ಮೋಡವ ಹಿಡಿದ ಕರ್ವಾಲೊ


Team Udayavani, Sep 7, 2019, 1:24 PM IST

bhu-tdy-01

ಮಕ್ಕಳಿಗೆ ಮಾಯಾಲೋಕ ತೋರಿಸುವ ಹುಚ್ಚೊಂದು ಪೂರ್ಣಚಂದ್ರ ತೇಜಸ್ವಿಯವರ ಬೆನ್ನು ಹತ್ತಿದಾಗ, ಅವರುಹೊರಡುತ್ತಿದ್ದುದು ಚಾರ್ಮಾಡಿ ಘಾಟ್‌ನತ್ತ. ಸ್ವರ್ಗ ಸುಂದರ ಚಾರ್ಮಾಡಿಯ ಮೇಲೆ ತೇಲುವ ಮಾಯಾ ಮೋಡಗಳನ್ನು ತೋರಿಸುತ್ತಾ, ಆ ಹೇರ್‌ಪಿನ್‌ ತಿರುವುಗಳ ಕಲ್ಲಿನ ಕಟ್ಟೆಗಳ ಮೇಲೆ ಕಾಲಿಟ್ಟು, ಕಾಡಿನ ಕಥೆ ಹೇಳುವಾಗ, ಅವರೊಳಗೊಬ್ಬ ಕರ್ವಾಲೋ ಇಣುಕುತ್ತಿದ್ದ. ಇಂದು ಆ ಚಾರ್ಮಾಡಿ ಮಹಾಮಳೆಗೆ, ಕುಸಿದು ವಿರೂಪವಾಗಿದೆ. ಅಲ್ಲಿ ತೇಜಸ್ವಿಯ ನೆನಪಿನ ಹೆಜ್ಜೆಗಳಿನ್ನೂ ಅಳಿಯದೇ ಉಳಿದಿವೆ. ನಾಳೆ ತೇಜಸ್ವಿಯವರು ಹುಟ್ಟಿದ ದಿನ (ಸೆ.8). ಕಾಡಿನ ಸಂತನ ಕತೆಗಳಿಲ್ಲಿ, ಮತ್ತೆ ನೆನಪಿನ ಗುಡ್ಡದ ಚಾರಣ ಹೊರಟಿವೆ…

 

ಮೊನ್ನೆ ಭೋರ್ಗರೆದು ಹೋದ ಮಹಾಮಳೆ ಎಲ್ಲರನ್ನೂ ದುಗುಡಕ್ಕೆ ದೂಡಿ, ಮನಸ್ಸು ಭಾರಮಾಡಿದೆ. ಈ ಭಯಂಕರ ಪ್ರಕೃತಿ ವಿಕೋಪ ಏನಿದು? ಏಕೆ? ಅಂದುಕೊಳ್ಳುವೆನು. 1960ರ ದಶಕದಲ್ಲಿ ಒಂದೇ ವಾರದಲ್ಲಿ ಇದಕ್ಕಿಂತಲೂ ಹೆಚ್ಚಿನ ಮಳೆಯನ್ನು ಇದೇ ಮೂಡಿಗೆರೆಯಲ್ಲಿ ನೋಡಿರುವಂಥವಳು ನಾನು. ಇವತ್ತು 3 ಇಂಚು, ನಾಳೆ 5, ನಾಡಿದ್ದು 6… ಹೀಗೆ ಸುರಿಯುತ್ತಾ ಒಂದು ದಿನ 17 ಇಂಚು ಚಚ್ಚಿ, ಕುಟ್ಟಿ ಹೋಗಿರುವುದನ್ನು ಕಣ್ಣಾರೆ ಕಂಡಿರುವೆನು. ಆದರೆ, ಏನನ್ನೂ ಕೆಡವಿದ್ದನ್ನೂ ಕಂಡರಿಯದ್ದನ್ನೂ ಕೇಳಿಸಿಕೊಂಡಿರಲಿಲ್ಲ. ಅಂದರೆ? ಆ ದಿನಗಳಲ್ಲಿ ಫೋನು ಇರಲಿಲ್ಲವಂತಲಾ ಅಥವಾ ಥರಾವರಿ ಮಾಧ್ಯಮಗಳಿರಲಿಲ್ಲ, ಸುದ್ದಿ ಮುಟ್ಟಿಸಲು ಅಂತನಾ, ಅಥವಾ ಪ್ರಕೃತಿಯ ಒಂದು ಭಾಗ ನಾವೆನ್ನುವ ಅರಿವಿನಿಂದಾಗಿ ಮನುಷ್ಯನ ಹಸ್ತಕ್ಷೇಪ ಇರಲಿಲ್ಲವಾ? ಒಂದೂ ಅರಿಯದಾದೆ.

