ಅಲೋಕ್‌ ಕುಮಾರನ ಮೀಟೂ ವೃತ್ತಾಂತ!


Team Udayavani, Mar 3, 2019, 12:30 AM IST

v-71.jpg

ನಾನು ಅಲೋಕ್‌ ಕುಮಾರ್‌ ಶರ್ಮಾ ! ನಿಮಗೆಲ್ಲ ಗೊತ್ತಿರೋ ಹಾಗೆ ನಾನೊಬ್ಬ ಪ್ರಖ್ಯಾತ ಸಿನಿಮಾ ನಿರ್ದೇಶಕ ಹಾಗೂ ನಟ. ಹಿಂದಿಯ ಜೊತೆಗೆ ದಕ್ಷಿಣ ಭಾರತದ ಐದಾರು ಭಾಷೆಗಳಲ್ಲಿ 30ಕ್ಕೂ ಹೆಚ್ಚು ಸಿನಿಮಾ ಮಾಡಿದ್ದೀನಿ. ಸಿನಿಮಾ ನನ್ನ ಉಸಿರು, ಪ್ರಾಣ, ಬದುಕು ಹೀಗೆ ನನ್ನ ಅಸ್ತಿತ್ವದ ಇನ್ನೊಂದು ಹೆಸರೇ ಸಿನಿಮಾ. ಸೂರು ಕಿತ್ತುಹೋಗಿ ಮಳೆ ಸುರೀತಿದ್ದ ಕನ್ನಡ ಶಾಲೆಯ ಗೋಡೆ ಮೇಲೆ ನಾನು ಭೂತಗನ್ನಡಿ ಇಟ್ಟು ಸಿನಿಮಾ ಬಿಟ್ಟು ತೋರಿಸಿದ್ದೋನು, ಬಯೋಸ್ಕೋಪಲ್ಲಿ ವಡ್ಡರ ನಾಗಮ್ಮನ್ನ  ನೋಡಕ್ಕೋಸ್ಕರ ಮನೆಯಿಂದ ಅಮ್ಮನ ಚಿಲ್ರೆ ದುಡ್ಡು ಹಾರಿಸ್ಕೊಂಡ್‌ ಹೋಗಿ ಕಳ್ಳ ಅನಿಸಿಕೊಂಡಿದ್ದೋನು, ಯಾವ ಮೇಡಂಗೂ ಕಚ್ಚೆ ಕಟ್ಟದೆ ಸ್ಕೂಲ್‌ಗೆ ಚಕ್ಕರ್‌ ಹೊಡೆದು ನಂಜುಂಡಪ್ಪನ ಟೆಂಟಲ್ಲಿ ತೂರಿ ಪೋಲಿ ಪಟಾಲಂ ಜೊತೆ ಗುಡ್ಡೆ ಕಡ್ಲೆಕಾಯ್‌ ತಿಂತಾ ಬೀಡಿ ಸೇದೋರ ಮಧ್ಯೆ ವಿಶಿಲ್‌ ಹಾಕ್ಕೊಂಡು ಸಿನಿಮಾ ನೋಡ್ತಿದ್ದೋನು. ಸಿನಿಮಾ ಅಂದ್ರೆ ನಂಗೆ ಅಂತಹ ಹುಚ್ಚು, ತಿಕ್ಕ‌ಲು! ಇವತ್ತು ಈ ಲೆವೆಲ್‌ಗೆ ಬರೋಕೆ ನಾನು ತುಂಬಾ ಪಾಡು ಪಟ್ಟಿದೀನಿ. ಲೈಟ್‌ಬಾಯ್‌ ಆಗಿ ಕತ್ತಲ ರೂಮಿನ ನೆರಳು-ಬೆಳಕಿನಾಟ ನೋಡಿದೀನಿ, ಮೇಕಪ್‌ ಮ್ಯಾನ್‌ ಆಗಿ ಹಲವರ ಮುಖವಾಡಗಳಡಿಯ ನಿಜಬಣ್ಣಗಳನ್ನು ಕಂಡು ಅಸಹ್ಯ ಪಟ್ಟಿದೀನಿ. ಅಸಿಸ್ಟೆಂಟ್‌ ಅನ್ನೋ ಹೆಸರಲ್ಲಿ ಜೀತ ಮಾಡಿದ್ದೀನಿ, ಆ ಕಾಲದ ಖ್ಯಾತ ನಿರ್ದೇಶಕರ ಬಕೆಟ್‌ ಹಿಡಿಯೋ ಎಲ್ಲ ಸೇವೆ ಮಾಡಿದ್ದೀನಿ. ಹೀಗೆ ನಾನು ಎಲ್ಲಾ ತರದ ಮಜಲುಗಳನ್ನು ದಾಟಿ ಬಂದೋನು. ಭರತವರ್ಷ ನನ್ನ ಹಿಟ್‌ ಚಿತ್ರ. ಆಮೇಲೆ ನಾನು ಹಿಂದೆ ತಿರುಗಿ ನೋಡಿದ್ದೇ ಇಲ್ಲ. ಈಗಂತೂ ಭರತವರ್ಷ-ಪಾರ್ಟ್‌ 2 ಹಿಟ್‌ ಆದ್ಮೇಲೆ ನಾನು ಸಹಸ್ರಕೋಟಿ ವೀರ. ನಾನು ಸಿನಿಮಾ ಮಾಡ್ತೀನಿ ಅಂದ್ರೆ ಪ್ರಡ್ನೂಸರ್ ಕ್ಯೂನಲ್ಲಿ  ನಿಂತ್ಕೊತಾರೆ, ಹೀರೋಯಿನ್‌ಗಳು ನಾ ಮುಂದು ತಾ ಮುಂದು ಅಂತ ಮುಗಿಬೀಳ್ತಾರೆ. ಈಗ ನನ್‌ ಹತ್ರ ಹೆಂಡ್ತಿ, ಮಕ್ಕಳು, ಆಸ್ತಿ, ಕಾರು, ಪ್ಲಾಟು ಹೀಗೆ ಐಶಾರಾಮಿ ಬದುಕಿನ ಸಕಲ ಸಂಪತ್ತೂ ಇದೆ. ಈ ವೈಭೋಗವನ್ನೆಲ್ಲ ಅಸಹ್ಯವಾಗುವಷ್ಟು, ವಾಕರಿಕೆ ಬರುವಷ್ಟು ಯಥೇತ್ಛವಾಗಿ ಅನುಭವಿಸಿದ್ದಾಗಿದೆ. ಇಂಥ ಕೀರ್ತಿಯ ಉತ್ತುಂಗ ದಲ್ಲಿರುವಾಗ ಅವನಿ ನನ್ನ ಚಾರಿತ್ರ್ಯನ ಛಿದ್ರ ಮಾಡಕ್ಕೆ ಹೊರಟಿದ್ದಾಳೆ. ಮೀಟೂ ಹೆಸರಿನಲ್ಲಿ  ನನ್ನ ತೇಜೋವಧೆ ಮಾಡಕ್ಕೆ ಅವಮಾನದ ಅಭಿಯಾನ ಶುರು ಮಾಡಿದ್ದಾಳೆ.  ನನ್ನ ಹೆಂಡತಿ, ಮಕ್ಕಳು, ನನ್ನ ಕೋಟ್ಯಂತರ ಅಭಿಮಾನಿಗಳು ನನ್ನ ಬಗ್ಗೆ ಏನು ತಿಳಿದುಕೊಳ್ಳಬೇಕು? ಇವತ್ತು ಮಧ್ಯಾಹ್ನ ಟಿವಿಲಿ ನನ್ನ ವಿರುದ್ಧ ಅವಳು ಲೈಂಗಿಕ ಕಿರುಕುಳದ ಆರೋಪ ಮಾಡಿದ್ಲಂತೆ. ಅದನ್ನ ಕೇಳಿಯೇ ನನಗೆ ಶಾಕ್‌ ಆಯ್ತು. ಸೆಕ್ರೆಟರಿ ರೋಶಿನಿ ಅದರ ವೀಡಿಯೋ ಕ್ಲಿಪ್‌ ವಾಟ್ಸಾಪ್‌ನಲ್ಲಿ ಕಳಿಸಿದು. ಅದನ್ನು ನೋಡಿದಾಗಿನಿಂದ ನನ್ನ ನೆನಪಿನಿಂದ ಮಾಸಿ ಹೋಗಿದ್ದ ಅವನಿ ಮತ್ತೆ ವಿಜೃಂಬಿಸೋಕೆ ಶುರು ಮಾಡಿದ್ದಾಳೆ.

