ಪತ್ರಿಕೋಗ್ರಾಣ: ಇಲ್ಲಿ 12,000 ಪತ್ರಿಕೆಗಳಿವೆ

Team Udayavani, Apr 20, 2019, 6:50 PM IST

ವೃತ್ತಿಯಲ್ಲಿ ಶಿಕ್ಷಕರಾದ ಕಲ್ಯಾಣ್‌ ಕುಮಾರ್‌ ಅವರಿಗೆ ಪತ್ರಿಕೆ ಸಂಗ್ರಹಿಸುವ ಹವ್ಯಾಸ. ಇದು ಹುಟ್ಟಿದ್ದು ಪರ ಊರಿಗೆ ಪ್ರಯಾಣಿಸುವಾಗ . ಬೇಜಾರು ಕಳೆಯಲಿಕ್ಕೆ ಅಂತ ಸಿಕ್ಕ ಸಿಕ್ಕ ಪತ್ರಿಕೆ ಓದುತ್ತಿದ್ದರಂತೆ ಕುಮಾರ್‌. ಹಾಗೇ ಜೊತೆಯಾದ ಹವ್ಯಾಸದಿಂದ, ಕಳೆದ 20 ವರ್ಷಗಳಿಂದ 12 ಸಾವಿರಕ್ಕೂ ಹೆಚ್ಚು ದೇಶ, ವಿದೇಶದ ಪತ್ರಿಕೆಗಳನ್ನು ಅವರು ಸಂಗ್ರಹಿಸಿದ್ದಾರೆ. ಮನೆಗೆ ಬಂದವರಿಗೆ ಅದನ್ನು ತೋರಿಸುವು ದೆಂದರೆ ಕಲ್ಯಾಣ ಕುಮಾರರಿಗೆ ಹೆಮ್ಮೆ.

ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲ್ಲೂಕಿನ ಹೀರೇಕಟ್ಟಿಗೇನಹಳ್ಳಿಯ ಶಿಕ್ಷಕ ಕಲ್ಯಾಣ್‌ಕುಮಾರ್‌ ಅವರ ಮನೆಗೆ ಕಾಲಿಟ್ಟರೆ ಮನೆ ಪೂರ್ತಿ ಪತ್ರಿಕೆಗಳೇ. ಕೈ ಇಟ್ಟ ಕಡೆಯಲ್ಲಾ ಕನ್ನಡ, ಹಿಂದಿ, ಇಂಗ್ಲೀಷ್‌, ಮಲೆಯಾಳಿ ಪತ್ರಿಕೆಗಳು ಸಿಗುತ್ತವೆ. ಇದೇನು ಇಷ್ಟೊಂದು ಪತ್ರಿಕೆ ಅಂದರೆ, ಅವರು ಮನೆಯನ್ನು ಮತ್ತೂ ಪರಿಚಯಿಸುತ್ತಾರೆ.

ರೂಮ್‌, ಹಾಲಿನಲ್ಲೂ ಪತ್ರಿಕೆಗಳೇ. ನೀವೇನು ಪತ್ರಿಕೆ ಏಜೆಂಟೆ? ಅಂದಾಗ ತಲೆ ಅಡ್ಡಡ್ಡ ಅಲ್ಲಾಡಿಸಿದರು. ಅಸಲಿ ವಿಚಾರ ಏನೆಂದರೆ, ಕಲ್ಯಾಣ್‌ಕುಮಾರ್‌ ಅವರಿಗೆ ಈ ರೀತಿ ಪತ್ರಿಕೆ ಸಂಗ್ರಹಸುವುದು ಪ್ರವೃತ್ತಿ. ಹೆಚ್ಚಕಮ್ಮಿ 12ಸಾವಿರ ಪತ್ರಿಕೆಗಳನ್ನು ಮನೆಯಲ್ಲಿ ತುಂಬಿಟ್ಟುಕೊಂಡಿದ್ದಾರೆ. ಬೆಳಗ್ಗೆ ಬಂದ ಪತ್ರಿಕೆ ಮಧ್ಯಾಹ್ನವಾಗುವಷ್ಟರಲ್ಲಿ ಹಳತಾಗಿ ಹೋಗಿರುತ್ತದೆ. ಈಗ ಬೆಳಗ್ಗೆ, ಸಂಜೆ ಎಲ್ಲ ಸಮಯದಲ್ಲೂ ಪತ್ರಿಕೆಗಳು ಬರುವುದರಿಂದ ಜನ ಪತ್ರಿಕೆಗಳ ಹೆಸರನ್ನು ನೆನಪಿನಲ್ಲಿಡುವುದಿಲ್ಲ. ಆದರೆ ಇದಕ್ಕೆಲ್ಲಾ ವಿರುದ್ಧ ಈ ಕಲ್ಯಾಣ್‌ಕುಮಾರ್‌.

