ಪ್ರೀತಿ ಪರೀಕ್ಷಿಸಿದ 3 ಸೇಬಿನ ಹಣ್ಣುಗಳು!

Team Udayavani, Jun 15, 2017, 12:41 PM IST

ಬಾಗ್ಧಾದ್‌ನ ನಗರದಲ್ಲಿ ಜಾಫ‌ರ್‌- ಹಸೀನಾ ದಂಪತಿ ವಾಸಿಸುತ್ತಿದ್ದರು. ಹಸೀನಾ ಚೆಂದುಳ್ಳಿ ಚೆಲುವೆ. ಆಕೆಯ ಸೌಂದರ್ಯ ನೋಡಿ ಮನಸೋಲದವರೇ ಇಲ್ಲ. ಜಾಫ‌ರ್‌ಗಂತೂ ಪತ್ನಿ ಹಸೀನಾಳನ್ನು ಕಂಡರೆ ಪಂಚಪ್ರಾಣ. ಹಸೀನಾಗೂ ಅಷ್ಟೆ- ಜಾಫ‌ರ್‌ನಂಥ ಪತಿ ಸಿಕ್ಕಿದ್ದು ತನ್ನ ಪುಣ್ಯ ಎಂದೇ ಭಾವಿಸಿದ್ದಳು. ಇವರಿಬ್ಬರೂ ಅದೃಷ್ಟವಂತರು ಎಂದು ಇಡೀ ಊರಿಗೆ ಊರೇ ಹೇಳುತ್ತಿತ್ತು. ಪತ್ನಿ ಏನನ್ನು ಕೇಳಿದರೂ ಜಾಫ‌ರ್‌ ಇಲ್ಲ ಎನ್ನುತ್ತಿರಲಿಲ್ಲ. 

ಹೀಗೆ, ಒಂದು ದಿನ ಎಂದಿನಂತೆ ಜಾಫ‌ರ್‌ ಕೆಲಸಕ್ಕೆ ಹೊರಡುತ್ತಾ ಪತ್ನಿಯನ್ನು ಕರೆದು, “ನಿನಗೇನಾದರೂ ಬೇಕಾ?’ ಎಂದು ಕೇಳುತ್ತಾನೆ. ಅರೆಕ್ಷಣ ಹಿಂಜರಿದರೂ ಸಾವರಿಸಿಕೊಂಡ ಹಸೀನಾ, “ನೀನು ನನ್ನೆಲ್ಲ ಆಸೆಯನ್ನೂ ಈಡೇರಿಸಿದ್ದೀಯ. ನಾನೀಗ ಒಂದು ವಸ್ತುವನ್ನು ಕೇಳುತ್ತೇನೆ. ಅದನ್ನು ಎಷ್ಟು ಕಷ್ಟವಾದರೂ ತಂದುಕೊಡಬೇಕು’ ಎನ್ನುತ್ತಾಳೆ. ಅದಕ್ಕೆ ಒಪ್ಪಿದ ಜಾಫ‌ರ್‌, “ನನಗೆ ನಿನಗಿಂತ ಮುಖ್ಯವಾದದ್ದು ಯಾವುದೂ ಇಲ್ಲ. ನೀನು ಕೇಳುವ ವಸ್ತು ಸ್ವರ್ಗದಲ್ಲಿದ್ದರೂ ತಂದುಕೊಡುತ್ತೇನೆ’ ಎನ್ನುತ್ತಾನೆ. ಹಸೀನಾಗೆ ಖುಷಿಯಾಗುತ್ತದೆ. “ನನಗೆ ಮೂರು ಸೇಬುಹಣ್ಣುಗಳು ಬೇಕು. ಇದು ಸೇಬುಹಣ್ಣು ಸಿಗುವ ಕಾಲವಲ್ಲ. ಆದರೂ, ನನಗಾಗಿ ಅದನ್ನು ಎಲ್ಲಿಂದಾದರೂ ತರುತ್ತೀಯ ಎಂಬ ನಂಬಿಕೆಯಿದೆ,’ ಎನ್ನುತ್ತಾಳೆ.

