ಅರಬ್‌ ದೇಶದ ಕತೆ: ಮರಳಿ ದೊರೆತ ನಿಧಿ

Team Udayavani, Dec 16, 2018, 6:00 AM IST

ಬಾಗ್ಧಾದಿನಲ್ಲಿ ಝಯಾನ್‌ ಎಂಬ ವ್ಯಕ್ತಿ ಇದ್ದ. ಕಡು ಬಡವನಾಗಿದ್ದ ಅವನಿಗೆ ಪ್ರಾಮಾಣಿಕವಾಗಿ ಕೆಲಸ ಮಾಡಿ ಸಂಪಾದಿಸಬೇಕು, ಇಳಿ ವಯಸ್ಸಿನಲ್ಲಿ ಸುಖದಿಂದ ಜೀವನ ನಡೆಸಬೇಕು ಎಂಬ ಹಂಬಲ ಇತ್ತು. ಹೀಗಾಗಿ ಸಾಹುಕಾರರ ಬಳಿ ಬೆವರಿಳಿಸಿ ದುಡಿಮೆ ಮಾಡಿದ. ವೇತನವಾಗಿ ಬಂದ ಪ್ರತಿಯೊಂದು ದಿನಾರವನ್ನೂ ಎಚ್ಚರಿಕೆಯಿಂದ ಉಳಿಸಿದ. ಕಾಲ ಕಳೆದಾಗ ಅವನ ಬಳಿ ತುಂಬ ಹಣ ಸೇರಿತು. ಅದರಿಂದ ಅವನು ಚಿನ್ನದ ಗಟ್ಟಿಗಳನ್ನು ತೆಗೆದುಕೊಂಡು ಮನೆಗೆ ಬಂದ. ಅದನ್ನು ಕಂಡು ಅವನ ಹೆಂಡತಿ, “”ಇಷ್ಟೊಂದು ಚಿನ್ನವನ್ನು ನಮ್ಮ ಪುಟ್ಟ ಮನೆಯಲ್ಲಿ ಇರಿಸಿಕೊಳ್ಳುವುದು ಅಪಾಯವಲ್ಲವೆ? ಗೋಡೆಗಳಿಗೆ ಕಿವಿಗಳಿರುತ್ತವೆ, ಕಿಟಕಿಗಳಿಗೆ ಕಣ್ಣುಗಳಿರುತ್ತವೆ ಎಂದು ದೊಡ್ಡವರು ಹೇಳುತ್ತಾರೆ. ಯಾರಿಗಾದರೂ ಈ ಚಿನ್ನದ ವಿಷಯ ತಿಳಿದರೆ ಅಪಹರಿಸದೆ ಬಿಡುವುದಿಲ್ಲ” ಎಂದು ಆತಂಕದಿಂದ ಹೇಳಿದಳು.

ಝಯಾನ್‌ ಆ ಮಾತನ್ನು ಒಪ್ಪಿಕೊಂಡ. “”ನೀನು ಹೇಳುವ ಮಾತು ನಿಜ. ನಾವು ದುಡಿಯಲಾಗದ ದಿನಗಳು ಬಂದಾಗ ನಿಶ್ಚಿಂತೆಯಿಂದ ಜೀವಿಸಬೇಕಾದರೆ ಉಳಿತಾಯ ಬೇಕೇ ಬೇಕಾಗುತ್ತದೆ. ಇದನ್ನು ತೆಗೆದುಕೊಂಡು ಹೋಗಿ ಸಮೀಪದಲ್ಲಿರುವ ಜುಜುಬೆ ಮರದ ಬುಡದಲ್ಲಿ ಹೂಳುತ್ತೇನೆ. ಇಲ್ಲಿ ಇದೊಂದು ಮರ ಬಿಟ್ಟರೆ ಆ ಜಾತಿಯ ಬೇರೆ ಮರಗಳಿಲ್ಲವಾದ ಕಾರಣ ಗುರುತಿಸಲು ಕಷ್ಟವಾಗುವುದಿಲ್ಲ” ಎಂದು ಹೇಳಿದ. ಹಾರೆ, ಗುದ್ದಲಿಗಳೊಂದಿಗೆ ಅಲ್ಲಿಗೆ ಹೋಗಿ ಯಾರಿಗೂ ತಿಳಿಯದಂತೆ ಭದ್ರವಾಗಿ ಮರದ ಬುಡದಲ್ಲಿ ಚಿನ್ನವಿರುವ ಪೆಟ್ಟಿಗೆಯನ್ನು ಹೂಳಿ ಮನೆಗೆ ಮರಳಿದ.

