‘ಸತ್ತವರ ಸಂಗದಲಿ ಹೊತ್ತು ಹೋಗುವುದು ಎನಗೆ’


Team Udayavani, Aug 4, 2019, 5:26 AM IST

x-58

ಕರಾವಳಿ ಪರಿಸರದಲ್ಲಿ ಕನ್ನಡ ಸಾಹಿತ್ಯ, ಸಂಸ್ಕೃತಿಯ ಪ್ರಸರಣಕ್ಕೆ ಮಹಣ್ತೀದ ಕೊಡುಗೆ ಸಲ್ಲಿಸಿದ ಏರ್ಯ ಲಕ್ಷ್ಮೀನಾರಾಯಣ ಆಳ್ವರು 94ರ ಹರೆಯದಲ್ಲಿ ಇತ್ತೀಚೆಗೆ ನಿಧನರಾಗಿದ್ದಾರೆ. ಸಾಹಿತ್ಯ ಸಂಘಟನೆ ಎಂದರೆ ಶಾಮಿಯಾನ, ಊಟೋಪಚಾರಗಳ ವ್ಯವಸ್ಥೆ ಎಂಬುದನ್ನಷ್ಟೇ ಅರಿತಿರುವ ಈ ದಿನಗಳ ಸಂಘಟಕರಿಗಿಂತ ಏರ್ಯರು ಬಹಳ ಭಿನ್ನರು. ಪಂಪನಿಂದ ಲಂಕೇಶ್‌ವರೆಗೂ ಎಲ್ಲ ಬರಹಗಾರರನ್ನು ಓದಿದ್ದ ಅವರು ಸ್ವತಃ ಕವಿಯಾಗಿದ್ದರು, ಲೇಖಕರಾಗಿದ್ದರು. ನೆನಪಿಗೆ ಸಂದ ಹಲವಾರು ಸಾಹಿತಿಗಳ ಶತಮಾನೋತ್ಸವ ಆಯೋಜನೆಯ ನೇತೃತ್ವ ವಹಿಸಿದ್ದ ಏರ್ಯರು ಅರ್ಥಪೂರ್ಣವಾಗಿ ಉದ್ಧರಿಸುತ್ತಿದ್ದ ಉಕ್ತಿ: ‘ಸತ್ತವರ ಸಂಗದಲಿ ಹೊತ್ತು ಹೋಗುವುದು ಎನಗೆ’