ಪತ್ನಿಯ ಆಸೆ ಈಡೇರಿಸಲೆಂದು ಜಾಫ‌ರ್‌ ಮಾರುಕಟ್ಟೆಯಲ್ಲೆಲ್ಲಾ ಜಾಲಾಡುತ್ತಾನೆ. ಸೇಬು ಸಿಗುವುದಿಲ್ಲ. ಕೊನೆಗೆ, ಬಾಗ್ಧಾದ್‌ನ ಹೊರಗಿನ ಊರಿಗೆ ತೆರಳುತ್ತಾನೆ. ಅಲ್ಲಿ ತುಂಬಾ ಹುಡುಕಿದ ಬಳಿಕ ಒಂದು ಅಂಗಡಿಯಲ್ಲಿ ಸೇಬು ಕಾಣುತ್ತದೆ. ಜಾಫ‌ರ್‌ ಕೂಡಲೇ ಅದನ್ನು ಖರೀದಿಸಿ ಊರಿಗೆ ಮರಳುತ್ತಾನೆ. ಸೇಬನ್ನು ನೋಡಿದೊಡನೆ ಹಸೀನಾಳ ಮುಖ ಅರಳುತ್ತದೆ. “ಆಹಾ, ಎಷ್ಟೊಂದು ತಾಜಾ ಸೇಬುಗಳು. ನಾನು ಸ್ನಾನ ಮಾಡಿ ಬಂದು, ಇದನ್ನು ತಿನ್ನುತ್ತೇನೆ’ ಎನ್ನುತ್ತಾ ಅವುಗಳನ್ನು ಮೇಜಿನ ಮೇಲಿಟ್ಟು ಸ್ನಾನಕ್ಕೆ ತೆರಳುತ್ತಾಳೆ. ಜಾಫ‌ರ್‌ ತನ್ನ ಕೆಲಸಕ್ಕೆ ಮರಳುತ್ತಾನೆ.

ಅಷ್ಟರಲ್ಲಿ ಅವರ ಪುಟ್ಟ ಮಗ ಆಟವಾಡುತ್ತಾ ಮನೆಯೊಳಗೆ ಬಂದಾಗ, ಮೇಜಿನ ಮೇಲಿದ್ದ ಸೇಬು ಅವನ ಕಣ್ಣಿಗೆ ಬೀಳುತ್ತದೆ. ಮೂರೂ ಹಣ್ಣುಗಳನ್ನು ಬಾಚಿಕೊಂಡು, ತನ್ನ ಗೆಳೆಯರಿಗೆ ತೋರಿಸೋಣವೆಂದು ಹೊರಗೆ ಒಯ್ಯುತ್ತಾನೆ. ಓಡುವಾಗ ಕಲ್ಲು ತಾಗಿ ಎಡವಿ ಬೀಳುತ್ತಾನೆ. ಕೈಯ್ಯಲ್ಲಿದ್ದ ಸೇಬು ಹಣ್ಣುಗಳು ಚೆಲ್ಲಾಪಿಲ್ಲಿಯಾಗಿ ಬೀಳುತ್ತದೆ. ಕಷ್ಟಪಟ್ಟು ಎದ್ದ ಹುಡುಗ ಅವುಗಳನ್ನು ಎತ್ತಿಕೊಳ್ಳುತ್ತಿರುತ್ತಾನೆ. ಅಷ್ಟರಲ್ಲಿ, ಅದೇ ರಸ್ತೆಯಲ್ಲಿ ಹೋಗುತ್ತಿದ್ದ ದಾರಿಹೋಕನೊಬ್ಬ, ಮಗುವನ್ನು ತಳ್ಳಿ ಸೇಬುಹಣ್ಣನ್ನು ಕಿತ್ತುಕೊಂಡು ಓಡುತ್ತಾನೆ. ಈಗ ಸೇಬು ಸಿಗುವುದೇ ಅಪರೂಪ. ಅಂಥದ್ದರಲ್ಲಿ ಈ 3 ಹಣ್ಣುಗಳನ್ನು ಮಾರಿದರೆ, ಸಾಕಷ್ಟು ದುಡ್ಡು ಮಾಡಬಹುದು ಎಂಬ ಯೋಚನೆಯಿಂದ ಆತ ಮಾರುಕಟ್ಟೆಯತ್ತ ಧಾವಿಸುತ್ತಾನೆ.

