ಬದಲಾವಣೆಯ ಬಯಕೆ

Team Udayavani, Mar 8, 2019, 12:30 AM IST

ಈ ಚಿತ್ರರಂಗವೇ ಹಾಗೆ. ಏನೋ ಆಗಬೇಕು ಅಂತ ಬಂದವರು ಇನ್ನೇನೋ ಆಗ್ತಾರೆ. ಪಾಲಿಗೆ ಬಂದ ಅವಕಾಶವನ್ನು ಚೆನ್ನಾಗಿ ಬಳಸಿಕೊಳ್ಳುತ್ತಲೇ, ಹೊಸ ಬದಲಾವಣೆ ಕಂಡುಕೊಳ್ಳುವ ಕನಸು ಕಾಣುತ್ತಾರೆ. ಸದ್ಯದ ಮಟ್ಟಿಗೆ ಕನ್ನಡ ಚಿತ್ರರಂಗ ಬದಲಾಗಿರುವುದೇನೋ ನಿಜ. ಆದರೆ, ಈ ಚಿತ್ರರಂಗದಲ್ಲಿ ಇರೋರು ಬದಲಾಗಿದ್ದಾರಾ ಎಂಬ ಪ್ರಶ್ನೆಗೆ ಸರಿ ಉತ್ತರ ಸಿಗದಿದ್ದರೂ, ಈಗಷ್ಟೇ ಗುರುತಿಸಿಕೊಳ್ಳುತ್ತಿರುವ ಮಂದಿಯಂತೂ ಹೊಸ ಬದಲಾವಣೆ ಬಯಸುತ್ತಿದ್ದಾರೆ ಎಂಬುದು ಸ್ಪಷ್ಟ. ವಿಷಯವಿಷ್ಟೇ, ಈಗ ಬೆರಳೆಣಿಕೆಯಷ್ಟು ಹೀರೋಗಳು ನಟನೆ ಜೊತೆಗೆ ನಿರ್ದೇಶನಕ್ಕೂ ಜೈ ಅಂದಿದ್ದಾರೆ. ಸದ್ದಿಲ್ಲದೇ ನಿರ್ದೇಶನಕ್ಕಿಳಿದಿರುವ ಅಂತಹ ಯಂಗ್‌ ಹೀರೋಗಳ ಬಗ್ಗೆ ಒಂದು ರೌಂಡಪ್‌.

