ವಿಶ್ವದ ದೊಡ್ಡಣ್ಣ ಈ ಹುಣಸೆ ಮರ

Team Udayavani, Apr 20, 2019, 7:15 PM IST

ಇಂದು ನಿತ್ಯ ಹರಿದ್ವರ್ಣ ಕಾಡುಗಳಲ್ಲಷ್ಟೇ ಬೃಹತ್‌ ಗಾತ್ರದ ದೇವದಾರು, ತೇಗ, ಬೀಟೆ ಮೊದಲಾದ ಮರಗಳನ್ನು ಕಾಣಬಹುದು. ಆದರೆ ಸವಣೂರಿನ ಕಲ್ಮಠದಲ್ಲಿ ಸಾವಿರಾರು ವರ್ಷಗಳ ಇತಿಹಾಸವಿರುವ, ವಿಶ್ವದ ದೊಡ್ಡ ಮರಗಳಲ್ಲಿ ಒಂದು ಎನಿಸಿಕೊಂಡಿರುವ ಹುಣಸೆ ಮರವಿದೆ.

ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಸವಣೂರಿನ ಕಲ್ಮಠದಲ್ಲೊಂದು ವಿಶಿಷ್ಟವಾದ ಹುಣಸೆ ಮರವಿದೆ. ಇದು ವಿಶ್ವದಲ್ಲೇ ಅತ್ಯಂತ ದೊಡ್ಡ ಗಾತ್ರದ ಹುಣಸೆ ಮರವೆಂದು ಹೆಸರು ಪಡೆದಿದೆ. ಇಲ್ಲಿರುವ ಮೂರು ಬೃಹತ್‌ ಗಾತ್ರದ ಹುಣಸೆ ಮರಗಳು ಇತಿಹಾಸದ ಕೊಂಡಿಯಾಗಿವೆ. ಪ್ರಕೃತಿಯ ವೈಚಿತ್ರ್ಯಕ್ಕೆ ಹಾಗೂ ವಿಶೇಷತೆಗೆ ಸಾಕ್ಷಿಯಾಗಿ ನಿಂತಿವೆ. ಇದರ ಮುಂದೆ ನಿಂತರೆ ನಾವು ಬಹಳ ಸಣ್ಣವರಾಗಿಬಿಡುತ್ತೇವೆ. ದೂರದಿಂದ ನೋಡಿ­ದಾಗ ದೊಡ್ಡ ಆನೆಗಳು ನಿಂತಿರುವಂತೆ ಭಾಸವಾಗುತ್ತದೆ.

ಈ ಮರಗಳಿಗೆ ಅನೇಕ ಶತಮಾನಗಳ ಇತಿಹಾಸವಿದ್ದು, ಇದರ ಗಾತ್ರವು ಕಣ್ಣಳತೆಯನ್ನು ಮೀರಿಸುವಷ್ಟು ವಿಸ್ತಾರವಾಗಿವೆ. ಈ ಹುಣಸೆ ಮರ ಬಾಂಬು ಕೇಶಯಾ ಎನ್ನುವ ಪ್ರಭೇದಕ್ಕೆ ಸೇರಿದೆ. ಈ ಪ್ರಭೇದದ ಮೂಲ ದಕ್ಷಿಣ ಆಫ್ರಿಕಾ ಎನ್ನುತ್ತದೆ ಇತಿಹಾಸ. ಮರದ ಕಾಂಡದ ತಳವು ಉಬ್ಬಿದ ಬಾಟಲಿಯಂತಿದ್ದು, ಮೇಲ್ಭಾಗಕ್ಕೆ ಸಾಗಿದಂತೆ ಮೊನಚಾಗುತ್ತಾ ಸಾಗುತ್ತದೆ. ಈ ಪ್ರಭೇದದ ಮರಗಳು ಭಾರತ ದೇಶದಲ್ಲಿ ಕೆಲವೇ ಕೆಲವು ಇವೆ.

ಗೋರಖನಾಥ ವೃಕ್ಷಗಳು
ಈ ವೃಕ್ಷಗಳು ಆಯುರ್ವೇದೀಯ ಹಾಗೂ ಔಷಧೀಯ ಗುಣವನ್ನು ಹೊಂದಿದ್ದು, ಇವುಗಳ ಬುಡದಲ್ಲಿ ಯಾವುದೇ ಪದಾರ್ಥಗಳು ಅಥವಾ ಮೃತದೇಹವನ್ನು ಇಟ್ಟರೂ ಅವುಗಳು ಕೊಳೆಯದಿರುವಂಥ ವಿಶೇಷ ಶಕ್ತಿಯನ್ನು ಈ ಮರಗಳು ಹೊಂದಿರುವುದು ವಿವಿಧ ವೈಜ್ಞಾನಿಕ ಸಂಶೋಧನೆಯಿಂದಲೂ ದೃಢಪಟ್ಟಿದೆಯಂತೆ.

