ಸಿನಿಮಾ ಬಾರದೆ ಅಭಿಮಾನಿಗಳು ಬೈತಿದ್ದಾರೆ…

Team Udayavani, Dec 21, 2018, 6:00 AM IST

ದರ್ಶನ್‌ ಮಾತಿಗೆ ಸಿಗೋದು ಅಪರೂಪ. ಮಾತಿಗೆ ಸಿಕ್ಕರೆ ತಮಗೆ ಅನಿಸಿದ್ದನ್ನು ನೇರವಾಗಿ ಹಾಗೂ ಮುಕ್ತವಾಗಿ ಹೇಳುವ ಗುಣ ಅವರದು. ದರ್ಶನ್‌ ಕಾರು ಅಪಘಾತವಾಗಿ ಮನೆಯಲ್ಲಿದ್ದ ಸಮಯ, ಅಂಬರೀಶ್‌ ನೆನಪು, “ಕುರುಕ್ಷೇತ್ರ’ ಬಿಡುಗಡೆ ತಡ ಹಾಗೂ “ಯಜಮಾನ’ ಚಿತ್ರಗಳ ಬಗ್ಗೆ “ಉದಯವಾಣಿ’ಯೊಂದಿಗೆ ಮುಕ್ತವಾಗಿ ಮಾತನಾಡಿದ್ದಾರೆ … 

” ಇನ್ಮೆಲೆ ಎಲ್ಲಾದ್ರೂ ಹೋದಾಗ ರಾತ್ರಿ ತುಂಬಾ ತಡವಾದ್ರೆ ಅಲ್ಲೇ ಇದ್ದು ಬೆಳಗ್ಗೆ ಎದ್ದು ಬರೋಣ ಎಂಬ ತೀರ್ಮಾನಕ್ಕೆ ಬಂದಿದ್ದೇನೆ …’

– ದರ್ಶನ್‌ ಹೀಗೆ ಹೇಳುತ್ತಾ ಒಂದು ಸ್ಮೈಲ್ ಕೊಟ್ಟರು. ಕಾರು ಅಪಘಾತದಲ್ಲಿ ಅವರ ಕೈಗಾದ ಗಾಯ ಮಾಸಿ, ಫಿಟ್‌ ಅಂಡ್‌ ಫೈನ್‌ ಆಗಿ ಶೂಟಿಂಗ್‌ನಲ್ಲಿ ತೊಡಗಿಕೊಂಡಿರುವ ದರ್ಶನ್‌ ಹೀಗೆ ಹೇಳಲು ಕಾರಣ, ಅವರು ಅನುಭವಿಸಿದ ನೋವಲ್ಲ, ಭಯವಲ್ಲ. ಬದಲಾಗಿ ತನ್ನನ್ನು ನಂಬಿಕೊಂಡಿರು ನಿರ್ಮಾಪಕರ ಬಗೆಗಿನ ಕಾಳಜಿ. “ನನ್ನ ಹಿಂದೆ ಒಂದಷ್ಟು ನಿರ್ಮಾಪಕರಿದ್ದಾರೆ. ಅವರು ಸಿನಿಮಾವನ್ನು ನಂಬಿಕೊಂಡು ಬಂಡವಾಳ ಹಾಕುವವರು. ನನಗೆ ಏನಾದರೂ ತೊಂದರೆಯಾದರೆ ಅವರಿಗೆ ನಷ್ಟವಾಗುತ್ತದೆ. ಹಾಗಾಗಿ, ಇನ್ಮೆàಲೆ ಎಲ್ಲೇ ಹೋದ್ರು ರಾತ್ರಿ ಅಲ್ಲೇ ಇದ್ದು ಬೆಳಗ್ಗೆ ಬರಲು ನಿರ್ಧರಿಸಿದ್ದೇನೆ. ಒಂದು ವಿಚಾರವನ್ನು ನಾನು ಹೇಳಲೇಬೇಕು, ನನಗೆ ಅಪಘಾತವಾಗಿದ್ದಾಗ ಯಾವ ನಿರ್ಮಾಪಕರು ಕೂಡಾ “ಲಾಸ್‌ ಆಗುತ್ತೆ, ಲೇಟ್‌ ಆಗುತ್ತೆ’ ಅಂದಿಲ್ಲ. ಎಲ್ಲರೂ, “ದರ್ಶನ್‌ ನೀವು ರೆಸ್ಟ್‌ ತಗೊಂಡು, ಆರಾಮವಾಗಿ ಬನ್ನಿ’ ಎಂದು ಪ್ರೀತಿಯಿಂದ ಹೇಳಿದರು. ಚಿತ್ರರಂಗದ ಮಂದಿ ಕೂಡಾ ಮೈಸೂರಿಗೆ ಧಾವಿಸಿದರು. ಕೊನೆಗೆ ನಾನೇ, “ಇಲ್ಲಿಗೆ ಬರಬೇಡಿ, ನಾನೇ ಬೆಂಗಳೂರಿಗೆ ಬರುತ್ತೇನೆ’ ಎಂದೆ’ ಎನ್ನುತ್ತಾ ನಿರ್ಮಾಪಕರು ತೋರಿದ ಪ್ರೀತಿಯ ಬಗ್ಗೆ ಹೇಳುತ್ತಾರೆ ದರ್ಶನ್‌.

