ಅಶ್ವಿ‌ನ್‌ ಮಾಡಿದ್ದು ಔಟಲ್ಲ, ವಂಚನೆ!

ಐಪಿಎಲ್‌ನಲ್ಲಿ ನಡೆದ ಮಂಕಡ್‌ ಔಟ್‌ನ ವಿವೇಚನೆ

Team Udayavani, Apr 6, 2019, 6:00 AM IST

ಕ್ರಿಕೆಟ್‌ ಮೈದಾನದ ಉದ್ದಗಲಕ್ಕೂ ಸ್ವಲ್ಪ ಇಣುಕಿ ನೋಡಿದರೆ, ಹಲವು ಜಗತ್ತುಗಳು ತೆರೆದುಕೊಳ್ಳುತ್ತವೆ. ಒಂದು ಕಡೆ ಸ್ಫೋಟಕ ಬ್ಯಾಟಿಂಗ್‌, ಮತ್ತೂಂದು ಕಡೆ ಬ್ಯಾಟ್ಸ್‌ಮನ್ನನ್ನು ಕೆಡವಿಕೊಳ್ಳುವ ಕಿಲಾಡಿ ಬೌಲಿಂಗ್‌, ಇನ್ನೊಂದು ಕಡೆ ದಾಖಲೆಗಳ ರಾಶಿ, ಮತ್ತೂಂದು ಕಡೆ ತಪ್ಪು ತೀರ್ಪು ನೀಡಿ ಎಡವಟ್ಟು ಮಾಡಿಕೊಂಡು, ಮುಖವನ್ನು ಹಿಂಡಿಕೊಳ್ಳುವ ಅಂಪೈರ್‌ಗಳು….

ಇಂತಹ ಎಲ್ಲದರ ನಡುವೆ ಆಟಗಾರರನ್ನು, ವಿಶ್ಲೇಷಕರನ್ನು, ಅಭಿಮಾನಿಗಳನ್ನು ಅತಿ ಹೆಚ್ಚು ಕಾಡುವುದು, ವಾಗ್ವಾದಕ್ಕೆ ಕಾರಣವಾಗುವುದು ವಿಚಿತ್ರ ರೀತಿಯಲ್ಲಿ ಬ್ಯಾಟ್ಸ್‌ಮನ್‌ಗಳು ಔಟಾಗುವ ರೀತಿ. ಕೆಲವೊಮ್ಮೆ ನಿಯಮಗಳ ಪ್ರಕಾರ, ಬ್ಯಾಟ್ಸ್‌ಮನ್‌ ಔಟಾಗಿದ್ದು ಸರಿ ಎಂದೇ ಹೇಳಬೇಕಾಗುತ್ತದೆ. ಆದರೆ ಅಲ್ಲೇನೋ ಮನಸ್ಸು ಹಿಡಿಯುತ್ತಿರುತ್ತದೆ, ಸರಿ ತಪ್ಪುಗಳ ಲೆಕ್ಕಾಚಾರವನ್ನು ಹೇಗೆಯೇ ಮಾಡಿದರೂ, ಇತ್ಯರ್ಥಕ್ಕೆ ಬರಲು ಸಾಧ್ಯವಾಗುವುದಿಲ್ಲ. ನಿಯಮಗಳು ನಡೆದಿದ್ದು ಸರಿ ಎಂದು ಹೇಳಿದರೂ, ಮನಸ್ಸು ನಡೆದ ಕ್ರಿಯೆ ತಪ್ಪು ಎಂದು ಹೇಳುತ್ತವೆ. ಇಂತಹ ಹೊತ್ತಿನಲ್ಲಿ ಕ್ರೀಡಾಸ್ಫೂರ್ತಿ ಎಂಬ ಪದ ಮೇಲೆದ್ದು ನಿಲ್ಲುತ್ತದೆ. ಇಲ್ಲೂ ಚರ್ಚೆ ಮುಗಿಯುವುದಿಲ್ಲ. ಔಟ್‌ ಮಾಡಿದ ಬೌಲರ್‌, ತಾನು ನಿಯಮವನ್ನು ಪಾಲಿಸಿರುವುದರಿಂದ ತನ್ನ ಸ್ಫೂರ್ತಿಯಲ್ಲಿ ತಪ್ಪಿಲ್ಲ ಎಂದು ವಾದಿಸುತ್ತಾನೆ, ಮತ್ತೂಂದು ಕಡೆ ನಿಯಮಕ್ಕಿಂತ ಅಂತಃಸಾಕ್ಷಿ ಮುಖ್ಯ. ನೀನು ಬ್ಯಾಟ್ಸ್‌ಮನ್‌ ಅನ್ನು ವಂಚಿಸಿ ಔಟ್‌ ಮಾಡಿದ್ದೀಯ ಎಂದು ಹೇಳಲಾಗುತ್ತದೆ.

