ಚಿಗುರಿದ ಕನಸು: ದಾದಾ ಕೈನಲ್ಲಿ ಬಿಸಿಸಿಐ ಭವಿಷ್ಯ

Team Udayavani, Nov 2, 2019, 4:04 AM IST

ಓರ್ವ ತಾರೆಯನ್ನು ಅಭಿಮಾನಿಗಳು ಒಂದೆರಡು ಅಡ್ಡ ಹೆಸರಿನಿಂದ ಕರೆದಿರಬಹುದು. ಅದನ್ನು ನಾವು-ನೀವು ನೋಡಿದ್ದೇವೆ ಕೂಡ. ಆದರೆ ಇಲ್ಲೊಬ್ಬ ಕ್ರಿಕೆಟಿಗ ತಮ್ಮ ಅಭಿಮಾನಿಗಳಿಂದ ಬರೋಬ್ಬರಿ ನಾಲ್ಕಾರು ಅಡ್ಡ ಹೆಸರುಗಳಿಂದ ಕರೆಯಲ್ಪಡುತ್ತಾರೆ, ಅಭಿಮಾನಿಗಳ ಆ ಪ್ರೀತಿಯ ಕ್ರಿಕೆಟಿಗ ಬೇರ್ಯಾರೂ ಅಲ್ಲ, ದೇಶ ಕಂಡ ಅಪ್ರತಿಮ ಆಟಗಾರ, ಮಾಜಿ ನಾಯಕ ಸೌರವ್‌ ಗಂಗೂಲಿ. ಒಂದು ಕಾಲದಲ್ಲಿ ಫಿಕ್ಸಿಂಗ್‌ನಂತಹ ಬಿರುಗಾಳಿ ಭಾರತಕ್ಕೆ ಅಪ್ಪಳಿಸಿದ್ದಾಗ ಕೆಚ್ಚೆದೆಯಿಂದ ಗಂಗೂಲಿ ತಂಡ ಮುನ್ನಡೆಸಿದ್ದರು. ಇದೀಗ ಬಿಸಿಸಿಐ (ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ) ಸಂಕಷ್ಟದಲ್ಲಿದ್ದು , ಅದನ್ನು ಮೇಲೆತ್ತುವ ಹೊಣೆಗಾರಿಕೆ ಗಂಗೂಲಿ ಹೆಗಲ ಮೇಲಿದೆ. ಈ ನಿಟ್ಟಿನಲ್ಲಿ ಗಂಗೂಲಿಯ ಕೆಲವು ಕುತೂಹಲಕಾರಿ ಸಂಗತಿ ಇಲ್ಲಿದೆ ನೋಡಿ.

ಕೆಲವರು ದಾದಾ ಅಂತಾರೆ, ಮತ್ತೆ ಕೆಲವರು ಫ್ರಿನ್ಸ್‌ ಆಫ್ ಕೋಲ್ಕತ ಅಂತಾರೆ, ಮಹಾರಾಜ, ಬಂಗಾಳದ ಹುಲಿ… ಹೀಗೆ, ಒಬ್ಬ ಸೌರವ್‌ ಗಂಗೂಲಿಗೆ ಪ್ರೀತಿಯಿಂದ ಅಭಿಮಾನಿಗಳಿಟ್ಟ ಹೆಸರು ಅನೇಕ. ಗಂಗೂಲಿ ಬದುಕನ್ನು ಕೇವಲ ಪದಗಳಿಂದ ವರ್ಣಿಸುವುದು ಕಷ್ಟ. ಗಂಗೂಲಿ ವ್ಯಕ್ತಿತ್ವ ಸಮುದ್ರದಷ್ಟು ಆಳ ಮತ್ತು ಅಗಲ. ಒಲೆಯಲ್ಲಿ ಬೇಯುತ್ತಿರುವ ಅನ್ನ ಬೆಂದಿದೆಯೇ? ಎಂದು ಪರೀಕ್ಷಿಸಲು ಒಂದು ಅಗುಳು ಸಾಕು, ಹಾಗೆಯೇ ಗಂಗೂಲಿ ಕ್ರಿಕೆಟ್‌ ಲೋಕದಲ್ಲಿ ಆಟಗಾರನಾಗಿ, ನಾಯಕನಾಗಿ ಎಷ್ಟು ಸಾಧನೆ ಮಾಡಿದ್ದಾರೆ ಎಂದು ನೋಡಲು ಹಿಂದಿನ ಒಂದೆರಡು ದಾಖಲೆಗಳನ್ನು ಪರೀಕ್ಷಿಸಿದರೆ ಸಾಕು. ಗಂಗೂಲಿ ಎಂತಹ ಅದ್ಭುತ ನಾಯಕ ಕಮ್‌ ಆಟಗಾರ ಎನ್ನುವುದು ಸ್ಪಷ್ಟವಾಗುತ್ತದೆ.