 

ಮೂಡಿಗೆರೆಯ ನಮ್ಮ “ನಿರುತ್ತರ’ ತೋಟಕ್ಕೆ 18 ಕಿ.ಮೀ. ದೂರದಲ್ಲಿ ಚಾರ್ಮಾಡಿ ಇರೋದು. ಇಲ್ಲಿಗೆ ಮಳೆಗಾಲದಲ್ಲೇ ಹೋಗಿ, ಚಳಿಗಾಲದಲ್ಲೇ ಹೋಗಿ ಅಥವಾ ಬೇಸಿಗೆಯಲ್ಲೇ ಹೋಗಿ, ತನ್ನ ತರತರದ ಕಾಡಿನ ಕಣಿವೆಯ ಸೌಂದರ್ಯ ವನ್ನು ತೆರೆತೆರೆದು ತೋರಿಸುವ ಘಾಟಿನೇ ಸೈ. ಕೆಲವೊಮ್ಮೆ ಐದೈದು ನಿಮಿಷಕ್ಕೆ ದೃಶ್ಯ ಬದಲಾಯಿಸಿ ತೋರಿಸುತ್ತೆ; ನೋಡುವ ಕಣ್ಣಿರಬೇಕು ಅಷ್ಟೇ. ಅಲೆ ಅಲೆಯಾಗಿ ಹಬ್ಬಿರುವ ಗುಡ್ಡಗಳು, ಅಲ್ಲಲ್ಲಿ ಗುಡ್ಡಗಳ ಮೇಲಿನ ಮಂಜಿನ ಮೋಡಗಳು, ಆಕಾಶವನ್ನು ಸಂಧಿಸಿ ರಾಜಕುಮಾರಿ ಕಾಂತಿಮತಿ ಯನ್ನು ಸೇರಿಕೊಳ್ಳಲು, ಏಳು ಕೋಟೆ ದಾಟಲು ಹೊರಟ ರಾಜಕುಮಾರನು ಜಮಖಾನ ಏರಿದ ಕಥೆಯ ಅನುಭವವೋ ಅಥವಾ ದಡದಡ ಭೋರ್ಗರಿಸುವ ಮಳೆಯೋ- ಒಟ್ಟಿನಲ್ಲಿ ಒಂದು ವಿಶಿಷ್ಟ ಅನುಭವ.

 

ಜೂನ್‌ ಹೊತ್ತಿಗೆ ಚಾರ್ಮಾಡಿ ಘಾಟಿಯಲ್ಲಿನ ಮೋಡಗಳು ನೆಂಟರ ಮನೆಗೆ ಅವಸರದಲ್ಲಿ ಹೊರಟಂತಿರುತೆÌ. ಆವಾಗಾವಾಗ ಧರೆಗೆ ಇಳಿಯುವಂತೆ ಹಣುಕುತ್ತವೆ. ನಮ್ಮ ಮಕ್ಕಳು ಸುಸ್ಮಿತಾ, ಈಶಾನ್ಯೆಯರಿಗೆ ಮೋಡ ಮುಟ್ಟಿಸಲು ಕರೆದೊಯ್ಯುವುದು, ತೇಜಸ್ವಿಗೊಂದು ಸಂತಸ ಕೊಡುವ ಆಕರ್ಷಣೆ. ಅವು ಮಂಜಿನ ಮೋಡ. ನಾವು ಹೋದಲ್ಲಿಗೇ ಅವೂ ಬರುವುವು. ನಮ್ಮೊಟ್ಟಿಗೇ ಹೊಗೆ ಕವಿದ ಮಂಜಿನ ಮಾಯಾಲೋಕ ಮಕ್ಕಳ ಮನಸ್ಸಿಗೆ. ಮಂಜು ಮಾಯವಾಗಿರುತ್ತಿತ್ತು. ಇನ್ನೊಂದು ಮೋಡ ನಮ್ಮ ಹತ್ತಿರ ಹತ್ತಿರಕ್ಕೇ ಓಡೋಡಿ ಬರುತ್ತಿದೆ, ಕೈಗೆಟಕಿಸಿಕೊಳ್ಳಬಹುದು, ಅಗೋ ಬಂತು! ಅಯ್ಯೋ ದೂರಕ್ಕೆ ಓಡೇ ಹೋಯ್ತು! ಕಣ್ಣ ಮುಂದೆ ಕರಗೇ ಹೋಯ್ತು!! ಸುಮ್ಮನೆ ಮೋಡ ನೋಡ್ತಾನೆ ನಿಲ್ಲುವುದೇ ಮಜವಾಗಿರುತ್ತಿತ್ತು.

