ಬೊಗಸೆಯಲ್ಲಿ ಮಳೆ ಕಾಯ್ಕಿಣಿ ಕಥನ : ಒಂದು ಸಾಕ್ಷ್ಯಚಿತ್ರ ನಿರ್ಮಾಣದ ಸುತ್ತ

Team Udayavani, Nov 3, 2019, 4:32 AM IST

2013ರಲ್ಲಿ ಜಯಂತ ಕಾಯ್ಕಿಣಿಯವರ ಸಿನೆಮಾ ಹಾಡುಗಳ ಕುರಿತ ಕಾರ್ಯಕ್ರಮವೊಂದನ್ನು ಆಯೋಜಿಸಿದ್ದೆ. ಅಲ್ಲಿಂದ ಮರಳುವ ಹಾದಿಯಲ್ಲಿ ಗೆಳೆಯರ ಜೊತೆ ಕಾರ್ಯಕ್ರಮದ ಅವಲೋಕನದ ಮಾತುಗಳನ್ನಾಡುತ್ತಿರುವಾಗ ಜಯಂತರ ಕುರಿತು ಸಾಕ್ಷ್ಯಚಿತ್ರ ಮಾಡುವ ಯೋಚನೆಯೊಂದು ಸುಳಿದುಹೋಯಿತು. ಮತ್ತೆ ಕೆಲವೇ ದಿನಗಳಲ್ಲಿ ನನ್ನ ಸಹಪಾಠಿಗಳಾದ ನಿತಿನ್‌, ಅನಿರುದ್ಧರ ಜೊತೆ ಸೇರಿಕೊಂಡು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾದೆವು.

ನಾನಾದರೋ ವಾಹಿನಿಯೊಂದರಲ್ಲಿ ಉದ್ಯೋಗದಲ್ಲಿದ್ದ ದಿನಗಳವು. ಬೇಕೆಂದಾಗ ರಜೆ ಸಿಗುತ್ತಿರಲಿಲ್ಲ. ಹಾಗಾಗಿ, ನಮ್ಮ ಸಮಯಾನುಕೂಲದಲ್ಲಿ ಸ್ವಲ್ಪ ಸ್ವಲ್ಪವೇ ಚಿತ್ರೀಕರಣ ಮಾಡುತ್ತಿದ್ದೆವು. ಜಯಂತ ಕಾಯ್ಕಿಣಿಯವರು ಒಂದಷ್ಟು ಮಂದಿಯ ಹೆಸರು ಸೂಚಿಸಿ ಅವರನ್ನು ಸಂದರ್ಶಿಸುವಂತೆ ಹೇಳಿದ್ದರು. ಅವರನ್ನೆಲ್ಲ ಸಂಪರ್ಕಿಸಿ ಅವರ ಸಮಯಾನುಕೂಲದಲ್ಲಿ ಸಂದರ್ಶನ ನಡೆಸುತ್ತಿದ್ದೆವು. ಜಯಂತ ಕಾಯ್ಕಿಣಿಯವರ ಹುಟ್ಟೂರಾದ ಗೋಕರ್ಣವೂ ಸೇರಿದಂತೆ ಹೊನ್ನಾವರ, ಬೆಂಗಳೂರು, ಧಾರವಾಡ, ಮುಂಬಯಿ- ಮುಂತಾದ ಊರುಗಳಿಗೆ ತೆರಳಿದೆವು.

ಹತ್ತಾರು ಗಂಟೆಗಳ ಅವಧಿಯ ಶೂಟಿಂಗ್‌ ಮಾಡಿ ಸಂಗ್ರಹಿಸಿದ್ದು ಬಿಟ್ಟರೆ ಸಾಕ್ಷ್ಯಚಿತ್ರವನ್ನು ಹೇಗೆ ಮಾಡಬೇಕು ಎಂಬ ಬಗ್ಗೆ ಕಲ್ಪನೆಯೇ ಇರಲಿಲ್ಲ. ಆದರೆ, ದೀರ್ಘಾವಧಿಯ ಫ‌ೂಟೇಜ್‌ ಅನ್ನು ಸಂಕಲನ ಮಾಡಲು ಕುಳಿತಾಗ ಕಲ್ಪನೆ ಮೂರ್ತ ಸ್ವರೂಪಕ್ಕೆ ಬರತೊಡಗಿತು. ಹಾಗೆ ಕೆಲವೊಮ್ಮೆ ಮಧ್ಯರಾತ್ರಿಯವರೆಗೆ, ಇನ್ನು ಕೆಲವೊಮ್ಮೆ ಮುಂಜಾನೆಯವರೆಗೆ ಸಂಕಲನ ಮಾಡುತ್ತ ಕುಳಿತದ್ದಿದೆ. 2014ರಲ್ಲಿ ಉಡುಪಿ ಜಿಲ್ಲೆಯ ಕೋಟದ ಕಾರಂತ ಭವನದಲ್ಲಿ ಜಯಂತ ಕಾಯ್ಕಿಣಿಯವರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಾಕ್ಷ್ಯಚಿತ್ರದ “ಪ್ರಮೊ’ವನ್ನು ಬಿಡುಗಡೆ ಮಾಡಿದ್ದೂ ಆಯಿತು.

