ರಿವೈಂಡ್‌ 2018: ಮಿಶ್ರ ವರ್ಷ; ಚಿಟಿಕೆಯಷ್ಟು ಖುಷಿ, ಹಿಡಿಯಷ್ಟು ದುಃಖ

Team Udayavani, Dec 14, 2018, 6:00 AM IST

ಕೇವಲ ಎರಡು ವಾರ ಕಳೆದರೆ ಈ ವರ್ಷ ಪೂರ್ಣಗೊಳ್ಳುತ್ತದೆ. ವರ್ಷ ಉರುಳಿದರೂ ಕಳೆದು ಹೋಗುವ ವರ್ಷದಲ್ಲಿನ ನೆನಪು ಮಾತ್ರ ಮಾಸುವುದಿಲ್ಲ. ಈ ವರ್ಷದಲ್ಲಿ ಸಿನಿಮಾ ಬಿಡುಗಡೆಯ ಸಂಖ್ಯೆಗೇನೂ ಬರವಿಲ್ಲ. ಎಂದಿಗಿಂತ ದಾಖಲೆಯ ಸಂಖ್ಯೆಯಲ್ಲೇ ಚಿತ್ರಗಳು ಬಿಡುಗಡೆಯಾಗಿವೆ. ಕನ್ನಡ ಚಿತ್ರರಂಗದಲ್ಲಿ ಈ ಬಾರಿ ಹೊಸಬರ ಕಲರವ ಹೆಚ್ಚಾಗಿದ್ದು ನಿಜ. ಆ ಕುರಿತು ಕಳೆದ ಸಂಚಿಕೆಯಲ್ಲೇ  ಚಿತ್ರ ಬಿಡುಗಡೆಯ ಸಂಖ್ಯೆ ಸೇರಿದಂತೆ, ಯಾರೆಲ್ಲಾ ಬಂದರು, ಯಾವ ಚಿತ್ರಗಳು ಗೆದ್ದವು, ಯಾರೆಲ್ಲಾ ಗಮನಸೆಳೆದರು, ದುಡ್ಡು ಮಾಡಿಕೊಂಡವರು, ಕಳೆದುಕೊಂಡವರು ಸೇರಿದಂತೆ ಇತ್ಯಾದಿ ಪ್ರಮುಖ ವಿಷಯಗಳನ್ನು ಸವಿವರವಾಗಿ ಹೇಳಿತ್ತು. ಈ ಸಂಚಿಕೆಯಲ್ಲೂ ಸಹ ಈ ವರ್ಷದ ಆರಂಭದಿಂದ ಹಿಡಿದು, ಇಲ್ಲಿಯವರೆಗೆ ಕನ್ನಡ ಚಿತ್ರರಂಗದಲ್ಲಿ ನಡೆದಂತಹ ಪ್ರಮುಖ ಘಟನೆಗಳ ಮೆಲುಕು ಹಾಕುವ ಪ್ರಯತ್ನ ಮಾಡಿದೆ. ಇಲ್ಲೀತನಕ ಒಳ್ಳೆಯದು, ಕೆಟ್ಟದ್ದು ಎರಡೂ ಕಣ್ಮುಂದೆ ಕಂಡಾಗಿದೆ. ಹಾಗೆ ಹೇಳುವುದಾದರೆ, ಕನ್ನಡ ಚಿತ್ರರಂಗಕ್ಕೆ ಈ ವರ್ಷ ಖುಷಿಗಿಂತ ದುಃಖದ ಪಾಲು ಹೆಚ್ಚೆನ್ನಬಹುದು.

ಮೊದಲನೆಯದ್ದಾಗಿ ಕನ್ನಡ ಚಿತ್ರರಂಗಕ್ಕೆ ಬಹುದೊಡ್ಡ ಆಘಾತದ ವಿಷಯವೆಂದರೆ, ನಟ ಅಂಬರೀಶ್‌ ಅಗಲಿಕೆ. ಕಳೆದ ಐದು ದಶಕಗಳಿಂದಲೂ ಕನ್ನಡ ಚಿತ್ರರಂಗದ ಸೇವೆ ಮಾಡಿ, ಚಿತ್ರರಂಗದ ಅಭಿವೃದ್ಧಿಗೆ ತಮ್ಮದ್ದೊಂದು ಕೊಡುಗೆ ನೀಡಿ, ಹಿರಿಯರು, ಕಿರಿಯರು ಎನ್ನದೆ, ಎಲ್ಲರನ್ನೂ ಪ್ರೀತಿಯಿಂದಲೇ ಕಾಣುತ್ತಿದ್ದ ಅಂಬರೀಶ್‌ ಅವರ ನಿಧನ, ಇಡೀ ಕನ್ನಡ ಚಿತ್ರೋದ್ಯಮಕ್ಕೆ ದೊಡ್ಡ ನಷ್ಟ. ವರ್ಷದ ಅಂತ್ಯ ಸಮೀಪಿಸುವ ಸಂದರ್ಭದಲ್ಲೇ ಅಂಬರೀಶ್‌ ಅವರ ನಿಧನ ದೊಡ್ಡ ಆಘಾತ ತಂದೊಡ್ಡಿ, ಚಿತ್ರರಂಗವನ್ನು ಕೊಂಚ ಮಟ್ಟಿಗೆ ಮಂಕಾಗಿಸಿದ್ದಂತೂ ಸುಳ್ಳಲ್ಲ. ಇವರಷ್ಟೇ ಅಲ್ಲ, ಚಿತ್ರರಂಗದಲ್ಲಿ ದುಡಿದು ಇಂದಿಗೂ ಜನಮಾನಸದಲ್ಲಿ ಅಚ್ಚಳಿಯದೆ ಉಳಿದ ನಟ,ನಿರ್ದೇಶಕ, ನಿರ್ಮಾಪಕ ಕಾಶಿನಾಥ್‌ ಅಗಲಿಕೆ ಕೂಡ ನೋವನ್ನುಂಟುಮಾಡಿತು. ಒಂದಷ್ಟು ನಿರ್ದೇಶಕರು, ನಿರ್ಮಾಪಕರು ಅವರೊಂದಿಗೆ ತಂತ್ರಜ್ಞರನ್ನೂ ಸಹ ಈ ವರ್ಷ ಕನ್ನಡ ಚಿತ್ರರಂಗ ಕಳೆದುಕೊಂಡಿತು.

