“ಕೂಗು’ ಸೇತುವೆ; ಕೂಸು ಬಿದ್ದ ನೆಲದಲ್ಲಿ…

Team Udayavani, Aug 31, 2019, 5:30 AM IST

ಈವರೆಗೆ 137 ಸೇತುವೆ ನಿರ್ಮಿಸಿರುವ ಪದ್ಮಶ್ರೀ ಪುರಸ್ಕೃತ ಡಾ. ಗಿರೀಶ್‌ ಭಾರದ್ವಾಜರಿಗೆ ಒಂದೊಂದು ತೂಗುಸೇತುವೆ ನಿರ್ಮಿಸುವುದೂ, ಮಗು ಹೆತ್ತ ಹಾಗೆ. ಅದೇನು ವಿಧಿಯಾಟವೋ, ಈ ಸಲದ ಮಳೆ ಅವರಿಗೆ ವರುಣಪರೀಕ್ಷೆ. ಅವರು ಕಟ್ಟಿದ 6 ಸೇತುವೆಗಳು ಪ್ರವಾಹ ರಭಸಕ್ಕೆ ಉರುಳುರುಳಿ ಬಿದ್ದವು. ಹಾಗೆ ಬಿದ್ದ ಕೂಸುಗಳೆದುರು, ಗಿರೀಶರು ನಿಂತಾಗ…

ಪದ್ಮಶ್ರೀ ಪುರಸ್ಕೃತ ಡಾ. ಗಿರೀಶ್‌ ಭಾರದ್ವಾಜ್‌, ಗಂಗಾವಳಿ ಹೊಳೆಗೆ ಅಂಕೋಲೆಯ ರಾಮನಗುಳಿಯಲ್ಲಿ ತಾವು ನಿರ್ಮಿಸಿದ್ದ 160 ಮೀಟರ್‌ ಉದ್ದದ ತೂಗುಸೇತುವೆಯ ಅವಶೇಷಗಳೆದುರು ನಿಂತಿದ್ದರು. ಅವರ ಕಣ್ಣುಗಳಲ್ಲಿ ನೋವಿನ ಛಾಯೆ. ಈವರೆಗೆ 137 ಸೇತುವೆ ನಿರ್ಮಿಸಿರುವ ಭಾರದ್ವಾಜರಿಗೆ ಒಂದೊಂದು ತೂಗುಸೇತುವೆ ನಿರ್ಮಿಸುವುದೂ, ಮಗು ಹೆತ್ತ ಹಾಗೆ. ಹೊಳೆ ಹಳ್ಳದ ಹರಿವು, ದಂಡೆಯ ಆಕಾರ, ಹಿಂದೆ ಪ್ರವಾಹ ಬಂದಾಗಿನ ನೀರ ಮಟ್ಟಕ್ಕಿಂತ ಎತ್ತರದಲ್ಲಿ ರೂಪಿಸಿದ ವಿನ್ಯಾಸ, ಎಲ್ಲಕ್ಕಿಂತ ಹೆಚ್ಚಾಗಿ ಸ್ಥಳೀಕರ ಕಾಳಜಿ, ಅವರ ಮನೆಗೇ ಕರೆದೊಯ್ದು ಹಾಕಿದ ಊಟ… ಎಲ್ಲವೂ ಅವರ ಕಣ್ಣಲ್ಲಿ ಇಣುಕುತ್ತಿದ್ದವು.