ಆಮೇಲೆ ಒಮ್ಮೆ ಗೆಳೆಯರಾದ ರಾಜ್‌ಗುಡಿಯವರ ಮನೆಯಲ್ಲಿ ಒಂದಷ್ಟು ಆಪ್ತರ ಮುಂದೆ ಸಾಕ್ಷ್ಯಚಿತ್ರದ ಕೆಲವು ಭಾಗಗಳನ್ನು ವೀಕ್ಷಿಸಿದೆವು. ವಿವಿಧ ರೀತಿಯ ಸಲಹೆಗಳು ಬಂದವು. ಯಾವ ಭಾಗವನ್ನು ಇಟ್ಟುಕೊಳ್ಳಬೇಕು, ಯಾವುದನ್ನು ಕೈಬಿಡಬೇಕು ಎಂಬ ಬಗ್ಗೆ ಜಿಜ್ಞಾಸೆ ಉಂಟಾಯಿತು. ಕಾಲೇಜಿನಲ್ಲಿ ನಮಗೆ ಸಿನೆಮಾ ಕುರಿತು ಪಾಠ ಹೇಳಿದ ಸಂವರ್ತ ಸಾಹಿಲ್‌ ಅವರ ಸಲಹೆ ಪಡೆದೆವು.

ಜಯಂತ ಕಾಯ್ಕಿಣಿಯವರ ಹಾಡುಗಳನ್ನು ಪ್ರತಿ ಬಾರಿ ಕೇಳುವಾಗಲೂ ಅದು ಹೊಸದೇ ಆದ ಕಲ್ಪನಾಲೋಕವನ್ನು ಸೃಷ್ಟಿಸುತ್ತಿದ್ದವು. ಹಾಗಾಗಿ, ಸಂಕಲನ ಮಾಡಿದ ಸಾಕ್ಷ್ಯಚಿತ್ರವನ್ನು ಮತ್ತೆ ಮತ್ತೆ ವೀಕ್ಷಿಸಿದಾಗ “ಇಷ್ಟು ಸಾಲದು’ ಅನ್ನಿಸುತ್ತಿತ್ತು. ಅಂತೂ 2015ರ ಆಗಸ್ಟ್‌ ತಿಂಗಳಲ್ಲಿ ಸಾಕ್ಷ್ಯಚಿತ್ರದ ಮೊದಲ ಪ್ರತಿ ಸಿದ್ಧಗೊಂಡಿತು. ಆದರೆ, ಸಾಕ್ಷ್ಯಚಿತ್ರದ ಬಿಡುಗಡೆಗೆ ಮತ್ತೆ ನಾಲ್ಕು ವರ್ಷ ಕಾಯಬೇಕಾಯಿತು!

ಸಾಕ್ಷ್ಯಚಿತ್ರವೊಂದರ ಚೌಕಟ್ಟಿನಲ್ಲಿ ಜಯಂತ ಕಾಯ್ಕಿಣಿಯಂಥ ವಿಶಿಷ್ಟ ಮನಸ್ಸಿನ ಬದುಕನ್ನು ಕಟ್ಟಿಕೊಡುವುದು ಕಷ್ಟವೇ. ಸ್ವತಃ ಜಯಂತ ಕಾಯ್ಕಿಣಿಯವರೇ “ಒಂದು ಚೌಕಟ್ಟಿನೊಳಗೆ ಬದುಕಬೇಡಿ. ಬದುಕನ್ನು ಬಂದ ಹಾಗೆ ಸ್ವೀಕರಿಸಿ ಮುನ್ನಡೆಯಿರಿ’ ಎಂದು ಹೇಳುತ್ತಾರೆ. ಸಾಹಿತ್ಯದ ಕುರಿತಾದ ಅವರ ಧೋರಣೆಯೂ ಚೌಕಟ್ಟಿನ ಹೊರಗೆ ಬರಲು ತವಕಿಸುವಂಥಾದ್ದು. ಅವರ ಕತೆಗಳು ಕೂಡಾ ಹಾಗೆಯೇ. ಮುಖ್ಯವಾಹಿನಿಯ ಆಚೆಗಿರುವ ಬದುಕನ್ನು ಕತೆಗಳನ್ನಾಗಿಸುತ್ತಾರೆ. ಅಂಥವರನ್ನು ಕೆಲವೇ ನಿಮಿಷಗಳ ಸಾಕ್ಷ್ಯಚಿತ್ರದಲ್ಲಿ ಸಂಗ್ರಾಹ್ಯವಾಗಿ ಕೊಡುವುದು ಸವಾಲೇ ಸರಿ. ಅಂತೂ 2019ರ ಕೋಟದ ಕಾರಂತ ಭವನದಲ್ಲಿಯೇ ಸಾಕ್ಷ್ಯಚಿತ್ರಕ್ಕೆ ಬಿಡುಗಡೆಯ ಭಾಗ್ಯ ಬಂತು. “ಬೊಗಸೆಯಲ್ಲಿ ಮಳೆ’ ಅದರ ಶೀರ್ಷಿಕೆ. ಅದೀಗ ಯೂಟ್ಯೂಬ್‌ನಲ್ಲಿ ಲಭ್ಯ.