ಇತ್ತ ಹುಡುಗ ಅಳುತ್ತಾ ಮನೆಗೆ ಬಂದು, ತಾಯಿಯ ಬಳಿ ಎಲ್ಲ ವಿಷಯ ಹೇಳುತ್ತಾನೆ. ಹಸೀನಾ ಮಗುವನ್ನು ಸಮಾಧಾನಪಡಿಸಿ, “ಸೇಬಿಗಿಂತ ನಮಗೆ ನೀನು ಮುಖ್ಯ. ನಿನ್ನನ್ನು ಆತ ಒಯ್ಯಲಿಲ್ಲ ತಾನೇ. ಅದಕ್ಕೆ ಸಂತೋಷಪಡು’ ಎನ್ನುತ್ತಾಳೆ.

ಅಂದು ಸಂಜೆ ದಾರಿಹೋಕ ಮಾರುಕಟ್ಟೆಯಲ್ಲಿ ಸೇಬುಹಣ್ಣನ್ನು ಮಾರಲು ಯತ್ನಿಸುತ್ತಿರುವುದು ಜಾಫ‌ರ್‌ನ ಕಣ್ಣಿಗೆ ಬೀಳುತ್ತದೆ. “ಅರೆ, ಇದು ನಾನು ನನ್ನ ಪ್ರೀತಿಯ ಪತ್ನಿಗಾಗಿ ಕಷ್ಟಪಟ್ಟು ತಂದ ಸೇಬಲ್ಲವೇ? ಹಾಗಾದರೆ, ಆಕೆ ಅದನ್ನು ಬೇರೊಬ್ಬ ವ್ಯಕ್ತಿಗೆ ಕೊಟ್ಟು, ನನಗೆ ಮೋಸ ಮಾಡಿದಳೇ? ನನ್ನ ಪ್ರೀತಿಗೆ ದ್ರೋಹ ಎಸಗಿದವಳನ್ನು ಸುಮ್ಮನೆ ಬಿಡಲ್ಲ’ ಎನ್ನುತ್ತಾ ಜಾಫ‌ರ್‌ ಆವೇಶದಿಂದ ಮನೆಗೆ ಹೋಗಿ, ಚಾಕುವಿಂದ ಪತ್ನಿಗೆ ಇರಿಯಲು ಮುಂದಾಗುತ್ತಾನೆ. ಅಷ್ಟರಲ್ಲಿ ಅಡ್ಡ ಬರುವ ಮಗ, “ಅಪ್ಪಾ, ಬೆಳಗ್ಗೆ ಅಪರಿಚಿತನೊಬ್ಬ ನನ್ನ ಕೈಲಿದ್ದ ಸೇಬನ್ನು ಕಿತ್ತುಕೊಂಡು ಹೋದ. ಅವನನ್ನು ಹಿಡಿದು ಸೇಬನ್ನು ವಾಪಸ್‌ ತಂದುಕೊಡ್ತೀಯಾ’ ಎಂದು ಕೇಳುತ್ತಾನೆ. ಮಗನ ಮಾತು ಕೇಳುತ್ತಲೇ ಜಾಫ‌ರ್‌ಗೆ ತನ್ನ ತಪ್ಪಿನ ಅರಿವಾಗುತ್ತದೆ. ಪ್ರೀತಿಯ ಪತ್ನಿಯನ್ನೇ ಕೊಲ್ಲಲು ಹೊರಟೆಯಲ್ಲಾ ಎಂದು ನೊಂದುಕೊಂಡು, ಹಸೀನಾಳ ಕ್ಷಮೆಯಾಚಿಸುತ್ತಾನೆ. ಇದು ನಮ್ಮ ಪ್ರೀತಿಯ ಪರೀಕ್ಷೆ ಎನ್ನುತ್ತಾಳೆ ಹಸೀನಾ. ನಂತರ ಅವರಿಬ್ಬರೂ ಒಂದಾಗಿ ಬಾಳುತ್ತಾರೆ.

