ಕ್ಲೈಮ್ಯಾಕ್ಸ್‌ ಪೊಗರೇ ಬೇರೆ: ನಂದಕಿಶೋರ್‌

Team Udayavani, Sep 6, 2019, 6:00 AM IST

ನಿರ್ದೇಶಕ ಸಹೋದರರಾದ ನಂದಕಿಶೋರ್‌ ಹಾಗೂ ತರುಣ್‌ ಸುಧೀರ್‌ ‘ಪೊಗರು’ ಹಾಗೂ ‘ರಾಬರ್ಟ್‌’ ಚಿತ್ರಗಳನ್ನು ನಿರ್ದೇಶಿಸುತ್ತಿದ್ದಾರೆ. ಈ ಚಿತ್ರಗಳ ಕುರಿತು ಅಣ್ತಮ್ಮಾಸ್‌ ಮಾತನಾಡಿದ್ದಾರೆ.

“ಇಂಡಸ್ಟ್ರಿಯಲ್ಲಿ ನಾವೇನೂ ಸಾಧನೆ ಮಾಡಿಲ್ಲ. ಇನ್ನು ಗ್ರ್ಯಾಂಡ್‌
ಆಗಬೇಕು, ಬ್ರಾಂಡ್‌ ಆಗಬೇಕು ಅದಕ್ಕೆಲ್ಲಾ ಟೈಮ್‌ ಬೇಕು. ನಮ್ಮ ಉದ್ದೇಶವೊಂದೇ. ಒಳ್ಳೆಯ ಸಿನಿಮಾ ಮಾಡಬೇಕು….’ – ನಿರ್ದೇಶಕ ನಂದಕಿಶೋರ್‌ ಸುಧೀರ್‌ ಹೀಗೆ ನೇರವಾಗಿಯೇ ಹೇಳುತ್ತಾ ಹೋದರು.
ಧ್ರುವಸರ್ಜಾ ಅಭಿನಯದ “ಪೊಗರು’ ಬಹು ನಿರೀಕ್ಷೆಯ ಚಿತ್ರ.

ಆರಂಭದಿಂದ ಇಲ್ಲಿಯವರೆಗೂ ಸಾಕಷ್ಟು ಕುತೂಹಲ ಮೂಡಿಸಿದೆ. ಆ ಬಗ್ಗೆ
ನಂದಕಿಶೋರ್‌ ಹೇಳಿದ್ದು ಹೀಗೆ. “ಸದ್ಯಕ್ಕಿನ್ನೂ ಚಿತ್ರೀಕರಣ ನಡೆಯುತ್ತಿದೆ. ಇನ್ನು 20 ದಿನಗಳ ಚಿತ್ರೀಕರಣ ನಡೆದರೆ, ಕುಂಬಳಕಾಯಿ. “ಪೊಗರು’ ನನ್ನ ಹಾಗೂ ತಂಡದ ದೊಡ್ಡ ಕನಸು. ನಾನು ಸಕ್ಸಸ್‌, ಫೇಲ್ಯೂರ್‌ ಎಲ್ಲವನ್ನೂ ನೋಡಿದ್ದೇನೆ. ಈ ರಂಗದಲ್ಲಿ ಆಡಿಯನ್ಸ್‌ಗೆ ಎಷ್ಟು ತೃಪ್ತಿ
ಪಡಿಸ್ತೀವಿ ಅನ್ನೊದಷ್ಟೇ ಮುಖ್ಯವಾಗುತ್ತೆ ಹೊರತು, ಅಲ್ಲಿ ನಾಯಕ ಯಾರು, ನಿರ್ದೇಶಕ ಯಾರೆಂಬುದು ಮುಖ್ಯ ಆಗಲ್ಲ. ಕಂಟೆಂಟ್‌ ಸ್ಟ್ರಾಂಗ್‌ ಆಗಿದ್ದರೆ ಮಾತ್ರ ಅದು ರೀಚ್‌ ಆಗುತ್ತೆ. ಇನ್ನು, “ಪೊಗರು’ ಒಂದೂವರೆ
ವರ್ಷ ಆಯ್ತು, ತುಂಬಾ ಲೇಟ್‌ ಆಗ್ತಾ ಇದೆ ಎಂಬ ಮಾತಿದೆ. ಅದನ್ನು ಒಪ್ಪುತ್ತೇನೆ. ನಿಜ ಹೇಳುವುದಾದರೆ, ಈ ಚಿತ್ರದ ಕಥೆ, ಪಾತ್ರ ಆ ರೀತಿ ಇದೆ. ನಿರೂಪಣೆ ಗಟ್ಟಿಗೊಳಿಸಬೇಕೆಂಬ ಉದ್ದೇಶ ಈ ಚಿತ್ರದ್ದು. ಹಾಗಾಗಿ
ಹೀರೋ ಪಾತ್ರಕ್ಕೆ ಸಮಯ ಬೇಕಾಯ್ತು. ಸಿನಿಮಾ ಸ್ವಲ್ಪ ಲೇಟ್‌ ಆಗಿದ್ದರೂ, ಸ್ಕ್ರೀನ್‌ ಮೇಲೆ ನೋಡಿದಾಗ, ತೃಪ್ತಭಾವ ಅಂತೂ ಇರುತ್ತೆ’ ಎಂಬುದು ನಂದಕಿಶೋರ್‌ ಮಾತು.