ಅಶ್ವಿ‌ನ್‌ ಮಾಡಿದ್ದು ಸರೀನಾ?
ಮಾ.25ರಂದು ಜೈಪುರದಲ್ಲಿ ನಡೆದ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಕ್ರಿಕೆಟ್‌ ಪಂದ್ಯ ಇಂತಹ ಮುಗಿಯದ ಚರ್ಚೆಗೆ ಮತ್ತೆ ಜೀವ ನೀಡಿದೆ. ರಾಜಸ್ಥಾನ್‌ ರಾಯಲ್ಸ್‌ ಮತ್ತು ಕಿಂಗ್ಸ್‌ ಪಂಜಾಬ್‌ ನಡುವೆ ನಡೆದ ಪಂದ್ಯದಲ್ಲಿ ಪಂಜಾಬ್‌ 14 ರನ್‌ಗಳ ಗೆಲುವು ಸಾಧಿಸಿತು. ಈ ಗೆಲುವಿನಲ್ಲಿ ಮುಖ್ಯ ಪಾತ್ರವಹಿಸಿದ್ದು ಜೋಸ್‌ ಬಟ್ಲರ್‌ ಅವರ ಔಟ್‌. 69 ರನ್‌ ಬಾರಿಸಿ ರಾಜಸ್ಥಾನನ್ನು ಸುಲಭ ಗೆಲುವಿನತ್ತ ಒಯ್ಯುತ್ತಿದ್ದ ಬಟ್ಲರ್‌ರನ್ನು, ಪಂಜಾಬ್‌ ನಾಯಕ ಆರ್‌.ಅಶ್ವಿ‌ನ್‌ ಮಂಕಡ್‌ ಶೈಲಿಯಲ್ಲಿ ಔಟ್‌ ಮಾಡಿದರು. ಅದು ನಡೆದಿದ್ದು 13ನೇ ಓವರ್‌ನ 5ನೇ ಎಸೆತದಲ್ಲಿ. ಬೌಲಿಂಗ್‌ ಕ್ರೀಸ್‌ನೊಳಗೆ ಬಂದ ಅಶ್ವಿ‌ನ್‌, ಚೆಂಡನ್ನು ಎಸೆಯುವ ಬದಲು ನಿಲ್ಲಿಸಿದರು. ಆಗ ಬೌಲಿಂಗ್‌ ತುದಿಯಲ್ಲಿದ್ದ ಬಟ್ಲರ್‌, ಇದರ ಅರಿವಿಲ್ಲದೇ ಕ್ರೀಸ್‌ ಬಿಟ್ಟರು. ಅಶ್ವಿ‌ನ್‌ ಬೈಲ್ಸ್‌ ಎಗರಿಸಿದರು. ನಿಯಮಗಳ ಅನ್ವಯ ಅಂಪೈರ್‌ ಔಟ್‌ ತೀರ್ಪು ನೀಡಿದರು.

