ರಾಮು ಕನಸಿಗೆ ಜೀವ ತುಂಬಿದ್ದೇನೆ…: ಅರ್ಜುನ್ ಗೌಡ ಬಗ್ಗೆ ಪ್ರಜ್ವಲ್ ಮಾತು
Team Udayavani, Dec 31, 2021, 10:47 AM IST
ಪ್ರಜ್ವಲ್ ದೇವರಾಜ್ ಅಭಿನಯದ “ಅರ್ಜುನ್ ಗೌಡ’ ಚಿತ್ರ ಇದೇ ವಾರ ಬಿಡುಗಡೆಯಾಗುತ್ತಿದೆ. ಕನ್ನಡ “ಕೋಟಿ ನಿರ್ಮಾಪಕ’ ಖ್ಯಾತಿಯ ರಾಮು ನಿರ್ಮಾಣದಲ್ಲಿ ಮೂಡಿಬಂದಿರುವ ಔಟ್ ಆ್ಯಂಡ್ ಔಟ್ ಆ್ಯಕ್ಷನ್ ಕಥಾಹಂದರ ಹೊಂದಿರುವ “ಅರ್ಜುನ್ ಗೌಡ’ ಚಿತ್ರದಲ್ಲಿ ಪ್ರಜ್ವಲ್ ಮತ್ತೂಮ್ಮೆ ಆ್ಯಕ್ಷನ್ ಹೀರೋ ಲುಕ್‌ನಲ್ಲಿ ಎಂಟ್ರಿ ಕೊಡಲು ತಯಾರಾಗಿದ್ದಾರೆ.
ಬಿಡುಗಡೆಗೆ ಸಿದ್ಧವಾಗಿರುವ “ಅರ್ಜುನ್ ಗೌಡ’ ಚಿತ್ರದ ಬಗ್ಗೆ ಮಾತನಾಡುವ ನಟ ಪ್ರಜ್ವಲ್ ದೇವರಾಜ್, “ಈ ಸಿನಿಮಾ ನನ್ನ ಸಿನಿಮಾ ಕೆರಿಯರ್‌ನಲ್ಲಿ ತುಂಬ ವಿಭಿನ್ನವಾಗಿ ನಿಲ್ಲುವಂಥದ್ದು. ಒಂದು ಸಿನಿಮಾದ ಸಬ್ಜೆಕ್ಟ್, ಕ್ಯಾರೆಕ್ಟರ್ ಆದ್ರೆ ಮತ್ತೂಂದು ನಿರ್ಮಾಪಕ ರಾಮು ಅಂಕಲ್ ಕಾರಣದಿಂದ. ಈ ಸಿನಿಮಾವನ್ನು ಅವರು ತುಂಬ ಇಷ್ಟಪಟ್ಟು ಮಾಡಿದ್ದರು. ಈ ಸಿನಿಮಾದ ರಿಲೀಸ್ ದೊಡ್ಡದಾಗಿ ಮಾಡಬೇಕು, ಬಿಗ್ ಸಕ್ಸಸ್ ಆಗಬೇಕು ಅನ್ನೋದು ಅವರ ಕನಸಾಗಿತ್ತು. ಯಾವಾಗಲೂ “ಅರ್ಜುನ್ ಗೌಡ’ ಸಿನಿಮಾದ ರಿಲೀಸ್ ಹೇಗಿರಬೇಕು, ಏನು ಮಾಡಬೇಕು ಅಂಥ ನನ್ನ ಹತ್ರ ಚರ್ಚಿಸುತ್ತಿದ್ದರು. ಅವರಿಲ್ಲದೆ ಸಿನಿಮಾ ರಿಲೀಸ್ ಆಗುತ್ತಿರುವುದಕ್ಕೆ ತುಂಬ ನೋವಿದೆ. ಅದರ ಜೊತೆಗೇ ಅವರ ಕನಸು ನನಸಾಗುತ್ತಿದೆ ಎಂಬ ಭಾವನೆಯೂ ಮನಸ್ಸಿನಲ್ಲಿ ಮೂಡುತ್ತಿದೆ’ ಎನ್ನುತ್ತಾರೆ.
ಇದನ್ನೂ ಓದಿ:Rewind 2021: ಬಿದ್ದು ಎದ್ದು ಗೆದ್ದ ಸ್ಯಾಂಡಲ್‌ವುಡ್
ನಿರ್ಮಾಪಕ ರಾಮು ಕೇವಲ ನಿರ್ಮಾಪಕರಷ್ಟೇ ಅಲ್ಲ. ನಮ್ಮ ಕುಟುಂಬದ ಸದಸ್ಯರ ಥರ ಇದ್ದರು. ನಮ್ಮ ತಂದೆಯವರ ಜೊತೆ ನಾನು ಚಿಕ್ಕವನಾಗಿದ್ದಾಗ ಅವರ ಸಿನಿಮಾಗಳ ಶೂಟಿಂಗ್‌ಗೆ ಹೋಗುತ್ತಿದ್ದೆ. “ಗುಲಾಮ’ ಸಿನಿಮಾದಿಂದ “ಅರ್ಜುನ್ ಗೌಡ’ ಸಿನಿಮಾದವರೆಗೆ ಅವರ ಬ್ಯಾನರ್‌ನಲ್ಲಿ ಮೂರು ಸಿನಿಮಾ ಮಾಡಿದ್ದೇನೆ. ಈ ಸಿನಿಮಾ ಆದ ಮೇಲೆ ಮತ್ತೂಂದು ಸಿನಿಮಾ ಮಾಡೋಣ ಅಂತಾನೂ ರಾಮು ಅವರು ಹೇಳಿದ್ದರು. ಅವರ ಸಾವಿನ ನೋವು ನಮ್ಮಗೆಲ್ಲಾ ಇನ್ನೂ ಕಾಡುತ್ತಿದೆ. ಆ್ಯಕ್ಷನ್ ಸಿನಿಮಾಗಳಿಗೆ ಹೆಸರಾದ “ರಾಮು ಫಿಲಂಸ್’ ಮೂಲಕ ನಿರ್ಮಾಣವಾಗಿರುವ ಈ ಸಿನಿಮಾದಲ್ಲೂ ಭರ್ಜರಿ ಆ್ಯಕ್ಷನ್ ಇದೆ. ರಾಮು ಅವರ ಹಿಂದಿನ ಸಿನಿಮಾಗಳಂತೆ, ಈ ಸಿನಿಮಾ ಕೂಡ ಪ್ರೇಕ್ಷಕರಿಗೆ ಇಷ್ಟವಾಗುತ್ತದೆ’ ಎನ್ನುವುದು ಪ್ರಜ್ವಲ್ ದೇವರಾಜ್ ಮಾತು.