ತಿರುಗುವ ಭುವಿಯೊಳಗೆ ಜರುಗುವ ಖಂಡಗಳು!

Team Udayavani, Sep 12, 2019, 5:39 AM IST

ಪ್ರಪಂಚದಲ್ಲಿ ಎಷ್ಟು ಭೂಖಂಡಗಳಿವೆ ಎಂದು ಕೇಳಿದರೆ ಯಾರು ಬೇಕಾದರೂ “ಏಳು’ ಎಂಬ ಉತ್ತರವನ್ನು ನೀಡುತ್ತಾರೆ. ಭೂಗೋಳ, ನಕಾಶೆ ಪುಸ್ತಕವನ್ನು ನೋಡಿದರೆ ಈ 7 ಖಂಡಗಳು ಭೂಮಿಯ ಒಂದೊಂದು ಕಡೆ ಹರಡಿರುವುದು ತಿಳಿಯುತ್ತದೆ. ಇಂದು ಲಕ್ಷಾಂತರ ಕಿ.ಮೀ ಅಂತರಗಳಲ್ಲಿರುವ ಈ ಭೂಖಂಡಗಳು ಒಂದು ಕಾಲದಲ್ಲಿ ಒಟ್ಟಿಗೆ ಅಂಟಿಕೊಂಡಿದ್ದವು ಎಂದರೆ ನಂಬುವುದು ಕಷ್ಟ!

ಏಳು ಭೂಖಂಡಗಳು ಕೋಟ್ಯಂತರ ವರ್ಷಗಳ ಹಿಂದೆ ಒಂದು ಇಡೀ ಮಹಾಖಂಡವಾಗಿತ್ತು. ಅದನ್ನು “ಪೆಂಗಾಯ’ “ಸೂಪರ್‌ ಕಾಂಟಿನೆಂಟ್‌’ ಎಂಬಿತ್ಯಾದಿ ಹೆಸರುಗಳಿಂದ ಗುರುತಿಸುತ್ತಾರೆ. ಈ ದೈತ್ಯ ಖಂಡ ಕಾಲಾಂತರದಲ್ಲಿ ನಾನಾ ಕಾರಣಗಳಿಂದ ಹರಿದು ತುಂಡುಗಳಾಗಿ ಬೇರ್ಪಟ್ಟು ಬೇರೆ ಬೇರೆ ಖಂಡಗಳಾಗಿ ಮಾರ್ಪಾಡಾಯಿತು.

ಪತ್ತೆ ಹಚ್ಚಿದವರು ಯಾರು?
ಖಂಡಗಳ ಚಲನೆಯನ್ನು ಮೊದಲು ಪತ್ತೆ ಹಚ್ಚಿದ್ದು ಫ್ರಾನ್ಸಿಸ್‌ ಬೇಕನ್‌ ಎಂಬ ವಿಜ್ಞಾನಿ. 1620ರಲ್ಲಿ, ಆತ ಖಂಡಗಳ ಚಲನೆ ಕುರಿತು ವಾದವನ್ನು ಪ್ರತಿಪಾದಿಸಿದ್ದ. ಆದರೆ ತನ್ನ ವಾದವನ್ನು ಸಾಬೀತುಪಡಿಸಲು ಆತ ವಿಫ‌ಲವಾಗಿದ್ದ. ತಂತ್ರಜ್ಞಾನ ಇನ್ನೂ ಮುಂದುವರಿಯದೇ ಇದ್ದಿದ್ದೂ ಒಂದು ಕಾರಣವಾಗಿತ್ತು. ಮುಂದೆ 1912ರಲ್ಲಿ ಅಲ್‌ಫ್ರೆಡ್‌ ವೆಗನರ್‌ ಎಂಬ ಹವಾಮಾನ ಶಾಸ್ತ್ರಜ್ಞ ತನ್ನ “The origin of continents and Oceans’ ಪುಸ್ತಕದಲ್ಲೂ ಇದೇ ಅಂಶವನ್ನು ಸಾಕ್ಷಾಧಾರಗಳೊಂದಿಗೆ ಪ್ರಸ್ತುತ ಪಡಿಸಿದ.

ಖಂಡಗಳ ಚಲನೆ ಗೊತ್ತಾದದ್ದು ಹೇಗೆ?
ನಾಲ್ಕು ಪ್ರಮುಖ ಸಾಕ್ಷಿಗಳೊಂದಿಗೆ ವೆಗರ್ನ ತನ್ನ ವಾದವನ್ನು ಮಂಡಿಸಿದ.
1. ದಕ್ಷಿಣ ಅಮೆರಿಕಾದ ಪೂರ್ವ ಭಾಗ ಮತ್ತು ದಕ್ಷಿಣ ಆಫ್ರಿಕಾದ ಪಶ್ಚಿಮ ಕರಾವಳಿಯ ಭಾಗ ಎರಡನ್ನೂ ಪಕ್ಕ ಪಕ್ಕ ಇಟ್ಟರೆ ಅವು ಪಝಲ್‌ ತುಂಡುಗಳಂತೆ ಒಂದರ ಪಕ್ಕ ಇನ್ನೊಂದು ಸರಿಯಾಗಿ ಹೊಂದಿಕೊಳ್ಳುತ್ತವೆ.

