ಭಾರತೀಯ ಬ್ಯಾಟ್ಸ್‌ಮನ್‌ಗಳು ಸ್ಪಿನ್‌ಗೆ ತತ್ತರ

Team Udayavani, Dec 15, 2018, 5:50 AM IST

ಸುನೀಲ್‌ ಗಾವಸ್ಕರ್‌, ಗುಂಡಪ್ಪ ವಿಶ್ವನಾಥ್‌, ಸಚಿನ್‌ ತೆಂಡುಲ್ಕರ್‌, ಸೌರವ್‌ ಗಂಗೂಲಿ, ರಾಹುಲ್‌ ದ್ರಾವಿಡ್‌, ವಿವಿಎಸ್‌ ಲಕ್ಷ್ಮಣ್‌, ವೀರೇಂದ್ರ ಸೆಹ್ವಾಗ್‌….ಹೀಗೆ ಈ ದಿಗ್ಗಜರ ಹೆಸರು ಬರೆಯುತ್ತ ಸಾಗಿದರೆ ಏನು ನೆನಪಾಗುತ್ತದೆ? ಯಾವ ಸಂಗತಿಯಲ್ಲಿ ಈ ಎಲ್ಲರೂ ತಾದಾತ್ಮé ಹೊಂದಿದ್ದಾರೆ? ಈ ಎಲ್ಲರೂ ಶ್ರೇಷ್ಠರು, ದಂತಕಥೆಗಳು, ವಿಶ್ವಕಂಡ ಮಹಾನ್‌ ಬ್ಯಾಟ್ಸ್‌ಮನ್‌ಗಳು ಎನ್ನುವುದೆಲ್ಲ ಸತ್ಯ. ಅದರ ಜೊತೆಗೆ ಥಟ್ಟನೆ ಹೊಳೆಯದ, ಹೊಳೆದರೂ ಹೇಳಬೇಕೆನ್ನಿಸದ ಇನ್ನೂ ಒಂದು ವಿಚಾರವಿದೆ. ಇವರು ಸ್ಪಿನ್‌ ಬೌಲಿಂಗ್‌ಗೆ ಅದ್ಭುತವಾಗಿ ಬ್ಯಾಟ್‌ ಮಾಡುತ್ತಿದ್ದ ದಿಗ್ಗಜರು. ಎಂತಹದ್ದೇ ಸ್ಪಿನ್‌ ಅಂಕಣ, ದಾಳಿಯಿದ್ದರೂ ಅದನ್ನು ಸಮರ್ಥವಾಗಿ ಎದುರಿಸಿ, ಎದುರಾಳಿಗಳಿಗೆ ಜುಗುಪ್ಸೆ ಹುಟ್ಟಿಸಬಲ್ಲರು!

ಅಂತಹ ಬ್ಯಾಟಿಂಗ್‌ ಪರಂಪರೆ ಹೊಂದಿದ್ದ ಭಾರತೀಯರಿಗೆ ಎಂತಹ ಪರಿಸ್ಥಿತಿ ಬಂದಿದೆ ಎಂದರೆ…ಸ್ಪಿನ್‌ ಬೌಲಿಂಗ್‌ಗೆ ಆಡುವುದಕ್ಕೇ ಹಿಂಜರಿಯುತ್ತಿದ್ದಾರೆ. ಸ್ಪಿನ್ನರ್‌ಗಳೆದುರು ಸತತವಾಗಿ ವಿಫ‌ಲವಾಗುತ್ತಿದ್ದಾರೆ. ಭಾರತಕ್ಕೆ ಬರುವ ವಿದೇಶಿ ಸ್ಪಿನ್ನರ್‌ಗಳು, ಇಲ್ಲಿಯ ಸ್ಪಿನ್‌ ಅಂಕಣದ ಲಾಭ ಎತ್ತಿ ಭಾರತವನ್ನೇ ಸೋಲಿಸುತ್ತಿದ್ದಾರೆ. ಒಂದು ರೀತಿಯಲ್ಲಿ ಭಾರತ ತಾನೇ ಖೆಡ್ಡಾ ನಿರ್ಮಿಸಿ, ತನ್ನನ್ನೇ ಅದರಲ್ಲಿ ತಳ್ಳಿಕೊಳ್ಳುವಂತಹ ಪರಿಸ್ಥಿತಿ.

