ನೀವು ಯಾವ ಪಾರ್ಟಿ?

ಎಡವಟ್ಟಾಯ್ತು, ತಲೆ ಕೆಟ್ಟೋಯ್ತು !

Team Udayavani, Nov 5, 2019, 5:50 AM IST

ಫೇಸ್‌ಬುಕ್‌ನಲ್ಲಿ ನಮ್ಮ ಇನ್ನೊಂದು ಮುಖ ಹುದುಗಿರುತ್ತದೆ. ಅದು ಸದಾ ಕಾಣುವುದಿಲ್ಲ. ಆ ಮುಖವನ್ನು ಪರಿಚಯಿಸಲೋ ಎಂಬಂತೆ ಆಪ್ಷನ್‌ಗಳು ಕೊಡ್ತಾ ಇರ್ತವೆ. ಅಂಥದ್ದರಲ್ಲಿ ವಾಚ್‌ ಪಾರ್ಟಿ ಕೂಡ ಒಂದು. ಇದು ಒಳ್ಳೆಯದಕ್ಕೆ ಒಳ್ಳೆಯದು, ಕೆಟ್ಟದಕ್ಕೆ ಕೆಟ್ಟದ್ದು. ಬೇರೆ ಬೇರೆ ಕಡೆ ಇರುವ ಎಲ್ಲರೂ ಒಟ್ಟಿಗೇ, ಒಂದೇ ವೀಡಿಯೋ ನೋಡುವ ಆಪ್ಷನ್‌. ಬಹಳ ಚೆನ್ನಾಗಿದೆ, ಆದರೆ ಇದರ ಬಗ್ಗೆ ತಿಳಿಯದೇ ಇದ್ದರೆ ಆಗುವ ಎಡವಟ್ಟುಗಳು ಒಂದಾ, ಎರಡಾ…

ಮಾರ್ಕ್‌ ಜುಕರ್‌ರ್ಬರ್ಗ್‌ “ಫೇಸ್‌ಬುಕ್‌’ ಅಂತ ಯಾವ ಗಳಿಗೆಯಲ್ಲಿ ಹೆಸರಿಟ್ಟನೊ; ಅದು ಎಂಥ ಸಭ್ಯನೊಳಗಿನ ಒಂದು ಅಸಂಬದ್ಧ ಮುಖವನ್ನು ಪಟಾರನೆ ತೆಗೆದು ಹಾಕಿ, ಜಗತ್ತಿನ ಮುಂದೆ ಅಂಟಿಸಿ ಬಿಡುತ್ತದೆ. ಅದನ್ನು ನೋಡಿದವರು “ಇವ್ರು, ಹೀಗೇನಾ..’ ಅಂತ ಒಳಗೊಳಗೇ ಯೋಚಿಸಿ, ಕಡೆಗೆ ಯಾವುದೋ ನಿರ್ಧಾರಕ್ಕೆ ಬಂದು ಬಿಡುತ್ತಾರೆ. ನ್ಯೂಸ್ಪಿಡ್‌ನ‌ಲ್ಲಿ ಒಳ್ಳೊಳ್ಳೆ ಪೋಸ್ಟ್‌ ಹಾಕಿ ಪ್ರಬುದ್ಧನಂತೆ ತೋರುವ ಕೆಲವರು, ಒಬ್ಬಳು ಚಂದದ ಹುಡುಗಿಗೆ ಮಾಡುವ ಕೆಲಸ ಏನು ಗೊತ್ತಾ? ಆಕೆಯ ಮೆಸೆಂಜರ್‌ನಲ್ಲಿ ಹೊಗಳಿ ಹೊಗಳಿ ಕವನ ಬರೆದು ಕಾಟ ಕೊಡುವುದು. ನೋಡುವಷ್ಟು ನೋಡಿ, ಆಕೆ ಅದನ್ನು ನಾಲ್ಕು ಜನಕ್ಕೆ ತೋರಿಸಿ, ಒಮ್ಮೆ ತನ್ನ ಪೇಜಿನಲ್ಲಿ ಅಂಟಿಸಿಕೊಂಡರೆ ಇವರ ಕತೆ ಮುಗೀತು; ಬೆತ್ತಲಾಗುತ್ತಾರೆ.

