ಕೋಟೆ ನಾಡಿನ “ಊಟಿ’

Team Udayavani, Nov 16, 2019, 4:12 AM IST

“ಕೋಟೆನಾಡಿನ ಊಟಿ’ ಖ್ಯಾತಿಯ ಜೋಗಿಮಟ್ಟಿ ಗಿರಿಧಾಮದ ಸೌಂದರ್ಯ ಮಲೆನಾಡನ್ನು ಹೋಲುವಂಥದ್ದು. ಬೆಂಕಿಯಂಥ ಚಳಿ, ಹಿಮ್ಮೆಟ್ಟುವ ಬಿರುಗಾಳಿ, ಪ್ರೇಮ ಕಾಶ್ಮೀರವನ್ನು ನೆನಪಿಸುತ್ತದೆ…

ಕೋಟೆನಾಡು ಚಿತ್ರದುರ್ಗ ನಗರದ ಸುತ್ತ ಎತ್ತ ನೋಡಿದರತ್ತ ಬೃಹತ್‌ ಬಂಡೆಗಲ್ಲುಗಳ ರಾಶಿ ಕಣ್ಣಿಗೆ ರಾಚುತ್ತದೆ. ಕಲ್ಲಿನ ಕೋಟೆ, ಕೊತ್ತಲಗಳು, ಗುಹಾಂತರ ದೇಗುಲಗಳು, ಶಿಲ್ಪ ಕಲೆಗಳ ವೈಭವ ಕಣ್ಮನ ಸೆಳೆಯುತ್ತವೆ. ಕಲ್ಲುಗುಡ್ಡಗಳ ನಡುವೆ ಅಪರೂಪದ ಹಸಿರು ತಾಣವೊಂದಿದೆ. ಅದೇ ಜೋಗಿಮಟ್ಟಿ! ಆಗಸದಲ್ಲಿ ಬೆಳ್ಳಿ ಮೋಡಗಳ ಬೆಲ್ಲಿ ನೃತ್ಯ ವೈಭವ. ಸಂಭ್ರಮದಿ ತುಂತುರು ಹನಿಯಾಗಿ ಧರೆಗಳಿಯುವ ವರುಣ ದೇವ.

ಗಿರಿಧಾಮದ ಹಸಿರೆಲೆಗಳಿಗೆ ಇಬ್ಬನಿಯ ಮುತ್ತು. ನರ್ತಿಸುತ್ತ ಬಯಲಿಗೆ ಬಂದು ಪರಿಸರ ಪ್ರಿಯರಿಗೆ ಆಹ್ವಾನ ನೀಡುವ ನಾಟ್ಯ ಮಯೂರಿಯ ಗಮ್ಮತ್ತು. ಇದು ಬಯಲುಸೀಮೆಯ ಹಸಿರು ತಾರೆ ಜೋಗಿಮಟ್ಟಿಯ ಸೊಬಗು. ಚಿತ್ರದುರ್ಗ ನಗರದ ಮದಕರಿ ನಾಯಕ ವೃತ್ತದಿಂದ ಜೋಗಿಮಟ್ಟಿ ರಸ್ತೆ ಮೂಲಕ 10 ಕಿ.ಮೀ.ನಷ್ಟು ಕಾಡಿನ ನಡುವೆ ಸಾಗಿದರೆ ಸಾಕು “ಕೋಟೆನಾಡಿನ ಊಟಿ’ ಖ್ಯಾತಿಯ ಜೋಗಿಮಟ್ಟಿ ಗಿರಿಧಾಮದ ಸೌಂದರ್ಯ ಮಲೆನಾಡನ್ನು ಹೋಲುವಂಥದ್ದು.