ಅಂದಾಜು 2012ರಿಂದ ಭಾರತದಲ್ಲಿ ಇಂತಹ ಪರಿಸ್ಥಿತಿ ಸೃಷ್ಟಿಯಾಗಿದೆ. ಇಲ್ಲಿಯವರೆಗೆ ಭಾರತಕ್ಕೆ ಬಂದ ಇಂಗ್ಲೆಂಡ್‌ನ‌ ಮಾಂಟಿ ಪನೇಸರ್‌, ಗ್ರೇಮ್‌ ಸ್ವಾನ್‌, ಆಸ್ಟ್ರೇಲಿಯದ ಸ್ಟೀವ್‌ ಒ ಕೀಫ್, ನಥನ್‌ ಲಿಯೋನ್‌, ದ.ಆಫ್ರಿಕಾದ ಇಮ್ರಾನ್‌ ತಾಹಿರ್‌ ಇವರೆಲ್ಲ ಮಿಂಚಿ ವಿಶ್ವಮಟ್ಟದಲ್ಲಿ ಗುರ್ತಿಸಿಕೊಂಡಿದ್ದಾರೆ. ಇವರೆಲ್ಲ ಭಾರತಕ್ಕೆ ಬರುವ ಮೊದಲು ಸಾಮಾನ್ಯ ಆಟಗಾರರು. ಬರೀ ವೇಗಿಗಳಿಗಷ್ಟೇ ಆದ್ಯತೆ ನೀಡುವ ವಿದೇಶಿ ತಂಡಗಳಿಗೆ ಸ್ಪಿನ್ನರ್‌ಗಳು ಮುಖ್ಯ ಅನ್ನಿಸುವುದು ಭಾರತಕ್ಕೆ ಬಂದಾಗ. ಅಂತಹ ಅವಕಾಶವನ್ನು ಅತ್ಯುತ್ತಮವಾಗಿ ಉಪಯೋಗಿಸಿಕೊಂಡಿದ್ದಾರೆ ಈ ಸ್ಪಿನ್ನರ್‌ಗಳು.

