Udayavni Special

ಮದ್ಯಪಾನ ವಿರೋಧಿ ಹೋರಾಟದ ಸಾಗರಕ್ಕೆ ಸಾವಿರಾರು ನದಿಗಳು 


Team Udayavani, Feb 3, 2019, 12:30 AM IST

x-9.jpg

ಉತ್ತರಕರ್ನಾಟಕದ ವಿವಿಧ ಜಿಲ್ಲೆಗಳ ಸಾವಿರಕ್ಕೂ ಹೆಚ್ಚು ಮಹಿಳೆಯರು ಜನವರಿ 19ರಂದು ಚಿತ್ರದುರ್ಗದಿಂದ ಬೆಂಗಳೂರಿಗೆ ಪಾದಯಾತ್ರೆ ಮಾಡಿದರು. ಮಹಾತ್ಮ ಗಾಂಧಿ ಪುಣ್ಯಸ್ಮರಣೆ-ಜನವರಿ 30ರಂದು ರಾಜ್ಯದ ಬೇರೆಬೇರೆ ಜಿಲ್ಲೆಗಳಿಂದ ಬಂದವರೂ ಅವರೊಂದಿಗೆ ಬೆಂಗಳೂರಿನಲ್ಲಿ ಸೇರಿ, ನಾಲ್ಕು ಸಾವಿರ ಮಹಿಳೆಯರು ವಿಧಾನಸೌಧದತ್ತ ನಡೆದರು. ಗ್ರಾಮೀಣ ಕೂಲಿಕಾರ್ಮಿಕರ ಸಂಘ ಹಾಗೂ ರಾಜ್ಯ ಮಹಿಳಾ ಒಕ್ಕೂಟಗಳ ಜೊತೆಗೆ ಹತ್ತಾರು ಜನಪರ ಸಂಘಟನೆಗಳು ಸೇರಿ ರೂಪಿಸಿಕೊಂಡ “ಮದ್ಯ ನಿಷೇಧ ಆಂದೋಲನ ಕರ್ನಾಟಕ’ ವೇದಿಕೆಯಡಿಯಲ್ಲಿ ಹನ್ನೊಂದು ದಿನಗಳ ಈ ಕಾಲ್ನಡಿಗೆಯನ್ನು ಆಯೋಜಿಸಲಾಗಿತ್ತು. ಈ ಹೆಣ್ಣುಮಕ್ಕಳದು ಒಂದೇ ಒಂದು ಬೇಡಿಕೆ- ರಾಜ್ಯದಲ್ಲಿ ಮದ್ಯ ನಿಷೇಧಿಸಿ. ಗಂಡಸರ ಕುಡಿತದ ಚಟದಿಂದ ಬೀದಿಗೆ ಬಿದ್ದ ಕುಟುಂಬವನ್ನು ರಕ್ಷಿಸಿಕೊಳ್ಳಲು ಹೋರಾಟಕ್ಕೆ ತೊಡಗಿದವರು ಇವರು. ತುಮಕೂರಿನಲ್ಲಿ ಈ ಮಹಿಳೆಯರೊಂದಿಗೆ ಹತ್ತು ಮೈಲು ನಡೆಯುವಾಗ ಲೇಖಕಿ ಕಂಡ ಚಿತ್ರಗಳು ಇಲ್ಲಿವೆ…