ಮುದ್ದು ಹುಡುಗನ ರಗಡ್‌ ಲುಕ್‌
ಸಾಮಾನ್ಯವಾಗಿ ಸಕ್ಸಸ್‌ಫ‌ುಲ್ ಹೀರೋ, ನಿರ್ದೇಶಕ ಸೇರಿಕೊಂಡಾಗ, ಅಲ್ಲಿ ಇನ್ನಷ್ಟು ನಿರೀಕ್ಷೆ ಹೆಚ್ಚಿರುತ್ತೆ. ಅಂಥದ್ದೊಂದು ಒತ್ತಡ, ಸವಾಲು ನಿರ್ದೇಶಕರಿಗೂ ಇತ್ತಾ? ಇದಕ್ಕೆ ನಂದಕಿಶೋರ್‌ ಹೇಳಿದ್ದು ಹೀಗೆ. ‘ಖಂಡಿತ ಇದು ದೊಡ್ಡ ಚಾಲೆಂಜ್‌. ಅದಾಗಲೇ ಬ್ಯಾಕ್‌ ಟು ಬ್ಯಾಕ್‌ ಮೂರು ಹಿಟ್ ಸಿನಿಮಾ ಕೊಟ್ಟಿರುವ ಹೀರೋ ಸಿನಿಮಾ ಮಾಡಲು ಹೊರಟಾಗ, ಅದೊಂದು ದೊಡ್ಡ ಸವಾಲು. ಯಾಕೆಂದರೆ, ನಿರೀಕ್ಷೆ ಹೆಚ್ಚಿರುತ್ತೆ. ಯಾವ ಕಥೆ ಮಾಡಬೇಕು, ಹೇಗೆ ತೋರಿ­ಸಬೇಕು, ಹಿಂದಿನ ಚಿತ್ರಗಳಿಗಿಂತಲೂ ಭಿನ್ನವಾಗಿ ತೋರಿಸುವುದು ಹೇಗೆ, ಹಾಡು ಹೇಗೆ ಮಾಡಿಸಬೇಕು, ವಿಷ್ಯುಯಲ್ ಪ್ಲಾನ್‌ ಹೆಂಗಿರ­ಬೇಕು, ಗೆಟಪ್‌ ಯಾವ ರೀತಿ ಇರಬೇಕು ಎಂಬ ಲೆಕ್ಕಾಚಾರ ಹಾಕಿ ಈ ಚಿತ್ರ ಕೈಗೆತ್ತಿಕೊಂಡೆ. ಮೂರು ಚಿತ್ರಗಳಲ್ಲೂ ತುಂಬಾ ಮುದ್ದಾಗಿ ಕಾಣಿಸಿಕೊಂಡಿರುವ ಧ್ರುವಸರ್ಜಾ, ಇಲ್ಲಿ ಔಟ್ ಅಂಡ್‌ ಔಟ್ ರಗಡ್‌ ಲುಕ್‌ನಲ್ಲಿ ಕಾಣಿಸಿಕೊಳ್ಳಲಿ­ದ್ದಾರೆ. ಜನರು ಆ ರಗಡ್‌ ಲುಕ್‌ ಅನ್ನು ಸ್ವೀಕರಿ­ಸುತ್ತಾರಾ, ಇಲ್ಲವಾ ಎಂಬ ಪ್ರಶ್ನೆಗ­ಳೊಂದಿಗೇ ಮುಂದುವರೆದೆ. ವಿಶ್ವಾಸವಿತ್ತು. ಅದು ವರ್ಕೌಟ್ ಆಗುತ್ತಿದೆ’ ಎನ್ನುತ್ತಾರೆ ನಿರ್ದೇಶಕರು.