ಹೌದು! ಕೆಲ ವರ್ಷಗಳ ಹಿಂದೆ ಅವನಿ ನನ್ನ ಮನಸ್ಸಿನ ಕ್ಯಾನವಾಸಿನ ತುಂಬಾ ವಿಜೃಂಬಿಸಿದ್ದಳು. ನನ್ನ ಸ್ನಾಯುಗಳನ್ನೇ ಬಿಲ್ಲಾಗಿಸಿ ನರಗಳನ್ನೇ ಅದಕ್ಕೆ ಕಟ್ಟಿ  ತನ್ನ ಸಮ್ಮೊàಹಕ ಬಾಣವನ್ನು ನನ್ನೆದೆಗೆ ಹೂಡಿದ್ದಳು. ನನಗೆ ಇದ್ದ ಒಂದೇ ಸಿನಿಮಾ ಪ್ರಪಂಚದಿಂದ ನನ್ನ ಹೊರತಂದು ಪ್ರೀತಿಯ ಸಿಂಚನಗೈದಿದ್ದಳು. ಭರತವರ್ಷ ಚಿತ್ರದ ಯಶಸ್ಸಿಗೆ ಅವಳ ಕಾರಣವೂ ಇದೆ. ಅವಳು ಮುಗ್ಧತೆ, ನಿಗೂಢತೆ, ಸ್ನಿಗ್ಧತೆ, ಪಾರದರ್ಶಕತೆ, ನಗ್ನತೆ ಹೀಗೆ ಸಂದರ್ಭಕ್ಕೆ ತಕ್ಕಂತೆ ತನ್ನ ದೇಹ ಸೌಂದರ್ಯವನ್ನು ವಿವಿಧ ಪಾತ್ರಗಳಲ್ಲಿ ಧುಮ್ಮಿಕ್ಕಿಸಿ ಎಲ್ಲ ವರ್ಗದ ಪ್ರೇಕ್ಷಕರನ್ನು ಹುಚ್ಚೆಬ್ಬಿಸುತ್ತಿದ್ದಳು. ಭರತವರ್ಷ, ರಾಗರತಿ, ಹರ್‌ ಕಿಸೀಕೋ ನಹಿ ಮಿಲ್ತಾ, ಪ್ಯಾರ್‌ ಕ ಧಾರಾ, ಏ ಜಿಂದಗೀ, ತೇರೇ ಮೇರೇ ಬೀಚ್‌ ಮೇ ಇವೆಲ್ಲ  ನನ್ನ ನಿರ್ದೇಶನದ ಚಿತ್ರಗಳು ಎನ್ನುವುದಕ್ಕಿಂತ ಅವನಿಯ ಸೆಳೆತಕ್ಕೆ ಓಡಿದ ಚಿತ್ರಗಳು ಎಂದರೇ ಹೆಚ್ಚು ಸೂಕ್ತ. ಅಥವಾ ನಮ್ಮಿಬ್ಬರ ಕಾಂಬಿನೇಶನ್‌ ಎಂದೇ ಓಡಿರಬಹುದು. ನಮ್ಮಿಬ್ಬರ ಬಗ್ಗೆ ಅಂತಹದ್ದೊಂದು ಕೆಮಿಸ್ಟ್ರಿ, ಬಯಾಲಜಿ, ಮಣ್ಣಾಂಗಟ್ಟಿ ಏನೇನೋ ಇದೆ ಎಂದು ಪೇಪರ್‌ನವರು ಬರೆಯುತ್ತಿದ್ದರು. ಆದರೆ, ನಮ್ಮಿಬ್ಬರ ಮಧ್ಯೆ ಇದ್ದದ್ದು ಒಂದು ಪ್ರಬಲವಾದ ಆಕರ್ಷಣೆ. ದಡದಲ್ಲಿ ಓಡಿಹೋಗುವವನನ್ನು ಅಟ್ಟಿಸಿಕೊಂಡು ಹೋಗಿ ಕೊಚ್ಚಿಹಾಕುವ  ಸುನಾಮಿಯಂತಹ ವೇಗ ಅವನಿಯಲ್ಲಿತ್ತು. ಅವಳೊಂದು ಮಾದಕ ಬ್ರಾಂಡ್‌. ನಾನು ಅವಳನ್ನು ಮಾರ್ಕೆಟ್‌ ಮಾಡುವ ಲೇಬಲ್‌ ಆಗಿ ಅವಳಿಗೆ ಅಂಟಿಕೊಂಡಿದ್ದೆ. 