ಭಾರತ ಕ್ರಿಕೆಟ್‌ ಮೆಲಕೆತ್ತಿದ್ದ ಗಂಗೂಲಿ: ಫಿಕ್ಸಿಂಗ್‌ ಬಿರುಗಾಳಿಗೆ ಸಿಕ್ಕಿ ಭಾರತ ಕ್ರಿಕೆಟ್‌ ಭವಿಷ್ಯ ತೂಗುಯ್ನಾಲೆಯಲ್ಲಿದ್ದಾಗ ಗಂಗೂಲಿ ತಂಡದ ನಾಯಕತ್ವ ವಹಿಸಿ ಹೊಸ ತನ ಕೊಟ್ಟ ಯಶಸ್ವಿ ನಾಯಕ. ಹುಟ್ಟು ರಾಜಮನೆತನದವರು, ಚಿನ್ನದ ತಟ್ಟೆಯಲ್ಲೇ ಊಟ, ಬದುಕಿನಲ್ಲಿ ಸರ್ವಸುಖಗಳು ಸಿಕ್ಕಿದ್ದರೂ ಗಂಗೂಲಿ ಸುಮ್ಮನಿರಲಿಲ್ಲ. ತನ್ನದೆ ಆದ ಹೊಸ ಬದುಕು ರೂಪಿಸಿಕೊಂಡರು. ಲಕ್ಷಾಂತರ ಯುವಕರಿಗೆ ಆದರ್ಶವಾಗಿ ಬದುಕಿದ ವ್ಯಕ್ತಿ. ತನ್ನಂತೆ ಇತರರೂ ಬೆಳೆಯಬೇಕು ಎನ್ನುವುದು ಗಂಗೂಲಿಯ ಬಂಗಾರದ ಗುಣ ,ಇಷ್ಟು ಸಾಲದೆ ಗಂಗೂಲಿ ಬದುಕಿನ ಚಿತ್ರಣವನ್ನು ತಿಳಿಯಲು. ವೀರೇಂದ್ರ ಸೆಹವಾಗ್‌, ಯುವರಾಜ್‌ ಸಿಂಗ್‌, ಹರ್ಭಜನ್‌ ಸಿಂಗ್‌, ಜಹೀರ್‌ ಖಾನ್‌ ರಂತಹ ಖ್ಯಾತ ಆಟಗಾರರನ್ನು ಗಂಗೂಲಿ ಬೆಳೆಸಿದ್ದರು. ಸಮಕಾಲಿನ ಆಟಗಾರರಾಗಿದ್ದ ವಿವಿಎಸ್‌ ಲಕ್ಷ್ಮಣ್‌, ರಾಹುಲ್‌ ದ್ರಾವಿಡ್‌ ರಂತಹ ಅಪ್ರತಿಮರಿಗೆ ಕಷ್ಟದ ಸಮಯದಲ್ಲಿ ಅವಕಾಶಗಳನ್ನು ನೀಡುವ ಮೂಲಕ ದೊಡ್ಡ ತನ ಮೆರೆದಿದ್ದರು. ಗಂಗೂಲಿ ನಾಯಕರಾಗಿದ್ದಷ್ಟು ಕಾಲ ಭಾರತ ತಂಡದ ಏಳಿಗೆಗೆ ಶ್ರಮಿಸಿದ ಓರ್ವ ನಿಸ್ವಾರ್ಥಿ ಎನ್ನಬಹುದು.

