ಅನಿವಾರ್ಯತೆಯ ಸರ್ಕಸ್‌ ಕೆಲವೊಮ್ಮೆ ಇತಿಹಾಸಕ್ಕೆ ಟ್ವಿಸ್ಟ್‌!

Team Udayavani, May 13, 2017, 12:23 PM IST

ಜನ ಸದಾ ಹೊಸತರ ಹುಡುಕಾಟದಲ್ಲಿರುತ್ತಾರೆ. ಅದು ಊಟದ ರುಚಿಯಲ್ಲಿ ಕಾಣಿಸಿದಷ್ಟೇ ಆಟದ ಮೈದಾನದಲ್ಲಿ ಕೂಡ. ಅರೆರೆ, 10 ವರ್ಷಗಳ ನಂತರವೂ ಅದೇ ರೋಜರ್‌ ಫೆಡರರ್‌, ರಾಫೆಲ್‌ ನಡಾಲ್‌ ನಡುವೆ ಸಮರ ಎಂತಾದರೆ, ಟೆನಿಸ್‌ ಅಲ್ಲಿಂದ ಮುಂದೆ ಬಂದೇ ಇಲ್ಲವೇ ಎಂಬರ್ಥದ ಫೇಸ್‌ಬುಕ್‌ ವಾಲ್‌ನಲ್ಲಿ ಮೊನ್ನೆ ಮೊನ್ನೆ ಟಿಪ್ಪಣಿಯೊಂದು ಕಾಣಿಸಿತ್ತು. ಹೊಸತನದ ಕೊರತೆಯೇ ಈ ಬಾರಿಯ ಐಪಿಎಲ್‌ನತ್ತ ಜನರ ಉತ್ಸಾಹವನ್ನು ಸ್ವಲ್ಪ ಕಡಿಮೆ ಮಾಡಿದೆ.

ರಾಯಲ್‌ ಚಾಲೆಂಜರ್ ಬೆಂಗಳೂರು ತಂಡದ ಪತನ ಹಾಗೂ ಕೆಲ ಸ್ಟಾರ್‌ ಆಟಗಾರರ ಗೈರು ಹಾಜರಿಯಿಂದ ಐಪಿಎಲ್‌ನ ಟಿಆರ್‌ಪಿ ಕುಸಿದಿದೆ ಎಂಬ ವಿಶ್ಲೇಷಣೆಯಿದೆ. ಅದು ಸಂಪೂರ್ಣ ನಿಜವಲ್ಲ. ವೀಕ್ಷಕ ದಿನಬೆಳಗಾಗುವುದರೊಳಗಾಗಿ ಹುಟ್ಟುವ ತಾರೆಯರತ್ತ ವಲಸೆ ಹೋಗಬಲ್ಲ, ಅವರನ್ನು ಆರಾಧಿಸಬಲ್ಲ. ಅವರನ್ನು ಹಿಂಬಾಲಿಸಲು ಶುರು ಮಾಡಲೂ ಓಕೆ. ಆತನಿಗೆ ಕ್ರಿಸ್‌ ಗೇಲ್‌, ಯುವರಾಜ್‌ಸಿಂಗ್‌, ಡಿವಿಲಿಯರ್, ಮೆಕಲಂ ಮಾತ್ರ ಬ್ಯಾಟ್‌ ಬೀಸಬೇಕು ಎಂದಿಲ್ಲ. ಆದರೆ ತಾರೆಯರು ಒನ್‌ಶೋ ವಂಡರ್‌ಗಳಾಗಬಾರದು. ಸಫ‌ಲತೆಯ ಮಾತು ಬದಿಗಿಟ್ಟರೂ ಕೊನೆಪಕ್ಷ ಹೊಸ ಹೊಸ ಪ್ರಯೋಗಗಳಾಗಬೇಕು. ಅಂತಹವುಗಳ ಕೊರತೆಯೇ ಐಪಿಎಲ್‌ಗೆ ಟಿವಿ ವೀಕ್ಷಕರ ಸಂಖ್ಯೆಯನ್ನು ಕಡಿತಗೊಳಿಸಿದೆ.

