ಮಿಸ್‌ ಯೂ ಪಪ್ಪಾ…

ರಾಧಿಕಾ ಭಾವುಕ

Team Udayavani, Sep 20, 2019, 5:50 AM IST

ನಟಿ ರಾಧಿಕಾ ಭಾವುಕರಾಗಿದ್ದಾರೆ. ಆದಕ್ಕೆ ಕಾರಣ ಅವರ ತಂದೆ. ಸದಾ ಬೆನ್ನೆಲುಬಾಗಿ ನಿಂತಿದ್ದ ರಾಧಿಕಾ ಅವರ ತಂದೆ ದೇವರಾಜ್‌, ಕೆಲ ತಿಂಗಳ ಹಿಂದೆ ಇಹಲೋಕ ತ್ಯಜಿಸಿದ್ದಾರೆ. ಆದರೆ, ರಾಧಿಕಾ ಅವರಿಗೆ ತಂದೆಯೊಂದಿಗಿನ ಬಾಂಧವ್ಯ, ಅವರ ಜೊತೆ ಕಳೆದ ನೆನಪುಗಳು, ಅವರ ಸಿನಿಮಾ ನೋಡುವ ಆಸೆ… ಎಲ್ಲವೂ ನೆನಪಾಗುತ್ತಿದೆ. ಅಪ್ಪನನ್ನು ತುಂಬಾ ಮಿಸ್‌ ಮಾಡಿಕೊಳ್ಳುತ್ತಿದ್ದೇನೆ. ಸಿನಿಮಾದ ಚಿತ್ರೀಕರಣಕ್ಕೆ ಅವರ ಜೊತೆಯೇ ಹೋಗಿ ಬರುತ್ತಿದ್ದೆ…. ಎನ್ನುತ್ತಲೇ ನಟಿ ರಾಧಿಕಾ ಭಾವುಕರಾಗುತ್ತಲೇ ನೆನಪುಗಳಿಗೆ ಜಾರಿದ್ದಾರೆ…..

“ಅಪ್ಪನಿಗೆ “ಭೈರಾದೇವಿ’ ಹಾಗೂ “ದಮಯಂತಿ’ ಸಿನಿಮಾಗಳ ಮೇಲೆ ತುಂಬಾ ಆಸೆ ಇತ್ತು. ಆ ಸಿನಿಮಾಗಳನ್ನು ನೋಡಬೇಕು ಎನ್ನುತ್ತಿದ್ದರು. ಆದರೆ, ಅದು ಆಗಲೇ ಇಲ್ಲ…’
– ನಟಿ ರಾಧಿಕಾ ಹೀಗೆ ಹೇಳಿ ಕೊಂಚ ಭಾವುಕರಾದರು. ತಂದೆಯ ಜೊತೆಗಿನ ಅವರ ನೆನಪುಗಳು ಬಿಚ್ಚಿಕೊಳ್ಳುತ್ತಾ ಹೋಯಿತು. ರಾಧಿಕಾ ಅವರ ತಂದೆ ದೇವರಾಜ್‌ ಅವರು ಕೆಲ ತಿಂಗಳ ಹಿಂದೆ ನಿಧನರಾಗಿದ್ದಾರೆ. ತಂದೆಯನ್ನು ಕಳೆದುಕೊಂಡ ನೋವಿನಿಂದ ಈಗಷ್ಟೇ ರಾಧಿಕಾ ಹೊರಬರಲು ಪ್ರಯತ್ನಿಸುತ್ತಿದ್ದಾರೆ. ತಮ್ಮ ಜೀವನದಲ್ಲಿ ಬೆನ್ನೆಲುಬಾಗಿದ್ದ, ಸಿನಿಮಾಗಳನ್ನು ನೋಡಿ ಪ್ರೋತ್ಸಾಹಿಸುತ್ತಿದ್ದ, ತನ್ನ ಮುದ್ದಿನ ಮಗಳಿಗೆ ಐಸ್‌ಕ್ರೀಂ ಕೊಡಿಸುತ್ತಿದ್ದ ತಂದೆ ಇಲ್ಲದ ನೋವು ರಾಧಿಕಾ ಅವರನ್ನು ಕಾಡುತ್ತಿದೆ.