ಸದಾ ಬಿಝಿಯಾಗಿ ಸುತ್ತಾಡಿಕೊಂಡಿದ್ದ ದರ್ಶನ್‌ ಅಪಘಾತವಾದ ನಂತರ ಸ್ವಲ್ಪ ದಿನ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಾ ಜೊತೆಗೆ ದೇವಸ್ಥಾನಕ್ಕೆ ಭೇಟಿಕೊಡುತ್ತಿದ್ದರು. ಈ ಬಗ್ಗೆಯೂ ದರ್ಶನ್‌ ಮಾತನಾಡಿದ್ದಾರೆ. “ನಾನು ಮನೆಯಲ್ಲಿ ಇದ್ದಿದ್ದೆ ಕಮ್ಮಿ. ಹೀಗಿರುವಾಗ ಎಷ್ಟು ದಿನಾಂತ ನಾನು ನಾಲ್ಕು ಗೋಡೆ ನೋಡಿಕೊಂಡು ಕೂರೋದು. ಹಾಗಾಗಿ, ದೇವಸ್ಥಾನ ಸುತ್ತಾಡಿಕೊಂಡು ಬರೋಣ ಎಂದು ಹೊರಟೆ. ನಾನು ರೆಸ್ಟ್‌ ಮಾಡಿದ್ದು ಕೇವಲ ಒಂದು ವಾರ ಅಷ್ಟೇ. ಮಿಕ್ಕಂತೆ ತೋಟ ರೆಡಿಮಾಡಿಸಿದೆ. ಸಿನಿಮಾದಲ್ಲಿ ಬಿಝಿಯಾಗಿ ತೋಟ ಕಡೆ ಗಮನ ಕೊಟ್ಟಿರಲಿಲ್ಲ. ಈ ಟೈಮಲ್ಲಿ ಏನೇನೂ ಮೈನಸ್‌ ಇತ್ತೋ ಅವೆಲ್ಲವನ್ನು ಪ್ಲಸ್‌ ಮಾಡಿಕೊಂಡೆ’ ಎನ್ನುತ್ತಾರೆ ದರ್ಶನ್‌.