ಬೆಂಕಿಯಂಥ ಚಳಿ, ಹಿಮ್ಮೆಟ್ಟುವ ಬಿರುಗಾಳಿ, ಪ್ರೇಮ ಕಾಶ್ಮೀರವನ್ನು ನೆನಪಿಸುತ್ತದೆ. ಬೆಳಗಿನ ಜಾವ ಜೋಗಿಮಟ್ಟಿಯತ್ತ ಹೆಜ್ಜೆ ಹಾಕಿದರೆ ನೂರಾರು ಜನ ವಾಯು ವಿಹಾರಿಗಳು ಜತೆಯಾಗುತ್ತಾರೆ. ಒಂದು ಕಡೆ ಚಿರತೆ, ಮತ್ತೂಂದು ಕಡೆ ಕರಡಿ ಆಕೃತಿಯ ಸುಂದರ ದ್ವಾರದಡಿ ಪ್ರವೇಶಿಸಿ, ಹಸಿರಸಿರಿ ನಡುವೆ ಮುನ್ನಡೆದರೆ ಸಾಲು ಸಾಲು ನವಿಲುಗಳು ಸ್ವಾಗತಕ್ಕೆ ನಿಂತಿರುತ್ತವೆ. ಹಕ್ಕಿಗಳ ಚಿಲಿಪಿಲಿ ಗಾನ ಮನಸ್ಸಿಗೆ ಮುದ ನೀಡಿದರೆ ತಣ್ಣನೇ ಗಾಳಿ ಮೈಗೆ ಸೋಕುತ್ತದೆ.

ವಿಸ್ಮಯಗಳ ಗಣಿ: ಜೋಗಿಮಟ್ಟಿ ಅರಣ್ಯ ಏಷ್ಯಾ ಖಂಡದಲ್ಲೇ ಅತಿ ಹೆಚ್ಚು ಗಾಳಿ ಬೀಸುವ ಪ್ರದೇಶಗಳ ಪೈಕಿ ಒಂದು. ಸಮುದ್ರ ಮಟ್ಟದಿಂದ 1323 ಮೀಟರ್‌ ಎತ್ತರ ಪ್ರದೇಶದಲ್ಲಿದೆ. 22 ಸಾವಿರ ಎಕರೆ ಪ್ರದೇಶ ವ್ಯಾಪ್ತಿ ಹೊಂದಿದ್ದು, ಹಲವು ವಿಶಿಷ್ಟ, ವಿಸ್ಮಯಗಳ ಗಣಿ. ಮಶ್ಚೇಂದ್ರನಾಥ ಎಂಬ ಜೋಗಿ ಈ ಪ್ರದೇಶದಲ್ಲಿ ನೆಲೆಸಿದ್ದು, ಈ ಭಾಗದ ಜನರಿಗೆ ಉಪಕಾರಿಯಾಗಿದ್ದರು. ಅರಣ್ಯದ ಔಷಧೀಯ ಸಸ್ಯಗಳ ಮೂಲಕ ಜನ- ಜಾನುವಾರುಗಳ ರೋಗ- ರುಜನಿಗೆ ಪರಿಹಾರ ನೀಡುತ್ತಿದ್ದರು.

ಅಧ್ಯಾತ್ಮದ ಮೂಲಕ ದೈವತ್ವಕ್ಕೇರಿದ ಸಂತ ನೆಲೆಸಿದ್ದರಿಂದ “ಜೋಗಿಮರಡಿ’, “ಜೋಗಿಮಟ್ಟಿ’ ಎಂಬ ಹೆಸರು ಬಂದಿದೆ. ಹಸಿರೆಲೆಗಳ ನಡುವೆ ನೂರಾರು ಮೆಟ್ಟಿಲೇರಿ ಸಾಗುವ ಗಿರಿಧಾಮದ ತುತ್ತ ತುದಿಯ ಸುಂದರ ಪರಿಸರದಲ್ಲಿ ಜೋಗಿಯ (ಕಾಲ ಭೈರವೇಶ್ವರ) ದೇಗುಲವಿದೆ. ದೇಗುಲ ಬಳಿ ಅರಣ್ಯ ಇಲಾಖೆ ನಿರ್ಮಿಸಿರುವ ವೀವ್‌ಪಾಯಿಂಟ್‌ ಏರಿದರೆ, ಆಕಾಶಕ್ಕೆ ಮೂರೇ ಗೇಣು. ನೂಕುವ ಗಾಳಿಗೆ ಎದೆಯೊಡ್ಡುವ ಸಾಹಸವೇ ರೋಚಕ, ಸವಿ ನೆನಪಿನ ಹಂದರ.