1968ರಲ್ಲಿ ಮೈಸೂರು ವಿಶ್ವವಿದ್ಯಾನಿಲಯವು ಮಂಗಳೂರಿನಲ್ಲಿ ಸ್ನಾತಕೋತ್ತರ ಕೇಂದ್ರವನ್ನು ಆರಂಭಿಸಿದಾಗ ಕನ್ನಡ ವಿಭಾಗದ ಮತ್ತು ಕೇಂದ್ರದ ಮುಖ್ಯಸ್ಥರನ್ನಾಗಿ ಕಳುಹಿಸಿದ್ದು ಹಿರಿಯ ಕವಿ ಪ್ರೊ. ಎಸ್‌. ವಿ. ಪರಮೇಶ್ವರ ಭಟ್ಟರನ್ನು (ಎಸ್‌ವಿಪಿ). 1968 ಜೂನ್‌ನಲ್ಲಿ ಅವರು ಮೈಸೂರಿನಿಂದ ಮಂಗಳೂರಿಗೆ ಬರುವಾಗ ಬಂಟ್ವಾಳದಲ್ಲಿ ನೆರೆಬಂದು ಮುಂದೆ ಹೋಗಲಾರದೆ ಆ ದಿನ ರಾತ್ರಿ ತಂಗಿದ್ದು ಏರ್ಯ ಲಕ್ಷ್ಮೀನಾರಾಯಣ ಆಳ್ವರ ಏರ್ಯಬೀಡಿನಲ್ಲಿ. ನೆರೆ ಮರುದಿನ ಇಳಿಯಿತು. ಆದರೆ, ಏರ್ಯ ಮತ್ತು ಎಸ್‌ವಿಪಿ ನಂಟು ಮಂಗಳಗಂಗೋತ್ರಿ ಕನ್ನಡ ವಿಭಾಗದ ಮೂಲಕ ಏರುತ್ತ ಹೋಯಿತು. ಸ್ನಾತಕೋತ್ತರ ಕನ್ನಡ ವಿಭಾಗದಲ್ಲಿ ಎಂಎಯ ಮೊದಲ ತಂಡದ ವಿದ್ಯಾರ್ಥಿಯಾಗಿ ಸೇರಿದ ನನಗೆ ಗುರುಗಳಾದ ಎಸ್‌ವಿಪಿ ಜೊತೆಗೆ ಏರ್ಯರು ಇನ್ನೊಬ್ಬ ಗುರುಗಳಾದರು. ಮಂಗಳೂರಿನ ಕರಂಗಲಪಾಡಿಯಲ್ಲಿ ಅಲೋಸಿಯಸ್‌ ಕಾಲೇಜಿನ ಆವರಣದ ಹಳೆಯ ಪೋರ್ಟಿಕೊ ಮನೆಯ ಕಟ್ಟಡದಲ್ಲಿ ಇದ್ದ ನಮ್ಮ ಕನ್ನಡ ವಿಭಾಗದ ಬಹುಮುಖೀ ಚಟುವಟಿಕೆಗಳಲ್ಲಿ 42-44ರ ಹರೆಯದ ತರುಣ ಏರ್ಯರು ಸದಾ ಕ್ರಿಯಾಶೀಲರಾಗಿ ಭಾಗವಹಿಸುತ್ತಿದ್ದರು. ವಿದ್ಯಾರ್ಥಿಯಾಗಿದ್ದ ನನ್ನನ್ನು ಪ್ರೀತಿಯಿಂದ ಮಾತಾಡಿಸುತ್ತಿದ್ದರು.

1969 ಫೆಬ್ರವರಿ 3, 4, 5ರಂದು ಅಖೀಲ ಕರ್ನಾಟಕ ಎರಡನೆಯ ಜಾನಪದ ಸಮ್ಮೇಳನವು ಮಂಗಳೂರು ಪುರಭವನದಲ್ಲಿ ನಡೆಯಿತು. ಎಚ್. ಎಲ್. ನಾಗೇಗೌಡರು ದಕ್ಷಿಣಕನ್ನಡ ಜಿಲ್ಲಾಧಿಕಾರಿ ಆಗಿದ್ದ ಸಂದರ್ಭದಲ್ಲಿ ಯೋಜಿಸಿದ್ದ ಆ ಸಮ್ಮೇಳನದ ವೇಳೆಗೆ ಅವರಿಗೆ ವರ್ಗಾವಣೆ ಆದ ಕಾರಣ, ಸಮ್ಮೇಳನದ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತುಕೊಂಡವರು ಏರ್ಯರು. ಸಿಂಪಿ ಲಿಂಗಣ್ಣನವರು ಸಮ್ಮೇಳನದ ಅಧ್ಯಕ್ಷರಾಗಿದ್ದ , ಕರ್ನಾಟಕದ ಎಲ್ಲ ಹಿರಿಯ ಜಾನಪದ ವಿದ್ವಾಂಸರು ಭಾಗವಹಿಸಿದ್ದ ಮತ್ತು ಕರ್ನಾಟಕದ ಎಲ್ಲ ಪ್ರದೇಶಗಳ ಜನಪದ ಕಲೆಗಳ ತಂಡಗಳು ಪಾಲುಗೊಂಡಿದ್ದ ಆ ಐತಿಹಾಸಿಕ ಸಮ್ಮೇಳನದಲ್ಲಿ ಏರ್ಯರ ಸಂಘಟನಾ ಶಕ್ತಿಯನ್ನು ಕಂಡು ಬೆರಗಾದೆ. ಆ ಸಮ್ಮೇಳನದಲ್ಲಿ ವಿದ್ಯಾರ್ಥಿಯಾಗಿ ಪ್ರಬಂಧ ಮಂಡಿಸಲು ಗುರುಗಳಾದ ಪರಮೇಶ್ವರ ಭಟ್ಟರು ಅವಕಾಶ ಕಲ್ಪಿಸಿದ ಕಾರಣ ದಕ್ಷಿಣಕನ್ನಡ ಜಿಲ್ಲೆಯ ಜನಪದ ಕಲಾತ್ಮಕ ವಿನೋದಗಳು ಎಂಬ ಪ್ರಬಂಧ ಮಂಡಿಸಿದೆ. ಪ್ರಬಂಧಮಂಡನೆಯ ಬೆನ್ನಿಗೆಯೇ ಏರ್ಯರು ನನ್ನ ಬೆನ್ನಿಗೆ ಕೈಹಾಕಿ ಪ್ರೀತಿಯಿಂದ ಪ್ರೋತ್ಸಾಹದ ಮಾತುಗಳನ್ನು ಆಡಿದ ನೆನಪು ಇಂದೂ ಬೆಚ್ಚನೆಯ ಅನುಭವವನ್ನು ಕೊಡುತ್ತಿದೆ.