ಹಾಗೇ ಈ ಬಾರಿಯ ಐಪಿಎಲ್‌ನಲ್ಲಿ ಕಣ್ಣು ಹಾಯಿಸಿದರೆ, ಯಾವ ತಂಡವೂ ಪ್ರಯೋಗಗಳಿಗೆ ಮುಂದಾಗುತ್ತಿಲ್ಲ. ಇದ್ದುದರಲ್ಲಿ ಗೌತಮ್‌ ಗಂಭೀರ್‌ ನಾಯಕತ್ವದ ಕೊಲ್ಕತ್ತಾ ನೈಟ್‌ ರೈಡರ್, ವೆಸ್ಟ್‌ ಇಂಡೀಸ್‌ನ ಸ್ಪಿನ್ನರ್‌ ಸುನೀಲ್‌ ನಾರಾಯಣ್‌ ಅವರನ್ನ ಪಿಂಚ್‌ ಹಿಟ್ಟರ್‌ ಓಪನರ್‌ ರೂಪದಲ್ಲಿ ಕಳುಹಿಸಿ ಗಮನ ಸೆಳೆದಿದೆ. ಈ ಪ್ರಯೋಗದ ಸಫ‌ಲತೆ ಆ ತಂಡದ ಪ್ರದರ್ಶನವನ್ನೂ ಮೇಲೆತ್ತಿದೆ. ಈವರೆಗಿನ 12 ಪಂದ್ಯದಲ್ಲಿ 196 ರನ್‌ಗಳು, 184.9 ಸ್ಟ್ರೈಕ್‌ರೇಟ್‌ನಲ್ಲಿ ಎಂಬುದು ಮತ್ತು ಆರ್‌ಸಿಬಿ ಎದುರು 15 ಚೆಂಡಿಗೆ ಅರ್ಧ ಶತಕದ ದಾಖಲೆ ಆಟವಾಗಿ ಪಂದ್ಯ ಪುರುಷೋತ್ತಮ ಎನ್ನಿಸಿಕೊಂಡಿದ್ದು ಆಕರ್ಷಕ. 17 ಎಸೆತದಲ್ಲಿ 54 ರನ್‌. ಈಗ ನೋಡಿ, ಸುನೀಲ್‌ ಈ ಬಾರಿ ಹೇಗೆ ಆಡಬಹುದು? ಎಂಬ ಕುತೂಹಲದಿಂದಲೇ ಕೆಕೆಆರ್‌ ಆಡುವ ಪಂದ್ಯಗಳನ್ನು ವೀಕ್ಷಕ ಆಸಕ್ತಿಯಿಂದ ನೋಡುತ್ತಾನೆ, ಯಾರೂ ಅಂಕಣಕ್ಕಿಳಿಯುವ ಮುನ್ನವೇ ಸ್ಟಾರ್‌ ಆಗುವುದಿಲ್ಲ. ಸುನೀಲ್‌ ನಾರಾಯಣ್‌ ಹಿಂದಿನ ಪ್ರದರ್ಶನಗಳ ಅಂಕಿಅಂಶ ತೆಗೆದರೆ ಗಾಬರಿಯಗುತ್ತದೆ. ಈ ಅಸಾಮಿ ಈ ವರ್ಷ 30 ಬೌಂಡರಿ, 9 ಸಿಕ್ಸರ್‌ ಬಾರಿಸಿದ್ದಾರೆ. 2012ರಿಂದ ಐಪಿಎಲ್‌ನಲ್ಲಿ ಭಾಗವಹಿಸಿ ಚೊಕ್ಕ ನಿಯಂತ್ರಿತ ಬೌಲಿಂಗ್‌ ಮಾಡಿ 94 ವಿಕೆಟ್‌ ಪಡೆದಿದ್ದರೂ ಇವರ ಬ್ಯಾಟ್‌ನಿಂದ‌ ಕಳೆದ 5 ವರ್ಷಗಳಲ್ಲಿ ಸಿಡಿದಿದ್ದು ಕೇವಲ 2 ಬೌಂಡರಿ, 2 ಸಿಕ್ಸರ್‌. ಅಬ್ಬಬ್ಟಾ ಎಂದರೆ ಒಂದು ಇನ್ನಿಂಗ್ಸ್‌ನಲ್ಲಿ ಗಳಿಸಿದ 13 ರನ್‌ ಗರಿಷ್ಠ. 5 ವರ್ಷದಲ್ಲಿ ಆಡಿದ್ದೇ 44 ಚೆಂಡು! ಸ್ವಾರಸ್ಯ ಎಂದರೆ, 2015ರ ಇಡೀ ಟೂರ್ನಿಯಲ್ಲಿ ಸುನೀಲ್‌ ಎದುರಿಸಿದ್ದು ಏಕೈಕ ಎಸೆತ!

