ಅನುರಾಗದ ಒರತೆಯ ದಿಕ್ಕು ಯಾಕೆ ಬದಲಿಸಿದೆ?

Team Udayavani, Apr 16, 2019, 6:00 AM IST

ನೀನು ಕೊಟ್ಟಿದ್ದ ಪ್ರತಿಯೊಂದು ಗ್ರೀಟಿಂಗ್‌, ಚಾಕೊಲೇಟ್‌, ಜೆಮ್ಸ್‌ ಪ್ಯಾಕ್‌ ಕವರ್‌, ಲಾಲಿಪಪ್‌ ಕಡ್ಡಿಗಳೆಲ್ಲ ಬೀರುವಿನೊಳಗೆ ಭದ್ರವಾಗಿವೆ. ಫ್ರೆಂಡ್‌ಶಿಪ್‌ ಡೇಗೆ ಕೊಟ್ಟ ಕೆಂಪು ಗುಲಾಬಿ ಬಣ್ಣ ಮಾಸಿ ಒಣಗಿದರೂ ನನ್ನ ಡೈರಿಯ ಪುಟದಲ್ಲಿ ಬೆಚ್ಚಗೆ ಮಲಗಿದೆ. ಇನ್ನೇನು ನೀನಾಗಿಯೇ ಬಂದು ಪ್ರಪೋಸ್‌ ಮಾಡ್ತೀಯ ಅಂತ ಅಂದುಕೊಂಡವಳಿಗೆ ಎಂಥಾ ಶಾಕ್‌ ನೀಡಿಬಿಟ್ಟೆ!

ಕೆಳಗೆ ಉರಿಯುವ ಬೀದಿದೀಪಗಳು ನಿದ್ರೆಯಲ್ಲೂ ತಮ್ಮ ಕರ್ತವ್ಯಲೋಪವಾಗದಂತೆ ಮಂದವಾಗಿ ಉರಿಯುತ್ತಿವೆ. ಕಿಟಕಿಯ ಸರಳುಗಳಿಂದ ರಸ್ತೆಯತ್ತ ಇಣುಕಿ ನೋಡಿದರೆ ಪಕ್ಕದ ಮನೆಯವರ ಗೊರಕೆ ಶಬ್ದ ಕಿವಿಗಪ್ಪಳಿಸುತ್ತಿದೆ. ಮನೆಯಲ್ಲಿ ಯಾರಿಗೂ ಅನುಮಾನ ಬಾರದಂತೆ ಕತ್ತಲೆಯಲ್ಲಿ ಕುಳಿತು ನಿನ್ನನ್ನು ಮನದೊಳಗೆ ಆಹ್ವಾನಿಸಿಕೊಂಡಿರುವೆ.

ಹೌದು ಗೆಳೆಯ, ಊರೆಲ್ಲಾ ಸುಖನಿದ್ದೆಯಲ್ಲಿ ಇರುವಾಗ ನಾನು ಮಾತ್ರ ನಿನ್ನನೆನಪುಗಳ ಚಿತೆಯೇರಿ ಚಳಿಗೂ ಬೆವರುತ್ತಿರುವೆ. ಕಳೆದು ಹೋದ ವರ್ಷವನ್ನೇ ಹಿಂದಿರುಗಿಸು ಅಂತ ದೇವರಲ್ಲಿ ದಿನವೂ ಕೇಳಿಕೊಳ್ಳುತ್ತಿರುವೆ.

ಅದೆಷ್ಟೋ ಚೆಂದದ ನೆನಪುಗಳನ್ನು ಪೇರಿಸಿದ್ದವು ಆ ದಿನಗಳು. ನೀನೇನೋ, “ನೋಡು, ಹೇಗಿದೆ ಈ ಕಾರ್ಡ್ಸ್‌?’ ಅಂತ ನನ್ನ ಮುಂದಿರಿಸಿದ್ದೆ. ಶಿವ-ಪಾರ್ವತಿಗಿಂತ, ರಾಧೆ-ಕೃಷ್ಣನ ಜೊತೆಗೆ ನವಿಲುಗರಿಯ ಕಾರ್ಡ್‌ ಆರಿಸಿ ಕೈಗಿಟ್ಟೆನಾ? ಮುಂದೊಂದು ದಿನ ಅದೇ ನಮ್ಮ ವಿವಾಹದ ಕರೆಯೋಲೆಯ ಮುಖಪುಟ ಆಗಬಹುದೆಂಬ ಭ್ರಮೆಯಲ್ಲಿ. ಆದರೆ, ಹೊಸವರ್ಷದ ರಾತ್ರಿ ಹನ್ನೆರಡಾದರೂ ಬರದ ಮೆಸೇಜ್‌, ಕರೆ ಏನೋ ಅನುಮಾನ ಹುಟ್ಟಿಸಿತ್ತು. ನಾನೇ ಕರೆ ಮಾಡಿದರೆ, “ಬ್ಯುಸಿ’ ಟೋನ್‌ ಪದೇ ಪದೆ ಕೇಳುತ್ತಿತ್ತು.

ಮಾರನೆದಿನ ಬಂದವನೇ, “ಕ್ಷಮಿಸು ಗೆಳತಿ, ಮನೆಯವರ ಮಾತು ಮೀರಲಾರೆ. ಮಾರ್ಚ್‌ ನಂತರ ಮುಹೂರ್ತ ಇಲ್ಲ. ಅದಕ್ಕೆ ಅಪ್ಪ-ಅಮ್ಮ ಫೆಬ್ರವರಿಯಲ್ಲೇ ವಿವಾಹ ನಿಶ್ಚಯಿಸಿಬಿಟ್ಟರು. ಸಾಧ್ಯವಾದರೆ ಬಾ’ ಎಂದು ಅದೇ ಕಾರ್ಡು ಕೈಗಿತ್ತು ಹೊರಟೇ ಬಿಟ್ಟೆ, ಏನೂ ಆಗೇ ಇಲ್ಲವೆಂಬಂತೆ.