1970ರಲ್ಲಿ ಕನ್ನಡ ಎಂಎ ಮುಗಿಸಿ, ನಾನು ಕಲಿತ ಕನ್ನಡ ವಿಭಾಗದಲ್ಲಿ ಉಪನ್ಯಾಸಕನಾಗಿ ಸೇರಿದ ಬಳಿಕ ಏರ್ಯರ ನೇರ ಸಂಪರ್ಕದ ಸುಖ ದೊರೆಯಿತು. ಕನ್ನಡ ವಿಭಾಗದ ನಾವು ನಾಲ್ವರು ಅಧ್ಯಾಪಕರು- ಪರಮೇಶ್ವರ ಭಟ್ಟ , ಲಕ್ಕಪ್ಪ ಗೌಡ, ಚಂದ್ರಶೇಖರ ಐತಾಳ ಮತ್ತು ನಾನು ನಮ್ಮ ಹೆಸರಿನ ಮೊದಲ ಅಕ್ಷರಗಳನ್ನು ಸೇರಿಸಿ ‘ಪಲಚಂವಿ ಪ್ರಕಾಶನ’ವನ್ನು ಆರಂಭಿಸಿದಾಗ ಏರ್ಯರು ನಮ್ಮ ಬಳಗದ ಖಾಯಂ ಸದಸ್ಯರಾಗಿ ನಮ್ಮ ಎಲ್ಲ ಸಭೆಗಳಲ್ಲೂ ಭಾಗವಹಿಸುತ್ತಿದ್ದರು. ಆಗತಾನೆ ಆರಂಭವಾದ ಕಾಮರ್ಸ್‌ ವಿಭಾಗದ ಉಪನ್ಯಾಸಕ ಬಿ. ಆರ್‌. ಅನಂತನ್‌ ನನ್ನಲ್ಲಿ ಒಮ್ಮೆ ಕೇಳಿದ್ದರು- ‘ಆ ಪಂಚೆ ಉಟ್ಟುಕೊಂಡು ನಿಮ್ಮ ಕನ್ನಡವಿಭಾಗಕ್ಕೆ ಹೆಚ್ಚಾಗಿ ಬರುತ್ತಿರುವವರು ಅತಿಥಿ ಉಪನ್ಯಾಸಕರೆ?’ ಎಂದು. ಏರ್ಯರು ನಿಧನವಾದ ಸುದ್ದಿ ತಿಳಿದು ಪ್ರೊ. ಅನಂತನ್‌ ಮೊನ್ನೆ ಮೈಸೂರಿನಿಂದ ನನಗೆ ಫೋನ್‌ ಮಾಡಿ ಹಳೆಯ ನೆನಪುಗಳನ್ನು ಹಂಚಿಕೊಂಡರು.