“ಅಪ್ಪನನ್ನು ತುಂಬಾ ಮಿಸ್‌ ಮಾಡಿಕೊಳ್ಳುತ್ತಿದ್ದೇನೆ. ಸಿನಿಮಾದ ಚಿತ್ರೀಕರಣಕ್ಕೆ ಅವರ ಜೊತೆಯೇ ಹೋಗಿ ಬರುತ್ತಿದ್ದೆ. ಒಂದು ವೇಳೆ ಅವರು ಬರಲು ಆಗದೇ ಇದ್ದರೂ, ಆ ದಿನ ಏನಾಯಿತು ಎಂಬ ಬಗ್ಗೆ ಕೇಳುತ್ತಿದ್ದರು. ಕೆಲವೊಮ್ಮೆ ಮೊಬೈಲ್‌ನಲ್ಲಿದ್ದ ದೃಶ್ಯಗಳನ್ನು ಕೂಡಾ ತೋರಿಸುತ್ತಿದ್ದೆ. ಅವರಿಗೆ ನನ್ನ “ಭೈರಾದೇವಿ’ ಹಾಗೂ “ದಮಯಂತಿ’ ಚಿತ್ರಗಳನ್ನು ನೋಡಬೇಕೆಂಬ ಆಸೆ ತುಂಬಾ ಇತ್ತು. ಅದಕ್ಕೆ ಕಾರಣ ಆ ಸಿನಿಮಾದ ಜಾನರ್‌. ಎರಡೂ ಸಿನಿಮಾಗಳು ಬೇರೆ ಜಾನರ್‌ ಜೊತೆಗೆ ಭಿನ್ನ ಗೆಟಪ್‌ನಿಂದ ಕೂಡಿದೆ. ಹಾಗಾಗಿಯೇ ನನ್ನ ಅಪ್ಪನಿಗೂ ಆ ಸಿನಿಮಾ ಮೇಲೆ ತುಂಬು ವಿಶ್ವಾಸವಿತ್ತು. ಚಿತ್ರದ ಕೆಲವು ದೃಶ್ಯಗಳನ್ನು ನೋಡಿ, ಈ ಎರಡೂ ಸಿನಿಮಾಗಳು ಖಂಡಿತಾ ದೊಡ್ಡ ಹಿಟ್‌ ಆಗುತ್ತವೆ ಎಂದು ಹೇಳಿದ್ದರು. ಜೊತೆಗೆ ಆ ಸಿನಿಮಾಗಳನ್ನು ನೋಡುವ ಇಂಗಿತ ಕೂಡಾ ವ್ಯಕ್ತಪಡಿಸಿದ್ದರು. ಆದರೆ, ಈಗ ಅವರೇ ಇಲ್ಲ. ಅವರ ಆ ಆಸೆ ಹಾಗೆಯೇ ಉಳಿದು ಹೋಯಿತು. “ಭೈರಾದೇವಿ’ ಹಾಗೂ “ದಮಯಂತಿ’ ಸಿನಿಮಾಗಳ ಹೆಸರು ಬರುವಾಗ ನನಗೆ ಅಪ್ಪನ ಸಿನಿಮಾ ನೋಡುವ ಆಸೆಯೇ ನೆನಪಾಗುತ್ತದೆ’ ಎಂದು ತಂದೆ ಜೊತೆಗಿನ ನೆನಪನ್ನು ಬಿಚ್ಚಿಟ್ಟರು ರಾಧಿಕಾ.