ಅಪ್ಪನ ಸ್ಥಾನದಲ್ಲಿ ನೋಡುತ್ತಿದ್ದೆ …
ಅಂಬರೀಶ್‌ ಹಾಗೂ ದರ್ಶನ್‌ ತುಂಬಾ ಆತ್ಮೀಯರು. ಅಂಬರೀಶ್‌ ಅವರ ಮಾತುಗಳನ್ನು ಚಾಚೂತಪ್ಪದೇ ದರ್ಶನ್‌ ಪಾಲಿಸುತ್ತಿದ್ದರು ಕೂಡಾ. ಅದರಂತೆ ಅಂಬರೀಶ್‌ ಕೂಡಾ ದರ್ಶನ್‌ರನ್ನು ಮಗನಂತೆ ಪ್ರೀತಿಸುತ್ತಿದ್ದರು. ತನಗೆ ಬೆನ್ನೆಲುಬಾಗಿದ್ದ ಪ್ರೀತಿಯ ಅಂಬರೀಶ್‌ ಇಲ್ಲ ಎಂಬುದನ್ನು ದರ್ಶನ್‌ಗೆ ಅರಗಿಸಿಕೊಳ್ಳಲಾಗುತ್ತಿಲ್ಲ. “ನನ್ನ ಬೆನ್ನ ಹಿಂದೆ ದೊಡ್ಡ ಶಕ್ತಿಯಾಗಿ ನಿಂತಿದ್ದವರು ಅವರು. ಆ ಶಕ್ತಿಯನ್ನು ಕಳೆದುಕೊಂಡಿದ್ದೇನೆ. ಅಪ್ಪ ಇಲ್ಲ ಅಂತ ಫೀಲ್‌ ಅನಿಸ್ತಾ ಇರಲಿಲ್ಲ. ಏಕೆಂದರೆ ಅಂಬರೀಶ್‌ ಅವರು ಆ ಸ್ಥಾನದಲ್ಲಿ ನಿಂತು ಗೈಡ್‌ ಮಾಡ್ತಾ ಇದ್ದರು. “ನೋಡ್‌ ಮಗನೇ ಇಲ್ಲಿ ಎಡವುತ್ತಿದ್ದೀಯಾ, ಇಲ್ಲಿ ಚೆನ್ನಾಗಿ ಮಾಡ್ತಿದ್ದೀಯಾ’ ಎಂದು ಬೆನ್ನು ತಟ್ಟಿದ್ದಾರೆ. ತಪ್ಪು ಮಾಡಿದಾಗ ಬುದ್ಧಿ ಹೇಳಿದ್ದಾರೆ. ಆ ತರಹ ಇನ್ನು ನನಗೆ ಯಾರೂ ಇಲ್ಲ. ಒಂಥರಾ ನಾನು ಖಾಲಿಯಾಗಿ ಹೋದೆ. ಲಂಗು-ಲಗಾಮು ಇಲ್ಲದ ಕುದುರೆ ತರಹ’ ಎನ್ನುತ್ತಿದ್ದಂತೆ ದರ್ಶನ್‌ ಕಣ್ಣಾಲಿಗಳು ತುಂಬಿಕೊಂಡವು.