ಬರೀ ಭಾರತ ಮಾತ್ರವಲ್ಲ, ವಿದೇಶಕ್ಕೆ ತೆರಳಿದಾಗಲೂ ಭಾರತ ಸ್ಪಿನ್‌ ಬೌಲರ್‌ಗಳಿಗೇ ಎಡವುತ್ತಿದೆ! ಹೇಳಿಕೇಳಿ ವಿದೇಶಿ ಅಂಕಣಗಳು ವೇಗಕ್ಕೆ ಹೇಳಿ ಮಾಡಿಸಿರುತ್ತವೆ. ಅಂತಹ ಕಡೆಯೂ ಸ್ಪಿನ್‌ಗೆ ಭಾರತೀಯರ ವೈಫ‌ಲ್ಯ. ಇದಕ್ಕೆ ಕಾರಣವೂ ಬಹಳ ಸ್ವಾರಸ್ಯಕರ. ಏಷ್ಯಾ ಖಂಡದಲ್ಲಿ ಕ್ರಿಕೆಟ್‌ ಆಡುವ ರಾಷ್ಟ್ರಗಳಾದ ಭಾರತ, ಶ್ರೀಲಂಕಾ, ಪಾಕಿಸ್ತಾನ, ಬಾಂಗ್ಲಾದೇಶ, ಆಫ್ಘಾನಿಸ್ತಾನದಲ್ಲಿ ಮಾಮೂಲಿಯಾಗಿ ಸ್ಪಿನ್‌ಗೆ ನೆರವು ನೀಡುವ ಅಂಕಣಗಳಿರುತ್ತವೆ. ಇಂಗ್ಲೆಂಡ್‌, ಆಫ್ರಿಕಾ, ಆಸ್ಟ್ರೇಲಿಯ, ನ್ಯೂಜಿಲೆಂಡ್‌, ವೆಸ್ಟ್‌ ಇಂಡೀಸ್‌ನಂತಹ ಜಾಗಗಳಲ್ಲಿ ವೇಗಕ್ಕೆ ತಕ್ಕಂತೆ ಅಂಕಣಗಳಿರುತ್ತವೆ. ಏಷ್ಯಾ ರಾಷ್ಟ್ರಗಳು, ಆ ರಾಷ್ಟ್ರಗಳಿಗೆ ಪ್ರವಾಸ ಮಾಡಿದಾಗ ಅಲ್ಲಿನ ವೇಗಕ್ಕೆ ನೆರವು ನೀಡುವ ಅಂಕಣಗಳಲ್ಲಿ ಆಡಲಾಗದೇ ತಬ್ಬಿಬ್ಟಾಗಿ ಹೀನಾಯವಾಗಿ ಸೋತು ಹಿಂತಿರುಗುತ್ತವೆ. ಅದೇ ರೀತಿ ಆ ರಾಷ್ಟ್ರಗಳು ಏಷ್ಯಾಕ್ಕೆ ಬಂದಾಗಲೂ ಇಂತಹದ್ದೇ ಸ್ಥಿತಿ. ಅವಕ್ಕೂ ಸೋಲದೇ ಬೇರೆ ವಿಧಿಯೇ ಇರುವುದಿಲ್ಲ. ಇಲ್ಲಿ ಮೋಡಿ ಮಾಡುವ ಸ್ಪಿನ್‌ ಅಂಕಣಗಳನ್ನು ಮಾಡಿ ಎದುರಾಳಿ ತಂಡಗಳನ್ನು ನಜ್ಜುಗುಜ್ಜು ಮಾಡಲಾಗುತ್ತದೆ.

ಈ ಪರಿಸ್ಥಿತಿಯನ್ನು ನೋಡಿ ಎರಡೂ ಭಾಗದ ತಂಡಗಳು ನಿಧಾನಕ್ಕೆ ತಮ್ಮ ದೇಶದಲ್ಲಿ ಅಂಕಣಗಳನ್ನು ಬದಲಾಯಿಸಲು ಶುರು ಮಾಡಿವೆ. ಭಾರತದಲ್ಲಿ ವೇಗಕ್ಕೆ ಪೂರಕ ಅಂಕಣಗಳು ತಯರಾಗುತ್ತಿವೆ, ವಿದೇಶದಲ್ಲಿ ಸ್ಪಿನ್‌ಗೆ ನೆರವಾಗುವ ಅಂಕಣಗಳು ತಯಾರುಗುತ್ತಿವೆ. ವಿಚಿತ್ರವೆಂದರೆ ಈ ಪ್ರಯೋಗಗಳು ಆಯಾ ತಂಡಗಳಿಗೆ ನೆರವು ನೀಡುವ ಬದಲು ಉಪದ್ರವ ನೀಡುತ್ತಿವೆ ಎನ್ನುವುದು. ವೇಗಕ್ಕೆ ನೆರವು ನೀಡುವ ಅಂಕಣವನ್ನು ಮಾಡಿ ಮಾಡಿ ಭಾರತೀಯ ಬ್ಯಾಟ್ಸ್‌ಮನ್‌ಗಳು ವೇಗಕ್ಕೆ ಉತ್ತಮವಾಗಿ ಆಡುತ್ತಿದ್ದಾರೆ. ಆದ್ದರಿಂದ ವಿದೇಶಕ್ಕೆ ಹೋದಾಗ ಅಲ್ಲಿನ ವೇಗಕ್ಕೆ ಹೊಂದಿಕೊಂಡು ಬಿಡುತ್ತಾರೆ. ಹಾಗೆಯೇ ವಿದೇಶಿ ಬ್ಯಾಟ್ಸ್‌ಮನ್‌ಗಳು ಇಲ್ಲಿನ ಸ್ಪಿನ್‌ಗೆ ಹೊಂದಿಕೊಳ್ಳುತ್ತಿದ್ದಾರೆ. ವಿಪರ್ಯಾಸವೆಂದರೆ ಭಾರತೀಯರು ಸ್ಪಿನ್‌ಗೂ, ವಿದೇಶೀಯರು ವೇಗಕ್ಕೂ ಬಲಿಯಾಗುತ್ತಿದ್ದಾರೆ!