ಕರ್ನಾಟಕದ ಮಲೆನಾಡು, ಓಡಿಶಾದ ನಕ್ಸಲ್‌ ಪೀಡಿತ ಪ್ರದೇಶಗಳಂಥ ಸೂಕ್ಷ್ಮ ಪ್ರದೇಶಗಳಲ್ಲಿ ಅವರು ಕಟ್ಟಿದ ತೂಗುಸೇತುವೆಗಳಿವೆ. ದಟ್ಟ ಕಾಡಿನ ನಡುವೆ ಹೊರಟ ಮನುಷ್ಯರಿಗೆಲ್ಲ ಆ ಸೇತುವೆಗಳ ಬೆನ್ನುಹುರಿ ಅದೆಷ್ಟು ಗಟ್ಟಿ ಎಂಬುದು ಚೆನ್ನಾಗಿ ಅರಿವಿದೆ. ಆದರೆ, ಈ ಸಲದ ಮಳೆಯಲ್ಲಿ ಅಪಾರ ನೀರಿನ ಜೊತೆ ತೇಲಿ ಬಂದ ದೈತ್ಯ ಮರಗಳು ಮತ್ತು ದಿಮ್ಮಿಗಳ ಬಡಿತಕ್ಕೆ ಅವರು ನಿರ್ಮಿಸಿದ 6 ತೂಗುಸೇತುವೆಗಳು ಕುಸಿದಿವೆ. ಊರೂರು ಬೆಸೆಯುವ ಸೇತುವೆಯ ಹೆತ್ತಬ್ಬೆ ಭಾರದ್ವಾಜರ ಕರುಳು ಚುರುಕ್‌ ಎನ್ನುತ್ತಿದೆ.
ತೂಗುಸೇತುವೆ ಉಪಯೋಗಿಸುವ ಜನರಂತೆಯೇ, ಭಾರದ್ವಾಜರಿಗೂ ಅದು ಕೇವಲ ಭೌತಿಕ ವಸ್ತುವಲ್ಲ. ಭಾವನಾತ್ಮಕ ಒಡನಾಡಿ. ಕೇವಲ ವ್ಯವಹಾರದ ದೃಷ್ಟಿಯಿಂದ ಅವರು ತೂಗುಸೇತುವೆ ನಿರ್ಮಿಸುತ್ತಿರಲಿಲ್ಲ. ರಾಮಾಯಣದ ಪ್ರಸಂಗವೊಂದನ್ನು ಅವರು ಆಗಾಗ ನೆನೆಯುತ್ತಾರೆ. ರಾಮ-ಸೀತೆಯರನ್ನು ತೆಪ್ಪದಲ್ಲಿ ಹೊಳೆ ದಾಟಿಸಿದ ಅಂಬಿಗನಿಗೆ, ರಾಮನು ಸಂಭಾವನೆಯಾಗಿ ಉಂಗುರ ನೀಡಬಯಸುತ್ತಾನೆ. ಅಂಬಿಗ ನಿರಾಕರಿಸುತ್ತಾನೆ. ಜೀವನದ ಕೊನೆಗೆ, “ನಾನು ನಿನ್ನಲ್ಲಿಗೆ ಬರುತ್ತೇನೆ. ಆಗ ನನ್ನನ್ನು ದಾಟಿಸು’ ಎಂದು ಕೋರುತ್ತಾನಂತೆ. ಹಾಗೆ, ಅಲೌಕಿಕ ಆಯಾಮದಲ್ಲಿ ತೂಗುಸೇತುವೆಗಳನ್ನು ಕಾಣುವ ಭಾರದ್ವಾಜರ ಕಣ್ಣಲ್ಲಿ ಈಗ ದುಃಖದ ಪ್ರವಾಹ. ತೂಗುಸೇತುವೆಯ ಕಾಲು, ಕೈ, ಹೊಟ್ಟೆ, ಬೆನ್ನು ತುಂಡುತುಂಡಾಗಿ ಬಿದ್ದಿರುವುದನ್ನು ನೋಡಿ ಹೆತ್ತ ಕರುಳು ಹೇಗೆ ಸಹಿಸಿಕೊಳ್ಳುತ್ತದೆ?

ತೂಗುಸೇತುವೆಗಳು ಪರಿಸರಕ್ಕೆ ಹಿತ. ಖರ್ಚೂ ಕಡಿಮೆ. ರಾಮನಗುಳಿಯಲ್ಲಿ ತೂಗುಸೇತುವೆ ಬಂದಾದ ಮೇಲೆ ಎಷ್ಟೋ ವೃದ್ಧ ಜೀವಿಗಳ ದಣಿವು ಕರಗಿದೆ. ನಡೆದಾಡಿಯೇ ಅರ್ಧಾಯುಷ್ಯ ಕಳೆಯುವ ಊರ ಮಂದಿಗೆ, ನದಿ ದಾಟುವುದು ಸಲೀಸಾಗಿದೆ. ಕುಮಟಾ ಬಳಿಯ ತೂಗುಸೇತುವೆ ಆದ ಮೇಲೆ, ಹೆರಿಗೆಯ ಕಾರಣದಿಂದ ಊರಲ್ಲಿ ಯಾವುದೇ ಸಾವು ಸಂಭವಿಸಿರಲಿಲ್ಲ. ತೂಗುಸೇತುವೆಗಳು ಬದುಕು ಕಟ್ಟಿಕೊಟ್ಟ ಕಥೆಗಳಿಗೆ ಲೆಕ್ಕವಿಲ್ಲ. ಆದರೆ, ಈ ಸಲ ಇವೆರಡೂ ತೂಗುಸೇತುವೆಗಳು ಕುಸಿದು, ಊರಿನವರ ಹೃದಯವನ್ನು ಭಾರವಾಗಿಸಿವೆ.

