ಒಮ್ಮೆ ಬಂದು ಕಾರಣ ಹೇಳಿ ಹೋಗಿ ಬಿಡು…

ಟೀನ್‌ ಅಡ್ಡಾ

Team Udayavani, Apr 9, 2019, 7:00 AM IST

ಅದೇ ಕಲ್ಲುಹಾಸಿನ ಕುರ್ಚಿಗಳ ಮೇಲೆ ಕುಳಿತು, ಹೃದಯದ ಭಾವನೆಗಳ ಜೊತೆ ಆಟವಾಡಿ ಹೋದ ನಿನ್ನ ನೆನಪು ಮಾಡಿಕೊಳ್ಳುತ್ತಿದ್ದೇನೆ. ಸೋತ ಮನಸ್ಸು ಹತಾಶೆಯ ಮಡುವಿನಲ್ಲಿ ಮುಳುಗಿದೆ. ಸಾಧ್ಯವಾದರೆ ಒಮ್ಮೆ ಬಂದು, ಕಾರಣ ಹೇಳಿ ಹೋಗಿ ಬಿಡು!

ಸೂರ್ಯನೂ ಕಾದು ಕಾದು ಸಪ್ಪೆ ಮುಖ ಮಾಡಿಕೊಂಡು ಮನೆಯ ದಾರಿ ಹಿಡಿದ. ಇನ್ನೇನು ಚುಕ್ಕಿ, ಚಂದ್ರಮ ಬರುವ ಹೊತ್ತು. ನಿನ್ನ ಬರುವಿಕೆಗಾಗಿ ನಾನಾದರೂ ಇನ್ನೆಷ್ಟು ಹೊತ್ತು ಕಾಯಲಿ ಹೇಳು? ಸರಿಹೊತ್ತಾದರೂ ಮನೆ ತಲುಪದಿದ್ದರೆ ಅಪ್ಪ ಅಮ್ಮನ ಸಾವಿರಾರು ಪ್ರಶ್ನೆಗಳಿಗೆ ಉತ್ತರಿಸಬೇಕಾಗುತ್ತದೆ. ಈ ಸುಂದರ ಉಪವನದಲ್ಲಿ ನಾವು ಅದೆಷ್ಟು ಬಾರಿ ಸಂಧಿಸಿದ್ದೇವೋ? ನೀನು ಮೊದಲ ಪ್ರೇಮಪತ್ರ ಕೈಗಿಡಲು ಹೆದರಿ, ಅದೇ ಗುಲಾಬಿ ಗಿಡದ ಮುಳ್ಳುಗಳ ಮಧ್ಯೆ ಸಿಕ್ಕಿಸಿ ಕಣ್ಸನ್ನೆ ಮಾಡಿದ್ದೆ… ನಿನ್ನ ಆ ಸಂಕೋಚದ ಸ್ವಭಾವವೇ ನನಗೆ ಬಹುವಾಗಿ ಹಿಡಿಸಿದ್ದು…

ನಾನು ಕಾಲೇಜಿನಿಂದ ಬರುವುದನ್ನೇ ನೀನು ಕಾದು ಕೂತಿರುತ್ತಿದ್ದೆ. ನಾನು ಕಾಲೇಜು ಬಿಟ್ಟೊಡನೆ ಓಡೋಡಿ ಬರುತ್ತಿದ್ದೆ. ಆಮೇಲೆ ನಮ್ಮಿಬ್ಬರದೇ ಬೇರೆ ಲೋಕ. ಸಂಜೆಯ, ತಂಬೆಲರ ತನ್ಮಯತೆಗೆ ತನುವೊಡ್ಡಿ ಹಕ್ಕಿಗಳಂತೆ ವಿಹರಿಸುತ್ತಿದ್ದೆವು. ಕಲ್ಲುಬೆಂಚಿನ ಮೇಲೆ ಕೂತು ಒಲವನುಡಿಗಳ ಮಳೆ ಸುರಿಸಿ, ನೀನು ನನಗಾಗಿ ದಿನವೂ ತಪ್ಪದೇ ತರುತ್ತಿದ್ದ ಕ್ಯಾಡ್‌ಬರಿ ಚಾಕೊಲೇಟ್‌ ತಿಂದು, ನಿನ್ನ ಕೆನ್ನೆಯ ಮೇಲಷ್ಟು ಸಿಹಿ ಮೆತ್ತಿ ಮತ್ತೇನೋ ತುಂಟಾಟ ನಡೆಸಿ, ನಿನಗಷ್ಟು ಕೋಪ ತರಿಸಿ, ಕಾಲೆಳೆಯುತ್ತಲೋ ಅಥವಾ ಕೋಪಿಸಿಕೊಳ್ಳುತ್ತಲೋ ನಿನಗೆ ಬೀಳ್ಕೊಟ್ಟು ಮನೆ ಕಡೆಗೆ ಓಡುತ್ತಿದ್ದೆ. ಇದುವೇ ನನ್ನ ದಿನಚರಿ, ಇದೇ ನನ್ನ ಜೀವನವಾಗಿತ್ತು. ನೀನೀಗ ಎಲ್ಲವನ್ನೂ ಮರೆತಿರುವಂತೆ ಕಾಣುತ್ತಿದೆ. ಕಾರಣವಿಲ್ಲದೆ ಪ್ರೀತಿಗೆ ಚರಮ ಗೀತೆ ಹಾಡಿದ ನಿನ್ನನ್ನು ಪ್ರಶ್ನಿಸಬೇಕಿದೆ. ಆದರೆ, ನೀನು ಸಿಗುತ್ತಿಲ್ಲ.