ಈ ಸಾಕ್ಷ್ಯಚಿತ್ರ ನಿರ್ಮಾಣವೆಂಬುದು ನಮ್ಮ ಬಳಗದವರ ಪಾಲಿಗೆ ಒಂದು ಅನುಭವ ಯಾತ್ರೆ. ಅನಂತನಾಗ್‌, ಪ್ರಕಾಶ್‌ ರೈ, ಜಿ. ಎಸ್‌. ಅಮೂರ, ವಿವೇಕ ಶಾನುಭಾಗ, ಎಂ. ಎಸ್‌. ಶ್ರೀರಾಮ್‌, ವ್ಯಾಸರಾವ್‌ ನಿಂಜೂರ್‌ ಹೀಗೆ ಅನೇಕ ಮಂದಿಯನ್ನು ಸಂದರ್ಶನ ಮಾಡುವ ಅವಕಾಶ ದೊರೆಯಿತು. ಅನೇಕ ಊರುಗಳನ್ನು ಸುತ್ತಾಡುತ್ತ ಕೆಮರಾ ಕಣ್ಣಿನಲ್ಲಿ ನೋಡುವುದಕ್ಕೆ ಸಾಧ್ಯವಾಯಿತು.
ಬೊಗಸೆಯಲ್ಲಿ ಹಿಡಿದಷ್ಟು ಮಳೆ ; ಈ ಸಾಕ್ಷ್ಯಚಿತ್ರವೂ.

— ಅವಿನಾಶ್‌ ಕಾಮತ್‌

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಮಳೆ ನಿಂತ ಮೇಲೂ ಮರದಿಂದ ತೊಟ್ಟಿಕ್ಕುವ ಹನಿಗಳ ಹಾಗೆ ಬಿಸಿಲನಾಡಿನ ಸಮ್ಮೇಳನ ಮುಗಿದ ಮೇಲೂ ಸವಿಕ್ಷಣಗಳು ಮತ್ತೆ ಮತ್ತೆ ಮನಸ್ಸಿಗೆ ಬರುತ್ತಿವೆ. ಫೆಬ್ರವರಿ 5 ರಿಂದ...

  • ಸಿಂಗಾಪುರದಲ್ಲಿ ಪ್ರತಿವರ್ಷ ಜನವರಿ ಕೊನೆಯ ವಾರ ಅಥವಾ ಫೆಬ್ರವರಿ ಮೊದಲ ವಾರದಲ್ಲಿ ಬರುವ ಚೀನೀಯರ ಹೊಸ ವರ್ಷದ ಯಾವ ಸಂಭ್ರಮಾಚರಣೆಗಳೂ ಹೊರಜಗತ್ತಿಗೆ ಕಾಣದೆ ಜನರೆಲ್ಲ...

  • ಅದೊಂದು ಚಿಕ್ಕ ಊರು. ಹೆಸರು ಹೆಸರೂರು. ಅದರ ಬಗ್ಗೆ ಕೇಳಿದವರಿಲ್ಲ, ಅದನ್ನು ನೋಡಿದವರಿಲ್ಲ. ಅಂಥ ಊರೊಂದು ಇದೆ ಎಂದೇ ಯಾರಿಗೂ ತಿಳಿದಿರಲಿಲ್ಲ. ಒಮ್ಮೆ ಹೀಗಾಯಿತು....

  • ಇತ್ತೀಚೆ ನೋಬೆಲ್‌ ಪ್ರಶಸ್ತಿ ವಿಜೇತ ಅಭಿಜಿತ್‌ ಬ್ಯಾನರ್ಜಿ ಮಾತುಕತೆಯೊಂದರಲ್ಲಿ ತಾನು ಭಾರತದಲ್ಲೇ ಇದ್ದಿದ್ದರೆ ಈ ಪ್ರಶಸ್ತಿ ಸಿಗುತ್ತಿರಲಿಲ್ಲವೆಂಬ ಮಾತು...

  • ಮುಂಬಯಿಯ ಕಾಲಾಘೋಡ ಉತ್ಸವವು ಈಗಷ್ಟೇ ಮುಗಿಯಿತು. ಪ್ರತಿ ಫೆಬ್ರವರಿ ಎರಡನೆಯ ವಾರದಲ್ಲಿ ಜರಗುವ ಈ ಕಲಾ ಉತ್ಸವವು ಕಳೆದ ಇಪ್ಪತ್ತು ವರ್ಷಗಳಿಂದ ನಡೆದುಕೊಂಡು ಬರುತ್ತಿದೆ....

ಹೊಸ ಸೇರ್ಪಡೆ