ನಿಜ, ಸಾಮಾಜಿಕ ಜಾಲತಾಣಗಳು ಮತ್ತು ಅವು ದಿನೇದಿನೆ ಕೊಡಮಾಡುವ ಹೊಸ ಹೊಸ ಆಯ್ಕೆಗಳು ಮನುಷ್ಯನನ್ನು ಮತ್ತಷ್ಟು ಬೆತ್ತಲು ಮಾಡುವ ಕೆಲಸಕ್ಕೆ ಕೈ ಹಾಕುತ್ತಿವೆ. ಅವುಗಳಿಂದ ಸಾಕಷ್ಟು ಅನುಕೂಲಗಳಿವೆ ಎಂದು ಎಲ್ಲರೂ ಅಂದುಕೊಂಡಿರುತ್ತಾರೆ. ಅದರ ಮಗ್ಗುಲಲ್ಲೇ ನಮ್ಮತನ ಬಿಚ್ಚಿ ಹಾಕುವ ಆಯ್ಕೆಯೂ ಕಾದಿರುತ್ತದೆ. ಅದರಲ್ಲಿ ಇತ್ತೀಚಿಗಷ್ಟೇ ಫೇಸ್‌ಬುಕ್‌ನಲ್ಲಿ ಬಂದಿರುವ “ವಾಚ್‌ ಪಾರ್ಟಿ’ ಎಂಬ ಹೊಸ ಆಯ್ಕೆಯೂ ಒಂದು. ಅದು ಮಾಡಿದ ಒಂದು ಎಡವಟ್ಟನ್ನು ಇಲ್ಲಿ ನೆನೆಯೋಣ…

ಅವತ್ತೂಂದಿನ ಹೀಗಾಯ್ತು. ಫೇಸ್‌ಬುಕ್‌ ಪರಿಸರದಲ್ಲಿ ಒಂದು ಘನತೆಯನ್ನುಉಳಿಸಿಕೊಂಡು ಬಂದಿದ್ದ ನನ್ನ ಗೆಳೆಯನೊಬ್ಬ ವಾಚ್‌ ಪಾರ್ಟಿ ಕೈಗೆ ಸಿಕ್ಕು ಫ‌ಜೀತಿಗೆ ಒಳಗಾಗಿದ್ದ. ಅವನಿಗೆ ವಾಚ್‌ ಪಾರ್ಟಿಯ ಬಗ್ಗೆ ಏನೇನೂ ಗೊತ್ತಿಲ್ಲ. ತೀರಾ ಅಶ್ಲೀಲ ಅನಿಸುವ ವಿಡಿಯೋ ಒಂದನ್ನು ಫೇಸ್‌ಬುಕ್‌ನಲ್ಲಿ ಕಂಡು, ಅದರ ಬಗ್ಗೆ ಕುತೂಹಲ ತಾಳಿ ಅದನ್ನು ನೋಡುವ ಭರದಲ್ಲಿ ಇವನು ವಾಚ್‌ ಪಾರ್ಟಿ ಪೋಸ್ಟ್‌ ಮಾಡಿಬಿಟ್ಟಿದ್ದಾನೆ. ಅದು ಇವನ ಗೆಳೆಯರಿಗೆಲ್ಲಾ ಟಾಂಟಾಂ ಬಾರಸಿ ಬಿಟ್ಟಿದೆ. ಇವರು ಪೇಸ್‌ಬುಕ್‌ನಲ್ಲಿ ಇರೋದು ಇಂತಹ ವಿಡಿಯೋ ನೋಡೋಕಾ ಅಂತ ಮುಸಿಮುಸಿ ನಕ್ಕಿದ್ದಾರೆ. ಆ ಸಂದರ್ಭದಲ್ಲೇ ನಾನೂ ಅವನಿಗೆ ಫೋನ್‌ ಮಾಡಿ, ಏನೋ ಇದು? ಅಂದೆ. “ಗೊತ್ತಿಲ್ಲ ಮಾರಾಯ’ ಅಂದ. ಅಷ್ಟರೊಳಗೆ ಫ್ರೆಂಡ್ಸೆಲ್ಲಾ ಅದನ್ನು ನೋಡಿ, ” ಓಹ್‌, ಈ ಮನುಷ್ಯ ಈ ಥರಾ’ ಎಂದು ಅವರವರೇ ಇವನ ಬಗ್ಗೆ ನಿರ್ಧಾರ ಮಾಡಿಬಿಟ್ಟಿದ್ದರು. ಇದೆಲ್ಲವೂಗೊತ್ತಾಗಿ ಪುಣ್ಯಾತ್ಮ ಅಕೌಂಟ್‌ ಡಿಲೀಟ್‌ ಮಾಡಿ ಫೇಸ್‌ಬುಕ್‌ನಿಂದ ಎದ್ದು ಹೊರಟುಹೋದ. ಅವನು ಅದನ್ನು ನೋಡಿದ್ದು ಸರಿಯಾ, ತಪ್ಪಾ ಎಂಬುದು ನನ್ನವಾದವಲ್ಲ. ಅದವನ ವೈಯಕ್ತಿಕ.