ನಡೆದು ಬರುವ ದಾರಿಯೇಕೋ ಬಿಕೋ ಎನ್ನುತ್ತಿದೆ. ಉಪವನ ಬರಡಾದಂತೆ ಭಾಸವಾಗುತ್ತಿದೆ. ಆ ಎತ್ತರದ ಮರಗಳ ನೆರಳು ಸುಡುತ್ತಿದೆ. ಕಲ್ಲುಹಾಸು ಖಾಲಿ ಖಾಲಿ… ಉಸಿರುಕಟ್ಟಿ ಬರುತ್ತದೆ ಗೆಳೆಯ.. ಗದ್ಗದಿತವಾದ ಕೊರಳು ಒಲವನುಸುರದೆ ಮೂಕವಾಗಿದೆ. ಒಲವಸಿಂಚನದಲಿ ಮಿಂದ ಹೃದಯವೀಗ ಬತ್ತಿ ಹೋಗಿದೆ..

ಅದೇ ಕಲ್ಲುಹಾಸಿನ ಕುರ್ಚಿಗಳ ಮೇಲೆ ಕುಳಿತು, ಹೃದಯದ ಭಾವನೆಗಳ ಜೊತೆ ಆಟವಾಡಿ ಹೋದ ನಿನ್ನ ನೆನಪು ಮಾಡಿಕೊಳ್ಳುತ್ತಿದ್ದೇನೆ. ಸೋತ ಮನಸ್ಸು ಹತಾಶೆಯ ಮಡುವಿನಲ್ಲಿ ಮುಳುಗಿದೆ. ಸಾಧ್ಯವಾದರೆ ಒಮ್ಮೆ ಬಂದು, ಕಾರಣ ಹೇಳಿ ಹೋಗಿ ಬಿಡು! ಪ್ರೀತಿಯ ಕುರುಡಲ್ಲಿ ಮುಳುಗಿದ ನನ್ನ ಕಣ್ಣುಗಳು ತೆರೆಯಲಿ.. ಸಾಧ್ಯವಾದರೆ ನಾನೂ ಹೃದಯವನ್ನು ನಿನ್ನಂತೆ ಕಲ್ಲುಮಾಡಿಕೊಳ್ಳುತ್ತೇನೆ. ಮತ್ಯಾವತ್ತೂ ಪ್ರೀತಿಸುವ ಗೋಜಿಗೆ ಹೋಗುವುದಿಲ್ಲ..

ನಿನ್ನ ಪ್ರೀತಿಯ ನಿರೀಕ್ಷೆಯಲ್ಲಿ
ಹಂಸ

ನಮ್ಮೂರು ಚೆಂದವೋ ನಿಮ್ಮೂರು ಚೆಂದವೋ

ನಲ್ಮೆಯ ಸ್ನೇಹಿತನೇ,
“ಎತ್ತಣ ಮಾಮರ ಎತ್ತಣ ಕೋಗಿಲೆ, ಎತ್ತಣಿಂದೆತ್ತಣ ಸಂಬಂಧವಯ್ಯಾ?’ ಅಂತ ನಮ್ಮಿಬ್ಬರನ್ನೇ ನೋಡಿ ಹೇಳಿದಂತಿದೆ. ನಾನು ಉತ್ತರವಾದರೆ ನೀವು ದಕ್ಷಿಣ. ನಮ್ಮಿಬ್ಬರ ಭಾಷೆ, ಆಹಾರ, ಸಂಪ್ರದಾಯ, ಪದ್ಧತಿಗಳೆಲ್ಲವೂ ವಿಭಿನ್ನವೇ.

