ಹಾಡುಗಳಿಲ್ಲದ ಲವ್‌ಸ್ಟೋರಿ

ದೀಯಾ ಹಿಂದೆ 6-5=2 ನಿರ್ದೇಶಕ

Team Udayavani, Oct 11, 2019, 5:25 AM IST

“ಇದೊಂದು ರೊಮ್ಯಾಂಟಿಕ್‌ ಲವ್‌ಸ್ಟೋರಿ. ಆದರೆ, ಇಲ್ಲಿ ಹಾಡುಗಳಿಲ್ಲ …’

– ಹೀಗೆ ನಿರ್ದೇಶಕ ಅಶೋಕ್‌ ಹೇಳಿ ಸುಮ್ಮನಾದರು. ಸಾಮಾನ್ಯವಾಗಿ ಲವ್‌ಸ್ಟೋರಿ ಸಿನಿಮಾಗಳ ಪತ್ರಿಕಾಗೋಷ್ಠಿಗಳಲ್ಲಿ ಕೇಳಿಬರುವ ಒಂದು ಸಾಮಾನ್ಯ ಮಾತೆಂದರೆ ಅದು ಹಾಡುಗಳ ಬಗ್ಗೆ. “ನಮ್ಮ ಸಿನಿಮಾದಲ್ಲಿ ಮೆಲೋಡಿ ಹಾಡುಗಳಿವೆ. ಒಳ್ಳೆಯ ಲೊಕೇಶನ್‌ ಇದೆ. ಹಾಡೇ ಈ ಸಿನಿಮಾದ ಹೈಲೈಟ್‌’ ಎನ್ನುವುದು ಸಹಜ. ಆದರೆ, ನಿರ್ದೇಶಕ ಅಶೋಕ್‌ ಮಾತ್ರ ಇದಕ್ಕೆ ತದ್ವಿರುದ್ಧವಾಗಿ ಹೇಳಿದರು. ಅಂದಹಾಗೆ, ಅಶೋಕ್‌ ಅವರು ಹೇಳಿದ್ದು “ದೀಯಾ’ ಸಿನಿಮಾದ ಬಗ್ಗೆ. ಇದು ಅವರ ನಿರ್ದೇಶನದ ಹೊಸ ಸಿನಿಮಾ. ಅಷ್ಟಕ್ಕೂ ಯಾರು ಈ ಅಶೋಕ್‌ ಎಂದರೆ ನಿಮಗೆ “6-5=2′ ಚಿತ್ರದ ಬಗ್ಗೆ ಹೇಳಬೇಕು. ಒಂದು ಹಾರಾರ್‌ ಸಿನಿಮಾವಾಗಿ ಈ ಚಿತ್ರ ದೊಡ್ಡ ಮಟ್ಟದಲ್ಲಿ ಹಿಟ್‌ ಆಗಿತ್ತು. ಆ ಚಿತ್ರವನ್ನು ನಿರ್ದೇಶಿಸಿದ್ದು ಅಶೋಕ್‌. ಈಗ “ದೀಯಾ’ ಎಂಬ ರೊಮ್ಯಾಂಟಿಕ್‌ ಲವ್‌ಸ್ಟೋರಿ ಮಾಡಿದ್ದಾರೆ. ತುಂಬಾ ಸಮಯ ತಗೊಂಡು ಈ ಸಿನಿಮಾ ಮಾಡಿದ್ದು, ಚಿತ್ರ ನವೆಂಬರ್‌ 8ಕ್ಕೆ ತೆರೆಕಾಣಲಿದೆ.

ಚಿತ್ರದ ಬಗ್ಗೆ ಹೇಳುವ ಅಶೋಕ್‌, “ಚಿತ್ರದಲ್ಲಿ ಹಾಡುಗಳಿಲ್ಲ. ರೆಗ್ಯುಲರ್‌ ಪ್ಯಾಟರ್ನ್ ಬಿಟ್ಟು ಈ ಸಿನಿಮಾ ಮಾಡಿದ್ದೇನೆ. ಯುರೋಪಿಯನ್‌ ಸಿನಿಮಾ ಶೈಲಿಯಲ್ಲಿ ಸಿನಿಮಾವನ್ನು ಕಟ್ಟಿಕೊಡಲು ಪ್ರಯತ್ನಿಸಿದ್ದೇನೆ. ಸಿನಿಮಾ ಸ್ವಲ್ಪ ತಡವಾಗಿದೆ ನಿಜ. ಅದಕ್ಕೆ ಕಾರಣ ಪೂರ್ವತಯಾರಿ. ಪೂರ್ವ ತಯಾರಿ ಇಲ್ಲದೇ ಯಾವುದನ್ನೂ ಮಾಡಿಲ್ಲ. ನಮ್ಮ ನಿರ್ಮಾಪಕರು ಕೂಡಾ ವಿಶ್ವಾಸವಿಟ್ಟು, ಸಿನಿಮಾ ಯಾಕೆ ತಡವಾಗುತ್ತಿದೆ ಎಂದು ಒಂದು ದಿನವೂ ಕೇಳಲಿಲ್ಲ. ಅವರು ನಮ್ಮನ್ನು ಪ್ರಶ್ನಿಸುತ್ತಿದ್ದರೆ ಸ್ವಲ್ಪ ಬೇಗ ಮುಗಿಸುತ್ತಿದ್ದೆವು’ ಎನ್ನುತ್ತಾ ಸಿನಿಮಾ ಬಗ್ಗೆ ಹೇಳಿದರು. ಚಿತ್ರದಲ್ಲಿ ಡಬ್ಬಿಂಗ್‌ನಿಂದ ಹಿಡಿದು ಎಲ್ಲಾ ಅಂಶಗಳಲ್ಲೂ ಪರಿಪೂರ್ಣತೆಯನ್ನು ಬಯಸಿದ ಕಾರಣ, ಸಿನಿಮಾ ತಡವಾಯಿತು ಎಂದು ಮತ್ತೂಮ್ಮೆ ಹೇಳಿಕೊಂಡರು.