1999ರ ವಿಶ್ವಕಪ್‌ ಕ್ರಿಕೆಟ್‌ ಕೂಟದಲ್ಲಿ ಸೌರವ್‌ ಗಂಗೂಲಿ ಶ್ರೀಲಂಕಾ, ಪಾಕಿಸ್ತಾನ ಹಾಗೂ ಆಸ್ಟ್ರೇಲಿಯ ವಿರುದ್ಧ ಅಪ್ರತಿಮ ಪ್ರದರ್ಶನ ನೀಡಿದ್ದರು, ಲಂಕಾ ವಿರುದ್ಧದ ಪಂದ್ಯದಲ್ಲಿ ವೈಯಕ್ತಿಕ 131 ರನ್‌ ಭಾರಿಸಿದ್ದಲ್ಲದೆ ರಾಹುಲ್‌ ದ್ರಾವಿಡ್‌ ಜತೆಗೂಡಿ 318 ರನ್‌ ಜತೆಯಾಟ ನಿರ್ವಹಿಸಿದ್ದು ವಿಶ್ವಕಪ್‌ನ ಅತ್ಯಧಿಕ ರನ್‌ ಜತೆಯಾಟವಾಗಿದೆ. 2000ನೇ ಇಸವಿ ವೇಳೆ ಫಿಕ್ಸಿಂಗ್‌ ಭಾರತ ಕ್ರಿಕೆಟ್‌ ಮೊದಲ ಸಲ ಅಪ್ಪಳಿಸಿ ಭಾರೀ ಸದ್ದು ಮಾಡಿತ್ತು. ಮೊಹಮ್ಮದ್‌ ಅಜರುದ್ದಿನ್‌, ನಯನ್‌ ಮೊಂಗಿಯಾ, ಅಜಯ್‌ ಜಡೇಜ ತನಿಖೆ ಸುಳಿಗೆ ಸಿಲುಕಿದ್ದರು. ಈ ವೇಳೆ ನಾಯಕರಾಗಿದ್ದ ಸಚಿನ್‌ ತೆಂಡುಲ್ಕರ್‌ ಗಾಯದ ಕಾರಣದಿಂದ ತಮ್ಮ ನಾಯಕತ್ವದಿಂದ ಹಿಂದೆ ಸರಿದರು. ಇಂತಹ ವಿಷಮ ಪರಿಸ್ಥಿತಿಯಲ್ಲಿ ತಂಡದ ನಾಯಕತ್ವವನ್ನು ಗಂಗೂಲಿ ನಾಯಕತ್ವ ವಹಿಸಿದರು. 2002ರ ನಾಟ್‌ವೆಸ್ಟ್‌ ಸರಣಿಯಲ್ಲಿ ಭಾರತದ ರೋಚಕ ಗೆಲುವಿನ ನಂತರ ಅಂಗಿ ಕಳಚಿ ಲಾರ್ಡ್ಸ್‌ ಕ್ರೀಡಾಂಗಣದಲ್ಲಿ ಅಬ್ಬರದ ಅಲೆ ಸೃಷ್ಟಿಸಿದ್ದರು.