ಕೆಲವು ಕಾಲ ಕಳೆಯಿತು. ಝಯಾನ್‌ ದಂಪತಿಗೆ ಸುಂದರಿಯಾದ ಒಬ್ಬ ಮಗಳಿದ್ದಳು. ಮದುವೆಯ ವಯಸ್ಸಿಗೆ ಬಂದಿದ್ದ ಅವಳಿಗೆ ಯೋಗ್ಯವಾದ ಸಂಬಂಧವು ಕುದುರಿತು. ಸ್ಪುರದ್ರೂಪಿಯಾದ ಶ್ರೀಮಂತರ ಹುಡುಗ ರಜಾಕ್‌ ಎಂಬವನು ಅವಳನ್ನು ವಿವಾಹವಾಗಲು ಒಪ್ಪಿಕೊಂಡ. “”ನನಗೆ ದೇವರು ಕೊಟ್ಟಿರುವ ಸಂಪತ್ತು ಹೇರಳವಾಗಿದೆ. ವರದಕ್ಷಿಣೆಯೆಂದು ನನಗೇನೂ ಕೊಡಬೇಡಿ. ಆದರೆ, ನನ್ನ ಅಂತಸ್ತಿಗೆ ತಕ್ಕಂತೆ ವಿವಾಹವನ್ನು ನೆರವೇರಿಸಿ” ಎಂದು ಅವನು ಹೇಳಿದ. “”ಅದಕ್ಕೇನಂತೆ. ನಾನು ದುಡಿದ ಸಂಬಳವನ್ನು ಜೋಪಾನವಾಗಿ ಉಳಿಸಿ ಕೂಡಿಟ್ಟಿದ್ದೇನೆ. ಮಗಳ ಮದುವೆಯನ್ನು ಅದ್ದೂರಿಯಾಗಿ ನಡೆಸಿಕೊಡಲು ಯಾವುದೇ ತೊಂದರೆಯಿಲ್ಲ” ಎಂದು ಝಯಾನ್‌ ಒಪ್ಪಿಕೊಂಡ.

ಮದುವೆಯ ದಿನ ಹತ್ತಿರವಾಗುತ್ತಿತ್ತು. ಝಯಾನ್‌ ಅದರ ಸಿದ್ಧತೆಗೆ ಬೇಕಾಗುವ ಹಣ ಹೊಂದಿಸಲು ತಾನು ಜೋಪಾನ ಮಾಡಿದ ಚಿನ್ನದಲ್ಲಿ ಒಂದು ಭಾಗವನ್ನು ಮಾರಾಟ ಮಾಡಬೇಕೆಂದು ನಿರ್ಧರಿಸಿದ. ಯಾರೂ ನೋಡದ ವೇಳೆಯಲ್ಲಿ ಜುಜುಬೆ ಮರದ ಬುಡಕ್ಕೆ ಹೋದ. ಆದರೆ, ಅಲ್ಲಿ ಕಂಡುಬಂದ ದೃಶ್ಯದಿಂದ ಅವನ ಎದೆಯೊಡೆಯುವ ಹಾಗಾಯಿತು. ಮರದ ಬುಡದಲ್ಲಿ ದೊಡ್ಡ ಹೊಂಡ ಇತ್ತು. ಝಯಾನ್‌ ಉಳಿಸಿಟ್ಟಿದ್ದ ಚಿನ್ನವಿರುವ ಪೆಟ್ಟಿಗೆಯನ್ನು ಯಾರೋ ಅಪಹರಿಸಿರುವುದು ಸ್ಪಷ್ಟವಾಗಿ ಗೊತ್ತಾಯಿತು.

