Udayavni Special

ನೆನಪು ಎಂಬ ಕಾಗದದ ದೋಣಿ


Team Udayavani, Jun 30, 2019, 5:00 AM IST

Oda-Final

ಇನ್ನೇನು ಆಷಾಢ ಹತ್ತಿರ ಬರುತ್ತಿರುವ ದಿನಗಳಲ್ಲಿ ತವರೂರಿನ ಚಿತ್ರ ಕಣ್ಣೆದುರು ಬರುತ್ತಿದೆ. ಅಲ್ಲೀಗ ‘ಧೋ’ ಎಂದು ಮಳೆ ಸುರಿಯುತ್ತಿರಬಹುದು. ಮಳೆ ಹುಯ್ಯುವಾಗ ಎಲ್ಲ ನೆನಪಾಗುತ್ತಿದೆ. ಈ ಒಂದು ನೆನಪನ್ನು ಹಂಚಿಕೊಳ್ಳದಿರುವುದಾದರೂ ಹೇಗೆ?

ಸುಮಾರು 1979 ರ ಜುಲೈ ತಿಂಗಳ ರಾತ್ರಿ ಹತ್ತರ ಸಮಯ. ನಾನು ಆರೋ ಏಳ್ಳೋ ತರಗತಿಯಲ್ಲಿ ಕಲಿಯುತ್ತಿದ್ದೆ. ಕರಾವಳಿ ತೀರದ ಹಳ್ಳಿಮನೆ ಅಂದ ಮೇಲೆ ತೆಂಗು ಕಂಗು ಬಾಳೆ ಮಾವು ಹಲಸು ಅನಾನಸು ಅಂತೆಲ್ಲ ಬೆಳೆದು ನಿಂತ ಪುಟ್ಟ ತೋಟದ ಮಧ್ಯೆ ಮೂರಂಕಣದ ಕೆಂಪು ಹೆಂಚಿನ ಮನೆ. ಅದರಲ್ಲೂ ಮಳೆಗಾಲ ಅಂದರೆ ಕೇಳಬೇಕೆ, ಒಂದು ರಾತ್ರಿ ಎಂದಿನಂತೆಯೇ ಧೋ ಧೋ ಮಳೆ ಹತ್ತಿತ್ತು. ಬೇಲಿ ದಂಟೆಲ್ಲ ಚಿಗುರಿ ಹಸಿರು ಉಕ್ಕುವ ಕಾಲ. ಕಲ್ಲಿನ ಕಂಪೌಂಡಿನಲ್ಲೂ ಹಸಿರ ಮೆತ್ತೆ ನಳನಳಿಸುವ ಜಾಲ. ಹೊರಗಿನ ಗಾಳಿಗೆ ಮರದ ಟೊಂಗೆ ಕಳಚಿ ದೊಪ್ಪನೆ ನೆಲಕ್ಕಪ್ಪಳಿಸಿದ ಸದ್ದು, ತೆಂಗಿನ ಗಿಡಗಳು ಒಂದೇ ಸಮ ರೊಂಯನೆ ಹೊಯ್ದಾಡುವ ಸಪ್ಪಳ, ಕೆರೆ ಕಟ್ಟೆ ತುಂಬಿ ಹರಿದು ಪುಟ್ಟ ಕಟ್ಟಿಗೆಯ ಸೇತುವೆ ಕೊಚ್ಚಿ ಹೋಗಿ ಪಕ್ಕದೂರಿನ ಹೈಸ್ಕೂಲಿಗೆ ಹೋಗುವ ಅಣ್ಣನಿಗೆ ಅಘೋಷಿತ ರಜೆ. ನನ್ನ ಸರಕಾರಿ ಕನ್ನಡ ಶಾಲೆಗೆ ಪಕ್ಕದ ಪಟ್ಟಣದಿಂದ ಸೈಕಲ್ಲಿನಲ್ಲಿ ಬರುವ ಮಾಸ್ತರರು ಅಂದಿನ ಮಳೆಯ ಆರ್ಭಟಕ್ಕೆ ಭೀತರಾಗಿ ಹೊತ್ತಿಗೆ ಮುಂಚೇ ರಜೆ ಕೊಟ್ಟು ಮಕ್ಕಳನ್ನು ಮನೆಗೆ ಕಳಿಸಿದ್ದರು.

