ಲೋಕ ಕಂಡ ಸಾರ್ವಕಾಲಿಕ ಟೀಚರ್‌ಗಳು…

Team Udayavani, Sep 5, 2019, 5:00 AM IST

ಕೆಲ ಮಹಾನುಭಾವರು ತಮ್ಮ ಚಿಂತನೆ, ಸಂದೇಶಗಳ ಮೂಲಕ ಎಂದಿಗೂ ಜೀವಂತವಾಗಿರುತ್ತಾರೆ. ಅವರ ಪಾಠಗಳು ಯಾವ ಕಾಲಕ್ಕೂ ಪ್ರಚಲಿತವೆನಿಸಿಕೊಳ್ಳುತ್ತವೆ. ಇತಿಹಾಸ ಮತ್ತು ಪುರಾಣಗಳಿಂದ ಆಯ್ದ ಅಂಥ ಐವರು ಮಹಾನ್‌ ಗುರುಗಳು ಇಲ್ಲಿದ್ದಾರೆ…

ಜಗತ್ತಿನ ಕಣ್ತೆರೆಸಿದ ಬುದ್ಧ!
ಜಗತ್ತಿಗೆ ಜೀವನದ ಅತಿ ಅಮೂಲ್ಯವಾದ ಸಂದೇಶವನ್ನು ಸಾರಿದವನು ಬುದ್ಧ. “ಆಸೆಯೇ ದುಃಖಕ್ಕೆ ಮೂಲ’ ಎಂಬ ಆತನ ಮಾತು ಸಾರ್ವಕಾಲಿಕ ಸತ್ಯ. ಬುದ್ಧ ಹುಟ್ಟಿದ್ದು ಲುಂಬಿನಿ ಗ್ರಾಮದಲ್ಲಿ. ತಂದೆ ಮಹಾರಾಜ ಶುದ್ದೋಧನ, ತಾಯಿ ಮಾಯಾದೇವಿ. ಆತನ ಮೂಲ ಹೆಸರು ಸಿದ್ಧಾರ್ಥ. ತಂದೆಗೆ, ಸಿದ್ಧಾರ್ಥನನ್ನು ಚಕ್ರವರ್ತಿ ಮಾಡಬೇಕೆಂಬ ಆಸೆಯಿತ್ತು. ಸಿದ್ದಾರ್ಥನಿಗೆ ಜಗತ್ತಿನ ಕಷ್ಟ ಕೋಟಲೆಗಳು, ನೋವು ಏನೊಂದೂ ತಿಳಿಯದಂತೆ ತಂದೆ ಅವನನ್ನು ಬೆಳೆಸಿದರು. ಆದರೆ, ಯಶೋಧರೆ ಎನ್ನುವ ಹುಡುಗಿಯೊಂದಿಗೆ ವಿವಾಹವಾದ ನಂತರ ಸಿದ್ದಾರ್ಥನಿಗೆ ಜಗತ್ತಿನ ಪರಿಚಯವಾಗಿತ್ತು. ಒಂದು ದಿನ, ಅಧಿಕಾರ, ಸಂಪತ್ತು ಏನೂ ಬೇಡವೆಂದು ನಿರ್ಧರಿಸಿ ಪತ್ನಿ ಮತ್ತು ಮಗನನ್ನು ತೊರೆದು ಅರಮನೆ ಬಿಟ್ಟು ಹೋದನು. ಮುಂದೆ, ತನ್ನ ಜೀವನದ ಗುರಿ ಮತ್ತು ಸತ್ಯದ ಅನ್ವೇಷಣೆಯಲ್ಲಿ ತೊಡಗಿದ್ದಾಗ ಬೋಧಿ ವೃಕ್ಷದ ಕೆಳಗೆ ಜ್ಞಾನೋದಯವನ್ನು ಪಡೆದುಕೊಳ್ಳುತ್ತಾನೆ. ಆಗಲೇ ಸಿದ್ದಾರ್ಥ, ಗೌತಮ ಬುದ್ಧನಾಗಿದ್ದು, ತಾನು ಪಡೆದುಕೊಂಡ ಜ್ಞಾನವನ್ನು ಜಗತ್ತಿಗೇ ಹಂಚಿದ್ದು! ಅವನು ಪ್ರತಿಪಾದಿಸಿದ ಸಂದೇಶಗಳಿಂದಲೇ ಬೌದ್ಧ ಧರ್ಮ ಹುಟ್ಟಿಕೊಂಡಿತು.

