ಡೈನೋಸಾರ್‌ ಪಾರ್ಕ್‌

Team Udayavani, Sep 12, 2019, 5:45 AM IST

ಡೈನೋಸಾರ್‌ ಅಂದಾಕ್ಷ ಣ ಕಣ್ಣ ಮುಂದೆ ಬರುವುದು ದೈತ್ಯಾಕಾರದ ಪ್ರಾಣಿ. ಇದು ಬದುಕಿತ್ತ? ಬದುಕಿದ್ದರೆ ಯಾವಾಗ? ಹೇಗೆ ಅಂತೆಲ್ಲ ಕುತೂಹಲ ಹುಟ್ಟುತ್ತದೆ. ಇದನ್ನು ತಣಿಸಲೆಂದೇ ಒಂದು ಡೈನೋಸಾರ್‌ ಪಾರ್ಕ್‌ ಹುಟ್ಟಿಕೊಂಡಿದೆ.

ಡೈನೋಸಾರ್‌ ಎಂಬ ಪದಕ್ಕೆ ದೈತ್ಯ ಹಲ್ಲಿ ಅಂತ ವ್ಯಾಖ್ಯಾನ ಮಾಡೋರು ಇದ್ದಾರೆ. ಹಾಗೇನೆ, ಪೆಡಂಭೂತವೆಂದೂ ಕರೆಯುವವರೂ ಇದ್ದಾರೆ. ಬೃಹದ್ಗಾತ್ರದ ಈ ಜೀವಿಗಳ ಪಳೆಯುಳಿಕೆಗಳನ್ನು ನೋಡಿ ಅದು ಎಷ್ಟು ಭಯಂಕರವಾಗಿತ್ತು ಎಂಬುದನ್ನು ಈಗ ಕಲ್ಪನೆ ಮಾಡಿಕೊಳ್ಳಬೇಕೇ ವಿನಃ, ಮಾನವ ಹುಟ್ಟುವ ಮೊದಲೇ ಅವುಗಳ ಸಂತತಿ ನಿರ್ನಾಮವಾಗಿ ಹೋಗಿರುವುದರಿಂದ ಕಂಡು ಬಣ್ಣಿಸಲಾಗದು. ಭಯಾನಕವಾದ ಡೈನೋಸಾರ್‌ಗಳನ್ನು ಜೀವಂತವಾಗಿದೆಯೋ ಎಂದು ಭಾವಿಸುವಷ್ಟು ನೈಜವಾಗಿ ಶಿಲ್ಪಕೃತಿಗಳ ಮೂಲಕ ಕಣ್ಮುಂದೆ ತಂದು ನಿಲ್ಲಿಸಿರುವುದು ಲಂಡನ್‌ ನಗರದ ಸಿಡೆನ್‌ಹ್ಯಾಮ್‌ನಲ್ಲಿರುವ ಕ್ರಿಸ್ಟಲ್‌ ಪ್ಯಾಲೇಸ್‌ ಪಾರ್ಕ್‌ನಲ್ಲಿ. ವಿಕ್ಟೋರಿಯಾ ರಾಣಿ ಪ್ರಾಣಿ ಜೀವನದ ಬಗೆಗೆ ಹೊಂದಿದ್ದ ಅಪಾರ ಕಾಳಜಿಗೆ ಸಾಕ್ಷಿಗಳಾಗಿ ಪಾರ್ಕಿನೊಳಂತೆ ಮೂವತ್ತಮೂರು ಡೈನೋಸಾರ್‌ಗಳಿವೆ. ಇವು ಲಕ್ಷಾಂತರ ಪ್ರವಾಸಿಗಳನ್ನು ಸೂಜಿಗಲ್ಲಿನಂತೆ ಆಕರ್ಷಿಸುತ್ತಿವೆ.

