ಸರ್‌, ಸಲೀಂ ಬಂದ

ಶಾಲೆಯಲ್ಲಿ ನಡೆಯಿತು ನಿಜವಾದ ಸ್ವಾತಂತ್ರ್ಯ ದಿನಾಚರಣೆ

Team Udayavani, Aug 15, 2019, 5:00 AM IST

ಅತಿಥಿಯಾಗಿ ಬಂದಿದ್ದ ಶಾಸಕರು ಧ್ವಜಾರೋಹಣವನ್ನು ನಡೆಸಿಕೊಟ್ಟರು. ನಂತರ ಶಾಲೆಯ ಜನಪ್ರಿಯ ಕಥೆಗಾರ ಸಲೀಂ ಕಥೆ ಹೇಳುವ ಕಾರ್ಯಕ್ರಮ. ಅದಕ್ಕಾಗಿ ಎಲ್ಲರೂ ಕಾದಿದ್ದರು. ಆದರೆ ಸಲೀಂ ನಾಪತ್ತೆಯಾಗಿದ್ದ!

ಅಗಸ್ಟ್‌ 15ರಂದು, ಶಿವಪುರದ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಗಾಗಿ ತಯಾರಿ ಭರದಿಂದ ಸಾಗಿತ್ತು. ಸುರಿಯುತ್ತಿದ್ದ ಮಳೆಯಿಂದ ಜನಜೀವನ ತತ್ತರಿಸಿ ಹೋಗಿತ್ತು. ಜಾನುವಾರುಗಳು ಕಾಣೆಯಾಗಿದ್ದವು. ಹೀಗಾಗಿ “ಮಳೆಯಲ್ಲೂ ಆಚರಣೆ ಬೇಕೆ?’ ಎಂದು ಕೆಲವು ಶಿಕ್ಷಕರು ಗೊಣಗಿಕೊಂಡಿದ್ದರು. ಆದರೆ, ರಾಷ್ಟ್ರಹಬ್ಬವಾಗಿದ್ದರಿಂದ ಆಚರಿಸಲೇಬೇಕಿತ್ತು. ಅಲ್ಲದೆ, ಸ್ಥಳೀಯ ಶಾಸಕರು ಶಾಲೆಗೆ ಬರುವುದಾಗಿ ಒಪ್ಪಿಕೊಂಡಿದ್ದರಿಂದ ಈ ಬಾರಿಯ ಸ್ವಾತಂತ್ರ್ಯೋತ್ಸವವನ್ನು ಅದ್ಧೂರಿಯಿಂದ ಆಚರಿಸುವುದೆಂದು ನಿರ್ಧರಿಸಲಾಯಿತು. ಮುಖ್ಯೋಪಾಧ್ಯಾಯರು, ವಿವಿಧ ತರಗತಿಗಳ ಶಿಕ್ಷಕರ ಜೊತೆ ಸಮಾಲೋಚಿಸಿ ಅಂದಿನ ಕಾರ್ಯಕ್ರಮದ ರೂಪುರೇಷೆಯನ್ನು ಸಿದ್ಧಪಡಿಸಿದರು. ದೇಶಭಕ್ತಿ ಗೀತೆಗಳ ಗಾಯನ, ಭಾವೈಕ್ಯತೆ ಸಾರುವ ನಾಟಕ, ನೃತ್ಯ ಮತ್ತಿತರ ಸಾಂಸ್ಕೃತಿಕ ಚಟುವಟಿಕೆಗಳ ಪಟ್ಟಿ ಸಿದ್ಧಗೊಂಡಿತು. ಕನ್ನಡ ಶಿಕ್ಷಕರೊಬ್ಬರು ಎದ್ದು ನಿಂತು “ಮೂರನೆಯ ತರಗತಿಯಲ್ಲಿ ಸಲೀಂ ಎನ್ನುವ ಹುಡುಗನಿದ್ದಾನೆ. ತುಂಬಾ ಚೂಟಿ. ಪುಸ್ತಕಗಳನ್ನು ಓದುವುದು ಅವನ ನೆಚ್ಚಿನ ಹವ್ಯಾಸ. ಅವನಿಂದ ಒಂದು ದೇಶಭಕ್ತಿ ಕಥೆ ಹೇಳಿಸಬಹುದು. ಅಭಿನಯ ಮಾಡುತ್ತಾ ಕಥೆ ಹೇಳುವುದು ಅವನ ವೈಶಿಷ್ಟ’ ಎಂದರು.