ಇನ್ನು, ದುಃಖದ ಜೊತೆ ಜೊತೆಗೆ ಅಲ್ಲಲ್ಲಿ ಒಂದಷ್ಟು ಖುಷಿಯ ವಿಷಯಗಳು, ಅಚ್ಚರಿಯ ಸುದ್ದಿಗಳು, ಸಂಚಲನ ಮೂಡಿಸಿದ ಘಟನೆಗಳು ನಡೆದವು. ಚಿತ್ರರಂಗದಲ್ಲಿ ಇಷ್ಟು ವರ್ಷ ಸೇವೆ ಸಲ್ಲಿಸಿದ ಕೆಲ ನಟರ ಮತ್ತು ನಿರ್ಮಾಪಕರ ಪುತ್ರರು ಸಿನಿಮಾರಂಗಕ್ಕೆ ಕಾಲಿಟ್ಟರು. ಕೆಲವು ನಟರು ರಾಜಕೀಯ ವಿಷಯದಲ್ಲಿ ಸುದ್ದಿಯಾದರು. ಇನ್ನು ಕೆಲವು ನಟರು ನಿರ್ಮಾಣಕ್ಕಿಳಿದರು. ಸ್ಟಾರ್‌ ನಟರು ಸುದ್ದಿಯಾದರು. ಐತಿಹಾಸಿಕ ಚಿತ್ರಗಳು ಸದ್ದು ಮಾಡಿದವು. ಕನ್ನಡ ಚಿತ್ರರಂಗ ಸೋಲು-ಗೆಲುವಿನ ಲೆಕ್ಕಾಚಾರದ ಜೊತೆಯಲ್ಲೇ, ಹೇಳಲಾಗದಷ್ಟು ಖುಷಿ, ತಡೆಯಲಾಗದಷ್ಟು ದುಃಖ, ವಿಷಾದದೊಂದಿಗೇ “2018′ ಕೊನೆಗೊಳ್ಳುತ್ತಿದೆ. ಈ ವರ್ಷಾರಂಭದಿಂದ ಮೊನ್ನೆ ಮೊನ್ನೆ ತನಕ ನಡೆದ ಒಂದಷ್ಟು ಪ್ರಮುಖ ಘಟನೆಗಳನ್ನು ಮಾತ್ರ ಇಲ್ಲಿ ಮೆಲುಕು ಹಾಕಲಾಗಿದೆ.

ಮೀಟೂ ಪ್ರಕರಣ
ಕನ್ನಡ ಚಿತ್ರರಂಗದಲ್ಲಿ ಈ ವರ್ಷ ದೊಡ್ಡ ಸುದ್ದಿ ಮಾಡಿ ಸಂಚಲನ ಉಂಟು ಮಾಡಿದ ಪ್ರಕರಣವೆಂದರೆ ಅದು “ಮಿ ಟೂ’. ಬಾಲಿವುಡ್‌ನಿಂದ ಆರಂಭವಾದ ಮಿ ಟೂ ಅಭಿಯಾನ ಕನ್ನಡ ಚಿತ್ರರಂಗಕ್ಕೆ ಬಂದು ಹಲವರ ಹೆಸರನ್ನು ಸುತ್ತಿಕೊಂಡಿತು. ನಟಿ ಸಂಗೀತಾ ಭಟ್‌ “ಮಿ ಟೂ’ಅಭಿಯಾನದಡಿ ಚಿತ್ರರಂಗದಲ್ಲಿ ತಮಗಾದ ಅನುಭವ ಹಂಚಿಕೊಳ್ಳುವ ಮೂಲಕ ಶುರುವಾಗಿದ್ದು, ಆ ನಂತರ ಶ್ರುತಿ ಹರಿಹರನ್‌ವರೆಗೆ ಬಂದು ನಿಂತಿತು. ಶ್ರುತಿ ಹರಿಹರನ್‌ ಹಾಗೂ ಅರ್ಜುನ್‌ ಸರ್ಜಾ ನಡುವಿನ “ಮಿ ಟೂ’ ಪ್ರಕರಣ ಚಿತ್ರರಂಗದಲ್ಲಿ ಸಾಕಷ್ಟು ಸಂಚಲನ ಉಂಟು ಮಾಡಿತು. ಅನೇಕರು ಈ ಕುರಿತು ಪರ-ವಿರೋಧ ವ್ಯಕ್ತಪಡಿಸಿದರು. 

ನಿರ್ಮಾಪಕರ ಸಂಘಕ್ಕೆ ನಿವೇಶನ ಖರೀದಿ
ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘಕ್ಕೆ ಈ ವರ್ಷ ಹಿರಿಮೆಯ ವರ್ಷ ಎಂದರೆ ತಪ್ಪಲ್ಲ. ಪ್ರಸ್ತುತ ರಾಜಾಜಿನಗರದಲ್ಲಿರುವ ನಿರ್ಮಾಪಕರ ಸಂಘ ಸ್ವಂತಃ ಕಟ್ಟಡ ಹೊಂದುವ ನಿಟ್ಟಿನಲ್ಲಿ ಬೆಂಗಳೂರಿನ ಹೃದಯ ಭಾಗದಲ್ಲಿರುವ ಶಿವಾನಂದ ಸರ್ಕಲ್‌ ಬಳಿ ನಿವೇಶನ ಖರೀದಿಸಿದೆ. ಈ ಮೂಲಕ ಭವಿಷ್ಯದಲ್ಲಿ ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘ ಸುಸಜ್ಜಿತವಾದ ಕಟ್ಟಡ ಹೊಂದಲಿದೆ. 