ಫಾರಿನ್‌ ಫೈಟರ್ನ ಇಂಡಿಯಾ ಪ್ರೀತಿ

ಜಗತ್ತಿನ ಅತ್ಯಂತ ಜನಪ್ರಿಯ ವ್ಯಕ್ತಿಗಳನ್ನು ಕರೆಸಿದ್ದು ದುಬಾರಿ ಎನಿಸಲಿಲ್ಲವೇ? ಈ ಪ್ರಶ್ನೆಗೆ ನಿರ್ದೇಶಕರು ಹೇಳಿದ್ದು ಹೀಗೆ. ‘ನಿರ್ಮಾಪಕರ ದೊಡ್ಡ ಮನಸು ಮತ್ತು ಸಿನಿಮಾ ಮೇಲಿನ ಪ್ರೀತಿ ಇದಕ್ಕೆ ಕಾರಣ. ಇದೇ ಮೊದಲ ಸಲ ಮೋರ್ಗನ್‌ ಆಸ್ಟೆ, ಕೈಗ್ರೀನ್‌, ಜಾನ್‌ ಲುಕಾಸ್‌ ಹಾಗು ಜೋ ಲಿಂಡರ್‌ ಅವರು ಒಟ್ಟಿಗೆ ಇಂಡಿಯನ್‌ ಸಿನಿಮಾದಲ್ಲಿ ನಟಿಸಿದ್ದಾರೆ. ಅದರಲ್ಲೂ ಕನ್ನಡದ ‘ಪೊಗರು’ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಎಂಬುದು ಹೆಮ್ಮೆ. ಇವರೆಲ್ಲ ಅತ್ಯಂತ ಜನಪ್ರಿಯ ವ್ಯಕ್ತಿಗಳಾದರೂ, ಸಿಂಪಲ್ ಆಗಿಯೇ ಸೆಟ್‌ನಲ್ಲಿದ್ದರು. ನಮಗೆ ಇದೇ ಬೇಕು, ಅದೇ ಆಗಬೇಕು ಎಂಬ ಡಿಮ್ಯಾಂಡ್‌ ಇಲ್ಲದೆ, ಕುರ್ಚಿ, ಛತ್ರಿ ಯಾವುದನ್ನೂ ಕೇಳದೆ, ಬೆಳಗ್ಗೆ 6 ಕ್ಕೆ ಶೂಟಿಂಗ್‌ ಅಂದರೆ, 5.30 ಕ್ಕೆ ಸೆಟ್‌ನಲ್ಲಿ ಇರುವಂತಹ ಬದ್ಧತೆಯ ವ್ಯಕ್ತಿಗಳಾದವರು. ಅದರಲ್ಲೂ ಇವರಿಗೆ ಇಂಡಿಯಾ ಅಂದರೆ ಪ್ರೀತಿ. ಮಾತು ಮಾತಿನಲ್ಲೇ ಇಂಡಿಯಾವನ್ನು ಹೊಗಳುತ್ತಾರೆ. ಹೀಗೆ ಒಬ್ಬೊಬ್ಬರನ್ನು ಆಯ್ಕೆ ಮಾಡಿ, ಅವರನ್ನು ಅಣಿಗೊಳಿಸಿದ್ದು ಸಾರ್ಥಕದ ಕ್ಷಣ ಎನಿಸಿತು. ಅವರಿಗೆ ನಟನೆ ಬಗ್ಗೆ ಅಷ್ಟೊಂದು ಐಡಿಯಾ ಇಲ್ಲ. ಅಂತಹವರನ್ನು ರೆಡಿಮಾಡಿ, ಸ್ಕ್ರೀನ್‌ಮೇಲೆ ಅಬ್ಬರಿಸುವಂತೆ ಮಾಡಿದ್ದು ‘ಪೊಗರು’ ತಂಡದ ಹೆಮ್ಮೆ’.

