ಪುಟಾಣಿಗಳ ಸಮುದ್ರ ಯಾನ

Team Udayavani, Sep 26, 2019, 5:00 AM IST

ಮಕ್ಕಳು ತಾವೇ ನಿರ್ಮಿಸಿದ ಹಡಗಿನಲ್ಲಿ ಸಮುದ್ರ ಪ್ರಯಾಣ ಹೊರಟರು. ದಾರಿಯಲ್ಲಿ ಅವರಿಗೆ ತಿಮಿಂಗಿಲ ಎದುರಾಯಿತು, ಮಾತಾಡುವ ಇರುವೆಗಳು ಸಿಕ್ಕವು… ಈ ಯಾನ ಅದೆಷ್ಟು ರೋಮಾಂಚಕವಾಗಿತ್ತು ಗೊತ್ತಾ?

ಬೇಸಿಗೆ ರಜೆಯ ಆ ದಿನ ನೀಲು, ರಾಜು, ಜಾನಿಗೆ ನೀರಿನ ಮೇಲೆ ಪಯಣಿಸುವ ಆಸೆಯಾಯಿತು. ಸಮುದ್ರ ದಡಕ್ಕೆ ಬಂದ ಅವರು ಪುಟ್ಟ ಹಡಗನ್ನು ಕಟ್ಟಲು ಶುರು ಮಾಡಿದರು. ತುಂಬಾ ದೊಡ್ಡದಲ್ಲದ, ದೋಣಿಯಷ್ಟು ಚಿಕ್ಕದೂ ಅಲ್ಲದ ಹದವಾದ ಹಡಗನ್ನು ಮರದ ದಿಮ್ಮಿಗಳಿಂದ ತಯಾರಿಸಿದರು. ಅವರ ಬೆಸ್ಟ್‌ ಫ್ರೆಂಡ್‌ ಚಿಂಕಿ ಕೋತಿ ಮೇಲೆ ಹಾರಿ ಧ್ವಜ ಕಟ್ಟಿತು. ಈಗ ಅವರ ಹಡಗು ಸಮುದ್ರದಲ್ಲಿ ಹೋಗಲು ರೆಡಿ! ಪುಟ್ಟ ಹಡಗಲ್ಲಿ ಕೆಳಗೆ ನೀಲು, ರಾಜು ಕುಳಿತರು. ಮಧ್ಯದಲ್ಲಿ ಜಾನಿ ನಿಂತುಕೊಂಡ. ಮೇಲುಗಡೆ ಚಿಂಕಿ ನಿಂತಿತು.

ನೀಲು ದುರ್ಬೀನು ಹಿಡಿದು ದೂರದಲ್ಲಿ ಏನಾದರೂ ಕಾಣಿಸುತ್ತಿದ್ದೆಯೇ ಎಂದು ನೋಡುತ್ತಿದ್ದಳು. ದೊಡ್ಡದೊಂದು ತಿಮಿಂಗಿಲ ಹಡಗಿನ ಕಡೆಗೇ ಬರುತ್ತಿರುವುದು ಕಾಣಿಸಿತು. “ಅಯ್ಯಪ್ಪಾ, ಇಷ್ಟು ದೊಡ್ಡ ಮೀನನ್ನು ನಾನು ಯಾವತ್ತೂ ನೋಡಿಯೇ ಇಲ್ಲ’ ಎಂದಳು. ತಿಮಿಂಗಿಲ ಹಡಗನ್ನು ತಡೆದು, “ನಿಮ್ಮನ್ನು ಈಗಲೇ ಗುಳುಂಕನೆ ನುಂಗಿಬಿಡುವೆ’ ಎಂದಿತು. ರಾಜುಗೆ ತಕ್ಷಣ ಉಪಾಯ ಹೊಳೆಯಿತು. ಅವನು ಕಣ್ಣು ಸನ್ನೆಯಲ್ಲಿ ಉಳಿದವರಿಗೆ ಸುಮ್ಮನಿರುವಂತೆ ಹೇಳಿದ. “ನಾವು ಫ‌ಳಫ‌ಳನೆ ಹೊಳೆಯುವ ಮುತ್ತಿನ ಸರ ತರಲು ಹೋಗುತ್ತಿದ್ದೇವೆ. ನಿನಗೆ ಬೇಕೋ, ಬೇಡವೋ?’ ಎಂದು ರಾಜು ಕೇಳಿದ. ಸರ ಸಿಗುತ್ತದಲ್ಲ ಎಂದು ತಿಮಿಂಗಿಲಕ್ಕೆ ಖುಷಿಯಾಯಿತು. “ಹಾರ ತರದಿದ್ದರೆ ಸುಮ್ಮನೆ ಬಿಡುವುದಿಲ್ಲ’ ಎಂದು ಹೆದರಿಸಿದ ತಿಮಿಂಗಿಲ ಅವರಿಗೆ ದಾರಿ ಬಿಟ್ಟಿತು.