ಅದು ಹೇಗೆ ಕ್ಷಣಮಾತ್ರದಲ್ಲಿ ಜಗಜ್ಜಾಹೀರು ಆಯ್ತು ಎಂಬುದು ನೋಡಿ. ವಾಚ್‌ಪಾರ್ಟಿಯೂ ಸೇರಿದಂತೆ ಜಾಲತಾಣಗಳು ತರುವ ಹೊಸ ಹೊಸ ಆಯ್ಕೆಗಳು ಏನೂ ಗೊತ್ತಾಗದವರಿಂದ ಇಂಥ ಎಡವಟ್ಟುಗಳನ್ನು ಮಾಡಿಸುತ್ತವೆ. ಮಾನ ಮರ್ಯಾದೆಯನ್ನು ಹರಾಜು ಹಾಕುತ್ತವೆ.

ಏನಿದು ವಾಚ್‌ ಪಾರ್ಟಿ?
ನಿಮಗೆ ಪಾರ್ಟಿ ಬಗ್ಗೆ ಗೊತ್ತಲ್ಲ? ಒಂದಷ್ಟು ಜನ ಒಂದು ಕಡೆ ಸೇರಿಕೊಂಡು ಏನಾದರೂ ಮುಕ್ಕುತ್ತಾ ಹರಟೆ ಹೊಡೆಯುವುದು. ಈ ವಾಚ್‌ ಪಾರ್ಟಿಯು ಕೂಡ ಅದೇ ತರಹ. ನಾವೆಲ್ಲ ಒಂದು ಕಡೆ ಇರೋಕೆ ಆಗಲ್ಲ, ಆಗ ಎಲ್ಲರೂ ಒಟ್ಟಿಗೆ ಒಂದೇ ವಿಡಿಯೋ ನೋಡಬಹುದು. ಅದರ ಬಗ್ಗೆ, ನೋಡಿದ ಪ್ರತಿಯೊಬ್ಬರೂ ಒಟ್ಟಿಗೆ ಅಭಿಪ್ರಾಯ ಹಂಚಿಕೊಳ್ಳಬಹುದು. ಎಲ್ಲೆಲ್ಲೋ ಇರುವವರು ಒಟ್ಟಿಗೆ ಕುಳಿತು ನೋಡಬಹುದಾದ ವಿಡಿಯೋ ವೀಕ್ಷಣೆಯನ್ನು “ವಾಚ್‌ ಪಾರ್ಟಿ’ ಅನ್ನಲಾಗುತ್ತದೆ. ಮೊದಲೇ ಯಾರೋ ಹೋಸ್ಟ್‌ ಮಾಡಿದ ವಾಚ್‌ ಪಾರ್ಟಿಗೆ ನೀವು ಸೇರಿಕೊಳ್ಳಬಹುದು. ಇದು ಲೈವ್‌ ವಿಡಿಯೋ ಅಲ್ಲ. ಮೊದಲೇ ಚಿತ್ರೀಕರಿಸಿಕೊಂಡ ಯಾವುದೇ ವಿಡಿಯೋ ಆಗಬಹುದು, ಅದನ್ನು ಎರಡಕ್ಕಿಂತ ಹೆಚ್ಚು ಜನ ಒಟ್ಟಿಗೆ ವೀಕ್ಷಿಸಬಹುದು.