ರಣರಂಗದಲ್ಲಿ ಬೋಧಿಸಿದ ಕೃಷ್ಣ
ಕೃಷ್ಣ ಎಂದಾಕ್ಷಣ ನಮಗೆ ಜ್ಞಾಪಕಕ್ಕೆ ಬರುವುದು ಬೆಣ್ಣೆ ಕದಿಯುತ್ತಿದ್ದ ಬಾಲ ಕೃಷ್ಣ! ಕೃಷ್ಣ ಹುಟ್ಟಿದ್ದು ರಾಜಮನೆತನದಲ್ಲೇ ಆದರೂ, ಬೆಳೆದದ್ದು ಗೊಲ್ಲರ ಮನೆಯಲ್ಲಿ. ಹೀಗಾಗಿ, ಕೃಷ್ಣನಿಗೆ ಎಲ್ಲ ಜಾತಿ, ಧರ್ಮದವರು ಕೂಡ ಸ್ನೇಹಿತರಾಗಿದ್ದರು. ಕೃಷ್ಣ ಚತುರನೇ ಆದರೂ, ಜಗತ್ತಿಗೆ ಬೋಧಿಸಿದ್ದು ನ್ಯಾಯದ ಪರಿಪಾಲನೆ ಹಾಗೂ ಧರ್ಮವನ್ನು. ಕೆಟ್ಟವನಾದ ಕಂಸನನ್ನು ತಾನೇ ನಿರ್ಮೂಲನೆ ಮಾಡಿದರೆ, ಜರಾಸಂಧನನ್ನು ಪಾಂಡವರ ಮೂಲಕ ನಿರ್ಮೂಲನೆ ಮಾಡಿಸಿದ. ಹೀಗೆ, ಸಮಾಜ ಕಂಟಕರನ್ನು ಬಡಿದೋಡಿಸುವ ಮೂಲಕ ಸಾಮಾಜಿಕ ಪ್ರಜ್ಞೆ ಮಾಡಿಸಿದವನು ಕೃಷ್ಣ. ಮಹಾಭಾರತ ಯುದ್ಧ ನಡೆಯುತ್ತಿದ್ದಾಗ ಅರ್ಜುನ, ರಣರಂಗದಲ್ಲಿ ತನ್ನ ದಾಯಾದಿಗಳ ವಿರುದ್ಧ ಯುದ್ಧ ಮಾಡಲಾರೆ ಎಂದು ಶಸ್ತ್ರ ಬಿಸಾಡಿ ಕುಳಿತಾಗ, ಕೃಷ್ಣ ಆತ ಬೋಧಿಸಿದ ಸೂತ್ರಗಳು ಮುಂದೆ “ಭಗವದ್ಗೀತೆ’ ಗ್ರಂಥವಾಯಿತು. ಇಂದಿಗೂ ಲೋಕದ ಸಮಸ್ತ ತೊಂದರೆಗಳಿಗೂ, ಪ್ರಶ್ನೆಗಳಿಗೂ ಪರಿಹಾರ ಮತ್ತು ಸಾಂತ್ವನ ಭಗವದ್ಗೀತೆಯಲ್ಲಿ ದೊರಕುತ್ತದೆ. ಹೀಗಾಗಿ, ಕೃಷ್ಣ- ಜಗದ ಗುರು.

