ದೇವರ ಮಕ್ಕಳು 


Team Udayavani, Nov 10, 2018, 7:25 AM IST

8.jpg

ವಿಕಲ ಚೇತನ ಮಕ್ಕಳನ್ನು ಮುಖ್ಯವಾಹಿನಿಗೆ ತರಬೇಕು. ಅವರನ್ನು ಸಾಮಾನ್ಯ ಮಕ್ಕಳಂತೆಯೇ ನಡೆಸಿಕೊಳ್ಳಬೇಕು. ಬುದ್ಧ ಮಾಂದ್ಯ ಮಕ್ಕಳಿಗೂ ಸಾಮಾನ್ಯ ಮಕ್ಕಳೊಂದಿಗೇ ಓದುವ ಅವಕಾಶ ಸಿಗಬೇಕು ಎಂಬುದು ಬಸವರಾಜ ಮಯಾಗೇರಿಯವರ ವಾದ. ವಿಕಲಚೇತನರನ್ನು “ದೇವರ ಮಕ್ಕಳು’ ಎಂದೇ ನಂಬಿರುವ ಈತ,ಆ ಮಕ್ಕಳ ಸೇವೆಯಲ್ಲಿ ಸಿಗುವ ಖುಷಿ ಎಲ್ಲ ಸಿರಿಸಂಪತ್ತನ್ನು ಮೀರಿದ್ದು ಅನ್ನುತ್ತಾರೆ. 

ಶ್ವೇತಾಳ ತಂದೆಗೆ ಮೂರು ವರ್ಷಗಳ ಹಿಂದೆ ದೇವರಿಗೆ ಶಾಪ ಹಾಕುವುದೇ ಕೆಲಸವಾಗಿತ್ತು. ನಾನೇನು ಕರ್ಮ ಮಾಡಿದ್ದೇನೆ ? ನನಗ್ಯಾಕ ಇಂತಹ ಮಗಳನ್ನ ಕೊಟ್ಟೆ?  ಸಾಮಾನ್ಯ ಮಕ್ಕಳಂತೆ ಅವಳು ಬದುಕುವ ಹಕ್ಕನ್ನು ಯಾಕೆ ಕಿತ್ತುಕೊಂಡೆ ?ವಿಕಲ ಚೇತನರನ್ನು ಸೃಷ್ಟಿಸುವ ಮನಸ್ಸು ಯಾಕೆ ಮಾಡಿದೆ ? 

ಹೀಗೆ… ಒಂದೇ ಎರಡೇ… ನೂರಾರು ಪ್ರಶ್ನೆಗಳನ್ನು ದೇವರ ಮುಂದಿಟ್ಟು ಒಂದು ಕ್ಷಣ ಎದ್ದು ನಿಂತು, ಮುಗಿಲತ್ತ ಮುಖಚಾಚಿ ಗಟ್ಟಿ ಮನಸ್ಸು ಮಾಡಿದಾಗ ಕಣ್ಣು ಒದ್ದೆಯಾಗಿದ್ದವು. ಆಯಿತು ಬಿಡು, ನೀನು ಕೊಟ್ಟಿರುವ ಮಗಳು ನಿನ್ನ ರೂಪ. ಅವಳನ್ನ ಪೋಷಣೆ ಮಾಡುವುದೇ ನಿನ್ನ ಪೂಜೆ ಎಂದು ಮನಸ್ಸಿಗೆ ಸಮಾಧಾನ ಹೇಳಿಕೊಳ್ಳುವಷ್ಟೊತ್ತಿಗೆ ಐದು ವರ್ಷದ ಶ್ವೇತಾ (ಹೆಸರು ಬದಲಿಸಲಾಗಿದೆ)ಕಿರುಚಿದ ಸದ್ದು ಅಂಗಳದಾಟಿತ್ತು. 