ಅಂಬರೀಶ್‌ ಅವರು ತೀರಿಕೊಂಡಾಗ ದರ್ಶನ್‌ ದೂರದ ಸ್ವೀಡನ್‌ನಲ್ಲಿ ಚಿತ್ರೀಕರಣದಲ್ಲಿದ್ದರು. ಮೈಸೂರಿನಿಂದ ಅವರ ಗೆಳೆಯ ರಾಕಿ ಮಾಡಿದ ಕರೆ ಎತ್ತಿಕೊಂಡಂತೆ ದರ್ಶನ್‌ಗೆ ಶಾಕ್‌ ಆಗಿದೆ. ಸುದ್ದಿ ಕೇಳಿ ನಿಂತಲ್ಲೇ ಕುಸಿದಂತಾಗಿದೆ. “ಅಲ್ಲಿನ ಸಮಯ ಮೂರುವರೆ ಗಂಟೆಗೆ ನನಗೆ ಗೊತ್ತಾಯಿತು. ಮೈಸೂರಿನ ನನ್ನ ಗೆಳೆಯ ರಾಕಿ 8 ಬಾರಿ ಫೋನ್‌ ಮಾಡಿದ್ದ. ಸಾಮಾನ್ಯವಾಗಿ ಆತ ಒಮ್ಮೆ ರಿಂಗ್‌ ಮಾಡಿ ಕಟ್‌ ಮಾಡುತ್ತಿದ್ದ. ಆದರೆ ಅಂದು ಎಂಟು ಬಾರಿ ಕರೆ ಮಾಡಿದ್ದ. ಇವನ್ಯಾಕೆ ಇಷ್ಟೊಂದು ಬಾರಿ ಕಾಲ್‌ ಕೊಡ್ತಾನೆ ಎಂದು ಭಯ ಆಯಿತು. ನನ್ನ ಅಮ್ಮನಿಗೂ ಹುಷಾರಿರಲಿಲ್ಲ. ಫೋನ್‌ ಎತ್ತಿಕೊಂಡ್ರೆ, “ಅಂಬರೀಶ್‌ ತೀರಿಕೊಂಡರು’ ಎಂದ. ನಾನು ನಂಬಲೇ ಇಲ್ಲ. “ಏನ್‌ ಮಾತಾಡ್ತಾ ಇದ್ದೀಯಾ’ ಎಂದು ಅವನಿಗೆ ಬೈದೆ. ಆತ, “ಯಾವುದಕ್ಕೂ ಒಮ್ಮೆ ಕನ್‌ಫ‌ರ್ಮ್ ಮಾಡಿಕೋ’ ಎಂದು ಫೋನ್‌ ಇಟ್ಟ. ನಾನು ಸಂದೇಶ್‌ಗೆ ಫೋನ್‌ ಮಾಡಿ ಕೇಳಿದರೆ ಆತ “ಹೌದು, ಈಗಷ್ಟೇ …’ ಎಂದ. ನನಗೆ ಕೈ ಕಾಲು ಆಡದಂತಾಯಿತು. “ಹೇಗಾದರೂ ಮಾಡಿ ಹೋಗಲೇಬೇಕು, ಯಾವುದಾದರೂ ಫ್ಲೈಟ್‌ ವ್ಯವಸ್ಥೆ ಮಾಡಿ’ಎಂದೆ. ಕೊನೆಗೊಂದು ಟಿಕೆಟ್‌ ಸಿಕು¤. ನಾವು ಇದ್ದಿದ್ದು ಸ್ವೀಡನ್‌ನ ಮ್ಯಾಲ್ಮೋದಲ್ಲಿ. ಅಲ್ಲಿಂದ ಡೆನ್ಮಾರ್ಕ್‌ನ ಕೋಪನ್‌ಗೆ ಬಂದು ಫ್ಲೈಟ್‌ ಹಿಡಿಯಬೇಕಿತ್ತು. ಆ ಫ್ಲೈಟ್‌ ಕೋಪನ್‌ನಿಂದ ಜೂರಿಕ್‌ ಅಲ್ಲಿಂದ ಮ್ಯೂನಿಕ್‌, ಮ್ಯೂನಿಕ್‌ನಿಂದ ದೋಹಾ, ದೋಹಾ ಟು ಡೆಲ್ಲಿ, ಅಲ್ಲಿಂದ ಬೆಂಗಳೂರು … ಹೀಗೆ ಸುತ್ತಿಕೊಂಡು ಬರುತ್ತಿತ್ತು. ಹೇಗಾದ್ರೂ ಪರವಾಗಿಲ್ಲ, ಹೋಗಲು ನಿರ್ಧರಿಸಿದೆ. ಅದರಲ್ಲಿ ಬರುತ್ತಿದ್ದರೆ ಕಾರ್ಯ ಎಲ್ಲ ಮುಗಿದಿರುತ್ತಿತ್ತು. ಅಷ್ಟೊತ್ತಿಗೆ ನಮ್ಮ ಶಕ್ತಿ ಬಂದು, “ಒಂದು ಡೈರೆಕ್ಟ್ ಫ್ಲೈಟ್‌ ಟಿಕೆಟ್‌ ಇದೆ’ ಎಂದ. ಆ ಫ್ಲೈಟ್‌ ಡೆನ್ಮಾಕ್‌ನಿಂದ ದುಬೈ, ದುಬೈನಿಂದ ನೇರ ಬೆಂಗಳೂರು. ಕೊನೆಗೆ ಅದರಲ್ಲಿ ಬಂದೆ. ಹನ್ನೊಂದುವರೆಗೆ ಏರ್‌ಫೋರ್ಟ್‌ನಲ್ಲಿ ಇರಬೇಕಿತ್ತು. ಬೆಳಗ್ಗೆ ಬೇಗನೇ ಸ್ನಾನ, ಬ್ರಶ್‌ ಯಾವುದೂ ಮಾಡದೇ ಒಂದು ಗಾಡಿ ಮಾಡಿಕೊಂಡು ಏರ್‌ಫೋರ್ಟ್‌ಗೆ ಬಂದೆ’ ಎಂದು ಅಂದು ಸ್ವೀಡನ್‌ನಿಂದ ಬಂದಿದ್ದನ್ನು ಹೇಳಿದರು ದರ್ಶನ್‌. 

