ದೀಪಕ್ ಪುನಿಯ ವ್ಯಕ್ತಿಯಲ್ಲ, ಸಂದೇಶ

Team Udayavani, Oct 5, 2019, 3:03 AM IST

ವಿಶ್ವ ಕ್ರೀಡೆಯಲ್ಲಿ ಭಾರತಕ್ಕೆ ಇಲ್ಲಿಯವರೆಗೆ ನಿರಾಸೆಯೇ ಗತಿಯಾಗಿತ್ತು. ಕಳೆದ ಕೆಲವು ವರ್ಷಗಳಿಂದ ಅಂತಹ ಸ್ಥಿತಿ ನಿಧಾನಕ್ಕೆ ಬದಲಾಗುತ್ತಿದೆ. ಭಾರತೀಯರು ವಿಶ್ವಮಟ್ಟದ ಕೂಟಗಳಲ್ಲಿ ಪದಕ ಗೆಲ್ಲುತ್ತಿದ್ದಾರೆ. ಜೊತೆಗೆ ಹೊಸ ಭರವಸೆಗೆ ಕಾರಣವಾಗಿದ್ದಾರೆ. ಅಂತಹದೊಂದು ಭರವಸೆ ಕುಸ್ತಿಪಟು ದೀಪಕ್‌ ಪುನಿಯ.

ಇಲ್ಲ, ಈಗ ಹತ್ತುವರ್ಷಗಳ ಹಿಂದೆ ಇದ್ದಂತಹ ಸ್ಥಿತಿ ಈಗ ಇಲ್ಲ. ಭಾರತೀಯ ಕ್ರೀಡಾಕ್ಷೇತ್ರದಲ್ಲಿ ಒಂದು ಭರವಸೆ ಕಾಣಿಸುತ್ತಿದೆ. ಎಲ್ಲ ಕ್ರೀಡೆಗಳಲ್ಲೂ ತಾರೆಯರು ಹುಟ್ಟಿಕೊಳ್ಳುತ್ತಿದ್ದಾರೆ. ಇದು ಭಾರತದ ಕ್ರೀಡಾಭವಿಷ್ಯದ ಬಗ್ಗೆ ಒಂದು ನಂಬಿಕೆ ಮೂಡಿಸಿದೆ. ಪ್ರತೀ ಬಾರಿ ಒಲಿಂಪಿಕ್ಸ್‌ ಮುಗಿಸಿಕೊಂಡು ಬರುವಾಗಲೂ ಕಾಣುತ್ತಿದ್ದ ಹತಾಶೆ ಇನ್ನು ಕಾಣಲಾರದು ಎನ್ನುವುದಂತೂ ಸತ್ಯ. ಬಹುಶಃ ಇನ್ನೊಂದೆರಡು ಒಲಿಂಪಿಕ್ಸ್‌ ಮುಗಿಯುವಾಗ ವಿಶ್ವ ಕ್ರೀಡಾರಂಗದಲ್ಲಿ ಭಾರತದ ಬಾವುಟ ಎತ್ತರದಲ್ಲಿ ಹಾರುತ್ತದೆ ಎಂದು ಹೇಳಿದರೆ, ಅದನ್ನು ಉತ್ಪ್ರೇಕ್ಷೆ ಎನ್ನಲು ಸಾಧ್ಯವಿಲ್ಲ.

ಇಂತಹದೊಂದು ಭರವಸೆ ಮೂಡುವುದಕ್ಕೆ ಕಾರಣ ಇತ್ತೀಚೆಗೆ ಮುಗಿದ ಎರಡು ವಿಶ್ವಕಪ್‌ಗ್ಳು. ಕಜಕಸ್ತಾನದ ನುರ್‌ ಸುಲ್ತಾನ್‌ನಲ್ಲಿ ನಡೆದ ಕುಸ್ತಿ ವಿಶ್ವಕಪ್‌ ಒಂದು ಕಡೆ, ರಷ್ಯಾದ ಎಕಟೆರಿನ್‌ಬರ್ಗ್‌ನಲ್ಲಿ ನಡೆದ ಬಾಕ್ಸಿಂಗ್‌ ವಿಶ್ವಕಪ್‌ ಇನ್ನೊಂದು ಕಡೆ. ಇಲ್ಲಿನ ಫ‌ಲಿತಾಂಶಗಳು ನಮ್ಮಲ್ಲಿ ಭರವಸೆಯನ್ನು ಬಿತ್ತಿವೆ. ಈ ಕೂಟದ ಮೂಲಕ ಭಾರತ ಕ್ರೀಡಾಜಗತ್ತಿಗೆ ಒಂದು ಬಲವಾದ ಸಂದೇಶ ರವಾನಿಸಿದೆ. ಆ ಸಂದೇಶದ ಹೆಸರು ದೀಪಕ್‌ ಪುನಿಯ! ಕೆಲವು ವರ್ಷಗಳ ಹಿಂದೆ ಭಾರತದ ಕುಸ್ತಿರಂಗದಲ್ಲಿ ಕೇಳಿಬರುತ್ತಿದ್ದ ದೊಡ್ಡ ಹೆಸರು ಸುಶೀಲ್‌ ಕುಮಾರ್‌. ಇವರು ಎರಡು ಒಲಿಂಪಿಕ್ಸ್‌ ನಲ್ಲಿ ಒಂದು ಕಂಚು, ಒಂದು ಬೆಳ್ಳಿ ಪದಕ ಗೆದ್ದಿದ್ದರು.