ಇಂಥ ಗಾಳಿಗೆ ಎಲ್ಲೋ ಎತ್ತರದ ಮರ ಉರುಳಿ ಇಂದು ರಾತ್ರಿ ಕರೆಂಟು ಹೋಗುವುದು ಗ್ಯಾರಂಟಿ ಅಂತ ಅಪ್ಪ ಅಜ್ಜಿ ಮಾತಾಡಿಕೊಂಡರು. ‘ಬೇಸಿಗೆಯಲ್ಲಿ ಸಾರಿಸಿದ ನಿಂಪು ಅಂಗಳ ಈ ಮಳೆಗೆ ಬಾದಾಗೇ ಹೋಯ್ತು’ ಅಂತ ಅಜ್ಜಿ ಅಪ್ಪನೊಡನೆ ಸಣ್ಣ ದೂರು ಕೊಟ್ಟಳು. ‘ಎಲ್ಲರ ಮನೆ ಅಂಗಳಕ್ಕಾದ ಗತಿ ನಮ್ಮನೆ ಅಂಗಳಕ್ಕೂ ಆಗ್ತದೆ, ಅದಕ್ಯಾಕೆ ಚಿಂತೆ ಮಾಡ್ತೀ’ ಅಂತ ಅಪ್ಪ ಮುಂಬಾಗಿಲಿನುದ್ದಕ್ಕೂ ಇಳಿಬಿಟ್ಟಂತೆ ಪ್ಲಾಸ್ಟಿಕ್ಕಿನ ಹಾಳೆ ಸಿಕ್ಕಿಸಿದರು. ಬಾವಿಗೂ ಒಂದು ಹಾಳೆ ಹೊದಿಸಬೇಕಿತ್ತು, ಮರದ ಎಲೆಯೆಲ್ಲ ಬಿದ್ದು ಕಸ ಕೊಳೀತದೆ, ಇಂದು ಮಿಂದು ಮಡಿನೀರಿಗೆ ಹೋದಾಗ ಬಾವೀಲಿದ್ದ ಕಪ್ಪೆ ತಿನ್ನಲು ಬಂದ ಒಂದು ದೊಡ್ಡ ಕೇರೆ ಹಾವನ್ನೂ ಕಂಡೆ ಅನ್ನುತ್ತ ಚಿಮಣಿಯ ಬತ್ತಿ ಎಳೆದು ಅಜ್ಜಿ ಕುಡಿ ತೆಗೆಯುತ್ತಿದ್ದಳು. ನಡುಕೋಣೆಯ ಮೂಲೆಯಲ್ಲಿ ಟಪ್‌ ಟಪ್‌ ಹನಿ ಉದುರತೊಡಗಿದ್ದೇ ಅಪ್ಪ ಅಲ್ಲೊಂದು ಪಾತ್ರೆ ತಂದಿಟ್ಟರು, ಮಂಗ ಕುಣಿದು ಒಡೆದ ಹೆಂಚು ಹೊದ್ದಿಸಲು ಮರೆತಿದ್ದಿ ನೀನು ಅಂತ ಅಜ್ಜಿ ಮತ್ತೂಮ್ಮೆ ಅಪ್ಪನನ್ನು ದೂರಿದಳು.

ಅಣ್ಣ ಮತ್ತು ನಾನು ಶಾಲೆಯ ಅಭ್ಯಾಸ ಮಾಡುತ್ತ ಹೊರಕೋಣೆಯ ಜಗಲಿಯಲ್ಲಿ ಕೂತಿದ್ದೆವು. ಅರ್ಧ ಗೋಡೆ ಅರ್ಧ ಕಟಾಂಜನವಿದ್ದ ಹೊರಕೋಣೆಯಲ್ಲಿ ಗಾಳಿಗೆ ಹಾರಿ ಒಳಬಂದ ಮಳೆಯ ಹನಿಗಳು ಚಳಿ ಹುಟ್ಟಿಸುತ್ತಿದ್ದವು. ಮಳೆಯ ರಭಸ ಕ್ಷಣಕ್ಷಣಕ್ಕೂ ಜೋರೇ ಆಗುತ್ತಿತ್ತು. ಗುಡುಗು ಮಿಂಚಿನ ಸದ್ದಿಗೆ ಆತಂಕಗೊಂಡ ನಾನು ಆಗಾಗ ಎದುರಲ್ಲೇ ತಲೆ ತಗ್ಗಿಸಿ ಏನೋ ಬರೆಯುತ್ತ ಕೂತ ಅಣ್ಣನ ಮುಖ ನೋಡುತ್ತಿದ್ದೆ. ಫ‌ಟ್ಟನೆ ಕರೆಂಟು ಹೋಗಿಬಿಟ್ಟಿತು. ಎಲ್ಲೆಡೆ ಗಾಢಾಂಧಕಾರ, ಇಡೀ ಮನೆಯಷ್ಟೇ ಅಲ್ಲ ಊರಿಗೆ ಊರೇ ಕತ್ತಲು ಹಾಗೂ ಮಳೆಯಲ್ಲಿ ಮೀಯುತ್ತಿರುವಂತೆ ಕಾಣುತ್ತಿತ್ತು.