ಕಾಂಕ್ರೀಟ್‌ ಕಾಡು
165 ವರ್ಷಗಳಿಗೂ ಹಿಂದೆ ಸ್ಥಾಪನೆಗೊಂಡ ಈ ಪ್ರತಿಮೆಗಳು ಸುಣ್ಣ ಮತ್ತು ಕಾಂಕ್ರೀಟಿನಿಂದ ತಯಾರಾಗಿವೆ. ತುಕ್ಕು ಹಿಡಿಯಬಾರದೆಂಬ ದೃಷ್ಟಿಯಲ್ಲಿ ಒಳಗೆ ಸೀಸದ ಕಂಬಿಗಳನ್ನು ಉಕ್ಕಿನ ಬದಲಿಗೆ ಬಳಕೆ ಮಾಡಲಾಗಿದೆ. ಡೈನೋಸಾರ್‌ ಬದುಕಿನ ಮೂರು ಆಯಾಮಗಳ ಪರಿವರ್ತನೆಯನ್ನು ಇಲ್ಲಿ ಪ್ರತಿನಿಧಿಸಲಾಗಿದೆ. ಇಚ್ಛಿಯೋಸಾರ್‌, ಪ್ಲೆಸಿಯೋಸಾರ್‌ ಮತ್ತು ಮೆಸೊಜೊಯಿಕ್‌ ಎಂಬ ಮೂರು ವಿಧಗಳ ಡೈನೋಸಾರ್‌ ರೂಪಗಳು ಇಲ್ಲಿ ನೋಡಬಹುದು. ಬೆಟ್ಟದ ಮೇಲಿರುವ ಕ್ರಿಸ್ಟಲ್‌ ಪ್ಯಾಲೇಸ್‌ ಉದ್ಯಾನದ ಮೂರು ಎಕರೆ ಜಾಗದಲ್ಲಿ ಕೊಳಗಳು, ಕಾರಂಜಿಗಳು, ಕಾಂಕ್ರೀಟಿನ ಜಲಾಶಯಗಳನ್ನು ನಿರ್ಮಿಸಿ ಅದರಲ್ಲಿ ಇವುಗಳನ್ನು ಸಹಜ ಭಂಗಿಯಲ್ಲಿ ನಿಲ್ಲಿಸಲಾಗಿದೆ.

ದೋಷಗಳಿಂದ ಕೆಟ್ಟ ಹೆಸರು
ಇಚ್ಚಿಯೊಸಾರಸ್‌ ಎಂಬ ದೈತ್ಯ ಮೊಸಳೆಯಾಕಾರದ ಡೈನೋಸಾರ್‌, ಕಪ್ಪೆಯಂತಿರುವ ಲ್ಯಾಬಿರಿಂಥೋಡಾಂಟ್‌ ಇವೆಲ್ಲವೂ ನೋಡುವವರಿಗೆ ಅದ್ಭುತ ಎನ್ನುವ ಭಾವ ಮೂಡಿಸಿದವು. ಆಲ್ಬರ್ಟ್‌ ಪ್ರಿನ್ಸ್‌ ಮತ್ತು ರಾಣಿ ವಿಕ್ಟೋರಿಯಾ ಇದರ ವೀಕ್ಷಣೆಗಾಗಿ ಆಗಾಗ ಭೇಟಿ ಕೊಡುತ್ತಿದ್ದರು. ಆದರೆ ವೈಜ್ಞಾನಿಕ ತಿಳಿವಳಿಕೆಗಳು ಹೆಚ್ಚುತ್ತಿದ್ದಂತೆ ಪ್ರತಿಮೆಗಳ ರಚನೆ ಲೋಪಗಳಿಂದ ಕೂಡಿದೆ ಎಂಬ ಆರೋಪಗಳು ಕೇಳಿಬಂದವು. ಇಗುವಾನೊಡಾನ್ಸ್‌ಗೆ ಹಾಕಿನ್ಸ್‌ ಖಡ್ಗಮೃಗದ ಹಾಗೆ ಕೊಂಬನ್ನಿರಿಸಿದ್ದರು. ಮೂಲತಃ ಅದಕ್ಕೆ ಕೊಂಬು ಇಲ್ಲ ಎಂಬ ಆಕ್ಷೇಪ ಕೇಳಿಬಂತು. ಪರಿಣಾಮವಾಗಿ, ಅದರ ವೀಕ್ಷಣೆಗೆ ಬರುವ ಜನಪ್ರವಾಹ ವಿರಳವಾಯಿತು. 2002ರಲ್ಲಿ ಇಂಥ ದೋಷಗಳನ್ನು ಸರಿಪಡಿಸಲಾಯಿತು.