ಹಲೀಮತ್‌ ಸ ಅದಿಯ
 

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಒಂದು ದಿನ ಇದ್ದಕ್ಕಿದ್ದಂತೆ ಜಿಂಕೆಮರಿಯೊಂದು ಕಾಣೆಯಾಗಿ ಹೋಯಿತು. ಯಾರೂ ಎಷ್ಟೇ ಹುಡುಕಿದರೂ ಜಿಂಕೆ ಮರಿ ಮಾತ್ರ ಸಿಗಲಿಲ್ಲ. ಎಲ್ಲೋ ತಪ್ಪಿಸಿಕೊಂಡು ಹೋಗಿರಬಹುದೆಂದೆನಿಸಿ...

  • ಸೌರಮಂಡಲದ ಪ್ರವಾಸ ಹೋಗುವ ತಂತಜ್ಞಾನ ಮತ್ತು ವ್ಯವಸ್ಥೆ ಇಂದು ಇಲ್ಲದೇ ಇರಬಹುದು. ಆದರೆ ಈ ಕುರಿತು ಈಗಾಗಲೇ ಚಿಂತನೆಗಳು ನಡೆಯುತ್ತಿವೆ. ಮುಂದೊಂದು ದಿನ ಅಂತರಿಕ್ಷ...

  • ಬೆರಳಿಗೂ ಕಣ್ಣಿವೆ ಎಂದರೆ ನಿಮಗೆ ಅಚ್ಚರಿಯಾಗುವುದು ಸಹಜ. ಆದರೆ ಅದನ್ನು ಉಪಯೋಗಿಸಲು ತಿಳಿದಿರಬೇಕು. ಈ ವಿಚಾರ ಜಾದೂಗಾರರಿಗೆ ಮಾತ್ರವೇ ಗೊತ್ತಿರುವುದು. ಈ ಮಾತನ್ನು...

  • ನೋಟದಿಂದ ತಪ್ಪಿಸಿಕೊಂಡ ಇತಿಹಾಸದ ಕುತೂಹಲಕಾರಿ ತುಣುಕುಗಳಿಗೊಂದು ಪುಟ್ಟ ಜಾಗ.. 1985ರಲ್ಲಿ ಸಾಗರ ತಜ್ಞ ರಾಬರ್ಟ್‌ ಬಲಾರ್ಡ್‌ ಸಾಗರದಾಳದಲ್ಲಿ ಮುಳುಗಿದ್ದ ಟೈಟಾನಿಕ್‌...

  • ಪ್ರಮುಖ ವ್ಯಕ್ತಿಗಳ ಪರಿಚಯವನ್ನು ಕೇವಲ ಹತ್ತೇ ಹತ್ತು ಪಾಯಿಂಟ್‌ಗಳಲ್ಲಿ ಕಟ್ಟಿ ಕೊಡುವ ಪ್ರಯತ್ನವಿದು... 1. ಬಾಹ್ಯಾಕಾಶ ಯಾನಗೈದ ಮೊದಲ ಭಾರತೀಯ ಮಹಿಳೆ ಹಾಗೂ...

ಹೊಸ ಸೇರ್ಪಡೆ