ಸೀಮೆಎಣ್ಣೆ ಚಿಮಣಿಯನ್ನು ಬೆಳಗಿಸಿದ ಅಣ್ಣ, ನಾವು ಹಾಸಿಕೊಂಡು ಕೂತ ಚಾಪೆಯ ಮಧ್ಯೆ ತಂದಿರಿಸಿದ. ಈಗ ಚಾಪೆಯಲ್ಲಿ ಕೂತ ನಮ್ಮಿಬ್ಬರ ಪಟ್ಟಿ ಪುಸ್ತಕದ ಮೇಲಷ್ಟೇ ಚಿಮಣಿಯ ಮಂದ ಬೆಳಕು ಹರಡಿತ್ತು. ಅಜ್ಜಿಯೂ ಹೂಬತ್ತಿ ಹೊಸೆಯುತ್ತ ಅಲ್ಲೇ ನಮ್ಮ ಬಳಿಯೇ ಬಂದು ಕೂತಳು. ಗದ್ದೆಯ ಬದುವಿಗೆ ಜಡ್ಡಿ ಮಣ್ಣು ಏರಿಸಿ ಬಂದ ಅಪ್ಪ ಆರಾಮ ಕುರ್ಚಿಯಲ್ಲಿ ದಣಿವಾರಿಸಿಕೊಳ್ಳುತ್ತಿದ್ದರು. ಅಮ್ಮ ಅಡುಗೆ ಮನೆಯಲ್ಲಿ ಇನ್ನೊಂದು ಚಿಮಣಿ ಹೊತ್ತಿಸಿಕೊಂಡು ದೋಸೆಗೆ ರುಬ್ಬುತ್ತಿದ್ದಳು.

ಇದ್ದಕ್ಕಿದ್ದಂತೆ ಪಕ್ಕ ಕೂತ ಅಜ್ಜಿ, ‘ಅಯ್ಯೋ, ಏನೋ ತಣ್ಣಗೆ ಕೈಗೆ ಹತ್ತಿದ ಹಾಗಾಯ್ತು, ಏನೇ ತಂಗೀ, ಆಗಲೇ ಮಳೆಯಲ್ಲಿ ಲಂಗ ತೋಯಿಸಿಕೊಂಡು ಬಂದು ಕೂತಿದ್ದಿಯಾ’ ಕೇಳಿದ್ದಳು. ನಾನು ‘ಇಲ್ಲ’ ಎಂದೆ. ‘ನೋಡು ನೋಡು ಇಲ್ಲಿ ನೋಡು’ ಅಂತ ತಣ್ಣನೆ ಏನನ್ನೋ ಎತ್ತಿ ಎತ್ತಿ ತೋರಿದಳು. ನಾನೂ ಆ ದೀಪದ ಬೆಳಕಲ್ಲಿ ಮೆಲ್ಲಗೆ ಹಿಂದಕ್ಕೆ ತಿರುಗಿ ನಿರುಕಿಸಿದೆ, ಒಂದೇ ಕ್ಷಣ, ‘ಅಯ್ಯೋ ಹಾವು’ ಅಂತ ಚೀರಿಕೊಂಡು ಕೂತಲ್ಲೇ ಹಾರಿಬಿದ್ದೆ. ಕೆರೆ ಹಾವೊಂದು ಅಜ್ಜಿಯ ಕೈಯಿಂದ ತಪ್ಪಿಸಿಕೊಳ್ಳುತ್ತ ಬಡಿವಾರ ತೋರುತ್ತ ತನ್ನ ಡೊಂಕು ಮೈ ವೈಯಾರದಿಂದ ತಿರುಗಿಸುತ್ತ ಸರಸರನೆ ಅಡುಗೆ ಕೋಣೆಯ ಕಡೆಗೆ ಹೊರಟಿದ್ದು ಅಣ್ಣನ ಕಣ್ಣಿಗೂ ಬಿತ್ತು.