ಕಲಾವಿದರ ಸಂಘದ ಕಟ್ಟಡ ಉದ್ಘಾಟನೆ
ಕನ್ನಡ ಚಲನಚಿತ್ರ ಕಲಾವಿದರ ಸಂಘಕ್ಕೆ ಭವ್ಯವಾದ ಕಟ್ಟಡ ಉದ್ಘಾಟನೆಗೊಂಡಿದ್ದು ಈ ವರ್ಷವೇ. ಕಲಾವಿದರ ಸಂಘದ ಅಧ್ಯಕ್ಷರಾಗಿದ್ದ ಅಂಬರೀಶ್‌ ಅವರ ನೇತೃತ್ವದಲ್ಲಿ ಚಾಮರಾಜಪೇಟೆಯಲ್ಲಿ ತಲೆ ಎತ್ತಿದ ಕಲಾವಿದರ ಸಂಘದ ಕಟ್ಟಡದ ಉದ್ಘಾಟನೆ ಈ ವರ್ಷದ ಫೆಬ್ರವರಿಯಲ್ಲಿ ನಡೆದಿದ್ದು, ದಕ್ಷಿಣ ಭಾರತದ ಚಿತ್ರರಂಗದ ಅನೇಕ ನಟ-ನಟಿಯರು ಸಂಘಕ್ಕೆ ಭೇಟಿ ನೀಡಿ ಮೆಚ್ಚುಗೆ ಸೂಚಿಸಿ, ಅಂಬರೀಶ್‌ ನೇತೃತ್ವದಲ್ಲಿ ನಡೆದ ಕೆಲಸವನ್ನು ಶ್ಲಾ ಸಿದ್ದರು. ಸದ್ಯ ನಿರ್ಮಾಪಕರ ಸಂಘದ ಕಟ್ಟಡದಲ್ಲಿ ಹಲವು ಸಿನಿಮಾಗಳ ಚಟುವಟಿಕೆಗಳು ನಡೆಯುತ್ತಿವೆ. 

 ದರ್ಶನ್‌ ಕಾರು ಅಪಘಾತ
ಕನ್ನಡ ಚಿತ್ರರಂಗದ ಸ್ಟಾರ್‌ ನಟ, ಅಭಿಮಾನಿಗಳ ಪಾಲಿನ ಡಿ ಬಾಸ್‌ ದರ್ಶನ್‌ ಅವರ ಕಾರು ಅಪಘಾತವಾಗಿದ್ದು, ಅವರ ಅಭಿಮಾನಿಗಳಿಗೆ ಹಾಗೂ ಇಡೀ ಕನ್ನಡ ಚಿತ್ರರಂಗಕ್ಕೆ ದೊಡ್ಡ ಅಘಾತವನ್ನುಂಟು ಮಾಡಿತ್ತು. ತಮ್ಮ ನೆಚ್ಚಿನ ನಟನಿಗೆ ಏನಾಯಿತೆಂದು ಅಭಿಮಾನಿಗಳು ಗಾಬರಿಯಾಗಿ ಮೈಸೂರಿನ ಆಸ್ಪತ್ರೆಯ ಮುಂದೆ ಜಮಾಯಿಸಿದ್ದರು. ಸೆಪ್ಟೆಂಬರ್‌ನಲ್ಲಿ ನಡೆದ ಈ ಘಟನೆಯಿಂದ ದರ್ಶನ್‌ ಅವರ ಕೈಗೆ ಏಟಾಗಿತ್ತು. ಸದ್ಯ ದರ್ಶನ್‌ ಚೇತರಿಸಿಕೊಂಡು ಮತ್ತೆ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ. 

ವಿವಾದಗಳ ಸುತ್ತ ವಿಜಯ್‌ ದುನಿಯಾ
ಈ ವರ್ಷ ವಿಜಯ್‌ ಅವರ ಪಾಲಿಗೆ ಅಷ್ಟೊಂದು ಚೆನ್ನಾಗಿರಲಿಲ್ಲ ಎಂದರೆ ತಪ್ಪಾಗರಲಾರದು. ಅದಕ್ಕೆ ಹಲವು ಕಾರಣಗಳಿವೆ. ಮುಖ್ಯವಾಗಿ ವಿಜಯ್‌ ಈ ವರ್ಷ ಅತಿ ಹೆಚ್ಚು ಸುದ್ದಿಯಾಗಿದ್ದು ವಿವಾದಗಳಿಂದ. ಗೆಳೆಯ ಸುಂದರ್‌ಗೌಡನಿಗೆ ಸಹಾಯ ಮಾಡಲು ಹೋಗಿ ಸುದ್ದಿಯಾಗಲು ಆರಂಭಿಸಿದ ವಿಜಯ್‌ ಈ ವರ್ಷಪೂರ್ತಿ ಒಂದಲ್ಲ, ಒಂದು ವಿಚಾರದಲ್ಲಿ ಸುದ್ದಿಯಲ್ಲಿದ್ದರು. ಪಾನಿಪುರಿ ಕಿಟ್ಟಿ ಸಂಬಂಧಿ ಹಾಗೂ ವಿಜಯ್‌ ನಡುವಿನ ಜಗಳ ದೊಡ್ಡದಾಗಿ, ವಿಜಯ್‌ ಜೈಲುವಾಸ ಕೂಡಾ ಅನುಭವಿಸಬೇಕಾಗಿ ಬಂತು. ಜೈಲಿನಿಂದ ಹೊರಬಂದ ನಂತರ ಅವರ ಕೌಟುಂಬಿಕ ಕಲಹ ಕೂಡಾ ವಿಜಯ್‌ ನೆಮ್ಮದಿ ಕೆಡಿಸಿತು. ಜೊತೆಗೆ ತಮ್ಮ ಮಗನನ್ನು ಲಾಂಚ್‌ ಮಾಡಲು ಎಲ್ಲಾ ತಯಾರಿಸಿ ನಡೆಸಿದ ವಿಜಯ್‌ ಅವರ ಕನಸಿನ ಚಿತ್ರ “ಕುಸ್ತಿ’ ಕೂಡಾ ಮುಂದಕ್ಕೆ ಹೋಗಿದ್ದು, ವಿಜಯ್‌ ಹೊಸ ಚಿತ್ರದ ತಯಾರಿಯಲ್ಲಿದ್ದಾರೆ. 