ಇದಕ್ಕೆ ತಾಜಾ ಉದಾಹರಣ ಇತ್ತೀಚೆಗೆ ಆಸ್ಟ್ರೇಲಿಯದ ಅಡಿಲೇಡ್‌ನ‌ಲ್ಲಿ ಭಾರತ-ಆಸ್ಟ್ರೇಲಿಯ ನಡುವೆ ನಡೆದ ಮೊದಲ ಟೆಸ್ಟ್‌. ಈ ಪಂದ್ಯದಲ್ಲಿ ನಿಜಕ್ಕೂ ಮಿಂಚಿದ್ದು ಸ್ಪಿನ್ನರ್‌ಗಳು. ಆಸ್ಟ್ರೇಲಿಯದ ನಥನ್‌ ಲಿಯೋನ್‌, ಎರಡೂ ಇನಿಂಗ್ಸ್‌ ಸೇರಿ 8 ವಿಕೆಟ್‌ ಪಡೆದರೆ, ಭಾರತದ ಆರ್‌.ಅಶ್ವಿ‌ನ್‌ 6 ವಿಕೆಟ್‌ಗಳನ್ನು ಗುಳುಂ ಮಾಡಿದರು. ಈ ಸ್ಪಿನ್ನರ್‌ಗಳಿಗೆ ಹೋಲಿಸಿದರೆ ವೇಗಿಗಳಿಂದ ನಿರೀಕ್ಷಿತ ಪ್ರದರ್ಶನ ಬರಲಿಲ್ಲ. ಈ ಹಿಂದೆಲ್ಲ ಅಡಿಲೇಡ್‌ನ‌ಂತಹ ಅಂಕಣದಲ್ಲಿ ವೇಗಿಗಳು ತಮ್ಮ ಬೌಲಿಂಗ್‌ನಿಂದ ಬೆಂಕಿ ಕಾರಿ ಹಲ್ಲಾಬೊಲ್ಲಾ ಎಬ್ಬಿಸುತ್ತಿದ್ದರು. ಈ ಬಾರಿ ಪರಿಸ್ಥಿತಿ ಉಲ್ಟಾ.

ಭಾರತೀಯರೇನು ಮಾಡಬೇಕು?