ನಾನೂ ಅಣ್ಣನೂ ಒಂದೇ ಗುಕ್ಕಿಗೆ ಓಡಿ ಕೋಣೆಯ ಮೂಲೆಗಿರುವ ಏಕಮಾತ್ರ ಮಂಚದ ಮೇಲೆ ಹತ್ತಿ ನಿಂತು ಭಯದಿಂದ ಅತ್ತಿತ್ತ ನೋಡಲಾರಂಭಿಸಿದೆವು, ಎರಡು ಮಾರುದ್ದದ ಆ ದಪ್ಪ ಹಾವು ಕೋಣೆಯ ಕತ್ತಲು ಬೆಳಕಿನ ಆವಾರದಲ್ಲಿ ಹೆಡೆಯೆತ್ತಿ ಚಲಿಸಿದ ಪರಿ ಕಂಡು ಮನಸ್ಸಿನ ಮೂಲೆಯಲ್ಲಿ ವಿಚಿತ್ರ ಅದುರಿಹೋಗಿದ್ದೆವು, ಅಷ್ಟರಲ್ಲೇ ನೆಲದಿಂದ ಎದ್ದ ಅಜ್ಜಿ ಆರಾಮಕುರ್ಚಿಯಲ್ಲಿ ಕಾಲುಗಳೆರಡನ್ನೂ ಮೇಲಕ್ಕೆಳೆದುಕೊಂಡು ಕೂತು, ‘ಅಬ್ಟಾ, ಕೈಯಲ್ಲೇ ಮುಟ್ಟಿದರೂ ಕೆರೆಹಾವು ಅಂತ ಕಾಣಲಿಲ್ಲವಲ್ಲೇ, ಬೆಳಿಗ್ಗೆ ಆ ಬಾವಿಯಲ್ಲಿ ಕಂಡದ್ದೇ ಏರಿ ಬಂದು ಒಳ ನುಗ್ಗಿರಬೇಕು’ ಅನ್ನುತ್ತ ಸುಧಾರಿಸಿಕೊಳ್ಳುತ್ತಿದ್ದಳು.

ಅಮ್ಮ ಕುಳಿತು ರುಬ್ಬುತ್ತಿದ್ದ ರುಬ್ಬುಗಲ್ಲಿನ ಸಂದಿಯಲ್ಲೇ ಅದು ಸರ್ರನೆ ನಡೆದದ್ದಕ್ಕೆ ಅಮ್ಮ ಎಲ್ಲ ಇದ್ದಲ್ಲೇ ಕೈಬಿಟ್ಟು ಚಿಮಣಿ ಎತ್ತಿಕೊಂಡು ಹೆದರುತ್ತಲೇ ಈಚೆ ಓಡಿ ಬಂದಳು. ಅಪ್ಪ ಬಾಗಿಲ ಮೂಲೆಗಿರುವ ಒಂದು ಬಡಿಗೆಯಿಂದ ಕೇರೆಹಾವು ಕೂತಲ್ಲಿಗೆ ಬಂದು ಹುಶ್‌ ಹುಶ್‌ ಅಂತ ತಿವಿದಾಗಲೂ ಅದು ಜಪ್ಪಯ್ಯ ಅಂದರೂ ಅಲುಗಾಡದೇ ಕೂತದ್ದನ್ನು ಕಂಡು, ‘ಹೊರಗಿನ ಜೊಪ್ಪು ಮಳೆಗೆ ಹೆದರಿ ಒಳ ಬಂದಿದೆ, ಮಳೆ ನಿಂತ ನಂತರ ತಾನೇ ಹೊರ ಹೋಗ್ತದೆ ಬಿಡು’ ಅಂತ ಅಷ್ಟೇ ಸಲೀಸಾಗಿ ಹೇಳಿದರು, ‘ಅಯ್ಯೋ ಹಾವನ್ನು ಕಾಲ ಬುಡದಲ್ಲಿರಿಸಿಕೊಂಡು ನಾನು ದೋಸೆ ಹ್ಯಾಗೆ ರುಬ್ಬಲಿ? ಅದನ್ನು ಈಗಲೇ ಹೊರಕ್ಕೆ ಓಡಿಸಿ, ಮಕ್ಕಳು ಮರಿ ನೋಡಿ ಹೆದರ್ತಾರೆ, ಹೀಗೆ ಸುಮ್ಮನಿದ್ದರೆ ಹ್ಯಾಗೆ, ಈಗ್ಲೇ ಏನಾದರೂ ಮಾಡಿ’ ಅಂತ ಒತ್ತಾಯಿಸಿದಳು.