ದೇಗುಲದ ಕೆಳ ಭಾಗದ ವಿಶಾಲ ಪ್ರದೇಶದಲ್ಲಿ 1905ರಲ್ಲಿ ಬ್ರಿಟಿಷರು ನಿರ್ಮಿಸಿದ ಭವ್ಯ ಬಂಗಲೆ, ವಿಶ್ರಾಂತಿ ಕೊಠಡಿಗಳಿವೆ. ವಾಹನ ಪಾರ್ಕಿಂಗ್‌, ಸುಂದರ ವನ ಮತ್ತು ಅರಣ್ಯದಲ್ಲಿ ವಾಕಿಂಗ್‌ ವೇ ನಿರ್ಮಿಸಿಲಾಗಿದೆ. ಅರಣ್ಯ ಇಲಾಖೆಯ ಪರವಾನಗಿ ಪಡೆದರೆ ವಿಶ್ರಾಂತಿ ಗೃಹಗಳಲ್ಲಿ ಉಳಿದುಕೊಳ್ಳುವ ಅವಕಾಶವೂ ಇದೆ. ಗುಡ್ಡಗಾಡುಗಳ ನಡುವೆ ಹಸಿರೊದ್ದುಕೊಂಡು ನಿಂತಿರುವ ನವ ತರುಣೆ ಜೋಗಿಮಟ್ಟಿ ಚಾರಣಿಗರ ಸ್ವರ್ಗವೂ ಹೌದು.

ಗಾಳಿಯಲ್ಲಿ ಚಿಕಿತ್ಸಕ ಗುಣ” ಕರಡಿ, ಚಿರತೆ, ಜಿಂಕೆ, ನವಿಲುಗಳು, ಮೊಲ, ಕಾಡು ಹಂದಿ, ವಿವಿಧ ಪಕ್ಷಿಗಳು ಸೇರಿದಂತೆ ಸಾವಿರಾರು ಜೀವರಾಶಿಗಳು ಇಲ್ಲಿ ಆಶ್ರಯ ಪಡೆದಿವೆ. ಗಿರಿಧಾಮ, ಬೆಟ್ಟಗುಡ್ಡಗಳಲ್ಲಿ ಚಾರಣ ಹೊರಟವರಿಗೆ ದರ್ಶನ ನೀಡಿ ನಿಬ್ಬೆರಗಾಗಿಸಿವೆ. ಲೆಕ್ಕವಿಲ್ಲದಷ್ಟು ವಿವಿಧ ಜಾತಿಯ ಔಷದೀಯ ಸಸ್ಯಗಳು ಕಾಣಸಿಗುತ್ತವೆ. ಹೊನ್ನೆ , ತೇಗ, ಹೊಂಗೆ, ಶ್ರೀಗಂಧ, ಹಣ್ಣು- ಹಂಪಲು ಮರಗಳು ಸೇರಿದಂತೆ ವಿವಿಧ ತಳಿಯ ಗಿಡಮರಗಳು ಸಾಕಷ್ಟಿವೆ. ಇಲ್ಲಿನ ಗಾಳಿಯಲ್ಲೇ ಚಿಕಿತ್ಸಕ ಗುಣವಿದ್ದು, ವಾಯು ವಿಹಾರದಿಂದ ಮೈಮನಸ್ಸು ಹಗುರಾಗುತ್ತದೆ.