ಕುರುಕ್ಷೇತ್ರಕ್ಕಾಗಿ ಎಲ್ಲಾ ಸಿನಿಮಾನಾ ಮುಂದಾಕಿದೆ, ಆದರೆ  
ಸದ್ಯ ದರ್ಶನ್‌ ಎಲ್ಲೇ ಹೋದರೂ ಎದುರಾಗುವ ಪ್ರಶ್ನೆ ಎಂದರೆ “ಕುರುಕ್ಷೇತ್ರ’ ಬಿಡುಗಡೆ ಯಾವಾಗ ಎನ್ನುವುದು. ಇದೇ ಪ್ರಶ್ನೆಯನ್ನು ದರ್ಶನ್‌ ಮುಂದಿಟ್ಟರೆ, “ನಿರ್ಮಾಪಕ ಮುನಿರತ್ನ ಅವರಲ್ಲಿ ಕೇಳಿ’ ಎಂಬ ಉತ್ತರ ಅವರಿಂದ ಬರುತ್ತದೆ. “ಕುರುಕ್ಷೇತ್ರ ಬಗ್ಗೆ ಏನೇ ಕೇಳ್ಳೋದಿದ್ದರೂ ಮುನಿರತ್ನ ಅವರಲ್ಲಿ ಕೇಳಿ. ಅಲ್ಲಿ ಏನು ನಡೀತಾ ಇದೆ ಎಂಬುದು ನನಗೆ ಗೊತ್ತಿಲ್ಲ.  ನಾನು ಎಲ್ಲಾ ಸಿನಿಮಾಗಳನ್ನು ಮುಂದೆ ಹಾಕಿ “ಕುರುಕ್ಷೇತ್ರ’ಕ್ಕೆ ಡೇಟ್‌ ಕೊಟ್ಟೆ. ಅದಕ್ಕೆ ಕಾರಣ ಅವರಿದ್ದ ಸ್ಪೀಡ್‌. ಅದರಂತೆ ಶೂಟಿಂಗ್‌ ಕೂಡಾ ಆಯಿತು. ಮಾರ್ಚ್‌ನಲ್ಲಿ ಡಬ್ಬಿಂಗ್‌ ಕೂಡಾ ಮುಗಿಸಿದ್ದೇನೆ. ನನ್ನ ಸಿನಿಮಾ ಬಾರದೇ ಒಂದೂವರೆ ವರ್ಷ ಆಯಿತು. “ತಾರಕ್‌’ ನಂತರ ಯಾವ ಸಿನಿಮಾನೂ ಬಂದಿಲ್ಲ. “ಕುರುಕ್ಷೇತ್ರ’ ಮಧ್ಯೆ ಒಂದು ಕಮರ್ಷಿಯಲ್‌ ಸಿನಿಮಾ ಮಾಡಿದ್ದರೆ ಗ್ಯಾಪ್‌ ಮೆಂಟೇನ್‌ ಆಗಿರೋದು. “ಸಂಗೊಳ್ಳಿ ರಾಯಣ್ಣ’ ಮಾಡುವಾಗ ಗ್ಯಾಪಲ್ಲಿ “ಚಿಂಗಾರಿ’ನೂ ಮಾಡುತ್ತಿದ್ದೆ. ಈಗ ಅಭಿಮಾನಿಗಳು ಬೈಯೋಕೆ ಶುರು ಮಾಡಿದ್ದಾರೆ. “ಮನೆಯಲ್ಲಿ ಕೂತ್ಕೊಂಡು ಆಟ ಆಡ್ತಾ ಇದ್ದೀಯಾ. ನೋಡಿದ್ರೆ ಸಿನಿಮಾ ಮಾಡ್ತಿದ್ದೀನಿ ಅಂತೀಯಾ, ಆದ್ರೆ ಯಾವ ಸಿನಿಮಾನೂ ರಿಲೀಸ್‌ ಆಗ್ತಾ ಇಲ್ಲ’ ಎಂದು. ನಾನು ಏನ್‌ ಉತ್ತರ ಕೊಡ್ಲಿ ಹೇಳಿ’ ಎನ್ನುವ ದರ್ಶನ್‌, “ಕುರುಕ್ಷೇತ್ರ’ದಿಂದ ಒಂದು ಪಾಠ ಕಲಿತಿದ್ದಾರಂತೆ. ಅದು ಒಂದೇ ಸಿನಿಮಾಕ್ಕೆ ಡೇಟ್‌ ಕೊಟ್ಟುಬಿಡಬಾರದೆಂದು. ಹಾಗಾಗಿ, ಈ ಬಾರಿ “ಗಂಡುಗಲಿ ಮದಕರಿ ನಾಯಕ’ ಜೊತೆ ತರುಣ್‌ ಸುಧೀರ್‌ ಚಿತ್ರದಲ್ಲೂ ನಟಿಸಲಿದ್ದಾರೆ. 20 ದಿನ “ಮದಕರಿ’ಗಾದರೆ 10 ದಿನ ಕಮರ್ಷಿಯಲ್‌ ಸಿನಿಮಾಕ್ಕೆ. ಸದ್ಯ ಅವರ “ಯಜಮಾನ’ ರೆಡಿಯಾಗಿದೆ. ಆ ಚಿತ್ರ “ಕುರುಕ್ಷೇತ್ರ’ ಮುಂಚೆ ತೆರೆಕಾಣುವ ಸಾಧ್ಯತೆಯೂ ಇದೆ. “ಯಜಮಾನ ರೆಡಿಯಾಗಿದೆ. ಅವರನ್ನು ನಾನು, “ಕಾಯಿರಿ, ರಿಲೀಸ್‌ ಮಾಡಬೇಡಿ’ ಎನ್ನೋಕೆ ಆಗಲ್ಲ. ಅವರು ಕೂಡಾ ಕಾಸು ಹಾಕಿದ್ದಾರೆ. ಅದಕ್ಕಿಂತ ಹೆಚ್ಚಾಗಿ ಎರಡು ಸಿನಿಮಾದಲ್ಲಿ ನಾನಿದ್ದರೂ ಪಾತ್ರಗಳು ಬೇರೆ ಬೇರೆಯಾಗಿವೆಯಲ್ಲ’ ಎನ್ನುವುದು ದರ್ಶನ್‌ ಮಾತು. 