ನಾಯಕ ನಟರು ನಿರ್ದೇಶನಕ್ಕೆ ಇಳಿದಿರು­ವುದು ಹೊಸದೇನಲ್ಲ. ಹಾಗೊಮ್ಮೆ ಗಮನಿಸಿದರೆ ಶಂಕರ್‌ನಾಗ್‌ ಹೀರೋ ಆಗಿಯೇ ಸುದ್ದಿಯಾದವರು. ನಂತರದ ದಿನಗಳಲ್ಲಿ ಅವರು ನಿರ್ದೇಶಕರಾಗಿಯೂ ಗಟ್ಟಿನೆಲೆ ಕಂಡವರು. ಇನ್ನು, ಕ್ರೇಜಿಸ್ಟಾರ್‌ ರವಿಚಂದ್ರನ್‌ ಕೂಡ ಸಕ್ಸಸ್‌ ಹೀರೋ ಎನಿಸಿಕೊಂಡು, ಅದರೊಂದಿಗೆ ಅವರು ನಿರ್ದೇಶಕರಾಗಿಯೂ ಕೊಟ್ಟ ಚಿತ್ರಗಳ ಯಶಸ್ಸು ಕಣ್ಣ ಮುಂದೆಯೇ ಇದೆ. ಹಾಗೆ ನೋಡಿದರೆ, ನಾಯಕ ನಟರ ನಿರ್ದೇಶನದ ಪರ್ವ ಶುರುವಾಗಿದ್ದು ನಿನ್ನೆ ಮೊನ್ನೆಯದ್ದಲ್ಲ. ಅದಕ್ಕೆ ದಶಕಗಳ ಇತಿಹಾಸವೇ ಇದೆ. ಹಿಂದಿನ ಇತಿಹಾಸವನ್ನೊಮ್ಮೆ ತಿರುವಿ ಹಾಕಿದರೆ, ಆ ಪಟ್ಟಿಯಲ್ಲಿ ನಟ ಉಪೇಂದ್ರ ಕೂಡ ನಟರಾಗಿ, ನಿರ್ದೇಶಕರಾಗಿ ಹೊಸ ಅಲೆ ಎಬ್ಬಿಸಿದ್ದು ಸುಳ್ಳಲ್ಲ. ಅದೊಂದು ಬದಲಾವಣೆ ಸಮಯದಲ್ಲೇ ಒಂದಷ್ಟು ನಾಯಕ ನಟರು ನಿರ್ದೇಶನದ ಕಡೆ ವಾಲಿದ್ದೂ ಹೌದು. ರಮೇಶ್‌ ಅರವಿಂದ್‌ ಅವರು ಸಹ ನಟನೆ ಜೊತೆಗೆ ಹೊಸ ಬದಲಾವಣೆ ಬಯಸಿದ್ದೇ ತಡ, ಅವರೂ ನಿರ್ದೇಶನಕ್ಕೆ ಅಣಿಯಾದರು. ನಟನೆಯಲ್ಲಿ ಕಂಡಂತಹ ಯಶಸ್ಸನ್ನು ನಿರ್ದೇಶನದಲ್ಲೂ ಕಂಡಿ­ದ್ದುಂಟು. ಆ ಬಳಿಕ ಗಾಂಧಿನಗರಕ್ಕೆ ಕಾಲಿಟ್ಟ ಅದೆಷ್ಟೋ ಮಂದಿ  ಹೀರೋ ಆಗಲು ಬಂದು ನಿರ್ದೇಶಕರಾದರು, ಇನ್ನು ಕೆಲವರು ನಿರ್ದೇಶನ ಬಯಸಿ ಬಂದು ಹೀರೋಗಳಾದರು. ಒಂದು ಗ್ಯಾಪ್‌ ಬಳಿಕ ಸ್ಟಾರ್‌ ನಟರು ಕೂಡ ನಿರ್ದೇಶನದತ್ತ ಮುಖ ಮಾಡಿದ್ದು ವಿಶೇಷ. ಸುದೀಪ್‌ ಕೂಡ ತನ್ನೊಳಗಿನ ನಿರ್ದೇಶಕನನ್ನು ಪರಿಚಯಿಸಿ ನಂಬಿಕೆ ಹುಟ್ಟಿಸಿದರು. ಅವರು ಆ್ಯಕ್ಷನ್‌-ಕಟ್‌ ಹೇಳಿ ದೊಡ್ಡ ಯಶಸ್ಸು ಕಂಡಿದ್ದು ಕಣ್ಣೆದುರಲ್ಲೇ ಇದೆ. ನಟನೆಯಲ್ಲಿ ಬಿಜಿಯಾಗಿ, ಹಿಟ್‌ ಸಿನಿಮಾ ಕೊಡುತ್ತಿದ್ದರೂ, ಅವರಲ್ಲಿರುವ ನಿರ್ದೇಶನದ ತುಡಿತ ಇನ್ನೂ ಮಾಸಿಲ್ಲ. ಸಮಯ ಸಿಕ್ಕರೆ ನಿರ್ದೇಶನದ ಮತ್ತೂಂದು ಇನ್ನಿಂಗ್ಸ್‌ ಶುರುಮಾಡುವ ಯೋಚನೆಯಲ್ಲಿದ್ದಾರೆ ಸುದೀಪ್‌. ಇನ್ನು, ನಟ ಗಣೇಶ್‌ ಕೂಡ “ಕೂಲ್‌’ ಆಗಿಯೇ ಒಂದು ಚಿತ್ರ ನಿರ್ದೇಶಿಸಿ, ತಾನೂ ನಿರ್ದೇಶನ ಮಾಡಬಲ್ಲೆ ಎಂಬುದನ್ನು ತೋರಿಸಿಕೊಟ್ಟರು. ಅತ್ತ ಜಗ್ಗೇಶ್‌ ಕೂಡ “ಮೇಲುಕೋಟೆ’ ಮೇಲೆ ನಿಂತು ಆ್ಯಕ್ಷನ್‌ ಹೇಳಿಬಿಟ್ಟರು. ವಿಜಯರಾಘವೇಂದ್ರ ಕೂಡ ನಿರ್ದೇಶನದಲ್ಲಿ ತಮ್ಮ “ಕಿಸ್ಮತ್‌’ ಪರೀಕ್ಷಿಸಿದರು. ರಕ್ಷಿತ್‌ ಶೆಟ್ಟಿ ಕೂಡಾ ಹೊಸ ಪ್ರಯೋಗದ ಮೂಲಕ ನಿರ್ದೇಶನದಲ್ಲೂ ಸೈ ಎನಿಸಿಕೊಂಡರು. ಆಮೇಲೆ 
ಈ ನಟರ ಹಾದಿಯಲ್ಲೇ ಈಗ ಹೊಸ ತಲೆಮಾರಿನ ನಟರು ಕೂಡ ನಿರ್ದೇಶನದತ್ತ ಜಿಗಿದಿದ್ದಾರೆ ಅನ್ನೋದೇ ಹೊಸ ಸುದ್ದಿ.