ಭಗ್ನವಾದ ಪ್ರತಿಮೆಗಳ ಕಾಯಕಲ್ಪ ನಡೆಯಿತು. ಇದಕ್ಕಾಗಿ ಸಾರ್ವಜನಿಕರು ಮೂವತ್ತು ಸಾವಿರ ಪೌಂಡ್‌ ದೇಣಿಗೆ ನೀಡಿದರು. ಜಿಂಕೆ, ಹಂದಿ ಮೊದಲಾದ ಹೊಸ ಪ್ರಾಣಿಗಳಿಗೂ ಇದರೊಳಗೆ ಜಾಗ ಸಿಕ್ಕಿತು. ಆನಂತರ, ಲಕ್ಷಾಂತರ ಪ್ರವಾಸಿಗರನ್ನು ಬಳಿ ಸೆಳೆಯಲು ಶುರು ಮಾಡಿತು. ಬೇಕಿದ್ದವರಿಗೆ ಡೈನೋಸಾರ್‌ ಪ್ರತಿಮೆಗಳ ಇಲ್ಲಿ ಸಿಗುತ್ತವೆ. ಚಿಕಣಿ ಪ್ರತಿಮೆಗೆ ಮೂವತ್ತು ಪೌಂಡ್‌. ಟನ್ನುಗಟ್ಟಲೆ ಭಾರವಿರುವ ಎತ್ತರದ ಭಾರೀ ಪ್ರತಿಮೆ ಬೇಕಿದ್ದರೆ 7, 13, 729 ಪೌಂಡ್‌ ಬೆಲೆ ಇದೆ.

ಕಲ್ಪನಾಶಕ್ತಿಯೇ ಸ್ಫೂರ್ತಿ
ಪ್ರತಿಮೆಗಳನ್ನು ತಯಾರಿಸಿ ಕೊಡಲು ಆ ಕಾಲದ ಪ್ರಸಿದ್ಧ ಜೀವಶಾಸ್ತ್ರಜ್ಞ ಹಾಗೂ ಪ್ಯಾಲಿಯಂಟಾಲಜಿಸ್ಟ್‌ ಪೊ›ಫೆಸರ್‌ ರಿಚರ್ಡ್‌ ಓವನ್‌ ಮತ್ತು ಬೆಂಜಮಿನ್‌ ವಾಟರ್‌ಹೌಸ್‌ ಹಾಕಿನ್ಸ್‌ ಅವರಲ್ಲಿ ಕೇಳಿಕೊಳ್ಳಲಾಯಿತು. ಇಬ್ಬರ ಸಹಯೋಗದಲ್ಲಿ ತಯಾರಾದ ಪ್ರತಿಮೆಗಳ ವಿನ್ಯಾಸ ಮಾಡಿದವರು ಹಾಕಿನ್ಸ್‌. ಇದಲ್ಲದೆ ಅಳಿವಿನಂಚಿನಲ್ಲಿರುವ ಬೇರೆ ಪ್ರಾಣಿಗಳ ಪ್ರತಿಮೆಗಳನ್ನೂ ತಯಾರಿಸಿ ಕೊಡುವಂತೆ ಅವರಿಗೆ ನಿರ್ದೇಶಿಸಲಾಗಿತ್ತು. 1852ರಲ್ಲಿ ಆರಂಭವಾದ ಈ ಕೆಲಸ ಪೂರ್ಣವಾಗಲು ಎರಡು ವರ್ಷವಾಯಿತು. ತಡವಾಗಲು ಕಾರಣ ವಿನ್ಯಾಸ ರಚನೆಗೆ ಪಳೆಯುಳಿಕೆಗಳನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡಬೇಕಾಗಿದ್ದುದು. ಪ್ರಾಣಿಗಳು ಹೀಗೆಯೇ ಇದ್ದವು ಎಂಬುದನ್ನು ಖಚಿತಪಡಿಸಲು ನಿರ್ದಿಷ್ಟ ದಾಖಲೆಗಳಿರಲಿಲ್ಲ. ಅವುಗಳ ಹಲ್ಲು, ಮೂಳೆಗಳನ್ನು ನೋಡಿ, ಪ್ರತಿಕೃತಿಗಳನ್ನು ಬರೆದು, ಬೇರೆ ಪ್ರಾಣಿಗಳ ಮೂಳೆಗಳೊಂದಿಗೆ ಹೋಲಿಕೆ ಮಾಡಿ ಕಲ್ಪನಾಶಕ್ತಿಯಿಂದ ಹೀಗಿರಬಹುದೆಂಬ ಚಿತ್ರಗಳನ್ನು ಆತ ಬರೆದು, ಬಳಿಕ ಮಣ್ಣಿನ ಮಾದರಿಗಳನ್ನು ಮಾಡಿಕೊಟ್ಟರು.