 

ಒಮ್ಮೆ ಸುಸ್ಮಿತಾ, ತನ್ನ ಸಹೋದ್ಯೋಗಿ ಗೆಳತಿ ಮತ್ತು ಅವಳ ಏಳು ವರ್ಷದ ಮಗಳು ನಟಾಶಳನ್ನು ಬೆಂಗಳೂರಿ ನಿಂದ ಕರೆದುಕೊಂಡು ಬಂದಿದ್ದಳು. ಪಾಪ ನಟಾಶ, ಸ್ವಲ್ಪ ಸಮಯದ ಹಿಂದೆಯಷ್ಟೇ ತಂದೆಯನ್ನು ಕಳೆದುಕೊಂಡಿ  ದ್ದಳು. ತೇಜಸ್ವಿ, ಮಾಯಾ ಮೋಡದಲ್ಲಿ ಆಡಲು ಅವಳನ್ನು ಕರೆದೊಯ್ದಿದ್ದರು. ಕುಣಿದು ಕುಪ್ಪಳಿಸಿದಳಂತೆ. ಮನೆಗೆ ವಾಪಸು ಬರಲಿಕ್ಕೇ ಒಪ್ಪಳು. ಪೂಸಿ ಹೊಡೆದು, ಕರಕೊಂಡು ಬರಬೇಕಾಯೆಂದರು ತೇಜಸ್ವಿ.

ಮರುದಿನ ಊರಿಗೆ ಹಿಂದಿರುಗುವಾಗ ನಟಾಶ ಹೇಳಿದಳು, “ನಮ್ಮ ಮನೆಯಲ್ಲಿಯೂ ಅಂಗಳವಿದೆ, ಆದರೆ ಈ ರೀತಿ ನಮನಮೂನೆ ಹೂವಿನ ಗಿಡ ನೆಡಲು ನಮಗೆ ಪುರುಸೊತ್ತಾದರೂ ಎಲ್ಲಿದೆ? ನಿಮ್ಮಲ್ಲಿ ಏನೇನೆಲ್ಲ ಇದೆ. ಬಣ್ಣ ಬಣ್ಣದ ಪಕ್ಷಿಗಳಿವೆ, ಜೇನು ಇದೆ, ಹಾವಿದೆ. ಚಾರ್ಮಾಡಿ! ನೀವು ಸ್ವರ್ಗವನ್ನೇ ಕೈಯಲ್ಲಿ ಇಟ್ಟುಕೊಂಡಿರುವಿರಿ’ ಎಂದಳು. ಮೇ ಜೂನ್‌ನಲ್ಲಿ ಒಂದೊಂದು ಮಳೆ ಬಂದು ನಿಂತ ಕಾಲ ಅದಾಗಿತ್ತು. ಆವತ್ತು ಇನ್ನೇನು ಕತ್ತಲೆ ಆವರಿಸುವ ಕಾಲ. ನಾವು ಗೆಳೆಯರೆಲ್ಲ ಮನೆ ಅಂಗಳದಲ್ಲಿ ಶಟಲ್‌ ಆಡುವುದನ್ನು ನಿಲ್ಲಿಸಿ, ದ್ವಿಚಕ್ರ ವಾಹನದಲ್ಲಿ ಹೊರಟೆವು. ಗುಂಪು ಗುಂಪಾಗಿ ಹೋಗಿ, ಗುಂಪು ಗುಂಪಾದ ದೀಪದ ಗುಡ್ಡ ಪ್ರತ್ಯಕ್ಷವಾದ್ದನ್ನು ಕಂಡೆವು, ಚಾರ್ಮಾಡಿ ಘಾಟಿ ಪ್ರವೇಶದ್ವಾರದ ಗುಡ್ಡದಲ್ಲಿ. ಇದನ್ನು ನಿರೀಕ್ಷಿಸಿರಲಿಲ್ಲ. ನಂಬಕ್ಕೇ ಆಗ್ತಿಲ್ಲ. ಇಡೀ ಗುಡ್ಡ ಜಗಮಗಿಸುತ್ತ, ಜಗ್‌ ಜಗ ಜಗ್‌ ಎನ್ನುತ್ತಿದೆ. ಒಂದು ಗುಡ್ಡ ಆದ ಮೇಲೆ ಇನ್ನೊಂದು ಮತ್ತೂಂದು ಮಗದೊಂದು ಮಿನುಗುತ್ತಿದೆ, ಅಪ ಅಪಾ! ಏನು ಹೇಳ್ಳೋದು ಮಿಂಚು ಹುಳುಗಳ ಮಿಣುಕು ಲೋಕಕ್ಕೆ! ಎಷ್ಟೋ ಹೊತ್ತು ನೋಡುತ್ತಾ, ನಿಂತಿದ್ದೆವು. ಕತ್ತಲೆ ಆವರಿಸಿದ್ದು ಗೊತ್ತೇ ಆಗಲಿಲ್ಲ.