“ವಾಚ್‌ ಪಾರ್ಟಿ’, ಪೇಸ್‌ಬುಕ್ಕಿನಲ್ಲಿ ತುಂಬಾ ಒಳ್ಳೆಯ ಆಯ್ಕೆ. ಆದರೆ ಬಳಸಲು ಬರೆದಿದ್ದರೆ ಮಾತ್ರ ಎಡವಟ್ಟುಗಳು ಗ್ಯಾರಂಟಿ. ಎಲ್ಲೋ ದೂರ ದೂರ ಇರುವ ಗೆಳೆಯರೆಲ್ಲ ಒಂದೆಡೆ ಕೂತು ವಿಡಿಯೋ ನೋಡಲಾಗುವುದಿಲ್ಲ. ಅದರ ಬಗ್ಗೆ ಮಾತನಾಡಲಾಗುವುದಿಲ್ಲ. ಆದರೆ, ಅದನ್ನು ವಾಚ್‌ ಪಾರ್ಟಿ ಸಾಧ್ಯ ಮಾಡುತ್ತದೆ.

ಕಾಳಜಿ ಇರಲಿ
ಕೆಲವರಂತೂ ತಮ್ಮ ಪೇಜ್‌ನಲ್ಲಿ ಏನೇ ಬರೆದುಕೊಂಡರೂ, ಅದರೊಂದಿಗೆ ಒಂದು ಹುಡುಗಿಯ ಚಿತ್ರ ಹಾಕುತ್ತಾರೆ. ಅವರ ಎಲ್ಲಾ ಭಾವನೆಗಳಿಗೂ ಹುಡುಗಿಯ ಚಿತ್ರಗಳೇ ದೃಷ್ಟಾಂತ. ಅದರ ಹಿಂದೆ ಅವರ ಮನೋಸ್ಥಿತಿ ಮತ್ತು ಕೇವಲ ಲೈಕ್‌ ಗಳಿಸಲು ಪಡುವ ಪಡಿಪಾಟಲು ಅರ್ಥವಾಗುತ್ತದೆ. ನೀವು ಏನೇ ಹೇಳಿ, ಯಾರದೇ ಆಗಲಿ, ಅವರ ಫೇಸ್‌ಬುಕ್‌ ಪೇಜನ್ನು ಆರಂಭದಿಂದ ಗಮನಿಸಿ ಬಿಟ್ಟರೆ, ಇವರು ಇಂಥವರೇ ಅಂತ ಹೇಳಿಬಿಡಬಹುದು. ಗುಟ್ಟಾಗಿ ಅವರಿವರ ಇನ್‌ ಬಾಕ್ಸಿಗೆ ತಡಕಾಡುವ, ಕದ್ದು ಏನೇನೋ ನೋಡುವ ವಿಚಾರಗಳು ಇದರ ಲೆಕ್ಕದಲ್ಲಿ ಇಲ್ಲ.

ಹೀಗೆ ಗುಟ್ಟು-ಗುಟ್ಟು ವಿಚಾರಗಳನ್ನು ಕೆಲವೊಮ್ಮೆ ವಾಚ್‌ ಪಾರ್ಟಿ ಬಹಿರಂಗಪಡಿಸಿ ಬಿಡುವ ಅಪಾಯವಿದೆ. ಅದಕ್ಕೆ ಕಾರಣ ಅದರ ಬಗ್ಗೆ ಸರಿಯಾದ ಜ್ಞಾನ ಇಲ್ಲದಿರುವುದೇ ಆಗಿದೆ. ಅಷ್ಟೇ ಅಲ್ಲ, ನೀವು ನೋಡುವ ವಿಡಿಯೋಗಳು ನಿಮ್ಮ ವ್ಯಕ್ತಿತ್ವವನ್ನು ಹೇಳಿಬಿಡುತ್ತವೆ. ಆದ್ದರಿಂದ , ವಾಚ್‌ ಪಾರ್ಟಿಗೆ ಸೇರುವ ಮುನ್ನ ಒಮ್ಮೆ ಯೋಚಿಸಿ. ಚೆಂದದ ವಿಡಿಯೋ ಬಂತು ಅಂತ ನುಗ್ಗಿ ಬಿಡಬೇಡಿ. ನೀವು ನೋಡುತ್ತಿರುವ ವಿಡಿಯೋ ಬಗ್ಗೆ ಬರೆಯುವ ಕಾಮೆಂಟ್‌ಗಳನ್ನು ಎಲ್ಲರೂ ಗಮನಿಸುತ್ತಾರೆ. ಒಂದು ಸಭ್ಯ ರೀತಿಯಲ್ಲಿ ನೀವು ಅಲ್ಲಿ ನಡೆದುಕೊಳ್ಳಬೇಕಾಗುತ್ತದೆ. ವಾಚ್‌ ಪಾರ್ಟಿ ಫೇಸ್‌ಬುಕ್‌ನಲ್ಲಿ ಒಂದು ಒಳ್ಳೆಯ ಆಯ್ಕೆ. ಆದರೆ ಅದನ್ನು ಯಾವಾಗ ಮತ್ತು ಹೇಗೆ ಬಳಸಿಕೊಳ್ಳುತ್ತೇವೆ ಎನ್ನುವುದರ ಮೇಲೆ ಅದು ನಿರ್ಧರಿತವಾಗುತ್ತದೆ.