ಚಾಪೆಲ್‌ ಜತೆ ಕಿತ್ತಾಟ, ಏರಿಳಿತ!: ಒಂದು ಕಾಲದಲ್ಲಿ ಸೌರವ್‌ ಗಂಗೂಲಿಯ ಬ್ಯಾಟಿಂಗ್‌ ನೋಡಲೆಂದೇ ಅದೆಷ್ಟೋ ಅಭಿಮಾನಿಗಳು ಟೀವಿ ಮುಂದೆ ಕುಳಿತಿರುತ್ತಿದ್ದರು. ಕ್ರಿಕೆಟ್‌ ದಿಗ್ಗಜ ಸಚಿನ್‌ ತೆಂಡುಲ್ಕರ್‌ ಜತೆಗೆ ಸೌರವ್‌ ಗಂಗೂಲಿ ಕ್ರೀಸ್‌ಗೆ ಇಳಿದರೆಂದರೆ ಬೌಂಡರಿ, ಸಿಕ್ಸರ್‌ಗಳ ಸುರಿಮಳೆ ಎಂದೇ ಅರ್ಥ. ಅದರಲ್ಲೂ ಗಂಗೂಲಿ ಎದುರು ಬಂದು ಸ್ಪಿನ್‌ ಎಸೆತಕ್ಕೆ ಸಿಕ್ಸರ್‌ ಭಾರಿಸುವ ಸ್ಟೈಲ್‌ ಕಣ್ಣಿಗೆ ಹಬ್ಬ. 2003ರಲ್ಲಿ ಭಾರತ ತಂಡವನ್ನು ನಾಯಕರಾಗಿ ಏಕದಿನ ಕ್ರಿಕೆಟ್‌ ಕೂಟದ ವಿಶ್ವಕಪ್‌ ಫೈನಲ್‌ ತನಕ ಗಂಗೂಲಿ ತೆಗೆದುಕೊಂಡು ಹೋಗಿದ್ದರು. ಆದರೆ ಆಸೀಸ್‌ ವಿರುದ್ಧ ಸೋಲುವ ಮೂಲಕ ಸ್ವಲ್ಪದರಲ್ಲೇ ಟ್ರೋಫಿ ಎತ್ತುವ ಅವಕಾಶವನ್ನು ಕಳೆದುಕೊಂಡಿದ್ದರು. ಮರು ವರ್ಷವೇ ಕಳಪೆ ಪ್ರದರ್ಶನದಿಂದ ಅವರು ತಂಡದಲ್ಲಿ ಸ್ಥಾನ ಕಳೆದುಕೊಂಡರು. 2006ರಲ್ಲಿ ಮತ್ತೆ ರಾಷ್ಟ್ರೀಯ ತಂಡದಲ್ಲಿ ಗಂಗೂಲಿ ಸ್ಥಾನ ಪಡೆದಿದ್ದರು. ನಂತರ ತಂಡದೊಳಕ್ಕೆ ಬಂದ ಗಂಗೂಲಿ ಅಂದಿನ ತಂಡದ ಮುಖ್ಯ ಕೋಚ್‌ ಗ್ರೇಗ್‌ ಚಾಪೆಲ್‌ ಜತೆ ಜಗಳ ಮಾಡಿ­ ಕೊಂಡಿ­ದ್ದರು. ಇದು ವಿವಾದಕ್ಕೆ ಕಾರಣವಾಗಿತ್ತು. ಇಷ್ಟೆಲ್ಲದರ ನಡುವೆಯೂ ಗಂಗೂಲಿ 2007ರ ಏಕದಿನ ವಿಶ್ವಕಪ್‌ ಕೂಟದಲ್ಲಿ ಭಾರತ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದರು ಎನ್ನುವುದು ವಿಶೇಷ.

ಗೋಡೆ ದ್ರಾವಿಡ್‌ ಭವಿಷ್ಯ ರಕ್ಷಿಸಿದ್ದೇ ಗಂಗೂಲಿ: ಪ್ರತಿಭಾವಂತ ಕ್ರಿಕೆಟಿಗರಿಗೆ ಗಂಗೂಲಿ ಯಾವತ್ತೂ ಅನ್ಯಾಯ ಮಾಡಿಲ್ಲ, ಇದಕ್ಕೆ ಉತ್ತಮ ಉದಾಹರಣೆ ರಾಹುಲ್‌ ದ್ರಾವಿಡ್‌. ಹೌದು, ಕರ್ನಾಟಕದ ದಿಗ್ಗಜ ಬ್ಯಾಟ್ಸ್‌ಮನ್‌ ಒಂದು ಹಂತದಲ್ಲಿ ಫಾರ್ಮ್ ಕಳೆದುಕೊಂಡು ಮನೆ ಸೇರುವ ಆತಂಕದಲ್ಲಿದ್ದರು. ಇಂತಹ ಹಂತದಲ್ಲಿ ಗಂಗೂಲಿ ರಾಜಕೀಯ ಮಾಡಲಿಲ್ಲ. ಬದಲಿಗೆ ದ್ರಾವಿಡ್‌ ಕೈಗೆ ವಿಕೆಟ್‌ ಕೀಪರ್‌ ಗ್ಲೌಸ್‌ ನೀಡಿ ಅವರ ಭವಿಷ್ಯವನ್ನು ಕಾಪಾಡಿದ್ದರು. ಅದೇ ರೀತಿ ವೀರೇಂದ್ರ ಸೆಹವಾಗ್‌ ಓಪನರ್‌ ಆಗಿ ಭಡ್ತಿ ಪಡೆದದ್ದು ಕೂಡ ಗಂಗೂಲಿ ದೂರದೃಷ್ಟಿಗೊಂದು ನಿದರ್ಶನವಾಗಿತ್ತು. ಅಂದಿನ ಯುವ ಆಟಗಾರರಾದ ಯುವರಾಜ್‌, ಧೋನಿ, ಜಹೀರ್‌ ಮೇಲೆ ದಾದಾ ಅಪಾರ ವಿಶ್ವಾಸವಿರಿಸಿದ್ದರು.