ತಕ್ಷಣವೇ ಅವಳ ಬಳಿ ಓಡಿದ ಶ್ವೇತಾಳ ತಂದೆ ಮಲ್ಲಪ್ಪ ಹೊಸೂರ, ಯಾಕೆ, ಏನಾಯಿತು ? ಎಂದು ಪ್ರಶ್ನಿಸುತ್ತಿದ್ದರು. ಅದ್ಯಾವುದೋ ಅಷ್ಪಷ್ಟತೆಗೂ ಸಮೀಪವಿರದ, ಒಂದಿಷ್ಟು ತೊದಲು ನುಡಿ, ವಿಚಿತ್ರವಾದ ಆಂಗಿಕ ಅಭಿನಯದೊಂದಿಗೆ ಶ್ವೇತಾ ಏನನ್ನೋ ಹೇಳುತ್ತಿದ್ದಾಳೆ. ಮಲ್ಲಪ್ಪ ಅವರು ತಕ್ಷಣ,,,ಮೈ ಎಂಜಿಲ್‌,, ಪ್ಲೀಸ್‌ ಬೇಡ. ನಿನಗೆ ಆ ಅದೃಷ್ಟ ಇಲ್ಲ ,ಎನ್ನುತ್ತ ಅವಳನ್ನ ಸಂತೈಸಿ, ಮತ್ತೆ ನಡುಮನೆಯ ಕಟ್ಟೆಯ ಮೇಲಿಳಿಸಿ, ಮನೆಯಂಗಳತ್ತ ಮರಳಿದರು. ಶಾಲೆಗೆ ಹೋಗಲು ಅವಸರ ಮಾಡುತ್ತಿದ್ದ ಅವರ ಇನ್ನೊಬ್ಬ ಮಗಳು ಸಾನ್ವಿ (ಹೆಸರು ಬದಲಿಸಲಾಗಿದೆ)ಯ ಕೈ ಕುಲುಕಿ ಅವಳ ಕೈಯಲ್ಲೊಂದು ಚಾಕೋಲೇಟು ಇಟ್ಟು, ಬೈ…ಟಾಟಾ… ಹುಶಾರು ಮಗಳೇ ಎಂದು ಬೀಳ್ಕೊಡುವ ಹೊತ್ತಿಗೆ ಮತ್ತೆ ಶ್ವೇತಾ ಕಿರುಚಿದಳು. ಮಲ್ಲಪ್ಪ ಅವರು ಮತ್ತೆ ಮನೆಯೊಳಗೆ ಓಡಿದರು. 

ಒಂದೇ ಕುಟುಂಬದ ಮೂವರು ಮಕ್ಕಳೂ ವಿಕಲಚೇತನರು. ಒಬ್ಬಳು ಮಾತ್ರ ಸಾಮಾನ್ಯ. ಅವಳನ್ನ ಶಾಲೆಗೆ ಕಳುಹಿಸುವ ಮೊದಲು ಪ್ರತಿದಿನವೂ ಇನ್ನಿಬ್ಬರು ವಿಕಲಚೇತನರಿಗೆ ಅವರು, ನೀವು ನಾಳೆ ಹೋಗುವಿರಂತೆ ಎಂಬ ಸುಳ್ಳು ವಾಕ್ಯವನ್ನು ಹೇಳಿ ಸಂತೈಸಬೇಕು. ಹೀಗೆ, ಬುದ್ದಿಮಾಂದ್ಯರು, ಕೈ-ಕಾಲು ಊನ, ಬೆನ್ನು ಊನ ಸೇರಿದಂತೆ ಹಲವು ಬಗೆಯ ದೈಹಿಕ ಸಮಸ್ಯೆ ಹೊಂದಿರುವ ವಿಕಲಚೇತನರಿಗೂ ಶಾಲೆಯ ಮೆಟ್ಟಿಲು ಹತ್ತಿಸಲು ಸತತ ಹತ್ತು ವರ್ಷಗಳಿಂದ ಹೆಣಗುತ್ತಿದ್ದಾರೆ, ಧಾರವಾಡದ ಬಸವರಾಜ ಮ್ಯಾಗೇರಿ. 

ಹೌದು…., ಬಸವರಾಜ ಮ್ಯಾಗೇರಿ  ಅವರೀಗ ಧಾರವಾಡ,ಗದಗ, ಹಾವೇರಿ ಜಿಲ್ಲೆಯಲ್ಲಿನ ವಿಕಲಚೇತನರ ಮಕ್ಕಳ ಪಾಲಿನ ಗಾಡ್‌ಫಾದರ್‌ ಆಗಿದ್ದಾರೆ.  ಯಾವ ಮಕ್ಕಳನ್ನು ಅಂಗವಿಕಲರು ಎಂದು ಸಂಬೋಧಿಸಿ ಅವಮಾನಿಸುತ್ತಿದ್ದರೋ, ಅಂತವರ ಬಾಯಿಂದಲೇ ಈ ಮಕ್ಕಳನ್ನು ವಿಶೇಷ ಚೇತನರು, ಚೇತನದ ಚಿಲುಮೆಗಳು ಎಂದೆಲ್ಲ ಕರೆಸಿ ಜಾಗೃತಿ ಮೂಡಿಸಿದ್ದಾರೆ. ವಿಕಲಚೇತನರ ಬಗ್ಗೆ ಕಾಳಜಿ ಮೂಡಿಸಲು ಹಳ್ಳಿ ಹಳ್ಳಿ ಸುತ್ತಿದ್ದಾರೆ. ಇತರ ಮಕ್ಕಳಂತೆ ವಿಕಲಚೇತನರಿಗೂ ಸಮನ್ವಯ ಶಿಕ್ಷಣ ಸಿಕ್ಕಬೇಕು. ಸಾಮಾನ್ಯ ಮಕ್ಕಳೊಂದಿಗೇ ಅವರೂ ಕುಳಿತುಕೊಂಡು ಶಾಲೆ ಕಲಿಯಬೇಕು ಎನ್ನುವ ದೊಡ್ಡ ಕನಸು ಕಂಡು ಹೆಣಗಿದ್ದಾರೆ. 