ಮಾಂಸಾಹಾರ ಅಂದ್ರೆ ಹತ್ತು ಫ‌ರ್ಲಾಂಗ್‌ ದೂರ ಓಡುವ ನಾನು, ಅದೇ ಪಂಚಪ್ರಾಣ ಎನ್ನುವ ನಿಮ್ಮನ್ನು ಕಾಲದ ವೈಖರಿಯಿಂದಲೇ ಸಂಧಿಸಿದ್ದು. ಉತ್ತರ ಕರ್ನಾಟಕದ ಭಾಷೆ ಒರಟು ಅನ್ನುವ ನಿಮ್ಮ ಭಾಷೆ ಮೃದುವಾದರೂ, ನಮ್ಮಿಬ್ಬರಲ್ಲಿ ಒರಟು ನೀವೇ. ಮೃದು ಭಾಷೆಯಿಂದ ಮನನೋಯಿಸುವುದು ನಿಮಗೆ ಕರಗತ. ರೊಟ್ಟಿ ಎಂದರೆ ಹೀಯಾಳಿಸುವ ನಿಮ್ಮ ರಾಗಿ ಮುದ್ದೆಯನ್ನು ನಿಮಗಿಂತ ಜಾಸ್ತಿ ಇಷ್ಟಪಡುವವಳು ನಾನೇ. ಜಾತಿ ಸ್ವಲ್ಪ ಬೇರೆಯಾಗಿರುವುದರಿಂದ ಅದಕ್ಕೆ ಹೊಂದಿಕೊಂಡ ಪದ್ಧತಿಗಳೂ ಬೇರೆ ಬೇರೆ. ಹೀಗಾಗಿ ನಿಮ್ಮ ಪದ್ಧತಿಗಳಿಗೆ ಕಡ್ಡಾಯವಾಗಿ ಹೊಂದಿಕೊಳ್ಳಬೇಕಿರುವುದು ನನ್ನ ಕರ್ತವ್ಯ. ನಿಮಗೋ ಆ ತಲೆಬಿಸಿ ಇಲ್ಲ ಬಿಡಿ.

ಇಷ್ಟೆಲ್ಲ ವ್ಯತ್ಯಾಸಗಳಿದ್ದರೂ ನಾವಿಬ್ಬರೂ ಪ್ರೀತಿಯೆಂಬ ಸ್ಟೇಷನ್‌ನಲ್ಲಿ ಭೇಟಿಯಾಗಿದ್ದು ನಿಜಕ್ಕೂ ಸೋಜಿಗ. ಭೇದಗಳನ್ನು ಮರೆತು ಪ್ರೀತಿ ಮೂಡಿದ ಪರಿಯೂ ಅದ್ಭುತವೇ. ಊರಿನ ವಿಷಯದಲ್ಲಿಯೇ ಎಷ್ಟು ಬಾರಿ ಜಗಳಾಡಿಲ್ಲ ನಾವು? ಕೆಲವೊಮ್ಮೆ ಆ ಜಗಳ ವೈಯಕ್ತಿಕ ಮಟ್ಟಕ್ಕೂ ಇಳಿದಿದೆ. ಆದರೂ, ನಮ್ಮಿಬ್ಬರ ಪ್ರೀತಿ ಯಾವುದೇ ಜಗಳವನ್ನು ಅರ್ಧ ದಿನಕ್ಕಿಂತ ಹೆಚ್ಚು ಮುಂದುವರಿಯಲು ಬಿಟ್ಟಿಲ್ಲ. ತಪ್ಪು ಯಾರದ್ದೇ ಇದ್ದರೂ ಮನವೊಲಿಸುವ ಪ್ರಯತ್ನ ಇಬ್ಬರಿಂದಲೂ ಆಗಿದೆ. ಇದೇ ತಾನೇ ಪ್ರೀತಿಗಿರುವ ತಾಕತ್ತು?

ಸಂಬಂಧದಲ್ಲಿ ಭಿನ್ನಾಭಿಪ್ರಾಯಗಳು ಸಹಜ. “ನಮ್ಮೂರು ಚಂದವೋ, ನಿಮ್ಮೂರು ಚಂದವೋ?’ ಅಂತ ಕವಿಗಳೇ ಕೇಳಿಲ್ವಾ? ಉತ್ತರ- ದಕ್ಷಿಣದ ನಡುವೆ ಬೀಸುತ್ತಿರುವ ಪ್ರೀತಿಯ ಚುಂಬಕ ಗಾಳಿ ನಿರಂತರವಾಗಿರಲಿ.
ಇಂತಿ ನಿಮ್ಮ
ಪುಷ್ಪಾ

ಪ್ರೀತಿಯೆಂಬ ಆಭರಣ ತೊಡಿಸಿ, ಮೆರೆಸುವೆ
ಜೀವನದಲ್ಲಿ ಸೋಲಿನ ಹೊಡೆತಗಳಿಂದ ಕಂಗೆಟ್ಟಿದ್ದ ನನಗೆ ಸ್ಫೂರ್ತಿಯ ಚಿಲುಮೆಯಾದವಳು ನೀನು. ಬರದ ನಾಡಲ್ಲಿ ಮಳೆ ಬಿದ್ದರೆ ಖುಷಿಯಾಗುತ್ತದಲ್ಲ, ಅದಕ್ಕಿಂತಲೂ ಜಾಸ್ತಿ ಖುಷಿ ನನ್ನ ಪಾಲಿಗೆ ಸಿಕ್ಕಿದೆ. ಈ ಸಂತೋಷ ಜೀವನಪೂರ್ತಿ ಜೊತೆಯಾಗಬೇಕು ಅಂದರೆ, ನೀನು ಜೊತೆಗಿರಬೇಕು.