ಪ್ರವಾಹ ಬಂದು ಸೇತುವೆ ಮುಳುಗಿದರೂ ಏನೂ ಆಗದಂತೆ ವಿನ್ಯಾಸ ಮಾಡುವುದು ಭಾರದ್ವಾಜರ ಯಶಸ್ವಿ ತಂತ್ರಗಾರಿಕೆ. ಈ ಬಾರಿ ಪ್ರಕೃತಿ, ಅವರ ತಂತ್ರಗಾರಿಕೆಯನ್ನೇ ಮಣಿಸಿಬಿಟ್ಟಿತು. ಹೊಳೆಯ ನೀರ ಬಿರುಸಿನ ಜೊತೆ ದೈತ್ಯ ಮರಗಳು, ದಿಮ್ಮಿಗಳು ಘಟ್ಟದಿಂದ ಕೊಚ್ಚಿ ಬಂದು ಸೇತುವೆಗೆ ಅಪ್ಪಳಿಸಿಬಿಟ್ಟವು. ಅದೂ ಸತತ ಮೂರು ದಿನ. ಮಾನವನಿಗಿಂತ ಪ್ರಕೃತಿ ಎಷ್ಟಿದ್ದರೂ ಮೇಲಲ್ಲವೆ? ಸೇತುವೆ ಕುಸಿಯಿತು. ರಾಮನಗುಳಿ ಊರವರು, ಭಾರದ್ವಾಜರು ನೊಂದುಕೊಳ್ಳುತ್ತಾರೆಂದು ಒಂದು ವಾರ ಸುದ್ದಿ ಹೇಳಿಯೇ ಇರಲಿಲ್ಲ. ಸೇತುವೆ ಕಟ್ಟಿದ ಭಾರದ್ವಾಜರನ್ನು ಈ ಊರವರು ಸ್ವಂತ ಮಗನಂತೆಯೇ ಇವತ್ತಿಗೂ ಕಾಣುತ್ತಾರೆ.

ಒಂಭತ್ತು ತಿಂಗಳ ಅವಧಿಯಲ್ಲಿ ಮಗುವಿನ ಖುಷಿಯ ಜೊತೆ ಕಳವಳವನ್ನೂ ಬಸುರಿ ಅನುಭವಿಸುತ್ತಾಳಲ್ಲ… ತೂಗುಸೇತುವೆ ಕಟ್ಟುವಾಗಲೂ ಹಾಗೆ. ಕಟ್ಟುವ ಖುಷಿ, ಜೊತೆಗೆ ತಾಂತ್ರಿಕ ಸಮಸ್ಯೆಗಳು. ಸ್ಥಳೀಯರ ಜೊತೆ ಒಡನಾಟ ಬೆಳೆಸಿಕೊಳ್ಳಬೇಕು, ಪ್ರಾದೇಶಿಕ ಭಿನ್ನತೆಗಳಿಗೆ ಅನುಗುಣವಾಗಿ ವಿನ್ಯಾಸ ಮಾಡಬೇಕು. ಅದರಲ್ಲೂ ಒಡಿಶಾದ ದಟ್ಟಡವಿಯ ಮಧ್ಯದ ಗ್ರಾಮಕ್ಕೆ ತೂಗುಸೇತುವೆ ಕಟ್ಟಿದ್ದು ಭಾರದ್ವಾಜರಿಗೆ ಮಗು ಹೆತ್ತ ಅನುಭವವನ್ನೇ ನೀಡಿತ್ತು. ಅಲ್ಲಿ ತೂಗುಸೇತುವೆ ಅನಿವಾರ್ಯವಿತ್ತು. ರಾತ್ರೋರಾತ್ರಿ ಯಾರೋ ಅಪರಿಚಿತರು ಬಂದು, ಇವರ ಹೆಸರು- ಊರು ವಿಚಾರಿಸಿಕೊಂಡು ಹೋದರಂತೆ. ಹಾಗೆ ಬಂದಿದ್ದ ಅಪರಿಚಿತರು, ನಕ್ಸಲರು ಎಂದು ಗೊತ್ತಾಗಲು ಇವರಿಗೆ ಎರಡು ದಿನ ಬೇಕಾಯಿತು. ಸೇತುವೆ ಕೆಲಸ ನಿಲ್ಲಿಸುವ ಯೋಚನೆ ಬಂದಾಗ, ಸ್ಥಳೀಯನೊಬ್ಬ ಇವರಿಗೆ ಕೈಮುಗಿದನಂತೆ… “ಸೇತುವೆ ಕಟ್ಟುವ ನೀವು ನಮ್ಮ ಜಗನ್ನಾಥನಿಗಿಂತ ದೊಡ್ಡವರು’ ಎಂದು ಕಣ್ಣಂಚಲ್ಲಿ ನೀರು ತುಂಬಿಕೊಂಡು ಹೇಳಿದನಂತೆ. ಯಾವುದೋ ಊರಿನ, ಯಾರೋ ಮನುಷ್ಯ, ಅಷ್ಟು ನಿಷ್ಕಲ್ಮಷ ಪ್ರೀತಿ ತೋರುತ್ತಿರುವಾಗ, ತೂಗುಸೇತುವೆ ನಿರ್ಮಿಸದೇ ಮರಳಲು ಮನಸ್ಸಾಗಲಿಲ್ಲ. ಛಲಕ್ಕೆ ಬಿದ್ದು ಕಟ್ಟಿಯೇ ಬಿಟ್ಟರು. ಈಗ ಇಲ್ಲಿನ ಸೇತುವೆಗಳೆಲ್ಲ ಮುರಿದ ಸುದ್ದಿ ಕೇಳಿ, ಅಂಥ ಸೂಕ್ಷ್ಮ ಸ್ಥಳಗಳಲ್ಲಿ ಕಟ್ಟಿದ ಸೇತುವೆಗಳಿಗೆ ಏನೂ ಆಗದಿರಲಿ ಎಂದಷ್ಟೆ ಇವರ ಹೃದಯ ಹಂಬಲಿಸುತ್ತಿದೆ. ಅವರ ಮುದ್ದು ಕಂದಮ್ಮಗಳು, ಕಾಡಿನಲ್ಲಿ ಒಂಟಿಯಾಗಿ, ನೂರಾರು ಮಂದಿಗೆ ಉಪಕಾರಿಯಾಗಿ, ಎಂದಿಗೂ ಆರೋಗ್ಯವಾಗಿದ್ದರೆ ಸಾಕು.

