ಆ್ಯಕ್ಷನ್ ಲುಕ್‌ನಲ್ಲಿ ಪ್ರಜ್ವಲ್ ದೇವರಾಜ್
ತೆರೆಗೆ ಬರಲು ಅರ್ಜುನ್ ಗೌಡ ತಯಾರಿ
Team Udayavani, Oct 30, 2020, 1:59 PM IST
“ರಾಮು ಫಿಲಂಸ್’ ಬ್ಯಾನರ್‌ನಲ್ಲಿ ನಿರ್ಮಾಪಕ ಕೆ. ರಾಮು ನಿರ್ಮಿಸುತ್ತಿರುವ “ಅರ್ಜುನ್ ಗೌಡ’ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಭರದಿಂದ ನಡೆಯುತ್ತಿದೆ. ಕೋವಿಡ್ ಲಾಕ್ ಡೌನ್‌ನಿಂದಾಗಿ ಕೆಲ ತಿಂಗಳು ಚಿತ್ರದ ಕೆಲಸಗಳಿಗೆ ಬ್ರೇಕ್ ನೀಡಿದ್ದ ಚಿತ್ರತಂಡ, ಕಾಲ್‌ಡೌನ್ ಸಡಿಲವಾಗುತ್ತಿದ್ದಂತೆ ಚಿತ್ರದಕೆಲಸಗಳಿಗೆ ಮತ್ತಷ್ಟು ವೇಗ ಕೊಟ್ಟಿತ್ತು.
ಇತ್ತೀಚೆಗೆ “ಅರ್ಜುನ್ ಗೌಡ’ ಚಿತ್ರದ ಡಬ್ಬಿಂಗ್ ಸಹ ಮುಕ್ತಾಯವಾಗಿದ್ದು, ಕೆಲ ದಿನಗಳಲ್ಲಿ ಚಿತ್ರದ ಮೊದಲ ಪ್ರತಿ ಹೊರಬರಲಿದೆ. ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ನಾಯಕರಾಗಿ ನಟಿಸಿರುವ ಈ ಚಿತ್ರಕ್ಕೆ ಲಕ್ಕಿ ಶಂಕರ್ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರದಲ್ಲಿ ನಾಯಕಿಯಾಗಿ ಪ್ರಿಯಾಂಕ ತಿಮ್ಮೇಶ್ ಅಭಿನಯಿಸಿದ್ದಾರೆ. ಬಾಲಿವುಡ್ ನಟ ರಾಹುಲ್ ದೇವ್, ಸ್ಪರ್ಶ ರೇಖಾ, ಸಾಧುಕೋಕಿಲ, ಕಡ್ಡಿಪುಡಿ ಚಂದ್ರು, ದೀಪಕ್ ಶೆಟ್ಟಿ, ದಿನೇಶ್ ಮಂಗಳೂರು, ಶೋಭಿತ್, ಜೀವನ್, ಹನುಮಂತೇ ಗೌಡ, ಮೋಹನ್ ಜುನೇಜ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
ಚಿತ್ರದ ಹಾಡುಗಳಿಗೆ ಧರ್ಮವಿಶ್ ಸಂಗೀತ ಸಂಯೋಜಿಸಿದ್ದು, ಕವಿರಾಜ್, ರಾಘವೇಂದ್ರ ಕಾಮತ್, ಶಂಕರ್ ಸಾಹಿತ್ಯ ರಚಿಸಿದ್ದಾರೆ. ಚಿತ್ರಕ್ಕೆ ಜೈ ಆನಂದ್ ಛಾಯಾಗ್ರಹಣ, ಅರ್ಜುನ್ ಕಿಟ್ಟು ಸಂಕಲನವಿದೆ. ಇನ್ನು ಪಕ್ಕಾ ಆ್ಯಕ್ಷನ್ ಕಥಾಹಂದರ ಹೊಂದಿರುವ “ಅರ್ಜುನ್ ಗೌಡ’ ಚಿತ್ರದಲ್ಲಿ ಏಳು ಸಾಹಸ ಸನ್ನಿವೇಶಗಳಿದ್ದು, ಮಾಸ್ ಮಾದ ಸಾಹಸಸಂಯೋಜಿಸಿದ್ದಾರೆ. ಈಗಾಗಲೇ “ಅರ್ಜುನ್ ಗೌಡ’ ಚಿತ್ರದ ಆ್ಯಕ್ಷನ್ ಟ್ರೇಲರ್ ಬಿಡುಗಡೆಯಾಗಿದ್ದು, ಸೋಶಿಯಲ್ ಮೀಡಿಯಾಗಳಲ್ಲಿ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಸದ್ಯದಲ್ಲೇ ಮೇಕಿಂಗ್ ಟ್ರೇಲರ್ ಬಿಡುಗಡೆ ಮಾಡಲು ಚಿತ್ರತಂಡ ಪ್ಲಾನ್ ಹಾಕಿಕೊಂಡಿದೆ.