ಈಗಲೂ ಅದೇ ರಸ್ತೆಯನ್ನು ಇಣುಕಿ ನೋಡುತ್ತೇನೆ. ನೀನು ಬೈಕಿನ ಹಿಂದೆ ಕೂರಿಸಿಕೊಂಡು ಬಂದ ರಸ್ತೆಯ. ಮತ್ತೆ ನನ್ನ ನೆನಪಾಗಿ, ಡ್ರಾಪ್‌ ಕೊಡುವ ನೆಪದಲ್ಲಿ ಬರುವೆಯಾ ಎಂದು. ನೀನು ಬರುವುದಿಲ್ಲ ಅಂತ ನಂಗೊತ್ತು. ಹಾಗಂತ, ಹುಡುಗರಂತೆ ನಾನು ಮಧುಬಟ್ಟಲಿನಲ್ಲಿ ನಿನ್ನನ್ನು ಮರೆಯಲಾದೀತೆ? ಬೇರೆ ದಾರಿ ತಿಳಿಯದೆ, ಮೌನಕ್ಕೆ ಶರಣಾಗಿರುವೆ. ಸದ್ದಿಲ್ಲದೇ ಎದ್ದು ಹೋದವನು ಮತ್ತೆ ಬಂದಾನಾ? ಈ ಹುಚ್ಚಿಯ ಬದುಕಿಗೆ ಮತ್ತೆ ಬಣ್ಣ ಹಚ್ಚಿಯಾನಾ ಎಂದು ಪೆದ್ದುಮೋರೆ ಹಾಕಿ ಕುಳಿತಿರುವೆ.

ಈ ಐದು ವರ್ಷಗಳಲ್ಲಿ ನೀನು ಕೊಟ್ಟಿದ್ದ ಪ್ರತಿಯೊಂದು ಗ್ರೀಟಿಂಗ್‌, ಚಾಕೊಲೇಟ್‌, ಜೆಮ್ಸ್‌ ಪ್ಯಾಕ್‌ ಕವರ್‌, ಲಾಲಿಪಪ್‌ ಕಡ್ಡಿಗಳೆಲ್ಲ ಬೀರುವಿನೊಳಗೆ ಭದ್ರವಾಗಿವೆ. ಫ್ರೆಂಡ್‌ಶಿಪ್‌ ಡೇಗೆ ಕೊಟ್ಟ ಕೆಂಪು ಗುಲಾಬಿ ಬಣ್ಣ ಮಾಸಿ ಒಣಗಿದರೂ ನನ್ನ ಡೈರಿಯ ಪುಟದಲ್ಲಿ ಬೆಚ್ಚಗೆ ಮಲಗಿದೆ. ಇನ್ನೇನು ನೀನಾಗಿಯೇ ಬಂದು ಪ್ರಪೋಸ್‌ ಮಾಡ್ತೀಯ ಅಂತ ಅಂದುಕೊಂಡವಳಿಗೆ ಎಂಥಾ ಶಾಕ್‌ ನೀಡಿಬಿಟ್ಟೆ!

ಸುಖಾಸುಮ್ಮನೆ ಈ ನವಿರು ಭಾವನೆಗಳನ್ನು ನಾನಾಗಿಯೇ ಹುಟ್ಟಿಸಿಕೊಂಡಿಲ್ಲ. ಪರಿಚಯದವರ ಹತ್ತಿರ ನೀನೇ ಖುದ್ದಾಗಿ ಹೇಳಿದ್ದೆಯಲ್ಲ, “ಅವಳು ನನ್ನವಳೆಂದು!’ ಆ ಮಾತು ನನ್ನ ಕಿವಿಗೂ ಬಿದ್ದಿತ್ತು. ಈಗ ಅವರೇ ಹೇಳುತ್ತಿದ್ದಾರೆ, “ನಿನ್ನವನ ಮದುವೆಯಂತೆ?’ ಎಂದು.

ಅದ್ಯಾಕೆ ಹರಿವ ಅನುರಾಗದ ಒರತೆಯ ದಿಕ್ಕು ಬದಲಾಯಿಸಿದೆ? ಅದೇನಾಗಿ ಹೋಯ್ತು ನಿನಗೆ? ಒಂದು ಸಾರಿ ಹೇಳಿದ್ದರೆ ಸಾಕಿತ್ತು. ಊರಿಗೆಲ್ಲ ಗೊತ್ತಾದ ಪ್ರೀತಿ, ಈ ಹುಡುಗಿಯ ಹೃದಯದ ಕದವನ್ನೇಕೆ ಒಮ್ಮೆಯೂ ತಟ್ಟಲಿಲ್ಲ? ಹೊಸ್ತಿಲವರೆಗೆ ಬಂದ ಪ್ರೀತಿ, ಹಾಗೇ ವಾಪಸಾಗಿದೆ. ಏನೂ ಆಗದಂತೆ ದಿನಗಳು ಮಾತ್ರ ಉರುಳುತ್ತಿವೆ. ನೀ ಹೋದ ದಿನದಿಂದ ಒಂಟಿಯಾಗಿ ರೋದಿಸುತ್ತಿರುವೆ.

ಇಂತಿ
ನಿನ್ನ ಬೈಕಿನ ಹಿಂದಿನ ಸೀಟಿನಲ್ಲಿ ಹಿಂದೊಮ್ಮೆ ಕುಳಿತವಳು

ಅಂಜನಾ ಗಾಂವ್ಕರ್‌, ದಬ್ಬೆಸಾಲ್


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