ಎಷ್ಟೇ ದೊಡ್ಡ ಅಲೆ ಬಂದರೂ ಜಾರುತ್ತಾ, ನೆಗೆಯುತ್ತಾ ಹಡಗು ಮುಂದೆ ಸಾಗಿತು. ಹಾಗೆ ಹೋಗುತ್ತಾ ಎದುರಿಗೆ ನೀಲಿ ಮರಗಳ ದ್ವೀಪ ಕಂಡಿತು. ಜಾನಿ ಹಡಗನ್ನು ಅಲ್ಲೇ ನಿಲ್ಲಿಸಿದ. ಅಲ್ಲಿದ್ದ ಗಿಡಗಳೆಲ್ಲಾ ನೀಲಿ, ಮರ ನೀಲಿ, ಮರದ ಎಲೆ ನೀಲಿ, ಹಣ್ಣು- ಹೂವುಗಳೆಲ್ಲವೂ ನೀಲಿ. ನೀಲು ಒಂದು ನೀಲಿ ಬಣ್ಣದ ಗುಲಾಬಿ ಹೂವನ್ನು ಕೊಯ್ಯಲು ಮುಂದಾದಳು. ಆಗ ಆ ದ್ವೀಪದ ನೀಲಿ ಇರುವೆ ಸೈನ್ಯ ಬಂದು ಅವಳನ್ನು ತಡೆಯಿತು. “ಇಲ್ಲಿನ ಯಾವುದೇ ವಸ್ತುವನ್ನು ತೆಗೆದುಕೊಳ್ಳುವ ಮೊದಲು ನಮ್ಮ ರಾಣಿಯ ಒಪ್ಪಿಗೆ ಪಡೆಯಬೇಕು’ ಎನ್ನುತ್ತಾ ಅವರೆಲ್ಲರನ್ನೂ ರಾಣಿಯ ಬಳಿಗೆ ಕರೆದುಕೊಂಡುಹೋದವು.ಆಗಲೇ ಆ ದ್ವೀಪದಲ್ಲಿ ಇರುವುದು ಕೇವಲ ನೀಲಿ ಇರುವೆಗಳು ಎನ್ನುವುದು ನೀಲು, ರಾಜು, ಜಾನಿಗೆ ಗೊತ್ತಾಗಿದ್ದು!