ಇವತ್ತು ಅವನಿ ಹೇಳಿರುವುದನ್ನು ನೀವೇ ಕೇಳಿ. ನಾನು ಸೆಟ್‌ನಲ್ಲಿ ಅವಳನ್ನು ಪದೇ ಪದೇ ಸ್ಪರ್ಶಿಸುವ ಪ್ರಯತ್ನ ಮಾಡುತ್ತಿದ್ದೇನಂತೆ. ಕಾಮುಕ ಕಣ್ಣಿಂದ ನೋಡುತ್ತಿದ್ದೇನಂತೆ, ಅವಳನ್ನ ಅಗತ್ಯಕ್ಕಿಂತ ಹೆಚ್ಚು ತಬ್ಬಿಕೊಳ್ಳುತ್ತಿದ್ದೇನಂತೆ. ಬೇಕೆಂದೇ ಮುತ್ತಿಕ್ಕುವ ದೃಶ್ಯಗಳನ್ನು ತುರುಕುತ್ತಿದ್ದೇನಂತೆ. ನಿಜ ಇದೆಲ್ಲಾ ನಿಜವೇ! ಆದರೆ, ಇದ್ಯಾವುದೂ ಒತ್ತಾಯಪೂರ್ವಕವಾಗಿ ಮಾಡಿದ್ದಲ್ಲ. ಹೆಣ್ಣಿನ ಮಿಡಿತವನ್ನು ಅರಿಯುವ ಕಲೆ ನನಗೆ ಎಂದೋ ಕರಗತವಾಗಿತ್ತು. ಅವನಿ ನನ್ನ ಬೆರಳ ಸ್ಪರ್ಶಕ್ಕೆ ಹಾತೊರೆಯುತ್ತಿದ್ದಳು, ಹಿತವಾಗಿ ಸ್ಪಂದಿಸುತ್ತಿದ್ದಳು. ವಿದ್ಯುತ್‌ ಸಂಚಾರವಾದಂತೆ ಬೆವರುತ್ತಿದ್ದಳು. ತಬ್ಬಿಕೊಂಡಾಗ ಏದುಸಿರುಬಿಡುತ್ತ ನನ್ನ ಬಿಸಿಯಪ್ಪುಗೆಯಲ್ಲಿ ಕರಗಿ ಹೋಗುತ್ತಿದ್ದಳು. ತುಟಿಗೆ ಮುತ್ತಿಟ್ಟಾಗ ಅವಳೇ ನನ್ನ ತುಟಿಗಳನ್ನು  ಹೊಲೆದು ಬಿಡುತ್ತಿದ್ದಳು. ಅವಳ ಕಣ್ಣುಗಳಲ್ಲಿ ಅಗಾಧವಾಗಿ ತೃಷೆ ಇತ್ತು. ಅವುಗಳಿಂದ ಹೊರಟ ಪ್ರಖರ ಬೆಳಕು ಮಿಂಚಿನಂತೆ ಆವರಿಸಿ ಅಷ್ಟೇ ವೇಗವಾಗಿ ಕಪ್ಪು ರಂಧ್ರಗಳಾಗಿ ನನ್ನ ಸೆಳೆದುಕೊಳ್ಳುತ್ತಿತ್ತು. ಇವೆಲ್ಲ ಸತ್ಯಸ್ಯ ಸತ್ಯ ಆಗಿರುವಾಗ ಅವನಿ ಆತ್ಮವಂಚನೆ ಮಾಡಿಕೊಂಡು ಇದನ್ನೆಲ್ಲ ಲೈಂಗಿಕ ಶೋಷಣೆ ಎಂದು ಏಕೆ ಆರೋಪಿಸಿದಳು? ಅದೂ ಇಷ್ಟು ವರ್ಷಗಳ ನಂತರ ಎನ್ನುವುದು ಯೋಚಿಸಿದಷ್ಟೂ ನಿಗೂಢವಾಗುತ್ತಿದೆ.

ನಿಜವಾಗಿ ಹೇಳಬೇಕೆಂದರೆ ನಾನೇನೂ ಹದಿನಾರಾಣೆ ಸಾಚಾ ಅಲ್ಲ.  ಹಲವು ಸಿನಿಮಾ ನಿರ್ಮಾಪಕರು, ನಿರ್ದೇಶಕರು ತಮಗೆ ಬೇಕೆಂದ ಹೆಣ್ಣನ್ನು ಮಗ್ಗುಲಲ್ಲಿ ಮಲಗಿಸಿಕೊಂಡು ಅವಕಾಶ ಕೊಟ್ಟಿದ್ದಾರೆ. ಇಂತಹ ಹೆಣ್ಣುಗಳನ್ನು ಎಷ್ಟೋ ಸಾರಿ ತಲೆಹಿಡಿದು ತಂದಿದ್ದವನೇ ನಾನು ಎನ್ನುವುದು ಮೊದಲು ಪಾಪಪ್ರಜ್ಞೆಯ ವಿಷಯ ಎನಿಸಿದರೂ ಆಮೇಲಾಮೇಲೆ ಇದೆಲ್ಲ ಮಾಮೂಲು ಎನಿಸಿಬಿಟ್ಟಿತ್ತು. ಕಾಸ್ಟಿಂಗ್‌ ಕೌಚ್‌ ಎನ್ನುವುದೇ ಒಂದು ಆಧುನಿಕ ಫ್ಯಾಶನ್‌ ಎನ್ನುವಷ್ಟರ ಮಟ್ಟಿಗೆ ಅದಕ್ಕೆ ಎಲ್ಲಾ ಒಗ್ಗಿಹೋಗಿದ್ದರು. ಅದೇ ಗರಡಿಯಿಂದ ಬಂದ ನಾನು ತೀರಾ ಸಾಚಾ ಆಗುವುದಾದರೂ ಹೇಗೆ? ನಾನೂ ಸಾಕಷ್ಟು ಹೆಣ್ಣುಗಳ ಜೊತೆ ಪಳಗಿದ್ದೆ. ಹೆಣ್ಣುಗಳ ಸಹವಾಸ ಪಾರ್ಟಿಗೆ ಹೋಗಿ ಗುಂಡು ಹಾಕಿ ಊಟ ಮಾಡಿಕೊಂಡು ಬಂದಷ್ಟೇ ಸಲೀಸು ಎನ್ನುವಂತಾಗಿತ್ತು. ಆದರೆ, ನಾನು ಯಾರನ್ನೂ ಬಲವಂತ ಮಾಡಿದವನಲ್ಲ. ಶೋಷಣೆ ಮಾಡಿದವನಲ್ಲ. ಎಲ್ಲ ಕ್ರಿಯೆಗಳೂ ಪರಸ್ಪರ ಒಪ್ಪಿಗೆಯಿಂದಲೇ  ನಡೆದಿದ್ದಂತಹವುಗಳು. ಅದು ಆವನಿಗೆ ಗೊತ್ತಿತ್ತೋ ಗೊತ್ತಿರಲಿಲ್ಲವೋ, ನಾನಂತೂ ಆ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ, ಅವನಿ ಮೊದಲ ದಿನ ಸೆಟ್‌ಗೆ ಬಂದಾಗಲೇ ನನ್ನನ್ನು ಸೂಜಿಗಲ್ಲಿನಂತೆ ಸೆಳೆದಿದ್ದಳು. ಅವಳಿಗೆ ರಿಹರ್ಸಲ್‌ ಮಾಡಿಸುವಾಗಲೇ ಅವಳು ಮಾಮೂಲಿ ಎಲ್ಲಾ ಹೆಣ್ಣುಗಳಂತಲ್ಲ ಅನಿಸಿತ್ತು. ಅವಳಲ್ಲಿ ಏನೋ ಒಂದು ಚುಂಬಕ ಶಕ್ತಿಯಿತ್ತು. ಅವಳ ಮೈಮಾಟ, ನಗು, ನಕ್ಷತ್ರದಂತಹ ಕಣ್ಣುಗಳು  ರಕ್ತವನ್ನೆಲ್ಲ ಎದೆಗೆ ಪಂಪ್‌ ಮಾಡಿ ನನ್ನ ಸ್ಥಿಮಿತವನ್ನೇ ಅಲ್ಲೋಲ ಕಲ್ಲೋಲ ಮಾಡುತ್ತಿದ್ದವು. ಬೇಕೆಂದೇ ನಾನು ಅವನಿಗೆ ಕೆಲವು ಸೂಕ್ಷ್ಮಗಳನ್ನು, ನಟನೆಯನ್ನು ಹೇಳಿಕೊಡುವ ನೆಪದಲ್ಲಿ ಅವಳನ್ನು ಬಳಸುತ್ತಿದ್ದೆ, ಹತ್ತಿರ ಸೆಳೆದುಕೊಳ್ಳುತ್ತಿದ್ದೆ, ಅವಳ ಪರ್‌ಫ್ಯೂಮ್‌ನೊಂದಿಗೆ ಬೆರೆತ ಬೆವರ ವಾಸನೆಯನ್ನೂ ಆಘ್ರಾಣಿಸುತ್ತಿದ್ದೆ. ಅವಳನ್ನು ಸದಾ ಬಯಸುತ್ತಿದ್ದೆ. ಈ ಅತಿರೇಕ ಎಲ್ಲಿಗೆ ಹೋಯಿತೆಂದರೆ ಸಹ ನಟರು ಅವಳನ್ನು ಮುಟ್ಟಿದರೂ ಸಹಿಸದಂತಾಗುತ್ತಿತ್ತು. ಅವಳನ್ನು ಅಪ್ಪಿದರೆ ಮೈಮೇಲೆ ಮುಳ್ಳು ಗಳೇಳುತ್ತಿದ್ದವು. ಕೆಲವೊಮ್ಮೆ ತೀರಾ ಇರ್ರಿಟೇಟ್‌ ಆಗಿ ಶಾಟ್‌ ಓಕೆ ಮಾಡುವ ಮುಂಚೆಯೇ “ಕಟ್‌’ ಹೇಳಿ ಸಿಗರೇಟ್‌ ಹಿಡಿದು ಎದ್ದು ಹೋಗಿ ಬಿಡುತ್ತಿದ್ದೆ.