2. ದಕ್ಷಿಣ ಅಮೇರಿಕದ ಪೂರ್ವ ಕರಾವಳಿ ಮತ್ತು ಮತ್ತು ದಕ್ಷಿಣ ಆಫ್ರಿಕಾದ ಪಶ್ಚಿಮ ಕರಾವಳಿಯಲ್ಲಿ ಹಂಚಿಕೆಯಾಗಿರುವಂಥ ಪಳೆಯುಳಿಕೆಗಳಲ್ಲಿ ಸಾಮ್ಯತೆ ಕಂಡುಬಂದಿರುವುದು.

3. ಉತ್ತರ ಅಮೆರಿಕಾದ ಪೂರ್ವ ಕರಾವಳಿ ಮತ್ತು ಯುರೋಪಿನ ಪಶ್ಚಿಮ ಕರಾವಳಿಯಲ್ಲಿ ಕಲ್ಲು ಮತ್ತು ಭೂಗರ್ಭ ರಚನೆಯಲ್ಲಿ ಸಾಮ್ಯತೆ ಇದೆ. ಅಲ್ಲಿ ಕಂಡುಬರುವ ಅಂಶಗಳು ಒಂದೇ ಆಗಿದ್ದು ಹಿಂದೊಂದು ಕಾಲದಲ್ಲಿ ಈ ಎರಡು ಪ್ರದೇಶಗಳು ಗಡಿ ಇಲ್ಲದೇ ಒಂದೇ ಆಗಿದ್ದವು ಎಂಬುದನ್ನು ಸ್ಪಷ್ಟಪಡಿಸುತ್ತದೆ.

4. ಪ್ರಪಂಚದಾದ್ಯಂತ ಕಂಡುಬರುವ ಹಿಮನದಿಗಳೂ, ಅಂಚುಗಳಲ್ಲಿ ಕಂಡುಬರುವ ಉಷ್ಣವಲಯದ ಕಾಡುಗಳು ಕೂಡ ಅವನ ವಾದವನ್ನು ಪುಷ್ಟೀಕರಿಸಿದ್ದವು.

ಚಲನೆಗೆ ಕಾರಣವೇನು?
ಈ ಚಲನೆ ಏಕಾಏಕಿ ಒಂದೇ ದಿನದಲ್ಲಿ ಒಮ್ಮೆಲೇ ಆದದ್ದಲ್ಲ. ಕೋಟ್ಯಂತರ ವರ್ಷಗಳೇ ಅದಕ್ಕೆ ಹಿಡಿದಿದೆ. ವಿಜ್ಞಾನಿ ವೆಗನರ್‌ ತನ್ನ ಪುಸ್ತಕದಲ್ಲಿ ಖಂಡಗಳ ಚಲನೆಗೆ ಕಾರಣ ಏನೆಂದು ಖಚಿತವಾಗಿ ತಿಳಿಸಲಿಲ್ಲ. ಭೂಮಿ ತನ್ನ ಕಕ್ಷೆಯಲ್ಲಿ ತಿರುಗುವುದೇ ಖಂಡಗಳ ಚಲನೆಗೆ ಕಾರಣವಾಗಿರಬಹುದು ಎಂಬುದು ಆತನ ಊಹೆಯಾಗಿತ್ತು. ಆದರೆ ಆ ಊಹೆ ತಪ್ಪಾಗಿತ್ತು. ಈ ಕುರಿತು ಈಗಿನ ವಿಜ್ಞಾನ ಬೇರೆಯದೇ ವಾದವನ್ನು ಮುಂದಿಡುತ್ತದೆ- ಖಂಡಗಳು ದೈತ್ಯ ಟೆಕ್ಟಾನಿಕ್‌ ಪ್ಲೇಟುಗಳೆಂಬ ದೈತ್ಯ ಕಲ್ಲು ಚಪ್ಪಡಿಗಳ ಮೇಲೆ ನೆಲೆಗೊಂಡಿದೆ. ಈ ಚಪ್ಪಡಿಗಳು ಭೂಮಿಯ ಆಂತರಿಕ ಭಾಗವಾಗಿರುವ ಲಾವಾದ ಮೇಲೆ ತೇಲುತ್ತಿದೆ. ಅಂದ ಹಾಗೆ ಖಂಡಗಳು ಈಗಲೂ ಚಲಿಸುತ್ತಿವೆ. ವರ್ಷಕ್ಕೆ 1ರಿಂದ, 2 ಇಂಚುಗಳಷ್ಟು ವೇಗದಲ್ಲಿ ಚಲಿಸುತ್ತಿವೆ.