ಪ್ಯಾನ್‌ ಇಂಡಿಯಾ ಪ್ರಯತ್ನ

ಎಲ್ಲಾ ಸರಿ, ‘ಪೊಗರು’ ಕಥೆ ಏನು? ಅದನ್ನು ಚಿತ್ರದಲ್ಲೇ ನೋಡಬೇಕು ಎನ್ನುವ ಅವರು, ‘ಇದೊಂದು ತಾಯಿ ಮಗನ ನಡುವಿನ ಕಥೆ. ಪವಿತ್ರಾ ಲೋಕೇಶ್‌ ಅವರು ತಾಯಿಯಾಗಿ ಕಾಣಿಸಿಕೊಂಡಿದ್ದಾರೆ. ನಮ್ಮತನ ಇಲ್ಲಿ ಹೇರಳವಾಗಿದೆ. ಪ್ರತಿ 15 ನಿಮಿಷಕ್ಕೂ ಹೊಸ ಎಪಿಸೋಡ್‌ ಕಾಣಬಹುದು. ಇಲ್ಲಿ ಹಲವು ಸರ್‌ಪ್ರೈಸ್‌ ಇವೆ. ನಮ್ಮ ಹೀರೋ ಹೊಸ ಪ್ರಯತ್ನ ಮಾಡಿದ್ದಾರೆ. ಹಿಂದೆ ದೊಡ್ಡ ಸ್ಟಾರ್‌ ನಟರು ಆ ಪ್ರಯತ್ನ ಮಾಡಿದ್ದು ಬಿಟ್ಟರೆ, ಧ್ರುವ ಸರ್ಜಾ ಇಲ್ಲಿ ಆ ಪ್ರಯತ್ನ ಮಾಡಿದ್ದಾರೆ. ಅದೇನು ಎಂಬುದನ್ನು ಸಿನಿಮಾದಲ್ಲೇ ನೋಡಬೇಕು. ಇಷ್ಟು ದಿನ ಕಂಡ ಧ್ರುವ ಇಲ್ಲಿ ಬೇರೆ ರೀತಿ ಕಾಣುತ್ತಾರೆ ಎಂದು ಹೇಳುವ ನಂದಕಿಶೋರ್‌, ಇದು ಪ್ಯಾನ್‌ ಇಂಡಿಯಾ ಅಂತ ಹೇಳಲ್ಲ. ಕನ್ನಡ ಸಿನಿಮಾ ಮಾಡಿದ್ದೇವೆ. ಸಿನಿಮಾದ ಕೆಲ ತುಣುಕು ನೋಡಿದ ಬೇರೆಯವರು, ಎಲ್ಲೆಡೆ ಸಲ್ಲುವ ಚಿತ್ರವಿದು ಅಂದಾಗ, ನಿರ್ಮಾಣ ಸಂಸ್ಥೆ ಆ ನಿಟ್ಟಿನಲ್ಲಿ ಯೋಚಿಸುತ್ತಿದೆ. ಹೀರೋಗೆ ಒಂದು ಆಸೆ ಇದೆ, ಕನ್ನಡ ಭಾಷೆಯಲ್ಲೇ ಬೇರೆ ಭಾಷೆಗೂ ತಲುಪಬೇಕು ಅನ್ನೋದು. ಆ ಕುರಿತು ಚರ್ಚೆಯೂ ಆಗುತ್ತಿದೆ. ಇದರೊಂದಿಗೆ ಇಂಟರ್‌ನ್ಯಾಷನಲ್ ಲಾಂಗ್ವೇಜ್‌ನಲ್ಲೂ ಬಿಡುಗಡೆ ಮಾಡುವ ಪ್ರಯತ್ನ ನಡೆಯುತ್ತಿದೆ. ಅದಕ್ಕೆಲ್ಲ ಏನೇನು ತಯಾರಿ ಬೇಕು ಎಂಬುದು ನಡೆಯುತ್ತಿದೆ. ಎಲ್ಲಾ ಅಂದುಕೊಂಡಂತೆ ನಡೆದರೆ, ಡಿಸೆಂಬರ್‌ 25 ಕ್ಕೆ ‘ಪೊಗರು’ ಬಿಡುಗಡೆಯಾಗಲಿದೆ’ ಎನ್ನುತ್ತಾರೆ ನಂದಕಿಶೋರ್‌.
ವಿಜಯ್‌ ಭರಮಸಾಗರ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಈಗಾಗಲೇ ಸಾಫ್ಟ್ವೇರ್‌ ಕ್ಷೇತ್ರದಿಂದ ಸಾಕಷ್ಟು ಮಂದಿ ಚಿತ್ರರಂಗಕ್ಕೆ ಎಂಟ್ರಿಯಾಗಿದ್ದಾರೆ. ಆ ಸಾಲಿಗೆ "ಧೀರನ್‌' ಚಿತ್ರದ ನಿರ್ದೇಶಕ ಕಮ್‌ ನಾಯಕ ಕೂಡ ಹೊಸದಾಗಿ...

