್ಯಕ್ತವಾಗುವ ಒಲವ ಮರಳ ಕಣಗಳಿವೆ. ಆ ಪುಟ್ಟ ಕಣಗಳಲ್ಲಿ ಪದಗಳ ಚೌಕಟ್ಟಿನಲ್ಲಿ ಕಟ್ಟಿಕೊಡಲಾರದಷ್ಟು ಅಗಾಧ ಪ್ರೇಮವಿದೆ.

ನಿನ್ನೊಲವ ತರಂಗಗಳ ಆಗಮನಕ್ಕಾಗಿ, ಕಡಲ ತೀರದ ಮರಳ ಹಾಸಿನಂತೆ ನನ್ನೆದೆ ಉಸಿರು ಬಿಗಿ ಹಿಡಿದು ಕಾದಿದೆ. ಒಂದೊಮ್ಮೆಯಾದರೂ ನನ್ನ ಮೌನವನ್ನು ಅರ್ಥೈಸಿಕೊಂಡುಬಿಡೋ ಹುಡುಗಾ…

ಇಂತಿ ನಿನ್ನ ರಾಧೆ!
ನಿರಾಳ


ಈ ವಿಭಾಗದಿಂದ ಇನ್ನಷ್ಟು

  • ಗಣಿತ ಸಮ್ಮೇಳನಗಳಲ್ಲಿ ಗಂಭೀರವಾದ ಉಪನ್ಯಾಸವಾದ ಮೇಲೆ ಪ್ರಶ್ನೋತ್ತರ ನಡೆಯುವುದು ರೂಢಿ. ಉಪನ್ಯಾಸದ ತಲೆಬುಡ ಅರ್ಥವಾಗದವರು ಕೂಡ ಆಗ ತಮಗೆಲ್ಲ ಅರ್ಥವಾಗಿದೆ ಎಂದು...

  • ನನ್ನ ಮೊಮ್ಮಗನನ್ನು ಮೂಡಬಿದಿರೆಯ ಆಳ್ವಾಸ್‌ ಕಾಲೇಜಿನ ಹಾಸ್ಟೆಲ್‌ಗೆ ಸೇರಿಸುವ ಸಲುವಾಗಿ ಬಾಡಿಗೆ ಕಾರೊಂದರಲ್ಲಿ ಬೆಳಗಿನ ಜಾವ ಐದು ಘಂಟೆಗೆ ಚಿತ್ರದುರ್ಗದಿಂದ...

  • "ನಮ್ಮ ಕುಟುಂಬ' ಅಂತ ಒಂದು ಗ್ರೂಪ್‌ ರಚನೆ ಮಾಡಿದ್ದು ಚಿಕ್ಕಪ್ಪನ ಮಕ್ಕಳು. ಇದರ ಉದ್ದೇಶ, ಊರಲ್ಲಿದ್ದು, ನಗರಗಳಲ್ಲಿ ಚೆಲ್ಲಾಪಿಲ್ಲಿಯಾಗಿದ್ದ ಅಷ್ಟೂ ಸಂಬಂಧಿಕರನ್ನು...

  • ಬಸ್‌ಸ್ಟಾಪ್‌ ನಲ್ಲಿ ಇಳಿದೆ. ಹಸಿವಾಗಿತ್ತು. ನನ್ನ ಬಳಿ ಹೆಚ್ಚು ಹಣವಿರಲಿಲ್ಲ. ಅದೊಂದು ಚಿಕ್ಕ ಅಂಗಡಿ ಬಳಿ ಹೋದೆ. ಪೇಪರ್‌ ಮತ್ತು ಎರಡು ಬಾಳೆ ಹಣ್ಣು ಕೇಳಿ, ನನ್ನ...

  • ಮಳೆ ಎಂದರೆ ಮನುಷ್ಯರಿಗಷ್ಟೇ ಅಲ್ಲ, ಪರಿಸರದ ಜೀವ ಸಂಕುಲಗಳಿಗೆಲ್ಲ ಸಂಭ್ರಮ. ಕಪ್ಪೆಗಳು ನೀರಿನಲ್ಲಿ ಕುಳಿತು ಗಾಳಿಯೊಂದಿಗೆ ರಾಗ ಭಾವವನ್ನು ತೇಲಿ ಬಿಡುತ್ತವೆ....

ಹೊಸ ಸೇರ್ಪಡೆ