ನನಗೂ ಶಾಲೆ ಅವ್ವಾ ? 

ವಿಕಲಚೇತನ ಮಕ್ಕಳು ಶಾಲೆ ಕಲಿಯಬೇಕು ಎಂದರೆ ಅವರಿಗೆ ಪ್ರತ್ಯೇಕ ಶಾಲೆಗಳಿವೆ. ಬುದ್ದಿಮಾಂದ್ಯ ಮಕ್ಕಳು, ಕಿವುಡ ಮತ್ತು ಮೂಕ ಮಕ್ಕಳು, ಕೈ-ಕಾಲು ಇಲ್ಲದ ಮಕ್ಕಳು… ಹೀಗೆ ಎಲ್ಲರಿಗೂ ಪ್ರತ್ಯೇಕ ಶಾಲೆಗಳಿವೆ. ಇದಕ್ಕೆ ಸರ್ಕಾರ ಒಂದಿಷ್ಟು ಅನುದಾನವನ್ನೂ ಕೊಡುತ್ತಿದೆ. ಆದರೆ ಬಸವರಾಜ ಮ್ಯಾಗೇರಿಗೆ ಇದು ಬಿಲ್‌ಕುಲ್‌ ಸರಿ ಎನಿಸಲೇ ಇಲ್ಲ.  ವಿಕಲಚೇತನರು ಸಾಮಾನ್ಯ ಮಕ್ಕಳೊಂದಿಗೆ ಇರಬೇಕು. ಅಂದಾಗ ಮಾತ್ರ ಸಾಮಾನ್ಯ ಮಕ್ಕಳಿಗೂ ವಿಕಲಚೇತನ ಮಕ್ಕಳ ಬಗ್ಗೆ ಪ್ರೀತಿ,ಕಾಳಜಿ ಮತ್ತು ಗೌರವ ಬರುತ್ತದೆ ಎನ್ನುವ ತತ್ವ ಅವರದು. ಅದಕ್ಕಾಗಿ ನನಗೂ ಶಾಲೆ ಎನ್ನುವ ಅಭಿಯಾನ ಹಮ್ಮಿಕೊಂಡು ಅಖಂಡ ಧಾರವಾಡ ಜಿಲ್ಲೆಯಲ್ಲಿನ ಹಳ್ಳಿ ಹಳ್ಳಿಗೆ ತಿರುಗಿದರು. 

ಗ್ರಾಮ ಪಂಚಾಯಿತಿಗಳ ಮಟ್ಟದಲ್ಲಿ ಸಭೆಗಳನ್ನು ನಡೆಸಿ, ವಿಕಲಚೇತನ ಮಕ್ಕಳಿಗೂ ಅಕ್ಷರ ಕಲಿಸಲು ಅವಕಾಶವಿದೆ. ಇದನ್ನು ಸರಿಯಾಗಿ ಬಳಸಿಕೊಳ್ಳಿ ಎಂದು ಮನದಟ್ಟು ಮಾಡಿ ಹೇಳಿದರು. ಅದಕ್ಕಾಗಿ ಬೀದಿ ನಾಟಕದ ತಂಡ ಕರೆದುಕೊಂಡು ಜನರಲ್ಲಿ, ಅಂಗನವಾಡಿ ಕಾರ್ಯಕರ್ತರಲ್ಲಿ ವಿಕಲಚೇತನ ಮಕ್ಕಳಿಗೂ ಸಮಾನ ಹಕ್ಕಿದೆ ಎನ್ನುವ ಜಾಗೃತಿ ಮಾಡಿದರು. 