ಅಂದ ಹಾಗೆ ನೀವು ಯಾವ ಪಾರ್ಟಿ?

ಸದಾಶಿವ ಸೊರಟೂರು

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ನಾವು ಬೆಳಗ್ಗೆ ಎದ್ದಾಕ್ಷಣ ಗಡಿಯಾರ ನೋಡುವುದಿಲ್ಲ. ಹಾಸಿಗೆಯ ಪಕ್ಕದಲ್ಲೇ ಅಲ್ಲೆಲ್ಲೋ ಬಿದ್ದಿರುವ ಮೊಬೈಲನ್ನು ಎತ್ತಿಕೊಂಡು ಅರೆಗಣ್ಣಿನಲ್ಲೇ ಗಂಟೆ ಎಷ್ಟಾಯ್ತು...

  • ಕ್ರಷ್‌ ಮತ್ತು ಲವ್‌, ಇವೆರಡೂ ಒಂದೇನಾ? ಇದು, ಇವತ್ತಿನ ಯುವ ಜನತೆಗಿರುವ ಗೊಂದಲ ಇದು. ಒಂದು ಸಲ ಕ್ರಷ್‌ ಶುರುವಾದರೆ ಮುಗೀತು. ಅದರ ಅಂಗೈಯಲ್ಲಿ ನಾವು. ಇಡೀ ಜಗತ್ತೇ...

  • ಅವನು ಉತ್ತರ, ಇವಳು ದಕ್ಷಿಣ. ಅವನು ಹುಬ್ಬಳ್ಳಿ ಹೈದ, ಇವಳು ಕರಾವಳಿ ಮೀನು. ಇಬ್ಬರ ಭಾಷೆ, ಸಂಪ್ರದಾಯ, ಸಂಸ್ಕೃತಿ, ಆಚಾರ-ವಿಚಾರಗಳೇ ಬೇರೆ ಬೇರೆ. ಆದರೆ ದೇವರು ಬರೆದ ಕಥೆಯಲ್ಲಿ...

  • ಮುದ್ದಿನ ಹುಡುಗಿ ಚೆಂದ ,ಮೌನದ ರೂಪವೇ ಅಂದ. ಚಂದಕ್ಕೆ ಚಂದ ಅಂತೆ ನಿನ್ನ ಅಂದವೂ... ಈ ಹಾಡು, ನಿನ್ನನ್ನು ನೋಡಿದ ಕೂಡಲೇ ಮನದ ಮೂಲೆಯಲ್ಲಿ ಪಲ್ಲವಿಸುತ್ತದೆ.ಮೌನಂ ಸಮ್ಮತಿ...

  • ಅವರ ಜೊತೆಗಾರ ರಾಜಕಾರಣಿಗಳ ಬಳಿ ಎರಡು ಮೂರು ಕಾರುಗಳಿದ್ದವು. ಆದರೆ ಗೃಹಸಚಿವ ಅನ್ನಿಸಿಕೊಂಡ ನಂತರವೂ ಇವರು ಸ್ವಂತದ ಕಾರು ಖರೀದಿಸಲಿಲ್ಲ. ಆಗ ಕೂಡ ಮಕ್ಕಳನ್ನು...

ಹೊಸ ಸೇರ್ಪಡೆ