1971 ಮಾರ್ಚ್‌ನಲ್ಲಿ ನನ್ನ ಮೊದಲನೆಯ ಕೃತಿ ತುಳುಗಾದೆಗಳು ಬಿಡುಗಡೆಯ ಕಾರ್ಯಕ್ರಮ ಕರಂಗಲಪಾಡಿಯ ನಮ್ಮ ಕನ್ನಡ ವಿಭಾಗದ ಕಟ್ಟಡದ ಹೊರಜಗಲಿಯಲ್ಲಿ . ನನಗೆ ಆತಂಕ ಸಂಭ್ರಮ ತುಂಬಿದ ಕ್ಷಣದಲ್ಲಿ ನನ್ನ ಮೊದಲ ಪುಸ್ತಕವನ್ನು ಬಿಡುಗಡೆ ಮಾಡಿದವರು ಏರ್ಯ ಲಕ್ಷ್ಮ್ಮೀನಾರಾಯಣ ಆಳ್ವರು. ಎಸ್‌ವಿಪಿ ಅವರ ಅಧ್ಯಕ್ಷತೆ. ಏರ್ಯರ ಬೆಚ್ಚನೆಯ ಮಾತುಗಳು, ನಾನು ಮುಂದೆ ಮಾಡಬೇಕಾದ ಕೆಲಸಗಳ ಬಗ್ಗೆ ಎಚ್ಚರದ ಮಾತುಗಳು ಇಂದಿಗೂ ನೆನಪಿನಲ್ಲಿ ಇವೆ.

ಏರ್ಯರು ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಅವರ ತಂಗುತ್ತಿದ್ದುದು ಬ್ಯಾಂಕಿನ ಅತಿಥಿಗೃಹದಲ್ಲಿ. ಅವರು ಮಂಗಳೂರಿಗೆ ಬಂದಾಗಲೆಲ್ಲ ನಮ್ಮ ಕನ್ನಡ ವಿಭಾಗಕ್ಕೆ ಅವರ ಭೇಟಿ ನಿಶ್ಚಯ.

ನಮ್ಮ ಜೊತೆಗೆ ಸಾಹಿತ್ಯ ಸಹಿತ ಲೋಕಾಭಿರಾಮದ ಮಾತುಕತೆ. ಒಳ್ಳೆಯ ಸಿನೆಮಾ ಬಂದಿದೆ. ಈ ರಾತ್ರಿ ಹೋಗೋಣ- ಅವರ ಸಲಹೆ. ಅವರೇ ಟಿಕೆಟ್ ವ್ಯವಸ್ಥೆ ಮಾಡಿಸಿರುತ್ತಾರೆ. ಆ ಕಾಲದಲ್ಲಿ ಅವರ ಜೊತೆಗೆ ಅನೇಕ ಒಳ್ಳೆಯ ಸಿನೆಮಾಗಳಿಗೆ ಹೋಗಿದ್ದೇನೆ. ಸಿನೆಮಾದಿಂದ ಹಿಂದಕ್ಕೆ ಬರುವಾಗ ಸಿನೆಮಾದ ಬಗ್ಗೆ ವಿಮರ್ಶೆ ಮಾತುಕತೆ.