ಕನಸಿನ ಬೆನ್ನತ್ತಿ…
ಒಂದು ಸಿನಿಮಾ ಶುರುವಾಯಿತೆಂದರೆ, ಅಲ್ಲಿ ಪ್ರತಿಯೊಬ್ಬನಿಗೂ ನಿರ್ದೇಶನದ ಅನುಭವ ಇದ್ದೇ ಇರುತ್ತೆ. ಆದರೆ, ಅವಕಾಶ ಇರಲ್ಲ ಅಷ್ಟೇ. ಒಂದು ಸಿನಿಮಾದಲ್ಲಿ ಹತ್ತಾರು ವಿಭಾಗಗಳಿವೆ. ಎಲ್ಲಾ ವಿಭಾಗದ ತಂತ್ರಜ್ಞರಿಗೂ ನಿರ್ದೇಶನ ಮಾಡಬೇಕೆಂಬ ಬಯಕೆ ಸಹಜ. ಅದರಲ್ಲೂ ತೆರೆ ಮೇಲೆ ರಾರಾಜಿಸುವ ನಾಯಕ ನಟರಿಗೇ ಆ ಬಯಕೆ ಹೆಚ್ಚು ಅಂದರೆ ತಪ್ಪಿಲ್ಲ. ಕ್ಯಾಮೆರಾ ಮುಂದೆ ಹೀರೋಗಳಾಗಿ ಕೆಲಸ ಮಾಡುತ್ತಲೇ, ನಿರ್ದೇಶಕ ಮತ್ತು ಛಾಯಾಗ್ರಾಹಕನ ಕೆಲಸವನ್ನು ಸೂಕ್ಷ್ಮವಾಗಿ ಗಮನಿಸುತ್ತಲೇ ತಮ್ಮೊಳಗೆ ನಿರ್ದೇಶನದ ಆಸೆಯನ್ನು ಬಚ್ಚಿಟ್ಟುಕೊಂಡವರೆಷ್ಟೋ ನಟರಿದ್ದಾರೆ. ಆದರೆ, ಅಂಥದ್ದೊಂದು ನಿರ್ದೇಶನಕ್ಕೆ ವೇದಿಕೆ ಸಿಗುತ್ತಿದ್ದಂತೆಯೇ ಹಿಂದೆ ಮುಂದೆ ನೋಡದೆ, ನಿರ್ದೇಶನಕ್ಕಿಳಿದು ವರ್ಷಗಳ ಆಸೆಯನ್ನು ಈಡೇರಿಸಿಕೊಳ್ಳುತ್ತಿದ್ದಾರೆ.