ಐಸಿಸಿ ನಿಯಮ 42.16ರ ಪ್ರಕಾರ ಬೌಲರ್‌ ಚೆಂಡನ್ನು ಕೈಬಿಡುವ ಮುನ್ನ, ಬೌಲಿಂಗ್‌ ತುದಿಯಲ್ಲಿರುವ ಬ್ಯಾಟ್ಸ್‌ಮನ್‌ ಕ್ರೀಸ್‌ ಬಿಡುವಂತಿಲ್ಲ. ಹಾಗೆ ಮಾಡಿದರೆ ಬೌಲರ್‌ ಬೈಲ್ಸ್‌ ಎಗರಿಸಿ ಔಟ್‌ ಮಾಡಬಹುದು. ಇದನ್ನೇ ಅಶ್ವಿ‌ನ್‌ ಮಾಡಿದ್ದು. ಲೆಕ್ಕಾಚಾರದ ಪ್ರಕಾರ ಇಲ್ಲಿ ಎಲ್ಲವೂ ಸರಿಯಿದೆ. ಇದನ್ನೇ ಇನ್ನೊಂದು ದಿಕ್ಕಿನಿಂದ ವಿವೇಚಿಸಿದರೆ, ಅಶ್ವಿ‌ನ್‌ ಮಾಡಿದ್ದು ಖಚಿತವಾಗಿ ತಪ್ಪಿದೆ. ಇದಕ್ಕೆ ಕಾರಣ ಬ್ಯಾಟ್ಸ್‌ಮನ್‌ರನ್ನು ಅಶ್ವಿ‌ನ್‌ ವಂಚಿಸಿದ್ದಾರೆ ಎನ್ನುವುದು. ಬೌಲಿಂಗ್‌ ಕ್ರೀಸ್‌ನೊಳಗೆ ಬಂದ ಅಶ್ವಿ‌ನ್‌, ಬೌಲಿಂಗ್‌ ಮಾಡುವ ಬದಲು ಬಟ್ಲರ್‌, ಕ್ರೀಸ್‌ನಿಂದ ಹೊರ ಹೋಗುವುದನ್ನು ಕಾದರು. ಅಶ್ವಿ‌ನ್‌ ಚೆಂಡೆಸೆದಿದ್ದಾರೆ, ಆದ್ದರಿಂದ ತಾನಿನ್ನು ಮುಂದುವರಿಯುವುದರಲ್ಲಿ ತಪ್ಪಿಲ್ಲ ಎಂಬ ಸುಪ್ತ ಪ್ರಜ್ಞೆಯಿಂದ ಬಟ್ಲರ್‌ ಕ್ರೀಸ್‌ ಬಿಟ್ಟರು. ಒಂದು ವೇಳೆ ಅಶ್ವಿ‌ನ್‌ ಕಾಯದೇ ಚೆಂಡೆಸೆದಿದ್ದರೆ, ಚೆಂಡೆಸೆದ ಮೇಲೆಯೇ ಬಟ್ಲರ್‌ ಕ್ರೀಸ್‌ ಬಿಟ್ಟಿರುತ್ತಿದ್ದರು. ಈ ಔಟ್‌ನ ವಿಡಿಯೊ ನೋಡಿದರೆ, ಅದು ಖಚಿತವಾಗುತ್ತದೆ.

ಈ ಎಲ್ಲ ವಿವರಣೆ ಮೂಲಕ ಹೇಳುತ್ತಿರುವುದೇನೆಂದರೆ, ಅಶ್ವಿ‌ನ್‌ ಅವರ ಕೆಲಸವನ್ನು ಸರಿಯಾಗಿ ಮಾಡಿದ್ದರೆ, ಬಟ್ಲರ್‌ ಕೆಲಸವೂ ಸರಿಯಾಗಿಯೇ ಇರುತ್ತಿತ್ತು. ಆದರೆ ಅಶ್ವಿ‌ನ್‌ ತಮ್ಮ ಕೆಲಸ ಮಾಡದೇ ವಂಚಿಸಿ ಔಟ್‌ ಮಾಡಿದ್ದಾರೆ ಎನ್ನುವುದು ಸ್ಪಷ್ಟ. ವೇಗವಾಗಿ ನಡೆಯುವ ಕ್ರಿಕೆಟ್‌ನಲ್ಲಿ ಪ್ರತೀ ಬಾರಿಯೂ ಬೌಲರ್‌ ಕೈಯಿಂದ ಚೆಂಡು ಜಾರಿದೆಯೇ ಎಂದು ನೋಡಿಕೊಂಡೇ ಓಡಲು ಸಾಧ್ಯವಿಲ್ಲ. ಆದ್ದರಿಂದಲೇ ಕ್ರೀಡಾಸ್ಫೂರ್ತಿ ಮೆರೆಯಬೇಕಿತ್ತು ಎಂದು ಶೇನ್‌ ವಾರ್ನ್ರಂತಹ ಕ್ರಿಕೆಟ್‌ ದಿಗ್ಗಜರು ಆಗ್ರಹಿಸಿದ್ದು.