ಅನಂತರ ನರಸಿಂಗ್‌ ಯಾದವ್‌ ಹೆಸರು ಕೇಳಿಬಂತು. ಉದ್ದೀಪನ ವಿವಾದಕ್ಕೆ ಸಿಕ್ಕಿದ ನಂತರ ಅವರ ಭವಿಷ್ಯ ಕಮರಿ ಹೋಯಿತು. ಅದಾದ ನಂತರ ಏಷ್ಯಾಡ್‌ ಮತ್ತು ಕಾಮನ್‌ವೆಲ್ತ್‌ನಲ್ಲಿ ಚಿನ್ನ ಗೆದ್ದ ಭಜರಂಗ್‌ ಪುನಿಯ ವಿಶ್ವವೇದಿಕೆಯಲ್ಲಿ ಮೆರೆಯಲು ಶುರು ಮಾಡಿದರು. ಸದ್ಯ 65 ಕೆಜಿ ವಿಭಾಗದಲ್ಲಿ ಭಜರಂಗ್‌ ಪುನಿಯ ವಿಶ್ವದಲ್ಲಿ ಪ್ರಬಲ ಸ್ಪರ್ಧಿ. ಮೊನ್ನೆ ಕಜಕಸ್ತಾನದಲ್ಲಿ ಮುಗಿದ ಕೂಟದಲ್ಲಿ ಅವರು ಕಂಚು ಗೆದ್ದಿದ್ದಾರೆಂಬುದನ್ನು ಹೊರತುಪಡಿಸಿದರೆ, ಅವರು ವಿಶ್ವದಲ್ಲೇ ನಂ.2 ಕುಸ್ತಿಪಟು. ಅಂತಹ ಒಬ್ಬ ವಿಶ್ವವಿಖ್ಯಾತ ಸ್ಪರ್ಧಿ ಇರುವಾಗಲೇ, ಭಾರತದ ಕುಸ್ತಿ ಬಾನಂಗಳದಲ್ಲಿ ಕಾಣಿಸಿಕೊಂಡ ಇನ್ನೊಬ್ಬ ತಾರೆ ದೀಪಕ್‌ ಪುನಿಯ. ಈ ಹುಡುಗನಿಗೆ ಈಗ ಕೇವಲ 26 ವರ್ಷ.

ವಯಸ್ಸು 26 ವರ್ಷ ಮುಟ್ಟುವಷ್ಟರಲ್ಲಿ ಈತ 86 ಕೆ.ಜಿ.ವಿಭಾಗದಲ್ಲಿ ವಿಶ್ವ ನಂ.1 ಕುಸ್ತಿಪಟುವಾಗಿ ಬದಲಾಗಿದ್ದಾರೆ. ಮೊನ್ನೆ ಸ್ವಲ್ಪ ಅವಕಾಶ ಸಿಕ್ಕಿದ್ದರೆ, ಚಿನ್ನ ಗೆದ್ದು ಇತಿಹಾಸ ನಿರ್ಮಿಸುತ್ತಿದ್ದದ್ದು ಖಾತ್ರಿ. ಆದರೆ ಇರಾನಿನ ಹಸನ್‌ ಯಜಾªನಿ ವಿರುದ್ಧ ಅವರಿಗೆ ಸ್ಪರ್ಧಿಸಲು ಸಾಧ್ಯವಾಗಲಿಲ್ಲ. ಅವರ ಎಡಪಾದದಲ್ಲಿ ಅಷ್ಟು ನೋವಿತ್ತು. ತಾವಾಗೇ ಅಂತಿಮ ಸ್ಪರ್ಧೆಯಿಂದ ಹೊರನಡೆದರು. ಚಿನ್ನ ಗೆಲ್ಲುವ ಅಪೂರ್ವ ಅವಕಾಶವನ್ನು ತಪ್ಪಿಸಿಕೊಂಡ ಅವರು, ಅದಕ್ಕಾಗಿ ಬಹಳ ಪರಿತಪಿಸಿದರು. ಇದೇನು ಅಂತಿಮ ಅವಕಾಶವಲ್ಲ ತಾನೇ? ಗೆಲ್ಲಲು ಇನ್ನೂ ಸಾಕಷ್ಟು ಅವಕಾಶಗಳು ಇದ್ದೇ ಇವೆ.