ಹೊಸ ತೆಲಮಾರಿನ ನಟರಿಗೆ ನಿರ್ದೇಶನ ಹೊಸದಾದರೂ, ನಿರ್ದೇಶನ ಕೆಲಸವನ್ನು ಹತ್ತಿರದಿಂದ ನೋಡಿದವರು. ಅದನ್ನು ನೋಡಿ ಕಲಿತೇ ಇದೀಗ ಆ್ಯಕ್ಷನ್‌-ಕಟ್‌ ಹೇಳಿಕೊಂಡು ಕ್ಯಾಮೆರಾ ಮುಂದೆ ತಾವೇ ನಿಲ್ಲುತ್ತಿದ್ದಾರೆ. ಇದುವರೆಗೆ ನಟರಾಗಿ, ಗಾಯಕರಾಗಿಯೂ ಗುರುತಿಸಿಕೊಂಡಿದ್ದ ನಟ ರಾಕೇಶ್‌ ಅಡಿಗ, ಸದ್ದಿಲ್ಲದೆಯೇ ಒಂದು ಚಿತ್ರ ನಿರ್ದೇಶನ ಮಾಡಿದ್ದಾರೆ. “ನೈಟ್‌ ಔಟ್‌’ ಎಂಬ ಚಿತ್ರವನ್ನು ನಿರ್ದೇಶಿಸಿರುವ ರಾಕೇಶ್‌ ಅಡಿಗ, ಆ ಚಿತ್ರದಲ್ಲಿ ಅವರು ಹೀರೋ ಆಗಿಲ್ಲ. ಬದಲಾಗಿ ಬೇರೆ ಪ್ರತಿಭೆಯನ್ನು ಹೀರೋ ಮಾಡಿದ್ದಾರೆ. ಇದೊಂದು ರಾತ್ರಿಯಲ್ಲಿ ನಡೆಯುವ ಕಥೆ. ಇಬ್ಬರು ಗೆಳೆಯರ ನಡುವಿನ ಸ್ಟೋರಿ ಇಲ್ಲಿದೆ. ಕೇವಲ 6 ಗಂಟೆಯಲ್ಲಿ ಏನೇನೆಲ್ಲಾ ನಡೆಯುತ್ತೋ, ಅದೇ ಚಿತ್ರದ ಜೀವಾಳ. ಸದ್ಯಕ್ಕೆ ಚಿತ್ರ ಬಿಡುಗಡೆಗೆ ತಯಾರಿ ನಡೆಸುತ್ತಿದ್ದಾರೆ ರಾಕೇಶ್‌ ಅಡಿಗ. “ಅಯೋಗ್ಯ’ ಮೂಲಕ ಒಂದಷ್ಟು ಸುದ್ದಿಯಾದ ನೀನಾಸಂ ಸತೀಶ್‌ ಕೂಡ ನಿರ್ದೇಶಕನಾಗ್ತಿàನಿ ಅಂತ ಘೋಷಣೆ ಮಾಡಿಬಿಟ್ಟರು. ಅವರ ಚೊಚ್ಚಲ ಚಿತ್ರಕ್ಕೆ “ಮೈ ನೇಮ್‌ ಇಸ್‌ ಸಿದ್ಧೇಗೌಡ’ ಎಂದು ಹೆಸರಿಟ್ಟಿದ್ದಾರೆ. ಶೀರ್ಷಿಕೆಗೆ “ದೇರ್‌ ಇಸ್‌ ನೋ ಟುಮಾರೋ’ ಎಂಬ ಅಡಿಬರಹವೂ ಇದೆ. ಅಷ್ಟಕ್ಕೂ ಸತೀಶ್‌ಗೆ ನಿರ್ದೇಶನ ಮಾಡುವ ಆಸೆ ಬಂದದ್ದು ಅವರನ್ನು ತುಂಬಾ ಆವರಿಸಿಕೊಂಡ ಒಂದು ಕಥೆ. ಸದ್ಯಕ್ಕೆ ನಿರ್ದೇಶಕರಾಗುತ್ತಿದ್ದು, ಇಲ್ಲಿ ನಟನೆ ಜೊತೆಗೆ ನಿರ್ಮಾಪಕರೂ ಅವರೇ ಅನ್ನೋದು ವಿಶೇಷ.