ಮಿನಿ ಝೂ…: ಜೋಗಿಮಟ್ಟಿ ತಪ್ಪಲಿನಲ್ಲಿರುವ ಆಡುಮಲ್ಲೇಶ್ವರ ಅರಣ್ಯ ಜೋಗಿಮಟ್ಟಿಗೆ ಹೊಸ ಮೆರಗು ನೀಡಿದೆ. ಜೋಗಿಮಟ್ಟಿ ಪ್ರವೇಶದ ಗೇಟ್‌ನಿಂದ ಬಲಕ್ಕೆ ತಿರುಗಿದರೆ ಆಡುಮಲ್ಲೇಶ್ವರ ಅರಣ್ಯ ಹಚ್ಚ ಹಸಿರಿನ ಸಿರಿಯೊಂದಿಗೆ ಬರಮಾಡಿಕೊಳ್ಳುತ್ತದೆ. 2 ಕಿ.ಮೀ. ಸಾಗಿದರೆ ಅರಣ್ಯ ಇಲಾಖೆ ನಿರ್ಮಿಸಿರುವ ಆಡುಮಲ್ಲೇಶ್ವರ ಕಿರು ಪ್ರಾಣಿ ಸಂಗ್ರಹಾಲಯ ಸಿಗುತ್ತದೆ. ಚಿರತೆ, ಕರಡಿ, ಹೆಬ್ಬಾವು, ನವಿಲು, ಜಿಂಕೆ, ಲವ್‌ ಬರ್ಡ್ಸ್ ಸೇರಿದಂತೆ ವಿವಿಧ ಪ್ರಾಣಿ-ಪಕ್ಷಿಗಳ ವೀಕ್ಷಣೆ ಕಣ್ಣಿಗೆ ಹಬ್ಬ. ಹೊರ ಭಾಗದಲ್ಲಿ ನಿರ್ಮಿಸಿರುವ ಸುಂದರ ಪಾರ್ಕ್‌ ಮಕ್ಕಳಿಗೆ ರಸದೌತಣ ನೀಡುತ್ತದೆ.

ಇದೇ ದಾರಿ…: ಬೆಂಗಳೂರಿನಿಂದ ಚಿತ್ರದುರ್ಗಕ್ಕೆ ಎನ್‌ಎಚ್‌- 4ರಲ್ಲಿ ಸಂಚರಿಸಿದರೆ, 200 ಕಿ.ಮೀ. ದೂರವಾಗಲಿದೆ. ನಗರದಿಂದ ಜೋಗಿಮಟ್ಟಿ ತಲುಪಲು 10 ಕಿ.ಮೀ. ಕಾಡಿನ ದಾರಿಯಲ್ಲಿ ಚಲಿಸಬೇಕಿದೆ.

ಪ್ರವಾಸಿಗರ ಗಮನಕ್ಕೆ…
– ಜೋಗಿಮಟ್ಟಿಯ ವೀವ್‌ ಪಾಯಿಂಟ್‌ಗೆ ತೆರಳಿದಾಗ ಅಲ್ಲಿ ಯಾವುದೇ ಆಹಾರ ವ್ಯವಸ್ಥೆ ಇರುವುದಿಲ್ಲ.
– ಅತಿಥಿ ಗೃಹದಲ್ಲಿ ಉಳಿದವರಿಗೆ ಮುಂಗಡವಾಗಿ ತಿಳಿಸಿದ್ದರೆ, ಆಹಾರ ವ್ಯವಸ್ಥೆಯನ್ನೂ ಅಲ್ಲಿನ ಸಿಬ್ಬಂದಿ ಪೂರೈಸುತ್ತಾರೆ.
– ಜೋಗಿಮಟ್ಟಿ ಪರಿಸರ ಸವೆಯಲು ತೆರಳುವವರು, ದುರ್ಗ ನಗರದಿಂದಲೇ ನೀರು ಆಹಾರ ಜತೆಗೆ ಕೊಂಡೊಯ್ಯುವುದು ಸೂಕ್ತ.
– ಆಡುಮಲ್ಲೇಶ್ವರ ಕಿರು ಪ್ರಾಣಿ ಸಂಗ್ರಹಾಲಯದಲ್ಲಿ ಪುಟ್ಟ ಕ್ಯಾಂಟೀನ್‌ ಇದೆ.
– ಜೋಗಿಮಟ್ಟಿ ಪ್ರವೇಶ ದ್ವಾರದಿಂದ ಕೇವಲ ಅರ್ಧ ಕಿ.ಮೀ. ನಗರದತ್ತ ಚಲಿಸಿದರೂ ಸಾಕು ಹೋಟೆಲ್‌ಗ‌ಳು ಸಿಗುತ್ತವೆ.