ಇನ್ನೊಂದು ಮೂಲದ ಪ್ರಕಾರ, ಈ ಮರಗಳನ್ನು ಹಠಯೋಗಿ ಗೋರಖನಾಥರು ಪ್ರಪಂಚ ಪರ್ಯಟನೆಯ ವೇಳೆ ದಕ್ಷಿಣ ಆಫ್ರಿಕಾಕ್ಕೆ ಭೇಟಿ ಕೊಟ್ಟಿದ್ದರು. ಅಲ್ಲಿಂದ ಈ ಹುಣಸೆ ಸಸಿಯನ್ನು ತಂದು ಕಲ್ಮಠದಲ್ಲಿ ಕಠಿಣ ತಪಸ್ಸನ್ನಾಚರಿಸುತ್ತಿದ್ದ ಸಂದರ್ಭದಲ್ಲಿ ನೆಟ್ಟಿರುವ ಕಾರಣದಿಂದ ಈ ಮರಕ್ಕೆ ಗೋರಖನಾಥ ವೃಕ್ಷಗಳೆಂಬ ಹೆಸರೂ ಬಂದಿದೆ ಎನ್ನುತ್ತಾರೆ.

ಈ ಎಲೆಗಳ ಗುಚ್ಛವನ್ನು ನೋಡಿದಾಗ ಮಾನವನ ಅಂಗೈಯಂತೆ ಕಾಣಿಸುತ್ತದೆ. ಮರದ ಕಾಂಡವು ದೊಡ್ಡ ಗಾತ್ರದ ಕಲ್ಲಿನ ಗುಡ್ಡದಂತೆ ಕಾಣಿಸುತ್ತಿದ್ದು, ತೊಗಟೆಯು ಖಡ್ಗಮೃಗದ ಅಥವಾ ಆನೆಯ ಚರ್ಮದಂತೆ ಮಡಿಕೆ ಮಡಿಕೆಯಾಗಿದೆ. ಕಾಂಡದಿಂದಲೇ ಈ ಮರಕ್ಕೆ ಅನೇಕ ಗೆಲ್ಲುಗಳಿದ್ದು, ಚಳಿಗಾಲದಲ್ಲಿ ಮರದ ಎಲೆಗಳೆಲ್ಲಾ ಉದುರಿ ಮೇ ತಿಂಗಳಿನಲ್ಲಿ ಮತ್ತೆ ಎಲೆಗಳು ಚಿಗುರಲಾರಂಭಿಸುತ್ತದೆ. ಈ ವೃಕ್ಷಗಳ ಕುರಿತಾಗಿ ಸಸ್ಯಶಾಸ್ತ್ರ ವಿಭಾಗವು ಸಂಶೋಧನೆಯನ್ನು ನಡೆಸಿ ಈ ವೃಕ್ಷಗಳು ಕನಿಷ್ಠವೆಂದರೂ 2,000 ವರ್ಷಗಳಿಗಿಂತಲೂ ಪುರಾತನ ಇತಿಹಾಸವನ್ನು ಹೊಂದಿರುವುದನ್ನು ಖಚಿತಪಡಿಸಿವೆ.

ಭಾರೀಗಾತ್ರದ ಹಣ್ಣುಗಳು
ಇವುಗಳು ತೆಂಗಿನಕಾಯಿಯ ಗಾತ್ರದ 8-20 ಇಂಚಿನ ಕಾಯಿಗಳನ್ನು ಬಿಡುತ್ತಿದ್ದು ಕಾಯಿಯ ಮೇಲ್ಭಾಗದಲ್ಲಿ ಬಟ್ಟೆಯಂಥ ಮೆತ್ತನೆಯ ಪದರದಂತಹ ಹೊದಿಕೆಯನ್ನು ಹೊಂದಿವೆ. ಕಾಯಿಯನ್ನು ಒಡೆದರೆ ಒಳಗಡೆ ದಪ್ಪನೆಯ ಜೇಡರ ಬಲೆಯಂತೆ ಕಾಣಿಸುವ ಬೆಳ್ಳನೆಯ ಹುಣಸೆ ಹಣ್ಣುಗಳನ್ನು ಕಾಣಬಹುದು. ಈ ಹಣ್ಣುಗಳು ಸ್ವಲ್ಪ ಹುಳಿ ಮತ್ತು ಸಿಹಿಯಾದ ರುಚಿಯನ್ನು ಹೊಂದಿವೆ. ಗಾತ್ರದಲ್ಲಿ ದೊಡ್ಡದಾದ ಗಾತ್ರದ ಹಣ್ಣುಗಳನ್ನು ಬಿಡುವುದರಿಂದ ಈ ವೃಕ್ಷಗಳಿಗೆ ದೊಡ್ಡ ಹುಣಸೇ ಮರ ಎಂಬ ಹೆಸರು ಬಂದಿದೆ. ಇಲ್ಲಿ ಒಟ್ಟು ಮೂರು ಮರಗಳಿವೆ.