ಒಂದು ವೇಳೆ ಬಟ್ಲರ್‌, ಅಶ್ವಿ‌ನ್‌ ಬೌಲಿಂಗ್‌ ಕ್ರೀಸ್‌ಗೆ ಬಂದ ತಕ್ಷಣ ಹಿಂದೆ ಮುಂದೆ ನೋಡದೇ ಓಡಲು ಆರಂಭಿಸಿದ್ದರೆ, ಅಶ್ವಿ‌ನ್‌ ಬೌಲಿಂಗ್‌ ಮಾಡಲು ಕೈಚಲನೆ ಮಾಡುವ ಮೊದಲೇ ಓಡಿದ್ದರೆ ತಪ್ಪಾಗುತ್ತಿತ್ತು. ಅಥವಾ ಇನಿಂಗ್ಸ್‌ ಪೂರ್ತಿ ಹೀಗೆಯೇ ಮಾಡಿದ್ದರೂ ತಪ್ಪಾಗುತ್ತಿತ್ತು. ಆದರೆ ಅಶ್ವಿ‌ನ್‌ ಬೌಲಿಂಗ್‌ ಮಾಡಿದಂತೆ ಕೈಚಲನೆ ಮಾಡಿದ್ದನ್ನು ನೋಡಿಯೇ ಅವರು ಓಡಿದರು. ಇಲ್ಲಿ ಹೇಗೆಯೇ ನೋಡಿದರೂ, ಅಶ್ವಿ‌ನ್‌ ಮಾಡಿದ್ದು ನಿಯಮಗಳ ಪ್ರಕಾರ ಸರಿಯಿದೆಯೇ ಹೊರತು, ಸ್ಫೂರ್ತಿಯ ಪ್ರಕಾರ ಅವರು ಮಾಡಿದ್ದು ವಂಚನೆ!

ಮಂಕಡ್‌ ಔಟ್‌ ಅಂದರೇನು?
1947ರಿಂದ ಮಂಕಡ್‌ ಔಟ್‌ ಎಂಬ ಪದ ಬಳಕೆ ಚಾಲ್ತಿಗೆ ಬಂತು. ಆಗ ಭಾರತ ಆಸ್ಟ್ರೇಲಿಯ ಪ್ರವಾಸ ಹೋಗಿತ್ತು. ಡಿ.13ಕ್ಕೆ ನಡೆದಿದ್ದ 2ನೇ ಟೆಸ್ಟ್‌ನಲ್ಲಿ ಭಾರತದ ಬೌಲರ್‌ ವಿನೂ ಮಂಕಡ್‌, ಆಸ್ಟ್ರೇಲಿಯದ ಬ್ಯಾಟ್ಸ್‌ಮನ್‌ ಬಿಲ್ಲಿ ಬ್ರೌನ್‌ರನ್ನು ಔಟ್‌ ಮಾಡಿದರು. ಮಂಕಡ್‌ ಚೆಂಡೆಸೆಯುವ ಮುನ್ನವೇ ಬ್ರೌನ್‌ ಕ್ರೀಸ್‌ ಬಿಟ್ಟಿದ್ದರಿಂದ, ಮಂಕಡ್‌ ಮಾಡಿದ್ದ ಔಟ್‌ ಸರಿಯೆನಿಸಿಕೊಂಡಿತು. ಆಸೀಸ್‌ ಮಾಧ್ಯಮಗಳು ಮಂಕಡ್‌ರನ್ನು ಬೈದರೂ, ಆಸೀಸ್‌ ನಾಯಕ ಡಾನ್‌ ಬ್ರಾಡ್ಮನ್‌ ಅದರಲ್ಲಿ ತಪ್ಪೇನಿಲ್ಲ ಎಂದು ಹೇಳಿದರು. ಇದೇ ಪ್ರವಾಸದಲ್ಲಿ ಮಂಕಡ್‌ ಎರಡು ಬಾರಿ ಬ್ರೌನ್‌ರನ್ನು ಈ ಕ್ರಮದಲ್ಲಿ ಔಟ್‌ ಮಾಡಿದ್ದರು. ಅಲ್ಲಿಂದ ಇದು ಮಂಕಡ್‌ ಔಟ್‌ ಎಂದು ಕರೆಸಿಕೊಂಡಿತು.