ಮದುವೆಯಾದರೆ ನಿನ್ನನ್ನೇ ಅಂತ ತೀರ್ಮಾನಿಸಿ ಆಗಿದೆ. ಇನ್ನೂ ಲೈಫ‌ಲ್ಲಿ ಸೆಟ್ಲ ಆಗದ ಇವನ ಕೈ ಹಿಡಿದರೆ ಮುಂದೆ ಗತಿ ಏನು? ಅಂತ ಅನುಮಾನ ಪಡಬೇಡ. ನಿನಗೆ ಬಂಗಾರದ ಒಡವೆ ತೊಡಿಸಲು ನಾ ಸಾಹುಕಾರನಲ್ಲ. ರೇಷ್ಮೆ ಸೀರೆ ಕೊಡಿಸುವಷ್ಟು ಸಂಪಾದನೆ ಕೂಡಾ ನನಗಿಲ್ಲ ಅನ್ನೋದು ನಿಜ. ಇನ್ನು ವಜ್ರ ವೈಢೂರ್ಯವೆಲ್ಲ ದೂರದ ಮಾತು. ಹಾಗಂತ ಸುಮ್ಮನಿರುವವನು ನಾನಲ್ಲ. ಪ್ರೀತಿಯೆಂಬ ಆಭರಣ ತೊಡಿಸುವೆ, ಎಂದೆಂದಿಗೂ ಕಳಚದ ಹಾಗೆ! ಪ್ರತಿ ದಿನವೂ ಕೈ ತುತ್ತು ತಿನ್ನಿಸಿ ಜೋಪಾನ ಮಾಡುವೆ. ಒಂದು ದಿನವೂ ನಿನ್ನ ಕಣ್ಣಲ್ಲಿ ನೀರು ಹಾಕಿಸೋದಿಲ್ಲ ಅಂತ ಪ್ರಾಮಿಸ್‌ ಮಾಡ್ತೀನಿ.”ಏನ್‌ ಚಂದ ನೋಡ್ಕೋತಾನ ಅವ ಹೆಂಡ್ತೀನ, ನೋಡಿ ಕಲ್ಕೋರಿ’ ಅಂತ ಊರ ಹೆಂಗಸರೆಲ್ಲ ಅವರವರ ಗಂಡನಿಗೆ ದಿನಾ ಬೈಬೇಕು, ಅಷ್ಟು ಚೆನ್ನಾಗಿ ನೋಡ್ಕೋತೀನಿ ನಿನ್ನ!

ತವರಿನ ನೆನಪು ಚೂರೂ ಕಾಡದಂತೆ ಕಾಪಾಡ್ತೀನಿ. ಆದ್ರೆ, ನಿಂಗಿಷ್ಟ ಬಂದಾಗಲೆಲ್ಲ ಅಮ್ಮನ ಮನೆಗೆ ಹೋಗಬಹುದು. ಹಾಗಂತ ಅಲ್ಲಿಯೇ ಜಾಸ್ತಿ ದಿನ ಉಳಿದುಕೊಳ್ಳೋ ಹಾಗಿಲ್ಲ. ಎರಡೇ ದಿನಕ್ಕೆ ವಾಪಸ್‌ ಬರಬೇಕು. ತುಂಬಾ ದಿನ ನಿನ್ನ ಬಿಟ್ಟಿರೋದು ಕಷ್ಟ ನನಗೆ. ಈಗ ಎಷ್ಟು ಪ್ರೀತಿಸುತ್ತೇನೋ, ಐವತ್ತು ವರ್ಷ ಕಳೆದರೂ ಅಷ್ಟೇ ಪ್ರೀತಿಸುತ್ತೇನೆ. ಏಳು ಜನುಮದಲ್ಲೂ ನೀನೇ ನನ್ನ ಸಂಗಾತಿ ಆಗಬೇಕೆಂದು ಹರಕೆ ಬೇರೆ ಹೊತ್ತಿದ್ದೇನೆ. ನೀನೇ ನನ್ನ ಬಾಳ ಜ್ಯೋತಿಯಾಗಬೇಕು. ಇಂದಿಗೂ, ಎಂದೆಂದಿಗೂ.
— ಬಸನಗೌಡ ಪಾಟೀಲ