ಅಮ್ಮ ಏನೋ ಉಪಾಯ ಹೊಳೆದಂತೆ, ಹೊರಕೋಣೆೆಯ ಗೋಡೆ ಸ್ಟ್ಯಾಂಡಿನಲ್ಲಿದ್ದ ಸೆಲ್ಲಿನ ರೇಡಿಯೋವನ್ನು ಅಡುಗೆ ಕೋಣೆಗೆೆ ತಂದು ದೊಡ್ಡ ಸೌಂಡಿಗೆ ತಿರುವಿ ಹಚ್ಚಿಟ್ಟಳು, ಆ ಸದ್ದಿಗಾದರೂ ಅದು ಹೆದರಿ ಹೊರ ಹೋಗಬಹುದು ಎಂಬ ಯೋಚನೆ ಅಮ್ಮನದಾಗಿತ್ತು. ಆಗ ರಾತ್ರಿ ಎಂಟೂವರೆಯಾದದ್ದರಿಂದ ಧಾರವಾಡ ನಿಲಯದಲ್ಲಿ ಕನ್ನಡ ಕಾರ್ಯಕ್ರಮ ಮುಗಿದು ಇಂಗ್ಲೀಷ್‌ ವಾರ್ತೆ ಬರುತ್ತಿತ್ತು. ‘ಕೆರೆ ಹಾವು ಅದನ್ನೇ ಕೇಳುತ್ತ ಅಲ್ಲೇ ಮಲಗಿಬಿಟ್ಟಿದೆ ಅಂತ ಕಾಣ್ತದೆ, ಬಂದು ನೋಡಿರಿಲ್ಲಿ’ ಅಂತ ಅಮ್ಮ ಪುನಃ ಅಲವತ್ತುಕೊಂಡಳು.

ಅಪ್ಪ ಒಳ ಬಂದವರು, ‘ಅದಕ್ಕೆಲ್ಲಿ ಕಿವಿ ಕೇಳ್ತದೆ? ರೇಡಿಯೋ ಅಷ್ಟೇ ಅಲ್ಲ ನೀನು ಸ್ವತಃ ನಿಂತು ಗದ್ದಲ ಹಾಕಿದರೂ ಅದಕ್ಕೆ ಕೇಳುವುದಿಲ್ಲ, ಕೋಲಲ್ಲಿ ತಿವಿದೇ ಅದನ್ನು ಹೊರಗೆ ಕಳಿಸಬೇಕು’ ಅಂತ ಗದರಿದರು. ‘ಅಯ್ಯೋ ನಿಮ್ಮ ಬಳಿ ಆಗದಿದ್ದರೆ ಆ ತಿಮ್ಮಣ್ಣ ಗೌಡನನ್ನಾದರೂ ಕರೆತನ್ನಿ , ಹಾವನ್ನು ಮನೆಯೊಳಗಿಟ್ಟುಕೊಂಡು ನಿಶ್ಚಿಂತೆಯಿಂದ ಮಲಗುವುದಾದರೂ ಹೇಗೆ?’ ಅಂತ ಅಮ್ಮ ಹೊರಬಂದು ಚಿಂತಾಕ್ರಾಂತಳಾಗಿ ಕೂತಳು. ಅಪ್ಪ ಅವಳ ಸಲಹೆಗೆ, ‘ಛೆ, ತಿಮ್ಮಣ್ಣ ಬಂದರೆ ಅದನ್ನು ಬಡಿದು ಸಾಯಿಸಿಯೇ ಹೊರಹಾಕ್ತಾನೆ, ಸುಮ್ಮನಿರು. ಅವನಿಗೆ ಮಾತ್ರ ಕರೆಯಲಾರೆ, ಇರು ಕಾಯೋಣ, ಮಳೆ ಕಡಿಮೆಯಾದರೆ ತಾನೇ ಹೊರಹೋಗ್ತದೆ’ ಅಂತ ಅಪ್ಪ ಖಡಾಖಂಡಿತವಾಗಿ ಹೇಳಿ, ಅಡುಗೆ ಮನೆಗೆ ನುಗ್ಗಿ ಅನ್ನ ಸಾರಿನ ಪಾತ್ರೆಯನ್ನೂ ಜೊತೆಗೆ ಎಲ್ಲರ ತಟ್ಟೆಗಳನ್ನೂ ಹೊರಕೋಣೆಗೆ ತಂದರು, ದೋಸೆಗೆ ರುಬ್ಬಿದ ಹಿಟ್ಟನ್ನು ಕಲ್ಲು ಗಡಗಡಿಸಿ ಪಾತ್ರೆಗೆ ತೆಗೆದರು, ಆದರೂ, ಆ ಕೆರೆ ಹಾವು ಹೊರಹೋಗುವ ಸೂಚನೆಯನ್ನೇ ಕೊಡದೇ ಅಲ್ಲೇ ಇನ್ನಷ್ಟು ಮುದ್ದೆಯಾಗಿ ಮಲಗಿತ್ತು.