1971 ಜುಲೈ 11: ಎಸ್‌. ವಿ. ಪರಮೇಶ್ವರ ಭಟ್ಟರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದ ಸಂದರ್ಭದಲ್ಲಿ ಅವರನ್ನು ಗೌರವಿಸಲು ಕಾರ್ಯಕ್ರಮ ರೂಪಿಸುವ ಸಭೆ ಮಂಗಳೂರು ಗಣಪತಿ ಹೈಸ್ಕೂಲಿನಲ್ಲಿ ನಡೆಯಿತು, ಏರ್ಯರ ಹಿರಿತನದಲ್ಲಿ. ಸಭೆ ಮುಗಿಸಿ ಏರ್ಯರು, ಲಕ್ಕಪ್ಪ ಗೌಡರು ಮತ್ತು ನಾನು ಸಿನೆಮಾಕ್ಕೆ ಹೋಗುವುದೆಂದು ಹೊರಟೆವು. ಆದರೆ, ಸಿನೆಮಾಕ್ಕೆ ಟಿಕೆಟ್ ಸಿಗಲಿಲ್ಲ. ಪ್ರಶಾಂತ ವಾತಾವರಣದಲ್ಲಿ ಕುಳಿತುಕೊಳ್ಳೋಣ ಎಂದು ಅಲೋಶಿಯಸ್‌ ಕಾಲೇಜಿನ ಹೊರಗೆ ಬಾವುಟಗುಡ್ಡೆಯಲ್ಲಿ ಒಂದು ಕಟ್ಟೆಯಲ್ಲಿ ಕುಳಿತೆವು. ಏರ್ಯರು ತಾವು ಅಚ್ಚಿಗೆ ಕೊಡಲಿರುವ ಒಂದು ಪುಸ್ತಕದ ಬಗ್ಗೆ ತಿಳಿಸಿದರು. ಅದೊಂದು ಪತ್ರ ಗುಚ್ಛ . ನೊಂದ ತಂಗಿಗೆ ಅಣ್ಣ ನಾನಾ ಸಂದರ್ಭಗಳಲ್ಲಿ ಬರೆದ ಪತ್ರಗಳು. ಕೆಲವು ಪತ್ರಗಳನ್ನು ಅವರು ಓದುತ್ತ ಹೋದರು. ಬಹಳ ಕಾವ್ಯಮಯವಾದ ಶೈಲಿ. ಸ್ನೇಹ ಮತ್ತು ಕಣ್ಣೀರು ಅಲ್ಲಿ ಜೀವಂತವಾಗಿ ಕಾಣಿಸಿದವು. ಸುಮಾರು ಒಂದೂವರೆ ಗಂಟೆ ಅವರು ಪತ್ರವಾಚನ ಮಾಡಿದರು. ಅದೇ ಮುಂದೆ ಸ್ನೇಹಸೇತು ಹೆಸರಿನಲ್ಲಿ ಪ್ರಕಟವಾಯಿತು.

1971 ಅಕ್ಟೋಬರ್‌ 27ರಿಂದ 29ರವರೆಗೆ ನಾಗಮಂಗಲ ದಲ್ಲಿ ಅಖೀಲ ಕರ್ನಾಟಕ ಮೂರನೆಯ ಜಾನಪದ ಸಮ್ಮೇಳನ ನಡೆಯಿತು. ಅಧ್ಯಾಪಕನಾಗಿ ನಾನು ಪ್ರಬಂಧ ಮಂಡಿಸಿದ ಮೊದಲನೆಯ ಸಮ್ಮೇಳನ ಅದು. ಕುವೆಂಪು ಉದ್ಘಾಟಿಸಿದ, ಬೆಟಗೇರಿ ಕೃಷ್ಣ ಶರ್ಮ ಅಧ್ಯಕ್ಷರಾಗಿದ್ದ ಆ ಸಮ್ಮೇಳನದಲ್ಲಿ ಕರಾವಳಿಯಿಂದ ಏರ್ಯರ ಜೊತೆಗೆ ನನ್ನ ಪಯಣ ಮತ್ತು ಪ್ರಬಂಧ ಮಂಡನೆ. ಅವರದ್ದು ತುಳುನಾಡಿನ ಜನಪದ ಕುಣಿತಗಳು, ನನ್ನದು ದಕ್ಷಿಣ ಕನ್ನಡ ಜಿಲ್ಲೆಯ ಜನಪದ ಸಾಹಿತ್ಯ.