ಈ ಫ್ಲಾಶ್‌ಬ್ಯಾಕ್‌ ಕಾರಣವೇ ಸುನೀಲ್‌ರಿಗೆ ಆರಂಭಿಕರಾಗಿ ಭಡ್ತಿ ಕೊಟ್ಟಿದ್ದು ಮಾಸ್ಟರ್‌ ಸ್ಟ್ರೋಕ್‌ ಎನಿಸಿದ್ದು. ಆಸ್ಟ್ರೇಲಿಯಾದ ಟಾಮ್‌ ಮೂಡಿ ಹೇಳುವುದು ಇದನ್ನೇ, ಎದುರಾಳಿಗಳಿಗೆ ಕೊಡುವ ಅಚ್ಚರಿ ಅವರ ತಂತ್ರಗಳನ್ನು ಛಿದ್ರಗೊಳಿಸುವುದರಿಂದ ಒಂದು ಹೆಚ್ಚುವರಿ ಲಾಭವಂತೂ ಇದೆ. ಸರ್‌ಪ್ರ„ಸ್‌ ಎಲಿಮೆಂಟ್‌ ನಿರೀಕ್ಷಿತ ಫ‌ಲಿತಾಂಶ ಕೊಡಬೇಕಷ್ಟೇ. ಪಂಜಾಬ್‌ನ ಇಶಾಂತ್‌ ಶರ್ಮ ಇದನ್ನು ಒಪ್ಪಿಕೊಂಡಿದ್ದಾರೆ. 170 ರನ್‌ಗಳಿಸಿಯೂ ತಮ್ಮ ಪಂದ್ಯದ ಸೋಲಿಗೆ ಈ ಅಚ್ಚರಿಯೂ ಒಂದು ಅಂಶ ಎಂದು ಅವರು ಗುರುತಿಸಿದ್ದಾರೆ. ಸುನೀಲ್‌ರ ಭಡ್ತಿ ಮೂಡಿಯರಿಗೆ ಶಾಕ್‌ ನೀಡಲಿಲ್ಲ! ಅವರು ಅವರೂರಿನ ಬಿಗ್‌ಬ್ಯಾಶ್‌ ಲೀಗ್‌ನಲ್ಲಿ ಮೆಲ್ಬೋರ್ನ್ ರೆನಗೇಡ್ಸ್‌ ಪರ ಆಡುವಾಗ ಸ್ವಲ್ಪ ಯಶಸ್ಸಿನ ಜೊತೆ ಮೂರು ಬಾರಿ ಸುನೀಲ್‌ ಓಪನಿಂಗ್‌ ಮಾಡಿದ್ದನ್ನು  ನೋಡಿದ್ದಾರೆ. ಐಪಿಎಲ್‌ನಲ್ಲಿ ಸುನೀಲ್‌ ಒಂದು ಹೆಜ್ಜೆ ಮುಂದೆ ಹೋಗಿದ್ದಾರಷ್ಟೇ.

