ಪ್ರಶಸ್ತಿ, ಪ್ರಶಂಸೆಯ ಗಂಟು ಮೂಟೆ

Team Udayavani, Oct 4, 2019, 5:16 AM IST

ಸಾಮಾನ್ಯವಾಗಿ ಸ್ಟಾರ್‌ ನಟ-ನಟಿಯರು, ನಿರ್ದೇಶಕರ ಚಿತ್ರಗಳು, ಬಿಗ್‌ ಬಜೆಟ್‌ ಚಿತ್ರಗಳು ರಿಲೀಸ್‌ಗೂ ಮುನ್ನ ಒಂದಷ್ಟು ಸದ್ದು ಮಾಡುವುದು ಗಾಂಧಿನಗರದಲ್ಲಿ ಸರ್ವೇ ಸಾಮಾನ್ಯ. ಆದ್ರೆ ಯಾವುದೇ ಸ್ಟಾರ್ ಇಲ್ಲದೆ, ಹೆಸರಾಂತ ನಿರ್ದೇಶಕರು – ತಂತ್ರಜ್ಞರಿಲ್ಲದೆ, ಬಿಗ್‌ ಬಜೆಟ್‌ ಇಲ್ಲದೆ, ಚಿತ್ರವೊಂದು ಸದ್ದು ಮಾಡುವುದು, ಗುರುತಿಸಿಕೊಳ್ಳುವುದು ಅಂದ್ರೆ ಅದು ಗಾಂಧಿನಗರದ ಮಟ್ಟಿಗೆ ತೀರಾ ಅಪರೂಪ ಅಂತಾನೇ ಹೇಳಬಹುದು. ಈಗ ನಾವು ಹೇಳಲು ಹೊರಟಿರುವುದು ಕೂಡ ಅಂಥದ್ದೇ ಒಂದು ಅಪರೂಪದ ಚಿತ್ರದ ಬಗ್ಗೆ. ಅಂದಹಾಗೆ, ಆ ಚಿತ್ರದ ಹೆಸರು “ಗಂಟುಮೂಟೆ’.

ಬಹುತೇಕ ಹೊಸ ಪ್ರತಿಭೆಗಳು ಸೇರಿ ನಿರ್ಮಿಸಿರುವ “ಗಂಟುಮೂಟೆ’ ಚಿತ್ರ ಸದ್ಯ ಬಿಡುಗಡೆಗೂ ಮುನ್ನವೇ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಒಂದಷ್ಟು ಸದ್ದು ಮಾಡುತ್ತಿದೆ. ಜನರ ಮುಂದೆ ಬರುವ ಮುನ್ನವೇ, ನ್ಯೂಯಾರ್ಕ್‌ ಇಂಡಿಯನ್‌ ಚಿತ್ರೋತ್ಸವದಲ್ಲಿ “ಬೆಸ್ಟ್‌ ಸ್ಕ್ರೀನ್‌ ಪ್ಲೇ ‘ ಅವಾರ್ಡ್‌ ಪಡೆದ ಮೊದಲ ಕನ್ನಡ ಚಿತ್ರ ಎಂಬ ಹೆಗ್ಗಳಿಕೆ ಪಡೆದುಕೊಂಡಿರುವ “ಗಂಟುಮೂಟೆ’, ಈಗಾಗಲೇ ಕೆನಡಾ, ಆಸ್ಟ್ರೇಲಿಯಾ, ಯುಎಸ್‌ಎ, ಇಟಲಿ ಮೊದಲಾದ ದೇಶಗಳಲ್ಲಿ ನಡೆದ ಹಲವು ಪ್ರತಿಷ್ಟಿತ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡು ಪ್ರೇಕ್ಷಕರು ಮತ್ತು ವಿಮರ್ಶಕರ ಮೆಚ್ಚುಗೆ ಪಡೆದುಕೊಂಡಿದೆ. ಇದೀಗ ಚಿತ್ರ ಕರ್ನಾಟಕದಲ್ಲಿ ಬಿಡುಗಡೆಗೆ ಸಿದ್ಧಗೊಂಡಿದ್ದು, ಇದೇ ತಿಂಗಳಾಂತ್ಯಕ್ಕೆ “ಗಂಟುಮೂಟೆ’ ಕನ್ನಡ ಪ್ರೇಕ್ಷಕರ ಮುಂದೆ ಬರುತ್ತಿದೆ.

