ಮನುಷ್ಯ 6th ಸೆನ್ಸ್‌ ಪಡೆಯುತ್ತಾನೆಯೇ?

Team Udayavani, Aug 1, 2019, 5:04 AM IST

ಪಕ್ಷಿ ಹಾಗೂ ಹಲವು ಪ್ರಾಣಿಗಳ ಮೆದುಳು ಪ್ರಕೃತಿಯಲ್ಲಿ ನಡೆಯುವ ನಿಗೂಢ ವಿದ್ಯಮಾನಗಳನ್ನು ಗ್ರಹಿಸುವ ಸಾಮರ್ಥ್ಯ ಹೊಂದಿದೆ. ಮನುಷ್ಯನ ಮೆದುಳಿಗೆ, ಗ್ರಾಹ್ಯಶಕ್ತಿಗೆ ನಿಲುಕದ ವಿದ್ಯುತ್‌ಕಾಂತೀಯ ಶಕ್ತಿಯನ್ನೂ ಅದು ಗ್ರಹಿಸಬಲ್ಲುದು. ಇದೀಗ ಮನುಷ್ಯನೂ ಈ ಶಕ್ತಿಯನ್ನು ಸಂಪಾದಿಸಲು ಹೊರಟಿದ್ದಾನೆ…

ಹಕ್ಕಿಗಳು ವಲಸೆ ಹೋಗೋದು, ಪ್ರಾಣಿಗಳಿಗೆ ಮೊದಲೇ ಭೂಕಂಪನದ ಅನುಭವ ಆಗೋದು, ಪಾರಿವಾಳಗಳಿಂದ ಸಂದೇಶ ಕಳುಹಿಸೋದು ಹತ್ತು ಹಲವಾರು ಸಂಗತಿಗಳು ನೀವು ಕೇಳಿರುತ್ತೀರಿ, ಓದಿರುತ್ತೀರಿ. ಮನುಷ್ಯ ಈ ಸಾಮರ್ಥ್ಯಗಳಿಂದ ವಂಚಿತನಾಗಿದ್ದಾನೆ ಎಂದೇ ಇಲ್ಲಿಯವರೆಗೂ ತಿಳಿಯಲಾಗಿತ್ತು. ಆದರೆ, ಕ್ಯಾಲಿಫೋರ್ನಿಯಾ ಇನ್ಸ್ಟಿಟ್ಯೂಟ್‌ ಆಫ್ ಟೆಕ್ನಾಲಜಿಯ ಸಂಶೋಧಕರು ಅಧ್ಯಯನ ನಡೆಸಿದಾಗ ಪ್ರಕಾರ ನಿರ್ದಿಷ್ಟ ವಾತಾವರಣದಲ್ಲಿ ಕೆಲ ವ್ಯಕ್ತಿಗಳು ಭೂಮಿಯ ಕಾಂತೀಯ ಕ್ಷೇತ್ರವನ್ನು ಕಂಡುಹಿಡಿಯುವಲ್ಲಿ ಯಶಸ್ವಿಯಾದರಂತೆ!

ಕಾಂತೀಯ ಕ್ಷೇತ್ರದ ಪ್ರಯೋಗ
ಭೂಮಿಯ ಉತ್ತರಾರ್ಧಗೋಳವನ್ನು ಹೋಲುವಂಥ ವಿಶಿಷ್ಟವಾದ ವಿನ್ಯಾಸವನ್ನು ಈ ಪ್ರಯೋಗಕ್ಕೆಂದೇ ನಿರ್ಮಿಸಲಾಗಿತ್ತು. ಪ್ರಯೋಗಕ್ಕೆಂದು 34 ಜನರ ತಂಡವೊಂದನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು. ಅವರನ್ನು ಗೋಳದ ಒಳಗೆ ಇರಿಸಿ ಅವರ ಮೆದುಳಿನ ಕಾರ್ಯಚಟುವಟಿಕೆಗಳನ್ನು ರೆಕಾರ್ಡ್‌ ಮಾಡಿಕೊಳ್ಳಲಾಯಿತು. ಯಾವುದೇ ವ್ಯಕ್ತಿಯ ಮೆದುಳು ಗೋಳದ ಕಾಂತೀಯ ಕ್ಷೇತ್ರಕ್ಕೆ ಸ್ಪಂದಿಸಿದರೆ, ಮೆದುಳು ಕಾಂತೀಯ ಕ್ಷೇತ್ರದ ಪ್ರಭಾವಕ್ಕೆ ಒಳಪಟ್ಟಿದೆ ಎಂಬುದು ಸಾಬೀತಾಗುತ್ತಿತ್ತು. 34 ಮಂದಿಯಲ್ಲಿ ಕೆಲವರ ಮೆದುಳು ಮಾತ್ರವೇ ಅವರ ಎಣಿಕೆಗೂ ಮೀರಿ ಸ್ಪಂದಿಸಿತ್ತು. ಅದೇ ಪ್ರಾಣಿ ಹಾಗೂ ಪಕ್ಷಿಗಳ ಮೆದುಳನ್ನು ಅಲ್ಲಿ ಪರೀಕ್ಷೆಗೊಳಪಡಿಸಿದಾಗ ಎಲ್ಲರಿಗೂ ಗೊತ್ತಿರುವಂತೆಯೇ ಕಾಂತೀಯ ಕ್ಷೇತ್ರಕ್ಕೆ ಸ್ಪಂದಿಸುತ್ತಿತ್ತು.