ಈ ನನ್ನ ಪೇಚಾಟ, ಒದ್ದಾಟ ಅವನಿಗೂ ಗೊತ್ತಿತ್ತು. ಅವಳೂ ನಾಯಕ ನಟರಿಂದ ಸಾಕಷ್ಟು ದೂರವೇ ಇರುತ್ತಿದ್ದಳು. ಎಷ್ಟು ಬೇಕೋ ಅಷ್ಟೇ ಎನ್ನುವಂತಿದ್ದಳು. ಕೆಲವೊಮ್ಮೆ ಹಲವು ಅಪ್ಪುಗೆಯ, ಚುಂಬನದ ದೃಶ್ಯಗಳು ಅವಳಿಗೂ ಮುಜುಗರ ತರುತ್ತಿದ್ದವು. ಒಂದು ದಿನ ಅವನಿ “”ಅಲೋಕ್‌, ನೀವು ಯಾವುದರಲ್ಲಿ ಕಮ್ಮಿ ಇದೀರಿ? ನೀವೇ ಯಾಕೆ ಹೀರೋ ಆಗಬಾರದು?” ಎಂದು  ತಲೆಗೂದಲ್ಲಿ ಬೆರಳಾಡಿಸುತ್ತ ಕೇಳಿದಳು. ನನಗೆ ರೋಮಾಂಚನವಾಯಿತು. ಅಲ್ಲಿಯವರೆಗೆ ಇಂತಹದ್ದೊಂದು ಯೋಚನೆಯೂ ನನ್ನ ತಲೆ ಹೊಕ್ಕಿರಲಿಲ್ಲ. ಆಕಸ್ಮಾತ್‌ ಯಾವುದೋ ಒಂದು ಕ್ಷಣದಲ್ಲಿ ಅನಿಸಿದ್ದರೂ ಅದು ಹಾಗೇ ನನ್ನ ತಲೆಯಾಚೆ ಹೊರಟುಹೋಗಿತ್ತು. ಆದರೆ, ಅವನಿ ನನ್ನಲ್ಲಿದ್ದ ಹೀರೋನನ್ನು ಈಚೆ ಎಳೆದು ನಿಲ್ಲಿಸಿದ್ದಳು. ನಾನು ಹೀರೋ ಆಗಲು ಒಪ್ಪಿಬಿಟ್ಟೆ. ನಿರ್ಮಾಪಕರೂ ಒಪ್ಪಿಬಿಟ್ಟರು. ರಾತ್ರೋರಾತ್ರಿ ಅಲೋಕ್‌ ಕುಮಾರ್‌ ಶರ್ಮ ಹೀರೋ ಕಮ್‌ ಡೈರೆಕ್ಟರ್‌ ಆಗಿ ಕೋಟ್ಯಂತರ ಅಭಿಮಾನಿಗಳನ್ನು  ಗಿಟ್ಟಿಸಿಕೊಂಡದ್ದು ನನ್ನ ಜೀವಿತದ ಮಹತ್‌ ಸಾಧನೆಯೋ ಪವಾಡವೋ ಇನ್ನೂ ನನಗೇ ಗೊತ್ತಿಲ್ಲ, ಆದರೆ, ಇದರ ಹಿಂದಿನ ಸ್ಫೂರ್ತಿ ಮಾತ್ರ ಅವನಿ ಎನ್ನುವುದನ್ನು ಎಂದೂ ಮರೆಯಲಾರೆ.

ಅವನಿ ನನ್ನ ಜೀವದ ಜೀವ ಆಗಿದ್ದಳು. ಅವಳನ್ನು ಬಿಟ್ಟು ಬದುಕೇ ಇಲ್ಲ ಎನ್ನುವಂತಾಗಿತ್ತು. ನಾವಿಬ್ಬರೂ ಒಟ್ಟಿಗೆ ಸುತ್ತುತ್ತಿ¨ªೆವು. ರೆಸ್ಟುರಾಗಳಲ್ಲಿ, ಪಬ್‌ಗಳಲ್ಲಿ, ಫ್ಯಾಂಟಸಿ ಪಾರ್ಕ್‌ಗಳಲ್ಲಿ, ಪಾರ್ಟಿಗಳಲ್ಲಿ ಮೋಜು ಮಾಡುತ್ತಿದ್ದೆವು. ಹೋದೆಡೆ ಬಂದೆಡೆ ಜನ, ಅಭಿಮಾನಿಗಳು ನಮ್ಮ ಸುತ್ತ ಮುತ್ತಿಕೊಳ್ಳುತ್ತಿದ್ದರು. ಅವರಿಂದ ತಪ್ಪಿಸಿಕೊಳ್ಳಲು ಏಕಾಂತ ಅರಸಿ  ರಾತ್ರೋರಾತ್ರಿ ಸಿಂಗಾಪೂರ್‌, ಆಸ್ಟ್ರೇಲಿಯಾ ಎಂದು ಹಾರಿ ಹೋಗುತ್ತಿದ್ದೆವು. ಎಲ್ಲ ನಿರ್ಬಂಧ, ಚೌಕಟ್ಟುಗಳ ಎಲ್ಲೆಗಳನ್ನು  ಉಲ್ಲಂಘಿಸಿದ್ದೆವು. ಪೇಪರ್‌, ಟ್ಯಾಬ್ಲಾಯ್ಡಗಳು, ಫಿಲಂ ಮ್ಯಾಗಜಿನ್‌ಗಳ ತುಂಬಾ ನಮ್ಮದೇ ಸುದ್ದಿ, ಚಿತ್ರ, ಗಾಸಿಪ್‌ಗ್ಳು ! ಇಂತಹ ಒಂದು ದಿನ ಪತ್ರಿಕಾಗೊಷ್ಠಿಯೊಂದರಲ್ಲಿ ಅವನಿ, “‘ನಾನು, ಅಲೋಕ್‌ ಸದ್ಯದಲ್ಲೇ ಮದುವೆ ಆಗುತ್ತೇವೆ” ಎಂದು ಹೇಳಿಬಿಟ್ಟಳು.