  • ಸಾಮಾನ್ಯವಾಗಿ ಸ್ಟಾರ್‌ ನಟರ ಚಿತ್ರಗಳು ಅಂದಾಕ್ಷಣ, ಅಲ್ಲಿ ಸ್ಟಾರ್‌ ನಟಿಯರು ಕಾಣಿಸಿ­ಕೊಳ್ಳುವುದು ಸಹಜ. ಕನ್ನಡ ಮಾತ್ರವಲ್ಲ, ಪರಭಾಷೆ ಚಿತ್ರರಂಗದಲ್ಲೂ ಇದು...

  • ಟ್ರೇಲರ್‌, ಹಾಡು, ಸ್ಟಿಲ್‌ಗ‌ಳಿಂದ ದೊಡ್ಡ ಮಟ್ಟದಲ್ಲಿ ನಿರೀಕ್ಷೆ ಹುಟ್ಟಿಸಿದ "ಪೈಲ್ವಾನ್‌' ಚಿತ್ರ ಸೆ.12ರಂದು ತೆರೆಕಂಡಿದೆ. "ಹೆಬ್ಬುಲಿ' ಚಿತ್ರದ ನಂತರ ಕೃಷ್ಣ...

  • "ಗಿರಿಗಿಟ್‌' ಎಂಬ ತುಳು ಸಿನಿಮಾವೊಂದು ಬಿಡುಗಡೆಯಾಗಿರುವ ಬಗ್ಗೆ ನಿಮಗೆ ಗೊತ್ತಿರಬಹುದು. ಆಗಸ್ಟ್‌ 23 ರಂದು ತೆರೆಕಂಡಿದ್ದ ಈ ಚಿತ್ರ ಈಗ ಚಿತ್ರತಂಡ ಮೊಗದಲ್ಲಿ...