ರಜೆ ಮುಗಿಸ್ಕೊಂಡು ಬೇಗ ವಾಪಸ್‌ ಬಾ

ಈ ಹಾಳು ರಜೆ ಯಾಕಾದರೂ ಬರುತ್ತೋ? ನಿನಗೇನು, ಜುಮ್‌ ಅಂತ ಹಾಸ್ಟೆಲ್‌ ಖಾಲಿ ಮಾಡಿ, ಮನೆಗೆ ಓಡಿ ಬಿಟ್ಟೆ. ಇಲ್ಲಿ ನನ್ನ ಗೋಳು ಕೇಳ್ಳೋರ್ಯಾರು? ನಾನ್ಯಾರು ಅಂತ ನಿನಗೆ ಗೊತ್ತಿಲ್ಲ. ಯಾಕಂದ್ರೆ, ಒಂದು ದಿನವೂ ನಾನು ನಿನ್ನ ಎದುರಿಗೆ ಬಂದೇ ಇಲ್ಲ. ಆದ್ರೆ, ನಂಗೆ ನಿನ್ನ ಬಗ್ಗೆ ಎಲ್ಲಾ ವಿಷಯ ಗೊತ್ತು. ನಾನು ಪ್ರತಿದಿನ ಬೆಳಗ್ಗೆ ಟೀ ಕುಡಿಯುವ ನೆಪದಲ್ಲಿ ನಿನ್ನ ಹಾಸ್ಟೆಲ್‌ ಎದುರಿಗೆ ಇರೋ ಗೂಡಂಗಡಿಗೆ ಬರ್ತಾ ಇದ್ದೆ. ಬಾಲ್ಕನಿಯಲ್ಲಿ ಓಡಾಡೋ ನಿನ್ನನ್ನು ನೋಡೋಕೆ ಅಂತಾನೇ ದಿನಾ ಸಂಜೆ ಹಾಸ್ಟೆಲ್‌ ಹಿಂದೆ ಇರುವ ಮೈದಾನಕ್ಕೂ ಹಾಜರಿ ಹಾಕ್ತಿದ್ದೆ. ಈಗ ನೀನು ರಜೆ ಅಂತ ಇದ್ದಕ್ಕಿದ್ದಂತೆ ಮನೆಗೆ ಹೋಗಿಬಿಟ್ಟರೆ, ನನ್ನ ದಿನಚರಿಯಲ್ಲಿ ಆಗೋ ಏರುಪೇರಿಗೆ ಯಾರು ಹೊಣೆ?
ನಂಗಿನ್ನೂ ನೆನಪಿದೆ. ಕಳೆದ ಜೂನ್‌ ತಿಂಗಳ ಮಳೆಗಾಲದ ದಿನ. ತಾರೀಖು 8. ನಮ್ಮ ಮನೆಯಿಂದ ಸ್ವಲ್ಪವೇ ದೂರ ಇರೋ ಲೇಡಿಸ್‌ ಹಾಸ್ಟೆಲ್‌ಗೆ ನೀನು ಬಂದಿದ್ದು ಅವತ್ತೇ. ಅಪ್ಪನ ಜೊತೆ ಹೆದರುತ್ತಾ, ಮಣ ಭಾರದ ಸೂಟ್‌ಕೇಸ್‌ ಹಿಡಿದು ಹಾಸ್ಟೆಲ್‌ಗೆ ಹೋಗಿದ್ದನ್ನು ನಾನು ಗೂಡಂಗಡಿಯಲ್ಲಿ ಕುಳಿತು ನೋಡಿದ್ದೆ. ಸ್ವಲ್ಪ ಹೊತ್ತಿನಲ್ಲೇ ನಿಮ್ಮಪ್ಪ ವಾಪಸ್‌ ಊರಿಗೆ ಹೊರಟಿದ್ದರು. ನೀನು ಅಳುತ್ತಳುತ್ತಾ ಅವರನ್ನು ಬೀಳ್ಕೊಡಲು ಹಾಸ್ಟೆಲ್‌ ಗೇಟಿನ ಬಳಿ ಬಂದೆ. ನಮ್ಮೂರಿನ ಮಳೆಗಿಂತಲೂ ಜೋರಾಗಿ ಅಳ್ತಾ ಇದ್ದ ನಿನ್ನನ್ನು ನೋಡಿ ಕರುಳು ಚುರುಕ್‌ ಅಂದಿತ್ತು.

ಆ ನಿನ್ನ ಅಳು ಮುಖವನ್ನು ಮರೆಯಾಗಲೇ ಇಲ್ಲ. ಆಮೇಲಿಂದ ನಿನ್ನನ್ನು ನೋಡೋಕೆ ಅಂತಾನೇ ಗೂಡಂಗಡಿ ಕಡೆ ಬರತೊಡಗಿದೆ. ಬೆಳಗ್ಗೆ ಆರಕ್ಕೆಲ್ಲಾ ಎದ್ದು, ಪುಸ್ತಕ ಹಿಡಿದು ಬಾಲ್ಕನಿಯ ಮೂಲೆಯಲ್ಲಿ ಕುರ್ಚಿ ಹಾಕಿಕೊಂಡು ನೀನು ಓದಲು ಕುಳಿತರೆ, ಒಂದೂವರೆ ಗಂಟೆ ಅಲ್ಲಿಂದ ಕದಲುತ್ತಿರಲಿಲ್ಲ. ಅದೇನು ತನ್ಮಯತೆ?! ಆಮೇಲೆ ತಲೆ ಸ್ನಾನ ಮಾಡಿದ ದಿನ, ಅಂದರೆ ಭಾನುವಾರ, ಬುಧವಾರ ಕೂದಲು ಒಣಗಿಸಲೂ ಬಾಲ್ಕನಿಯೇ ಆಗಬೇಕು. ನೀಳ ಕೂದಲನ್ನು ಬಿಳಿಯ ಟವಲ್‌ನಿಂದ ಒರೆಸಿ, ಗಂಟಿಲ್ಲದಂತೆ ಸಿಕ್ಕು ಬಿಡಿಸಿ, ಸಣ್ಣದೊಂದು ಕ್ಲಿಪ್‌ನಲ್ಲಿ ಬಂಧಿಸುವಾಗ ನಿನ್ನ ಚೆಲುವನ್ನು ನೋಡಬೇಕು! ಎಂಟೂವರೆಗೆ ಕಾಲೇಜು ತಲುಪಿದರೆ ಮತ್ತೆ ನಿನ್ನ ದರ್ಶನವಾಗುತ್ತಿದ್ದುದು ಸಂಜೆಯೇ. ಒಂದಿಬ್ಬರು ಗೆಳತಿಯರೊಡನೆ ಹರಟುತ್ತಾ ಬಾಲ್ಕನಿಯಲ್ಲಿ ಕೂರುವ ನಿನ್ನನ್ನು ಮೈದಾನದಲ್ಲಿ ಆಟವಾಡುತ್ತಲೇ ಗಮನಿಸುತ್ತಿದ್ದೆ ನಾನು.