ಪುನಿಯ ಇತಿಹಾಸ: ಹಿರಿಯರ ವಿಭಾಗದಲ್ಲಿ ಸೆಣಸುವ ಮುನ್ನ ದೀಪಕ್‌ ಪುನಿಯ ಕಿರಿಯರ ವಿಭಾಗದಲ್ಲಿ ಬಲವಾದ ಹೆಜ್ಜೆಯಿಟ್ಟಿದ್ದರು. ವಿಶ್ವ ಕೆಡೆಟ್‌ ಕೂಟದಲ್ಲಿ ಚಾಂಪಿಯನ್‌ ಆಗಿದ್ದರು. ವಿಶ್ವ ಕಿರಿಯರ ಕೂಟದಲ್ಲೂ ಚಾಂಪಿಯನ್‌ ಆಗಿದ್ದರು. ಅದನ್ನು ನೋಡಿದಾಗ, ಹಿರಿಯರ ಕೂಟದಲ್ಲಿ ದೀಪಕ್‌ ಪುನಿಯ ಚಿನ್ನ ಗೆಲ್ಲುವುದೇನು ಕಷ್ಟವಲ್ಲ ಎನ್ನುವ ಅಭಿಪ್ರಾಯ ದಟ್ಟವಾಗಿತ್ತು. ಅದನ್ನು ತಮ್ಮ ಮೊದಲ ಯತ್ನದಲ್ಲೇ ದೀಪಕ್‌ ಸರಿಯೆಂದು ಸಮರ್ಥಿಸಿಕೊಂಡರು. ಆತಿಥೇಯ ಕಜಕಸ್ತಾನದ ಅಡಿಲೆಟ್‌ ದಾವುಯೆವ್‌, ತಜಿಕಿಸ್ತಾನದ ಬಕೂರ್‌ ಕೊಡಿರವ್‌, ಕೊಲಂಬಿಯದ ಮಿಲ್ಟನ್‌ ಇಜಿರ್ಡೊ, ಸ್ವಿಜರ್ಲೆಂಡ್‌ನ‌ ಸ್ಟೆಫಾನ್‌ ರೀಚತ್‌ರಂತಹ ದಿಗ್ಗಜರನ್ನು ಸೋಲಿಸಿ ಅಂತಿಮ ಸುತ್ತಿಗೇರಿದ್ದರು.

ಅವರ ಆಗಿನ ಓಟವನ್ನು ಗಮನಿಸಿದರೆ, ಅಂತಿಮ ಪಂದ್ಯದಲ್ಲಿ ಇರಾನಿ ಯಜಾªನಿಯನ್ನು ಸೋಲಿಸುವುದು ಕಷ್ಟವಾಗಿರಲಿಲ್ಲ. ಆಗ ಅವರಿಗೆ ಕಣ್ಣು ಮತ್ತು ಎಡಪಾದದ ನೋವು ಕಾಡಿತು. ಈ ವೇಳೆ ಸ್ಪರ್ಧಿಸಿದರೆ ಮುಂದೆ ಗಾಯ ತೀವ್ರವಾಗಿ ವೃತ್ತಿಜೀವನವೇ ಅಂತ್ಯವಾಗುವ ಸಾಧ್ಯತೆಯಿತ್ತು. ಈ ಅಪಾಯವನ್ನು ಎಳೆದುಕೊಳ್ಳಲು ಮನಸ್ಸು ಮಾಡದ ದೀಪಕ್‌ ಪುನಿಯ, ಸ್ಪರ್ಧೆಯನ್ನು ಕೈಚೆಲ್ಲಿದರು. ಹಾಗಂತ ಅವರೇನು ಸೋಲಲಿಲ್ಲ. ಆಡಲಿಳಿಯಲಿಲ್ಲ ಅಷ್ಟೇ. ಸೋತು ಬೆಳ್ಳಿ ಗೆದ್ದಿದ್ದಲ್ಲ, ಚಿನ್ನವನ್ನು ತಾವಾಗೇ ಬಿಟ್ಟುಕೊಟ್ಟಿದ್ದು.