  • "ಇದು ನನ್ನ ಆಕಸ್ಮಿಕ ಎಂಟ್ರಿ. ಈ ಅವಕಾಶ, ಎನರ್ಜಿ ಎಲ್ಲವೂ ನನ್ನ ಅಣ್ಣನಿಂದಲೇ ಬಂದಿದೆ. ಈ ಎಲ್ಲಾ ಕ್ರೆಡಿಟ್‌ ನನ್ನ ಅಣ್ಣನಿಗೇ ಸಲ್ಲಬೇಕು ...' - ಹೀಗೆ ಹೇಳಿದ್ದು ಯುವ...

ಹೊಸ ಸೇರ್ಪಡೆ

  • ಪ್ರಿಸ್ಕೂಲ್‌ ನಡೆಸುವ ಗೆಳತಿ, ಎರಡು ದಿನ ರಜೆಯಲ್ಲಿ ಮಕ್ಕಳನ್ನು ನೋಡಿಕೊಳ್ಳಲು ಆಗದೆ ಒದ್ದಾಡ್ತೀರ. ನಾವು ವಾರಪೂರ್ತಿ ಅವರನ್ನು ನೋಡಿಕೊಳ್ತೀವಲ್ಲ, ನಮ್ಮ...

  • ಬೆಂಗಳೂರು: ಸಂಚಾರ ನಿಯಮ ಉಲ್ಲಂಘನೆಗೆ ವಿಧಿಸಿರುವ ಭಾರೀ ದಂಡ ಪ್ರಮಾಣವನ್ನು ತಗ್ಗಿಸಲು ರಾಜ್ಯ ಸರಕಾರ ಮುಂದಾಗಿದ್ದರೂ ಕಾಯ್ದೆಯಲ್ಲಿ ನಾಲ್ಕೆ „ದು ಪ್ರಕರಣಗಳನ್ನು...

  • ಹೊಸದಿಲ್ಲಿ: ಕರ್ನಾಟಕದ 17 ಅನರ್ಹ ಶಾಸಕರ ಅರ್ಜಿ ವಿಚಾರಣೆ ಮತ್ತೆ ಮುಂದೂಡಿಕೆಯಾಗಿದೆ. ಸುಪ್ರೀಂ ಕೋರ್ಟ್‌ನ ನ್ಯಾಯಪೀಠದಲ್ಲಿದ್ದ, ಕರ್ನಾಟಕ ಮೂಲದ ನ್ಯಾ| ಮೋಹನ ಎಂ....

  • ಚಾಂಗ್‌ಝು (ಚೀನ): ಭಾರತದ ಮಿಕ್ಸೆಡ್‌ ಡಬಲ್ಸ್‌ ತಾರೆಯರಾದ ಸಾತ್ವಿಕ್‌ಸಾಯಿರಾಜ್‌ ರಾಂಕಿರೆಡ್ಡಿ ಮತ್ತು ಅಶ್ವಿ‌ನಿ ಪೊನ್ನಪ್ಪ ಅವರು ಚೀನ ಓಪನ್‌ ಬ್ಯಾಡ್ಮಿಂಟನ್‌...

  • ನವದೆಹಲಿ: ಏರ್‌ಸೆಲ್‌- ಮ್ಯಾಕ್ಸಿಸ್‌ ಡೀಲ್‌ಗೆ ಸಂಬಂಧಿಸಿದ ಎಲ್ಲಾ ಪ್ರಕರಣಗಳು ಹಾಗೂ 2ಜಿ ತರಂಗಾಂತರ ಹಂಚಿಕೆಗೆ ಸಂಬಂಧಿಸಿದ ಎಲ್ಲ ಕೇಸುಗಳನ್ನೂ ನ್ಯಾಯಾಧೀಶ...