ಮುಂದೆ ಗುರಿ, ಹಿಂದೆ ದ್ರೋಣಾಚಾರ್ಯರು
ಮಹಾಭಾರತ ಪುರಾಣದಲ್ಲಿ ಗುರು ದ್ರೋಣಚಾರ್ಯರಿಗೆ ವಿಶೇಷ ಸ್ಥಾನವಿದೆ. ಪಾಂಡವ- ಕೌರವರಿಗೆ ಬಿಲ್ವಿದ್ಯೆ ಕಲಿಸಿಕೊಡುತ್ತಿದ್ದ ದ್ರೋಣಾಚಾರ್ಯರು ಸ್ವತಃ ಓರ್ವ ಮಹಾನ್‌ ಗುರಿಕಾರರಾಗಿದ್ದರು. ಅವರು ತಮ್ಮ ಶಿಷ್ಯರಿಗೆ ಬದುಕಿನ ನಡೆಯಾಗಲಿ, ಬಿಲ್ಲಿನ ದಿಕ್ಕಾಗಲಿ ಗುರಿತಪ್ಪದಂತೆ ನೋಡಿಕೊಂಡರು. ಶಿಷ್ಯರಿಗೆ ಒಳ್ಳೆಯ ಸಂಸ್ಕಾರ ಕೊಟ್ಟರು. ಇವರ ಪ್ರಭಾವ ಎಂಥದ್ದೆಂದರೆ, ಹಳ್ಳಿಗಾಡಿನ ಹುಡುಗ ಏಕಲವ್ಯ, ಇವರ ಮೂರ್ತಿಯ ಮುಂದೆ ಅಭ್ಯಾಸ ಮಾಡಿಯೇ ಅದ್ಬುತ ಬಿಲ್ಲುಗಾರನಾದ. ಪಂಚ ಪಾಂಡವರಲ್ಲಿ ಒಬ್ಬನಾದ ಅರ್ಜುನ ದ್ರೋಣಾಚಾರ್ಯರ ಅಪ್ತ ಶಿಷ್ಯನಾಗಿದ್ದ. ಆದರೆ ಮಹಾಭಾರತ ಯುದ್ಧ ಘೋಷಣೆಯಾದಾಗ ಬೇಸರವಾದರೂ, ಕೊಟ್ಟ ಮಾತು ತಪ್ಪದೆ ಕೌರವರ ಪರವಾಗಿ ಹೋರಾಟ ಮಾಡಿದರು.