ತನ್ನ ಜೀವಮಾನದ ದುಡಿಮೆಯ ಫ‌ಲ ಯಾರದೋ ಪಾಲಾಗಿರುವುದನ್ನು ತಿಳಿದಾಗ ಝಯಾನ್‌ ಬವಳಿ ಬಂದು ನೆಲಕ್ಕೆ ಕುಸಿದ. ಎಷ್ಟೋ ಹೊತ್ತಿನ ಮೇಲೆ ಸಾವರಿಸಿಕೊಂಡು ಮನೆಗೆ ಬಂದ. ಹೆಂಡತಿಯೊಂದಿಗೆ ನಡೆದ ವಿಚಾರವನ್ನು ಹೇಳಿದ. ಅವಳು, “”ನಮಗೆ ಶ್ರೀಮಂತರ ಸಂಬಂಧ ಕೂಡಿ ಬಂದಿರುವುದು ದೇವರಿಗೂ ಇಷ್ಟವಿಲ್ಲವೆಂದು ತೋರುತ್ತದೆ. ಕೈಯಲ್ಲಿ ಕವಡೆಯೂ ಇಲ್ಲದೆ ಮದುವೆ ನೆರವೇರಿಸುವುದು ಕನಸಿನ ಮಾತು. ಆದಕಾರಣ ನಾವು ಸಂಬಂಧ ಬೆಳೆಸಲಿರುವ ಹುಡುಗನಿಗೆ ಮದುವೆಯನ್ನು ಮುರಿಯುತ್ತಿರುವುದಾಗಿ ಒಂದು ಓಲೆ ಬರೆದು ತಿಳಿಸಿಬಿಡಿ” ಎಂದು ಹೇಳಿದಳು. ಝಯಾನ್‌, “”ನೀನೆನ್ನುವುದು ಸರಿ. ಯಾರ ಬಳಿಯಲ್ಲಾದರೂ ಸಾಲ ಮಾಡಿ ಮದುವೆ ನಡೆಸಿದರೆ ಜೀವಮಾನ ಕಳೆದರೂ ಅದನ್ನು ಮರಳಿಸಲು ನಮಗೆ ಸಾಧ್ಯವಾಗದು. ನಾನು ಈಗಲೇ ಅವರಿಗೆ ಮದುವೆ ನಿಲ್ಲಿಸಿರುವುದನ್ನು ತಿಳಿಸುತ್ತೇನೆ” ಎಂದು ತಿಳಿಸಿ, ಆ ಕೆಲಸವನ್ನು ಮಾಡಿದ.

ಈ ವಿಷಯ ಗೊತ್ತಾದಾಗ ಆ ಮನೆಗೆ ಅಳಿಯನಾಗಲಿದ್ದ ರಜಾಕ್‌ ಅವರಲ್ಲಿಗೆ ಬಂದ. ಆಗ ದುಃಖದಿಂದ ಹಾಸಿಗೆ ಹಿಡಿದಿದ್ದ ಝಯಾನ್‌ ಚಿಂತೆಯಿಂದ ಕೃಶನಾಗಿರುವುದು ಕಾಣಿಸಿತು. “”ಮದುವೆಯನ್ನು ಯಾಕೆ ನಿಲ್ಲಿಸುತ್ತಿದ್ದೀರಿ? ಹೇಳಿ, ನಿಮಗೆ ಏನೋ ಸಮಸ್ಯೆ ಬಂದಂತಿದೆ. ಅದನ್ನು ನನಗೆ ತಿಳಿಸಿದರೆ ಅದಕ್ಕೊಂದು ಪರಿಹಾರವನ್ನು ಹುಡುಕಲು ನಾನು ಪ್ರಯತ್ನಿಸುತ್ತೇನೆ” ಎಂದು ಝಯಾನ್‌ ಬಳಿ ಕುಳಿತು ಭರವಸೆ ನೀಡಿದ.

