‘ಕಸ್ತೂರಿ ಮಹಲ್’; ಭಯಪಡಿಸಲು ಶಾನ್ವಿ ರೆಡಿ
Team Udayavani, May 13, 2022, 9:54 AM IST
ಈಗಾಗಲೇ ತನ್ನ ಟೈಟಲ್, ಪೋಸ್ಟರ್, ಟೀಸರ್, ಟ್ರೇಲರ್ ಮತ್ತು ಹಾಡುಗಳ ಮೂಲಕ ಸಿನಿಪ್ರಿಯರ ಗಮನ ಸೆಳೆಯಲು ಯಶಸ್ವಿಯಾಗಿರುವ “ಕಸ್ತೂರಿ ಮಹಲ್’ ಈ ವಾರ ರಾಜ್ಯಾದ್ಯಂತ ತೆರೆ ಕಾಣುತ್ತಿದೆ.
“ಕಸ್ತೂರಿ ಮಹಲ್’ ಹಿರಿಯ ನಿರ್ದೇಶಕ ದಿನೇಶ್ ಬಾಬು ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ 50ನೇ ಸಿನಿಮಾವಾಗಿದ್ದು, “ಅವನೇ ಶ್ರೀಮನ್ನಾರಾಯಣ’ ಸಿನಿಮಾದ ನಂತರ ನಟಿ ಶಾನ್ವಿ ಶ್ರೀವಾಸ್ತವ್ “ಕಸ್ತೂರಿ ಮಹಲ್’ ಚಿತ್ರದಲ್ಲಿ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಉಳಿದಂತೆ ರಂಗಾಯಣ ರಘು, ಸ್ಕಂದ ಅಶೋಕ್, ಶ್ರುತಿ ಪ್ರಕಾಶ್, ಕೆಂಪೇಗೌಡ, ನೀನಾಸಂ ಅಶ್ವತ್ ಮೊದಲಾದವರು ‘ಕಸ್ತೂರಿ ಮಹಲ್’ ಸಿನಿಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಔಟ್ ಆ್ಯಂಡ್ ಔಟ್ ಸಸ್ಪೆನ್ಸ್- ಥ್ರಿಲ್ಲರ್ ಕಥಾಹಂದರ ಹೊಂದಿರುವ “ಕಸ್ತೂರಿ ಮಹಲ್’ ಚಿತ್ರವನ್ನು “ಶ್ರೀಭವಾನಿ ಆರ್ಟ್ಸ್’ ಬ್ಯಾನರ್‌ನಲ್ಲಿ ರವೀಶ್ ಆರ್. ಸಿ ನಿರ್ಮಿಸಿದ್ದಾರೆ. ಚಿತ್ರಕ್ಕೆ ಪಿ. ಕೆ.ಹೆಚ್ ದಾಸ್ ಛಾಯಾಗ್ರಹಣವಿದೆ.
“”ಕಸ್ತೂರಿ ಮಹಲ್’ ಕಂಪ್ಲೀಟ್ ಸಸ್ಪೆನ್ಸ್-ಥ್ರಿಲ್ಲರ್ ಸಬ್ಜೆಕ್ಟ್ ಸಿನಿಮಾ. ನಾನು ಕಂಡ ಒಂದಷ್ಟು ವಿಷಯಗಳನ್ನು ಇಟ್ಟುಕೊಂಡು ಅದನ್ನು ಸಿನಿಮ್ಯಾಟಿಕ್ ಆಗಿ ಸ್ಕ್ರೀನ್ ಮೇಲೆ ಹೇಳಿದ್ದೇನೆ. ಸಸ್ಪೆನ್ಸ್-ಥ್ರಿಲ್ಲರ್ ಸಿನಿಮಾ ಅಂದ ಕೂಡಲೇ ಪ್ರೇಕ್ಷಕರು ಸ್ವಲ್ಪ ಹೆಚ್ಚಾಗಿಯೇ ನಿರೀಕ್ಷೆ ಇಟ್ಟುಕೊಂಡು ಥಿಯೇಟರ್‌ಗೆ ಬರುತ್ತಾರೆ. ಆ ನಿರೀಕ್ಷೆಯನ್ನು ನಿಜಮಾಡುವ, ಆಡಿಯನ್ಸ್‌ಗೆ ಹೊಸಥರದ ಅನುಭವ ಕೊಡುವಂಥೆ “ಕಸ್ತೂರಿ ಮಹಲ್’ ಸಿನಿಮಾವಿದೆ. ಪ್ರೇಕ್ಷಕರಿಗೆ “ಕಸ್ತೂರಿ ಮಹಲ್’ ಖಂಡಿತ ಇಷ್ಟವಾಗಲಿದೆ’ ಅನ್ನೋದು ನಿರ್ದೇಶಕ ದಿನೇಶ್ ಬಾಬು ಮಾತು.