ಗುಳೇದಗುಡ್ಡ ತಾಲೂಕಿನ ಖಾಜಿಬೂದಿಹಾಳದ ಸರೋಜಾ ನಡೆದೇ ನಡೆದಳು. ಒಂದೆರಡು ದಿನದಿಂದ ಅಲ್ಲ, ಹನ್ನೊಂದು ದಿನದಿಂದ. ಅದರಲ್ಲೇನು ಹೆಚ್ಚುಗಾರಿಕೆ, ಯಾರೂ ನಡೆಯುವುದೇ ಇಲ್ಲವೇ ಎಂದಿರಾ. ಹೌದು, ವಿಶೇಷವಿದೆ, ಏಕೆಂದರೆ, ಸರೋಜಾ ಆರು ತಿಂಗಳ ಚೊಚ್ಚಿಲ ಬಸುರಿ. ಮತ್ತೆ ಒಂದೆರಡು ಕಿ.ಮೀ. ಅಲ್ಲ,  ಬರೋಬ್ಬರಿ ಇನ್ನೂರು ಕಿ.ಮೀ. ನಡೆದಳು! ಚಿತ್ರದುರ್ಗದಿಂದ ಶುರುಮಾಡಿ ಬೆಂಗಳೂರಿನ ವಿಧಾನಸೌಧ ಮುಟ್ಟುವ ಸಂಕಲ್ಪದೊಂದಿಗೆ ಮದ್ಯ ನಿಷೇಧ ಆಂದೋಲನದ ಕಾಲ್ನಡಿಗೆಗೆ ತನ್ನ ಹೆಜ್ಜೆಗಳ ಜೋಡಿಸಿದಳು. ಕೈಯೊಳಗಿನ ಮೂಳೆಗಳನ್ನು ಎಣಿಸುವಷ್ಟು ತೆಳ್ಳಗಿರುವ ಅವಳು ನೋಡಲು ಬಸುರಿಯ ಹಾಗೆ ಕಾಣುವುದಿಲ್ಲ. ಒಡಲಿನಲ್ಲಿ ಆರು ತಿಂಗಳ ಜೀವವನ್ನಿರಿಸಿಕೊಂಡ ದೇಹ ಇನ್ನು ಹೆಜ್ಜೆ ಕಿತ್ತಿಡಲಾರೆ ಎಂಬಷ್ಟು ದಣಿವನ್ನು ತೋರುತ್ತಿದ್ದರೂ ಅವಳು ಸಾವಿರ ಸಂಖ್ಯೆಯಲ್ಲಿ ಜೊತೆಗಿದ್ದ ತಾಯಂದಿರ ಜೊತೆ ಸಾಗಿದಳು. ಸರೋಜಾಳಿಗೆ ತಂದೆ ಎಂದರೆ ಕುಡಿದುಬಂದು ರಾತ್ರಿ ಅವ್ವನಿಗೆ ಹೊಡೆಯುತ್ತಿದ್ದ ಒರಟು ಕೈಗಳು ಮತ್ತು ಬೈಗುಳಗಳ ಹೊರತಾಗಿ ಬೇರೇನೂ ನೆನಪಾಗುವುದಿಲ್ಲ. ಸರಿಯಾಗಿ ಶಾಲೆಯನ್ನೂ ಕಲಿಯಲಾಗದ ಈಕೆ ಅವ್ವನ ಜೊತೆಗೆ ಕೂಲಿನಾಲಿಯಲ್ಲಿ ಹೊಟ್ಟೆಪಾಡು ಕಟ್ಟಿಕೊಂಡವಳು. ಬದುಕಿನ ಬೆಂಕಿಯಲ್ಲಿ ನಲುಗಿದ ದೇಹಕ್ಕೆ ಈ ಬಿಸಿಲೇನು ಮಾಡೀತು ಎಂಬಂತೆ ಮುಖದಲ್ಲಿ ಮಂದಹಾಸವನ್ನು ಮಿನುಗಿಸಲು ಪ್ರಯತ್ನಪಡುತ್ತ, “ಇಲ್ಲ, ಸುಸ್ತಾಗಿಲ್ಲ’ ಎನ್ನುತ್ತಿದ್ದಳು. ಕುಡಿತವೆಂಬ ಸುಡುಬೆಂಕಿ ತನ್ನ ಮನೆಯೊಳಗಿನ, ಮನೆ ಹೊರಗಿನ ನೂರಾರು ಬದುಕುಗಳನ್ನು ಕರಕಲಾಗಿಸಿದ ದುರಂತವನ್ನು ಕಂಡುಂಡ ಅವಳು ಈ ಹೋರಾಟ ದಲ್ಲಿ ತನ್ನ ಹೆಜ್ಜೆಯೂ ಇರಲೇಬೇಕೆಂದು ಪಣತೊಟ್ಟು ನಡೆದಳು. 

ಸಹಸ್ರಾರು ಸಂಖ್ಯೆಯ ಈ ಎಲ್ಲ ಹೆಣ್ಣುಮಕ್ಕಳು ಪ್ರತೀದಿನ ನೆತ್ತಿಸುಡುವ ಬಿಸಿಲು ಲೆಕ್ಕಿಸದೆ, ರಕ್ತ ಒಸರುವ ಬಿರಿದ ಹಿಮ್ಮಡಿಯಲ್ಲಿಯೇ ಹದಿನೈದು-ಇಪ್ಪತ್ತು ಕಿ.ಮೀ. ನಡೆದರು; ದಾರಿಮಧ್ಯದಲ್ಲಿ ಎಲ್ಲೋ ಶಾಲೆ, ದೇವಸ್ಥಾನ, ದರ್ಗಾಗಳ ಬಯಲಿನಲ್ಲಿ ಚಳಿ ಎನ್ನದೆ ಮಲಗಿದರು; ಮತ್ತೆಲ್ಲೋ ಬಯಲಿನಲ್ಲಿ ದೇಹಭಾದೆ ತೀರಿಸಿಕೊಂಡರು; ಊಟತಿಂಡಿಗೆ ತಲೆಕೆಡಿಸಿಕೊಳ್ಳದೆ, ಸಿಕ್ಕಿದ್ದು, ಕೊಟ್ಟಿದ್ದು ತಿಂದರು. ಇವರಲ್ಲಿ ಅರ್ಧದಷ್ಟು ಮಹಿಳೆಯರು ಅರವತ್ತು ದಾಟಿದವರು. ಎಪ್ಪತ್ತೆ„ದು ಸಮೀಪಿಸಿದ ಹಿರಿಜೀವಗಳೂ ಸಾಕಷ್ಟಿದ್ದರು. ಮೈಮುರಿದು ದುಡಿದರೂ, ಹೊಟ್ಟೆತುಂಬ ಉಣ್ಣಲಾಗದೆ ಮೂಳೆಚಕ್ಕಳವಾದ ಬಡ ಹೆಣ್ಣುಮಕ್ಕಳಿವರು. ಮನೆಯ ಗಂಡಸರ ಕುಡಿತದ ಚಟಕ್ಕೆ ನೇರ ಬಲಿಪಶುವಾದವರು. ಇಷ್ಟು ವರ್ಷ ಕುಡಿತವೆಂಬ ವ್ಯಸನಮಾರಿಯ ಅಟ್ಟಹಾಸದ ದೌರ್ಜನ್ಯವನ್ನು ಎದುರಿಸಿ, ನಲುಗಿದ ಈ ಜೀವಗಳಿಗೆ ಎಷ್ಟು ಸಾಕಾಗಿಬಿಟ್ಟಿದೆ ಎಂದರೆ ಈಗ ಅಕ್ಷರಶಃ ಬೀದಿಗಿಳಿದಿದ್ದಾರೆ. 