ಚಾಣಕ್ಯನ ತಂತ್ರಗಾರಿಕೆ
ಕೌಟಿಲ್ಯ, ಚಾಣಕ್ಯ, ವಿಷ್ಣು ಗುಪ್ತ ಎಲ್ಲವೂ ಒಬ್ಬನೇ ವ್ಯಕ್ತಿಯ ಹೆಸರು. ಇವುಗಳಲ್ಲಿ ಚಾಣಕ್ಯ ಎಂಬ ಹೆಸರು ಜನಪ್ರಿಯವಾದುದು. ಚಕ್ರವರ್ತಿ ಚಂದ್ರಗುಪ್ತ ಮೌರ್ಯನಿಗೆ ಗುರುವಾಗಿದ್ದ ಈತ ಅರ್ಥಶಾಸ್ತ್ರ, ಯುದ್ಧಕಲೆ, ತತ್ವಶಾಸ್ತ್ರ, ತಂತ್ರಗಾರಿಕೆ ಸಕಲ ವಿದ್ಯೆಗಳಲ್ಲೂ ಪಾರಂಗತನಾಗಿದ್ದ. ಭಾರತದಲ್ಲಿ ಮೌರ್ಯ ಸಾಮ್ರಾಜ್ಯ ಸ್ಥಾಪನೆಗೆ ಕಾರಣಕರ್ತರಾಗಿದ್ದು ಇದೇ ಚಾಣಕ್ಯ ಹಾಗೂ ಅವನ ತಂತ್ರಗಳು. ಚಾಣಕ್ಯನ ರಾಜಕೀಯ ತಂತ್ರಗಳು ಇಂದಿಗೂ ಗುರುವಿನಂತೆ. ಚತುರೋಪಾಯಗಳಿಂದ ತಂತ್ರಗಳನ್ನು ರೂಪಿಸುವಲ್ಲಿ ಈತ ಎತ್ತಿದ ಕೈ. ತಕ್ಷಶಿಲೆಯಲ್ಲಿ ಚಾಣಕ್ಯ ಶಾಲೆ ನಡೆಸುತ್ತಿದ್ದ. ಇಲ್ಲಿಗೆ ನಾನಾ ರಾಜ್ಯಗಳ ರಾಜಕುಮಾರರು ವಿದ್ಯಾಭ್ಯಾಸಕ್ಕೆ ಬರುತ್ತಿದ್ದರು. ಅವರಿಗೆ ನ್ಯಾಯ ಶಾಸ್ತ್ರ, ವೇದ ಶಾಸ್ತ್ರ, ಸಮರ ಶಾಸ್ತ್ರಗಳನ್ನು ಸೇರಿಸಿ ಒಟ್ಟು 18 ವಿದ್ಯೆಗಳನ್ನು ಅಲ್ಲಿ ಕಲಿಸಲಾಗುತ್ತಿತ್ತಂತೆ. ಈಗಲೂ ಚಾಣಕ್ಯನ ಸೂತ್ರಗಳು, ತಂತ್ರಗಳು ಪ್ರಚಲಿತ ಎನ್ನಿಸಿಕೊಂಡಿವೆ.

ಜಗದೇಕವೀರನಿಗೆ ಪಾಠ ಹೇಳಿದ ಅರಿಸ್ಟಾಟಲ್‌
ಪ್ರಪಂಚವನ್ನೇ ಗೆಲ್ಲಬೇಕೆಂಬ ಅದಮ್ಯ ಮಹತ್ವಾಕಾಂಕ್ಷೆ ಇದ್ದಾತ ಅಲೆಕ್ಸಾಂಡರ್‌. ಅಂತಾ ಅಲೆಕ್ಸಾಂಡರ್‌ನಂಥವನಿಗೇ ಗುರುವಾಗಿದ್ದವನು, ತತ್ವಶಾಸ್ತ್ರಜ್ಞ ಅರಿಸ್ಟಾಟಲ್‌. ಗ್ರೀಸ್‌ ದೇಶದ ಮೆಸಿಡೋನಿಯಾದ ದೊರೆ ಫಿಲಿಪ್‌ ತನ್ನ ಮಗ ಅಲೆಕ್ಸಾಂಡರನಿಗೆ ಗುರುವಾಗಬೇಕೆಂದು ಅರಿಸ್ಟಾಟಲನಿಗೆ ಆಹ್ವಾನವಿತ್ತಿದ್ದ. ಗುರು ತನ್ನ ಶಿಷ್ಯನಲ್ಲಿ ಸಕಲ ವಿದ್ಯೆಗಳನ್ನೂ ಕಲಿಸಿದ. ಅಲೆಕ್ಸಾಂಡರನ ಸಾಮ್ರಾಜ್ಯ ಗ್ರೀಸ್‌ನಿಂದ ಹಿಮಾಲಯಾದ ತಪ್ಪಲಿನವರಗೆ ವಿಸ್ತರಿಸುವಲ್ಲಿ ಅರಿಸ್ಟಾಟಲ್‌ನ ಪ್ರೇರಣೆಯೂ ಇತ್ತು. ಆತ ಜನ್ನ ಜೀವಿತಾವಧಿಯಲ್ಲಿ ಸುಮಾರು 400 ಗ್ರಂಥಗಳನ್ನು ಬರೆದಿದ್ದಾನೆ ಎನ್ನಲಾಗುತ್ತದೆ. ತರ್ಕಶಾಸ್ತ್ರ, ಭೌತವಿಜ್ಞಾನ, ಜೀವವಿಜ್ಞಾನ, ನೀತಿಶಾಸ್ತ್ರ, ರಾಷ್ಟ್ರಶಾಸ್ತ್ರ, ಅಲಂಕಾರಶಾಸ್ತ್ರ ಮತ್ತು ಕಾವ್ಯಮೀಮಾಂಸೆಗಳು ಅರಿಸ್ಟಾಟಲ್‌ನ ಅಧ್ಯಯನ ಕ್ಷೇತ್ರಗಳು. ಚಾಣಕ್ಯನಂತೆಯೇ, ಅರಿಸ್ಟಾಟಲ್‌ನ ನುಡಿಮುತ್ತುಗಳು ಕೂಡಾ ಬದುಕಿನ ಜಟಿಲ ಸಮಸ್ಯೆಗಳಿಗೆ ಪರಿಹಾರ ಒದಗಿಸಬಲ್ಲವು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಡೈನೋಸಾರ್‌ ಅಂದಾಕ್ಷ ಣ ಕಣ್ಣ ಮುಂದೆ ಬರುವುದು ದೈತ್ಯಾಕಾರದ ಪ್ರಾಣಿ. ಇದು ಬದುಕಿತ್ತ? ಬದುಕಿದ್ದರೆ ಯಾವಾಗ? ಹೇಗೆ ಅಂತೆಲ್ಲ ಕುತೂಹಲ ಹುಟ್ಟುತ್ತದೆ. ಇದನ್ನು ತಣಿಸಲೆಂದೇ...