ಚಿತ್ರದ ಬಿಡುಗಡೆಗೂ ಮುನ್ನ ತಮ್ಮ”ಗಂಟುಮೂಟೆ ‘ಕುರಿತು ಮಾತನಾಡಲು ಚಿತ್ರತಂಡ ಮಾಧ್ಯಮ ಎದುರು ಬಂದಿತ್ತು. ಮೊದಲು ಚಿತ್ರದ ಬಗ್ಗೆ ಮಾತಿಗಿಳಿದ ನಿರ್ದೇಶಕಿ ರೂಪಾರಾವ್‌. “ಇದು 90ರ ದಶಕದ ಕಥೆ ಇರುವ ಚಿತ್ರ. ಸಿನಿಮಾದ ಹಾಗೆಯೇ ಜೀವನ ಅಂತ ಭ್ರಮಿಸುವ ಹರೆಯದ ಹುಡುಗ – ಹುಡುಗಿಯ ಕಥೆ ಇಲ್ಲಿದೆ. ಕೊನೆಗೆ ಸಿನಿಮಾ ಬೇರೆ, ಬದುಕೇ ಬೇರೆ ಎಂದು ಅರ್ಥ ಮಾಡಿಕೊಳ್ಳುವ ಹೊತ್ತಿಗೆ ಸಾಕಷ್ಟು ಏನೆಲ್ಲ ನಡೆದು ಹೋಗುತ್ತದೆ ಅನ್ನೋದೆ ಚಿತ್ರದ ಹೂರಣ. ಇಲ್ಲಿ ಹೈಸ್ಕೂಲ್‌ ಲೈಫ್ ನೋಡಬಹುದು. ಹರೆಯದ ಹುಡುಗರ ತಂಟೆ-ತರಲೆ, ಸ್ಪರ್ಧೆ, ಹುಡುಗಿಯರಿಗಾಗಿ ನಡೆಯುವ ಗಲಾಟೆ, ಇವೆಲ್ಲದರ ನಡುವೆ ಕಾಡುವ ಮೊದಲ ಉತ್ಕಟ ಪ್ರೇಮ ಹೀಗೆ ಎಲ್ಲವೂ ಇದೆ. ಈಗಾಗಲೇ ಚಿತ್ರವನ್ನು ನೋಡಿದ ಚಿತ್ರರಂಗದ ಅನೇಕರು ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ. ಚಿತ್ರಕ್ಕೆ ಎಲ್ಲೆಡೆಯಿಂದ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದೆ. ಇದೇ ತಿಂಗಳಾಂತ್ಯಕ್ಕೆ ಚಿತ್ರವನ್ನು ಪ್ರೇಕ್ಷಕರ ಮುಂದೆ ತರುತ್ತಿದ್ದೇವೆ’ ಎಂದು ಚಿತ್ರದ ಬಗ್ಗೆ ವಿವರಣೆ ನೀಡಿದರು.

ಚಿತ್ರದಲ್ಲಿ ನಿಶ್ಚಿತ್‌ ಕೊರೋಡಿ ನಾಯಕನಾಗಿ ಮತ್ತು ತೇಜು ಬೆಳವಾಡಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಕೆಲಕಾಲ ನಟನೆ ತರಬೇತಿ ಪಡೆದ ನಿಶ್ಚಿತ್‌ ಕೊರೋಡಿ ಈ ಚಿತ್ರದ ಮೂಲಕ ನಾಯಕ ನಟನಾಗಿ ಚಿತ್ರರಂಗಕ್ಕೆ ಅಡಿಯಿಡುತ್ತಿದ್ದಾರೆ. ಇನ್ನು ಈ ಹಿಂದೆ “ಇದೊಳ್ಳೆ ರಾಮಾಯಣ’ ಚಿತ್ರದಲ್ಲಿ ಚಿಕ್ಕ ಪಾತ್ರ ಮಾಡಿದ್ದ ನಟಿ ತೇಜು ಬೆಳವಾಡಿ, “ಗಂಟುಮೂಟೆ’ ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಾಯಕಿಯಾಗಿ ಬೆಳ್ಳಿತೆರೆಗೆ ಪರಿಚಯವಾಗುತ್ತಿದ್ದಾರೆ. ಉಳಿದಂತೆ ಭಾರ್ಗವ್‌ ರಾಜು, ಸೂರ್ಯ ವಸಿಷ್ಠ, ಶರತ್‌ ಗೌಡ, ಶ್ರೀರಂಗ, ರಾಮ್‌ ಮಂಜುನಾಥ್‌, ಅರ್ಚನಾ ಶ್ಯಾಮ್‌, ಅನುಶ್ರೀ, ಕಶ್ಯಪ್‌, ಚಂದನಾ, ನಮಿತ್‌ ಮೊದಲಾ­ದವರು ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. “ಅಮೇಯುಕ್ತಿ ಸ್ಟುಡಿಯೋಸ್‌’ ಬ್ಯಾನರ್‌ನಲ್ಲಿ ನಿರ್ಮಾಣವಾಗಿರುವ “ಗಂಟುಮೂಟೆ’ ಚಿತ್ರಕ್ಕೆ ಸಹದೇವ್‌ ಕೇಳ್ವಾಡಿ ಛಾಯಾಗ್ರಹಣ, ಪ್ರದೀಪ್‌ ನಾಯಕ್‌ ಸಂಕಲನ, ಅಪರಾಜಿತ್‌ ಸ್ರಿಸ್‌ ಸಂಗೀತ ಸಂಯೋಜನೆಯಿದೆ. ನಿರ್ಮಾಪಕ ಯೋಗಿ ದ್ವಾರಕೀಶ್‌ “ಗಂಟುಮೂಟೆ’ ಚಿತ್ರದ ವಿತರಣೆಯ ಹೊಣೆಯನ್ನು ವಹಿಸಿಕೊಂಡಿದ್ದು, ಚಿತ್ರವನ್ನು ರಾಜ್ಯಾದ್ಯಂತ ತೆರೆಗೆ ತರುತ್ತಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