“”ನನ್ನ ನಾಕ ಮಂದಿ ಗಣಮಕ್ಕಳಾಗ ಇಬ್ಬರು ಹಿಂಗ ಕುಡಿದುಕುಡಿದು ಸತ್ರು. ಗಂಡನೂ ಹಂಗೇ ಹ್ವಾದ. ಐವತ್‌ ಅರವತ್‌ ವರ್ಸದಿಂದ ಇದೇ ನೋಡಿ, ಅನುಭವಿ ಜಲ್ಮ ಸಾಕಾಗಿಬಿಟ್ಟದರಿ. ಅದಕ್ಕ ನನಗ ತ್ರಾಸ ಆದರ ಆಗವಲ್ಲದ್ಯಾಕ, ಮಂದಿ ಜೋಡಿ ಹೋರಾಟ ಮಾಡಬಕು ಅಂತ ಬಂದೀನ್ರಿ… ಒಂದೇನಾರ ಕೆಲಸ ಆಗಬಕು ಅಂದ್ರ ನಮ್ಮಂಥ ಮಂದಿ ತ್ರಾಸು ತೊಗಳಾಕಬೇಕ್ರಿ” ಎಂದ ಬಾಗಲಕೋಟೆಯ ಕರಡಿಯಿಂದ ಬಂದಿದ್ದ ಎಪ್ಪತ್ತರ ನೀಲವ್ವಳ‌ ಮುಖದ ಮೇಲಿನ ಸುಕ್ಕುಗಳು ವರ್ಷ ಗಟ್ಟಲೆ ಒಳಗೇ ತಾಳಿಕೊಂಡಿದ್ದನ್ನು ಈಗ ಹೊರಹಾಕುವಂತಿದ್ದವು.  

ಇದೇನೂ ಹೊಸತಲ್ಲ…
ಮದ್ಯನಿಷೇಧ ಮಾಡಿ ಎಂಬ ಮಹಿಳೆಯರ ಪ್ರತಿಭಟನೆ ಇವತ್ತಿನದಲ್ಲ. ಕಳೆದ ಮೂರು ವರ್ಷಗಳಿಂದ ಎಲ್ಲ ಪ್ರಮುಖ ರಾಜಕೀಯ ಪಕ್ಷಗಳೆದುರು ಬೇಡಿಕೆ ಇಡುತ್ತಲೇ ಇದ್ದಾರೆ. ಕಳೆದ ವರ್ಷ ಮದ್ಯ ನಿಷೇಧ ಆಂದೋಲನವು ರಾಯಚೂರಿನಲ್ಲಿ ಫೆಬ್ರವರಿಯಿಂದ ಮೇ ತಿಂಗಳವರೆಗೆ 71 ದಿನಗಳ ಕಾಲ ನಡೆಸಿದ್ದು, ಪ್ರತಿಭಟನೆಯಲ್ಲಿ ಸಾವಿರಾರು ಮಹಿಳೆಯರು ಭಾಗವಹಿಸಿದ್ದರು. ಅದು ವಿಧಾನಸಭೆ ಚುನಾವಣೆಗಿಂತ ಸ್ವಲ್ಪ ಮೊದಲು. ಆದರೆ, ಯಾವುದೇ ಪಕ್ಷಕ್ಕೆ ಅಥವಾ ಅಭ್ಯರ್ಥಿಗಳಿಗೆ ಇದು ತುಸುವಾದರೂ ತಟ್ಟಲಿಲ್ಲ, ಯಾರೂ ಇವರ ಬೇಡಿಕೆಗಳನ್ನು ಆಲಿಸಲಿಲ್ಲ. ಬಹುತೇಕ ಮಹಿಳೆಯರು ಗಂಡನನ್ನು ಕಳೆದುಕೊಂಡವರು, ಕೆಲವರಿಗೆ ಒಂದೆ ರಡು ಎಕರೆ ಹೊಲ ಇದ್ದರೂ, ಮಳೆ ಬಂದರೆ ಮಾತ್ರ ಬೆಳೆ. ಈ ಎಲ್ಲರಿಗೂ ಕೂಲಿ ಮಾಡಿದರೆ ಮಾತ್ರ ಒಂದು ಹೊತ್ತು ಊಟ. ನರೆಗಾ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಸಿಕ್ಕರೆ ಅದೇ ದೊಡ್ಡದು. 