ಆವತ್ತು ರಾತ್ರಿ ನನಗೆ ನಿದ್ದೆ ಕಣ್ಣತ್ತ ಸುಳಿಯಲೇ ಇಲ್ಲ. ಹಳೆಯ ನೆನಪುಗಳೆಲ್ಲ ಫ್ಲಾಶ್‌ಬ್ಯಾಕ್‌ನಂತೆ ಬಿಚ್ಚಿಕೊಳ್ಳುತ್ತ ಹೋದವು. ಇದನ್ನು ನಿಮ್ಮೊಂದಿಗೆ ಹೇಳಲು ನನಗೆ ಸಂಕೋಚ, ಮುಜಗರ ಎನಿಸಿದರೂ ನಾನು ಹೇಳಲೇಬೇಕಿದೆ. ನಾನು ಕುಗ್ರಾಮದಿಂದ ಮುಂಬೈನಂತಹ ನವರಂಗಿ ಶಹರಕ್ಕೆ ಬಂದ ಉದ್ದೇಶವೇ ಬೇರೆ ಇತ್ತು. ನನ್ನ ಸಿನಿಮಾ ಹುಚ್ಚು ಹವ್ಯಾಸದಿಂದ ಬಂದದ್ದಾಗಿರಲಿಲ್ಲ, ಅದು ರಕ್ತದಿಂದ ಬಂದದ್ದು ಎಂದು ನನಗೆ ಚಿಕ್ಕಂದಿನಲ್ಲೇ ತಿಳಿದು ಹೋಗಿತ್ತು. ಅಂದಿನ ಕಾಲದ ಪ್ರಖ್ಯಾತ ನಟ ತ್ರಿಲೋಕ್‌ ಕುಮಾರ್‌ ಶರ್ಮಾ ನಮ್ಮೂರಿನ ಆಜುಬಾಜಿನ ಸುತ್ತ ಶೂಟಿಂಗ್‌ಗೆ ಬಂದಾಗ ನಮ್ಮಮ್ಮನ ಪರಿಚಯವಾಗಿತ್ತು. ಎಕ್ಸ್‌ಟ್ರಾ ನಟಿಯಾಗಿದ್ದ ಅಮ್ಮ ಯಾವ ಹೀರೋಯಿನ್‌ಗೂ ಕಮ್ಮಿ ಇರಲಿಲ್ಲ. ಅಂತಹ ಅಪ್ರತಿಮ ಚೆಲುವೆ. ಇದೇ ತ್ರಿಲೋಕ್‌ ಕುಮಾರ ಅಮ್ಮನನ್ನು ಖ್ಯಾತ ಅಭಿನೇತ್ರಿ ಮಾಡುವುದಾಗಿ ಹೇಳಿ ಕೈಕೊಟ್ಟು ಹೋಗಿದ್ದ. ಆದರೆ, ಅಮ್ಮ ಅವನನ್ನು ಮನಸಾರೆ ಪ್ರೀತಿಸಿದ್ದಳು. ಅವನಿಗೆ ತನ್ನ ಸರ್ವಸ್ವವನ್ನೂ ಧಾರೆ ಎರೆದಿದ್ದಳು. ತಾನು ಮೋಸ ಹೋದ ಕೊರಗಲ್ಲೇ ಅವಳು ಇಹಲೋಕ ತ್ಯಜಿಸಿದ್ದಳು. ಸಾಯುವ ಮುಂಚೆ ನನ್ನ ಜನ್ಮರಹಸ್ಯವನ್ನು ಹೇಳಿ, “”ನಿಮ್ಮಪ್ಪನಲ್ಲಿಗೆ ಹೋಗು. ನಿನಗೊಂದು ಭವ್ಯವಾದ ಬದುಕು ಸಿಗುತ್ತದೆ” ಎಂದು ಹೇಳಿದ್ದಳು! ಅಮ್ಮನಿಗೆ ಆ ತ್ರಿಲೋಕ ಕುಮಾರನ ಮೇಲೆ ಅದೆಷ್ಟು ನಂಬಿಕೆಯಿತ್ತೋ? ಅಮ್ಮನ ಮಾತಿಗೆ ಕಟ್ಟುಬಿದ್ದು ಅಪ್ಪನನ್ನು ಹುಡುಕಿ ಮುಂಬೈಗೆ ಬಂದಿದ್ದೆ.

ಮುಂಬೈನಲ್ಲಿ ತ್ರಿಲೋಕ್‌ ಕುಮಾರ್‌ನನ್ನು ಹುಡುಕುವುದು ಅಂತಹ ಕಷ್ಟದ ಕೆಲಸವೇನಾಗಿರಲಿಲ್ಲ. ಒಂದು ಶೂಟಿಂಗ್‌ನಲ್ಲಿದ್ದಾಗ ಕಾಡಿಬೇಡಿ  ಕ್ಯಾರವಾನ್‌ ಒಳಗೆ ಹೋದೆ. ನಮ್ಮಮ್ಮನ ಪರಿಚಯ ಗುರುತು ಹೇಳಿ “ನಾನು ನಿಮ್ಮ ಮಗ’ ಅಂದೆ. ತ್ರಿಲೋಕ್‌ ಕುಮಾರ್‌ ಆನಂದದಿಂದ ಕಣ್ಣೀರು ತುಂಬಿಕೊಂಡು ನನ್ನನ್ನು “ಮಗನೇ’ ಎಂದು ಬಿಗಿದಪ್ಪುತ್ತಾರೆ ಎಂದು ಭ್ರಮೆಯಲ್ಲಿ¨ದ್ದೆ. ಆದರೆ, ಆ ಅಪ್ಪ ಎಂಬ ಮಹಾಶಯ, “”ನಿನ್‌ ತರ ಮಗ ಅಂತ ಹೇಳ್ಕೊಂಡು ದಿನಕ್ಕೆ ಹತ್ತು ಜನ ಬರ್ತಾರೆ. ಎಲನ್ನೂ ನನ್ನ ಮಕ್ಕಳು ಅಂತ ಮನೆ ಸೇರಿಸ್ಕೊಳಕ್ಕಾಗುತ್ತಾ? ಅರ್ಜೆಂಟ್‌ ಆದಾಗ ಆಚೆ ಕಡೆನೂ ಟಾಯ್ಲೆಟ್‌ ಹುಡುಕ್ಕೊಂಡ್‌ ಹೋಗಲ್ವಾ? ಹಾಗೇ ಇದು. 

ಹೊರಗೆ ಮಾಡಿದ ಹೇಸಿಗೆನೆಲ್ಲಾ ನಂದು ಅಂತ ಮನೆಗೆ ತಂದಿಟ್ಕೊಳಕ್ಕಾಗುತ್ತಾ? ಜೆಸ್ಟ್‌ ಗೆಟ್‌ಔಟ್‌” ಎಂದು ಕೂಗಿದ್ದ. ನನ್ನ ಅಪ್ಪ ಅಂದೇ ಸತ್ತು ಹೋಗಿದ್ದ. ಅಂಥವನ ಮಗ ಅಂತ ಹೇಳ್ಕೊಳಕ್ಕೇ ನಾಚಿಕೆ ಅನಿಸಿಬಿಟ್ಟಿತ್ತು. ಅವನ ಮೇಲಿನ ಛಲದಿಂದ, ಅಮ್ಮನಿಗೆ ಮಾಡಿದ ಮೋಸಕ್ಕೆ ಸೇಡು ತೀರಿಸಿಕೊಳ್ಳಲಿಕ್ಕೆ  ಅವನ ಹೆಸರು, ಹಣ, ಖ್ಯಾತಿಯನ್ನೆಲ್ಲ  ಧಿಕ್ಕರಿಸಿ ನಾನು ಸಿನಿಮಾ ಜಗತ್ತಲ್ಲಿ ಎತ್ತರೆತ್ತರಕ್ಕೆ ಬೆಳೆಯುತ್ತ ಹೋದೆ. ಅವನ ಅವಕಾಶಗಳನ್ನೆಲ್ಲ ನನ್ನ ವರ್ಚಸ್ಸು ಪ್ರಭಾವದಿಂದ ಕಿತ್ತುಕೊಂಡು ಅವನನ್ನು ಮೂಲೆಗುಂಪು ಮಾಡಿದೆ.