ಸುಸ್ಮಿತಾಳ ಮದುವೆಯಾಗಿತ್ತು. ಮಳೆಗಾಲ ಸಂಪೂರ್ಣ ನಿಂತಿತ್ತು. ನವೆಂಬರ್‌ ತಿಂಗಳು, ಆಪೀಸಿಗೆ ರಜೆ ಇತ್ತೆಂದು ಮಗಳು, ಅಳಿಯ ದೀಪಕ್‌ ನಮ್ಮನ್ನು ಸೇರಿಕೊಂಡಿದ್ದರು. “ಚಾರ್ಮಾಡಿಗೆ ಹೋಗೋಣ ಬರ್ರೋ’ ಎನ್ನುತ್ತಾ, ತೇಜಸ್ವಿ ಹೊರಡಲು ಸಿದ್ಧರಾಗಿ ಕೈಯಲ್ಲಿ ಕಾರಿನ ಕೀಯನ್ನೂ ಹಿಡಿದಿದ್ದರು. ಮನೆಕೆಲಸ ಪೂರೈಸಿತ್ತು, ನಾನೂ ಹೊರಟೆ. ಕಾಡು ಕಾಡುತ್ತಲೇ ಇರುತ್ತೆ. ಅಲ್ಲಿ ಮೋಡ ಇಲ್ಲ, ಮಂಜೂ ಇಲ್ಲ. ಸ್ವತ್ಛ ಕಾಡು ಕಣ್ಣಿಗೆ ರಾಚುತ್ತಿದೆ. ದೀಪಕ್‌, ನಾನು ಆಚೀಚೆ ಚೂರು ತಿರುಗಾಡುತ್ತಿದ್ದೆವು. ಸುಸ್ಮಿತಾ, ಕ್ಯಾಮೆರಾ ಕಣ್ಣಲ್ಲಿ ನೋಡುತ್ತಿದ್ದಳು. ತೇಜಸ್ವಿ ಮಾತ್ರ ರಸ್ತೆ ಬದಿಯಲ್ಲಿ ಏರಿಸಿದ್ದ ಸಣ್ಣ ಕಟ್ಟೆ ಮೇಲೆ ಎಡಗಾಲನ್ನಿಟ್ಟು ನಿಂತು ನೋಡುತ್ತಲೇ ಇದ್ದರು. ಎಡಗೈ, ಬಾಯಿ ಮುಚ್ಚಿದಂತಿತ್ತು. ಕಣ್ಣು ಕಿರಿದು ಮಾಡಿಕೊಂಡು ನಿಟ್ಟಿಸಿ, ಒಂದೇ ಕಡೆ ದಿಟ್ಟಿಸಿ ನೋಡುತ್ತಿದ್ದರು. ಮಧ್ಯೆ ಕಿರಿದಾದ ದಾರಿಯಲ್ಲಿ ಏನೋ ಒಂದು ಚಲಿಸುತ್ತಿರುವಂತೆ ಕಾಣುತ್ತಿದೆ ಅಲ್ವಾ? ಲಾರಿ. ಬಹುಶಃ ಮರ ಕಡಿಯುವವರು ಇರಬಹುದು. ಕಾಡುಗಳ್ಳರು ದರೋಡೆ ನಡೆಸುತ್ತಿರಬಹುದೆಂದು ನಿಟ್ಟುಸಿರಿಟ್ಟರು. ಮರ ಕಡೀತಾರೆ, ಆದರೆ ಆ ಮರದ ಹಣ್ಣನ್ನು ತಿಂದು ಜೀವಿಸುತ್ತಿದ್ದ ಹಕ್ಕಿಗಳು ಆಹಾರವಿಲ್ಲದೆ ವಿನಾಶವಾಗುತ್ತವೆ.