ಗ್ರಾ.ಪಂ.ಗಳ ಮೂಲಕ ಹಂಚಿಕೆಯಾಗುವ ಸರ್ಕಾರದ ಅನುದಾನದಲ್ಲಿ ಶೇ.3 ರಷ್ಟು ಅನುದಾನ ವಿಕಲಚೇತನರಿಗೆ ಇದೆ.  ಅದನ್ನು ವಿಕಲಚೇತನ ಮಕ್ಕಳ ಶಿಕ್ಷಣಕ್ಕೆ ಮತ್ತು ಅವರನ್ನು ಮುಖ್ಯವಾಹಿನಿಗೆ ತರುವ ಪ್ರಯತ್ನಯುತ ಕೆಲಸಗಳಿಗೆ ಬಳಸಬೇಕು ಎಂಬ ಪ್ರಯತ್ನ ಆರಂಭಿಸಿ, ಧಾರವಾಡ, ಗದಗ, ಹಾವೇರಿ, ಬಾಗಲಕೋಟೆ, ವಿಜಯಪುರ ಜಿಲ್ಲೆಗಳಲ್ಲಿ ಈ ಕುರಿತು ಜಾಗೃತಿ ಕಾರ್ಯಕ್ರಮಗಳನ್ನು ಮಾಡಿ ಯಶಸ್ವಿಯಾದರು. 

ಕೊನೆಗೂ “ನನಗೂ ಶಾಲೆ’ ಅಭಿಯಾನ ಯಶಸ್ಸು ಕಂಡಿತು.  ಇದೀಗ ಧಾರವಾಡ-ಹುಬ್ಬಳ್ಳಿಯಲ್ಲಿನ 100 ಕ್ಕೂ ಹೆಚ್ಚು ವಿಕಲಚೇತನ ಮಕ್ಕಳನ್ನು ಶಾಲೆಗೆ ಸೇರಿಸಿ ಅವರನ್ನು ಸಾಮಾನ್ಯ ಮಕ್ಕಳ ಸಾಲಿನಲ್ಲಿ ನಿಲ್ಲಿಸಿದ್ದಾರೆ. ಧಾರವಾಡದ ಸಪ್ತಾಪೂರ ಶಾಲೆಯಲ್ಲಿ ಇದೀಗ 50 ವಿಕಲಚೇತನ ಮಕ್ಕಳು ಸಾಮಾನ್ಯ ವಿದ್ಯಾರ್ಥಿಗಳೊಂದಿಗೆ ಕುಳಿತು ಓದುತ್ತಿದ್ದಾರೆ. ಹಳೆ ಹುಬ್ಬಳ್ಳಿಯ ಶಾಲೆ(ನಂ.1)ರಲ್ಲಿ 51 ವಿಕಲಚೇತನ ವಿದ್ಯಾರ್ಥಿಗಳು, ಸಾಮಾನ್ಯ ಮಕ್ಕಳೊಂದಿಗೆ ಕುಳಿತು ಅಕ್ಷರ ಕಲಿಯುತ್ತಿದ್ದಾರೆ. 

ಇದೀಗ ಬಸವರಾಜ್‌ ಇನ್ನೊಂದು ಹೆಜ್ಜೆ ಮುಂದೆ ಹೋಗಿದ್ದಾರೆ. ವಿಕಲಚೇತನ ಮಕ್ಕಳೂ ಸಾಮಾನ್ಯ ಮಕ್ಕಳಂತೆ ಮನೆಯ ಬಾಗಿಲಿನಲ್ಲಿಯೇ ಶಾಲಾ ವಾಹನ ಹತ್ತಿ ಶಾಲೆಗೆ ಬರಬೇಕು ಎನ್ನುವ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಪಾಲಕರ ನೇತೃತ್ವದಲ್ಲಿ ಸಮಿತಿ ರಚಿಸಿ, ವಿಕಲಚೇತನರಿಗೆ ಹತ್ತಿ-ಇಳಿಯಲು ವ್ಯವಸ್ಥೆ ಇರುವ ಶಾಲಾ ವಾಹನವೊಂದನ್ನು ದಾನಿಗಳಿಂದ ಪಡೆದು ವ್ಯವಸ್ಥೆ ಮಾಡುತ್ತಿದ್ದಾರೆ. ಇದಕ್ಕೆ ಪಾಲಕರೂ ಸಮ್ಮತಿಸಿದ್ದಾರೆ.  