ಅನೀಶ್‌ ತೇಜೇಶ್ವರ್‌ ಕೂಡ ಎಲ್ಲೂ ಸುದ್ದಿ ಮಾಡದೆ ನಿರ್ದೇಶನ ಮಾಡುತ್ತಿದ್ದಾರೆ. ಈಗಾಗಲೇ ಬಹುತೇಕ ಚಿತ್ರೀಕರಣವನ್ನೂ ಮುಗಿಸಿದ್ದಾರೆ. ಸದಾ ಹೊಸದೇನಾದರೂ ಮಾಡಬೇಕು ಎಂಬ ಉತ್ಸಾಹದಲ್ಲಿದ್ದ ಅನೀಶ್‌ ತೇಜೇಶ್ವರ್‌, ನಟನೆ ಜೊತೆಗೆ ನಿರ್ಮಾಣವನ್ನೂ ಮಾಡಿಬಿಟ್ಟರು. ಅಲ್ಲೊಂದಿಷ್ಟು ಅನುಭವ ಪಡೆದದ್ದೇ ತಡ, ಇದೀಗ ನಿರ್ದೇಶನಕ್ಕೂ ಕಾಲಿಟ್ಟರು. ಅವರ ಮೊದಲ ನಿರ್ದೇಶನದ ಚಿತ್ರಕ್ಕೆ “ರಾಮಾರ್ಜುನ’ ಎಂಬ ಹೆಸರಿದೆ. ಅದೇನೋ ಗೊತ್ತಿಲ್ಲ, ಅನೀಶ್‌ ತೇಜೇಶ್ವರ್‌ಗೆ ನಿರ್ದೇಶನ ಮಾಡುವ ಆಸೆ ತುಂಬ ಸಡನ್‌ ಆಗಿ ಹೊಳೆದದ್ದಂತೆ. ಅವರೂ ಒಂದು ಹೊಸ ಬದಲಾವಣೆಗಾಗಿ ಕಾಯುತ್ತಿದ್ದರಿಂದ ನಿರ್ದೇಶನಕ್ಕೆ ಬರಲು ಕಾರಣವಾಗಿದೆ. ಅನೀಶ್‌ ಇಲ್ಲಿ ನಿರ್ದೇಶನದ ಜೊತೆಗೆ ಹೀರೋ ಆಗಿಯೂ ಇದ್ದಾರೆ.

ಈಗಾಗಲೇ ಹಲವು ಚಿತ್ರಗಳಲ್ಲಿ ಸಹ ನಿರ್ದೇಶಕರಾಗಿ ಕೆಲಸ ಮಾಡಿದ ಅನುಭವ ಹೊಂದಿರುವ ಯುವ ನಟ ಮದರಂಗಿ ಕೃಷ್ಣ, ಹೀರೋ ಆಗಿಯೂ ತಕ್ಕಮಟ್ಟಿಗೆ ಗುರುತಿಸಿಕೊಂಡಿದ್ದು ಹೌದು. ಸುಮಾರು ಒಂಭತ್ತು ಚಿತ್ರಗಳಲ್ಲಿ ಹೀರೋ ಆಗಿರುವ ಮದರಂಗಿ ಕೃಷ್ಣ ಅವರೊಳಗೆ ನಿರ್ದೇಶಕನೊಬ್ಬ ಜಾಗೃತನಾಗಿದ್ದ. ನಿರ್ದೇಶನ ವಿಭಾಗದಲ್ಲಿದ್ದ ಅವರಿಗೆ ಒಳ್ಳೆಯ ಕಥೆ ಸಿಕ್ಕಾಗ, ನಿರ್ದೇಶನ ಮಾಡಬೇಕೆಂಬ ಆಸೆ ಒಳಗೇ ಇತ್ತು. ಅದು “ಲವ್‌ ಮಾಕ್ಟೆಲ್‌’ ಚಿತ್ರದ ಮೂಲಕ ಈಡೇರಿದೆ. ಇಲ್ಲಿ ನಿರ್ದೇಶನ, ನಟನೆ ಮತ್ತು ನಿರ್ಮಾಣ ಕೂಡ ಅವರದೇ. ಈ ನಟರ ಸಾಲಿಗೆ ರಘುಮುಖರ್ಜಿ ಕೂಡ ಸೇರಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ರಘುಮುಖರ್ಜಿ ಹಲವು ಚಿತ್ರಗಳಲ್ಲಿ ನಾಯಕರಾದವರು. ಅವರಿಗೂ ನಿರ್ದೇಶನದ ಮೇಲೆ ಆಸೆ ಹೆಚ್ಚಾಗಿದೆ. ಆ ಕಾರಣಕ್ಕೆ ಅವರು “ಆರ್‌ ಎಕ್ಸ್‌ 100′ ತೆಲುಗು ಚಿತ್ರದ ರಿಮೇಕ್‌ ಮಾಡಲಿದ್ದಾರೆ ಎಂಬ ಸುದ್ದಿ ಜೋರಾಗಿದೆ. ಆದರೆ, ಅದು ಎಷ್ಟರಮಟ್ಟಿಗೆ ನಿಜ ಎಂಬುದನ್ನು ಇನ್ನಷ್ಟೇ ಕಾದು ನೋಡಬೇಕು.