ಒಂದೆಕರೆ ಹೊಲದಲ್ಲಿ ಮಳೆಯಾದರೆ ಬೆಳೆ ತೆಗೆಯುವ ಮಾನ್ವಿಯ ಹಳ್ಳಿಯೊಂದರ ವೆಂಕಮ್ಮನಿಗೆ ಗಂಡ ಕುಡಿತಕ್ಕೆ ಬಲಿಯಾಗಿ ಸತ್ತ ನಂತರ ರಟ್ಟೆ ಬಲವೊಂದೇ ಜೊತೆಗಿದ್ದಿದ್ದು. “”ಅಂವ ಸತ್ತಾಗ ಮಗಾ ಇನ್ನಾ ಸಣ್ಣಾವ, ಕೂಲಿನಾಲಿ ಮಾಡ್ಕೊàತ ಸಾಕೆª, ಈಗ ಅವೂ° ಕುಡಿಲಾಕಹತ್ಯಾನ. ನಾನು, ಸೊಸಿ ಕೂಲಿಕೆಲಸ ಮಾಡಬಕು, ಹಿಟ್ಟು ಕಾಸಬಕು. ಅಂವ ದುಡಿದದ್ದೆಲ್ಲ ಬಾಟಿಗಿ ಸುರಿತಾನ. ಸೊಸಿಗಿ ಹೊಡಿತಾನ. ಬಿಡಿಸಲಾಕ ಹ್ವಾದ್ರ ನನಗೂ ಬೀಳ್ತಾವು. ಹಳಾಗ ಸಾರಾಯಿ ಅಂಗಿಗೆ ಲೈಸೆನ್ಸ್‌ ಯಾಕ ಕೊಡಬೇಕ್ರಿ? ಇದೂ ಒಂದು ಬಾಳೇ ಏನ್ರಿ. ಸಾಕಂದ್ರ ಸಾಕಾಗೇದ. ಅದ್ಕ ಈಗ ಬೀದಿಗಿ ಬಂದ್‌ ನಿಂತೀವ್ರಿ” ಎಂದು ರೊಚ್ಚಿನಿಂದ ಹೇಳುವ ವೆಂಕಮ್ಮ ಕಳೆದ ವರ್ಷ 71 ದಿನ ನಡೆದ ಪ್ರತಿಭಟನೆಯಲ್ಲಿ ಐದು ದಿನ ಕುಳಿತಿದ್ದವಳು.

ಮಹಿಳೆಯರಿಗೆ ಒಂದಾದ ನಂತರ ಒಂದು ಭಾಗ್ಯಗ ಳನ್ನು ಎಲ್ಲ ಸರ್ಕಾರಗಳೂ ದಯಪಾಲಿಸುತ್ತಲೇ ಇವೆ. ಆದರೆ, ಗಂಡಸರ ಕುಡಿತದಿಂದ ಮನೆ ಒಳಗಿನ ಬದುಕು ಮೂರಾಬಟ್ಟೆಯಾಗುವ ದುರಂತ ಮಾತ್ರ ಯಾವ ಪಕ್ಷದವರಿಗೂ ಒಂದು ವಿಷಯವೆಂದೇ ಅನ್ನಿಸುತ್ತಿಲ್ಲ. “”ಗಂಡಸ್ರು ಕುಡದು ಕುಡದು ಸಣ್ಣವಯಸ್ಸಿನಾಗ ಸತ್‌ಹೋಗತಾರ. ಹಳಾಗ ಎಲ್ಲಾ ಸತ್ಯಾನಾಶ ಆಗೇದ. ನಮಗ್ಯಾವ ಭಾಗ್ಯನೂ ಬ್ಯಾಡ್ರಿ, ಅಕ್ಕಿನೂ ಬ್ಯಾಡ, ಏನೂ ಬ್ಯಾಡ, ಅದೆಲ್ಲ ನೀವೇ ಇಟ್ಟುಗೋರಿ.  ಈ ಶೆರೆ ಅಂಗಡಿಗೋಳ ಬಂದ್‌ ಮಾಡಿಸ್ರಿ ಸಾಕು” ದೇವದುರ್ಗದ ಬಳಿಯ ಹಳ್ಳಿಯಿಂದ ಬಂದ ಶಿವಮ್ಮನ ಖಡಕ್‌ ಮಾತು.  

ಮದ್ಯಮಾರಾಟದಿಂದ ಬರುವ ಆದಾಯ 18 ಸಾವಿರ ಕೋಟಿ. ಸರ್ಕಾರದ 2 ಲಕ್ಷ ಕೋಟಿಗೂ ಹೆಚ್ಚು ಇರುವ ಒಟ್ಟು ಬಜೆಟ್‌ಗೆ ಹೋಲಿಸಿದರೆ ಇದು ಏನೂ ಅಲ್ಲ. ಆದರೆ, ಮದ್ಯಮಾರಾಟದ ಆದಾಯವೇ ಪ್ರಮುಖ ಮೂಲ ಎಂದು ಎಲ್ಲ ಪಕ್ಷಗಳು ಜನರನ್ನು ನಂಬಿಸುತ್ತಿವೆ. ಕುಡಿತದಿಂದ ಆರೋಗ್ಯ ಮತ್ತು ಸಮಾಜದ ಮೇಲಾಗುತ್ತಿರುವ ಹಾನಿಯನ್ನು ಲೆಕ್ಕ ಹಾಕಿದರೆ, ಇದರ ದುಪ್ಪಟ್ಟು ಹಣ ಹಾನಿಯನ್ನು ಸರಿದೂಗಿಸಲು ಖರ್ಚಾಗುತ್ತಿದೆ. ನಾಲ್ಕು ವರ್ಷಗಳ ಹಿಂದೆ ಐದು ಲಕ್ಷಕ್ಕೂ ಹೆಚ್ಚು ಮದ್ಯವ್ಯಸನಿಗಳನ್ನು ಸಮೀಕ್ಷೆ ಮಾಡಿದ ನಿಮ್ಹಾನ್ಸ್‌ ಅಧ್ಯಯನ ವರದಿಯು ಮಹಿಳೆಯರ ಮೇಲಾಗುವ ಶೇ. 70ರಷ್ಟು ದೌರ್ಜನ್ಯಗಳಿಗೆ ಹಾಗೂ ಶೇ. 80ರಷ್ಟು ಕೌಟುಂಬಿಕ ಹಿಂಸೆಯ ಪ್ರಕರಣಗಳಿಗೆ ಮದ್ಯಪಾನವೇ ಕಾರಣ ಎನ್ನುತ್ತದೆ.    