  • ಪ್ರಪಂಚದಲ್ಲಿ ಎಷ್ಟು ಭೂಖಂಡಗಳಿವೆ ಎಂದು ಕೇಳಿದರೆ ಯಾರು ಬೇಕಾದರೂ "ಏಳು' ಎಂಬ ಉತ್ತರವನ್ನು ನೀಡುತ್ತಾರೆ. ಭೂಗೋಳ, ನಕಾಶೆ ಪುಸ್ತಕವನ್ನು ನೋಡಿದರೆ ಈ 7 ಖಂಡಗಳು ಭೂಮಿಯ...

  • ಪ್ರಮುಖ ವ್ಯಕ್ತಿಗಳ ಪರಿಚಯವನ್ನು ಕೇವಲ ಹತ್ತೇ ಹತ್ತು ಪಾಯಿಂಟ್‌ಗಳಲ್ಲಿ ಕಟ್ಟಿ ಕೊಡುವ ಪ್ರಯತ್ನವಿದು... 1. ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ)ಯ ಈಗಿನ ಅಧ್ಯಕ್ಷ,...

  • ನೀವು ಗಮನಿಸಿರಬಹುದು. ಈ ಜಾದೂಗಾರ ಅಂದಾಕ್ಷಣ ಕಣ್ಣ ಮುಂದೆ ಬರುವ ಚಿತ್ರ ಕೈಯಲ್ಲೊಂದಷ್ಟು ಇಸ್ಪೀಟ್‌ ಕಾರ್ಡ್‌ಗಳು. ಹೌದು, ಇದು ಜಾದುವಿನ ಚುಂಬಕ ಚಿಹ್ನೆ. ಕಾಲಿ...

  • ಕಾಡಿನ ನಡುವೆ ವನರಾಜ ಸಿಂಹದ ನೇತೃತ್ವದಲ್ಲಿ ಪ್ರಾಣಿಗಳ ಸಭೆ ನಡೆಯುತ್ತಿತ್ತು. ಜಿಂಕೆ "ಇತ್ತೀಚೆಗೆ ಬೇಟೆಗಾರನ ಉಪಟಳ ವಿಪರೀತವಾಗುತ್ತಿದೆ. ಇದು ಹೀಗೆ ಮುಂದುವರಿದರೆ...

ಹೊಸ ಸೇರ್ಪಡೆ