ಮ್ಯಾರೇಜ್‌ ಸ್ಟೋರಿ
ಕನ್ನಡ ಚಿತ್ರರಂಗದಲ್ಲಿ ಈ ವರ್ಷ ಅನೇಕ ನಟ-ನಟಿಯರು ಹಸೆಮಣೆ ಏರಿದ್ದಾರೆ. ಜೊತೆಗೆ ಹಲವು ವರ್ಷಗಳಿಂದ ಅವರ ಸುತ್ತ ಸುತ್ತುತ್ತಿದ್ದ ಮ್ಯಾರೇಜ್‌ ಗಾಸಿಪ್‌ಗ್ಳಿಗೆಲ್ಲಾ ಫ‌ುಲ್‌ಸ್ಟಾಪ್‌ ಇಟ್ಟಿದ್ದಾರೆ. ಈ ವರ್ಷ ಮದುವೆಯಾದ ತಾರಾ ಜೋಡಿಗಳೆಂದರೆ ಚಿರಂಜೀವಿ ಸರ್ಜಾ-ಮೇಘನಾ, ದಿಗಂತ್‌-ಐಂದ್ರಿತಾ, ಉಳಿದಂತೆ ನಟರಾದ ಅನೂಪ್‌ ಸಾರಾ ಗೋವಿಂದ್‌, ಸುಮಂತ್‌, ಹರ್ಷ ಈ ವರ್ಷ ಗೃಹಸ್ಥಾಶ್ರಮಕ್ಕೆ ಕಾಲಿಟ್ಟಿದ್ದಾರೆ. ನಟ ಧ್ರುವ ಸರ್ಜಾ ಅವರ ನಿಶ್ಚಿತಾರ್ಥ ನಡೆದಿದೆ. ನಿರ್ದೇಶಕ ಪವನ್‌ ಒಡೆಯರ್‌, ಅಪೇಕ್ಷಾ ಅವರನ್ನು ಕೈ ಹಿಡಿದಿದ್ದು ಈ ವರ್ಷವೇ. 

ಮರಳಿ ಬಂದ ರಾಘಣ್ಣ
ರಾಘವೇಂದ್ರ ರಾಜಕುಮಾರ್‌ ಅವರು ದೊಡ್ಡ ಗ್ಯಾಪ್‌ನ ನಂತರ ಮತ್ತೆ ನಟನೆಗೆ ಮರಳಿದ್ದು ಈ ವರ್ಷವೇ. 14 ವರ್ಷಗಳ ಹಿಂದೆ ಬಿಡುಗಡೆಯಾದ “ಪಕ್ಕದ್ಮನೆ ಹುಡುಗಿ’ ಚಿತ್ರದಲ್ಲಿ ನಟಿಸಿದ್ದು ಬಿಟ್ಟರೆ, ರಾಘವೇಂದ್ರ ರಾಜಕುಮಾರ್‌ ಆ ನಂತರ ನಟಿಸಿರಲಿಲ್ಲ. ಈ ವರ್ಷ “ಅಮ್ಮನ ಮನೆ’ ಚಿತ್ರದ ಮೂಲಕ ಅವರು ವಾಪಸ್ಸಾಗಿದ್ದಾರೆ. ಜೊತೆಗೆ “ತ್ರಯಂಬಕಂ’ ಎಂಬ ಮತ್ತೂಂದು ಸಿನಿಮಾದಲ್ಲೂ ಪ್ರಮುಖ ಪಾತ್ರ ಮಾಡುತ್ತಿದ್ದಾರೆ.

 ಅಪ್ಪ ಆದ ಖುಷಿಯಲ್ಲಿ ನಾಯಕ ನಟರು
    ಕನ್ನಡ ಚಿತ್ರರಂಗದ ಇಬ್ಬರು ನಾಯಕ ನಟರಿಗೆ ಈ ವರ್ಷ ಬಡ್ತಿ ಸಿಕ್ಕಿದೆ. ಅದು ತಂದೆಯಾಗಿ.ಯಶ್‌ ದಂಪತಿಗೆ ಹಾಗೂ ಅಜೇಯ್‌ರಾವ್‌ ದಂಪತಿಗೆ ಹೆಣ್ಣು ಮಗು ಜನಿಸಿದ್ದು, ಅಜೇಯ್‌ ರಾವ್‌ ತಮ್ಮ ಮಗಳಿಗೆ ಚೆರಿಷ್ಮಾ ಎಂದು ನಾಮಕರಣ ಮಾಡಿದ್ದಾರೆ. ಯಶ್‌ ಮಗುವಿನ ನಾಮಕರಣ ಇನ್ನಷ್ಟೇ ನಡೆಯಬೇಕಿದೆ.  

 ರಕ್ಷಿತ್‌ -ರಶ್ಮಿಕಾ ಬ್ರೇಕಪ್‌ ಸ್ಟೋರಿ
ಈ ವರ್ಷ ಅತಿ ಹೆಚ್ಚು ಸುದ್ದಿಯಾದ, ಅನೇಕರ ಕುತೂಹಲಕ್ಕೆ ಗ್ರಾಸವಾದ ವಿಷಯವೆಂದರೆ ಅದು ರಕ್ಷಿತ್‌-ರಶ್ಮಿಕಾ ಬ್ರೇಕಪ್‌ ಸ್ಟೋರಿ. ಪ್ರೀತಿಸಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ಈ ಜೋಡಿ ತಮ್ಮ ನಿಶ್ಚಿತಾರ್ಥವನ್ನು ಮುರಿದುಕೊಂಡರಂತೆ ಎಂಬ ವಿಷಯ ಸಾಕಷ್ಟು ಚರ್ಚೆಗೆ ಗ್ರಾಸವಾಗುವ ಜೊತೆಗೆ ದೊಡ್ಡ ಮಟ್ಟದಲ್ಲಿ ಸುದ್ದಿಯಾಯಿತು. ಈ ಸುದ್ದಿಗೆ ಹೊಸ ಹೊಸ ಬಣ್ಣಗಳು ಕೂಡಾ ಸೇರಿಕೊಂಡವು. ಆದರೆ ರಕ್ಷಿತ್‌ ಆಗಲೀ, ರಶ್ಮಿಕಾ ಆಗಲೀ ಈ ಬಗ್ಗೆ ಎಲ್ಲೂ ಮಾತನಾಡಿಲ್ಲ. 