ರಾಧಿಕಾ ಅವರ ಜೊತೆಗೆ ಅವರ ಮಗಳು ಶಮಿಕಾ ಕೂಡಾ ಅಜ್ಜನನ್ನು ತುಂಬಾ ಮಿಸ್‌ ಮಾಡಿಕೊಳ್ಳುತ್ತಿದ್ದಾರಂತೆ. ಕದ್ದುಮುಚ್ಚಿ ಐಸ್‌ಕ್ರೀಂ ತಂದುಕೊಡುತ್ತಿದ್ದ ಅಜ್ಜನ ಬಗ್ಗೆ ಶಮಿಕಾ ಕೂಡಾ ಕನವರಿಸುತ್ತಿದ್ದಾಳಂತೆ. “ನನ್ನ ಮಗಳು ಕೂಡಾ ಅಜ್ಜನನ್ನು ತುಂಬಾ ಮಿಸ್‌ ಮಾಡಿಕೊಳ್ಳುತ್ತಿದ್ದಾಳೆ. ಅವಳು ಅವರನ್ನು ಅಜ್ಜ ಎಂದು ಕರೆಯುತ್ತಿರಲಿಲ್ಲ. ಬದಲಾಗಿ ಡ್ಯಾಡಿ ಎಂದು ಕರೆಯುತ್ತಿದ್ದಳು. ನನ್ನನ್ನು ಅಕ್ಕ ಎಂದು ಹಾಗೂ ನನ್ನ ಅಮ್ಮನನ್ನು ಅಮ್ಮಾ ಎಂದೇ ಕರೆಯುತ್ತಾಳೆ. ನಾವು ಶಮಿಕಾಳಿಗೆ ಐಸ್‌ಕ್ರೀಂ ಕೊಡಿಸಬಾರದು ಎಂದು ಹೇಳುತ್ತಿದ್ದೆವು. ಆದರೆ, ನನ್ನ ಅಪ್ಪ ಅವಳನ್ನು ಕರೆದುಕೊಂಡು ಹೋಗಿ ಐಸ್‌ಕ್ರೀಂ ತಿನ್ನಿಸಿಕೊಂಡು ಬರುತ್ತಿದ್ದರು. ಈಗ ಆಕೆ ಆವೆಲ್ಲವನ್ನು ಮಿಸ್‌ ಮಾಡಿಕೊಳ್ಳುತ್ತಿದ್ದಾಳೆ’ ಎಂದು ಮಗಳ ಬಗ್ಗೆ ಹೇಳುತ್ತಾರೆ.

ಸದ್ಯ ರಾಧಿಕಾ ಅಭಿನಯದ “ದಮಯಂತಿ’ ಚಿತ್ರದ ಟೀಸರ್‌ ಬಿಡುಗಡೆಯಾಗಿದೆ. ಇದರ ನಡುವೆಯೇ ಅವರದೇ ನಿರ್ಮಾಣದ “ಭೈರಾದೇವಿ’ ಕೂಡಾ ಸಿದ್ಧವಾಗುತ್ತಿದೆ. ಹಾಗಾದರೆ ಯಾವುದು ಮೊದಲು ಬಿಡುಗಡೆಯಾಗುತ್ತದೆ ಎಂದು ನೀವು ಕೇಳಬಹುದು. ಅದಕ್ಕೆ ಉತ್ತರ ರಾಧಿಕಾ ಅವರ ಬಳಿಯೂ ಇಲ್ಲ. “ನಾವು ಭೈರಾದೇವಿ ಚಿತ್ರವನ್ನು ಮೊದಲು ಬಿಡುಗಡೆ ಮಾಡಬೇಕೆಂದುಕೊಂಡಿದ್ದೆವು. ಆದರೆ, ಈಗ “ದಮಯಂತಿ’ ಸಿದ್ಧವಾಗಿದೆ. ಯಾವುದನ್ನು ಮೊದಲು ಬಿಡುಗಡೆ ಮಾಡಬೇಕೆಂಬುದನ್ನು ಇನ್ನೂ ನಿರ್ಧರಿಸಿಲ್ಲ. “ಭೈರಾದೇವಿ’ ಇನ್ನೆರಡು ದಿನ ಸ್ಮಶಾನದಲ್ಲಿ ಚಿತ್ರೀಕರಣ ಬಾಕಿ ಇದೆ’ ಎನ್ನುವ ರಾಧಿಕಾ ಅವರಿಗೆ ಬೇರೆ ಬೇರೆ ಭಾಷೆಯಿಂದ ಹೊಸ ಹೊಸ ಅವಕಾಶಗಳು ಬರುತ್ತಿವೆ­ಯಂತೆ. “ಭೈರಾದೇವಿ’ ಹಾಗೂ “ದಮಯಂತಿ’ ಚಿತ್ರಗಳ ಪೋಸ್ಟರ್‌, ಸ್ಟಿಲ್ಸ್‌ ನೋಡಿದವರಿಂದ ಈ ಸಿನಿಮಾ ಬಗ್ಗೆ ಕುತೂಹಲ ಹೆಚ್ಚಿದ್ದು, ಇದೇ ತೆರನಾದ ಮತ್ತಷ್ಟು ಅವಕಾಶಗಳು ರಾಧಿಕಾ ಅವರಿಗೆ ಬರುತ್ತಿವೆಯಂತೆ. ಆದರೆ, ರಾಧಿಕಾ ಯಾವುದೇ ಹೊಸ ಸಿನಿಮಾ ಒಪ್ಪಿಕೊಂಡಿಲ್ಲ. ರಾಧಿಕಾ ಅವರ ಹುಟ್ಟುಹಬ್ಬ ನವೆಂಬರ್‌ 11ಕ್ಕೆ ಹೊಸ ಚಿತ್ರ ಅನೌನ್ಸ್‌ ಮಾಡುವ ಯೋಚನೆ ಕೂಡಾ ರಾಧಿಕಾ ಅವರಿಗಿದೆ.