ಈಗ ಆ ಅಪ್ಪ ಅನ್ನೋ ಮೃಗಕ್ಕೆ ಎದುರು ನಿಂತು ಕಪಾಳಕ್ಕೆ ಅಪ್ಪಳಿಸುವ ಒಂದು ಅವಕಾಶ ಸಿಕ್ಕಿತ್ತು. ಕೊನೆಗೊಂದು ಬಾರಿ ಅವನಿಗೆ ನಾನೆಷ್ಟು ಎತ್ತರಕ್ಕೆ ಬೆಳೆದಿದ್ದೇನೆ, ನೋಡು, ನಿನ್ನ ಹೆಸರು, ಹಣದ ಹಂಗೇ ಇಲ್ಲದೆ ನಿನ್‌ ಸಾಮ್ರಾಜ್ಯವನ್ನೇ ಹೇಗೆ ಧೂಳಿಪಟ ಮಾಡಿದ್ದೇನೆ ಎಂದು ತೋರಿಸಬೇಕಾದ ಸೇಡಿನ ಕಿಚ್ಚು ಬಾಕಿ ಇತ್ತು. ಅವನ ದುರಹಂಕಾರ, ಸೊಕ್ಕನ್ನು ಮುರಿಯಬೇಕಿತ್ತು. ಅದಕ್ಕೆ ಅವನಿಯೊಂದಿಗಿನ ಮದುವೆ ಪ್ರಸ್ತಾಪ ಒಂದು ಅವಕಾಶ ಒದಗಿಸಿತ್ತು. ಅವನ ಮನೆಗೆ ಹೋದೆ. ತ್ರಿಲೋಕ್‌ ಕುಮಾರ ಸಾಕಷ್ಟು ಮೆತ್ತಗಾಗಿದ್ದ. ಜರ್ಝರಿತನಾಗಿದ್ದ. ಅವನು ಅಮ್ಮನಿಗೆ ಮಾಡಿದ ಮೋಸ, ನನಗೆ ಮಾಡಿದ ಅವಮಾನ ಎಲ್ಲವನ್ನೂ ಎತ್ತರದ ಧ್ವನಿಯಲ್ಲಿ ಒದರಿ ಅವನ ಜನ್ಮ ಜಾಲಾಡಿದೆ. ತ್ರಿಲೋಕ್‌ ಕುಮಾರ ತುಟಿಪಿಟಕ್ಕೆನ್ನಲಿಲ್ಲ. ಆಶ್ಚರ್ಯವೆನ್ನುವಂತೆ ಎಲ್ಲವನ್ನೂ ಮೌನವಾಗಿ ಸಹಿಸಿದ. ಕೊನೆಗೆ ಅವನಿ ಜೊತೆ ನನ್ನ ಮದ್ವೆ ವಿಷಯವನ್ನು ಹೆಮ್ಮೆಯಿಂದ ಹೇಳಿದೆ. 

ತ್ರಿಲೋಕ್‌ ಕುಮಾರ್‌ ಕಣ್ಣಲ್ಲಿ ನೀರು ತುಂಬಿಕೊಂಡ. “”ನನ್ನನ್ನ ಕ್ಷಮಿಸು. ನಾನು ದೊಡ್‌ ತಪ್‌ ಮಾಡಿºಟ್ಟೆ. ನಿನ್ನನ್ನ ಈಗ ನಾನು ಮಗ ಅಂತ ಸ್ವೀಕರಿಸೋಕೆ ತಯಾರಿದೀನಿ” ಎಂದು ಅಲವತ್ತುಕೊಂಡ.

 ಅದು ಈ ಜನ್ಮದಲ್ಲಿ ಸಾಧ್ಯವಿಲ್ಲ, ನನ್ನ ತಾಯಿಗೆ ಮೋಸ ಮಾಡಿದ ದ್ರೋಹಿ ನೀನು. ಅವಳ ಬದುಕನ್ನ ನರಕ ಮಾಡಿಬಿಟ್ಟೆ. ಒಂದು ಡಿಎನ್‌ಎ ಟೆಸ್ಟಿಂದ ನೀನೇ ನನ್ನ ಅಪ್ಪ ಅಂತ ಪ್ರೂವ್‌ ಮಾಡºಹುದಿತ್ತು. ನಿನ್ನ ಕೋಟ್ಯಂತರ ರೂಪಾಯಿ ಆಸ್ತಿಗೆ ಹಕ್ಕುದಾರನಾಗಬಹುದಿತ್ತು. ಆದರೆ, ನಂಗೆ ನಿನ್‌ ಹೆಸರು ಹೇಳ್ಳೋಕೆ ಅಸಹ್ಯ ಅನಿಸುತ್ತೆ. “ಗುಡ್‌ ಬೈ’ ಎಂದು ವೀರಾವೇಷದಿಂದ ನನ್ನ ಮನಸ್ಸಲ್ಲಿದ್ದ ವಿಷವನ್ನೆಲ್ಲ ಕಕ್ಕಿ ಅಲ್ಲಿಂದ ಹೊರಟೆ. ಅಲೋಕ್‌ ಕುಮಾರ್‌ ಒಂದ್ನಿಮಿಷ ಎಂದು ತಡೆದ. ನಾನು ನಿಂತೆ. ಅವನು ನನ್ನ ಹತ್ತಿರ ಬಂದ. ಎದುರು ನಿಂತು ನನ್ನ ಕಣ್ಣುಗಳನ್ನೇ ದಿಟ್ಟಿಸಿ ನೋಡಿದ. ಅವು ಯಾಕೋ ತೀವ್ರ ಪ್ರಖರವಾಗಿವೆ ಎನಿಸಿ ನಾನು ದೃಷ್ಟಿ ತಪ್ಪಿಸುವ ಪ್ರಯತ್ನ ಮಾಡಿದೆ. “”ನಿನ್ನ ಹಠ, ಸ್ವಾಭಿಮಾನ, ಛಲ ಎಲ್ಲ ನನಗೆ ಇಷ್ಟ ಆಯ್ತು. ನೀನು ನನ್ನ ಅಸ್ತಿತ್ವದ ಕಣವೇ ಆಗಬಾರದು ಎಂದು ಎಲ್ಲ ಧಿಕ್ಕರಿಸಿ ಹೊರಟಿದೀಯ. ತುಂಬಾ ಸಂತೋಷ. ಆದ್ರೆ ನೀನು ನನ್ನ ರಕ್ತ, ಮಾಂಸವನ್ನೇ ಹೊತ್ತಿದೀಯ. ಅದನ್ನೂ ನೀನು ಪ್ರಜ್ಞಾಪೂರ್ವಕವಾಗಿ ಧಿಕ್ಕರಿಸಬಹುದು. ಆದರೆ ವಂಶವಾಹಿನಿಯಲ್ಲಿ ಬಂದ ನನ್ನ ಗುಣಗಳನ್ನ ನೀನು ಧಿಕ್ಕರಿಸೋಕೆ ಆಗ್ಲೆà ಇಲ್ಲ. ನಿನ್ನ ಆದರ್ಶ, ಸಂಸ್ಕಾರಗಳು ನನ್ನ ದೌರ್ಬಲ್ಯಗಳನ್ನು ಮೆಟ್ಟಿ ನಿಲ್ಲುವಷ್ಟು ಗಟ್ಟಿಯಾಗಲೇ ಇಲ್ಲ. ನಾನ್‌ ಜೀವನದುದ್ದಕ್ಕೂ ಮಾಡಿಕೊಂಡು ಬಂದ ತಪ್ಪುಗಳನ್ನೇ ನೀನೂ ಮಾಡಿದೀಯ! ನನ್ನಂತೆ ನೀನೂ ಎಷ್ಟೋ ಜನ ಹೆಣ್‌ಮಕ್ಕಳ ಜೊತೆಗಿದ್ದೀಯ. ಆ ಎಷ್ಟೋ ಜನ ಹೆಣ್ಣುಮಕ್ಕಳಲ್ಲಿ ನನ್ನನ್ನ ಪ್ರೀತಿಸಿದ, ನನಗೋಸ್ಕರ ಜೀವ ಸವೆಸಿದ ನಿಮ್ಮಮ್ಮನ ತರದ ಒಬ್ಬಳು ಇರ್ಬಹುದಲ್ವಾ? ಅವರೆಲ್ಲರ ನಿರಾಸೆ, ಹತಾಶೆಯ ನಿಟ್ಟುಸಿರಿನ ಮೇಲೆ ನೀನು ಅವನೀನ ಮದ್ವೆ ಆಗ್ತಿದೀಯ ! ಒಂದಿನ ನನ್ನ ಹೆಂಡ್ತಿ, ಮಕ್ಕಳು ನನ್ನಿಂದ ದೂರ ಆದ ಹಾಗೆ ಅವನೀನೂ ನಿನ್ನಿಂದ ದೂರ ಆಗ್ಬಹುದು. ನೀನು ಹೇಗೆ ನನಗಿಂತ ಬೇರೆಯವನಾಗ್ತಿàಯ? ನೀನು ನನ್ನ ಪಡಿಯಚ್ಚೇ” ಎಂದು ಗಹಿಗಹಿಸಿ ನಕ್ಕ.