ಪ್ರತಿ ಪತ್ರಿಕೆಗೆ ಸಂಬಂಧಿಸಿದಂತೆ ದಾಖಲೆಗಳನ್ನು ಇಟ್ಟಿದ್ದಾರೆ. ಇವರ ಸಂಗ್ರಹದಲ್ಲಿ ರಾಜ್ಯ, ದೇಶ, ವಿದೇಶದ ಪತ್ರಿಕೆಗಳು ಹಾಗೂ ನಿಯತಕಾಲಿಕೆಗಳ ಸಂಗ್ರಹದ ದೊಡ್ಡ ಭಂಡಾರವೇ ಇದೆ.
ಕಲ್ಯಾಣ್‌ಕುಮಾರ್‌ ವೆಂಕಟಗಿರಿಕೋಟೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಹ ಶಿಕ್ಷಕರಾಗಿದ್ದಾರೆ. ಕಳೆದ 20 ವರ್ಷಗಳಿಂದ ನಾಡಿನ ನಾನಾ ಭಾಗಗಳಿಂದ ಪ್ರಕಟವಾಗುವ ಪತ್ರಿಕೆಗಳನ್ನು ಸಂಗ್ರಹಿಸಿದ್ದಾರೆ. ಇವರಿಗೆ ಪತ್ರಿಕೆಗಳನ್ನು ಸಂಗ್ರಹಿಸುವ ಹವ್ಯಾಸ ಹುಟ್ಟಿದ್ದು ವಿಚಿತ್ರವೇ.

ಮೊದಲು ಶಿಕ್ಷಕ ವೃತ್ತಿಯನ್ನು ನಿಮ್‌ ಕಾಯನಹಳ್ಳಿಯಲ್ಲಿ ಆರಂಭಿಸಿದರು. ಆಗ ಬಸ್ಸಿಗಾಗಿ ಕಾಯಬೇಕಿತ್ತು. ಬೇಜಾರು ಕಳೆಯಲೆಂದು ಪತ್ರಿಕೆಯನ್ನು ಕೊಂಡು ಓದುವ ಹವ್ಯಾಸ ರೂಢಿಸಿಕೊಂಡರು. ಅದೇ, ಮುಂದೆ ಪತ್ರಿಕೆಗಳ ಸಂಗ್ರಹಕ್ಕೆ ದಾರಿಯಾಯಿತು ಎಂದು ಹೇಳುತ್ತಾರೆ ಕಲ್ಯಾಣ ಕುಮಾರ್‌. ಯಾವುದೇ ಊರಿಗೆ ಪ್ರಯಾಣ ಮಾಡಲಿ, ಅಲ್ಲಿನ ಸ್ಥಳೀಯ ಪತ್ರಿಕೆಗಳನ್ನು ಕೊಂಡು ತಮ್ಮ ಸಂಗ್ರಹದಲ್ಲಿ ಸೇರಿಸುತ್ತಾರೆ.

ಇವರ ಸಂಗ್ರಹದಲ್ಲಿ 1913ರಲ್ಲಿ ಪ್ರಕಟಗೊಳ್ಳುತ್ತಿದ್ದ ಒಕ್ಕಲಿಗರ ಪತ್ರಿಕೆ, ದಿ ಟ್ರೂಥ್‌, ಕನ್ನಡತಿ, ಸಾಧ್ವಿ, ಜನವಾಣಿ, ಭಕ್ತಬಂಧು, ಚಿತ್ರಗುಪ್ತ ಎಂಬ ಹಳೆಯ ಪತ್ರಿಕೆಗಳಿವೆ. ಇದರ ಜೊತೆಗೆ ಇಂದಿನ ರಾಜ್ಯ ಮಟ್ಟದ ದಿನಪತ್ರಿಕೆಗಳೂ ಇವರ ಸಂಗ್ರಹದಲ್ಲಿವೆ. ಇಷ್ಟೇ ಅಲ್ಲ, ಆಗಿನ ಕಾಲದ ಪತ್ರಿಕೆಗಳ ಬೆಲೆಯು ಇವರ ಬಳಿ ಲಭ್ಯ. ತಾಯಿನಾಡು ಪತ್ರಿಕೆ ಜನವರಿ 1957ರಲ್ಲಿ 1 ಆಣೆ, ಸಂಪದಭ್ಯುದಯ ಪತ್ರಿಕೆ 1912 ರಲ್ಲಿ ತಿಂಗಳಿಗೆ 1.9 ಆಣೆ ಇತ್ತು. ಪ್ರತಿ ಶನಿವಾರ ಪ್ರಕಟವಾಗುತ್ತಿದ್ದ ದಿ ಟ್ರೂತ್‌ನ ವಾರ್ಷಿಕ ಚಂದಾ 4 ರೂ, ಜನವಾಣಿ 1938 ರಲ್ಲಿ 9 ಕಾಸು, ವೀರ ಕೇಸರಿ 1928 ರಲ್ಲಿ 6 ಕಾಸು, ನವಭಾರತ 1952ರಲ್ಲಿ ಒಂದು ಆಣೆಗೆ ಮಾರಾಟವಾಗುತ್ತಿತ್ತು. ಕಲ್ಯಾಣ್‌ ಕುಮಾರ್‌ ಅವರ ಸಂಗ್ರಹದ ಪತ್ರಿಕೆಗಳನ್ನು ಒಮ್ಮೆ ಸವರಿ ನೋಡಿದರೆ, ಆಸಕ್ತಿಯಿಂದ ಕಣ್ಣು ಹಾಯಿಸಿದರೆ, ಈ ಅಪರೂಪದ ವಿವರಗಳೆಲ್ಲ ಅರಿವಿಗೆ ಬರುತ್ತದೆ.