ಮೊದಲ ಪಂದ್ಯದ ನಂತರ ಕೆಕೆಆರ್‌ನ ಕ್ರಿಸ್‌ ಲಿನ್‌ ಗಾಯಗೊಳ್ಳದಿದ್ದರೆ ಸುನೀಲ್‌ ಟಾಪ್‌ಗೆ ಬರುತ್ತಿದ್ದರೇ? ನಿಜ, ಈ ಪ್ರಶ್ನೆಗೆ ಉತ್ತರ ಕಷ್ಟ. ರಾಬಿನ್‌ ಉತ್ತಪ್ಪ ಅವರನ್ನು ಆರಂಭಿಕರಾಗಿಸುವ ಎಲ್ಲ ಅವಕಾಶ ಗಂಭೀರ್‌ಗಿತ್ತು. ಅವತ್ತು ನ್ಯೂಜಿಲೆಂಡ್‌ನ‌ಲ್ಲಿ ಆರಂಭಿಕ ನವಜೋತ್‌ಸಿಂಗ್‌ ಸಿಧು ಅವರಿಗೆ ಕುತ್ತಿಗೆ ನೋವು ಆಗಿದ್ದು ಸಚಿನ್‌ ತೆಂಡುಲ್ಕರ್‌ ಭಾರತದ ಪರ ಏಕದಿನ ಪಂದ್ಯದ ಓಪನರ್‌ ಆಗಿ ಅವತರಿಸಿ ಇತಿಹಾಸ ನಿರ್ಮಿಸಲು ಕಾರಣವಾಯಿತು. ಅನಿವಾರ್ಯತೆಯ ಸರ್ಕಸ್‌ ಕೆಲವೊಮ್ಮೆ ಇತಿಹಾಸಕ್ಕೆ ಟ್ವಿಸ್ಟ್‌ ನೀಡುತ್ತದೆ!

ಕಳೆದ ವರ್ಷಗಳ ಐಪಿಎಲ್‌ನಲ್ಲಿ ಬ್ಯಾಟಿಂಗ್‌ನ ಹೊಸ ಹೊಡೆತಗಳ ಪ್ರಯೋಗ ನಡೆದಿದೆ. ಸ್ವಿಚ್‌ ಹಿಟ್ಟಿಂಗ್‌, ಥರ್ಡ್‌ ಮ್ಯಾನ್‌ ಮೇಲೆ ಸಿಕ್ಸ್‌ “ಹಾರಿಸುವ ತಂತ್ರ, ಪ್ಯಾಡಲ್‌ ಸ್ವೀಪ್‌ ಮಾದರಿಯ ಸಂಶೋಧನೆಗಳು ಈಗ ಕ್ರಿಕೆಟ್‌ ಬ್ಯಾಟಿಂಗ್‌ ಮ್ಯಾನುಯಲ್‌ನ ಭಾಗಗಳಾಗಿವೆ. ಹೊಸದಾದ ಹೊಡೆತ, ಫೀಲ್ಡಿಂಗ್‌ನ ನೂತನ ಆ್ಯಕ್ಷನ್‌ ಈ ಋತುವಿನಲ್ಲಿ ನಾವು ನೋಡಿಲ್ಲ. ಈ ಮಧ್ಯೆ ಗುಜರಾತ್‌ ವಿರುದ್ಧ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ ನಾಯಕ ರೋಹಿತ್‌ ಶರ್ಮ ಸೂಪರ್‌ ಓವರ್‌ನಲ್ಲಿ ಅನನುಭವಿ ಬುಮ್ರಾ ಕೈಗೆ ಚೆಂಡು ಕೊಟ್ಟಿದ್ದು ಒಂದು ಅನಿರೀಕ್ಷಿತ ಕ್ರಮವಾಗಿತ್ತು. ತಂಡದಲ್ಲಿ ಶ್ರೀಲಂಕಾದ ಲಸಿತ್‌ ಮಾಲಿಂಗ ಇದ್ದರು, ಹರ್ಭಜನ್‌ ಸಿಂಗ್‌ ಲಭ್ಯರಿದ್ದರು. ಫಾರಂನಲ್ಲಿರುವ ಬೌಲರ್‌ ಮೈಕೆಲ್‌ ಮೆಕ್ಲೆನಗನ್‌ ಸಿದ್ಧರಿದ್ದರು. ಬುಮ್ರಾ ಆಯ್ಕೆ ಎದುರಾಳಿಗಳನ್ನು ಗಲಿಬಿಲಿಗೊಳಿಸಿದ್ದರಿಂದಲೇ ಕೇವಲ 12 ರನ್‌ ಬೇಕಿದ್ದಲ್ಲಿ ಬ್ರೆಂಡನ್‌ ಮೆಕಲಂ ಹಾಗೂ ಏರಾನ್‌ ಫಿಂಚ್‌ಗೆ ಆರು ರನ್‌ ಕೂಡಿಸಲಷ್ಟೇ ಸಾಧ್ಯವಾಯಿತು.