ಆ ಕ್ಷಣ ನಾನು ಮೇಲೆದ್ದು ಸಿಡಿದು ಆರ್ಭಟಿಸಿದ ರಾಕೆಟ್‌ನ ಅವಶೇಷಗಳ ಬೂದಿಯ ಕಣಗಳಾಗಿ ಧರೆಗಿಳಿದು ಹೋದೆ. ತ್ರಿಲೋಕ್‌ ಕುಮಾರ ನನಗೆ ಜೀವನದ ಅತ್ಯಂತ ಭಯಂಕರವಾದ ಸತ್ಯದ ದರ್ಶನ ಮಾಡಿಸಿದ್ದ. ನಾನು ಅವನ ಮುಖವನ್ನೂ ಮತ್ತೆ ನೋಡಲಾಗದೆ ಓಡಿಬಂದೆ. ಅವತ್ತು ರಾತ್ರಿಯೆಲ್ಲ ನಾನೂ ತ್ರಿಲೋಕ ಕುಮಾರನಂತೆ ಕಾಡುಮೃಗವಾಗಿಬಿಟ್ಟೆನೆಲ್ಲ ಎಂದು ಒದ್ದಾಡಿದೆ. ನನ್ನ ಹಾಸಿಗೆಯ ಮೇಲೆ ಸುಖೀಸಿದ ಒಂದೊಂದು ಹೆಣ್ಣೂ ಮುಳ್ಳಾಗಿ ನನ್ನ ಮೈತುಂಬಾ ನಾಟಿಕೊಳ್ಳುತ್ತಿರುವಂತೆ ಅತೀವ ಯಾತನೆ ಪಟ್ಟೆ. ಅವರನ್ನೆಲ್ಲ ನನ್ನ ಸ್ಮತಿಪಟಲದಲ್ಲಿ ನೆನೆಸಿಕೊಳ್ಳುವ ಪ್ರಯತ್ನ ಮಾಡಿದೆ. ಕತ್ತಲ ಕೋಣೆಯ ಮಬ್ಬು ನೆನಪುಗಳ ಮಧ್ಯೆ ಒಂದು ಮುಖ ಪದೇ ಪದೇ ತೇಲಿಬಂತು. ಅದು ಸಾನ್ವಿ ಎಂಬ ಹುಡುಗಿಯ ಮುಖ.

ಸಾನ್ವಿ ಕೆಲ ವರ್ಷಗಳ ಹಿಂದೆ ಶೂಟಿಂಗ್‌ ನೋಡುವ ನೆಪದಿಂದ ಸೆಟ್‌ಗಳ ಹತ್ರ ಸುಳಿದಾಡ್ತಿದು. ಹೇಗೋ ಒಳಗೆ ಬಂದ ಅವಳು  ರಾತ್ರಿ, ಹಗಲು ಸೆಟ್ಟಲ್ಲೇ ಇರೋಕೆ ಶುರು ಮಾಡುದ್ಲು. ಅವಳ ಜೊತೆ ಸಲಿಗೆ ಬೆಳೀತು. ಆ ಸಲಿಗೆಯಿಂದ ಅವಳನ್ನು ಬೇರೆಯವರಂತೆ ಬಳಸಿಕೊಂಡು ಬಿಟ್ಟೆ. ಆಮೇಲೆ ಅವಳು ಮತ್ತೆ ನನ್ನ ಕಣ್ಣಿಗೆ ಬೀಳಲೇ ಇಲ್ಲ. ಒಂದಿನ ಸಾನ್ವಿ ಅವನಿಯ ಮೇಕಪ್‌ ಅಸಿಸ್ಟೆಂಟ್‌ ಅಂತ ಅವಳ ಜೊತೇಲಿ ಬಂದಾಗ ನಂಗೆ ಶಾಕ್‌ ಆಯ್ತು. ಅವಳು ಏನ್‌ ಗಲಾಟೆ ಮಾಡ್ತಾಳ್ಳೋ? ಅವನಿಗೆ ನನ್‌ ವರ್ತನೆ ಬಗ್ಗೆ ಹೇಳ್ತಾಳ್ಳೋ ಅಂತ ಗಾಬರಿ ಆಗಿದ್ದೆ. ಆದ್ರೆ ಅವಳು ಯಾವತ್ತೂ ತುಟಿಪಿಟಕ್‌ ಅನ್ನಲಿಲ್ಲ, ಇಡೀ ಶೂಟಿಂಗ್‌ ಪೂರಾ ನನ್ನನ್ನೇ ನೋಡ್ತಾ ಕೂತಿರಿದ್ಲು. ನಾನು ಅವನಿ ತೀರಾ ಹತ್ರ ಆದ ಮೇಲೆ ಅವಳು ಮತ್ತೆ ಕಣ್ಮರೆ ಆದ್ಲು. ಅವಳು ಎಲ್ಲಿ ಹೋದ್ಲೋ ಗೊತ್ತಾಗ್ಲಿಲ್ಲ, ನಂಗೆ ಅದು ಮುಖ್ಯವಾದ ವಿಷಯವೇನೂ ಆಗಿರಲಿಲ್ಲ. ಒಂದು ಡಿಸ್‌ಕಂಫ‌ರ್ಟ್‌ನಿಂದ ತಪ್ಪಿಸ್ಕೊಂಡೆ ಅಂತ ನಿರಾಳವಾಗಿºಟ್ಟೆ. ಈಗ ಸಾನ್ವಿ ಪದೇ ಪದೇ ನನ್ನ ಕಣ್ಮುಂದೆ ಬರಿ¤ದಾಳೆ. ಅವಳ ನೋಟದಲ್ಲಿದ್ದ ಪ್ರೀತಿ, ಆರಾಧನೆಯ ಭಾವ ಈಗ ನಂಗೆ ಅರ್ಥ ಆಗ್ತಿದೆ. ಕ್ಷಣ ಏನೋ ನಿರ್ಧರಿಸಿ ಹಾಗೇ ಮಲಗಿಬಿಟ್ಟೆ.