ಮುಂದೆ ಐಸಿಸಿ ನಿಯಮಗಳು ಬದಲಾಯಿತು. ಬೌಲರ್‌, ಬೌಲಿಂಗ್‌ ಕ್ರೀಸನ್ನು ಪ್ರವೇಶ ಮಾಡಿದ ನಂತರ ಬ್ಯಾಟ್ಸ್‌ಮನ್‌ ಅನ್ನು ಮಂಕಡ್‌ ಔಟ್‌ ಮಾಡುವಂತಿಲ್ಲ ಎಂದು ನಿಯಮಿಸಲಾಯಿತು. ಅಂದರೆ ಬೌಲರ್‌, ಈ ರೀತಿ ಔಟ್‌ ಮಾಡಬೇಕಾದರೆ, ಬೌಲಿಂಗ್‌ ಕ್ರೀಸನ್ನು ತಲುಪಿರಬಾರದು. ಇದಕ್ಕೂ ಮುನ್ನವೇ, ಬ್ಯಾಟ್ಸ್‌ಮನ್‌ ಓಡಲು ಆರಂಭಿಸಿದ್ದರೆ ಔಟೆಂದು ಹೇಳಬಹುದು. ಇದು ಕಷ್ಟಕರವಾದ ಕಾರಣ, ವಂಚನೆಯ ಪ್ರಮಾಣ ಕಡಿಮೆಯಾಗಿತ್ತು. 2017ರಲ್ಲಿ ಈ ನಿಯಮವನ್ನು ಸಡಿಲಿಸಿ, ಬೌಲರ್‌ ಚೆಂಡೆಸೆದ ನಂತರವಷ್ಟೇ ಬ್ಯಾಟ್ಸ್‌ಮನ್‌ ಓಡಬೇಕು, ಇಲ್ಲವಾದರೆ ರನೌಟ್‌ ಮಾಡಲು ಅವಕಾಶವಿದೆ ಎಂದು ಹೇಳಲಾಯಿತು. ಇದರಿಂದ ನಿಯಮ ಬೌಲರ್‌ಗಳ ಪರವಾಗಿ ಬದಲಾಯಿತು.

ಕ್ರಿಕೆಟ್‌ನ ಭಿನ್ನ ಔಟ್‌ಗಳು
ಕ್ರಿಕೆಟ್‌ನಲ್ಲಿ ಪ್ರಸ್ತುತ 10 ರೀತಿಯ ಔಟ್‌ಗಳಿವೆ. ಈ ಹಿಂದೆ ಇದ್ದ ಹ್ಯಾಂಡಲ್ಡ್‌ ದಿ ಬಾಲ್‌ ಔಟನ್ನು ಕೈಬಿಟ್ಟ ನಂತರ ಇದು 10ಕ್ಕಿಳಿದಿದೆ. ಈ ಔಟ್‌ಗಳ ಸಂಕ್ಷಿಪ್ತ ವಿವರ ಇಲ್ಲಿದೆ.

1. ನಿವೃತ್ತಿ: ಒಂದು ವೇಳೆ ಬ್ಯಾಟ್ಸ್‌ಮನ್‌ ಅಂಪೈರ್‌ ಅನುಮತಿಯಿಲ್ಲದೇ, ಪೆವಿಲಿಯನ್‌ನಿಂದ ಹೊರಹೋದರೆ, ಆತನನ್ನು ಅಂಪೈರ್‌ ರಿಟೈರ್ಡ್‌ ಔಟ್‌ (ನಿವೃತ್ತಿ) ಎಂದು ತೀರ್ಮಾನಿಸುತ್ತಾರೆ.

2. ಬೌಲ್ಡ್‌: ಬೌಲರ್‌ ಎಸೆದ ಚೆಂಡು, ಬ್ಯಾಟ್ಸ್‌ಮನ್‌ ಅನ್ನು ವಂಚಿಸಿ ವಿಕೆಟ್‌ ಎಗರಿಸಿ, ಸ್ಟಂಪ್‌ ಉರುಳಿದರೆ ಬೌಲ್ಡ್‌ ಔಟ್‌.