ಮುಖ್ಯೋಪಾಧ್ಯಾಯರಿಗೆ ಈ ಸಲಹೆ ತುಂಬಾ ಹಿಡಿಸಿತು. ಅವರು ಸಲೀಂ ಕಥೆ ಹೇಳಲು ಒಪ್ಪಿಗೆ ಸೂಚಿಸಿದರು. ಅದರಂತೆ ಕನ್ನಡ ಶಿಕ್ಷಕರು ತಮ್ಮ ಶಿಷ್ಯ ಸಲೀಂನನ್ನು ತಯಾರು ಮಾಡಿದರು. ಒಂದೇ ದಿನದಲ್ಲಿ, ಸಲೀಂ ಶಾಲೆಯ ಕಣ್ಮಣಿಯಾಗಿಬಿಟ್ಟ. ಶಾಸಕರ ಎದುರು ಸಲೀಂ ಯಾವ ಕಥೆ ಹೇಳಲಿದ್ದಾನೆ ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿತು.

ಸ್ವಾತಂತ್ರ್ಯ ದಿನ ಬಂದೇಬಿಟ್ಟಿತು. ಶಾಸಕರನ್ನು ಸ್ವಾಗತಿಸಲು ಎಲ್ಲಾ ಏರ್ಪಾಡುಗಳನ್ನು ಮಾಡಲಾಯಿತು. ಕಮಾನು ಕಟ್ಟಿದರು, ವಾದ್ಯ ಘೋಷಗಳೊಂದಿಗೆ ಸ್ವಾಗತಿಸಲು ಬ್ಯಾಂಡ್‌ ತಂಡ ಸಿದ್ಧವಾಯಿತು. ಹೀಗಿರುವಾಗ, ಮುಖ್ಯೋಪಾಧ್ಯಾಯರ ಕಿವಿಗೆ ಆತಂಕ ತರುವ ಸುದ್ದಿಯೊಂದು ಬಿದ್ದಿತು. ಶಾಸಕರ ಮುಂದೆ ಕಥೆ ಹೇಳಿ ಶಾಲೆಯ ಗೌರವ ಹೆಚ್ಚಿಸುತ್ತಾನೆ ಎಂದುಕೊಂಡಿದ್ದ ಸಲೀಂ ನಾಪತ್ತೆಯಾಗಿದ್ದ. ಎಷ್ಟು ಹುಡುಕಿದರೂ ಅವನ ಸುಳಿವು ಪತ್ತೆಯಾಗಲಿಲ್ಲ. ದೇಶಭಕ್ತಿ ಗೀತೆ ಕಾರ್ಯಕ್ರಮ ಮುಗಿಯಿತು. ನಂತರ ಶಾಸಕರೂ ಒಂದೆರಡು ಮಾತುಗಳನ್ನು ಆಡಿ ಮುಗಿಸಿದರು. ನಂತರ ಸಲೀಂ ಕಥೆ ಹೇಳುವ ಕಾರ್ಯಕ್ರಮ ನಡೆಯಬೇಕಿತ್ತು. ಆದರೆ, ಆತ ಬಂದಿಲ್ಲದ ಕಾರಣ ಏನು ಮಾಡುವುದೆಂದು ತೋಚದೆ ಶಿಕ್ಷಕರು, ಮುಖ್ಯೋಪಾಧ್ಯಾಯರು ಚಿಂತಾಕ್ರಾಂತರಾಗಿ ನಿಂತಿದ್ದರು. ಅಷ್ಟರಲ್ಲಿ ಅದೆಲ್ಲಿಂದಲೋ ಸಲೀಂ ಓಡೋಡಿ ಬಂದ. ಅವನು, ಕರುವೊಂದನ್ನು ಹಿಡಿದಿದ್ದ. ಅದನ್ನು ಕೆಳಕ್ಕಿಳಿಸಿ ವೇದಿಕೆ ಏರಿದ. ಅಲ್ಲಿದ್ದ ಶಾಸಕರು, ವಿದ್ಯಾರ್ಥಿಗಳೆಲ್ಲರೂ ಆಶ್ಚರ್ಯದಿಂದ ಅವನನ್ನೇ ನೋಡುತ್ತಿದ್ದರು. ಸಲೀಂ ಧ್ವನಿವರ್ಧಕದ ಮುಂದೆ ನಿಂತ. ಅವನ ಸಮವಸ್ತ್ರ ಕೊಳೆಯಾಗಿತ್ತು. ತಲೆಗೂದಲು ಕೆದರಿತ್ತು. ಅವನು ಮಾತನಾಡಲು ಶುರುಮಾಡಿದ - “ಗುರುಹಿರಿಯರೇ, ಸ್ನೇಹಿತರೇ, ತಡವಾಗಿ ಬಂದುದಕ್ಕೆ ದಯವಿಟ್ಟು ಕ್ಷಮಿಸಬೇಕು. ನಿಮಗೆಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಕಥೆ ಹೇಳಬೇಕೆಂಬ ಉತ್ಸಾಹದಲ್ಲೇ ಇಂದು ಬೆಳಗ್ಗೆ ಮನೆಯಿಂದ ಹೊರಟಿದ್ದೆ. ಆದರೆ ತಯಾರು ಮಾಡಿಟ್ಟುಕೊಂಡಿದ್ದ ಕಥೆಗೆ ಬದಲಾಗಿ ಇನ್ನೊಂದು ಕಥೆಯನ್ನು ಹೇಳುತ್ತೇನೆ. ಇವತ್ತು ಬೆಳಗ್ಗೆ ನಡೆದ ಕಥೆ. ಮಳೆ ಜೋರಾಗಿ ಸುರಿಯುತ್ತಿತ್ತು. ತಂದೆ- ತಾಯಿಗೆ ವಂದಿಸಿ ಮನೆಯಿಂದ ಹೊರಟಿದ್ದ ನನಗೆ, ಪಕ್ಕದ ಮನೆಯ ಅಜ್ಜಿ ಅಳುವುದು ಕೇಳಿಸಿತು. ಏನೆಂದು ವಿಚಾರಿಸಿದಾಗ ಅವರ ಮನೆಯ ಕರು ನಾಪತ್ತೆಯಾಗಿರುವುದಾಗಿ ತಿಳಿಸಿದರು. ಆ ಕರು ನನಗೂ ತುಂಬಾ ಆಪ್ತವಾಗಿತ್ತು. ಸಮಯ ಸಿಕ್ಕಾಗಲೆಲ್ಲಾ ನಾನು ಅದರ ಬಳಿ ತೆರಳಿ ಮುದ್ದಾಡುತ್ತಿದ್ದೆ. ಕರು ನಾಪತ್ತೆಯಾಗಿರುವ ವಿಚಾರ ತಿಳಿದು ನನಗೂ ಬೇಜಾರಾಯಿತು. ಅಜ್ಜಿಯ ಮನೆಯಲ್ಲಿ ಹಿರಿಯರೆಲ್ಲರೂ ಪಕ್ಕದೂರಿಗೆ ಕೆಲಸದ ನಿಮಿತ್ತ ತೆರಳಿದ್ದರು. ಹೀಗಾಗಿ, ಸಹಾಯ ಮಾಡುವವರೇ ಇಲ್ಲವಾಗಿ ಅಜ್ಜಿ ಅಳುತ್ತಿದ್ದಳು. ನಾನು ಆದದ್ದಾಗಲಿ, ಮೊದಲು ಕರುವನ್ನು ಪತ್ತೆ ಮಾಡಿ ನಂತರ ಶಾಲೆಗೆ ಹೋಗೋಣ ಎಂದು ನಿರ್ಧರಿಸಿ ಕರುವನ್ನು ಹುಡುಕುತ್ತಾ ಹೊರಟೆ. ಒಂದು ಕಡೆ ಕೆಸರಿನಲ್ಲಿ ಕರುವಿನ ಹೆಜ್ಜೆ ಗುರುತುಗಳು ಕಾಣಿಸಿದವು. ಅದನ್ನು ಅನುಸರಿಸುತ್ತಾ ಹೋದಾಗ ಕರು ಕಂಡಿತು. ಅದು ಕೆಸರಿನಲ್ಲಿ ಹೂತು ಹೋಗಿ ಹೊರಬರಲಾಗದೆ ಒದ್ದಾಡುತ್ತಿತ್ತು. “ಅಂಬಾ’ ಎನ್ನಲೂ ಶಕ್ತಿಯಿಲ್ಲದೆ ನಿತ್ರಾಣಗೊಂಡಿತ್ತು. ನಾರಿನ ಹಗ್ಗವನ್ನು ಅದಕ್ಕೆ ಬಿಗಿದು ಮೇಲಕ್ಕೆತ್ತುವಷ್ಟರಲ್ಲಿ ಸಾಕೋಸಾಕಾಗಿತ್ತು. ಅದೇ ಸಮಯಕ್ಕೆ ಶಾಲೆಯ ಕಾರ್ಯಕ್ರಮಕ್ಕೆ ಸಮಯವಾಗಿತ್ತು. ಹೀಗಾಗಿ ಕರುವನ್ನು ಎತ್ತಿಕೊಂಡೇ ಶಾಲೆಗೆ ಬರಬೇಕಾಯಿತು.’ ಎಂದು ಹೇಳಿ ಸಲೀಂ ತನ್ನ ಮಾತು ಮುಗಿಸಿದ.