ಆ ನಂತರ ನಾನು ಸಾನ್ವಿಯನ್ನು ಹುಚ್ಚನಂತೆ  ಹುಡುಕಿ ಮದುವೆ ಆದೆ ! ಅಂತೂ ನಾನು ತ್ರಿಲೋಕ ಕುಮಾರನೆಂಬ ನೀಚನ ಮಗನಾಗಲೇ ಇಲ್ಲ ಅನ್ನೋ ಬ್ರಹ್ಮಾಂಡ ತೃಪ್ತಿಯಿಂದ ಮುಂಬೈ ಬಿಟ್ಟು ಬೆಂಗಳೂರಿಗೆ ಬಂದು ಬಿಟ್ಟೆ. ಆಮೇಲೆ ಅವನಿ ಎರಡು ಮದುವೆ ಆಗಿದ್ದಾಳೆ. ಒಂದು ರಿಲೇಶನ್‌ ಬ್ರೇಕ್‌ ಮಾಡಿದಾಳೆ ಅಂತ ಸುದ್ದಿ ಬಂದಿತ್ತು. ನನ್ನ ಸೆಟ್‌ನಲ್ಲೇ ಅವಳು ಕೋರಿಯಾಗ್ರಫ‌ರ್‌ ಬ್ರಿಜೇಶ್‌ ಜೊತೆಗಿದ್ದ ಫೋಟೋ ಸಹ ನನಗೆ ಯಾರೋ ಕಳಿಸಿದ್ದರು. ಈಗ ಅವನಿ ನನ್‌ ವಿರುದ್ಧ ಮೀಟೂ ಅಭಿಯಾನ ಶುರು ಮಾಡಿದ್ದಾಳೆ. 

ತುರುವೇಕೆರೆ ಪ್ರಸಾದ್‌ 

ಟಾಪ್ ನ್ಯೂಸ್

1—eewqewq

World’s largest ಅನಕೊಂಡ ಅನಾ ಜೂಲಿಯಾ ಸಾವು; ಆಗಿದ್ದೇನು?

Politics: ಅಮಿತ್‌ ಶಾ ಓರ್ವ ಗೂಂಡಾ, ರೌಡಿ: ಯತೀಂದ್ರ 

Politics: ಅಮಿತ್‌ ಶಾ ಓರ್ವ ಗೂಂಡಾ, ರೌಡಿ: ಯತೀಂದ್ರ 

1-asdasdad

Pralhad Joshi ವಿರುದ್ದ ಸಿಡಿದೆದ್ದ ದಿಂಗಾಲೇಶ್ವರ ಶ್ರಿಗಳಿಗೆ ವೀರಶೈವ ಮಹಾಸಭಾ ಬೆಂಬಲ

NIA (2)

Rameshwaram Cafe case: ಎನ್‌ಐಎಯಿಂದ ಸಹ ಸಂಚುಕೋರನ ಬಂಧನ

1-qqwewqe

Congress ಹಾಸನ, ಮಂಡ್ಯದಲ್ಲೂ ಗೆಲ್ಲಲಿದೆ : ಸಚಿವ ಎಂ.ಬಿ.ಪಾಟೀಲ್

1-eewqe

BJP MP ಜಿಗಜಿಣಗಿ ಮಾಡಿದ ಅಪಮಾನವನ್ನು ಸಮಾಜದ ಮನೆ ಮನೆಗೆ ತಿಳಿಸುತ್ತೇವೆ: ರಾಠೋಡ

9

6.69 ಕೋಟಿ ರೂ. ಖೋಟಾನೋಟು ವಶಕ್ಕೆ: ಕೇಂದ್ರ ಏಜೆನ್ಸಿ ತನಖೆ ಆರಂಭ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

World Theatre Day: ರಂಗದಿಂದಷ್ಟು ದೂರ…

World Theatre Day: ರಂಗದಿಂದಷ್ಟು ದೂರ…

Bhuvaneshwari hegde: ಓದುಗರ ಅಭಿರುಚಿಯ ಮಟ್ಟ ಹೆಚ್ಚಿಸುವ  ಹೊಣೆ ಬರಹಗಾರರ ಮೇಲಿದೆ…

Bhuvaneshwari hegde: ಓದುಗರ ಅಭಿರುಚಿಯ ಮಟ್ಟ ಹೆಚ್ಚಿಸುವ  ಹೊಣೆ ಬರಹಗಾರರ ಮೇಲಿದೆ…

Girish Kasaravalli: ತೆರೆ ಸರಿಯುವ ಮುನ್ನ…!

Girish Kasaravalli: ತೆರೆ ಸರಿಯುವ ಮುನ್ನ…!

Holi celebration: ಹೋಳಿ ಎಂಬ ಬಣ್ಣದೋಕುಳಿ!

Holi celebration: ಹೋಳಿ ಎಂಬ ಬಣ್ಣದೋಕುಳಿ!

13

World Sparrow Day: ಮತ್ತೆ ಮನೆಗೆ ಮರಳಲಿ ಗುಬ್ಬಚ್ಚಿ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Raksha Ramaiah: ಯಾರಿಗೆ ಟಿಕೆಟ್‌ ಕೊಟ್ಟರೂ ಅಭ್ಯರ್ಥಿ ಪರ ಕೆಲಸ ಮಾಡ್ತೇವೆ: ರಕ್ಷಾ ರಾಮಯ್ಯ

Raksha Ramaiah: ಯಾರಿಗೆ ಟಿಕೆಟ್‌ ಕೊಟ್ಟರೂ ಅಭ್ಯರ್ಥಿ ಪರ ಕೆಲಸ ಮಾಡ್ತೇವೆ; ರಕ್ಷಾ ರಾಮಯ್ಯ

1—eewqewq

World’s largest ಅನಕೊಂಡ ಅನಾ ಜೂಲಿಯಾ ಸಾವು; ಆಗಿದ್ದೇನು?

Politics: ಅಮಿತ್‌ ಶಾ ಓರ್ವ ಗೂಂಡಾ, ರೌಡಿ: ಯತೀಂದ್ರ 

Politics: ಅಮಿತ್‌ ಶಾ ಓರ್ವ ಗೂಂಡಾ, ರೌಡಿ: ಯತೀಂದ್ರ 

1-asdasdad

Pralhad Joshi ವಿರುದ್ದ ಸಿಡಿದೆದ್ದ ದಿಂಗಾಲೇಶ್ವರ ಶ್ರಿಗಳಿಗೆ ವೀರಶೈವ ಮಹಾಸಭಾ ಬೆಂಬಲ

Online Bitcoin Gambling Enterprises: An Overview to Betting with Cryptocurrency

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.