ಮ್ಯಾಗ್ನೆಟೋರೆಸೆಪ್ಷನ್‌ ಎಂಬ ದಿಕ್ಸೂಚಿ
ಪ್ರಾಣಿಗಳು ದೃಷ್ಟಿ, ಸ್ಪರ್ಶ, ರುಚಿ, ವಾಸನೆ, ಗುರುತ್ವ, ಉಷ್ಣತೆಗಳನ್ನು ಗ್ರಹಿಸುವಂತೆ ಮಾಡುವ ಸಂವೇದನಾ ಪ್ರಜ್ಞೆಗೆ ಮ್ಯಾಗ್ನೆಟೋರೆಸೆಪ್ಷನ್‌ ಎಂದು ಕರೆಯುತ್ತಾರೆ. ಇದು ಪ್ರಾಣಿಗಳಲ್ಲಿ ಪಕ್ಷಿಗಳಲ್ಲಿ ದಿಕ್ಸೂಚಿಯಂತೆ ಕೆಲಸ ಮಾಡುತ್ತದೆ. ಒಂದು ದೇಶದಿಂದ ಇನ್ನೊಂದು ದೇಶಕ್ಕೆ, ಅಷ್ಟೇ ಯಾಕೆ ಒಂದು ಖಂಡದಿಂದ ಇನ್ನೊಂದು ಖಂಡಕ್ಕೆ ವಲಸೆ ಹೋಗುವ ಹಕ್ಕಿಗಳ ಬಗ್ಗೆ ನಿಮಗೆ ಗೊತ್ತಿರುತ್ತದೆ. ಗುರುತು ಪರಿಚಯವಿಲ್ಲದ ಊರಿಗೆ ಹೋದಾಗ ದಾರಿತಪ್ಪಿ ವಿಳಾಸ ಕೇಳುವ ಪರಿಸ್ಥಿತಿ ನಮ್ಮದು. ಆದರೆ ಈ ಹಕ್ಕಿಗಳು ಯಾವ ತಂತ್ರಜ್ಞಾನದ ಸಹಾಯವಿಲ್ಲದೆ ಅಷ್ಟು ದೂರ ಕ್ರಮಿಸಿ ಸುರಕ್ಷಿತವಾಗಿ ಅದು ಹೇಗೆ ವಾಪಸ್ಸಾಗುತ್ತವೆ ಅಂತ ಯಾವತ್ತಾದರೂ ಯೋಚಿಸಿದ್ದೀರಾ? ಅದಕ್ಕೆ ಕಾರಣ ಇದೇ ಮ್ಯಾಗ್ನೆಟೋರೆಸೆಪ್ಷನ್‌.

ಹಾಗಾದ್ರೆ ಈ ಮ್ಯಾಗ್ನಾಟೈಟ್‌ ಏನ್ಮಾಡುತ್ತೆ?
ಆಯಸ್ಕಾಂತದ ಪ್ರಮುಖ ಗುಣ ಯಾವುದು? ಅದು ಕಬ್ಬಿಣವನ್ನು ಆಕರ್ಷಿಸುತ್ತದೆ. ಅದೇ ಗುಣವನ್ನು ಹೊಂದಿದ ಮ್ಯಾಗ್ನಟೈಟ್‌ ಎಂಬ ಅಂಶ ಪಕ್ಷಿ, ಮೀನುಗಳ ದೇಹದಲ್ಲೂ ಇದೆ ಎನ್ನುವುದನ್ನು ಸಂಶೋಧಕರು ಪತ್ತೆ ಹಚ್ಚಿದ್ದಾರೆ. ಭೂಮಿಯ ಕಾಂತಕ್ಷೇತ್ರವನ್ನು ಗುರುತಿಸುವುದಕ್ಕೆ ಕಾರಣ ಈ ಅಂಶ. ಆಗ ಸಿಕ್ಸ್‌ತ್‌ ಸೆನ್ಸ್‌ ಎಂಬ ಶಕ್ತಿಯನ್ನು ಮನುಷ್ಯ ಹೊಂದಬಹುದೇನೋ ಎಂಬ ಕನಸು ಹಲವರದು. ಸಂಶೋಧನೆ ಮುಗಿಯುವವರೆಗೆ ಏನೂ ಹೇಳುವ ಹಾಗಿಲ್ಲ.

– ಅರ್ಚನಾ ಹೆಚ್‌.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಶಾಲೆಯಿಂದ ಮರಳಿ ಮನೆಗೆ ಬಂದ ರೋಹನ್‌ ತನ್ನ ತಾಯಿ ಬಳಿ ಹೋಗಿ, "ಅಮ್ಮಾ, ನಾಳೆ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದ ದಿನ. ಅದಕ್ಕೆ ಶಾಲೆಯಲ್ಲಿ ಒಂದು ಪುಟ್ಟ ಕಥೆ ಹೇಳಬೇಕಂತೆ....

  • ಜಾದೂಗಾರ ಒಂದು ಖಾಲಿ ಬೆಂಕಿಪೊಟ್ಟಣದೊಳಗೆ ಕೇಸರಿ, ಬಿಳಿ, ಹಸಿರು, ನೀಲಿ ರಿಬ್ಬನ್‌ಗಳನ್ನು ಹಾಕಿ ಮುಚ್ಚುತ್ತಾನೆ. ಎಲ್ಲರೂ ವಂದೇ ಮಾತರಂ ಎಂಬ ಉದ್ಘೋಷವನ್ನು ಮಾಡುತ್ತಿದ್ದಂತೆಯೇ...

  • ಅತಿಥಿಯಾಗಿ ಬಂದಿದ್ದ ಶಾಸಕರು ಧ್ವಜಾರೋಹಣವನ್ನು ನಡೆಸಿಕೊಟ್ಟರು. ನಂತರ ಶಾಲೆಯ ಜನಪ್ರಿಯ ಕಥೆಗಾರ ಸಲೀಂ ಕಥೆ ಹೇಳುವ ಕಾರ್ಯಕ್ರಮ. ಅದಕ್ಕಾಗಿ ಎಲ್ಲರೂ ಕಾದಿದ್ದರು....

  • ಭಾರತೀಯ ಸ್ವಾತಂತ್ರ್ಯ ಸಂಗ್ರಾಮದಲ್ಲಿ ದೊಡ್ಡ ಪಾತ್ರ ವಹಿಸಿದ ಮಹಾತ್ಮ ಗಾಂಧೀಜಿಯ ಎಂಬ ಆಲದ ಮರದ ನೆರಳಿನಲ್ಲಿ ಬಹಳಷ್ಟು ಮಂದಿ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದರು....

  • ಕತ್ತಲಾದ ಕೂಡಲೆ ಮಿಡತೆ ತನ್ನ ಮುಂಗಾಲಿನಿಂದ ಬಾಯಿಯನ್ನು ಒರೆಸಿಕೊಳ್ಳುತ್ತಾ "ಚಿರ್ಪ್‌ ಚಿರ್ಪ್‌' ಎಂದು ಸದ್ದು ಮಾಡುತ್ತಿತ್ತು. ಆ ಸದ್ದು ಎಷ್ಟು ಜೋರಾಗಿರುತ್ತಿತ್ತೆಂದರೆ...

ಹೊಸ ಸೇರ್ಪಡೆ