 ವೇಗಕ್ಕೆ ತಕ್ಕಂತೆ ಅಂಕಣ ನಿರ್ಮಾಣದ ಜೊತೆಜೊತೆಗೇ ಸ್ಪಿನ್‌ ಬೌಲಿಂಗನ್ನು ಭಾರತ ಕಡೆಗಣಿಸಬಾರದು. ಭಾರತದ ಶಕ್ತಿಯೇ ಅದು ಎಂಬ ಸತ್ಯ ಗೊತ್ತಿರಬೇಕು. ದೇಶೀಯ ಪಂದ್ಯಗಳಲ್ಲಿ ಸ್ಪಿನ್‌ ಮತ್ತು ವೇಗದ ಅಂಕಣ ತಯಾರಿಯಲ್ಲಿ ಸಮತೋಲನ ಸಾಧಿಸಬೇಕು. ಅಂದರೆ 10 ರಾಜ್ಯದಲ್ಲಿ ವೇಗವಿದ್ದರೆ, ಇನ್ನು 10 ರಾಜ್ಯಗಳಲ್ಲಿ ಸ್ಪಿನ್‌ ಅಂಕಣ ತಯಾರಿಸಬೇಕು. ವಿದೇಶಕ್ಕೆ ತೆರಳುವಾಗ ಭಾರತೀಯ ಬ್ಯಾಟ್ಸ್‌ಮನ್‌ಗಳು ವೇಗದ ಬೌಲಿಂಗ್‌ಗೆ ತರಬೇತಿ ಪಡೆಯುವಂತೆ, ಸ್ಪಿನ್‌ ಬೌಲಿಂಗ್‌ಗೂ ಆದ್ಯತೆಯ ಮೇರೆಗೆ ತರಬೇತಿ ಪಡೆಯಬೇಕು. ಇದನ್ನು ಗಂಭೀರವಾಗಿ ಪರಿಗಣಿಸಿದರೆ ಭಾರತೀಯರು ಸ್ಪಿನ್‌ಗೆ ತಲೆಬಾಗುವುದನ್ನು ಸುಲಭವಾಗಿ ತಡೆಯಬಹುದು.

2016-ಭಾರತದ ನೆಲದಲ್ಲಿ ಇಂಗ್ಲೆಂಡ್‌ನ‌ ರಶೀದ್‌ ಅಬ್ಬರ
2016ರ ಅಂತ್ಯದಲ್ಲಿ ಇಂಗ್ಲೆಂಡ್‌ ತಂಡ ಭಾರತಕ್ಕೆ ಪ್ರವಾಸ ಬಂದಿತ್ತು. ಆಗ ನಡೆದ ಐದು ಟೆಸ್ಟ್‌ಗಳಲ್ಲಿ ಭಾರತ 4 ಟೆಸ್ಟ್‌ ಜಯಿಸಿತ್ತು. ಇನ್ನೊಂದು ಡ್ರಾಗೊಂಡಿತ್ತು. ಆ ಇಡೀ ಪ್ರವಾಸದಲ್ಲಿ ಮಿಂಚಿದ್ದು ಸ್ಪಿನ್ನರ್‌ಗಳು. ಭಾರತದ ಅಶ್ವಿ‌ನ್‌ 28 ವಿಕೆಟ್‌ ಪಡೆದರೆ, ಇಂಗ್ಲೆಂಡ್‌ನ‌ ರಶೀದ್‌ 23 ವಿಕೆಟ್‌ ಪಡೆದರು. ಲೆಗ್‌ಸ್ಪಿನ್ನರ್‌ ರಶೀದ್‌ ಭಾರತದ ನೆಲದ ಪೂರ್ಣ ಪ್ರಯೋಜನವೆತ್ತಿದ್ದು ಅಚ್ಚರಿಯಾಗಿತ್ತು. ಈ ಹಿಂದೆ ಭಾರತಕ್ಕೆ ಬರುವ ವಿದೇಶಿ ಸ್ಪಿನ್ನರ್‌ಗಳಿಗೆ ಹೇಳಿಕೊಳ್ಳುವಂತಹ ಕೆಲಸವಿರುತ್ತಿರಲಿಲ್ಲ. ಭಾರತೀಯ ಬ್ಯಾಟ್ಸ್‌ಮನ್‌ಗಳಿಂದ ದಾಳಿಗೊಳಗಾಗಿ ನೊಂದುಕೊಂಡು ತಮ್ಮ ನೆಲಕ್ಕೆ ಹಿಂದಿರುಗುವುದಕ್ಕಷ್ಟೇ ಅವರ ಪಾತ್ರವಿತ್ತು.