ಅದೇನೆ ಇರಲಿ, ಯುವ ನಟರು ಹೊಸ ಬದಲಾವಣೆ ಬಯಸಿದ್ದಾರೆ. ಹಾಗಂತ ಅದು ತಪ್ಪಲ್ಲ. ಹಿಂದಿನ ಹೀರೋಗಳು ನಿರ್ದೇಶಿಸಿದ ಚಿತ್ರಗಳ ಯಶಸ್ಸು, ಈಗಿನ ಯುವ ನಟರಿಗೆ ಸ್ಫೂರ್ತಿ. ಆ ಕಾರಣಕ್ಕೆ ಒಂದಷ್ಟು ನಟರು ಆ್ಯಕ್ಷನ್‌-ಕಟ್‌ ಹೇಳಲು ಮುಂದಾಗಿದ್ದಾರೆ. ಇಲ್ಲಿ ಇನ್ನೊಂದು ಮಾತು ಹೇಳಲೇಬೇಕು. ಸಿನಿಮಾ ರಂಗದಲ್ಲಿ ಎಲ್ಲರಿಗೂ ಜಾಗವಿದೆ. ಯಾರು ಯಾವ ವಿಭಾಗದಲ್ಲಿ ಬೇಕಾದರೂ ಕೆಲಸ ಮಾಡಬಹುದು. ತಮ್ಮೊಳಗಿನ ಪ್ರತಿಭೆ ಅನಾವರಣಗೊಳಿಸಲು ಚಿತ್ರರಂಗ ಒಳ್ಳೆಯ ವೇದಿಕೆಯೂ ಹೌದು. ಕನ್ನಡ ಚಿತ್ರರಂಗ ಈಗಂತೂ ಶೈನ್‌ ಆಗಿದೆ. ಹೊಸತನದ ಚಿತ್ರಗಳೇ ಸದ್ದು ಮಾಡುತ್ತಿವೆ. ಹೊಸಬರೇ ಸುದ್ದಿಯಾಗುತ್ತಿದ್ದಾರೆ. ಹಾಗಾಗಿ, ನಮ್ಮದೂ ಒಂದು ಪಾಲು ಇರಬೇಕು ಎಂಬ ಧಾವಂತ ಈಗಿನ ನಟರಲ್ಲೂ ಇದೆ.