 ವೆಬ್‌ಸೀರಿಸ್‌ ನಿರ್ಮಾಣಕ್ಕಿಳಿದ ಶಿವಣ್ಣ
ಶಿವರಾಜಕುಮಾರ್‌ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟು ಇದೀಗ ಮೂರು ದಶಕಗಳು ಕಳೆದು ಹೋಗಿವೆ. ಈ ಮೂರು ದಶಕದಲ್ಲಿ ಸರಿಸುಮಾರು 115 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಇನ್ನೂ ಅವರ ಕೈಯಲ್ಲಿ ಒಂದಷ್ಟು ಹೊಸ ಚಿತ್ರಗಳಿವೆ. ನಟನೆ ಜೊತೆಗೆ ಅವರು ಕಳೆದ ವರ್ಷವೇ ನಿರ್ಮಾಣಕ್ಕಿಳಿದಿದ್ದು ಎಲ್ಲರಿಗೂ ಗೊತ್ತು. ತಮ್ಮ “ಶ್ರೀ ಮುತ್ತು ಸಿನಿ ಸರ್ವೀಸ್‌’ ಬ್ಯಾನರ್‌ ಶುರು ಮಾಡಿ ಆ ಮೂಲಕ ಮೊದಲ ಬಾರಿಗೆ ಕಿರುತೆರೆಯಲ್ಲಿ “ಮಾನಸ ಸರೋವರ’ ಎಂಬ ಧಾರಾವಾಹಿ ನಿರ್ಮಾಣ ಮಾಡಿದರು. ಆ ಧಾರಾವಾಹಿ ಮೂಲಕ ತಮ್ಮ ಪುತ್ರಿ ನಿವೇದಿತಾ ಅವರನ್ನು ನಿರ್ಮಾಪಕಿಯನ್ನಾಗಿಸಿದರು. ಈ ವರ್ಷ ಮತ್ತೂಂದು ಹೊಸ ಸುದ್ದಿಯೆಂದರೆ, ವೆಬ್‌ಸೀರಿಸ್‌ಗೂ ಕಾಲಿಟ್ಟರು. ಅಲ್ಲೊಂದು ” ಹೇಟ್‌ ಯೂ ರೋಮಿಯೋ’ ವೆಬ್‌ಸೀರಿಸ್‌ ನಿರ್ಮಾಣಕ್ಕೆ ಮುಂದಾದರು. ಇನ್ನು, “ಮಫ್ತಿ’ ಚಿತ್ರದಲ್ಲಿ ಭೈರತಿ ರಣಗಲ್‌ ಪಾತ್ರ ಸಾಕಷ್ಟು ಹೈಲೈಟ್‌ ಆಗಿದ್ದು, ಈಗ “ಭೈರತಿ ರಣಗಲ್‌’ ಎಂಬ ಶೀರ್ಷಿಕೆಯಡಿ ಚಿತ್ರವೊಂದನ್ನು ನಿರ್ಮಾಣ ಮಾಡಲಿದ್ದಾರೆ ಎಂಬ ಸುದ್ದಿಯೂ ಇದೆ.

ಉಪ್ಪಿ ಹೊಸ ಪಾರ್ಟಿ
 ನಟ ಉಪೇಂದ್ರ ಅವರು ಮೊದಲಿನಿಂದಲೂ ರಾಜಕೀಯಕ್ಕೆ ಸೇರುತ್ತಾರೆ ಎಂಬ ಸುದ್ದಿ ಹಬ್ಬುತ್ತಲೇ ಇತ್ತು. ಸಿಕ್ಕಾಗೆಲ್ಲಾ ಉಪೇಂದ್ರ ಏನನ್ನೂ ಹೇಳದೆ, ಎಲ್ಲದ್ದಕ್ಕೂ ಕಾಲವೇ ಉತ್ತರ ಕೊಡಲಿದೆ ಎನ್ನುತ್ತಲೇ, ಮೆಲ್ಲನೆ ರಾಜಕೀಯಕ್ಕೆ ಎಂಟ್ರಿಯಾಗುವುದನ್ನು ಹೇಳಿಕೊಂಡರು. ಅಷ್ಟೇ ಅಲ್ಲ, ಕಳೆದ ವರ್ಷ ಅವರು “ಕೆಪಿಜೆಪಿ’ ಪಕ್ಷಕ್ಕೆ ಜೈ ಎಂದು ಅದರ ನಾಯಕತ್ವ ವಹಿಸಿಕೊಂಡಿದ್ದು ಎಲ್ಲರಿಗೂ ಗೊತ್ತೇ ಇದೆ. ಆದರೆ, ಪಕ್ಷದಲ್ಲಿ ಭಿನ್ನಾಭಿಪ್ರಾಯ ಉಂಟಾಗಿ ಸಾಕಷ್ಟು ಗೊಂದಲ ಎದ್ದಿತು. ಕೊನೆಗೆ ಆ ಪಕ್ಷದಿಂದ ಹೊರಬಂದ ಉಪೇಂದ್ರ ಈ ವರ್ಷ ತಮ್ಮ ಹೊಸ ಪಕ್ಷವನ್ನು ಘೋಷಣೆ ಮಾಡಿದರು. ಅವರು ತಮ್ಮ ಪಕ್ಷಕ್ಕೆ “ಉತ್ತಮ ಪ್ರಜಾಕೀಯ ಪಾರ್ಟಿ’ (ಯುಪಿಪಿ ) ಎಂಬ ಹೊಸ ಪಕ್ಷ ಸ್ಥಾಪಿಸಿ, ಆ ಮೂಲಕ ತಮ್ಮ ರಾಜಕೀಯ ಚಟುವಟಿಕೆಗಳಿಗೆ ಚಾಲನೆ ನೀಡಿದರು. ಇದರ ನಡುವೆಯೇ ಅವರು ಚಿತ್ರಗಳಲ್ಲೂ ನಟಿಸೋಕೆ ಶುರು ಮಾಡಿದರು. “ಕೆಪಿಜೆಪಿ’ ಪಕ್ಷ ಬಿಟ್ಟವರೇ ಅವರು “ಐ ಲವ್‌ಯೂ’ ಚಿತ್ರ ಒಪ್ಪಿಕೊಂಡು ನಟಿಸೋಕೆ ಶುರು ಮಾಡಿದ ಬೆನ್ನಲ್ಲೇ, “ರವಿಚಂದ್ರ’ ಚಿತ್ರಕ್ಕೂ ಗ್ರೀನ್‌ಸಿಗ್ನಲ್‌ ಕೊಟ್ಟರು. ರಾಜಕೀಯಕ್ಕೆ ಎಂಟ್ರಿಯಾದ ಅವರು, ಇನ್ನು, ಸಿನಿಮಾದತ್ತ ಮುಖ ಮಾಡುವುದಿಲ್ಲ ಎಂಬ ಆತಂಕದಲ್ಲಿದ್ದ ಅವರ ಅಭಿಮಾನಿಗಳಿಗೆ ಕೊಂಚ ಉತ್ಸಾಹ ಹೆಚ್ಚಿದೆ.