“ಕೋವಿಡ್ ಹಾವಳಿ ಇಲ್ಲದೇ ಹೋಗಿದ್ದರೆ, ಇದೇ ಏಪ್ರಿಲ್‌ನಲ್ಲಿ ಚಿತ್ರ ಬಿಡುಗಡೆಯಾಗಬೇಕಿತ್ತು. ಸದ್ಯ ಚಿತ್ರದ ಅಂತಿಮ ಹಂತದ ಕೆಲಸಗಳು ನಡೆಯುತ್ತಿದ್ದು, ಆದಷ್ಟು ಬೇಗ ಚಿತ್ರವನ್ನು ತೆರೆಗೆ ತರುವ ಯೋಚನೆ ಇದೆ’ ಎಂದಿದೆ ಚಿತ್ರತಂಡ.
ವಿಜಯ್ ಚಿತ್ರಕ್ಕೆ ಲಕ್ಕಿ ಹೀರೋ : ನಟ “ದುನಿಯಾ’ ವಿಜಯ್ ಈಗಾಗಲೇ “ಸಲಗ’ ಚಿತ್ರದ ಮೂಲಕನಿರ್ದೇಶಕರಾಗಿರೋದು ನಿಮಗೆ ಗೊತ್ತೇ ಇದೆ. ಚಿತ್ರ ಕೂಡಾ ಬಿಡುಗಡೆಯ ಹಂತಕ್ಕೆ ಬಂದಿದೆ. ಕೆ.ಪಿ.ಶ್ರೀಕಾಂತ್ ನಿರ್ಮಾಣದ ಈ ಚಿತ್ರದ ಮೇಲೆ ಸಿಕ್ಕಾಪಟ್ಟೆ ನಿರೀಕ್ಷೆ ಇದೆ. ಈ ನಡುವೆಯೇ ವಿಜಯ್ ಹೊಸ ಸಿನಿಮಾವನ್ನು ಅನೌನ್ಸ್ ಮಾಡಿದ್ದಾರೆ. ಹಾಗಂತ ಈ ಚಿತ್ರಕ್ಕೆ ಅವರು ನಾಯಕರಲ್ಲ, ನಿರ್ದೇಶನವಷ್ಟೇ ಅವರದು. ಲಾಕ್‌ಡೌನ್ ಸಮಯದಲ್ಲಿ ಹೊಸ ಕಥೆಯ ಚರ್ಚೆಯಲ್ಲಿ ಕುಳಿತಿದ್ದಾಗ ಹುಟ್ಟಿಕೊಂಡಾಗ ಕಥೆಯಿದು. ಹೊಸ ನಾಯಕ-ನಾಯಕಿಯನ್ನು ಗಮನದಲ್ಲಿಟ್ಟುಕೊಂಡು ಈ ಕಥೆ ಮಾಡಿದ್ದು, ಈಗಾಗಲೇ ನಾಯಕನ ಆಯ್ಕೆಯಾಗಿದೆ. ಅವರೇ ಲಕ್ಕಿ.
ವಿಜಯ್ ನಿರ್ದೇಶನದ ಹೊಸ ಚಿತ್ರಕ್ಕೆ ಲಕ್ಕಿ ನಾಯಕರಾಗಿ ಆಯ್ಕೆಯಾಗಿದ್ದಾರೆ. ಇವರು ಡಾ.ರಾಜ್ ಕುಟುಂಬದ ಕುಡಿ. ಈಗಾಗಲೇ ಶಿವರಾಜ್‌ಕುಮಾರ್ ಅವರಿಗೆ “ಎಸ್‌ಆರ್‌ಕೆ’ ಎಂಬ ಸಿನಿಮಾ ಅನೌನ್ಸ್ ಮಾಡಿದ್ದರು ಲಕ್ಕಿ. ಆದರೆ ಆ ಚಿತ್ರ ಇನ್ನೂ ಆರಂಭವಾಗಿಲ್ಲ. ಈ ನಡುವೆಯೇ ಸಿನಿಮಾದಲ್ಲಿ ಹೀರೋ ಆಗಲು ಮುಂದಾಗಿದ್ದಾರೆ.
ಚಿತ್ರಕ್ಕೆ ನಾಯಕಿಯ ಆಯ್ಕೆ ಇನ್ನಷ್ಟೇ ಆಗಬೇಕಿದೆ. ಇತ್ತೀಚೆಗೆ ವಿಜಯ್ ಹಾಗೂ ಲಕ್ಕಿ, ನಟ ಶಿವರಾಜ್ ಕುಮಾರ್ ಅವರನ್ನು ಭೇಟಿಯಾಗಿದ್ದು, ಶಿವಣ್ಣ ಹಾರೈಸಿದ್ದಾರೆ.