ರವಿಪ್ರಕಾಶ್‌ ರೈ


ಈ ವಿಭಾಗದಿಂದ ಇನ್ನಷ್ಟು

  • ಯಾವುದೇ ಚಿತ್ರರಂಗವಿರಲಿ, ಸಾಮಾನ್ಯವಾಗಿ ಸ್ಟಾರ್‌ ನಟರು ಅಲ್ಲಿನ ಹಿರಿಯ ನಿರ್ದೇಶಕರು, ಅದರಲ್ಲೂ ಸಾಕಷ್ಟು ಹಿಟ್‌ ಚಿತ್ರಗಳನ್ನು ನಿರ್ದೇಶಿಸಿ ಜನಪ್ರಿಯವಾದ...

  • ದರ್ಶನ್‌ ನಾಯಕರಾಗಿ ನಟಿಸಿರುವ "ಒಡೆಯ' ಚಿತ್ರದ ಹಾಡು, ಟ್ರೇಲರ್‌ ಈಗಾಗಲೇ ಬಿಡುಗಡೆಯಾಗಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಬಿಡುಗಡೆಯ ಹಂತದಲ್ಲಿರುವ "ಒಡೆಯ' ಬಗ್ಗೆ...

  • ಕನ್ನಡದಲ್ಲಿ ಈ ವಾರ ಮತ್ತೂಂದು "ಕಥಾ ಸಂಗಮ' ತೆರೆಗೆ ಬರುತ್ತಿದೆ. "ಕಥಾ ಸಂಗಮ' ಅಂದ್ರೆ ಕನ್ನಡ ಸಿನಿಪ್ರಿಯರಿಗೆ ಮೊದಲು ನೆನಪಿಗೆ ಬರುವ ಹೆಸರು ಚಿತ್ರಬ್ರಹ್ಮ ಪುಟ್ಟಣ್ಣ...

  • ಕನ್ನಡದಲ್ಲಿ "ಬೆಳದಿಂಗಳ ಬಾಲೆ' ಎಂದೇ ಕರೆಸಿಕೊಳ್ಳುವ ಸುಮನ್‌ ನಗರ್‌ಕರ್‌ ಹೊಸ ಇನ್ನಿಂಗ್ಸ್‌ ಶುರುಮಾಡಿ­ರುವುದು ಗೊತ್ತೇ ಇದೆ. ನಟನೆ ಜೊತೆಯಲ್ಲಿ ನಿರ್ಮಾಣಕ್ಕೂ...

  • ಅಭಿನಯ, ಬಣ್ಣದ ಲೋಕ ಅಂದ್ರೆ ಹಾಗೆ. ಅದು ಎಂಥವರನ್ನೂ ಕೂಡ ತನ್ನತ್ತ ಸೆಳೆಯುತ್ತಿದೆ. ಆದರೆ ಕೆಲವೇ ಕೆಲವರಿಗೆ ಮಾತ್ರ ಅದು ಒಲಿದು, ಕೈ ಹಿಡಿಯುತ್ತದೆ. ಪರಿಶ್ರಮ, ಅವಕಾಶ,...

ಹೊಸ ಸೇರ್ಪಡೆ