ಇದಲ್ಲದೆ, ತಮಿಳುನಾಡು, ಒರಿಸ್ಸಾ, ಕೇರಳ, ಗೋವಾ, ಜಮ್ಮು ಮತ್ತು ಕಾಶ್ಮೀರ, ಸಿಕ್ಕೀಂ, ಅರುಣಾಚಲ ಪ್ರದೇಶ, ಅಸ್ಸಾಂ, ಬಿಹಾರ, ಪಂಜಾಬ್‌ ಹೀಗೆ ಒಟ್ಟು 25 ಕ್ಕೂ ಹೆಚ್ಚು ರಾಜ್ಯಗಳ ಮತ್ತು ರಷ್ಯಾ, ಚೀನಾ, ಅಮೆರಿಕಾ, ಜಕಾರ್ತ, ಸೌಧಿ ದೇಶಗಳು, ಇಂಗ್ಲೆಂಡ್‌, ಜರ್ಮನಿ, ಬರ್ಮಾ, ಸಿಂಗಾಪುರ, ಶ್ರೀಲಂಕಾ ಇನ್ನು ಮುಂತಾದ ದೇಶಗಳ ಪತ್ರಿಕೆಗಳೂ ಇವರ ಬಳಿ ಲಭ್ಯ.

— ಟಿ.ಶಿವಕುಮಾರ್‌


ಈ ವಿಭಾಗದಿಂದ ಇನ್ನಷ್ಟು

  • ವರ್ಷ ವರ್ಷ ಬರುವ ಯುಗಾದಿ, ದೀಪಾವಳಿಯಂತೆ ಈ ಬಾರಿಯೂ ಐಪಿಎಲ್‌ ಬಂದಿದೆ, ಹಾಗೆಯೇ ಮುಗಿದು ಹೋಗಿದೆ. ಪ್ರತೀ ಬಾರಿಯಂತೆ ಈ ಬಾರಿಯೂ ಕೆಲವು ಪ್ರಶ್ನೆಗಳಿಗೆ ಉತ್ತರವೇ...

  • 12ನೇ ಐಪಿಎಲ್‌ ಹಣಾಹಣಿ ಅತ್ಯಂತ ರೋಚಕವಾಗಿ ಮುಗಿದಿದೆ. ಮುಂಬೈ ಕೇವಲ ಒಂದು ರನ್‌ ಅಂತರದಿಂದ ಚೆನ್ನೈಗೆ ಸೋಲುಣಿಸಿ ದಾಖಲೆ 4ನೇ ಸಲ ಟ್ರೋಫಿ ಎತ್ತಿದ್ದು ಈಗ ಇತಿಹಾಸ....

  •   ಹಣೆಗೆ ತಿಲಕ ಇರಿಸಿಕೊಳ್ಳುವುದು ಹಿಂದೂ ಸಂಪ್ರದಾಯ. ಶ್ರೀಗಂಧ, ಅರಿಶಿನ, ಕುಂಕುಮ, ಹುತಾಬಸ್ಮ, ಆಂಗ್ರ ಅಕ್ಷ$ತೆಗಳಿಂದ ತಿಲಕ ಇತ್ತು ಕೊಳ್ಳಬಹುದಾಗಿದೆ. ಗಂಡಸರು,...

  • ಆತ ಸರ್ವಜ್ಞ, ಸರ್ವಶಕ್ತ ಮತ್ತು ಸರ್ವವ್ಯಾಪಿ. ಕಾಳಿದಾಸನ ಕುಮಾರಸಂಭವ ಮಹಾಕಾವ್ಯದ ನಾಯಕನಾಗಿ ಹಣೆಯಲ್ಲಿ ಭಸ್ಮ ಬಳಿದುಕೊಂಡ, ತಲೆಯಲ್ಲಿ ಚಂದ್ರನನ್ನು ಮುಡಿದುಕೊಂಡ,...

  • ಕಂಬದಿಂದ ಹೊರಬಂದ ಶ್ರೀನರಸಿಂಹ ಸ್ವಾಮಿಯು ಅತಿ ಕೋಪದಿಂದ ಹಿರಣ್ಯಕಶಿಪುವನ್ನು ಕೊಂದಮೇಲೆ ಆ ಕೋಪವನ್ನು ಶಮನ ಮಾಡಲು ಅಲ್ಲಿ ನೆರೆದಿದ್ದ ಬ್ರಹ್ಮಾದಿ ದೇವತೆಗಳಲ್ಲಿ...

ಹೊಸ ಸೇರ್ಪಡೆ