ಶೈಲಜಾನಾಗ್‌ ಅವರಿಗೊಂದು ಹ್ಯಾಟ್ಸಾಫ್
ದರ್ಶನ್‌ “ಯಜಮಾನ’ ಚಿತ್ರದ ನಿರ್ಮಾಪಕಿ ಶೈಲಜಾ ನಾಗ್‌ ಅವರ ಬಗ್ಗೆ ಖುಷಿಯಿಂದ ಮಾತನಾಡುತ್ತಾರೆ. ಅದಕ್ಕೆ ಕಾರಣ ಶೈಲಜಾ ನಾಗ್‌ ಅವರು ಸಿನಿಮಾವನ್ನು ನಿರ್ಮಿಸಿದ ರೀತಿ ಹಾಗೂ ಅವರ ಪ್ರೊಫೆಶನಲೀಸಂ. “ಇಲ್ಲಿವರೆಗೆ 50 ಸಿನಿಮಾ ಮಾಡಿದ್ದೇನೆ. “ಯಜಮಾನ’ ನನ್ನ 51ನೇ ಸಿನಿಮಾ. ಇಷ್ಟು ಸಿನಿಮಾಗಳಲ್ಲಿ ಸುಮಾರು 30 ಜನ ನಿರ್ಮಾಪಕರ ಜೊತೆ ಕೆಲಸ ಮಾಡಿದ್ದೇನೆ. ನನ್ನ ಕೆರಿಯರ್‌ನಲ್ಲಿ ಮಾತನಾಡಿದ ಪೇಮೆಂಟ್‌ನ ಕ್ಲಿಯರ್‌ ಮಾಡಿ, ಅದರ ಮೇಲೆ 10 ಲಕ್ಷ ಅಡ್ವಾನ್ಸ್‌ ಕೊಟ್ಟು ಮುಂದಿನ ಡೇಟ್ಸ್‌ ಕೇಳಿದ ನಿರ್ಮಾಪಕರೆಂದರೆ ಅದು ಶೈಲಜಾ ನಾಗ್‌. ಆ ತರಹದ ಒಂದು ಕಮಿಟ್‌ಮೆಂಟ್‌ ಅವರಿಗಿದೆ. ಪಕ್ಕಾ ಪ್ಲ್ರಾನಿಂಗ್‌ನಿಂದ ಸಿನಿಮಾ ಮಾಡಿದ್ದಾರೆ. ಅದೇ ಕಾರಣಕ್ಕಾಗಿ ಅವರನ್ನು ನಾನು ಆಗಾಗ, “ನೀವು ಕನ್ನಡದ ಏಕ್ತಾ ಕಪೂರ್‌’ ಎಂದು ಕರೆಯುತ್ತೇನೆ. ಸ್ವೀಡನ್‌ನಿಂದ ನಾನು ಬರೋದಿಕ್ಕೆ ಅವರು ವ್ಯವಸ್ಥೆ ಮಾಡಿದ ರೀತಿಯನ್ನು ಮೆಚ್ಚಲೇಬೇಕು’ ಎನ್ನುತ್ತಾರೆ ದರ್ಶನ್‌.