ಒಂದಂತೂ ನಿಜ, ನಿರ್ದೇಶಕನಾದವನಿಗೆ ಮೊದಲು ಕಥೆ ಗೊತ್ತಿರಬೇಕು. ಆ ಕಥೆಯಲ್ಲಿ ಹಿಡಿತ ಇರಬೇಕು. ಕಥೆಗಾರ ಎನಿಸಿಕೊಂಡನಿಗೆ ಮಾತ್ರ ನಿರ್ದೇಶನದ ಪಟ್ಟು ಸುಲಭ. ಅದರಲ್ಲೂ ಕಥೆಯೊಳಗಿನ ಹೂರಣ ಎಷ್ಟಿದೆ ಅನ್ನುವುದನ್ನು ಅರಿತಿದ್ದರೆ ಮಾತ್ರ ನಿರ್ದೇಶನ ಕಷ್ಟವೇನಲ್ಲ. ಇದರೊಂದಿಗೆ ಶ್ರದ್ಧೆ, ಭಕ್ತಿ ಕೂಡ ಪಸ್‌-ಮೈನಸ್‌ಗೆ ಕಾರಣವಾಗಬಲ್ಲದು. ಏನೇ ಇದ್ದರೂ, ಈಗ ಯುವ ನಟರು ಹೊಸ ಬದಲಾವಣೆ ಬಯಸಿದ್ದಾರೆ. ಆ ಮೂಲಕ ಕನ್ನಡ ಚಿತ್ರರಂಗ ಇನ್ನಷ್ಟು ಬದಲಾವಣೆ ಏನಾ­ದರೂ ಆಗುತ್ತಾ ಕಾದು ನೋಡಬೇಕು?

ವಿಜಯ್‌ ಭರಮಸಾಗರ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • "ಮೊದಲು ಕನ್ನಡ ಸಿನಿಮಾಗಳನ್ನು ನೋಡಿ, ಆ ನಂತರ ಬೇರೆ ಭಾಷೆಯಲ್ಲಿ ಆ ತರಹ ಮಾಡ್ತಾರೆ, ಈ ತರಹ ಮಾಡ್ತಾರೆ ಅಂತ ಮಾತನಾಡಿ ....' -ಕೆಲವು ದಿನಗಳ ಹಿಂದೆಯಷ್ಟೇ ನಟ ದರ್ಶನ್‌...

  • ಕಳೆದ ಎರಡು ವಾರಗಳಿಂದ ಸೂಕ್ಷ್ಮವಾಗಿ ಗಮನಿಸಿದರೆ, ಐದಾರು ಚಿತ್ರಗಳಿಗೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಅಂತಹ ಚಿತ್ರಗಳು ನಿಧಾನಗತಿಯಲ್ಲೇ ನೋಡುಗರನ್ನು ಆಕರ್ಷಿಸುತ್ತವೆ....

  • ರಮೇಶ್‌ ಅರವಿಂದ್‌ ನಾಯಕಾಗಿರುವ "ಶಿವಾಜಿ ಸುರತ್ಕಲ್‌' ಚಿತ್ರದ ಟ್ರೇಲರ್‌ ಇತ್ತೀಚೆಗೆ ಬಿಡುಗಡೆಯಾಯಿತು. ಟ್ರೇಲರ್‌ ಬಿಡುಗಡೆಯ ಜೊತೆಗೆ ಚಿತ್ರತಂಡ ವಿಶಿಷ್ಟವಾಗಿ...

  • ಈ ಬಾರಿಯ ಮಹಾಶಿವರಾತ್ರಿ ಹಬ್ಬಕ್ಕೆ ಸಾಲು ಸಾಲು ಚಿತ್ರಗಳು ಪ್ರೇಕ್ಷಕರ ಮುಂದೆ ಬರುವ ತಯಾರಿಯಲ್ಲಿವೆ. ಈ ಚಿತ್ರಗಳ ಸಾಲಿನಲ್ಲಿ ಬಹುತೇಕ ಹೊಸಬರ "ಶಿವ' ಎನ್ನುವ ಚಿತ್ರವೂ...

  • ಯಾವುದಾದರೂ ವ್ಯಕ್ತಿಯ ದೈಹಿಕ ಎತ್ತರವನ್ನು ಅಳೆಯುವಾಗ ಅಡಿ-ಅಂಗುಲ ಪದಗಳನ್ನು ಬಳಕೆ ಮಾಡುವುದನ್ನು ನೋಡಿದ್ದೇವೆ. ಈಗ ಅಡಿ-ಅಂಗುಲ ಪದಗಳನ್ನೇ ಇಟ್ಟುಕೊಂಡು ಇಲ್ಲೊಂದು...

ಹೊಸ ಸೇರ್ಪಡೆ