 

ಆ ಹಕ್ಕಿಯ ಅಂಗಾಂಗಗಳು ಆ ಹಣ್ಣನ್ನು ತಿಂದು ಅರಗಿಸಿಕೊಳ್ಳಲಷ್ಟೇ ಮಾರ್ಪಾಡಾಗಿರುತ್ತೆ. ಹೀಗೆ ಮರ ಕಡಿದರೆ, ಅದಕ್ಕೆ ಆಹಾರವಾದರೂ ಎಲ್ಲಿಯದು? “ಬೆಟ್ಟ, ಮಳೆ, ಕಾಡು, ನದಿ, ಕಟ್ಟೆ, ಪೈರು, ಅನ್ನಕ್ಕೂ ನಮಗೂ ಇರುವ ಸಂಬಂಧಗಳನ್ನು ನಾವು ಮುಖ್ಯ ಎಂದು ಭಾವಿಸುವುದಾದರೆ, ಕಾಡೊಳಗಿನ ಮರ, ಎಲೆ, ಕ್ರಿಮಿ, ಕೀಟ, ಪಶುಪಕ್ಷಿಗಳ ಸಂಬಂಧವನ್ನೂ ನಾವು ಗೌರವಿಸಲೇಬೇಕು. ಇವೆಲ್ಲ ಒಂದು ಜೀವನ್ಮಯ ಕುಣಿಕೆಯ ಅವಿಭಾಜ್ಯ ಅಂಗಗಳಲ್ಲವೇ? ಇಂಥ ಕಾಡು ಏನು ಗೋಪ್ಯತೆಯನ್ನು ಕಾಪಾಡಿಕೊಂಡು ಬರುತ್ತಿದೆಯೋ, ಅದನ್ನು ಭೇದಿಸುವುದಾದರೂ ಎಂತು? ಹೇಗೆ?’- ತೇಜಸ್ವಿ ಪ್ರಶ್ನೆ.

ಒಮ್ಮೆ (1993ರಲ್ಲಿ) ತೇಜಸ್ವಿ, ಗೆಳೆಯ ರಘುವಿನ ಜೊತೆ ಸ್ಕೂಟರಿನಲ್ಲಿ ಮಂಗಳೂರಿಗೆ ಹೋಗಿದ್ದರು. ಅಲ್ಲಿನ ಕಾರ್ಯಕ್ರಮ ಮುಗಿದ ನಂತರ, ಗೆಳೆಯ ಬಸವರಾಜು ಮನೆಯಲ್ಲಿ ಊಟ, ಹರಟೆ ಪೂರೈಸಿ, ಹೊರಡುವಾಗ ರಾತ್ರೆ 12 ಗಂಟೆ. ಕಾಡಿನ ದಾರಿ ಮಧ್ಯೆ ಹೋಗಬೇಕಾಗುತ್ತೆ, ಇಷ್ಟು ತಡವಾಗಿ ಹೊರಡುವುದು ಬೇಡವೆಂದು ಎಷ್ಟೇ ಆಗ್ರಹಿಸಿದರೂ ಇವರು ಹೊರಟೇಬಿಟ್ಟರಂತೆ. ಮುಂದಿನದನ್ನು ತೇಜಸ್ವಿ ಮಾತಲ್ಲೇ ಕೇಳಿರಿ-

 