ಅಬಕಾರಿಯಿಂದ ಲಾಭ ! 
ಸರ್ಕಾರದ ವಿವಿಧ ಭಾಗ್ಯಗಳ ಹೊರೆಯನ್ನು ಭರಿಸಲು ಅಬಕಾರಿ ಸುಂಕ ಇಲ್ಲದೆ ಹೇಗೆ ಎನ್ನುವುದು ಒಂದು ಪಕ್ಷಾತೀತ ವಾದ. ವ್ಯಸನಮೂಲದ ಆದಾಯವನ್ನು ವಿವಿಧ ಬಗೆಯ ಕಲ್ಯಾಣಯೋಜನೆಗಳಲ್ಲಿ ತೊಡಗಿಸುತ್ತೇವೆ ಎನ್ನುವುದೇ ಒಂದು ವೈರುಧ್ಯ. ಕಳೆದ ಎಂಟು ವರ್ಷಗಳಲ್ಲಿ ಅಬಕಾರಿ ಆದಾಯವು 9 ಕೋಟಿಯಿಂದ 18 ಸಾವಿರ ಕೋಟಿಗೆ ಏರಿದೆ ಎಂದರೆ ಎಲ್ಲ ಸರ್ಕಾರಗಳು ಮದ್ಯಮಾರಾಟವನ್ನು ದುಪ್ಪಟ್ಟಾಗಿಸಲು ಎಷ್ಟು ಶ್ರಮಿಸಿವೆ ಎಂದರ್ಥವಾಗುತ್ತದೆ. ಹೀಗಿರುವಾಗ ಸಂಪೂರ್ಣ ಮದ್ಯನಿಷೇಧ ಎನ್ನುವುದು ವ್ಯಾವಹಾರಿಕವಾಗಿ ಎಂದೂ ಜಾರಿಗೊಳ್ಳಲಾಗದ ಬೇಡಿಕೆಯಲ್ಲವೆ? ಯಾವ ರಾಜಕೀಯ ಪಕ್ಷದವರೂ ಈಡೇರಿಸುತ್ತೇವೆ ಎಂದು ಭರವಸೆ ನೀಡಲಾಗದ ಬೇಡಿಕೆಯೊಂದನ್ನು ಇಟ್ಟುಕೊಂಡು ಇನ್ನೂರು ಕಿ.ಮೀ. ಪಾದಯಾತ್ರೆಗೆ ಈ ಮಹಿಳೆಯರನ್ನು ಹೊರಡಿಸುವುದು ಕೂಡ ಒಂಥರದ ಭ್ರಮೆಗೆ ಅವರನ್ನು ನೂಕಿದಂತಲ್ಲವೆ?   

“”ಸಂವಿಧಾನದ 47ನೇ ಪರಿಚ್ಛೇದ ಹಂತಹಂತವಾಗಿ ಮದ್ಯವನ್ನು ನಿಷೇಧಿಸಬೇಕು ಎಂದು ಹೇಳಿತ್ತು, ಅದಾಗಿ ಎಷ್ಟು ದಶಕಗಳು ಕಳೆಯಿತು, ಆದ್ರೆ, ವರ್ಷದಿಂದ ವರ್ಷಕ್ಕೆ ಸರ್ಕಾರಗಳು ಮದ್ಯಮಾರಾಟದ ಗುರಿಯನ್ನು ಹೆಚ್ಚಿಸ್ತಾನೆ ಹೋಗ್ತಿದಾವೆ ಹೊರ್ತು ಕಡಿಮೆ ಮಾಡ್ತಿಲ್ಲ. ಸಂವಿಧಾನದ 73-74ನೇ ಪರಿಚ್ಛೇದದ ಪ್ರಕಾರ ಅಬಕಾರಿ ಇಲಾಖೆಯವರು ಹಳ್ಳಿಗಳಲ್ಲಿ ಅಂಗಡಿ ತೆಗೆಯಲು ಗ್ರಾಮಸಭೆಗಳಲ್ಲಿ ಕೇಳಬೇಕು ಅಂತಿದೆ, ಆದರೆ, ಅದಕ್ಕೆ ತಿದ್ದುಪಡಿ ತಂದ ಸರ್ಕಾರ ಗ್ರಾಮಸಭೆಗಳಿಗೆ ಪರವಾನಗಿ ಕೊಡಲು ಇದ್ದ ಹಕ್ಕನ್ನೂ ಕಿತ್ತುಕೊಂಡಿದೆ. ಹೀಗಾಗಿ, ಈಗ ಹಳ್ಳಿಹಳ್ಳಿಗಳಲ್ಲಿ ಸಾರಾಯಿ ಅಂಗಡಿಗಳಿವೆ. ಚುನಾವಣೆಗೆ ಮೊದಲು ಎಲ್ಲ ಪಕ್ಷಗಳು ರೈತರು ಇತ್ಯಾದಿ ಗುಂಪುಗಳ ಜೊತೆ ಅವರ ಬೇಡಿಕೆಗಳ ಕುರಿತು ಚರ್ಚೆ ಮಾಡಿದ ಹಾಗೆ ಇಂತಹ ಸಮಸ್ಯೆಗಳ ಬಗ್ಗೆ ಮಹಿಳೆಯರ ಗುಂಪುಗಳ ಜೊತೆ ಯಾಕೆ ಚರ್ಚೆ ಮಾಡೋದಿಲ್ಲ? ಮಹಿಳೆಯರು ಕೂಡ ಹೀಗೆ ಚಳವಳಿ ಮಾಡಬಲ್ಲರು, ಇಂಥಾದ್ದೊಂದು ಸುಡುಸಮಸ್ಯೆ ಬಗ್ಗೆ ಒಗ್ಗಟ್ಟಿನಿಂದ ದನಿ ಎತ್ತಬಲ್ಲರು, ಒಂದು ರಾಜಕೀಯ ಒತ್ತಡಗುಂಪಾಗಬಲ್ಲರು ಎಂಬುದನ್ನು ನಿರೂಪಿಸಲಿಕ್ಕಾದ್ರೂ ಇದ್ರಿಂದ ಸಾಧ್ಯ ಆಗುತ್ತೆ” ಎಂದು ವಿವರಿಸುತ್ತಾರೆ ಪಾದಯಾತ್ರೆಯ ಸಂಘಟಕರಲ್ಲಿ ಒಬ್ಬರಾದ ಅಭಯ್‌. 