“”ನಮ್ಮ ಸಮಸ್ಯೆ ಹೇಳುವುದರಿಂದ ಯಾವ ಪ್ರಯೋಜನವೂ ಆಗುವುದಿಲ್ಲ. ಅದಕ್ಕೆ ಪರಿಹಾರ ಹುಡುಕುವುದು ಕನಸಿನಲ್ಲೂ ಆಗದ ಮಾತು. ಆದಕಾರಣ ನೀನು ಬಂದ ದಾರಿಯಲ್ಲೇ ಹೋಗಿಬಿಡು” ಎಂದು ಝಯಾನ್‌ ನಿರಾಸಕ್ತಿಯಿಂದ ಹೇಳಿದ. ಆದರೂ ರಜಾಕ್‌ ಹಿಡಿದ ಹಟ ಬಿಡಲಿಲ್ಲ. ಒತ್ತಾಯಿಸಿ ನಡೆದ ಘಟನೆ ಏನೆಂಬುದನ್ನು ಕೇಳಿ ತಿಳಿದುಕೊಂಡ. ಬಳಿಕ, “”ನೀವು ಚಿನ್ನ ಹೂಳಿಟ್ಟ ಜಾಗದ ಬಳಿ ಯಾರದಾದರೂ ಬಟ್ಟೆಯ ಚೂರನ್ನೋ ಅಥವಾ ಬೇರೆ ಏನಾದರೂ ವಸ್ತುವನ್ನೋ ಬಿಟ್ಟು ಹೋದ ಕುರುಹನ್ನು ನೋಡಿದಿರಾ?” ಎಂದು ಕೇಳಿದ. “”ಇಲ್ಲವಪ್ಪ, ಆ ಮರವಿರುವ ಪ್ರದೇಶ ತಿಳಿದವರೇ ಕಮ್ಮಿ. ಅಲ್ಲಿಗೆ ಹೋಗಿ ಚಿನ್ನವನ್ನು ಅಪಹರಿಸಿರುವವನು ತುಂಬ ಬುದ್ಧಿವಂತನೇ ಇರಬೇಕು. ಅವನು ತನ್ನ ಯಾವುದೇ ಕುರುಹನ್ನು ಉಳಿಸಿಹೋಗಿ ಸಿಕ್ಕಿ ಹಾಕಿಕೊಳ್ಳಲು ಅವಕಾಶ ಕೊಡುವುದಿಲ್ಲ” ಎಂದು ಮುಖ ಮುಚ್ಚಿಕೊಂಡು ಅತ್ತುಬಿಟ್ಟ ಝಯಾನ್‌. 

ಆದರೆ, ರಜಾಕ್‌ ಭರವಸೆ ಕಳೆದುಕೊಳ್ಳಲಿಲ್ಲ. “”ನೀವು ದುಃಖೀಸಬೇಡಿ, ಧೈರ್ಯ ತಂದುಕೊಳ್ಳಿ. ಹತ್ತು ದಿನಗಳ ಕಾಲ ಕಾದುನೋಡಿ. ಕಳೆದುಕೊಂಡ ಚಿನ್ನವನ್ನು ಮರಳಿ ತಂದುಕೊಡಲು ನಾನು ಮಾಡುವ ಪ್ರಯತ್ನಗಳು ಖಂಡಿತ ಯಶಸ್ಸು ಪಡೆಯುತ್ತವೆ, ನಿಮ್ಮ ನಿಧಿ ನಿಮಗೆ ದೊರೆಯುತ್ತದೆ” ಎಂದು ಹೇಳಿ ಅಲ್ಲಿಂದ ಹೊರಟ. ಚಿನ್ನದ ಬಗೆಗೆ ಏನಾದರೂ ಸುಳುಹು ಸಿಗಬಹುದೇ ಎಂದು ಹಲವು ಕಡೆ ನಿರಂತರವಾಗಿ ಹುಡುಕಿಕೊಂಡು ಹೋದ. ಒಂಬತ್ತು ದಿನಗಳು ಕಳೆದುಹೋದವು. ಎಲ್ಲಿಯೂ ಚಿನ್ನದ ಕುರಿತು ಮಾಹಿತಿ ಸಿಗಲಿಲ್ಲ.