ಗತಕಾಲದ ಒಬ್ಬ ಕವಿ/ಸಾಹಿತಿಯನ್ನು ಪ್ರತಿ ನೂರು ವರ್ಷಕ್ಕೊಮ್ಮೆ ಮರುಮೌಲ್ಯಮಾಪನ ಮಾಡಬೇಕು ಎನ್ನುವ ಅರ್ಥದ ಮಾತುಗಳನ್ನು ಪ್ರಸಿದ್ಧ ಇಂಗ್ಲಿಷ್‌ ಸಾಹಿತ್ಯ ವಿಮರ್ಶಕ ಟಿ. ಎಸ್‌. ಎಲಿಯಟ್ ಹೇಳುತ್ತಾನೆ. ಕನ್ನಡದ ಕವಿ ಸಾಹಿತಿಗಳ ನೂರರ ನೆನಪಿನ ಕಾರ್ಯಕ್ರಮಗಳಲ್ಲಿ ಪಂಜೆ ಶತಮಾನೋತ್ಸವ ಒಂದು ಮಹತ್ವದ ಮೈಲಿಗಲ್ಲು. ಏರ್ಯ ಲಕ್ಷ್ಮೀನಾರಾಯಣ ಆಳ್ವರ ಅಧ್ಯಕ್ಷತೆಯ ಪಂಜೆ ಶತಮಾನೋತ್ಸವ ಸಮಿತಿಯ ಆಶ್ರಯದಲ್ಲಿ 1974 ಫೆಬ್ರವರಿ 8, 9 ಮತ್ತು 10ರಂದು ನಡೆದ ಕಾರ್ಯಕ್ರಮವು ನಾನು ಕಂಡ ಹಾಗೆ ಒಂದು ಅಪೂರ್ವ ಸಾಹಿತ್ಯ ಸಮ್ಮೇಳನವೇ ಆಗಿತ್ತು. ಮೊದಲನೆಯ ದಿನ ಪಂಜೆಯವರ ವಾಸ್ತವ್ಯ ಇದ್ದ ಬಂಟ್ವಾಳದಲ್ಲಿ ಉದ್ಘಾಟನೆ, ಮುಂದಿನ ಎರಡು ದಿನ ಮಂಗಳೂರು ಗಣಪತಿ ಹೈಸ್ಕೂಲಿನಲ್ಲಿ ಸಾಹಿತ್ಯ ಕಾರ್ಯಕ್ರಮಗಳು. ಕನ್ನಡದ ಹಿರಿಯ ಮತ್ತು ಮುಖ್ಯ ಸಾಹಿತಿಗಳ ಸಮ್ಮಿಲನದ ಹಿಂದೆ ಏರ್ಯರ ಪ್ರೀತಿ ಮತ್ತು ದುಡಿಮೆ ಮೇಳೈಸಿತ್ತು. ಮಾಸ್ತಿ, ಶಿವರಾಮ ಕಾರಂತ, ವೀ. ಸೀತಾರಾಮಯ್ಯ, ಜಿ. ಪಿ. ರಾಜರತ್ನಂ, ಗೊರೂರು ರಾಮಸ್ವಾಮಿ ಅಯ್ಯಂಗಾರ್‌, ಕೆ. ಎಸ್‌. ನರಸಿಂಹಸ್ವಾಮಿ, ಗೌರೀಶ್‌ ಕಾಯ್ಕಿಣಿ, ದೇ. ಜವರೇ ಗೌಡ, ಹಾ. ಮಾ. ನಾಯಕ, ಎಸ್‌ವಿಪಿ, ಜಿ. ಎಸ್‌. ಶಿವರುದ್ರಪ್ಪ, ಕಯ್ನಾರ‌, ಕೋ. ಚನ್ನಬಸಪ್ಪ , ನಿಸಾರ್‌ ಅಹಮ್ಮದ್‌, ಕಂಬಾರ, ಎಕ್ಕುಂಡಿ, ಬನ್ನಂಜೆ, ಅಮೃತ ಸೋಮೇಶ್ವರ, ಎಂ. ರಾಮಚಂದ್ರ, ರಾಮದಾಸ್‌, ತಿರುಮಲೇಶ್‌ ಸಹಿತ ಕನ್ನಡ ಸಾರಸ್ವತ ಲೋಕ ತೆರೆದುಕೊಂಡಿತ್ತು.