ಹೀಗೆ ನಿನ್ನನ್ನು ನೋಡುನೋಡುತ್ತಲೇ ಹತ್ತು ತಿಂಗಳು ಕಳೆಯಿತು. ನೀನೂ ಫ‌ಸ್ಟ್‌ ಪಿಯು ಮುಗಿಸಿಬಿಟ್ಟೆ. ಇನ್ನು ಭರ್ತಿ ಎರಡು ತಿಂಗಳು ನಿಂಗೆ ರಜೆ. ಈ ರಜೆಗಾಗಿ ನೀನೆಷ್ಟು ಕಾಯುತ್ತಿದ್ದೆ ಅಂತ ನನಗೆ ಗೊತ್ತು. ಅಮ್ಮನ ಕೈ ಅಡುಗೆ ಸವಿಯಲು, ಪರೀಕ್ಷೆ ಮುಗಿದ ಮಾರನೇ ದಿನವೇ ಮನೆಗೆ ಓಡಿಬಿಟ್ಟೆ. “ಅವಳು ರಜೆಗೆ ಹೋಗುವುದಿಲ್ಲ. ಸೆಕೆಂಡ್‌ ಪಿಯು ಕೋಚಿಂಗ್‌ ಇರುತ್ತೆ. ಸಿಇಟಿ ಕೋಚಿಂಗಾದ್ರೂ ಇರಲೇಬೇಕು’ ಅಂತ ನಂಗೆ ನಾನೇ ಮಾಡಿಕೊಂಡ ಸಮಾಧಾನಗಳೆಲ್ಲಾ ಸುಳ್ಳಾದವು. ಇನ್ನೆರಡು ತಿಂಗಳು ನನ್ನ ಪಾಲಿಗೆ ಅಮಾವಾಸ್ಯೆ. ಅಪ್ಪಿತಪ್ಪಿಯೂ ನಿಮ್ಮ ಹಾಸ್ಟೆಲ್‌ ರೋಡಿನತ್ತ ಹೋಗುವುದೇ ಇಲ್ಲ. ಹೋದರೂ ಬಾಲ್ಕನಿಯತ್ತ ನೋಡುವುದಿಲ್ಲ. ನೋಡಿದರೆ, ನೀನು ನೆನಪಾಗೋದು ಗ್ಯಾರಂಟಿ. ಅಳು ಬಂದರೂ ಬರಬಹುದು.

ರಜೆ ಮುಗಿಸಿಕೊಂಡು ಬೇಗ ಬಂದು ಬಿಡು. ಹಾಸ್ಟೆಲ್‌ ಊಟ ತಿಂದು ಮೊದಲಿಗಿಂತ ಸಣ್ಣ ಆಗಿಬಿಟ್ಟಿದ್ದೀಯ. ಈ ಎರಡು ತಿಂಗಳು ಚೆನ್ನಾಗಿ ತಿಂದು, ಡುಮ್ಮಿಯಾಗಿ ವಾಪಸ್‌ ಬಾ. ನಿನಗಾಗಿ ಕಾಯ್ತಾ ಇರ್ತೀನಿ.
ಇಂತಿ ನಿನ್ನ
ನಿಗೂಢ ಪ್ರೇಮಿ