ತೇಲಿ ಬಂದ ಭಾರತ ಭೂಖಂಡ
ಯುರೇಶಿಯಾವನ್ನು(ಯುರೋಪ್‌ ಮತ್ತು ಏಷ್ಯಾ) ಒಳಗೊಂಡಿತ್ತು. ಆ ಸಮಯದಲ್ಲಿ ಭಾರತ ಏಷ್ಯಾದ ಭಾಗವಾಗಿರಲಿಲ್ಲ. ಇನ್ನೂ ದೈತ್ಯ ಖಂಡದ ಜೊತೆಯೇ ಇತ್ತು. ಆದರೆ ಕಾಲಾಂತರದಲ್ಲಿ ಭಾರತ ಸೂಪರ್‌ ಕಾಂಟಿನೆಂಟ್‌ನಿಂದ ಬೇರ್ಪಟ್ಟು ಯುರೇಶಿಯಾ ಕಡೆಗೆ ಪ್ರಯಾಣ ಬೆಳೆಸಿತು. ಭಾರತ ಭೂಖಂಡ ಏಷ್ಯಾದ ದಕ್ಷಿಣ ಭಾಗಕ್ಕೆ ಬಂದು ಒತ್ತಿತು. ಈ ಒತ್ತುವಿಕೆ ಎಷ್ಟು ಶಕ್ತಿಶಾಲಿಯಾಗಿತ್ತೆಂದರೆ ಭಾರತದ ಉತ್ತರ ಭಾಗದಲ್ಲಿ ಒಂದು ದೊಡ್ಡ ಪರ್ವತವೇ ಮೇಲೆದ್ದಿತು. ಅದುವೇ ಹಿಮಾಲಯ. ಭೂಖಂಡದ ಒತ್ತುವಿಕೆ ಈಗಲೂ ಮುಂದುವರಿದಿದೆ. ಇದರ ಪರಿಣಾಮ ಹಿಮಾಲಯ ವರ್ಷ ವರ್ಷವೂ 6.1 ಸೆಂ.ಮೀ.ನಷ್ಟು ಬೆಳೆಯುತ್ತಿದೆ.

– ವಿಧಾತ ದತ್ತಾತ್ರಿ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.ಈ ವಿಭಾಗದಿಂದ ಇನ್ನಷ್ಟು

  • ಬಾಹ್ಯಾಕಾಶದ ಕತ್ತಲಿನಲ್ಲಿ ಕ್ಯಾಮೆರಾ ಫ್ಲ್ಯಾಶ್‌ ಒಂದು ತೂರಿ ಬಂದಿತ್ತು. ಅಂತರಿಕ್ಷದ ಯಾವುದೇ ವಿದ್ಯಮಾನವನ್ನೂ ಕಡೆಗಣಿಸದ ವಿಜ್ಞಾನಿಗಳು ಅದರ ಹಿಂದೆ ಬಿದ್ದರು....

  • ಮ್ಯಾಜಿಕ್‌ನಲ್ಲಿ ವಸ್ತುಗಳನ್ನು ತೋರಿಸಿ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿ, ಆ ಮೂಲಕ ಅವರನ್ನು ಹಿಡಿದಿಟ್ಟುಕೊಳ್ಳುವುದು ಒಂದು ಬಗೆ. ಆದರೆ, ಇದನ್ನೇ ಪದೇ ಪದೇ...

  • ಪ್ರಮುಖ ವ್ಯಕ್ತಿಗಳ ಪರಿಚಯವನ್ನು ಕೇವಲ ಹತ್ತೇ ಹತ್ತು ಪಾಯಿಂಟ್‌ಗಳಲ್ಲಿ ಕಟ್ಟಿ ಕೊಡುವ ಪ್ರಯತ್ನವಿದು... 1. ಮಾಯಾಪೆಟ್ಟಿಗೆ ಟಿ.ವಿ. (ದೂರದರ್ಶನ)ಯನ್ನು ಕಂಡು...

  • ಒಂದಾನೊಂದು ಕಾಡಿನಲ್ಲಿ ಒಂದು ತೋಳ ವಾಸವಾಗಿತ್ತು. ಅದು ರಾತ್ರೋರಾತ್ರಿ ಕಾಡಿನ ಸಮೀಪವಿದ್ದ ಹಳ್ಳಿಗೆ ನುಗ್ಗಿ ಮೇಕೆ ಕುರಿಗಳನ್ನು ಹೊತ್ತುಕೊಂಡು ಬಂದು ತಿನ್ನುತ್ತಿತ್ತು....

  • ಅಮೆರಿಕ, ಚಂದ್ರನ ಮೇಲೆ ತನ್ನ ಗಗನಯಾನಿಗಳನ್ನು 1969ರಲ್ಲಿ ಇಳಿಸಿ ಐತಿಹಾಸಿಕ ಸಾಧನೆ ಮಾಡಿತು. ಅದಕ್ಕಾಗಿ ಅಮೆರಿಕ ದಶಕಗಳಿಂದ ಪೂರ್ವ ತಯಾರಿ ನಡೆಸಿತ್ತು. ಚಂದ್ರಯಾನವನ್ನು...

ಹೊಸ ಸೇರ್ಪಡೆ