ಸಾಹಿತ್ಯ ಸಂಘಟನೆ- ಸಾಹಿತ್ಯ ಪ್ರಕಟಣೆ
ಸಾಹಿತಿಗಳ ಶತಮಾನೋತ್ಸವದ ಆಚರಣೆಯಲ್ಲಿ ಏರ್ಯ ಅನುಸರಿಸಿದ ಒಂದು ಪ್ರಮುಖ ಮಾರ್ಗವೆಂದರೆ ಆ ಸಾಹಿತಿಗಳ ಸಮಗ್ರ ಸಾಹಿತ್ಯದ ಪ್ರಕಟಣೆ. ‘ಸಾಹಿತ್ಯ ಸಂಘಟನೆ’ ಎನ್ನುವುದು ಇವತ್ತು ಬಹಳ ಸಡಿಲ ಅರ್ಥದಲ್ಲಿ ಬಳಕೆ ಆಗುತ್ತಿದೆ. ಸಾಹಿತ್ಯದ ಹೆಸರಿನಲ್ಲಿ ಮೆರವಣಿಗೆ, ಉತ್ಸವ ನಡೆಸುವುದು, ಸನ್ಮಾನ ಮಾಡುವುದು, ಭೋಜನದ ವೈವಿಧ್ಯಗಳೇ ತಿರುಳು ಆಗುತ್ತಿರುವ ಸಂದರ್ಭದಲ್ಲಿ ಸಾಹಿತಿಗಳ ಸಮಗ್ರ ಸಾಹಿತ್ಯದ ಪ್ರಕಟಣೆ ಒಂದು ಸಾಂಸ್ಕೃತಿಕ ಉಪಕ್ರಮ. ಪಂಜೆಯವರ ಮಗ ರಾಮರಾವ್‌ ಅವರನ್ನು ಏರ್ಯರು ಉತ್ತೇಜಿಸಿದ ಪರಿಣಾಮವಾಗಿ ಪಂಜೆಯವರ ಕೃತಿಗಳು ಹೆಸರಿನಲ್ಲಿ ಅವರ ಎಲ್ಲ ಸಾಹಿತ್ಯ ಕೃತಿಗಳು ನಾಲ್ಕು ಸಂಪುಟಗಳಲ್ಲಿ ಪ್ರಕಟ ಆದುವು. (ಸಂ: ಪಂಜೆ ರಾಮರಾಯ. ಪ್ರ: ಓರಿಯೆಂಟ್ ಲಾಂಗ್‌ ಮೆನ್‌ ಲಿಮಿಟೆಡ್‌, 1973.)

ಪಂಜೆಯವರ ಶತಮಾನೋತ್ಸವದ ಅಧ್ಯಕ್ಷತೆಯ ಬಳಿಕ ಏರ್ಯರು ಕರಾವಳಿಯ ಪ್ರಮುಖ ಸಾಹಿತಿಗಳ, ಸಹಕಾರಿ ಧುರೀಣರ, ಸಾಮಾಜಿಕ ಸುಧಾರಕರ, ತುಳು ಸಂಸ್ಕೃತಿ ಶೋಧಕರ, ಯಕ್ಷಗಾನ ದಿಗ್ಗಜರ ಶತಮಾನೋತ್ಸವ ಸಮಿತಿಗಳ ಅಧ್ಯಕ್ಷ, ಗೌರವ ಅಧ್ಯಕ್ಷ, ಕಾರ್ಯಾಧ್ಯಕ್ಷ, ಉಪಾಧ್ಯಕ್ಷ ಹುದ್ದೆಗಳ ಹೆಸರಿನಲ್ಲಿ ಹಿರಿಯರ ನೆನಪುಗಳನ್ನು ಚಿರಸ್ಥಾಯಿ ಮಾಡಿದ್ದಾರೆ. ಅವರೇ ಒಂದು ಕಡೆ ಹೇಳಿಕೊಂಡಿದ್ದಾರೆ: ‘ಸತ್ತವರ ಸಂಗದಲಿ ಹೊತ್ತು ಹೋಗುವುದು ಎನಗೆ’ ಎಂದು. (ಬಿ.ಎಂ.ಶ್ರೀ ಅವರ ಇಂಗ್ಲಿಷ್‌ ಗೀತಗಳು ಸಂಕಲನದಲ್ಲಿ ಅನುವಾದಗೊಂಡ ಒಂದು ಕವನದ ಸಾಲು ಅದು). ಅದರಿಂದ ಏರ್ಯರಿಗೆ ಹೊತ್ತು ಹೋದದ್ದು ಅಷ್ಟೇ ಅಲ್ಲ , ಆ ಎಲ್ಲ ಸಾಧಕರನ್ನು ಏರ್ಯರು ನಮ್ಮವರೆಗೆ ಹೊತ್ತುಕೊಂಡು ತಂದಿದ್ದಾರೆ.