ಇಂಗಳಗಿಯ ಒಬ್ಬಳು ಹೆಣ್ಣುಮಗಳು ಹೇಳಿದಳು, “”ವಿಧಾನಸೌಧಕ್ಕ ಹೊಕ್ಕೀವ್ರಿ. ಜೈಲಿಗಿ ಅಟ್ಟಿದ್ರ ಅಟ್ಟಲಿ, ಅಲ್ಲಿ ದಿನಾ ದಿನಾ ಸಾಯೂದು ಸಾಕಾಗೇದ, ಇಲ್ಲಿ ಒಮ್ಮೆಲೇ ಸಾಯತೇವೇಳಿ”. ಆಕೆಯ ದನಿಯಲ್ಲಿ ರೋಷದಡಿಯಲ್ಲಿ ತಣ್ಣಗೆ ಹರಿಯುವ ದುಮ್ಮಾನವಿತ್ತು. ಶಾಂತವಾಗಿಯೇ ಕಾಲ್ನಡಿಗೆಯಲ್ಲಿ ಸಾಗಿದ್ದವರ ಮನೋಸ್ಥೈರ್ಯ ಉಡುಗಿಸುವ ಘಟನೆಯೊಂದು ನಡೆದೇಹೋಯಿತು. ಹೆದ್ದಾರಿಯಲ್ಲಿ ನೆಲಮಂಗಲದ ಕುಲುವನಳ್ಳಿ ಬಳಿ ರಸ್ತೆ ದಾಟುವಾಗ ವೇಗವಾಗಿ ಬಂದ ಬೈಕ್‌ ಒಂದು ಲಿಂಗಸುಗೂರಿನಿಂದ ಬಂದಿದ್ದ ರೇಣುಕಮ್ಮ ಎಂಬ ಮಹಿಳೆಯ ಮೇಲೆ ಹರಿದು, “”ಒಮ್ಮೆಲೇ ಸಾಯತೇವೇಳಿ” ಎಂದ ಮಾತಿಗೆ ಸಾಕ್ಷಿಯೋ ಎಂಬಂತೆ ಕ್ಷಣಾರ್ಧದಲ್ಲಿ ಆಕೆ ಕಣ್ಮುಚ್ಚಿದಳು. ಎಷ್ಟೆಲ್ಲ ಕಡುಕಷ್ಟದ ಬದುಕಿನಲ್ಲಿಯೂ ಜೀವಚೈತನ್ಯವನ್ನು ಕಾಪಿಟ್ಟುಕೊಂಡು, ನೂರೈವತ್ತು ಕಿ.ಮೀ. ನಡೆಯುವಾಗಲೂ “ಉಸ್‌’ ಎನ್ನದ ರೇಣುಕಮ್ಮ ಜೀವವನ್ನು ಬೈಕ್‌ ಬಲಿ ತೆಗೆದುಕೊಂಡಿತು. ಜೊತೆಗಿದ್ದ ಮಹಿಳೆಯರು, ಗಂಡಸರು, ಸಂಘಟಕರು ಎಲ್ಲರಿಗೂ ಆಘಾತ. ಆದರೂ ನಿಲ್ಲಲಿಲ್ಲ ಕಾಲ್ನಡಿಗೆ. ಕೊನೇಪಕ್ಷ ತುಮಕೂರಿಗಾದರೂ ಹೋಗಿ ಈ ಪ್ರತಿಭಟನಾಕಾರರನ್ನು ಮುಖ್ಯಮಂತ್ರಿಯವರು ಭೇಟಿಯಾಗಬೇಕಿತ್ತು. ಕೊನೇಪಕ್ಷ ಸಮಸ್ಯೆಯನ್ನು ಆಲಿಸಿ, ಚರ್ಚಿಸೋಣ ಎಂದಾದರೂ ಹೇಳಿ, ಕಾಲ್ನಡಿಗೆಯನ್ನು ಕೊನೆಗೊಳಿಸಲು ಕೋರಿದ್ದರೆ, ರೇಣುಕಮ್ಮನ ಜೀವವಾದರೂ ಉಳಿಯುತ್ತಿತ್ತು ಎನ್ನುವುದು ಎಲ್ಲ ಜೊತೆಗಾರರ ಕೊರಗಾಗಿ ಉಳಿಯಿತು. 