ಕ್ಯೂ ನಿಂತಿದೀನಿ ಬಸ್‌ ಹೋಗಿಬಿಟ್ಟಿದೆ…

ಬದುಕಿದರೆ ನಿನ್ನ ಜೊತೆಯೇ ಅಂತ ತೀರ್ಮಾನಿಸಿ ಇಲ್ಲಿಯವರೆಗೂ ಮದುವೆಯಾಗದೇ, ಯಾವ ಹೆಣ್ಣನ್ನೂ ಆ ದೃಷ್ಟಿಯಲ್ಲಿ ನೋಡದೇ ಇದ್ದ ನನಗೆ ಆಘಾತವಾಯ್ತು. ಆದರೇನು ಮಾಡುವುದು? ಸಮಯ ಮಿಂಚಿ ಹೋಗಿದೆ. ಆಗಷ್ಟೇ ಪ್ರೈಮರಿ ಶಾಲೆ ಮುಗಿಸಿ, ಹೈಸ್ಕೂಲ್‌ ಸೇರಿದ್ದೆ. ಹದಿಹರೆಯದ ಹಾವಳಿಯಲ್ಲಿ ಸಡನ್‌ ಆಗಿ ಪ್ರೀತಿ, ಪ್ರೇಮದ ಬಲೆಯೊಳಗೆ ಬೀಳುವ ಹುಚ್ಚು ಹುಮ್ಮಸ್ಸಿನ ವಯಸ್ಸು ಅದು. ಅಂಥ ಸಮಯದಲ್ಲಿ ನಿನ್ನನ್ನು ಪ್ರೀತಿಸಿದ್ದು ನನ್ನ ತಪ್ಪಾ ಹೇಳು? ಬಡತನದ ಕುಟುಂಬದಿಂದ ಬಂದ ನನಗೆ ಸಹಜವಾಗಿಯೇ ಕೀಳರಿಮೆ ಕಾಡುತ್ತಿತ್ತು. ಕುಟುಂಬದ, ಸಮಾಜದ ತಿರಸ್ಕಾರಕ್ಕೆ ಒಳಗಾದ ನಾನು ಮುಜುಗರ, ಹಿಂಜರಿಕೆಯಿಂದ ಕುಗ್ಗಿ ಹೋಗಿದ್ದೆ. ಹೀಗಿರುವಾಗ ನಿನ್ನನ್ನು ಮಾತಾಡಿಸುವ ಧೈರ್ಯವೆಲ್ಲಿ ಬರಬೇಕು ಹೇಳು? ನನ್ನಲ್ಲಿ ಎಷ್ಟೇ ಪ್ರತಿಭೆಯಿದ್ದರೂ ಅದನ್ನು ತೋರಿಸಿಕೊಳ್ಳದೆ ಸುಮ್ಮನಿರುತ್ತಲಿದ್ದೆ. ನಿಂಗೆ ನೆನಪಿದ್ಯಾ? ಆವತ್ತು ತರಗತಿಯಲ್ಲಿ ನಡೆದ ಆಶುಭಾಷಣ ಸ್ಪರ್ಧೆಯಲ್ಲಿ ಮಾತನಾಡಲು ತಡವರಿಸಿ, ಸಭಾಕಂಪನದಿಂದ ಬೆವತು ಎಲ್ಲರೆದುರು ಅಪಹಾಸ್ಯಕ್ಕೀಡಾದ ನನ್ನನ್ನು ನೋಡಿ ನೀನೂ ನಕ್ಕುಬಿಟ್ಟಿದ್ದೆ. ನೀನೂ ಹೀಯಾಳಿಸಿಬಿಟ್ಟೆಯಲ್ಲ ಅಂತ ನೋವಾಗಿತ್ತು. ಅದೇ ಛಲದಲ್ಲಿ ಮರುದಿನದ ಚಿತ್ರ ಬಿಡಿಸುವ ಸ್ಪರ್ಧೆಯಲ್ಲಿ ಭಾಗವಹಿಸಿ, ಮೊದಲ ಬಹುಮಾನವನ್ನೇ ಗೆದ್ದುಕೊಂಡೆ. ಆಗ ನೀನಾಗಿಯೇ ಬಂದು- “ಕಂಗ್ರಾಟ್ಸ್‌’ ಅಂದಾಗ, ಏನು ಹೇಳುವುದೆಂದು ತಿಳಿಯದೆ ನಿನ್ನ ಮುದ್ದು ಮುಖವನ್ನೇ ನೋಡುತ್ತಾ ಪೆದ್‌ಪೆದ್ದಾಗಿ ನಕ್ಕಿದ್ದೆ.

ಆ ಘಟನೆಯ ನಂತರವೂ ನಾವಿಬ್ಬರೂ ಮಾತಾಡಲಿಲ್ಲ. ಆದ್ರೆ, ನಾನು ಮಾತ್ರ ನಿನ್ನನ್ನು ಸ್ಮರಿಸುತ್ತಲೇ ಹೈ ಸ್ಕೂಲ್‌ ಮುಗಿಸಿದ್ದೆ. ನಂತರವೂ ನಿನ್ನದೇ ಧ್ಯಾನದಲ್ಲಿ ಉಳಿದುಬಿಟ್ಟೆ. ಮೊನ್ನೆ ಫೇಸ್‌ಬುಕ್‌ನಲ್ಲಿ ನಿನ್ನ ಪ್ರೊಫೈಲ್‌ ನೋಡಿದಾಗ ಎಷ್ಟು ಖುಷಿಯಾಯ್ತು ಗೊತ್ತಾ? ತಕ್ಷಣವೇ ರಿಕ್ವೆಸ್ಟ್‌ ಕಳಿಸಿದೆ. ನೀನೂ ಅದನ್ನು ಅಕ್ಸೆಪ್ಟ್ ಮಾಡಿಕೊಂಡೆ. ಈಗಲಾದರೂ “ಐ ಲವ್‌ ಯೂ’ ಅಂತ ಹೇಳಿಯೇ ಬಿಡಬೇಕು ಅಂತ ಅಂದುಕೊಳ್ಳುವಷ್ಟರಲ್ಲಿ ನೀನು ಇತ್ತೀಚೆಗೆ ಪೋಸ್ಟ್‌ ಮಾಡಿದ ಫೋಟೊ ಕಾಣಿಸಿತು. ಪಕ್ಕದಲ್ಲಿ ಗಂಡ ನಿಂತಿದ್ದ!