ನಟ,ನಿರ್ಮಾಪಕ ಪುತ್ರರ ಆಗಮನ
ಪ್ರತಿವರ್ಷ ಕೂಡ ಕನ್ನಡ ಚಿತ್ರರಂಗಕ್ಕೆ ಹೊಸ ಪ್ರತಿಭೆಗಳ ಆಗಮನವಾಗುತ್ತಲೇ ಇದೆ. ಅಂತೆಯೇ ಈ ವರ್ಷ ಕೂಡ ಹಲವು ಹೊಸ ಪ್ರತಿಭಾವಂತರ ಆಗಮನವಾಗಿದೆ. ಅದರಲ್ಲೂ ಎಂದಿನಂತೆ ಚಿತ್ರರಂಗದಲ್ಲಿ ದುಡಿದವರ ಮಕ್ಕಳು ಎಂಟ್ರಿಕೊಡುತ್ತಿರುವುದು ಹೊಸದೇನಲ್ಲ. ಆದರೆ, ಈ ವರ್ಷ ಅದೊಂದು ವಿಶೇಷ ಅಂದರೆ ತಪ್ಪಿಲ್ಲ. ಅಂಬರೀಶ್‌ ಅವರ ಪುತ್ರ ಅಭಿಷೇಕ್‌ ಅಂಬರೀಶ್‌ ಚಿತ್ರರಂಗಕ್ಕೆ ಕಾಲಿಟ್ಟರು. “ಅಮರ್‌’ ಚಿತ್ರದ ಮೂಲಕ ನಾಯಕರಾಗಿ ಅಭಿಷೇಕ್‌ ಗುರುತಿಸಿಕೊಂಡರೆ, ದೇವರಾಜ್‌ ಅವರ ಎರಡನೇ ಪುತ್ರ ಪ್ರಣಾಮ್‌ ದೇವರಾಜ್‌ ಅವರೂ ಸಹ, “ಕುಮಾರಿ 21′ ಎಂಬ ಚಿತ್ರದ ಮೂಲಕ ಹೀರೋ ಆಗಿ ಎಂಟ್ರಿಯಾದರು. ಇನ್ನು, ಶಶಿಕುಮಾರ್‌ ಅವರ ಪುತ್ರ ಆದಿತ್ಯ ಶಶಿಕುಮಾರ್‌ ಕೂಡ “ಮೊಡವೆ’ ಚಿತ್ರದ ಮೂಲಕ ನಾಯಕರಾಗಿ ಕಾಲಿಟ್ಟರು. ಅರ್ಜುನ್‌ ಸರ್ಜಾ ಪುತ್ರಿ ಐಶ್ವರ್ಯ ಸರ್ಜಾ ಕೂಡ “ಪ್ರೇಮ ಬರಹ’ ಚಿತ್ರದ ಮೂಲಕ ಚಿತ್ರರಂಗ ಪ್ರವೇಶ ಮಾಡಿದರು. ನಿರ್ಮಾಪಕ ಕೆ.ಮಂಜು ಅವರ ಪುತ್ರ ಶ್ರೇಯಸ್‌ ಕೂಡ “ಪಡ್ಡೆಹುಲಿ’ ಚಿತ್ರದ ಮೂಲಕ ಚಿತ್ರರಂಗದ ಬಾಗಿಲು ತಟ್ಟಿದ್ದಾರೆ.  ರವಿಚಂದ್ರನ್‌ ಅವರ ಎರಡನೇ ಪುತ್ರ ವಿಕ್ರಮ್‌ ಹಾಗು ಡಾ.ರಾಜಕುಮಾರ್‌ ಸಹೋದರ ವರದಪ್ಪ ಅವರ ಮೊಮ್ಮಗ ಪೃಥ್ವಿ ಸಹ “ಮಿಂಚು ಹುಳು’ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಆಗಮಿಸಿದ್ದಾರೆ. ಇನ್ನುಳಿದಂತೆ ರಾಮ್‌ಕುಮಾರ್‌ ಪುತ್ರ, ಸುಧಾರಾಣಿ ಪುತ್ರಿ, ಖಳನಟ ರವಿಶಂಕರ್‌ ಪುತ್ರ ಸೇರಿದಂತೆ ಇನ್ನು ಅನೇಕ ನಟ,ನಟಿಯರ ಪುತ್ರ, ಪುತ್ರಿಯರು ಸಿನಿಮಾರಂಗಕ್ಕೆ ಕಾಲಿಡಲು ತಯಾರಿ ನಡೆಸುತ್ತಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ಹೊಸ ವರ್ಷಕ್ಕೆ ಅವರ ಆಗಮನ ಸಾಧ್ಯತೆ ಇದೆ.

ಮರೆಯಾದವರು
ಕನ್ನಡ ಚಿತ್ರರಂಗಕ್ಕೆ ಈ ವರ್ಷ ಖುಷಿಯ ವಿಷಯಕ್ಕಿಂತ ದುಃಖದ ಪಾಲು ಹೆಚ್ಚಿದೆ ಎಂದೇ ಹೇಳಬೇಕು. ಹೌದು, ಈ ವರ್ಷದ ಆರಂಭದಿಂದ ಹಿಡಿದು ಅಂತ್ಯದವರೆಗೂ ಕನ್ನಡ ಚಿತ್ರರಂಗವನ್ನು ಅನೇಕ ನಟ,ನಿರ್ದೇಶಕ, ನಿರ್ಮಾಪಕರು, ಛಾಯಾಗ್ರಾಹಕರು ಅಗಲಿದ್ದು ನೋವಿನ ಸಂಗತಿ. ಅನಾರೋಗ್ಯದಿಂದ ಬಳಲುತ್ತಿದ್ದ ಕಾಶೀನಾಥ್‌ ಅಗಲಿದರು. ಕಳೆದ ಐದು ದಶಕಗಳಿಂದಲೂ ಚಿತ್ರರಂಗವನ್ನು ಅಪಾರವಾಗಿ ಪ್ರೀತಿಸಿ, ಬೆಳವಣಿಗೆಗೆ ಕಾರಣರಾಗುವುದರ ಜೊತೆಗೆ ಕನ್ನಡ ಚಿತ್ರರಂಗಕ್ಕೆ ಹಿರಿಯಣ್ಣನಂತಿದ್ದ ಅಂಬರೀಶ್‌ ಅವರನ್ನು ಕನ್ನಡ ಚಿತ್ರೋದ್ಯಮ ಕಳೆದುಕೊಂಡಿತು. ಕರ್ನಾಟಕ ಚಲಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷರಾದ ನಾಗರಾಜಶೆಟ್ಟಿ, ಭಕ್ತವತ್ಸಲ, ನಿರ್ದೇಶಕರಾದ ಎಂ.ಎಸ್‌.ರಾಜಶೇಖರ್‌, ಎ.ಆರ್‌.ಬಾಬು, ಛಾಯಾಗ್ರಾಹಕರಾದ ಕೆ.ಎಂ.ವಿಷ್ಣುವರ್ಧನ, ಕುಮಾರ್‌ ಚಕ್ರವರ್ತಿ ಮತ್ತು ಹಿರಿಯ ಪ್ರೊಡಕ್ಷನ್‌ ಮ್ಯಾನೇಜರ್‌ ಪಾಪಣ್ಣ ಕೂಡ ಅಗಲಿದರು.

