ಕಲಹ ರಹಿತ ಬದುಕಿಗೊಂದು ಸುಂದರ ದಾರಿ!

Team Udayavani, Apr 6, 2019, 6:00 AM IST

ನನಗೆ ಯಾರ ಸಹವಾಸವೂ , ಸಹಯಾವೂ ಬೇಕಿಲ್ಲ ಎಂದು ಘೋಷಿಸಿ, ಏಕಾಂಗಿಯಾಗಿ ಹೊರಟುಬಿಡಲು ಸಾಧ್ಯವಿಲ್ಲ. ಆದರೆ ಕಲಹವಾಗುವ ಜಾಗವನ್ನು ಬಿಟ್ಟು ದೂರ ಹೋಗಬಹುದು. ಯಾವುದು ಕಲಹಕ್ಕೆ ಕಾರಣವಾಗುವುದೋ ಅಂತಹ ಸಂಗತಿಗಳನ್ನು ಅಲ್ಲಿಗೇ ಬಿಟ್ಟು ಬಿಡಬೇಕು.

ನಾನು ಇಂದಿನಿಂದ ಯಾರ ಜೊತೆಗೂ ಕಲಹ ಮಾಡುವುದಿಲ್ಲ ಅಂತ ಪ್ರತಿಜ್ಞೆ ಮಾಡಿಬಿಡುವುದು ತುಂಬಾ ಸುಲಭ. ಆದರೆ ಅದನ್ನು ಪಾಲಿಸುವುದು ಎಂದಿಗೂ ಸುಲಭವಲ್ಲ. ಮೌನದಿಂದಿರುತ್ತೇನೆ, ಆಗ ಕಲಹಕ್ಕೆ ಅವಕಾಶವೇ ಇರುವುದಿಲ್ಲ ಎಂಬ ನಿರ್ಧಾರಕ್ಕೆ ಬಂದರೂ ಜನರ ಮಧ್ಯೆ ಮೌನವೂ ಕಲಹಕ್ಕೆ ಕಾರಣವಾಗುತ್ತದೆ. ಸಹಬಾಳ್ವೆ ಎಂಬುದು ದೇವರಿಂದಲೇ ನಿರ್ಮಿತವಾದುದು. ಪ್ರಕೃತಿಯ ನಿಯಮವೇ ಕ್ರಿಯೆ-ಪ್ರತಿಕ್ರಿಯೆಗಳನ್ನು ಪ್ರತಿಬಿಂಬಿಸುತ್ತಿರುವಾಗ ನಾವು ಮಾತನಾಡದೇ ಇದ್ದರೂ ಕೇಳಿದ್ದಕ್ಕಾದರೂ ಉತ್ತರ ಕೊಡಲೇ ಬೇಕಾಗುತ್ತದೆ. ನಾವು ಬಯಸುವುದು ಶಾಂತಿಯುತವಾದ ಬದುಕು. ಕಲಹ, ದ್ವೇಷಗಳು ಬೇಕಿಲ್ಲ. ಇವುಗಳಿಂದ ಸಾಧಿಸುವಂಥದ್ದೂ ಏನಿಲ್ಲ. ಆದರೂ ಕೂಡ ಜಗತ್ತಿನ ಅಶಾಂತಿಗೆ ಮೂಲವೇ ಈ ಕಲಹ. ಕಲಹಕ್ಕೆ ಮೂಲ ಕಾರಣ ಹೆಣ್ಣು, ಹೊನ್ನು ಮತ್ತು ಮಣ್ಣು ಎಂಬ ಮಾತಿದೆ. ಇದು ಹೊರಗಿನಿಂದಷ್ಟೇ ಸತ್ಯ. ಯಾಕೆಂದರೆ, ಕಲಹದಿಂದಲೇ ಹೆಣ್ಣನ್ನೊ ಮಣ್ಣನ್ನೋ, ಹೊನ್ನನ್ನೋ ಪಡೆದವನಿಗೂ ಕೊನೆಯಲ್ಲಿ ಇಷ್ಟಕ್ಕಾಗಿಯೇ ನಾನು ಕಲಹದಲ್ಲಿ ಕಾಲಹರಣ ಮಾಡಿದೆನಾ? ಅನ್ನಿಸುತ್ತದೆ. ಕೊನೆಗೂ ಅವನಿಗೆ ತೃಪ್ತಿಯಿಲ್ಲ. ನಿಜಕ್ಕೂ ತೃಪ್ತಿ ಯಾವುದು? ಅದೂ ಗೊತ್ತಿಲ್ಲ! ಎಲ್ಲವೂ ಕ್ಷಣಿಕವಾಗಿರುವಾಗ ಕಲಹ ಮಾತ್ರ ಶಾಶ್ವತವಾದ ಶಾಂತಿಯನ್ನು ಕೆಡಿಸಿಬಿಡುತ್ತದೆ. ಇದರಿಂದ ಹೊರಬರುವುದು ಹೇಗೆ?