-ಪ. ರಾಮಕೃಷ್ಣ ಶಾಸ್ತ್ರಿ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.ಈ ವಿಭಾಗದಿಂದ ಇನ್ನಷ್ಟು

  • ಬಾಹ್ಯಾಕಾಶದ ಕತ್ತಲಿನಲ್ಲಿ ಕ್ಯಾಮೆರಾ ಫ್ಲ್ಯಾಶ್‌ ಒಂದು ತೂರಿ ಬಂದಿತ್ತು. ಅಂತರಿಕ್ಷದ ಯಾವುದೇ ವಿದ್ಯಮಾನವನ್ನೂ ಕಡೆಗಣಿಸದ ವಿಜ್ಞಾನಿಗಳು ಅದರ ಹಿಂದೆ ಬಿದ್ದರು....

  • ಮ್ಯಾಜಿಕ್‌ನಲ್ಲಿ ವಸ್ತುಗಳನ್ನು ತೋರಿಸಿ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿ, ಆ ಮೂಲಕ ಅವರನ್ನು ಹಿಡಿದಿಟ್ಟುಕೊಳ್ಳುವುದು ಒಂದು ಬಗೆ. ಆದರೆ, ಇದನ್ನೇ ಪದೇ ಪದೇ...

  • ಪ್ರಮುಖ ವ್ಯಕ್ತಿಗಳ ಪರಿಚಯವನ್ನು ಕೇವಲ ಹತ್ತೇ ಹತ್ತು ಪಾಯಿಂಟ್‌ಗಳಲ್ಲಿ ಕಟ್ಟಿ ಕೊಡುವ ಪ್ರಯತ್ನವಿದು... 1. ಮಾಯಾಪೆಟ್ಟಿಗೆ ಟಿ.ವಿ. (ದೂರದರ್ಶನ)ಯನ್ನು ಕಂಡು...

  • ಒಂದಾನೊಂದು ಕಾಡಿನಲ್ಲಿ ಒಂದು ತೋಳ ವಾಸವಾಗಿತ್ತು. ಅದು ರಾತ್ರೋರಾತ್ರಿ ಕಾಡಿನ ಸಮೀಪವಿದ್ದ ಹಳ್ಳಿಗೆ ನುಗ್ಗಿ ಮೇಕೆ ಕುರಿಗಳನ್ನು ಹೊತ್ತುಕೊಂಡು ಬಂದು ತಿನ್ನುತ್ತಿತ್ತು....

  • ಅಮೆರಿಕ, ಚಂದ್ರನ ಮೇಲೆ ತನ್ನ ಗಗನಯಾನಿಗಳನ್ನು 1969ರಲ್ಲಿ ಇಳಿಸಿ ಐತಿಹಾಸಿಕ ಸಾಧನೆ ಮಾಡಿತು. ಅದಕ್ಕಾಗಿ ಅಮೆರಿಕ ದಶಕಗಳಿಂದ ಪೂರ್ವ ತಯಾರಿ ನಡೆಸಿತ್ತು. ಚಂದ್ರಯಾನವನ್ನು...

ಹೊಸ ಸೇರ್ಪಡೆ