“ಚಾರ್ಮಾಡಿ ಕಣಿವೆಯ ನಟ್ಟನಡುವೆ ಕುಳಿತು, ಕೆಳಗೆ ಹರಿಯುವ ನದಿಯ ಭೋರ್ಗರೆತ ಕೇಳುತ್ತಾ, ಪ್ರಾಣಿಗಳಿಲ್ಲದೆ ಬಂಜರಾಗುತ್ತಿರುವ ನಮ್ಮ ಕಾಡುಗಳ ಬಗ್ಗೆ ಚಿಂತಿಸಿ, ಅನಂತರ ಅಲ್ಲಿಂದ ಹೊರಟೆವು. ಅಣ್ಣಪ್ಪ ದೇವರ ಗುಡಿ ದಾಟಿ, ಕೊಂಚ ದೂರ ಬಂದಾಗ, ಹಠಾತ್ತಾಗಿ ಸ್ಕೂಟರಿನ ಮಬ್ಬು ದೀಪಕ್ಕೆ ಯಾವುದೋ ಪ್ರಾಣಿಯ ಎರಡು ಕಣ್ಣುಗಳು ದಾರಿಯ ನಡುವೆ ನಮ್ಮ ಕಡೆಗೇ ಟಾರ್ಚ್‌ ಬಿಟ್ಟಹಾಗೆ ಮಿನುಗಿದವು. ದಾರಿಯಲ್ಲಿ ಸಿಕ್ಕು ದೌಡಾಯಿಸುವ ಪ್ರಾಣಿಗಳ ಹಿಂದೆ ಸ್ಕೂಟರ್‌ ಬಿಟ್ಟುಕೊಂಡು ಓಡಿಸುವುದು ನನ್ನದೊಂದು ಅಭ್ಯಾಸ. ಅದರ ಹಿಂದೆ ಸ್ಕೂಟರ್‌ ವೇಗವಾಗಿ ಓಡಿಸಿದೆ. ಸ್ಕೂಟರಿ ಗಿಂತ ವೇಗವಾಗಿ, ಲೀಲಾಜಾಲ ವಾಗಿ ಆ ಪ್ರಾಣಿ ಓಡಿತು. ಇದ್ದಕ್ಕಿದ್ದಂತೆ ಓಡುವುದನ್ನು ನಿಲ್ಲಿಸಿದ ಅದು ತಿರುಗಿ ನಿಂತಿತು. ಸ್ಕೂಟರಿನ ಬ್ರೇಕ್‌ ಬಲವಾಗಿ ಒತ್ತಿ ನಿಲ್ಲಿಸುತ್ತಾ ನೋಡುತ್ತೇವೆ, ಚಿರತೆ! ಆರರೆ ಚಿರತೆ! “ತಿರುಗ್ಸಿ, ಸ್ಕೂಟರ್ನ’- ಕೂಗಿದ ರಘು. ಈಗ ಓಡುವುದು ನಮ್ಮ ಸರದಿ, ಬೆನ್ನು ಹತ್ತುವುದು ಚಿರತೆಯ ಸರದಿ! ಆದರೆ, ಅಷ್ಟರಲ್ಲಿ ಧರ್ಮಸ್ಥಳದ ಬಸ್ಸು ಎದುರಿಂದ ಬಂತು. ಚಿರತೆ ಕ್ಷಣಾರ್ಧದಲ್ಲಿ ಪಕ್ಕದ ಕಮರಿಯ ಕಡೆಗೆ ನೆಗೆದು ದಟ್ಟ ಕಾಡಿನೊಳಗೆ ಮಾಯವಾಯ್ತು. ನನಗೆ ಚಿರತೆ ಎದುರಾದಾಗ ಒಂದು ತಿಲಮಾತ್ರವೂ ಹೆದರಿಕೆಯಾಗಲಿಲ್ಲ’.

 