ದೋಸೆ ಪಾತ್ರೆಯನ್ನೂ ಹೊರತಂದು ಮುಚ್ಚಿಡುತ್ತ ಅಪ್ಪ, ‘ಅಡುಗೆ ಮನೆಯ ಬಾಗಿಲು ಹಾಕಿಕೊಂಡು ಉಂಡು ನಿಶ್ಚಿಂತೆಯಿಂದ ಮಲಗಿ, ಬೆಳಗಾಗುವುದರೊಳಗೆ ಅದು ತಾನಾಗೇ ಬಚ್ಚಲಿನ ರಂಧ‌್ರದಿಂದಲೋ ಅಡುಗೆ ಮನೆ ಕಿಟಕಿಯಿಂದ ಹೋಗಿರ್ತದೆ’ ಅಂದರು. ಹೊರಕೋಣೆಯಲ್ಲೇ ಉಂಡು ಕಟಾಂಜನದ ಚೌಕದಲ್ಲೇ ತೂರಿಸಿ ಕೈತೊಳೆದೆವು. ಹಾಸಿದ ಹಾಸಿಗೆಯಲ್ಲಿ ಎಲ್ಲಿ ತಂಪು ಹತ್ತಿದರೂ ಹಾವೆ ಎಂಬಷ್ಟು ಭಯವಾಗುತ್ತಿತ್ತು. ನನ್ನ ಕನಸಿನಲ್ಲೂ ಕೆರೆಹಾವಿನ ಮೈಯ ಚಿಕ್ಕಿಗಳೇ ಬಂದು ಹೆದರಿಸಿದವು. ಇಡೀ ರಾತ್ರೆ ಸುರಿದ ಮಳೆ ಬೆಳಗಿನ ಜಾವ ನಿಂತಿತ್ತು. ತೊಳೆದಿಟ್ಟ ಪಾತ್ರೆಯಂತೆ ನೆಲ ಫ‌ಳ ಫ‌ಳ ಹೊಳೆಯುತ್ತಿತ್ತು. ಮೊದಲ ದಿನ ಅಜ್ಜಿ ಕಟ್ಟಿ ನಿಲ್ಲಿಸಿದ ಬಸಲೆಯ ಚಪ್ಪರ‌ ಭೂಮಿಗೆ ಮಲಗಿತ್ತು, ಅಮ್ಮ ಹಸನು ಮಾಡಿದ ಬೆಂಡೆ ಹೀರೆ ಹಾಗಲದ ಓಳಿಗಳಲ್ಲಿ ಬೀಜ ಮೊಳಕೆಯೊಡೆದಿತ್ತು. ಇವೆಲ್ಲ ನಿರುಕಿಸುತ್ತ ಮೆಲ್ಲಗೆ ಹೊರಕಟ್ಟೆಗೆ ಬಂದು ನಿಂತು ಮನೆಯೆದಿರು ಬೇಲಿಯಲ್ಲರಳಿದ ಹಳದಿ ಹೂಗಳನ್ನು ನೋಡುತ್ತಿದ್ದ ನನಗೆ ಕೆರೆಹಾವೊಂದು ಬೇಲಿ ಅಂಚಿನಿಂದ ಸರಸರನೆ‌ ಹರಿದುಹೋಗಿದ್ದು ಕಣ್ಣಿಗೆ ಬಿದ್ದು ಎದೆ ಧ‌ಸ್ಸಕ್ಕೆಂದಿತು.