ಮೊದಲನೇ ವೃಕ್ಷದ ಕಾಂಡದ ಸುತ್ತಳತೆಯು 15.70 ಮೀ. ಮತ್ತು ಎತ್ತರ 19.00 ಮೀ. ಎರಡನೇ ಮರದ ಕಾಂಡದ ಸುತ್ತಳತೆಯು 13.25 ಮೀ ಮತ್ತು ಎತ್ತರ 17.00 ಮೀ. ಮೂರನೆಯದರ ಸುತ್ತಳತೆ 12.63 ಮೀ. ಎತ್ತರ 18 ಮೀ ಇದೆ ಎಂದಾಗ ಇದರ ಗಾತ್ರದ ಅಗಾಧತೆಯ ಅರಿವಾಗುತ್ತದೆ. ಈ ಮರದಲ್ಲಿ ಬೃಹತ್‌ ಗಾತ್ರದ ಬಾವಲಿಗಳು ವಾಸವಿದ್ದು, ಅವುಗಳ ಚೀತ್ಕಾರ ಇಲ್ಲಿ ಸಾಮಾನ್ಯವಾಗಿದೆ.

ರಾತ್ರಿಯ ಹೊತ್ತು ಈ ಬಾವಲಿಗಳು ಆಹಾರಕ್ಕಾಗಿ ಬೇರೆಡೆ ತೆರಳುತ್ತವೆ. ಈ ಮರದ ತುಂಬಾ ಅಲ್ಲಲ್ಲಿ ಜೇನು ಮತ್ತು ಹೆಜ್ಜೇನು ಗೂಡುಗಳೂ ಯಥೇಚ್ಛವಾಗಿ ಕಾಣಸಿಗುತ್ತದೆ.
ದೊಡ್ಡಹುಣಸೆ, ಆನೆಹುಣಸೆ, ಮುಗಿಮಾವು ಮತ್ತು ಬ್ರಹ್ಮಾಮ್ಲಿಕ್‌ ವೃಕ್ಷಗಳೆಂಬ ವೈವಿಧ್ಯಮಯ ಹೆಸರುಗಳಿಂದ ಈ ವೃಕ್ಷಗಳನ್ನು ಕರೆಯಲಾಗು­ತ್ತದೆ. ಈ ಅಪರೂಪದ ವೃಕ್ಷದ ವೈಜ್ಞಾನಿಕ ಹೆಸರು ಆಡೆನ್ಸೋನಿಯಾ ಡಿಟಾಟಾ ಎಂದು. ಈ ಮರಗಳು ಬೂರುಗದ ಹತ್ತಿಯ ಕುಟುಂಬಕ್ಕೆ ಸೇರಿರುವುದರಿಂದ ಇವುಗಳನ್ನು ಆಂಗ್ಲ ಭಾಷೆಯಲ್ಲಿ ಬೊಬಾಟ್ ಟ್ರೀ, ಮಂಕಿ ಬ್ರೆಡ್‌ ಟ್ರೀ, ಆಫ್ರಿಕನ್‌ ಕಲಬಾಷ್‌ ಟ್ರೀ, ಸೋರ್‌ ಗೋಡರ ಟ್ರೀ ಎಂಬ ವಿಭಿನ್ನ ಹೆಸರುಗಳಿಂದಲೂ ಕರೆಯುತ್ತಾರೆ.

ದಾರಿ ಯಾವುದು?: ಸವಣೂರು, ಹುಬ್ಬಳ್ಳಿಯಿಂದ 65 ಕಿ.ಮೀ ಹಾಗೂ ಹಾವೇರಿಯಿಂದ 32 ಕಿ.ಮೀ ದೂರವಿದೆ. ಇಲ್ಲಿಗೆ ರೈಲು ಸೌಲಭ್ಯವೂ ಇದ್ದು, ಹುಬ್ಬಳ್ಳಿಗೆ ವಿಮಾನ ಸೌಲಭ್ಯವೂ ಇದೆ. ಸವಣೂರಿನಲ್ಲಿ ಉಳಿದುಕೊಳ್ಳಲು ಹೋಟೆಲ್ ಸೌಲಭ್ಯವೂ ಇದೆ.