2017-ಕೀಫ್, ಲಿಯೋನ್‌ಗೆ ಕಂಗಾಲಾಗಿತ್ತು ಭಾರತ
2017ರ ಆರಂಭದಲ್ಲಿ ಆಸ್ಟ್ರೇಲಿಯ ತಂಡ ಭಾರತಕ್ಕೆ ಪ್ರವಾಸ ಬಂದಿತ್ತು. ಸ್ಟೀವ್‌ ಸ್ಮಿತ್‌ ನಾಯಕತ್ವದ ತಂಡಕ್ಕೆ ಇದು ಪ್ರತಿಷ್ಠೆಯಾಗಿತ್ತು. ಸ್ಮಿತ್‌ ಅವರು ತೀವ್ರ ವಿವಾದಕ್ಕೆ ಸಿಲುಕಿದ ಸರಣಿಯಿದು. ಈ ಸರಣಿಯಲ್ಲಿ ನಾಲ್ಕು ಟೆಸ್ಟ್‌ ನಡೆಯಿತು. ಭಾರತ ಎರಡರಲ್ಲಿ ಗೆದ್ದರೆ, ಆಸ್ಟ್ರೇಲಿಯ 1ರಲ್ಲಿ ಗೆದ್ದಿತು. 1 ಪಂದ್ಯ ಡ್ರಾ. ಸರಣಿಯ ಮೊದಲ ಟೆಸ್ಟನ್ನೇ ಎಡಗೈ ಸ್ಪಿನ್ನರ್‌ ಸ್ಟೀವ್‌ ಒ ಕೀಫ್ ನೆರವಿನಿಂದ ಆಸ್ಟ್ರೇಲಿಯ ಗೆದ್ದು ಮೆರೆದಾಡಿತು. ಅವರು ಆ ಪಂದ್ಯದಲ್ಲಿ 12 ವಿಕೆಟ್‌ ಪಡೆದು ಪಂದ್ಯಶ್ರೇಷ್ಠರಾದರು. 2ನೇ ಟೆಸ್ಟ್‌ ಭಾರತ ಗೆದ್ದರೂ ಅಲ್ಲಿ ಆಸ್ಟ್ರೇಲಿಯ ಸ್ಪಿನ್ನರ್‌ ನಥನ್‌ ಲಿಯೋನ್‌ ಭಾರತಕ್ಕೆ ಉಂಟು ಮಾಡಿದ್ದ ಅಪಾಯ ಒಂದೆರಡಲ್ಲ. ಅವರು ಮೊದಲ ಇನಿಂಗ್ಸ್‌ನಲ್ಲಿ 8 ವಿಕೆಟ್‌ ಪಡೆದಿದ್ದರು. 3ನೇ ಟೆಸ್ಟ್‌ ಡ್ರಾಗೊಂಡಿತ್ತು. ಅಲ್ಲಿ ಸ್ಪಿನ್ನರ್‌ಗಳ ಮೆರೆದಾಟ ಕಡಿಮೆಯಿತ್ತು. 4ನೇ ಟೆಸ್ಟ್‌ನಲ್ಲಿ ಮತ್ತೆ ಲಿಯೋನ್‌ ಮಿಂಚಿ 5 ವಿಕೆಟ್‌ ಪಡೆದಿದ್ದರು. ವಿದೇಶಿ ಸ್ಪಿನ್ನರ್‌ಗಳು ಭಾರತದಲ್ಲಿ ಈ ಪ್ರಮಾಣದ ಯಶಸ್ಸು ಕಂಡಿದ್ದು ಎಲ್ಲರನ್ನೂ ದಂಗುಬಡಿಸಿತ್ತು!