3. ಕ್ಯಾಚ್‌: ಬ್ಯಾಟ್ಸ್‌ಮನ್‌ ಬ್ಯಾಟಿಗೆ ತಾಕಿದ ಚೆಂಡು, ಕೀಪರ್‌ ಸೇರಿದಂತೆ ಕ್ಷೇತ್ರರಕ್ಷಕರ ಕೈಸೇರಿದರೆ ಕ್ಯಾಚ್‌ ಔಟ್‌.

4. ಚೆಂಡಿಗೆ 2 ಬಾರಿ ಹೊಡೆದರೆ: ಕ್ರೀಸ್‌ನಲ್ಲಿರುವ ಬ್ಯಾಟ್ಸ್‌ಮನ್‌, ತಾನುತ್ತರಿಸಿದ ಚೆಂಡಿಗೆ ಎರಡು ಬಾರಿ ಬ್ಯಾಟ್‌ನಿಂದ ಹೊಡೆದರೂ ಔಟಾಗುತ್ತಾನೆ.

5. ಹಿಟ್‌ ವಿಕೆಟ್‌: ಬ್ಯಾಟ್ಸ್‌ಮನ್‌ ಚೆಂಡಿಗೆ ಉತ್ತರಿಸುವಾಗ, ಆತನ ಬ್ಯಾಟ್‌ ವಿಕೆಟ್‌ಗೆ ಬಡಿದರೆ, ಔಟ್‌ ಎಂದು ತೀರ್ಮಾನಿಸಲಾಗುತ್ತದೆ. ಇದು ನಾನ್‌ ಸ್ಟ್ರೈಕರ್‌ ಬ್ಯಾಟ್ಸ್‌ಮನ್‌ಗೆ ಅನ್ವಯಿಸುವುದಿಲ್ಲ ಅಥವಾ ಬ್ಯಾಟ್ಸ್‌ಮನ್‌ ಚೆಂಡಿಗೆ ಒಮ್ಮೆ ಉತ್ತರಿಸಿ, ಅನಂತರ ರನೌಟ್‌ ತಪ್ಪಿಸಿಕೊಳ್ಳಲು ಯತ್ನಿಸುವಾಗ ಬ್ಯಾಟ್‌ ವಿಕೆಟ್‌ಗೆ ಬಡಿದರೆ ಔಟ್‌ ನೀಡುವುದಿಲ್ಲ.

6. ಎಲ್ಬಿಡಬ್ಲ್ಯೂ: ಬ್ಯಾಟ್ಸ್‌ಮನ್‌ ಬ್ಯಾಟಿಂಗ್‌ ಮಾಡುವಾಗ, ಬೌಲರ್‌ ಹಾಕಿದ ಚೆಂಡು, ಶರೀರದ ಯಾವುದೇ ಭಾಗಕ್ಕೆ ಬಡಿದರೆ, ಅದನ್ನು ಎಲ್ಬಿಡಬ್ಲ್ಯೂ ಎಂದು ಪರಿಗಣಿಸಲಾಗುತ್ತದೆ. ಆದರೆ ಚೆಂಡು ಲೆಗ್‌ ಸ್ಟಂಪ್‌ನಿಂದ ಆಚೆ ಮೊದಲು ಬಿದ್ದು, ನಂತರ ಪ್ಯಾಡ್‌ಗೆ ಬಡಿದರೆ ಇಲ್ಲಿ ಔಟ್‌ ನೀಡುವುದಿಲ್ಲ. ಹಾಗೆಯೇ ಗ್ಲೋವ್ಸ್‌, ಬ್ಯಾಟ್‌ಗೆ ಬಡಿದರೂ ಎಲ್ಬಿ ನೀಡುವುದಿಲ್ಲ.