ಈ ಮೊದಲು ಶಾಲೆಗೆ ತೆವಳುತ್ತ ಬರುತ್ತಿದ್ದ ಮಕ್ಕಳು, ಇಂದು ನಡೆದುಕೊಂಡು ಬರುತ್ತಿದ್ದಾರೆ. ಅ ಎನ್ನಲು ಆಗದಿದ್ದವರು ಇಂದು ಬಳಪ ಹಿಡಿದು ಅಕ್ಷರ ಬರೆಯುತ್ತಿದ್ದಾರೆ. ಈ ಚಿಕ್ಕ ಬದಲಾವಣೆಯಿಂದಲೇ ಬೆರಗಾಗಿ ಹೋಗಿರುವ ವಿಕಲ ಚೇತನ ಮಕ್ಕಳ ಪೋಷಕರು, ತಮ್ಮ ಮಕ್ಕಳು ಐಎಎಸ್‌,ಐಪಿಎಸ್‌, ಡಾಕ್ಟರ್‌, ಇಂಜಿನಿಯರ್‌ ಆದಷ್ಟು ಖುಷಿ ಪಡುತ್ತಿದ್ದಾರೆ. 

ಡ್ಯಾನ್ಸ್‌ ಮಾಡಲು ಪಾದಗಳಿರಲೇಬೇಕಾ ಪಪ್ಪಾ …? 
ಪಪ್ಪಾ, ನಾನು ಡ್ಯಾನ್ಸ್‌ ಮಾಡಬೇಕು…ಎಂದು 8 ವರ್ಷದ ಶ್ರಾವಣಿ (ಹೆಸರು ಬದಲಿಸಲಾಗಿದೆ)ತನ್ನ ತಂದೆಯನ್ನು ಕೇಳಿದಾಗ, ಅವಳ ತಂದೆ ಕಣ್ಣೀರು ಹಾಕಿ ಹೃದಯ ಕಲ್ಲು ಮಾಡಿಕೊಂಡು ಸುಮ್ಮನಾಗಿಬಿಟ್ಟರು. ಆದರೆ ಶ್ರಾವಣಿ ಸುಮ್ಮನಾಗಲಿಲ್ಲ. ಪಪ್ಪಾ, ಡ್ಯಾನ್ಸ್‌ ಮಾಡಲು ಪಾದಗಳು ಇರಲೇಬೇಕಲ್ಲವಾ ? ಎಂದು ಕೇಳಿದ್ದಳು. ಈ ಮಾತು ಕೇಳಿದಾಗ, ಶ್ರಾವಣಿ ತಂದೆ ಬಿಕ್ಕಿ ಬಿಕ್ಕಿ ಅತ್ತು ಬಿಟ್ಟಿದ್ದರು. 

ಕಾಲುಗಳೇ ಇಲ್ಲದ ಮಗುವೊಂದು ನಾನು ಡ್ಯಾನ್ಸ್‌ ಮಾಡಬೇಕು ಎಂದು ಹೇಳಿದಾಗ ಅವಳ ಪಾಲಕರು ಕಣ್ಣಲ್ಲಿ ನೀರು ಹಾಕಿ ಸುಮ್ಮನಾಗಿದ್ದರು. ಆದರೆ ಈ ಮಾತು ಕೇಳಿಸಿಕೊಂಡ ಬಸವರಾಜ ಸುಮ್ಮನೆ ಕೂರಲಿಲ್ಲ. ವಿಕಲಚೇತನ ಮಕ್ಕಳೂ ಇತರ ಮಕ್ಕಳಂತೆ ಹಾಡಿ ಕುಣಿಯಬೇಕು ಎನ್ನುವ ಉತ್ಸಾಹವನ್ನು ಅವರ ಎದುರು ಹೇಳಿಕೊಂಡಾಗ ವಿಕಲಚೇತನ ಮಕ್ಕಳಲ್ಲಿಯೂ ಕಲೆ,ಸಂಸ್ಕೃತಿ ಮತ್ತು ಕ್ರೀಡಾ ಮನೋಭಾವ ಬೆಳೆಸುವ ಉದ್ದೇಶದಿಂದ “ಜನಮುಖೀ’ ಸಂಸ್ಥೆ ಹುಟ್ಟು ಹಾಕಿದರು. ವಿವಿಧ ಸಾಂಸ್ಕೃತಿಕ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಸಾಮಾನ್ಯ ಮಕ್ಕಳಿಗೆ ಮನರಂಜನೆ, ಕ್ರೀಡಾ ಮನೋಭಾವ ಮತ್ತು ಜಾನಪದ ಸಂಸ್ಕೃತಿಯ ಅರಿವು ಮೂಡಿಸುವ ಪ್ರಯತ್ನವನ್ನು ಮಾಡಿದರು. ಬೇಸಿಗೆ ಶಿಬಿರ ನಡೆಸಿ, ನುರಿತ ಕಲಾವಿದರು, ಸಂಗೀತಗಾರರಿಂದ ಕಾರ್ಯಕ್ರಮಗಳನ್ನು ಆಯೋಜಿಸಿ, ವಿಕಲಚೇತನ ಮಕ್ಕಳು  ಹಾಡಿ, ಕುಣಿದು ಸಂಭ್ರಮಿಸುವುದಕ್ಕೆ ವೇದಿಕೆ ಕಲ್ಪಿಸಿಕೊಟ್ಟಿದ್ದಾರೆ ಪರಿಣಾಮವಾಗಿ, ಇಂದು ಹುಬ್ಬಳ್ಳಿಯ ಶ್ರಾವಣಿ ಮೊಣಕಾಲಿನ ಮೇಲೆಯೇ ಡ್ಯಾನ್ಸ್‌ ಮಾಡುತ್ತ ಸಂಭ್ರಮಿಸುತ್ತಿದ್ದಾಳೆ. 