ಬೆಳಕು ಹರಿದಾಗ ಅಮ್ಮ ಅಡುಗೆ ಮನೆಯ ಬಾಗಿಲು ತೆರೆದು ಕೆರೆ ಹಾವು ಹೊರಹೋದ ಸುದ್ದಿ ಕೊಟ್ಟಳು. ಪ್ರಸಾರ ಮುಗಿದು ರಾತ್ರಿಯಿಡೀ ಗೊರಗೊರ ಸ್ವರ ಹೊರಡಿಸಿದ ರೆಡಿಯೋ ಸೆಲ್ ಡೌನ್‌ ಆಗಿ ಅಲ್ಲೇ ಬಂದಾಗಿತ್ತು.

-ಸುನಂದಾ ಕಡಮೆ

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಅಗತ್ಯಕ್ಕೆ ತಕ್ಕಂತೆ ಶೈಕ್ಷಣಿಕ ಚಟುವಟಿಕೆ: ಸಚಿವ ಸುರೇಶ್‌ ಕುಮಾರ್

ಅಗತ್ಯಕ್ಕೆ ತಕ್ಕಂತೆ ಶೈಕ್ಷಣಿಕ ಚಟುವಟಿಕೆ: ಸಚಿವ ಸುರೇಶ್‌ ಕುಮಾರ್

ಎರಡು ವರ್ಷಗಳಲ್ಲಿ ಹತ್ತು ಲಕ್ಷ ಮನೆ ನಿರ್ಮಾಣ: ವಿ.ಸೋಮಣ್ಣ

ಎರಡು ವರ್ಷಗಳಲ್ಲಿ ಹತ್ತು ಲಕ್ಷ ಮನೆ ನಿರ್ಮಾಣ: ವಿ.ಸೋಮಣ್ಣ

ಸದ್ಯದ ಪರಿಸ್ಥಿತಿಯಲ್ಲಿ ರಾಜಕಾರಣ ಸರಿಯಲ್ಲ: ಅಶೋಕ್‌

ಸದ್ಯದ ಪರಿಸ್ಥಿತಿಯಲ್ಲಿ ರಾಜಕಾರಣ ಸರಿಯಲ್ಲ: ಅಶೋಕ್‌

ದೇಶದ ದುಸ್ಥಿತಿಗೆ ಕೇಂದ್ರದ ದುರಾಡಳಿತ ಕಾರಣ: ಡಿಕೆಶಿ

ದೇಶದ ದುಸ್ಥಿತಿಗೆ ಕೇಂದ್ರದ ದುರಾಡಳಿತ ಕಾರಣ: ಡಿಕೆಶಿ

ಸತೀಶ ಜಾರಕಿಹೊಳಿ ಹೇಳಿಕೆ ಶೇಖ್‌ ಮಹಮ್ಮದರ ಲೆಕ್ಕ: ಬೊಮ್ಮಾಯಿ

ಸತೀಶ ಜಾರಕಿಹೊಳಿ ಹೇಳಿಕೆ ಶೇಖ್‌ ಮಹಮ್ಮದರ ಲೆಕ್ಕ: ಬೊಮ್ಮಾಯಿ

ಗ್ರಾಮೀಣ ಭಾಗದಲ್ಲೂ ಕ್ವಾರಂಟೈನ್‌ ವ್ಯವಸ್ಥೆ: ಡಾ.ಕೆ.ಸುಧಾಕರ್‌

ಗ್ರಾಮೀಣ ಭಾಗದಲ್ಲೂ ಕ್ವಾರಂಟೈನ್‌ ವ್ಯವಸ್ಥೆ: ಡಾ.ಕೆ.ಸುಧಾಕರ್‌

ಧಾರವಾಡ: 2 ಕೋವಿಡ್ ಪಾಸಿಟಿವ್ ಪ್ರಕರಣ ಪತ್ತೆ

ಧಾರವಾಡ: 2 ಕೋವಿಡ್-19 ಪಾಸಿಟಿವ್ ಪ್ರಕರಣ ಪತ್ತೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