ಬದುಕಿದರೆ ನಿನ್ನ ಜೊತೆಯೇ ಅಂತ ತೀರ್ಮಾನಿಸಿ ಇಲ್ಲಿಯವರೆಗೂ ಮದುವೆಯಾಗದೇ, ಯಾವ ಹೆಣ್ಣನ್ನೂ ಆ ದೃಷ್ಟಿಯಲ್ಲಿ ನೋಡದೇ ಇದ್ದ ನನಗೆ ಆಘಾತವಾಯ್ತು. ಆದರೇನು ಮಾಡುವುದು? ಸಮಯ ಮಿಂಚಿ ಹೋಗಿದೆ. ಇದರಲ್ಲಿ ನಿನ್ನದೇನೂ ತಪ್ಪಿಲ್ಲ. ಒನ್‌ ಸೈಡೆಡ್‌ ಲವ್‌ನ ಹಣೆಬರಹವೇ ಇಷ್ಟು. ಪಾಪ, ನಿನಗಾದರೂ ಹೇಗೆ ತಿಳಿಯಬೇಕು, ನನ್ನ ಹೃದಯದ ತಾಕಲಾಟ. ಆದರೂ, ಯಾಕೋ ಮನಸ್ಸು ತಡೆಯುತ್ತಿಲ್ಲ. ಈಗಲಾದರೂ ಹೇಳಿಯೇ ಬಿಡಲೇ “ಐ ಲವ್‌ ಯೂ’ ಅಂತ!

— ಎಲ್‌.ಪಿ. ಕುಲಕರ್ಣಿ, ಬಾದಾಮಿ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಕಳೆದುಹೋದ ಭರ್ತಿಹಣವಿರುವ ಪರ್ಸ್‌ ಒಮ್ಮೆ ಸಿಕ್ಕರು ಅಷ್ಟು ಖುಷಿ ಆಗೋದಿಲ್ಲ. ಅದೇ ಹಾರಿಹೋದ ಪ್ರೀತಿ ಎಂಬ ಪಾರಿವಾಳ ಮರಳಿ ಗೂಡಿಗೆ ಬಂದಾಗ ಆಗುವ ಖುಷಿಗೆ ಪಾರವೇ...

  • ಮೂರು ದಿನದಿಂದ ನೀನು ಕಾಲೇಜಿಗೆ ಗೈರಾಗಿದ್ದೆ. ಇವತ್ತು ಬಂದರೂ ನನ್ನ ಕಡೆ ನೋಡಲಿಲ್ಲ. ನಿನ್ನನ್ನು ತಲೆ ಎತ್ತಿ ನೋಡುವ ಧೈರ್ಯ ಇಲ್ಲ,ಗೊತ್ತು ನನಗೆ, ಅಷ್ಟು ಅವಮಾನವಾಗಿದೆ...

  • ನೆನಪುಗಳ ಒಂಥರ ನೆರಳು ಇದ್ದಾಗೆ. ಆಗಾಗ ನಮ್ಮ ಹಿಂದೆ ತಿರುಗ್ತಾನೇ ಇರುತ್ತವೆ. ನೆನಪುಗಳ ಒಲೆ ಮುಂದೆ ಕೂತು ಕೆದಕಿದರೆ, ಕೆಲವು ಸಲ ಭೂತಕಾಲ ಬೆಚ್ಚಗಿರುತ್ತದೆ. ಇನ್ನೂ...

  • ಜೆ.ಬಿ.ಎಸ್‌. ಹಾಲ್ಡೇನ್ ಬ್ರಿಟಿಷ್‌ ಜೀವವಿಜ್ಞಾನಿ. ಹಾಲ್ಡೇನ್ ತಮ್ಮ ಜೀವನದ ಬಹುಭಾಗವನ್ನು ಭಾರತದಲ್ಲಿ, ಬಂಗಾಳದಲ್ಲಿ, ಅಪ್ಪಟ ಬಂಗಾಳಿಯಂತೆ ಕಳೆದರು. ಹಾಲ್ಡೇನ್...

  • ತರಬೇತಿಯ ಅವಧಿಯಲ್ಲಿ ನಮಗೆ ಸಿಗುತ್ತಿದ್ದ ಸಂಬಳ ಕಡಿಮೆಯಿತ್ತು. ಹಾಗಿದ್ದೂ ನಮ್ಮ ಜೊತೆಗಿದ್ದ ಹಲವರು ದಿನವೂ ಹೋಟೆಲ್‌ನಲ್ಲಿ ಊಟ ಮಾಡಿ ಬರುತ್ತಿದ್ದರು. ಲೆಕ್ಕ...

ಹೊಸ ಸೇರ್ಪಡೆ