ನಾಯಕ ದೀಕ್ಷಿತ್‌ ತಮ್ಮ ಮೊದಲ ಸಿನಿಮಾದ ಅನುಭವವನ್ನು ಹಂಚಿಕೊಂಡರು. “ನಿರ್ದೇಶಕರು ತಮ್ಮ ಕಥೆ ಹಾಗೂ ನಿರೂಪಣೆ ಬಗ್ಗೆ ಪಕ್ಕಾ ಇದ್ದರು. ಹಾಗಾಗಿಯೇ ಯಾವ್ಯಾವ ದೃಶ್ಯಗಳಲ್ಲಿ ನಮ್ಮ ಬಾಡಿ ಲಾಂಗ್ವೇಜ್‌ ಹೇಗಿರಬೇಕೆಂಬುದು ಅವರಿಗೆ ಗೊತ್ತಿತ್ತು. ಮೊದಲ ಸಿನಿಮಾ ಒಳ್ಳೆಯ ಅನುಭವ ಕೊಟ್ಟಿದೆ’ ಎಂದರು. ಒಬ್ಬ ಮುಗ್ಧ ಹುಡುಗ ಪ್ರೀತಿಯಲ್ಲಿ ಬಿದ್ದಾಗ ಏನಾಗುತ್ತದೆ ಎಂಬ ಅಂಶದೊಂದಿಗೆ ಅವರ ಪಾತ್ರ ಸಾಗುತ್ತದೆಯಂತೆ. ನಾಯಕಿ ಖುಷಿ ಕೂಡಾ ತಮ್ಮ ಪಾತ್ರದ ಬಗ್ಗೆ ಹೇಳಿಕೊಂಡರು. ಈ ಚಿತ್ರವನ್ನು ಕೃಷ್ಣ ಚೈತನ್ಯ ನಿರ್ಮಿಸಿದ್ದಾರೆ. ಇತ್ತೀಚೆಗೆ ಚಿತ್ರದ ಟೀಸರ್‌ ಬಿಡುಗಡೆಯಾಗಿದ್ದು, ನಟ ಶ್ರೀಮುರಳಿ ಟೀಸರ್‌ ರಿಲೀಸ್‌ ಮಾಡಿ, ಚಿತ್ರತಂಡಕ್ಕೆ ಶುಭಕೋರಿದರು.


ಈ ವಿಭಾಗದಿಂದ ಇನ್ನಷ್ಟು

  • ಯಾವುದೇ ಚಿತ್ರರಂಗವಿರಲಿ, ಸಾಮಾನ್ಯವಾಗಿ ಸ್ಟಾರ್‌ ನಟರು ಅಲ್ಲಿನ ಹಿರಿಯ ನಿರ್ದೇಶಕರು, ಅದರಲ್ಲೂ ಸಾಕಷ್ಟು ಹಿಟ್‌ ಚಿತ್ರಗಳನ್ನು ನಿರ್ದೇಶಿಸಿ ಜನಪ್ರಿಯವಾದ...

  • ದರ್ಶನ್‌ ನಾಯಕರಾಗಿ ನಟಿಸಿರುವ "ಒಡೆಯ' ಚಿತ್ರದ ಹಾಡು, ಟ್ರೇಲರ್‌ ಈಗಾಗಲೇ ಬಿಡುಗಡೆಯಾಗಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಬಿಡುಗಡೆಯ ಹಂತದಲ್ಲಿರುವ "ಒಡೆಯ' ಬಗ್ಗೆ...

  • ಕನ್ನಡದಲ್ಲಿ ಈ ವಾರ ಮತ್ತೂಂದು "ಕಥಾ ಸಂಗಮ' ತೆರೆಗೆ ಬರುತ್ತಿದೆ. "ಕಥಾ ಸಂಗಮ' ಅಂದ್ರೆ ಕನ್ನಡ ಸಿನಿಪ್ರಿಯರಿಗೆ ಮೊದಲು ನೆನಪಿಗೆ ಬರುವ ಹೆಸರು ಚಿತ್ರಬ್ರಹ್ಮ ಪುಟ್ಟಣ್ಣ...

  • ಕನ್ನಡದಲ್ಲಿ "ಬೆಳದಿಂಗಳ ಬಾಲೆ' ಎಂದೇ ಕರೆಸಿಕೊಳ್ಳುವ ಸುಮನ್‌ ನಗರ್‌ಕರ್‌ ಹೊಸ ಇನ್ನಿಂಗ್ಸ್‌ ಶುರುಮಾಡಿ­ರುವುದು ಗೊತ್ತೇ ಇದೆ. ನಟನೆ ಜೊತೆಯಲ್ಲಿ ನಿರ್ಮಾಣಕ್ಕೂ...

  • ಅಭಿನಯ, ಬಣ್ಣದ ಲೋಕ ಅಂದ್ರೆ ಹಾಗೆ. ಅದು ಎಂಥವರನ್ನೂ ಕೂಡ ತನ್ನತ್ತ ಸೆಳೆಯುತ್ತಿದೆ. ಆದರೆ ಕೆಲವೇ ಕೆಲವರಿಗೆ ಮಾತ್ರ ಅದು ಒಲಿದು, ಕೈ ಹಿಡಿಯುತ್ತದೆ. ಪರಿಶ್ರಮ, ಅವಕಾಶ,...

ಹೊಸ ಸೇರ್ಪಡೆ