2018ರಲ್ಲಿ ಮೋಯಿನ್‌ ಅಲಿಗೆ ಶರಣು
ಇದೇ ವರ್ಷ ಆಗಸ್ಟ್‌, ಸೆಪ್ಟೆಂಬರ್‌ನಲ್ಲಿ ಭಾರತ ತಂಡ ಇಂಗ್ಲೆಂಡ್‌ ಪ್ರವಾಸ ಮಾಡಿತ್ತು. ಅಲ್ಲಿ ನಡೆದ 5 ಟೆಸ್ಟ್‌ಗಳಲ್ಲಿ ಭಾರತಕ್ಕೆ 4-1ರಿಂದ ಹೀನಾಯ ಸೋಲು ಎದುರಾಗಿತ್ತು. ನಾಲ್ಕನೇ ಟೆಸ್ಟ್‌ನಲ್ಲಿ ಭಾರತ ಅನುಭವಿಸಿದ ಹೀನಾಯ ಸೋಲಿನಲ್ಲಿ ಇಂಗ್ಲೆಂಡ್‌ ಸ್ಪಿನ್ನರ್‌ ಮೋಯಿನ್‌ ಅಲಿ ಪಾತ್ರ ದೊಡ್ಡದು. ಅವರು 9 ವಿಕೆಟ್‌ ಪಡೆದು, ಭಾರತದ ನಡುಮುರಿದು ಪಂದ್ಯಶ್ರೇಷ್ಠರಾಗಿದ್ದರು.

-ನಿರೂಪ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ರಾಜಧಾನಿ ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವದ ರೋಮಾಂಚನವನ್ನು ಜೀವನದಲ್ಲಿ ಒಮ್ಮೆಯಾದರೂ ನೋಡಲೇಬೇಕು. ಅಲ್ಲಿ ಜರುಗುವುದು ನಮ್ಮ ಸೇನಾಶಕ್ತಿಯ ವಿಶ್ವರೂಪ ದರ್ಶನ....

  • ನಾಳೆ ಬೆಳಗಾದರೆ ಗಣತಂತ್ರದ ಹಬ್ಬದ ಸಂಭ್ರಮ, ರಾಜಧಾನಿ ದೆಹಲಿಯನ್ನು ರಂಗೇರಿಸಲಿದೆ. ರಾಜಪಥದಲ್ಲಿ ನಡೆಯುವ ಸ್ತಬ್ಧಚಿತ್ರ ಮೆರವಣಿಗೆಯಲ್ಲಿ ಈ ಬಾರಿ ಕರ್ನಾಟಕದ...

  • ಅಂಡಮಾನಿನ ಎಲ್ಲ ಗೂಬೆಗಳೂ ಕ್ಯಾಮೆರಾಗಳಲ್ಲಿ ಬಂಧಿಯಾದವು; ಒಂದನ್ನು ಬಿಟ್ಟು. ಒಳಬಾರದೆ ಹೊರವುಳಿದ ಗೂಬೆಯೆಂದರೆ, ಅಂಡಮಾನ್‌ ಬಾರ್ನ್ ಔಲ್‌. ಅಂದರೆ, ಅಂಡಮಾನ್‌...

  • ಲಂಕೆಯಲ್ಲಿ ಯುದ್ಧವೆಲ್ಲ ಮುಗಿದು, ಮರಳುವಾಗ ವಿಮಾನದ ಮೇಲಿಂದ ರಾಮನು ತನ್ನೊಲವಿನ ಮಡದಿ ಸೀತೆಗೆ ರಾಮೇಶ್ವರಂನ ದ್ವೀಪವನ್ನು ತೋರಿಸಿ- "ನೋಡಿಲ್ಲಿ, ಈ ದ್ವೀಪದಲ್ಲೇ...

  • ಸುತ್ತೂರಿನ ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವ ಈಗಾಗಲೇ ಶುರುವಾಗಿದ್ದು, 26ಕ್ಕೆ ಕೊನೆಗೊಳ್ಳಲಿದೆ. ಜಗತ್ತಿಗೆ ಶಾಂತಿ ಬೋಧಿಸಿದ ಈ ಮಠದಲ್ಲಿ ಭೋಜನವೂ...

ಹೊಸ ಸೇರ್ಪಡೆ