ಒಂದು ಕಾಲದಲ್ಲಿ ನರಭಕ್ಷಕ ಹುಲಿ- ಚಿರತೆಗಳು ಇಡೀ ಹಳ್ಳಿಗಳನ್ನೇ ಜೀವಭಯದಲ್ಲಿ ಹೆದರಿ ನಡುಗುವಂತೆ ಮಾಡಿದ್ದವು ಎನ್ನುವುದನ್ನು ಕಲ್ಪಿಸಿಕೊಳ್ಳಲು ಸಹ ಈಗ ಸಾಧ್ಯವಿಲ್ಲದ ಹೊಸ ತಲೆಮಾರುಗಳು ಬಂದಿವೆ. ಕಾಡು ಮತ್ತು ಕಾಡುಪ್ರಾಣಿಗಳನ್ನು ಮನುಷ್ಯ ಸವಾಲಿನಂತೆ ಎದುರಿಸಬೇಕಾಗಿದ್ದ ಕಾಲ ಈ ತಲೆಮಾರುಗಳ ಪಾಲಿಗೆ ಕೇವಲ, ದೆವ್ವ- ಭೂತಗಳ ಕತೆಗಳಂತೆ ಕಾಣುತ್ತವೆ. ಚಾರ್ಮಾಡಿಯ ಪ್ರವೇಶದ್ವಾರದ ಹತ್ತಿರದ ಗುಡ್ಡದ ನೆತ್ತಿ ಮೇಲೆ “ಮಲಯ ಮಾರುತ’ ಎಂಬೊಂದು ಅರಣ್ಯ ಇಲಾಖೆಯವರ ಪ್ರವಾಸಿ ತಾಣವಿದೆ. ಸ್ವರ್ಗ ಸುಂದರ. ಇದನ್ನು ಕಟ್ಟಿದ ಹೊಸತರಲ್ಲಿ ಅಂದರೆ, ಸುಮಾರು ಹದಿನೈದು- ಇಪ್ಪತ್ತು ವರ್ಷಗಳ ಹಿಂದೆ ತೇಜಸ್ವಿ, ನಾನು, ಮಕ್ಕಳು- ಅಳಿಯಂದಿರೊಟ್ಟಿಗೆ ಹೋಗಿದ್ದೆವು, ಅಲ್ಲಿಗೆ. ಆ ಕಟ್ಟಡದ ಗೃಹಪ್ರವೇಶ ಇನ್ನೂ ಆಗಿರಲಿಲ್ಲ. ಸುತ್ತಲಿನ ಮಾಯಾ ಲೋಕದ ತಾಣ ನೋಡುತ್ತಿರುವಾಗ, ನಾವು ನಿಂತಿದ್ದ ಎತ್ತರದ ಜಾಗದಲ್ಲಿ ಒಡ್ಡ ಕಂಬವೊಂದು ಕಂಡಿತು. “ಒಮ್ಮೆ ಚಾರ್ಲಿ ಚಾಪ್ಲಿನ್‌ ಹೀಗೇ ತಿರುಗಾಟಕ್ಕೆ ಹೋಗಿದ್ದಾಗ, ಅಲ್ಲೊಂದು ಕಂಬ ಕಂಡನು! ತುದಿಯಲ್ಲಿ ಸಣ್ಣ ಬೋರ್ಡ್‌ ನೇತು ಹಾಕಿದ್ದರಂತೆ. ಅದರಲ್ಲಿ ಏನು ಬರೆದಿರುವರೆಂಬ ಕುತೂಹಲದಿಂದ ಚಾಪ್ಲಿನ್‌, ಕಂಬ ಹತ್ತಿದ. WET PAINT BE CAREFUL ಎಂದು ಬರೆದಿದೆ ಎನ್ನುತ್ತಾ ಜರ್ರೆಂದು ಜಾರಿ ಬಂದಿಳಿದನಂತೆ’! - ತೇಜಸ್ವಿ ಮಾತಿಗೆ ಎಲ್ಲರೂ ಗೊಳ್ಳೆಂದು ನಕ್ಕಿದ್ದೆವು.

ಕೊಟ್ಟ ಕೊನೆಯ ಮಾತು. 2007, ಏಪ್ರಿಲ್‌ 4. ಮಗಳು ಈಶಾನ್ಯೆ, ಅಳಿಯ ಜ್ಞಾನೇಶ್‌, ಮೊಮ್ಮಗಳು ವಿಹಾ, ಬೆಂಗಳೂರಿನಿಂದ ಬಂದು ನಮ್ಮನ್ನು ಸೇರಿಕೊಂಡಿ ದ್ದರು. ಎಂದಿನಂತೆ ತೇಜಸ್ವಿ ಎಲ್ಲರನ್ನೂ ಕರೆದುಕೊಂಡು ಚಾರ್ಮಾಡಿಗೆ ಹೊರಟರು. ಆ ಕಡೆ ಈ ಕಡೆ

ನಿಂತು ನಿಂತು ನೋಡುತ್ತಾ ತಿರುಗಾಡುತ್ತ, ಒಂದು viewing point ನಲ್ಲಿ ನಿಂತರಂತೆ. ಹಾಗೇ ನೋಡುತ್ತಿರುವಾಗ ಮಗಳಿಗೆ ಹೇಳಿದ್ರಂತೆ, ನಾನು ಇನ್ನು ಮಾಯಾಲೋಕ-1ರಂತೆ ಬರೆಯೋಲ್ಲ. ಏನಿದ್ರೂ ಕರ್ವಾಲೊ ರೀತಿಯಂತೆ ಬರೆಯುವೆನೆಂದರು. ಮರುದಿನವೇ ಅವರು ಮಾಯಾಲೋಕದ ಒಳಗೇ ಹೊಕ್ಕರು!­

 

.ರಾಜೇಶ್ವರಿ ತೇಜಸ್ವಿ

ಟಾಪ್ ನ್ಯೂಸ್

Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ

Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದ್ರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ

18

ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸುವಂತಹ ನೀಚತನಕ್ಕೆ ಬಿಜೆಪಿ ಇಳಿದಿದೆ-ಚನ್ನರಾಜ ಹಟ್ಟಿಹೊಳಿ