7. ಕ್ಷೇತ್ರರಕ್ಷಣೆಗೆ ಅಡಚಣೆ: ಬ್ಯಾಟ್ಸ್‌ಮನ್‌ ತನ್ನ ಮಾತಿನಿಂದ, ಕೃತಿಯಿಂದ ಕ್ಷೇತ್ರರಕ್ಷಣೆಗೆ ಅಡಚಣೆ ಮಾಡಿದ್ದಾರೆ ಎಂದು ಕಂಡು ಬಂದರೆ ಆತನನ್ನು ಔಟ್‌ ಎಂದು ತೀರ್ಮಾನಿಸಲಾಗುತ್ತದೆ. ಅಂದರೆ ಚೆಂಡು ಹಿಡಿಯಲು ಕ್ಷೇತ್ರರಕ್ಷಕರಿಗೆ ತೊಂದರೆ ಮಾಡುವುದು, ಕ್ಯಾಚನ್ನು ಹಿಡಿಯಲು ಅಡ್ಡಿ ಮಾಡುವುದು, ಬೌಲರ್‌ ಮಾಡಿದ ಚೆಂಡು ವಿಕೆಟ್‌ ಬಡಿಯುತ್ತಿದ್ದಾಗ, ಬ್ಯಾಟ್ಸ್‌ಮನ್‌ ಅದನ್ನು ಕೈಯಿಂದ ತಡೆದರೆ ಇದನ್ನು ಕ್ಷೇತ್ರರಕ್ಷಣೆಗೆ ಅಡಚಣೆ ಎಂದು ಪರಿಗಣಿಸಲಾಗುತ್ತದೆ. ಆದರೆ ಬ್ಯಾಟ್ಸ್‌ಮನ್‌ ಚೆಂಡನ್ನು ಕೈಯಿಂದ ಬೌಲರ್‌ಗೆ ಎತ್ತಿಕೊಟ್ಟರೆ, ಕ್ಷೇತ್ರರಕ್ಷಕರಿಗೆ ನೆರವಾದರೆ ಅದನ್ನು ಔಟ್‌ ಎಂದು ಈಗ ಪರಿಗಣಿಸುವುದಿಲ್ಲ. ಈ ಮೂಲಕ ಹ್ಯಾಂಡಲ್ಡ್‌ ದಿ ಬಾಲ್‌ ಔಟ್‌ ವಿವಾದವನ್ನು ಸರಿಪಡಿಸಲಾಗಿದೆ. ಹಿಂದೆ ಬ್ಯಾಟ್ಸ್‌ಮನ್‌ ಚೆಂಡನ್ನು ಎತ್ತಿಕೊಟ್ಟರೂ, ಔಟೆಂದು ತೀರ್ಪು ನೀಡಲು ಅವಕಾಶವಿತ್ತು.

8. ರನೌಟ್‌: ರನ್‌ಗಾಗಿ ಬ್ಯಾಟ್ಸ್‌ಮನ್‌ ಓಡುತ್ತಿರುವಾಗ ಆತ ಕ್ರೀಸ್‌ ಮುಟ್ಟುವ ಮೊದಲೇ, ಚೆಂಡು ವಿಕೆಟ್‌ಗೆ ಬಡಿದರೆ ರನೌಟ್‌ ಆಗುತ್ತಾನೆ. ಮಂಕಡ್‌ ಔಟ್‌ ಕೂಡ ಇದೇ ವಿಭಾಗದಲ್ಲಿ ಬರುತ್ತದೆ.

9. ಸ್ಟಂಪ್‌: ಚೆಂಡು ಬ್ಯಾಟ್ಸ್‌ಮನ್‌ ವಂಚಿಸಿ ವಿಕೆಟ್‌ ಕೀಪರ್‌ ಕೈ ಸೇರುತ್ತದೆ, ಕೀಪರ್‌ ಬೈಲ್ಸ್‌ ಎಗರಿಸುತ್ತಾನೆ, ಆ ಹಂತದಲ್ಲಿ ಬ್ಯಾಟ್ಸ್‌ಮನ್‌ ಕ್ರೀಸ್‌ನಿಂದ ಹೊರಗಿದ್ದರೆ ಔಟ್‌ ಎಂದು ತೀರ್ಮಾನಿಸಲಾಗುತ್ತದೆ. ಚೆಂಡು ಬ್ಯಾಟ್‌ಗೆ ತಾಗಿದ್ದರೆ, ಸ್ಟಂಪ್‌ ಔಟ್‌ ವ್ಯಾಪ್ತಿಯಲ್ಲಿ ಬರುವುದಿಲ್ಲ. ವಿಕೆಟ್‌ ಕೀಪರ್‌ ಬಹಳ ದೂರ ನಿಂತಿದ್ದರೆ, ಚೆಂಡನ್ನು ವಿಕೆಟ್‌ನತ್ತ ಎಸೆದೂ ಸ್ಟಂಪ್‌ ಮಾಡಬಹುದು.