ರವಿಪ್ರಕಾಶ್‌ ರೈ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • "ಪೈಲ್ವಾನ್‌ ಪಾರ್ಟ್‌ -2 ಮಾಡಿದರೆ ನಾನು ಕೋಚ್‌ ಆಗಿರುತ್ತೇನೆ ಅಥವಾ ಹೊರಗೆ ನಿಂತು ಕಮಾನ್‌ ಎಂದು ಚಿಯರ್‌ ಮಾಡುವ ಪಾತ್ರ ಮಾಡುತ್ತೇನೆ ...' - ಹೀಗೆ ಹೇಳಿ ಸುದೀಪ್‌...

  • ಸ್ವಚ್ಛ ಭಾರತ ಅಭಿಯಾನ ಕುರಿತಂತೆ ಈಗಾಗಲೇ ಹಲವು ಚಿತ್ರಗಳು ಬಂದಿವೆ. ಬರುತ್ತಲೂ ಇವೆ. ಆ ಸಾಲಿಗೆ ಈಗ ಮಕ್ಕಳ ಸಿನಿಮಾ ಕೂಡ ಸೇರ್ಪಡೆಯಾಗಿದೆ. ಹೌದು, ಮಕ್ಕಳೇ ಸೇರಿ...

  • "ನಾನು ಹೆಮ್ಮೆಯಿಂದ ಹೇಳ್ತೀನಿ ಇದು ಹಬ್ಬದೂಟ ಇದ್ದಂತೆ ... ' - ಹೀಗೆ ಹೇಳಿದ್ದು, ನಟ ಚಿರಂಜೀವಿ ಸರ್ಜಾ. ಅವರು ಹಾಗೆ ಹೇಳಿಕೊಂಡಿದ್ದು, ಇಂದು ತೆರೆಗೆ ಬರುತ್ತಿರುವ...

  • ಅವರು ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟು 25 ವರ್ಷಗಳೇ ಗತಿಸಿವೆ. ಈ ಎರಡೂವರೆ ದಶಕದಲ್ಲಿ ಸುಮಾರು ಮೂರು ಸಾವಿರಕ್ಕೂ ಹೆಚ್ಚು ಗೀತೆಗಳನ್ನು ರಚಿಸಿದ್ದಾರೆ. ನಿರ್ದೇಶನ,...

  • ಅಭಿನಯ ಭಾರ್ಗವ, ಸಾಹಸ ಸಿಂಹ ವಿಷ್ಣುವರ್ಧನ್‌ ಅವರ ಹೆಸರು, ವ್ಯಕ್ತಿತ್ವವನ್ನು ಆದರ್ಶವಾಗಿ ಇಟ್ಟುಕೊಂಡು ಕನ್ನಡದಲ್ಲಿ ಈಗಾಗಲೇ ಹಲವು ಚಿತ್ರಗಳು ತೆರೆಗೆ ಬಂದಿವೆ....

ಹೊಸ ಸೇರ್ಪಡೆ