ಶ್ರೀಮದ್ಭಾಗವತದ ಅವಧೂತೋಪಾಖ್ಯಾನದಲ್ಲಿ ಕಲಹವಿಲ್ಲದೆ ಬದುಕುವ ಬಗೆಯನ್ನು ಹೇಳಲಾಗಿದೆ. ಅವಧೂತರು ಇಲ್ಲೊಂದು ಕುಮಾರಿಯ ಕಥೆಯನ್ನು ಹೇಳುತ್ತಾರೆ. ಕುಮಾರಿಯೊಬ್ಬಳೇ ಮನೆಯಲ್ಲಿರುವಾಗ ಅತಿಥಿಗಳು ಬರುತ್ತಾರೆ. ಅತಿಥಿಗಳನ್ನು ಸ್ವಾಗತಿಸಿದ ಬಳಿಕ ಆಕೆ ಅವರ ಭೋಜನಕ್ಕಾಗಿ ಏಕಾಂತದಲ್ಲಿ ಭತ್ತವನ್ನು ಕುಟ್ಟುತ್ತಿದ್ದಳು. ಆಗ ಅವಳ ಕೈಬಳೆಗಳು ಸದ್ದು ಮಾಡತೊಡಗಿದವು. ಈ ಶಬ್ದವನ್ನು ನಿಂದಿತವೆಂದು ಭಾವಿಸಿದ ಹುಡುಗಿ, ಎಲ್ಲಾ ಬಳೆಗಳನ್ನು ತೆಗೆದಿಟ್ಟು, ಎರಡು ಬಳೆಗಳನ್ನು ಮಾತ್ರ ಉಳಿಸಿಕೊಂಡು ಭತ್ತ ಕುಟ್ಟಲು ಆರಂಭಿಸಿದಳು. ಆ ಎರಡು ಬಳೆಗಳೂ ಶಬ್ದಮಾಡಲು ತೊಡಗಿದಾಗ ಮತ್ತೆ ಒಂದನ್ನು ತೆಗದಿಟ್ಟು ತನ್ನ ಕೆಲಸ ಮುಂದುವರಿಸುತ್ತಾಳೆ. ಆಗ ಯಾವ ಸದ್ದೂ ಉಂಟಾಗಲಿಲ್ಲ. ಇಲ್ಲೊಂದು ಪಾಠವಿದೆ. ಅನೇಕ ಜನರು ಒಂದೆಡೆ ಇದ್ದರೆ ಕಲಹ ಉಂಟಾಗುತ್ತದೆ. ಇಬ್ಬರು ಜೊತೆಯಲ್ಲಿದ್ದರೂ ವ್ಯರ್ಥವಾದ ಮಾತುಗಳು ನಡೆಯುತ್ತವೆ. ಅದಕ್ಕಾಗಿ ಆ ಹೆಣ್ಣುಮಗಳ ಒಂದೇ ಒಂದು ಬಳೆಯಂತೆ ಒಬ್ಬನೇ ಇದ್ದು ಬಿಡಬೇಕು ಎಂಬ ಪಾಠ ಈ ಕತೆಯಲ್ಲಿದೆ. ಇದನ್ನು ನಾನು ಕಲಿತೆ, ಇದು ಕಲಹ ನಿವಾರಣೆಗೆ ಸುಲಭ ಮಾರ್ಗ ಎನ್ನುತ್ತಾರೆ. ಎಷ್ಟು ಚಂದದ ಪಾಠ ನೋಡಿ. ಇದನ್ನೇ ನಮ್ಮ ಇವತ್ತಿನ ಬದುಕಿಗೆ ಅಳವಡಿಸಿ ನೋಡುವ.