10. ಸಮಯ ಮೀರಿ ಔಟ್‌: ಬ್ಯಾಟ್ಸ್‌ಮನ್‌ ಔಟಾದ ಮೇಲೆ ಇನ್ನೊಬ್ಬ ಬ್ಯಾಟ್ಸ್‌ಮನ್‌, 3 ನಿಮಿಷದೊಳಗೆ ಕ್ರೀಸ್‌ಗೆ ಬಂದು ಚೆಂಡು ಎದುರಿಸಲು ಸಿದ್ಧನಾಗಬೇಕು ಅಥವಾ ಬ್ಯಾಟಿಂಗ್‌ನ ಇನ್ನೊಂದು ತುದಿ ತಲುಪಿ ಸಿದ್ಧನಾಗಬೇಕು. ಇಲ್ಲವಾದರೆ ಅದನ್ನು ಔಟ್‌ ಎಂದು ತೀರ್ಮಾನಿಸಲಾಗುತ್ತದೆ.

ನಿರೂಪ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಬ್ರಿಟಿಷರ ವಿರುದ್ಧ ಕತ್ತಿ ಝಳಪಿಸಿದ ಮೊದಲ ಭಾರತೀಯ ನಾರಿ ಚೆನ್ನಮ್ಮ. ಈ ಸಂಗತಿ, ಕರುನಾಡಿನ ರೋಮಾಂಚಕ ಪುಳಕ ಕೂಡ. ಆ ಹೆಮ್ಮೆಯಲ್ಲೇ ಬದುಕುತ್ತಿರುವ ಆಕೆಯ ವಂಶಸ್ಥರ...

  • ಯಾವುದೇ ಕಛೇರಿ ಇರಲಿ... ಅದರ ಆರಂಭಕ್ಕೂ ಮುನ್ನ, ಕಣ್ಮುಚ್ಚಿಕೊಂಡು ಶಾರದೆಯನ್ನು ಧ್ಯಾನಿಸಿಯೇ, ಕದ್ರಿಯವರು ಸ್ಯಾಕ್ಸೋ ಮೂತಿಗೆ ತುಟಿಯೊಡ್ಡುತ್ತಿದ್ದರು. ಕದ್ರಿಯವರ...

  • ಇತ್ತೀಚೆಗೆ ಭಾರತ ಮತ್ತು ಚೀನಾದ ಅನೌಪಚಾರಿಕ ಶೃಂಗಸಭೆಗೆ ಸಾಕ್ಷಿಯಾದ, ಮಹಾಬಲಿಪುರಂ ದೇಗುಲವು ಶಿಲ್ಪಶಾಸ್ತ್ರದ ಮಹಾಪಾಠಶಾಲೆ. ಪಲ್ಲವರ ಕಾಲದ ಕಲಾಸೃಷ್ಟಿ ಇದು....

  • ಇದು ಒಬ್ಬ ಅಪರೂಪದ ಪೊಲೀಸಪ್ಪನ ಕತೆ. ಮಡಿದ ಮೇಲೆ ಕಣ್ಣುಗಳು, ಮಣ್ಣುಪಾಲಾಗದೇ ಇರಲಿಯೆಂಬ ಕಳಕಳಿ ಇಟ್ಟುಕೊಂಡ ಮನುಷ್ಯ. ಈ ಕಾರಣ, ಹೋದಲ್ಲೆಲ್ಲ ನೇತ್ರದಾನದ ಕುರಿತು...

  • ಇಂಡೋನೇಷ್ಯಾದಲ್ಲಿ ನಡೆಯುವ ಈ ಜಾನುವಾರುಗಳ ಓಟ ಸ್ಪರ್ಧೆ, ನಮ್ಮ ದಕ್ಷಿಣ ಕನ್ನಡದ ಕಂಬಳವನ್ನೇ ಹೋಲುತ್ತದೆ. ಸುಮಾತ್ರ ದ್ವೀಪದ "ದಾನಹ್‌ ದಾತರ್‌' ಎಂಬ ಹಳ್ಳಿಯಲ್ಲಿ...

ಹೊಸ ಸೇರ್ಪಡೆ