ವಿಶ್ವ ನಂ.1: ಕೂಟ ಮುಗಿದ ಬೆನ್ನಲ್ಲೇ ವಿಶ್ವ ಕುಸ್ತಿ ಶ್ರೇಯಾಂಕ ಪ್ರಕಟವಾಯಿತು. ಅಲ್ಲಿ ನಿರೀಕ್ಷಿತವೆಂಬಂತೆ 65 ಕೆಜಿ ವಿಭಾಗದಲ್ಲಿ ಭಜರಂಗ್‌ ಪುನಿಯ ವಿಶ್ವ ನಂ.1 ಸ್ಥಾನ ಕಳೆದುಕೊಂಡರು. 2ನೆ ಸ್ಥಾನಕ್ಕೆ ಕುಸಿದರು. ಈ ನೋವನ್ನು ಮರೆಸಿದ್ದು ದೀಪಕ್‌ ಪುನಿಯ. ಅವರು 86 ಕೆ|ಜಿ ವಿಭಾಗದಲ್ಲಿ ವಿಶ್ವ ನಂ.1 ಸ್ಥಾನಕ್ಕೇರಿದರು. ಅಲ್ಲಿಗೆ ವಿಶ್ವ ಕುಸ್ತಿಯಲ್ಲಿ ಭಾರತದ ಮತ್ತೂಂದು ಪ್ರತಿಭೆ ಅರಳಿ ನಿಂತಂತಾಯಿತು. ಈ ಪ್ರತಿಭಾಜ್ಯೋತಿ ಜಾಜ್ವಲ್ಯ­ಮಾನವಾಗಿದೆ.

ಅರಳಿ ನಿಂತ ಮಹಿಳಾ ಜ್ಯೋತಿಗಳು: ಪುರುಷರ ಕುಸ್ತಿಯಲ್ಲಿ ಭಾರತೀಯರು ವಿಶ್ವವಿಜೇತರಾಗುವ ಮಟ್ಟಕ್ಕೆ ಬೆಳೆದಿದ್ದು ಈಗ ಹಳೆಯಸುದ್ದಿ. ಹಾಗಾದರೆ ಮಹಿಳೆಯರ ಕಥೆಯೇನು? ಅವರ ಸಾಧನೆಯೇನು? ಎಂದು ಪ್ರಶ್ನಿಸುವವರಿಗೆ ಇಲ್ಲೂ ಇದೆ ಸಂತಸದ ಸುದ್ದಿ. ಕಳೆದೊಂದು ದಶಕದಿಂದ ಭಾರತದಲ್ಲಿ ವಿಶ್ವಮಟ್ಟದ ಅದ್ಭುತ ಕುಸ್ತಿಪಟುಗಳು ಹೊರಹೊಮ್ಮಿದ್ದಾರೆ. 2010ರ ಕಾಮನ್‌ವೆಲ್ತ್‌ನಲ್ಲಿ ಚಿನ್ನ ಗೆದ್ದ ಗೀತಾ ಫೊಗಾಟ್‌, 2014ರ ಕಾಮನ್‌ವೆಲ್ತ್‌ನಲ್ಲಿ ಚಿನ್ನ ಗೆದ್ದ ಬಬಿತಾ ಫೊಗಾಟ್‌, 2018ರ ಕಾಮನ್‌ವೆಲ್ತ್‌ ಮತ್ತು ಏಷ್ಯಾಡ್‌ನ‌ಲ್ಲಿ ಚಿನ್ನ ಗೆದ್ದ ವಿನೇಶ್‌ ಫೊಗಾಟ್‌, 2016ರ ರಿಯೊ ಒಲಿಂಪಿಕ್ಸ್‌ನಲ್ಲಿ ಕಂಚು ಗೆದ್ದ ಸಾಕ್ಷಿ ಮಲಿಕ್‌ ಇವರೆಲ್ಲ ಅನನ್ಯ ಸಾಧಕಿಯರಿಗೆ ಕುಸ್ತಿ ಜ್ಯೋತಿಯನ್ನು ಬೆಳಗುವ ತೈಲವಾಗಿದ್ದಾರೆ.