jagada-swasthya

ಮತ್ತೆ ಮರಳಲಿ ಜಗದ ಸ್ವಾಸ್ಥ್ಯ

ಹಾವೇರಿಯ ಹೊಕ್ಕುಳ ಬಳ್ಳಿ ಪಾಟೀಲ ಪುಟ್ಟಪ್ಪ  ಸ್ಮತಿ

ಹಾವೇರಿಯ ಹೊಕ್ಕುಳ ಬಳ್ಳಿ ಪಾಟೀಲ ಪುಟ್ಟಪ್ಪ ಸ್ಮತಿ

Suryana-neralu

ಸೂರ್ಯನ ನೆರಳು

ಚಿತ್ರೋತ್ಸವದಲ್ಲಿ ಮೌನದ ಮಾತು

ಚಿತ್ರೋತ್ಸವದಲ್ಲಿ ಮೌನದ ಮಾತು

ಕತೆ: ಸಹಯಾತ್ರಿ

ಕತೆ: ಸಹಯಾತ್ರಿ

MUST WATCH

udayavani youtube

COVID-19 : ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ Homeopathy Medicine | Udayavani

udayavani youtube

Preserving the heritage -World Famous Udupi Mattugulla Documentary by Udayavani

udayavani youtube

Mattu ಗದ್ದೆಯಲ್ಲಿ ಕೃಷಿಯ ಆಟಕ್ಕಿಳಿದ Football ಆಟಗಾರ Yashodara

udayavani youtube

ಪಶುಸಂಗೋಪನೆಯಲ್ಲಿ ಯಶಸ್ವಿಯಾದ Uttam Agro Industries Poultry Farming Success Story

udayavani youtube

ಈ ಮನೆಯಲ್ಲಿದೆ ಬೀದಿನಾಯಿಗಳಿಗೆ ಪ್ರೀತಿಯ ಆಸರೆ | Udayvani

ಹೊಸ ಸೇರ್ಪಡೆ

Sleep-Fusion

ಇನ್‌ಲ್ಯಾಂಡ್‌ ಲೆಟರ್‌: ಪ್ರಯಾಣದಲ್ಲಿ ಕನಸಿನ ಸಂಭಾಷಣೆಯಲ್ಲಿ

ಅಗತ್ಯಕ್ಕೆ ತಕ್ಕಂತೆ ಶೈಕ್ಷಣಿಕ ಚಟುವಟಿಕೆ: ಸಚಿವ ಸುರೇಶ್‌ ಕುಮಾರ್

ಅಗತ್ಯಕ್ಕೆ ತಕ್ಕಂತೆ ಶೈಕ್ಷಣಿಕ ಚಟುವಟಿಕೆ: ಸಚಿವ ಸುರೇಶ್‌ ಕುಮಾರ್

ಎರಡು ವರ್ಷಗಳಲ್ಲಿ ಹತ್ತು ಲಕ್ಷ ಮನೆ ನಿರ್ಮಾಣ: ವಿ.ಸೋಮಣ್ಣ

ಎರಡು ವರ್ಷಗಳಲ್ಲಿ ಹತ್ತು ಲಕ್ಷ ಮನೆ ನಿರ್ಮಾಣ: ವಿ.ಸೋಮಣ್ಣ

ಡ್ರಾಪ್ ಬಾಕ್ಸ್‌ : ಹೆಡ್‌ಫೋನ್‌ಗಿಂತ ಒಳ್ಳೆಯ ಗೆಳೆಯನಿಲ್ಲ

ಡ್ರಾಪ್ ಬಾಕ್ಸ್‌ : ಹೆಡ್‌ಫೋನ್‌ಗಿಂತ ಒಳ್ಳೆಯ ಗೆಳೆಯನಿಲ್ಲ

ಮನೋರಂಜನೆ ಅಸ್ತ್ರವಾದ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ

ನಾನು ನೋಡಿದಂತೆ ಸಿನೆಮಾ : ಮನೋರಂಜನೆ ಅಸ್ತ್ರವಾದ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.