 - ಗುರುಗಣೇಶ್‌ ಭಟ್‌ ಡಬ್ಗುಳಿ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.ಈ ವಿಭಾಗದಿಂದ ಇನ್ನಷ್ಟು

  • ದ.ಆಫ್ರಿಕಾ ಕ್ರಿಕೆಟ್‌ ತಂಡಕ್ಕೆ ಈಗ ಮೊದಲಿನ ತಾಕತ್ತಿಲ್ಲ ಎನ್ನುವುದು ಸತ್ಯವೇ. ಆದರೆ ಅದು ಈ ತಾತ್ಕಾಲಿಕ ದುಸ್ಥಿತಿಯಿಂದ ಹೊರಬಂದು ಮತ್ತೆ ವಿಶ್ವದ ಪ್ರಬಲ ತಂಡಗಳಲ್ಲಿ...

  • ಇಂದು ಭಾರತದ ಬ್ಯಾಡ್ಮಿಂಟನ್‌ ಎಂದಿನಂತಿಲ್ಲ. ವಿಶ್ವದಲ್ಲೇ ಅತಿಹೆಚ್ಚು ಪ್ರತಿಭೆಗಳ ಗಣಿ ಹೊಂದಿರುವ ದೇಶಗಳಲ್ಲಿ ಭಾರತವೂ ಒಂದು. ಇದೆಲ್ಲ ಸಾಧ್ಯವಾಗಿದ್ದು ಪಿ.ಗೋಪಿಚಂದ್‌...

  • ಕೆಲವು ದೈವಿಕ ಕ್ಷೇತ್ರಗಳ ದರುಶನದಿಂದ ಎರಡು ರೀತಿಯ ನೆಮ್ಮದಿ ಸಿಗುತ್ತದೆ. ಒಂದು, ದೇವರ ಉಪಾಸನೆಯಿಂದ ಸಿಕ್ಕ ಸಂತೃಪ್ತಿ; ಮತ್ತೂಂದು, ಅಲ್ಲಿನ ರಮ್ಯ ಪರಿಸರದಲ್ಲಿ...

  • ತ್ರಿವಿಧ ದಾಸೋಹ ನಡೆಸುತ್ತಿರುವ ನಾಡಿನ ಪ್ರಸಿದ್ಧ ಮಠಗಳಲ್ಲಿ ಆದಿಚುಂಚನಗಿರಿ ಕ್ಷೇತ್ರವೂ ಒಂದು. ಇಲ್ಲಿ ನೆಲೆಸಿರುವ ಶ್ರೀ ಕಾಲಭೈರವೇಶ್ವರ "ಅನ್ನದಾನಿ ಭೈರವ'...

  • - ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿಗಳು, ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನ, ಶಿರಸಿ ಮನಸ್ಸಿನ ಅಂತಃಸಾಕ್ಷಿಗೆ ಅನುಸಾರವಾಗಿ ನಡೆಯುವವನು ಎಂದೂ ಪಾಪಿಯಾಗಲಾರ....

ಹೊಸ ಸೇರ್ಪಡೆ