6000 ವರ್ಷ ಬದುಕಬಲ್ಲವಂತೆ!
ಈ ಮರಗಳು ಆಫ್ರಿಕಾಖಂಡಕ್ಕೆ ಸೇರಿರುವುದರಿಂದ ಫ್ರೆಂಚ್‌ ಸಸ್ಯ ವಿಜ್ಞಾನಿ ಅಡೆನ್ಸನ್‌ ಸ್ಮರಣಾರ್ಥವಾಗಿ ಈ ಮರಗಳಿಗೆ ಅಡೆನ್ಸೋನಿಯಾ ಎಂಬ ಹೆಸರಿಡಲಾಗಿದೆ. ಜಗತ್ತಿನ ಅತ್ಯಂತ ಪ್ರಾಚೀನ ಹಾಗೂ ಅಳಿವಿನಂಚಿನಲ್ಲಿರುವ ವೃಕ್ಷಗಳ ಸಾಲಿಗೆ ಈ ಮರಗಳು ಸೇರಿದ್ದು, ಇವುಗಳು ಸುಮಾರು 6000 ವರ್ಷಗಳವರೆಗೂ ಬದುಕಬಲ್ಲವು ಎಂದು ವಿಜ್ಞಾನಿಗಳು ಹೇಳುತ್ತಾರೆ. ಈ ಅಪರೂಪದ ವೃಕ್ಷಗಳನ್ನು ನೋಡಲೆಂದೇ ವಿವಿಧ ರಾಜ್ಯಗಳಿಂದ ಪ್ರವಾಸಿಗರು ಆಗಮಿಸಿ ಕಲ್ಮಠವನ್ನೂ ವೀಕ್ಷಿಸುತ್ತಾರೆ.

— ಸಂತೋಷ್‌ ರಾವ್‌ ಪೆರ್ಮುಡ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಗೋಕರ್ಣದ "ಸ್ಟಡಿ ಸರ್ಕಲ್‌', ಜಗತ್ತಿನ ಜ್ಞಾನದಾಹಿಗಳನ್ನು ತನ್ನತ್ತ ಸೆಳೆದ, ಅಪರೂಪದ ಗ್ರಂಥಾಲಯ. ಪುರಾತನ ಕಾಲದ ಮರದ ತೊಗಟೆಯ ಮೇಲಿನ ಲೇಖನದಿಂದ, ಇತ್ತೀಚಿನ ಡಿಜಿಟಲೀಕರಣಗೊಂಡ...

  • ಮಂತ್ರಾಲಯದ ಶ್ರೀ ಗುರು ರಾಘವೇಂದ್ರರ ಸನ್ನಿಧಾನದಲ್ಲಿ ರಾಯರ ಆರಾಧನೆಯು ಒಂದು ದಿವ್ಯಾನುಭೂತಿಯ ಸಂಭ್ರಮ. ಭಕ್ತಿ- ಭಾವದ ಉತ್ಸವ. ಶ್ರೀ ಗುರು ರಾಘವೇಂದ್ರರು ತೋರಿದ...

  • "ವಲ್ಡ್ ಫೋಟೊಗ್ರಫಿ ಡೇ' (ಆ.19ಕ್ಕೆ) ಮತ್ತೆ ಎದುರು ನಿಂತಾಗಿದೆ. ದಿನಪತ್ರಿಕೆಯ ಫೋಟೋಗ್ರಾಫ‌ರ್‌ನ ಕ್ಯಾಮೆರಾವಂತೂ ಕಣ್ಣು ಮಚ್ಚುವುದೇ ಇಲ್ಲ. ನೆರೆಬಂದು, ಅಣೆಕಟ್ಟಿನ...

  • ದಶಕದ ಹಿಂದೆ ಭೀಕರ ನೆರೆಗೆ ತುತ್ತಾಗಿ ಕಳೆಗುಂದಿದ್ದ ಸುಕ್ಷೇತ್ರ ಮಂತ್ರಾಲಯ ಶರವೇಗದಲ್ಲಿ ಬದಲಾದ ರೀತಿ ನಿಜಕ್ಕೂ ಪವಾಡವೇ ಸರಿ. ಈಗ ಮಂತ್ರಾಲಯಕ್ಕೆ ಬಂದರೆ ನಿಮಗೆ...

  • ಒಂದು ದೇಗುಲದಿಂದ ಮತ್ತೂಂದು ದೇಗುಲಕ್ಕೆ ಪೌರಾಣಿಕ ನಂಟೂ ಇರುತ್ತೆ. ಬನವಾಸಿಗೆ ಹೋದವರಿಗೆ ಗೈಡ್‌ಗಳು, ಮಧುಕೇಶ್ವರನ ಕಥೆ ಹೇಳುತ್ತಲೇ, ಅವರ ಬಾಯಿಂದ "ಕೈಟಭೇಶ್ವರ'...

ಹೊಸ ಸೇರ್ಪಡೆ