ಅನಾಥ ವಿಕಲಚೇತನರ ಪರಿಸ್ಥಿತಿಯಂತೂ ದೇವರಿಗೇ ಪ್ರೀತಿ. ಒಂದೆಡೆ ಅಂಗ ವೈಕಲ್ಯ ಇನ್ನೊಂದೆಡೆ ಅನಾಥ ಪ್ರಜ್ಞೆ. ಅಂಥ ಮಕ್ಕಳಿಗೂ  “ಜನಮುಖೀ’ ಸಂಸ್ಥೆಯ ಮಡಿಲು ಆಶ್ರಯ ನೀಡಿದೆ. ಹುಬ್ಬಳ್ಳಿಯಲ್ಲಿ ಮಾಂಸದ ಅಂಗಡಿಯಲ್ಲಿ ಕೆಲಸ ಮಾಡುವ ವ್ಯಕ್ತಿಯೊಬ್ಬರಿಗೆ ಇರುವ ಮೂರು ಮಕ್ಕಳೂ ಬುದ್ದಿಮಾಂದ್ಯರು. ಮನೆಯಲ್ಲಿ ಬಡತನ, ದುಡಿಯುವ ಅನಿವಾರ್ಯತೆ, ಇನ್ನೊಂದೆಡೆ, ಈ ಮಕ್ಕಳನ್ನು ಸಲಹಬೇಕಾದ ಸವಾಲು.  ಕಷ್ಟಗಳ ಮಧ್ಯೆ ಕಣ್ಣೀರಾಗಿರುವ ಇಂತಹ ನೂರಾರು ಕುಟಂಬಗಳನ್ನು ಹುಡುಕಿಕೊಂಡು ಹೋಗಿ ಅವರಿಗೆ ಧೈರ್ಯ ಹೇಳಿ, ಮಾನವೀಯ ಕೆಲಸ ಮಾಡುತ್ತಿರುವ ಜನಮುಖೀ ಸಂಸ್ಥೆಯ ಕಾರ್ಯ ನಿಜಕ್ಕೂ ಶ್ಲಾಘನೀಯ ಎನ್ನುತ್ತಿದ್ದಾರೆ ವಿಕಲಚೇತನರ ತಂದೆ-ತಾಯಿ. 

ವಿಕಲಚೇತನರ ಸೇವೆ ಮಾಡುವುದೇ ನನ್ನ ಕಾಯಕ ಎಂದು ತಿಳಿದುಕೊಂಡಿದ್ದೇನೆ ಎನ್ನುವ ಸಮಾಜ ಸೇವಕ ಬಸವರಾಜ ಮ್ಯಾಗೇರಿ, ವಿಕಲಚೇತನರ ಪೋಷಕರಿಗೆ ತಮಗೆ ಸಹಾಯಕ್ಕೆ ಬಂದ ದೇವರಂತೆ ‘ ಕಾಣುತ್ತಿದ್ದಾರೆ.
ಶಾಲೆ, ವಿಕಲಚೇತನ ಮಕ್ಕಳ ಪಾಲಿಗೆ, ಕಾಶಿಯಲ್ಲಿನ ವೇದಾದ್ಯಯನ ಕೇಂದ್ರದಂತೆ ಕಾಣುತ್ತಿದೆ.