ಮದ್ಯಪಾನ ನಿಷೇಧ ಮಾಡಿದರೆ, ಮನೆಮನೆಯ ಹೊಕ್ಕ ಕುಡಿತದ ಮಾರಿಯನ್ನು ಹೊರಹಾಕಿದರೆ ಮಾತ್ರ ಬದುಕು ತುಸುವಾದರೂ ಅರಳೀತೆಂಬ ಒಂದು ಆಶಯ, ಒಂದು ಕನಸು ಮುನ್ನಡೆಸುತ್ತಿದೆಯೋ ಎಂಬಂತೆ ನಡೆಯುತ್ತ ಬಂದವರು ಇವರು. ಖಾನಾಪುರದ ಹಲಸಾಲ ಹಳ್ಳಿಯಿಂದ ಬಂದಿದ್ದ ಹದಿನೈದು ಮಹಿಳೆಯರಿಗೆ ಕನ್ನಡ ಬರುವುದಿಲ್ಲ. ಅರೆಬರೆ ಅರ್ಥವಾಗುತ್ತದೆ ಅಷ್ಟೆ, ಈ ಎಲ್ಲರ ಮನೆಮಾತು ಮರಾಠಿ. ಹೆಂಡವೆಂಬ ಹೆಮ್ಮಾರಿಯ ದುಃಖ ಮಾತ್ರ ಸಮಾನವಾದದ್ದು. ಪ್ರತಿಭಟನೆಯ ಸಂಗಾತಿಗಳೊಂದಿಗೆ ಹೆಜ್ಜೆಹಾಕಲು ಭಾಷೆ ತೊಡಕಾಗಿಲ್ಲ. ಪಾದಯಾತ್ರೆಯಲ್ಲಿ ಗುಡ್ಡೇರಾಯನಕ್ಯಾಂಪಿನ ರಸೂಲಬಿ, ನೂರಜಹಾನ್‌, ಬಂಡೆಗುಡ್ಡ ತಾಂಡಾದಿಂದ ಬಂದ ಗನಿಬಾಯಿ, ಕಮಲಾಬಾಯಿ, ಲಕ್ಕಿಬಾಯಿಯರಿದ್ದರು. ಹೆಣ್ಣುಮಕ್ಕಳ ಈ ಹೋರಾಟದ ಹಾದಿಗೆ ಹೆಜ್ಜೆಗೂಡಿಸಿದ ಗಂಡಸರೂ ಇದ್ದರು. 

ಸುಮಂಗಲಾ

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ರಾಜ್ಯದ 15 ಹಾಟ್ ಸ್ಪಾಟ್ ಏ.30ರವರೆಗೆ ಸಂಪೂರ್ಣ ಲಾಕ್ ಡೌನ್: ಉತ್ತರಪ್ರದೇಶ ಸರ್ಕಾರ

ರಾಜ್ಯದ 15 ಹಾಟ್ ಸ್ಪಾಟ್ ಏ.30ರವರೆಗೆ ಸಂಪೂರ್ಣ ಲಾಕ್ ಡೌನ್: ಉತ್ತರಪ್ರದೇಶ ಸರ್ಕಾರ

ವಿಮಾನದಲ್ಲಿ ಬ್ಯುಸಿನೆಸ್ ಕ್ಲಾಸ್ ನಲ್ಲಿ ಪ್ರಯಾಣಿಸುತ್ತಿರಲಿಲ್ಲ ಧೋನಿ !

ವಿಮಾನದಲ್ಲಿ ಬ್ಯುಸಿನೆಸ್ ಕ್ಲಾಸ್ ನಲ್ಲಿ ಪ್ರಯಾಣಿಸುತ್ತಿರಲಿಲ್ಲ ಧೋನಿ !

ಕೋವಿಡ್ ಗೆ ಔಷಧಿ; ಸಂಜೀವಿನಿ ಪರ್ವತದ ಬಗ್ಗೆ ಉಲ್ಲೇಖಿಸಿ ಮೋದಿಗೆ ಬ್ರೆಜಿಲ್ ಪ್ರಧಾನಿ ಪತ್ರ

ಕೋವಿಡ್ ಗೆ ಔಷಧಿ; ಸಂಜೀವಿನಿ ಪರ್ವತದ ಬಗ್ಗೆ ಉಲ್ಲೇಖಿಸಿ ಮೋದಿಗೆ ಬ್ರೆಜಿಲ್ ಪ್ರಧಾನಿ ಪತ್ರ

ಕೋವಿಡ್-19 ಸೋಂಕು ಸಂಪೂರ್ಣ ನಿರ್ನಾಮಕ್ಕೆ ಡಿಸೆಂಬರ್‌ ವರೆಗೂ ಮುನ್ನೆಚ್ಚರಿಕೆ ವಹಿಸಿ: ಡಿಸಿಎಂ

ಕೋವಿಡ್-19 ಸೋಂಕು ಸಂಪೂರ್ಣ ನಿರ್ನಾಮಕ್ಕೆ ಡಿಸೆಂಬರ್‌ ವರೆಗೂ ಮುನ್ನೆಚ್ಚರಿಕೆ ವಹಿಸಿ: ಡಿಸಿಎಂ

ಹನುಮಾನ್ ಜಯಂತಿಯಂದೇ ಬಿಡುಗಡೆಯಾಯ್ತು ರಾಮ ಮಂದಿರ ಟ್ರಸ್ಟ್ ನ ಲೋಗೋ; ಏನೇನಿದೆ ಇದರಲ್ಲಿ?