ಹತ್ತನೆಯ ದಿನ ರಜಾಕ್‌ ಬೀದಿಯಲ್ಲಿ ಹೋಗುತ್ತಿರುವಾಗ ಒಬ್ಬ ಹುಚ್ಚ ಅವನ ಬಳಿ ಬಂದು ಭಿಕ್ಷೆ ನೀಡುವಂತೆ ಕೈ ಚಾಚಿದ. ಅವನ ಕೈಗಳೆರಡೂ ಒಗರು ಹಿಡಿದು ಕೆಂಪಾಗಿದ್ದವು. ರಜಾಕ್‌ ಅವನಿಗೆ ಒಂದು ದಿನಾರ ಕೊಡುತ್ತ ಕೈಗಳಿಗೆ ಅಂಟಿದ ಬಣ್ಣದ ಬಗೆಗೆ ವಿಚಾರಿಸಿದ. ಹುಚ್ಚನು ತನ್ನದೇ ಭಾಷೆಯಲ್ಲಿ ಒಬ್ಬ ಶ್ರೀಮಂತ ಸಾಹುಕಾರನ ಬಳಿಯಲ್ಲಿ ತಾನು ಜುಜುಬೆ ಮರದ ಬೇರುಗಳನ್ನು ಜಜ್ಜಿ  ರಸ ಹಿಂಡಿ ಕೊಟ್ಟಿರುವುದಾಗಿ ಹೇಳಿದ. ಬೇರುಗಳಲ್ಲಿದ್ದ ಒಗರು ಅವನ ಕೈಗಳಿಗೆ ಅಂಟಿ ಕೆಂಪು ಬಣ್ಣ ಬಂದಿತ್ತೆಂಬುದು ರಜಾಕ್‌ ತಲೆಗೆ ಹೊಳೆಯಿತು.

ರಜಾಕ್‌ ನಗರದ ಒಬ್ಬ ಪ್ರಸಿದ್ಧ ಹಕೀಮನ ಬಳಿಗೆ ಹೋದ. “”ತಾವು ಯಾರಾದರೂ ರೋಗಿಗಳಿಗೆ ಜುಜುಬೆ ಮರದ ಬೇರಿನಿಂದ ಔಷಧಿ ತಯಾರಿಸಿ ಕುಡಿಯಲು ಹೇಳಿದ್ದೀರಾ?” ಎಂದು ಕೇಳಿದ. ಹಕೀಮನು ನೆನಪು ಮಾಡಿಕೊಳ್ಳುತ್ತ, “”ಹೌದು, ನಗರದಲ್ಲಿ ನ್ಯಾಮಾಂಡರ್‌ ಎಂಬ ವ್ಯಾಪಾರಿಯಿದ್ದಾನೆ. ಅವನಿಗೆ ತೀವ್ರವಾದ ಅಸ್ತಮಾ ಬಾಧೆಯಿದೆ. ಇದಕ್ಕೆ ಜುಜುಬೆ ಮರದ ಬೇರುಗಳನ್ನು ಜಜ್ಜಿ ರಸ ಹಿಂಡಿ ಕುಡಿದರೆ ರೋಗ ಶಮನವಾಗುವುದಾಗಿ ಹೇಳಿದ್ದೇನೆ. ಆದರೆ, ಈ ಪರಿಸರದಲ್ಲಿ ಎಲ್ಲೋ ಒಂದು ಕಡೆ ಮಾತ್ರ ಅದರ ಮರವಿರುವುದಾಗಿ ಅವನು ಹೇಳಿದ್ದ” ಎಂದು ತಿಳಿಸಿದ.

ರಜಾಕ್‌ ವ್ಯಾಪಾರಿಯನ್ನು ಕಾಣಲು ಅವನ ಮನೆಗೆ ತೆರಳಿದ. “”ನೀವು ಒಬ್ಬ ದಯಾಳುವೆಂದು ತಿಳಿದು ಬಂದಿದ್ದೇನೆ. ಒಬ್ಬ ಬಡವನು ತನ್ನ ಮಗಳ ಮದುವೆಗಾಗಿ ಚಿನ್ನದ ಗಟ್ಟಿಗಳನ್ನು ಒಂದು ಪೆಟ್ಟಿಗೆಯಲ್ಲಿ ತುಂಬಿಸಿ ಮರದ ಕೆಳಗೆ ಹೂಳಿದ್ದ. ಆ ಪೆಟ್ಟಿಗೆಯನ್ನು ಯಾರೋ ಅಪಹರಿಸಿದ್ದಾರೆ. ಅವನ ಒಬ್ಬಳೇ ಮಗಳಿಗೆ ನಿಶ್ಚಯವಾಗಿದ್ದ ಮದುವೆ ನಿಲ್ಲುವಂತಾಗಿದೆ. ಮದುವೆ ನಡೆಯಲು ನಿಮ್ಮ ಸಹಾಯ ಬೇಕಾಗಿದೆ” ಎಂದು ಹೇಳಿದ.