ನನಗೆ ಸರ್ಕಾರಿ ನೌಕರಿಮಾಡಬೇಕು ಎನ್ನುವ ಇಷ್ಟವಿತ್ತು. ಆದರೆ ಸಾಮಾಜಿಕ ಚಟುವಟಿಕೆಗಳಲ್ಲಿದ್ದಾಗ ಪರಿಚಯವಾದ ವಿಕಲಚೇತನ ಸ್ನೇಹಿತನೊಬ್ಬನ ಒಡನಾಟ, ಇಂದು ನಾನು ನೂರು ವಿಕಲಚೇತನ ಮಕ್ಕಳಿಗೆ ಶಿಕ್ಷಣ ನೀಡಲು ಪ್ರಯತ್ನಿಸುವುದಕ್ಕೆ ಕಾರಣವಾಯಿತು. ಅವರ ಸೇವೆಯಲ್ಲಿನ ಖುಷಿಯ ಮುಂದೆ ಜಗತ್ತಿನ ಎಲ್ಲವೂ ಶೂನ್ಯ. 
-ಬಸವರಾಜ ಮ್ಯಾಗೇರಿ,ಸಮಾಜ ಸೇವಕ. 

ಸಂಬಂಧಿಗಳಲ್ಲಿ ಮದುವೆಯಾಗಿದ್ದಕ್ಕೆ ನಿಮಗೆ ಬುದ್ದಿಮಾಂದ್ಯ ಮಕ್ಕಳು ಹುಟ್ಟಿದ್ದಾರೆ ಎಂದು ವೈದ್ಯರು ಹೇಳಿದಾಗ ಶಾಕ್‌ ಆಯಿತು. ಆದರೆ ಒಂದಷ್ಟು ವರ್ಷಗಳು ಹೋದ ಮೇಲೆ, ಈ ಮಕ್ಕಳನ್ನು ದೇವರು ಮಕ್ಕಳು ಎಂದು ತಿಳಿದುಕೊಂಡೆ. ಇವರನ್ನು ಸಾಮಾನ್ಯ ಮಕ್ಕಳಂತೆ ಮಾಡುವುದಕ್ಕೆ ಹೆಣಗುತ್ತಿದ್ದಾಗ “ನನಗೂ ಶಾಲೆ’ ಎನ್ನುವ ಯೋಜನೆ ರೂಪಿಸಿಕೊಂಡು ಕೆಲಸ ಮಾಡುವ ಬಸವರಾಜ ಅವರು ಸಿಕ್ಕರು. ಎರಡು ವರ್ಷದಿಂದ ನನ್ನ ಮಕ್ಕಳನ್ನು ಬಸವರಾಜ ಅವರ ಸಂಸ್ಥೆಗೆ ಒಪ್ಪಿಸಿದ್ದೇನೆ. ನನ್ನ ಮಕ್ಕಳೂ ಈಗ ಸ್ವಲ್ಪ ಚೇತರಿಸಿಕೊಂಡಿದ್ದಾರೆ. 
-ಯು.ಎಫ್‌.ಬದಾಮಿ,ವಿಕಲಚೇತನ ಮಕ್ಕಳ ತಂದೆ. 

ಬಸವರಾಜ ಹೊಂಗಲ್‌ 

ಟಾಪ್ ನ್ಯೂಸ್

ನಾರಾಯಣ್‌,ಬಟ್ಲರ್‌ ಶತಕ ಮೇಲಾಟ; ರನ್‌ ಚೇಸ್‌ನಲ್ಲಿ ರಾಜಸ್ಥಾನ್‌ ರಾಯಲ್ಸ್‌ಗೆ ಬೃಹತ್‌ ಗೆಲುವು

ನಾರಾಯಣ್‌,ಬಟ್ಲರ್‌ ಶತಕ ಮೇಲಾಟ; ರನ್‌ ಚೇಸ್‌ನಲ್ಲಿ ರಾಜಸ್ಥಾನ್‌ ರಾಯಲ್ಸ್‌ಗೆ ಬೃಹತ್‌ ಗೆಲುವು

ನ್ಯಾಯಾಲಯದಲ್ಲೇ ಕುಸಿದು ಬಿದ್ದ ಆಸ್ಟ್ರೇಲಿಯದ ಮಾಜಿ ಕ್ರಿಕೆಟಿಗ ಮೈಕಲ್‌ ಸ್ಲೇಟರ್‌

ನ್ಯಾಯಾಲಯದಲ್ಲೇ ಕುಸಿದು ಬಿದ್ದ ಆಸ್ಟ್ರೇಲಿಯದ ಮಾಜಿ ಕ್ರಿಕೆಟಿಗ ಮೈಕಲ್‌ ಸ್ಲೇಟರ್‌

FIDE Candidates 2024; ಜಂಟಿ ಅಗ್ರಸ್ಥಾನದಲ್ಲೇ ಉಳಿದ ಗುಕೇಶ್‌

FIDE Candidates 2024; ಜಂಟಿ ಅಗ್ರಸ್ಥಾನದಲ್ಲೇ ಉಳಿದ ಗುಕೇಶ್‌

ಹೃದಯ ಗೆದ್ದ ದಿನೇಶ್‌ ಕಾರ್ತಿಕ್‌; ಟಿ20 ವಿಶ್ವಕಪ್‌ ತಂಡದಲ್ಲಿ ಸ್ಥಾನ?