* ಬಸವರಾಜ ಮುದನೂರ್‌


ಈ ವಿಭಾಗದಿಂದ ಇನ್ನಷ್ಟು

  • ಆ ಸೂರ್ಯ ಹುಟ್ಟೋದು ಕೋಳಿ ಕೂಗಿನಿಂದ ಹೌದೋ ಅಲ್ಲವೋ ಗೊತ್ತಿಲ್ಲ. ಆದರೆ, ಎಪ್ಪತ್ತರ ದಶಕದ ಮಧ್ಯಭಾಗದಿಂದ ಕೆಲವು ವರ್ಷಗಳ ಹಿಂದಿನವರೆಗೂ ಭಾರತೀಯರ ಬೆಳಗು ಮಾತ್ರ...

  • ಇತ್ತೀಚೆಗೆ ನಮ್ಮನ್ನು ಅಗಲಿದ ವಿದ್ವಾಂಸ, ಇತಿಹಾಸಕಾರ ನವರತ್ನ ಎಸ್‌. ರಾಜಾರಾಮ್‌, ಕನ್ನಡಿಗರಿಗೆ ಸಂಸ್ಕೃತಿ ಚಿಂತನೆಗಳಿಂದಲೇ ಸುಪರಿಚಿತರು. ಭಾರತದ ಪ್ರಾಚೀನ...

  • ಹಿಂದೆ ರಾಜರ ಕಾಲದಲ್ಲಿ ಶತ್ರುಗಳನ್ನು ಕೊಲ್ಲಲು, ಗೋಸುಂಬೆಯ ಜೊಲ್ಲನ್ನು ಬಳಸುತ್ತಿದ್ದರಂತೆ. ಅದನ್ನು ನೋಡಿದರೆ, ಕೆಡುಕು ಅನ್ನೋದು ರೈತನ ಮನಸೊಳಗೆ ತುಂಬಿಹೋಗಿತ್ತು....

  • ಅಲ್ಲಿಯ ತನಕ ಪ್ರಶಾಂತವಾಗಿದ್ದ ರಾಮನ ಬದುಕಿನಲ್ಲಿ ಕಾಣದ ಕಲ್ಲೊಂದು ಬೀಳುವುದು, ಇದೇ ಪಂಚವಟಿಯಲ್ಲಿಯೇ. ಸುಖೀಯಾಗಿದ್ದ ರಾಮನ ದಾಂಪತ್ಯದ ಮೇಲೆ ರಾವಣನ ದೃಷ್ಟಿ...

  • ವಿದ್ಯೆ ಬಲ್ಲ ಮನುಷ್ಯ ಏನನ್ನೂ ಬರೆಯಬಲ್ಲ; ಹಣೆಬರಹವೊಂದನ್ನು ಬಿಟ್ಟು! ವಿಧಿಲಿಖೀತ ಬ್ರಹ್ಮನಿಂದ ಮಾತ್ರವೇ ಸಾಧ್ಯ ಎನ್ನುವುದು ಅನೇಕರ ನಂಬಿಕೆ ಇದ್ದಿರಬಹುದು....

ಹೊಸ ಸೇರ್ಪಡೆ