ಹನುಮಾನ್ ಜಯಂತಿಯಂದೇ ಬಿಡುಗಡೆಯಾಯ್ತು ರಾಮ ಮಂದಿರ ಟ್ರಸ್ಟ್ ನ ಲೋಗೋ; ಏನೇನಿದೆ ಇದರಲ್ಲಿ?

Covid-19; 60 ದಿನಗಳ ಬಳಿಕ ವುಹಾನ್ ಲಾಕ್ ಡೌನ್ ಅಂತ್ಯ, ಚೀನಾದ ಉಳಿದೆಡೆ ಆರಂಭ

Covid-19; 60 ದಿನಗಳ ಬಳಿಕ ವುಹಾನ್ ಲಾಕ್ ಡೌನ್ ಅಂತ್ಯ, ಚೀನಾದ ಉಳಿದೆಡೆ ಆರಂಭ

ಅಂದು ಆ ಜ್ವರ ಹತ್ತಿಕ್ಕಲು ಇದೊಂದೇ ಅಸ್ತ್ರ

ಅಂದು ಆ ಜ್ವರ ಹತ್ತಿಕ್ಕಲು ಇದೊಂದೇ ಅಸ್ತ್ರ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

jagada-swasthya

ಮತ್ತೆ ಮರಳಲಿ ಜಗದ ಸ್ವಾಸ್ಥ್ಯ

ಹಾವೇರಿಯ ಹೊಕ್ಕುಳ ಬಳ್ಳಿ ಪಾಟೀಲ ಪುಟ್ಟಪ್ಪ  ಸ್ಮತಿ

ಹಾವೇರಿಯ ಹೊಕ್ಕುಳ ಬಳ್ಳಿ ಪಾಟೀಲ ಪುಟ್ಟಪ್ಪ ಸ್ಮತಿ

Suryana-neralu

ಸೂರ್ಯನ ನೆರಳು

ಚಿತ್ರೋತ್ಸವದಲ್ಲಿ ಮೌನದ ಮಾತು

ಚಿತ್ರೋತ್ಸವದಲ್ಲಿ ಮೌನದ ಮಾತು

ಕತೆ: ಸಹಯಾತ್ರಿ

ಕತೆ: ಸಹಯಾತ್ರಿ

MUST WATCH

udayavani youtube

Coronavirus Lockdown : ಮಟ್ಟುಗುಳ್ಳ ಮಂದಗತಿಯ ಮಾರುಕಟ್ಟೆ Saddens Muttugulla Growers

udayavani youtube

Kundapura: ಖಾಲಿ ರಸ್ತೆಯಲ್ಲೂ ಅಪಘಾತ! CCTVಯಲ್ಲಿ ದಾಖಲಾಯ್ತು ಅಪಘಾತದ ದೃಶ್ಯ

udayavani youtube

Shivamogga ಜ್ವರದಿಂದ ಬಳಲುತ್ತಿದ್ದರೂ ಆದೇಶ ಉಲ್ಲಂಘಿಸಿ ನಮಾಜ್ ನಲ್ಲಿ ಭಾಗಿಯಾದರು

udayavani youtube

Covid 19 ಸೋಂಕು ತಡೆಗೆ ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ಸಂದೇಶ

udayavani youtube

Udyavara Jamia Masjid ಮೈಕ್ ನಲ್ಲಿ ಮೊಳಗುತ್ತಿದೆ ಕೋವಿಡ್ ಮಹಾಮಾರಿ ಜಾಗೃತಿ ಸಂದೇಶ

ಹೊಸ ಸೇರ್ಪಡೆ

ರಾಜ್ಯದ 15 ಹಾಟ್ ಸ್ಪಾಟ್ ಏ.30ರವರೆಗೆ ಸಂಪೂರ್ಣ ಲಾಕ್ ಡೌನ್: ಉತ್ತರಪ್ರದೇಶ ಸರ್ಕಾರ

ರಾಜ್ಯದ 15 ಹಾಟ್ ಸ್ಪಾಟ್ ಏ.30ರವರೆಗೆ ಸಂಪೂರ್ಣ ಲಾಕ್ ಡೌನ್: ಉತ್ತರಪ್ರದೇಶ ಸರ್ಕಾರ

08-April-32

ರೈತರ ಉತ್ಪನ್ನ ನೇರ ಗ್ರಾಹಕರಿಗೆ

08-April-31

ಎಪಿಎಂಸಿಗೆ ತಂದ ಹಣ್ಣು -ತರಕಾರಿ ಖರೀದಿಸುವರಿಲ್ಲ

ಲಾಕ್ ಡೌನ್ ಕತೆಗಳು : ಉಪಾಯಂ ಕಾರ್ಯ ಸಾಧನಂ!

ಲಾಕ್ ಡೌನ್ ಕತೆಗಳು : ಉಪಾಯಂ ಕಾರ್ಯ ಸಾಧನಂ!

ವಿಮಾನದಲ್ಲಿ ಬ್ಯುಸಿನೆಸ್ ಕ್ಲಾಸ್ ನಲ್ಲಿ ಪ್ರಯಾಣಿಸುತ್ತಿರಲಿಲ್ಲ ಧೋನಿ !

ವಿಮಾನದಲ್ಲಿ ಬ್ಯುಸಿನೆಸ್ ಕ್ಲಾಸ್ ನಲ್ಲಿ ಪ್ರಯಾಣಿಸುತ್ತಿರಲಿಲ್ಲ ಧೋನಿ !