ಹೃದಯ ಗೆದ್ದ ದಿನೇಶ್‌ ಕಾರ್ತಿಕ್‌; ಟಿ20 ವಿಶ್ವಕಪ್‌ ತಂಡದಲ್ಲಿ ಸ್ಥಾನ?

IPL ಬ್ರೇಕ್‌ ಪಡೆದ ಗ್ಲೆನ್‌ ಮ್ಯಾಕ್ಸ್‌ವೆಲ್‌

IPL ಬ್ರೇಕ್‌ ಪಡೆದ ಗ್ಲೆನ್‌ ಮ್ಯಾಕ್ಸ್‌ವೆಲ್‌

Olympic Games Paris 2024; ಬೆಳಗಿತು ಪ್ಯಾರಿಸ್‌ ಒಲಿಂಪಿಕ್‌ ಜ್ಯೋತಿ

Olympic Games Paris 2024; ಬೆಳಗಿತು ಪ್ಯಾರಿಸ್‌ ಒಲಿಂಪಿಕ್‌ ಜ್ಯೋತಿ

UPSC Exam: 30ಕ್ಕಿಂತ ಅಧಿಕ ಕನ್ನಡಿಗರ ಆಯ್ಕೆ

UPSC Exam: 30ಕ್ಕಿಂತ ಅಧಿಕ ಕನ್ನಡಿಗರ ಆಯ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ನಾರಾಯಣ್‌,ಬಟ್ಲರ್‌ ಶತಕ ಮೇಲಾಟ; ರನ್‌ ಚೇಸ್‌ನಲ್ಲಿ ರಾಜಸ್ಥಾನ್‌ ರಾಯಲ್ಸ್‌ಗೆ ಬೃಹತ್‌ ಗೆಲುವು

ನಾರಾಯಣ್‌,ಬಟ್ಲರ್‌ ಶತಕ ಮೇಲಾಟ; ರನ್‌ ಚೇಸ್‌ನಲ್ಲಿ ರಾಜಸ್ಥಾನ್‌ ರಾಯಲ್ಸ್‌ಗೆ ಬೃಹತ್‌ ಗೆಲುವು

ನ್ಯಾಯಾಲಯದಲ್ಲೇ ಕುಸಿದು ಬಿದ್ದ ಆಸ್ಟ್ರೇಲಿಯದ ಮಾಜಿ ಕ್ರಿಕೆಟಿಗ ಮೈಕಲ್‌ ಸ್ಲೇಟರ್‌

ನ್ಯಾಯಾಲಯದಲ್ಲೇ ಕುಸಿದು ಬಿದ್ದ ಆಸ್ಟ್ರೇಲಿಯದ ಮಾಜಿ ಕ್ರಿಕೆಟಿಗ ಮೈಕಲ್‌ ಸ್ಲೇಟರ್‌

FIDE Candidates 2024; ಜಂಟಿ ಅಗ್ರಸ್ಥಾನದಲ್ಲೇ ಉಳಿದ ಗುಕೇಶ್‌

FIDE Candidates 2024; ಜಂಟಿ ಅಗ್ರಸ್ಥಾನದಲ್ಲೇ ಉಳಿದ ಗುಕೇಶ್‌

ಹೃದಯ ಗೆದ್ದ ದಿನೇಶ್‌ ಕಾರ್ತಿಕ್‌; ಟಿ20 ವಿಶ್ವಕಪ್‌ ತಂಡದಲ್ಲಿ ಸ್ಥಾನ?

ಹೃದಯ ಗೆದ್ದ ದಿನೇಶ್‌ ಕಾರ್ತಿಕ್‌; ಟಿ20 ವಿಶ್ವಕಪ್‌ ತಂಡದಲ್ಲಿ ಸ್ಥಾನ?

IPL ಬ್ರೇಕ್‌ ಪಡೆದ ಗ್ಲೆನ್‌ ಮ್ಯಾಕ್ಸ್‌ವೆಲ್‌

IPL ಬ್ರೇಕ್‌ ಪಡೆದ ಗ್ಲೆನ್‌ ಮ್ಯಾಕ್ಸ್‌ವೆಲ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.