ಸ್ಟಾರ್‌ ನಟರ ಐತಿಹಾಸಿಕ ಚಿತ್ರ ಪ್ರೀತಿ
ಈ ವರ್ಷ ಅತೀ ಹೆಚ್ಚು ಸುದ್ದಿಗೆ ಕಾರಣ ಮತ್ತು ಕುತೂಹಲ ಹುಟ್ಟಿಸಿದ್ದು ಅಂದರೆ ಅದು ಐತಿಹಾಸಿ ಚಿತ್ರ. ಹೌದು, ಬರೋಬ್ಬರಿ ಮೂರು ಐತಿಹಾಸಿಕ ಚಿತ್ರಗಳು ಈ ವರ್ಷ ಅನೌನ್ಸ್‌ ಆಗಿದ್ದು ವಿಶೇಷ. ಆ ಪೈಕಿ ಈಗಾಗಲೇ “ಬಿಚ್ಚುಗತ್ತಿ’ ಚಿತ್ರದ ಮುಹೂರ್ತ ನೆರವೇರಿದೆ. ಇನ್ನು, ಅತೀ ಹೆಚ್ಚು ಸುದ್ದಿಗೆ ಬಂದದ್ದ ದರ್ಶನ್‌ ಮತ್ತು ಸುದೀಪ್‌. ಆ ಸುದ್ದಿಗೆ ಬಲವಾದ ಕಾರಣ, ಮತ್ತದೇ ಐತಿಹಾಸಿಕ ಚಿತ್ರಗಳು. ಹೌದು, ದರ್ಶನ್‌ ಅವರು “ಗಂಡುಗಲಿ ಮದಕರಿ ನಾಯಕ’ ಚಿತ್ರ ಮಾಡುತ್ತಾರೆ ಎಂಬ ಸುದ್ದಿ ಜೋರಾಯಿತು. ಅಷ್ಟೇ ಅಲ್ಲ, ಆ ಚಿತ್ರವನ್ನು ರಾಕ್‌ಲೈನ್‌ ವೆಂಕಟೇಶ್‌ ನಿರ್ಮಾಣ ಮಾಡುತ್ತಿದ್ದು, ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್‌ಬಾಬು ನಿರ್ದೇಶನ ಮಾಡುತ್ತಿದ್ದಾರೆ ಅನ್ನುವುದು ಪಕ್ಕಾ ಆಯಿತು. ಐತಿಹಾಸಿಕ “ಮದಕರಿ ನಾಯಕ’ ಕುರಿತು ಸುದೀಪ್‌ ಕೂಡ ಚಿತ್ರ ಮಾಡುತ್ತಿರುವುದಾಗಿ ಸ್ಪಷ್ಟಪಡಿಸಿದರು. ಅಷ್ಟೇ ಅಲ್ಲ, ಯಾರು ಮಾಡಿದರೂ ಪರವಾಗಿಲ್ಲ. ನಾನೂ ಈ ಚಿತ್ರ ಮಾಡುತ್ತೇನೆ ಅಂತ ಟ್ವೀಟ್‌ ಮಾಡುವ ಮೂಲಕ ಜೋರು ಸುದ್ದಿ ಮಾಡಿದರು. ಇಲ್ಲಿ ಐತಿಹಾಸಿಕವುಳ್ಳ ಮದಕರಿ ನಾಯಕರ ಕುರಿತು ಇಬ್ಬರು ಸ್ಟಾರ್‌ ನಟರು ನಟಿಸುತ್ತಿದ್ದಾರೆ ಎಂಬುದೇ ವಿಶೇಷ ಎನಿಸಿದ್ದು ನಿಜ. ಈಗಾಗಲೇ ಆ ಚಿತ್ರಗಳಿಗೆ ತಯಾರಿಯೂ ನಡೆಯುತ್ತಿದೆ. ಆ ಪೈಕಿ ದರ್ಶನ್‌ ಅಭಿನಯದ “ಗಂಡುಗಲಿ ಮದಕರಿ ನಾಯಕ’ ಚಿತ್ರಕ್ಕೆ ಜನವರಿಯಲ್ಲಿ ಚಾಲನೆ ಸಿಗುವ ಸಾಧ್ಯತೆ ಇದೆ. ಸುದೀಪ್‌ ಅಭಿನಯಿಸಲಿರುವ “ಮದಕರಿ ನಾಯಕ’ ಚಿತ್ರ ಕೂಡ ಮುಂದಿನ ವರ್ಷ ಸೆಟ್ಟೇರಬಹುದು. ಇನ್ನುಳಿದಂತೆ ಯುವ ನಟ ರಾಜವರ್ಧನ ಅಭಿನಯದ “ಬಿಚ್ಚುಗತ್ತಿ’ ಚಿತ್ರಕ್ಕೆ ಅದಾಗಲೇ ಚಾಲನೆ ಸಿಕ್ಕಾಗಿದೆ. ಐತಿಹಾಸಿಕ ಚಿತ್ರಗಳಲ್ಲಿ ಸ್ಟಾರ್‌ ನಟರು ಕಾಣಿಸಿಕೊಳ್ಳುತ್ತಿದ್ದಾರೆ ಎಂಬ ಮಾತ್ರಕ್ಕೆ ಈ ವರ್ಷ ಜೋರು ಸುದ್ದಿಯಾಗಿದ್ದು ನಿಜ.