ಗಂಗೂಲಿಗೆ ದರ್ಪವೇ ಅಲಂಕಾರ: ಶ್ರೀಮಂತ ಮನೆತನದಲ್ಲಿ ಹುಟ್ಟಿದ ಸೌರವ್‌ ಗಂಗೂಲಿಗೆ ಹುಟ್ಟುವಾಗಲೇ ಎಲ್ಲ ಸೌಕರ್ಯವೂ ಸಿಕ್ಕಿತ್ತು. ಅವರದು ಅಂತಹ ಶ್ರೀಮಂತ ಮನೆತನ. 12 ನೇ ವಯಸ್ಸಿನಲ್ಲಿ ಕ್ರಿಕೆಟಿಗನಾಗಿದ್ದ ಗಂಗೂಲಿ ದೇಶಿಯ ಪಂದ್ಯವೊಂದರಲ್ಲಿ ಸಹ ಆಟಗಾರನಿಗೆ ಕ್ರೀಡಾಂಗಣದಲ್ಲಿ ನೀರು ಕೊಂಡೊಯ್ಯಲು ನಿರಾಕರಿಸುವ ಮೂಲಕ ದರ್ಪ ಪ್ರದರ್ಶಿಸಿದ್ದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ರಾಮ ಸದ್ಗುಣಗಳ ಆಗರ. ಅವನಂಥ ಮಗ ಹುಟ್ಟಬೇಕು ಎನ್ನುವುದು ಈಗಿನವರ ಕನಸು. ರಾಮನಂಥ ಒಬ್ಬ ಮಗು ಒಂದು ಊರಲ್ಲಿದ್ದರೆ ವಿಶ್ವದ ಅಸಂಖ್ಯ ಸಂಖ್ಯೆಯ ವೃದ್ಧಾಶ್ರಮಗಳಲ್ಲಿ...

  • ಹುಬ್ಬಳ್ಳಿಯ ಸಿದ್ಧಾರೂಢ ಮಠದಲ್ಲಿ ತಂಬೂರಿಯನ್ನು ತೊಂಬತ್ತು ವರುಷಗಳಿಂದ, ನಿರಂತರವಾಗಿ- ಸುಶ್ರಾವ್ಯವಾಗಿ ನುಡಿಸುತ್ತಲೇ ಇದ್ದಾರೆ. ಒಂದು ದಿನವೂ ಆ ತಂಬೂರಿಯನ್ನು...

  • ತುಂಗಾರತಿ ನೆರವೇರುವ ಈ ದೃಶ್ಯ ಕಣ್ಣಿಗೊಂದು ಹಬ್ಬ. ಇನ್ನೇನು ಕರ್ಪೂರಕ್ಕೆ ದೀಪ ಸ್ಪರ್ಶಿಸಿ, ಆರತಿ ಬೆಳಗಿತು ಎನ್ನುವ ಹೊತ್ತಿಗೆ ತುಂಗೆಯಲ್ಲಿರುವ ಮೀನುಗಳು,...

  • "ಕೋಟೆನಾಡಿನ ಊಟಿ' ಖ್ಯಾತಿಯ ಜೋಗಿಮಟ್ಟಿ ಗಿರಿಧಾಮದ ಸೌಂದರ್ಯ ಮಲೆನಾಡನ್ನು ಹೋಲುವಂಥದ್ದು. ಬೆಂಕಿಯಂಥ ಚಳಿ, ಹಿಮ್ಮೆಟ್ಟುವ ಬಿರುಗಾಳಿ, ಪ್ರೇಮ ಕಾಶ್ಮೀರವನ್ನು...

  • ಉಡವು ಸರಿಸೃಪ ಜಾತಿಗೆ ಸೇರಿದೆ. ಇದು ಸಕಲ ವಿದ್ಯೆಗಳನ್ನು ಬಲ್ಲ ಸಸ್ತನಿ. ನೀರಿನಲ್ಲಿ ಸರಾಗವಾಗಿ ಈಜಬಲ್ಲುದು. ತನ್ನ ಕಾಲಿನ ಮೇಲೆ ನಿಂತುಕೊಂಡು ಸುತ್ತಲ ಪರಿಸರ...

ಹೊಸ ಸೇರ್ಪಡೆ