  • ಯಾವುದೇ ಚಿತ್ರರಂಗವಿರಲಿ, ಸಾಮಾನ್ಯವಾಗಿ ಸ್ಟಾರ್‌ ನಟರು ಅಲ್ಲಿನ ಹಿರಿಯ ನಿರ್ದೇಶಕರು, ಅದರಲ್ಲೂ ಸಾಕಷ್ಟು ಹಿಟ್‌ ಚಿತ್ರಗಳನ್ನು ನಿರ್ದೇಶಿಸಿ ಜನಪ್ರಿಯವಾದ...

  • ದರ್ಶನ್‌ ನಾಯಕರಾಗಿ ನಟಿಸಿರುವ "ಒಡೆಯ' ಚಿತ್ರದ ಹಾಡು, ಟ್ರೇಲರ್‌ ಈಗಾಗಲೇ ಬಿಡುಗಡೆಯಾಗಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಬಿಡುಗಡೆಯ ಹಂತದಲ್ಲಿರುವ "ಒಡೆಯ' ಬಗ್ಗೆ...

  • ಕನ್ನಡದಲ್ಲಿ ಈ ವಾರ ಮತ್ತೂಂದು "ಕಥಾ ಸಂಗಮ' ತೆರೆಗೆ ಬರುತ್ತಿದೆ. "ಕಥಾ ಸಂಗಮ' ಅಂದ್ರೆ ಕನ್ನಡ ಸಿನಿಪ್ರಿಯರಿಗೆ ಮೊದಲು ನೆನಪಿಗೆ ಬರುವ ಹೆಸರು ಚಿತ್ರಬ್ರಹ್ಮ ಪುಟ್ಟಣ್ಣ...

  • ಕನ್ನಡದಲ್ಲಿ "ಬೆಳದಿಂಗಳ ಬಾಲೆ' ಎಂದೇ ಕರೆಸಿಕೊಳ್ಳುವ ಸುಮನ್‌ ನಗರ್‌ಕರ್‌ ಹೊಸ ಇನ್ನಿಂಗ್ಸ್‌ ಶುರುಮಾಡಿ­ರುವುದು ಗೊತ್ತೇ ಇದೆ. ನಟನೆ ಜೊತೆಯಲ್ಲಿ ನಿರ್ಮಾಣಕ್ಕೂ...

  • ಅಭಿನಯ, ಬಣ್ಣದ ಲೋಕ ಅಂದ್ರೆ ಹಾಗೆ. ಅದು ಎಂಥವರನ್ನೂ ಕೂಡ ತನ್ನತ್ತ ಸೆಳೆಯುತ್ತಿದೆ. ಆದರೆ ಕೆಲವೇ ಕೆಲವರಿಗೆ ಮಾತ್ರ ಅದು ಒಲಿದು, ಕೈ ಹಿಡಿಯುತ್ತದೆ. ಪರಿಶ್ರಮ, ಅವಕಾಶ,...

ಹೊಸ ಸೇರ್ಪಡೆ