ಇದನ್ನೂ ಓದಿ:ಐಪಿಎಲ್ 2022: ಕೂಟದಿಂದ ಹೊರಬಿದ್ದ ಡೆಲ್ಲಿ ಓಪನರ್ ಪೃಥ್ವಿ ಶಾ
ಇನ್ನು ಕಳೆದ ಕೆಲ ವಾರಗಳಿಂದ ಚಿತ್ರತಂಡದ ಜೊತೆಗೆ “ಕಸ್ತೂರಿ ಮಹಲ್’ ಪ್ರಚಾರ ಕಾರ್ಯಗಳಲ್ಲಿ ನಿರತವಾಗಿರುವ ನಿರ್ಮಾಪಕ ರವೀಶ್ ಆರ್. ಸಿ ಕೂಡ ಚಿತ್ರದ ಬಗ್ಗೆ ಸಾಕಷ್ಟು ಭರವಸೆಯ ಮಾತುಗಳನ್ನಾಡುತ್ತಾರೆ. “ಪ್ರಮೋಶನ್ಸ್ ಸಮಯದಲ್ಲಿ ಸಿನಿಮಾಕ್ಕೆ ಆಡಿಯನ್ಸ್ ಮತ್ತು ಇಂಡಸ್ಟ್ರಿ ಕಡೆಯಿಂದ ಒಳ್ಳೆಯ ರೆಸ್ಪಾನ್ಸ್ ಸಿಗುತ್ತಿದೆ. ದಿನೇಶ್ ಬಾಬು, ಶಾನ್ವಿ ಶ್ರೀವಾಸ್ತವ್, ಪಿಕೆಹೆಚ್ ದಾಸ್ ಕಾಂಬಿನೇಶನ್ ಮೇಲೆ ಎಲ್ಲರಿಗೂ ನಿರೀಕ್ಷೆ ಇದೆ. ರಾಜ್ಯಾದ್ಯಂತ ಸುಮಾರು 100ಕ್ಕೂ ಹೆಚ್ಚಿನ ಕೇಂದ್ರಗಳಲ್ಲಿ “ಕಸ್ತೂರಿ ಮಹಲ್’ ರಿಲೀಸ್ ಆಗಲಿದೆ. ಒಳ್ಳೆಯ ಥಿಯೇಟರ್ ಸೆಟಪ್ ಆಗಿದೆ. ಸಿನಿಮಾಕ್ಕೆ ಕೂಡ ಒಳ್ಳೆಯ ಓಪನಿಂಗ್ ಸಿಗಲಿದೆ’ ಎಂಬ ವಿಶ್ವಾಸ ವ್ಯಕ್ತಪಡಿಸುತ್ತಾರೆ.
ಕಲಾವಿದೆಯಾಗಿ ಹೊಸತರದ ಪಾತ್ರಗಳನ್ನು ಮಾಡಬೇಕೆಂಬ ಹಂಬಲವಿರುವ ನನಗೆ “ಕಸ್ತೂರಿ ಮಹಲ್’ ಅತ್ಯಂತ ಖುಷಿ ಕೊಟ್ಟ ಪಾತ್ರ. ನಾಲ್ಕೈದು ವರ್ಷಗಳಲ್ಲಿ ನಾನು ಮಾಡಿದ ಪಾತ್ರಗಳಿಗಿಂತ ಬೇರೆ ಥರದ ಪಾತ್ರ “ಕಸ್ತೂರಿ ಮಹಲ್’ನಲ್ಲಿದೆ. ಮಹಿಳಾ ಕೇಂದ್ರಿತ ಸಿನಿಮಾಗಳನ್ನು ಮಾಡ್ಬೇಕು ಅಂಥ ಆಸೆ, ಕನಸು “ಕಸ್ತೂರಿ ಮಹಲ್’ ಮೂಲಕ ನನಸಾಗುತ್ತಿದೆ. ನನ್ನ ಸಿನಿ ಕೆರಿಯರ್‌ನಲ್ಲಿ ಖಂಡಿತವಾಗಿಯೂ ಇದೊಂದು ವಿಭಿನ್ನ ಸಿನಿಮಾವಾಗಿ ಆಡಿಯನ್ಸ್ ಮನಸ್ಸಿನಲ್ಲಿ ಉಳಿಯುತ್ತದೆ ಎಂಬ ವಿಶ್ವಾಸವಿದೆ ಎನ್ನುತ್ತಾರೆ ನಟಿ ಶಾನ್ವಿ ಶ್ರೀವಾಸ್ತವ್.
ಜಿ.ಎಸ್.ಕಾರ್ತಿಕ ಸುಧನ್