ಸಂಸಾರಿ, ನಾಲ್ಕು ಜನರ ನಡುವೆಯೇ ಬದುಕ ಬೇಕಾದ ಅನಿವಾರ್ಯ ಇರುವುದರಿಂದ ನನಗೆ ಯಾರ ಸಹವಾಸವೂ , ಸಹಯಾವೂ ಬೇಕಿಲ್ಲ ಎಂದು ಘೋಷಿಸಿ, ಏಕಾಂಗಿಯಾಗಿ ಹೊರಟುಬಿಡಲು ಸಾಧ್ಯವಿಲ್ಲ. ಆದರೆ ಕಲಹವಾಗುವ ಜಾಗವನ್ನು ಬಿಟ್ಟು ದೂರ ಹೋಗಬಹುದು. ಯಾವುದು ಕಲಹಕ್ಕೆ ಕಾರಣವಾಗುವುದೋ ಅಂತಹ ಸಂಗತಿಗಳನ್ನು ಅಲ್ಲಿಗೇ ಬಿಟ್ಟು ಬಿಡಬೇಕು. ಇನ್ನೊಂದು ಒಳಾರ್ಥ ಇಲ್ಲಿದೆ. ಯಾವುದು ಸುಖಾಸುಮ್ಮನೆ ಶಬ್ದ ಅಂದರೆ ಕಲಹಕ್ಕೆ ಕಾರಣವಾಗುವುದೋ ಅವನ್ನು ಗಮನಿಸಬೇಕು. ಈ ಕಥೆಯಲ್ಲಿ ಆ ಕುಮಾರಿ ಮಾಡಿದಂತೆ. ಅಲ್ಲಿ ಭತ್ತ ಕುಟ್ಟುವ ಸದ್ದೂ ಇತ್ತು; ಬಳೆಗಳ ಶಬ್ದವೂ ಇತ್ತು. ಆದರೆ ಬಳೆಗಳು ಸದ್ದು ಅಗತ್ಯವಿಲ್ಲದ್ದು. ಅದನ್ನು ಆ ಕುಮಾರಿ ಹೇಗೆ ನಿವಾರಿಸಬೇಕೆಂಬುದನ್ನು ಅರಿತುಕೊಂಡಳು. ಅಂತೆಯೇ ಕೇವಲ ಮಾತು-ನಡೆಗಳು ಜಗಳಕ್ಕೆ ಕಾರಣವಾಗುವುದಿಲ್ಲ, ಯಾವುದು ಕಲಹಕ್ಕೆ ಕಾರಣವಾಗುವುದೋ ಅದು ಕೇವಲ ಮಾತಾಗಿ ಉಳಿದಿರುವುದಿಲ್ಲ. ಎಷ್ಟು ಅಗತ್ಯವೋ ಅಷ್ಟನ್ನೇ ಪ್ರೀತಿಯಿಂದ ಮನಕ್ಕೊಪ್ಪುವಂತೆ ಹೇಳುವ ಜಾಣ್ಮೆಯನ್ನು ಮತ್ತು ಬದುಕಿಗೆ ಎಷ್ಟು ಅಗತ್ಯವೋ ಅಷ್ಟನ್ನೇ ಹೊಂದಿಸಿಕೊಳ್ಳುವ ಬುದ್ಧಿವಂತಿಕೆಯನ್ನು ಬೆಳೆಸಿಕೊಳ್ಳಲು ಈ ಪಾಠ ಮಾದರಿ. ಹೇಳುವ ಕಲೆಯೊಂದೇ ಅಲ್ಲ, ಕೇಳುವ ಕಲೆಯನ್ನೂ ಅರಿತಿರಬೇಕು; ಬದುಕು ಬಂಗಾರವಾಗಲು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ರಾಮ ಸದ್ಗುಣಗಳ ಆಗರ. ಅವನಂಥ ಮಗ ಹುಟ್ಟಬೇಕು ಎನ್ನುವುದು ಈಗಿನವರ ಕನಸು. ರಾಮನಂಥ ಒಬ್ಬ ಮಗು ಒಂದು ಊರಲ್ಲಿದ್ದರೆ ವಿಶ್ವದ ಅಸಂಖ್ಯ ಸಂಖ್ಯೆಯ ವೃದ್ಧಾಶ್ರಮಗಳಲ್ಲಿ...

  • ಹುಬ್ಬಳ್ಳಿಯ ಸಿದ್ಧಾರೂಢ ಮಠದಲ್ಲಿ ತಂಬೂರಿಯನ್ನು ತೊಂಬತ್ತು ವರುಷಗಳಿಂದ, ನಿರಂತರವಾಗಿ- ಸುಶ್ರಾವ್ಯವಾಗಿ ನುಡಿಸುತ್ತಲೇ ಇದ್ದಾರೆ. ಒಂದು ದಿನವೂ ಆ ತಂಬೂರಿಯನ್ನು...

  • ತುಂಗಾರತಿ ನೆರವೇರುವ ಈ ದೃಶ್ಯ ಕಣ್ಣಿಗೊಂದು ಹಬ್ಬ. ಇನ್ನೇನು ಕರ್ಪೂರಕ್ಕೆ ದೀಪ ಸ್ಪರ್ಶಿಸಿ, ಆರತಿ ಬೆಳಗಿತು ಎನ್ನುವ ಹೊತ್ತಿಗೆ ತುಂಗೆಯಲ್ಲಿರುವ ಮೀನುಗಳು,...

  • "ಕೋಟೆನಾಡಿನ ಊಟಿ' ಖ್ಯಾತಿಯ ಜೋಗಿಮಟ್ಟಿ ಗಿರಿಧಾಮದ ಸೌಂದರ್ಯ ಮಲೆನಾಡನ್ನು ಹೋಲುವಂಥದ್ದು. ಬೆಂಕಿಯಂಥ ಚಳಿ, ಹಿಮ್ಮೆಟ್ಟುವ ಬಿರುಗಾಳಿ, ಪ್ರೇಮ ಕಾಶ್ಮೀರವನ್ನು...

  • ಉಡವು ಸರಿಸೃಪ ಜಾತಿಗೆ ಸೇರಿದೆ. ಇದು ಸಕಲ ವಿದ್ಯೆಗಳನ್ನು ಬಲ್ಲ ಸಸ್ತನಿ. ನೀರಿನಲ್ಲಿ ಸರಾಗವಾಗಿ ಈಜಬಲ್ಲುದು. ತನ್ನ ಕಾಲಿನ ಮೇಲೆ ನಿಂತುಕೊಂಡು ಸುತ್ತಲ ಪರಿಸರ...

ಹೊಸ ಸೇರ್ಪಡೆ