Hubballi: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ… ಮೊಬೈಲ್, ಬೈಕ್ ವಶ

Hubballi: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ… ಮೊಬೈಲ್, ಬೈಕ್ ವಶ

ತಾಳಿಭಾಗ್ಯ ಯೋಜನೆ ತಂದ ಕಾಂಗ್ರೆಸ್ ಕಿತ್ತುಕೊಳ್ಳುವ ಕೆಲಸ ಎಂದೂ ಮಾಡಲ್ಲ: H.K. Patil

ತಾಳಿಭಾಗ್ಯ ಯೋಜನೆ ತಂದ ‘ಕಾಂಗ್ರೆಸ್’ ಕಿತ್ತುಕೊಳ್ಳುವ ಕೆಲಸ ಎಂದೂ ಮಾಡಲ್ಲ: H.K. Patil

Mumbai Airport: ನ್ಯೂಡಲ್ಸ್‌ ಪ್ಯಾಕೇಟ್‌ ನೊಳಗೆ ಕೋಟ್ಯಂತರ ಮೌಲ್ಯದ ವಜ್ರ ಕಳ್ಳಸಾಗಣೆ!

Mumbai Airport: ನ್ಯೂಡಲ್ಸ್‌ ಪ್ಯಾಕೇಟ್‌ ನೊಳಗೆ ಕೋಟ್ಯಂತರ ಮೌಲ್ಯದ ವಜ್ರ ಕಳ್ಳಸಾಗಣೆ!

ʼದುರ್ಗಿʼಯಾಗಿ ಚಂದನವನಕ್ಕೆ ಕಾಲಿಟ್ಟ ಕಾಲಿವುಡ್‌ ಬೆಡಗಿ: ಡಾಲಿ ಜೊತೆ ರೊಮ್ಯಾನ್ಸ್

ʼದುರ್ಗಿʼಯಾಗಿ ಚಂದನವನಕ್ಕೆ ಕಾಲಿಟ್ಟ ಕಾಲಿವುಡ್‌ ಬೆಡಗಿ: ಡಾಲಿ ಜೊತೆ ರೊಮ್ಯಾನ್ಸ್

ಮಗಳ ಪ್ರಕರಣ ದಿಕ್ಕು ತಪ್ಪುತ್ತಿದೆ ಎಂದಿದ್ದ ನೇಹಾಳ ತಂದೆ ರಾಜ್ಯ ಸರಕಾರದ ಕ್ಷಮೆ ಕೇಳಿದ್ದೇಕೆ?

ಮಗಳ ಪ್ರಕರಣ ದಿಕ್ಕು ತಪ್ಪುತ್ತಿದೆ ಎಂದಿದ್ದ ನೇಹಾಳ ತಂದೆ ರಾಜ್ಯ ಸರಕಾರದ ಕ್ಷಮೆ ಕೇಳಿದ್ದೇಕೆ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ

Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದ್ರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ

18

ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸುವಂತಹ ನೀಚತನಕ್ಕೆ ಬಿಜೆಪಿ ಇಳಿದಿದೆ-ಚನ್ನರಾಜ ಹಟ್ಟಿಹೊಳಿ

Belagavi Lok sabha: ಧರ್ಮಯುದ್ಧಕ್ಕಿಂತ ಮೊದಲೇ ದಿಂಗಾಲೇಶ್ವರ ಶ್ರೀ ಶಸ್ತ್ರತ್ಯಾಗ!

Belagavi Lok sabha: ಧರ್ಮಯುದ್ಧಕ್ಕಿಂತ ಮೊದಲೇ ದಿಂಗಾಲೇಶ್ವರ ಶ್ರೀ ಶಸ್ತ್ರತ್ಯಾಗ!

Hubballi: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ… ಮೊಬೈಲ್, ಬೈಕ್ ವಶ

Hubballi: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ… ಮೊಬೈಲ್, ಬೈಕ್ ವಶ

ತಾಳಿಭಾಗ್ಯ ಯೋಜನೆ ತಂದ ಕಾಂಗ್ರೆಸ್ ಕಿತ್ತುಕೊಳ್ಳುವ ಕೆಲಸ ಎಂದೂ ಮಾಡಲ್ಲ: H.K. Patil

ತಾಳಿಭಾಗ್ಯ ಯೋಜನೆ ತಂದ ‘ಕಾಂಗ್ರೆಸ್’ ಕಿತ್ತುಕೊಳ್ಳುವ ಕೆಲಸ ಎಂದೂ ಮಾಡಲ್ಲ: H.K. Patil

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.