ಪಿಂಚ್‌ ಹಿಟ್ಟಿಂಗ್‌ ಕಳೆದುಕೊಳ್ಳುವುದು ಏನೂ ಇಲ್ಲದ ಒಂದು ಅಸ್ತ್ರ. ಈ ನಡೆಯನ್ನು ಐಪಿಎಲ್‌ ತಂಡಗಳು ಸಮರ್ಥವಾಗಿ ಬಳಸಿಕೊಳ್ಳುತ್ತಿಲ್ಲ ಎಂಬ ಅಂಶ ವ್ಯಕ್ತವಾಗುತ್ತಿದೆ. ಆಡುವ 11 ಜನ ಎಂದರೇ ಹೊಡಿಬಡಿಯ ಆಟಗಾರರ ಸಂಯೋಜನೆಯಾಗಿರುವಾಗ ಪಿಂಚ್‌ ಹಿಟ್ಟರ್‌ ಅಸ್ತ್ರ ವ್ಯರ್ಥ ಎಂಬ ಭಾವನೆಯಿರಬಹುದು. ಏಕದಿನ ಕ್ರಿಕೆಟ್‌ನಲ್ಲಿ ಈ ಪಿಂಚ್‌ ಹಿಟ್ಟರ್‌ ವಿಕೆಟ್‌ ನಡುವಿನ ಓಟದಲ್ಲಿ ಗೊಂದಲಕಾರಿ ಆಗಿರುವುದರಿಂದ ತನ್ನೊಂದಿಗಿನ ಅಗ್ರ ಬ್ಯಾಟ್ಸ್‌ಮನ್‌ರನ್ನು ರನ್‌ಔಟ್‌ ಮಾಡಿಬಿಡುವ ಅಪಾಯವಿರುತ್ತದೆ. ಹಾಗಾಗಿ ಈ ತಂತ್ರ ಬೂಮರ್‍ಯಾಂಗ್‌ ಆಗಿಬಿಡಬಹುದು ಎಂಬ ಶಂಕೆಯನ್ನು ಕ್ರಿಕೆಟ್‌ ತಜ್ಞರು ಮಂಡಿಸುತ್ತಾರೆ. ಆ ಮಟ್ಟಿಗೆ ಟಿ20ಯಲ್ಲಿ ಆ ಅಪಾಯ ಕಡಿಮೆ. ಮುಂಬೈ ತಂಡ ಹರ್ಭಜನ್‌ ಸಿಂಗ್‌ ಥ‌ರದವರನ್ನು ಇದ್ದಕ್ಕಿದ್ದಂತೆ ಟಾಪ್‌ ಆರ್ಡರ್‌ ಬ್ಯಾಟಿಂಗ್‌ಗೆ ಕಳುಹಿಸಬಹುದಿತ್ತು. 10 ಓವರ್‌ಗಳ ನಂತರವೂ 10 ಚೆಂಡಿಗೆ ಬೀಸಿ ಹೊಡೆಯಲು ಆಕ್ರಮಣಕಾರಿ ಬೌಲಿಂಗ್‌ ಆಲ್‌ರೌಂಡರ್‌ ಬಳಸುವ ಯೋಚನೆ ಮಾಡಬಹುದಿತ್ತು. ಆಟಗಾರರಿದ್ದರು, ಅವಕಾಶ ಮುಕ್ತವಾಗಿತ್ತು. ಆದರೆ ಹೊಸದು ಅನ್ನುವಂತಹ ಪ್ರಯೋಗಗಳೇ ನಡೆಯಲಿಲ್ಲ. ಆ ಮಟ್ಟಿಗೆ 2017ರ ಐಪಿಎಲ್‌ ನಿರಾಸೆ ಮೂಡಿಸುತ್ತದೆ.