ಇರುವೆ ರಾಣಿಗೆ ಮಕ್ಕಳನ್ನು ನೋಡಿ ಸಂತಸವಾಯಿತು. ಅವರು ಹಸಿದಿರುವುದು ರಾಣಿಗೆ ಗೊತ್ತಾಗಿ ತಿಂಡಿ ಕೊಟ್ಟಳು. ಆಹಾ, ಎಂಥಾ ರುಚಿಯಾದ ತಿನಿಸದು?!! ಅಂಥ ತಿನಿಸನ್ನು ಮಕ್ಕಳು ಇಲ್ಲಿಯ ತನಕ ನೋಡಿಯೇ ಇರಲಿಲ್ಲ. ದೋಸೆ, ಇಡ್ಲಿ, ಚಪಾತಿ, ಲಾಡು, ಹೋಳಿಗೆ, ಜಿಲೇಬಿಗಳೆಲ್ಲವೂ ಮರದಲ್ಲೇ ನೇತಾಡುತ್ತಿದ್ದವು. ಅದನ್ನು ತಿಂದು ಮಕ್ಕಳ ಹೊಟ್ಟೆ ತುಂಬಿತು. ನೀಲಿ ಮರದ ದ್ವೀಪದ ಇರುವೆಗಳೆಲ್ಲವೂ ರಾಜು, ನೀಲು, ಜಾನಿ, ಚಿಂಕಿಗೆ ಸ್ನೇಹಿತರಾದವು. ಅವರೆಲ್ಲರೂ ಜೊತೆಯಾಗಿ ಆಟವಾಡಿದರು.

ಕತ್ತಲಾಗುತ್ತಿದ್ದ ಕಾರಣ ಮಕ್ಕಳು ವಾಪಾಸು ಮನೆಗೆ ಹೋಗಬೇಕಾಗಿತ್ತು. ಆಗ ರಾಜುಗೆ, ಹಾರ ತರದಿದ್ದರೆ “ಗುಳುಂಕನೆ ನುಂಗಿಬಿಡುವೆ’ ಎಂದಿದ್ದ ತಿಮಿಂಗಿಲದ ಮಾತು ನೆನಪಾಯಿತು. ಅದನ್ನು ತಿಳಿದು ಇರುವೆಗಳೆಲ್ಲ ತಮ್ಮ ಬಳಿ ಇದ್ದ ಮುತ್ತಿನಿಂದ ಹಾರ ತಯಾರಿಸಿಕೊಟ್ಟವು. ನೀಲಿ ರಾಣಿ ಒಂದು ನೀಲಿ ಬಣ್ಣದ ಮರದ ಗೆಲ್ಲನ್ನು ಅವರಿಗೆ ಕೊಟ್ಟು, “ಇದಕ್ಕೆ ಮಾಯಾ ಶಕ್ತಿ ಇದೆ. ಅಪಾಯ ಎದುರಾದರೆ ಈ ಕೋಲಿನಿಂದ ಹೊಡೆಯಿರಿ. ನಿಮ್ಮನ್ನು ಇದು ರಕ್ಷಿಸುತ್ತದೆ’ ಎಂದಳು. ಮಕ್ಕಳು ಖುಷಿಯಿಂದ ಅಲ್ಲಿಂದ ಹೊರಟರು. ತಿಮಿಂಗಿಲ ಇವರಿಗಾಗಿ ಕಾಯುತ್ತಲೇ ಇತ್ತು. “ಎಲ್ಲಿದೆ ನನ್ನ ಹಾರ?’ ಎಂದು ಕೇಳಲು ರಾಜು ಹಾರವನ್ನು ತಿಮಿಂಗಿಲಕ್ಕೆ ಕೋಡಲು ಹೋದ. ಅಷ್ಟರಲ್ಲಿ, ಅದು ಅವನ ಕೈಯನ್ನೇ ನುಂಗಲು ಹೊರಟಿತು. ಆಗ ಜಾನಿ ಮತ್ತು ನೀಲು ಇಬ್ಬರೂ ಮಾಯಾ ಕೋಲಿನಿಂದ ತಿಮಿಂಗಿಲದ ತಲೆಗೆ ಹೊಡೆದರು. ತಿಮಿಂಗಿಲ ಪ್ರಜ್ಞೆ ತಪ್ಪಿತು. ಹಾರವನ್ನು ಮಕ್ಕಳು ತಮ್ಮಲ್ಲೇ ಇಟ್ಟುಕೊಂಡು ಅಲ್ಲಿಂದ ವೇಗವಾಗಿ ಹಡಗನ್ನು ಮನೆಯ ಕಡೆಗೆ ನಡೆಸಿದರು.