ಯುಎಫ್ಓ-ಕ್ಯೂಬ್‌ ಸಮಸ್ಯೆ ಪ್ರದರ್ಶನ ಬಂದ್‌
ಈ ವರ್ಷ ಚಿತ್ರರಂಗ ಮತ್ತೂಂದು ಒಗ್ಗಟ್ಟಿಗೆ ಸಾಕ್ಷಿಯಾಯಿತು. ಅದೇನೆಂದರೆ, ಯುಎಫ್ಓ ಮತ್ತು ಕ್ಯೂಬ್‌ ವಿಧಿಸುತ್ತಿರುವ ದರಕ್ಕೆ ಸಂಬಂಧಿಸಿದಂತೆ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಚಿತ್ರ ಪ್ರದರ್ಶನ ಹಾಗು ಚಿತ್ರೀಕರಣದ ಬಂದ್‌ಗೆ ಕರೆ ನೀಡಿದ ಹಿನ್ನೆಲೆಯಲ್ಲಿ ಇಡೀ ಚಿತ್ರರಂಗ ಮಂಡಳಿ ಕರೆಗೆ ಸ್ಪಂದಿಸಿದ್ದು ವಿಶೇಷ. ಯುಎಫ್ಓ ಮತ್ತು ಕ್ಯೂಬ್‌ ವಿಧಿಸುತ್ತಿರುವ ದರದಲ್ಲಿ ಶೇ.25 ರಷ್ಟು ಕಡಿಮೆ ಮಾಡಬೇಕು ಎಂದು ಒತ್ತಾಯಿಸಿ, ನಡೆಸಿದ್ದ ಸಭೆಗಳೆಲ್ಲವೂ ವಿಫ‌ಲವಾಗಿದ್ದ ಹಿನ್ನೆಲೆಯಲ್ಲಿ ಮಾರ್ಚ್‌ 9ರ ಶುಕ್ರವಾರದಿಂದ ಯಾವುದೇ ಹೊಸ ಚಿತ್ರಗಳನ್ನು ಬಿಡುಗಡೆ ಮಾಡದಿರಲು ತೀರ್ಮಾನಿಸಲಾಗಿತ್ತು. ಹಾಗಾಗಿ, ಆ ದಿನ ಯಾವುದೇ ಚಿತ್ರ ಪ್ರದರ್ಶನ ಮಾಡದೆ, ಚಿತ್ರೀಕರಣ ನಡೆಸದೆ, ಚಿತ್ರಮಂದಿರಗಳ ಮಾಲೀಕರು,ನಿರ್ಮಾಪಕರು ಹಾಗು ವಿತರಕರು ಸ್ಪಂದಿಸಿದ್ದರು.ಚಿತ್ರರಂಗ ಒಗ್ಗಟ್ಟು ಪ್ರದರ್ಶಿಸಿದ ಹಿನ್ನೆಲೆಯಲ್ಲಿ ಕನ್ನಡ ಚಿತ್ರಗಳಷ್ಟೇ ಅಲ್ಲ, ಅಂದು ಬೇರೆ ಭಾಷೆಯ ಚಿತ್ರಗಳೂ ಪ್ರದರ್ಶನವಾಗಲಿಲ್ಲ.

ಟೀಮ್‌ ಸುಚಿತ್ರಾ


ಈ ವಿಭಾಗದಿಂದ ಇನ್ನಷ್ಟು

  • ಅಂತೂ ಇಂತೂ ಇನ್ನು ಎರಡು ವಾರ ಕಳೆದರೆ 2019 ಪೂರ್ಣಗೊಳ್ಳಲಿದೆ. ಚಿತ್ರರಂಗ ಕೂಡ ಎಂದಿಗಿಂತ ಗರಿಗೆದರಿ ನಿಂತಿದೆ. ಈ ವರ್ಷ ಇಟ್ಟುಕೊಂಡ ಕೆಲವು ನಿರೀಕ್ಷೆ ಸುಳ್ಳಾದರೆ,...

  • "ನಾನು ಇಲ್ಲಿಯವರೆಗೆ ಹೀರೋ ಆಗಿ ಅನೇಕ ಸಿನಿಮಾಗಳಲ್ಲಿ ಆ್ಯಕ್ಟಿಂಗ್‌ ಮಾಡಿದ್ದೀನಿ. ಆದ್ರೆ, ಇಲ್ಲಿಯವರೆಗೂ ಯಾವ ಸಿನಿಮಾಗಳಲ್ಲೂ, ರಿಲೀಸ್‌ ಆದ ನಂತರ ಸಿನಿಮಾ ಸಕ್ಸಸ್‌...

  • ಕೆಂಪಾಗಿ ಕಂಗೊಳಿಸುತ್ತಿದ್ದ ಸೂರ್ಯ. ಜೋರಾಗಿ ಬೀಸುತ್ತಿದ್ದ ಗಾಳಿ. ಜೊತೆಗೆ ಒಂದಷ್ಟು ಚಳಿ. ಆಗಾಗ ಇಣುಕಿ ಮರೆಯಾಗುತ್ತಿದ್ದ ಬಿಸಿಲು, ಸುತ್ತಲ ಹಸಿರು .... ರಸ್ತೆ...

  • ಇತ್ತೀಚೆಗಷ್ಟೇ ದಿನೇಶ್‌ ಬಾಬು ನಿರ್ದೇಶನದ "ಹಗಲು ಕನಸು' ಬಿಡುಗಡೆಯಾಗಿದೆ. ಅದರ ಬೆನ್ನಲ್ಲೇ ತಮ್ಮ ನಿರ್ದೇಶನದ ಇನ್ನೊಂದು ಸಿನಿಮಾ ಮಾಡಿ ಪ್ರೇಕ್ಷಕರ ಮುಂದೆ ತರಲು...

  • ಸಾಮಾನ್ಯವಾಗಿ ನಮ್ಮಲ್ಲಿ ರಾಜಕಾರಣಿಯ ಮಕ್ಕಳು ರಾಜಕಾರಣಿ, ಕಲಾವಿದರ ಮಕ್ಕಳು ಕಲಾವಿದರು, ಉದ್ಯಮಿಗಳ ಮಕ್ಕಳು ಉದ್ಯಮಿಗಳಾಗುತ್ತಾರೆ. ತಂದೆಯ ಹೆಸರಿನಲ್ಲಿ, ತಮ್ಮ...

ಹೊಸ ಸೇರ್ಪಡೆ