ನಾರಾಯಣ್‌ ಯಶಸ್ಸು, ಧವನ್‌ಗೆ ಬೌನ್ಸರ್‌!
ಸುನಿಲ್‌ ನಾರಾಯಣ್‌ ಯಶಸ್ಸನ್ನು ಆನಂದಿಸುತ್ತಿರುವ ಕ್ರಿಕೆಟ್‌ ವಿಶ್ಲೇಷಕ ಅಭಿಮಾನಿಗಳು ಉಳಿದವರೆಡೆ ಟ್ವೀಟ್‌ ಬಾಣಗಳನ್ನು ಬಿಡುತ್ತಿದ್ದಾರೆ. ಸುನೀಲ್‌ ತಮ್ಮ ಅಗ್ರ ಕ್ರಮಾಂಕಕ್ಕೆ ಅನುರೂಪವಾದ ಬ್ಯಾಟಿಂಗ್‌ ಮಾಡಿ ಈ ಸ್ಥಾನಕ್ಕೆ ಗೌರವ ನೀಡಿದ್ದಾನೆ. ಶಿಖರ್‌ ಧವನ್‌ ಏಕೆ 9ನೇ ಕ್ರಮಾಂಕದಲ್ಲಿ ಆಡಿ ಆ ಸ್ಥಾನದ ಗೌರವ ಉಳಿಸಬಾರದು? ಹಾಗಂತ ಟ್ವೀಟ್‌ ಒಂದು ಕಾಲೆಳೆದಿದೆ.

ಮಾ.ವೆಂ.ಸ.ಪ್ರಸಾದ್‌

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಇಲ್ಲಿ ಇಬ್ಬರು ಅಪರೂಪದ ವ್ಯಕ್ತಿಗಳ ಪರಿಚಯವಿದೆ. ಇಬ್ಬರ ಸಾಧನೆಯೂ ಮೆಚ್ಚುಗೆಗೆ ಅರ್ಹವಾದದ್ದು. ಒಬ್ಬರು ಆರೋಗ್ಯದ ಕುರಿತು ಜಾಗೃತಿ ಮೂಡಿಸಲು ಬೆಂಗಳೂರಿನಿಂದ...

  • ಡಾ. ರಾಜ್‌ಕುಮಾರ್‌ ನಂಜನಗೂಡಿಗೆ ಹೋದಾಗೆಲ್ಲ ಉರುಳು ಸೇವೆ ಮಾಡುತ್ತಿದ್ದದ್ದು ನಿಮಗೆ ಗೊತ್ತೇ ಇದೆ. ಅದೇ ರೀತಿ ಬೆಂಗಳೂರಿನ ಹನುಮಂತ ನಗರದ ಗೋಪಾಲಕೃಷ್ಣ ಆಚಾರ್‌ಗೆ...

  • ಮೇಲುಕೋಟೆಯಲ್ಲಿ ಅಕ್ಟೋಬರ್‌ ಹದಿಮೂರರಂದು ನಡೆದ, ಕವಿ ಪುತಿನ ಅವರ "ಪುಣ್ಯಸ್ಮರಣೆ'ಯಲ್ಲಿ ಭಾಗಿಯಾಗುವ ಸದವಕಾಶವನ್ನು ಪುತಿನ ಟ್ರಸ್ಟ್ನ ಅಧ್ಯಕ್ಷರಾದ ಹಿರಿಯ ಕವಿ...

  • ಪ್ರತಿದಿನವೂ ಒಂದಿಲ್ಲೊಂದು ಹೊಸತನ್ನು ಸೃಜಿಸುವ ಪ್ರಕೃತಿ ಬಹಳ ದೊಡ್ಡ ಕಲೆಗಾರ. ಅನಂತ ಬಣ್ಣಗಳು ಇದರ ಜೋಳಿಗೆಯಲ್ಲಿ ಅಡಗಿದೆ. ಪ್ರಕೃತಿಯೆಂಬ ಈ ಕಿಲಾಡಿ, ಭೂಮಿ-...

  • ರೊಟ್ಟಿ... ಉತ್ತರ ಕರ್ನಾಟಕದ ಜನರ ಬಹುಮುಖ್ಯ ಆಹಾರ. ಊಟ ಅಂದ್ಮೇಲೆ ಜೋಳದ ರೊಟ್ಟಿ, ಶೇಂಗಾ ಹಿಂಡಿ, ಕಾಳು ಕಡಿ ಹಾಕಿ ಮಾಡಿದ ರುಚಿಕಟ್ಟಾದ ಪಲ್ಯ ಇರಲೇಬೇಕು. ಅಲ್ಲಿನವರ...

ಹೊಸ ಸೇರ್ಪಡೆ