ವ್ಯಾಪಾರಿಯು, “”ನನಗೆ ಔಷಧಕ್ಕಾಗಿ ಒಂದು ಜುಜುಬೆ ಮರದ ಬೇರುಗಳನ್ನು ತರಲು ನಾನೇ ಹೋಗಿದ್ದೆ. ಆಗ ಮರದ ಬುಡದಲ್ಲಿ ಒಂದು ಪೆಟ್ಟಿಗೆ ತುಂಬ ಚಿನ್ನದ ಗಟ್ಟಿಗಳು ಸಿಕ್ಕಿವೆ. ಮನೆಗೆ ತಂದು ಹಾಗೆಯೇ ಇಟ್ಟಿದ್ದೇನೆ. ಇದನ್ನು ನಿನ್ನಲ್ಲಿ ಕೊಟ್ಟುಬಿಡುತ್ತೇನೆ. ಅವರಿಗೆ ತಲುಪಿಸಿಬಿಡು. ನನಗಂತೂ ಅದರ ಮೇಲೆ ವ್ಯಾಮೋಹವಿಲ್ಲ” ಎಂದು ಹೇಳಿದ. ಪೆಟ್ಟಿಗೆಯೊಂದಿಗೆ ರಜಾಕ್‌ ಬಂದಾಗ ಝಯಾನ್‌ಗೆ ಹೋದ ಜೀವ ಮರಳಿದಂತಾಯಿತು. ಮಗಳ ಮದುವೆಯನ್ನು ನಡೆಸಿ ಸುಖವಾಗಿದ್ದ.

ಪ. ರಾಮಕೃಷ್ಣ ಶಾಸ್ತ್ರಿ


ಈ ವಿಭಾಗದಿಂದ ಇನ್ನಷ್ಟು

 • ಜಯಂತ್‌ ಕಾಯ್ಕಿಣಿಯವರ ಬೊಗಸೆಯಲ್ಲಿ ಮಳೆಯಲ್ಲಿನ ಲೇಖನಗಳನ್ನು ದಿನಕ್ಕೊಂದು ಓದುತ್ತಿದ್ದೆ. ಸಮಯವಿರಲಿಲ್ಲ ಅಂತಲ್ಲ, ಎರಡು-ಮೂರು ದಿನಕ್ಕೆ ಮುಗಿದು ಬಿಟ್ಟರೆ...

 • ಆತ ಬಿ.ಎಸ್‌ಸಿ ಮಾಡುತ್ತಿದ್ದರೂ ಹೆಚ್ಚಾಗಿ ಇರುತ್ತಿದ್ದುದು ಅಡಿಕೆ ವಕಾರಿಯಲ್ಲಿ. ಅದು ಕುಟುಂಬದ ದಂಧೆ. ಅಲ್ಲದೆ, ಆತನಿಗೆ ಪ್ರೀತಿಯ ಕೆಲಸ ಅದು. ಅಡಿಕೆ ಕತ್ತರಿಸಿ...

 • ಇತ್ತೀಚೆಗೆ ಸೆಕೆಗೆ ಒಂದು ರಾತ್ರಿಯೂ ಸರಿಯಾಗಿ ನಿದ್ದೆ ಮಾಡಿಲ್ಲ. ಹೊತ್ತಲ್ಲದ ಹೊತ್ತಲ್ಲಿ ಕಣ್ಣು ಕೂರುತ್ತಿತ್ತು. ಇದನ್ನು ತಪ್ಪಿಸಲು ಒಂದು ಅಭ್ಯಾಸವನ್ನು ರೂಢಿಸಿಕೊಂಡಿದ್ದೇನೆ....