ಮೊನ್ನೆಯಷ್ಟೇ ಕಜಕಸ್ತಾನದಲ್ಲಿ ಮುಗಿದ ವಿಶ್ವ ಕುಸ್ತಿ ಸ್ಪರ್ಧೆಯಲ್ಲಿ ವಿನೇಶ್‌ ಫೊಗಾಟ್‌ ಕಂಚು ಗೆದ್ದು ಇತಿಹಾಸ ನಿರ್ಮಿಸಿದ್ದಾರೆ. ಆಕೆಯಿಂದ ಇಲ್ಲಿ ಇನ್ನೊಂದಷ್ಟು ಉತ್ತಮ ಪ್ರದರ್ಶನದ ನಿರೀಕ್ಷೆಯಿದ್ದರೂ, ಆಕೆ ತನ್ನ ದೇಹ ತೂಕದ ವಿಭಾಗವನ್ನು ಕೇವಲ ವರ್ಷದ ಹಿಂದಷ್ಟೇ ಬದಲಿಸಿಕೊಂಡಿದ್ದರು. ಆದ್ದರಿಂದ ಅವರ ಪ್ರದರ್ಶನ ಕಳಪೆ ಎನ್ನಲು ಸಾಧ್ಯವಿಲ್ಲ. ಕಂಚು ಗೆದ್ದಿರುವುದು ಅಮೋಘವೆನ್ನಲೇ ಬೇಕು. ಕಾರಣ, ಈ ಕೂಟದಲ್ಲಿ ಭಾರತದ ಮಹಿಳೆಯೊಬ್ಬರು ಗೆದ್ದ ಏಕೈಕ ಪದಕವಿದು!

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಪಂಡಿತರು, ವೇದಾಂತಿಗಳೇ ತುಂಬಿಕೊಂಡಿದ್ದ ಊರು, ಹೊನ್ನಾವರದ ಕರ್ಕಿ. ಅಲ್ಲಿ ನಿಂತರೆ ಈಗ ಮಂತ್ರಗಳು ಕೇಳಿಸುತ್ತಿಲ್ಲ. ಕೆಲವು ಮನೆಗಳಿಗೆ ಬೀಗ; ಮತ್ತೆ ಕೆಲವು, ಉರುಳಿಬಿದ್ದಿವೆ....

  • ಹುಟ್ಟೂರು ಬಿಟ್ಟು, ಅನ್ನ ಕೊಡುವ, ಬದುಕು ಕಟ್ಟಿಕೊಡುವ ಊರು ಸೇರುವುದು ಈಗಿನ ತಲೆಮಾರಿನ ಹಾಡು. ಅಮೆರಿಕದಲ್ಲಿ ಕಳೆದ ನಾಲ್ಕು ವರ್ಷಗಳಿಂದ ಅರ್ಚಕರಾಗಿ ಸೇವೆ ಸಲ್ಲಿಸುತ್ತಿರುವ...

  • ಕಣ್ಣಗಲಿಸಿಕೊಂಡು ಅಡುಗೆ ಮಾಡುವವರಿಗೇ, ಒಮ್ಮೊಮ್ಮೆ ಪಾಕಪ್ರಯೋಗಗಳು ಕೈಕೊಡುತ್ತವೆ ಅಥವಾ ರುಚಿಸುವುದೇ ಇಲ್ಲ. ಇನ್ನು ಈ ಹುಡುಗ ಏನು ಮಾಡಿಯಾನು? ಎಂದು ಅಚ್ಚರಿಪಟ್ಟೆ....

  • ನಿತ್ಯವೂ ಮನೆಯಲ್ಲಿ ಸಿಲೋನ್‌ ರೇಡಿಯೊ ಹಾಡುತ್ತಿತ್ತು. ಎಪ್ಪತ್ತರ ದಶಕದ ಆ ಕಾಲಕ್ಕೆ ಅದೇ ನಮ್ಮ ಕಣ್ಣಮುಂದಿನ ಗಾಯಕ. ಕೇಳಲು ಇಂಪಾದ ಚಿತ್ರಗೀತೆಗಳನ್ನು ಹೊತ್ತು...

  • ಪುಟ್ಟ ಪುಟ್ಟ ಸೇವೆಯಲ್ಲಿಯೇ ಸ್ವಾಮಿ ಭಕ್ತಿ ಕಾಣುತ್ತಿದ್ದ ಈ ಜೀವ ಕಂಡಿದ್ದು, ಕೋಲ್ಕತ್ತಾದ ಬೇಲೂರು ಮಠದ ಆವರಣದಲ್ಲಿ. ಅಲ್ಲೊಂದು ಕುಡಿವ ನೀರಿನ ನಲ್ಲಿ ಇತ್ತು....

ಹೊಸ ಸೇರ್ಪಡೆ