ಕಥೆ ಕೇಳಿ ಎಲ್ಲರೂ ಚಪ್ಪಾಳೆ ತಟ್ಟಿದರು. ಶಾಸಕರು ಎದ್ದು ನಿಂತು- “ಒಂದು ಪ್ರಾಣಿಯನ್ನು ಅಪಾಯದಿಂದ ಪಾರು ಮಾಡಿದ ಸಲೀಂನಿಂದ ನಿಜವಾದ ಸ್ವಾತಂತ್ರ್ಯೋತ್ಸವ ಇಲ್ಲಾಗಿದೆ. ಇಂಥ ವಿದ್ಯಾರ್ಥಿಗಳನ್ನು ಹೊಂದಿರುವ ಶಾಲೆಗೆ ನಾನು ಯಾವುದೇ ನೆರವನ್ನು ನೀಡಲು ಸಿದ್ಧನಿದ್ದೇನೆ.’ ಎಂದು ನುಡಿದರು. ಮುಖ್ಯೋಪಾಧ್ಯಾಯರು, ಶಾಸಕರು, ಶಿಕ್ಷಕರ ವೃಂದ, ವಿದ್ಯಾರ್ಥಿಗಳು ಸಲೀಂನನ್ನು ಸುತ್ತುವರಿದು ಅಭಿನಂದಿಸಿದರು.

– ಮತ್ತೂರು ಸುಬ್ಬಣ್ಣ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಆಡುವಾಗ ಬಿದ್ದು ಪೆಟ್ಟು ಮಾಡಿಕೊಂಡ ಸಂದರ್ಭದಲ್ಲಿ ಆ ಕ್ಷಣಕ್ಕೆ ನಮಗೆಲ್ಲರಿಗೂ ಬೇಕಾಗುವ ವಸ್ತು "ಬ್ಯಾಂಡ್‌ ಏಡ್‌'. ಅದು ರೂಪ ತಳೆದ ಕಥೆ ಇಲ್ಲಿದೆ. ಬ್ಯಾಂಡ್‌...

  • ಅದು ಪರಿಶುದ್ಧವಾದ ಕೊಳ. ಬಣ್ಣ ಬಣ್ಣದ ನೂರಾರು ಮೀನುಗಳು ಅಲ್ಲಿ ಸ್ವಚ್ಛಂದವಾಗಿ ವಿಹರಿಸುತ್ತಾ ಆನಂದದಿಂದಿದ್ದವು. ಇದೇ ಕೊಳದಲ್ಲಿ ಒಂದು ಚಿಕ್ಕ ಮೀನು ತನ್ನ...

  • ನಮಗೆ ನಿದ್ರೆ ಕಾರಣ ಎಡೆನೋಸಿಸ್‌. ಇದು ಹೆಚ್ಚಾದಷ್ಟು ನಿದ್ರೆ ಹೆಚ್ಚು, ಕಡಿಮೆ ಆದಷ್ಟು ನಿದ್ರೆ ಇಳಿಯುತ್ತದೆ. ರಾತ್ರಿ ಹೊತ್ತು ಇದು ದೇಹದಲ್ಲಿ ತುಂಬಿ ತುಳಕುವುದರಿಂದ...

  • ಚೀಟಿ ತೆರೆಯದೆಯೇ ಅದರೊಳಗೇನಿದೆ ಎನ್ನುವುದನ್ನು ಹೇಳುವ ಮ್ಯಾಜಿಕ್‌ ಇದು. ಪ್ರದರ್ಶನ: ಸಭೆಯಲ್ಲಿ ಹತ್ತು ಮಂದಿ ಪ್ರೇಕ್ಷಕರಿಗೆ ಒಂದೊಂದು ಚೀಟಿ ಮತ್ತು ಒಂದೊಂದು...

  • ಆನಂದನಿಗೆ ಮೂಗಿನ ತುದಿಯಲ್ಲೇ ಕೋಪ. ಅಮ್ಮ ಅಡುಗೆ ಮಾಡುವುದು ತಡವಾಯಿತೆಂದು ಅಮ್ಮನ ಜೊತೆ ಠೂ ಬಿಟ್ಟ. ಮುಂದೇನಾಯ್ತು? ಒಂದೂರಿನಲ್ಲಿ ಚಿಕ್ಕ ಮನೆಯಿತ್ತು. ಅಲ್ಲಿ...

ಹೊಸ ಸೇರ್ಪಡೆ