 • ಕಲೆ-ಸಂಸ್ಕೃತಿಗೆ ಸಂಬಂಧಿಸಿದ ಯಾವುದೇ ಕ್ಷೇತ್ರದಲ್ಲಿ "ಲೆಜೆಂಡ್‌' ಅನ್ನಿಸಿಕೊಂಡವರ ವ್ಯಕ್ತಿತ್ವದ ಸುತ್ತ ತೀವ್ರ ಅಭಿಮಾನದ ಹಾಗೂ ವಿಸ್ಮಯದ ಮಾಯಾ ಪರಿವೇಶವೊಂದು...

 • ಜಾಗತೀಕರಣ ತನ್ನ ಎಲ್ಲೆಗಳನ್ನು ವಿಸ್ತರಿಸಿಕೊಳ್ಳುತ್ತಿದ್ದ ಹಾಗೆ ಜನಮಾನಸವೂ ತನ್ನ ಅಸ್ಮಿತೆಗಳನ್ನು ಕಾಪಿಟ್ಟುಕೊಳ್ಳಲು ಹಲವು ದಾರಿಗಳನ್ನು ಕಂಡುಕೊಳ್ಳತೊಡಗಿತು....

ಹೊಸ ಸೇರ್ಪಡೆ

 • ಚಿಕ್ಕಬಳ್ಳಾಪುರ: ಕಳೆದ ಏ.18 ರಂದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಒಟ್ಟು 2,284 ಮತಗಟ್ಟೆಗಳಲ್ಲಿ ನಡೆದ ಚುನಾವಣೆಯ ಮತ ಎಣಿಕೆ ಕಾರ್ಯ ಮೇ.23 ರಂದು ನಗರದ ಹೊರ ವಲಯದ...

 • ಸಂತೆಮರಹಳ್ಳಿ: ಪಟ್ಟಣದ ತಹಶೀಲ್ದಾರ್‌ ಕಚೇರಿಯಲ್ಲಿರುವ ಪಡಸಾಲೆಯಲ್ಲಿ ಆಧಾರ್‌ ನೋಂದಣಿಯನ್ನು ಪುನಾರಂಭ ಮಾಡಲಾಗಿದೆ. ಈ ಬಗ್ಗೆ ಉದಯವಾಣಿ ಮೇ. 15 ರಂದು ಆಧಾರ್‌...

 • ಚಾಮರಾಜನಗರ: ಬಸವಾದಿ ಶರಣರು ಸ್ಥಾಪನೆ ಮಾಡಿರುವ ವೀರಶೈವ ಲಿಂಗಾಯತ ಧರ್ಮ ಸಂವಿಧಾನ ಕಲಂನಲ್ಲಿ ಪ್ರತ್ಯೇಕ ಧರ್ಮವಾಗುವ ಅಗತ್ಯತೆ ಇದೆ. ಈ ನಿಟ್ಟಿನಲ್ಲಿ ಸಮಾಜದ ಬಂಧುಗಳು...

 • ಹುಮನಾಬಾದ: ಕ್ಯಾಂಪಸ್‌ ಸಂದರ್ಶನ ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕೆ ನಾಂದಿಯಾಗುತ್ತದೆ ಎಂದು ತೆಲಂಗಾಣ ಜಹೀರಾಬಾದನ ಮಹೀಂದ್ರಾ ಆ್ಯಂಡ್‌ ಮಹಿಂದ್ರಾ ಆಟೋಮೊಬೈಲ್...

 • ಬೀದರ: ನಗರದ ಜಿಲ್ಲಾ ಸರ್ಕಾರಿ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿನ ಹವಾನಿಯಂತ್ರಿತ (ಎಸಿ)ವ್ಯವಸ್ಥೆ ಎರಡು ದಿನಗಳಿಂದ ಕೈ ಕೊಟ್ಟ ಹಿನ್ನೆಲೆಯಲ್ಲಿ ಚಿಕಿತ್ಸೆ...

 • ದೇವನಹಳ್ಳಿ: ಇಲ್ಲಿನ ಪುರಸಭೆ ಚುನಾವಣೆ 29ರಂದು 23 ವಾರ್ಡ್‌ಗಳಿಗೆ ವಿವಿಧ ಪಕ್ಷಗಳಿಂದ 78 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ನಾಮಪತ್ರ ಹಿಂಪಡೆಯಲು ಸೋಮವಾರ ಕಡೆ ದಿನವಾಗಿದ್ದರಿಂದ...