ಆ ಸಾಹಸೀ ಪ್ರಯಾಣವನ್ನು ಅವರು ಯಾವತ್ತೂ ಮರೆಯಲೇ ಇಲ್ಲ. ಈಗಲೂ ಆ ಹಾರ ನೀಲುವಿನ ಕತ್ತಿನಲ್ಲೇ ಇದೆ. ಇರುವೆ ಕೊಟ್ಟ ಮಾಯಾ ರೆಂಬೆಯೂ ಅವರ ಬಳಿ ಇದೆ. ಕಷ್ಟದಲ್ಲಿರುವವರನ್ನು ರಕ್ಷಿಸಲು ಮಕ್ಕಳು ಅದನ್ನು ಬಳಸುತ್ತಿದ್ದಾರೆ.

-ಶ್ರೀಕಲಾ ಡಿ. ಎಸ್‌.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಮೀನು ಯಾರಿಗೂ ಏನೂ ಮಾಡೋಲ್ಲ ಅನ್ನೋದೇನೋ ನಿಜ. ಆದರೆ, ಅದರಲ್ಲೂ ವಿಷಕಾರಿ ಮೀನುಗಳು ಉಂಟು ಅನ್ನೋದಕ್ಕೆ ಈ ಜೆಲ್ಲಿ ಮೀನೇ ಉದಾಹರಣೆ. ಈ ಮೀನು ಎಲ್ಲವನ್ನೂ ಕಾಲಿನ ಮೂಲಕವೇ...

  • ಹಿಮಕ್ಕೂ, ಹಿಮಕರಡಿಗಳಿಗೂ ಅವಿನಾಭಾವ ನಂಟು. ಹಿಮ ಇಲ್ಲದೇ ಹೋದರೆ ಹಿಮಕರಡಿ ಭೂಮಿಯಿಂದಲೇ ಇಲ್ಲವಾಗುವವು. ಹಿಮಕರಡಿಗಳು ಉತ್ತರಧೃವದಲ್ಲಿ ವಾಸಿಸುವ ಜೀವಿಗಳು....

  • "ಕುಮಾರ ಬಂದಾಗ, ಸೈನಿಕರು ಮತ್ತು ಸೇವಕರು ಎಲ್ಲರೂ ಸೇರಿಕೊಂಡು ರಾಜನಿಗೆ ಜಯವಾಗಲಿ ಅಂತ ಹೇಳಬೇಕು' ಎಂದು ಶಂಕರ ಹೇಳಿದ. ಎಲ್ಲರೂ ತಲೆಯಲ್ಲಾಡಿಸಿದರು. ಆದರೆ ಒಬ್ಬಳು...

  • ಪ್ರಮುಖ ವ್ಯಕ್ತಿಗಳ ಪರಿಚಯವನ್ನು ಕೇವಲ ಹತ್ತೇ ಹತ್ತು ಪಾಯಿಂಟ್‌ಗಳಲ್ಲಿ ಕಟ್ಟಿ ಕೊಡುವ ಪ್ರಯತ್ನವಿದು... 1. ಮಂಗನಿಂದ ಮಾನವ "ವಿಕಾಸವಾದ ಸಿದ್ಧಾಂತ'ವನ್ನು ಪ್ರತಿಪಾದಿಸಿದ...

  • ಬೇಕಾದ ಪರಿಕರ: ಒಂದು ಕಾರ್ಡಿನ ಮೇಲೆ ಸಂಖ್ಯೆ ಬರೆಯಲಾದ ಮುಳ್ಳಿಲ್ಲದ ಗಡಿಯಾರ. ಪರಿಣಾಮ: ನಿಮ್ಮ ಸಭಿಕರಲ್ಲಿ ಒಬ್ಬರಿಗೆ ಹನ್ನೆರಡಕ್ಕಿಂತ ಕಡಿಮೆ ಸಂಖ್ಯೆಯನ್ನು...

ಹೊಸ ಸೇರ್ಪಡೆ