ಸ್ವಾತಂತ್ರ್ಯ ಹೋರಾಟಗಾರ ಕಾರ್ನಾಡ್‌ ಸದಾಶಿವ ರಾವ್‌ (1980), ಸಹಕಾರಿ ಆಂದೋಲನದ ಪಿತಾಮಹ ಮೊಳಹಳ್ಳಿ ಶಿವರಾವ್‌ (1981), ರಾಜಕೀಯ ಮತ್ತು ಆಡಳಿತ ಮುತ್ಸದ್ದಿ ಎ. ಬಿ. ಶೆಟಿ r(1983), ಸ್ವಾತಂತ್ರ್ಯ ಹೋರಾಟಗಾರ ಯಕ್ಷಗಾನ ಅರ್ಥದಾರಿ ನಾರಾಯಣ ಕಿಲ್ಲೆ (2001), ಕರ್ನಾಟಕ ಏಕೀಕರಣದ ಧುರೀಣ ಕೆ. ಬಿ. ಜಿನರಾಜ ಹೆಗ್ಡೆ (2005), ಜಾನಪದ ಅನ್ವೇಷಕ ಆಡಳಿತಗಾರ ಸಾಹಿತಿ ಎಚ್. ಎಲ್. ನಾಗೇಗೌಡ (2014), ಯಕ್ಷಗಾನದ ಹಿರಿಯ ಅರ್ಥದಾರಿ ದೇರಾಜೆ ಸೀತಾರಾಮಯ್ಯ (2014)- ಈ ಎಲ್ಲ ಮಹಾನುಭಾವರ ನೂರರ ನೆನಪುಗಳನ್ನು ಅರ್ಥಪೂರ್ಣವಾಗಿ ರಚನಾತ್ಮಕವಾಗಿ ನಡೆಸಲು ಕರ್ಣಧಾರತ್ವವನ್ನು ವಹಿಸಿಕೊಂಡವರು ಏರ್ಯರು. ಇವರಿಗೆಲ್ಲ ನೂರು ತುಂಬುವ ವರ್ಷಗಳನ್ನು ನೆನಪಿಟ್ಟುಕೊಂಡು ಅದರ ಹಿಂದು ಮುಂದಿನ ವರ್ಷಗಳನ್ನು ಜೋಡಿಸಿಕೊಂಡು ವಿಶಿಷ್ಟ ಕಾರ್ಯಕ್ರಮಗಳನ್ನು ಅವರು ನಡೆಸಿದ್ದಾರೆ.

ಕನ್ನಡ ಸಾಹಿತಿಗಳ ಸಂಶೋಧಕರ ಶತಮಾನೋತ್ಸವಗಳನ್ನು ಅಖೀಲ ಕರ್ನಾಟಕದ ಹರಹಿನಲ್ಲಿ ನಡೆಸುವುದರ ಜೊತೆಗೆ ಆ ಶತಮಾನದ ಹಿರಿಯರ ಬರಹಗಳನ್ನು ಸಂಪುಟಗಳಲ್ಲಿ ತರುವ ಮೂಲಕ ಅವರನ್ನು ಮುಂದಿನ ತಲೆಮಾರುಗಳ ನೆನಪಿಗೆ ಕಾಣಿಕೆಯಾಗಿ ಸಲ್ಲಿಸಿದ್ದಾರೆ. ಮುಳಿಯ ತಿಮ್ಮಪ್ಪಯ್ಯನವರ ಸಾಹಿತ್ಯದ ಎರಡು ಸಂಪುಟಗಳು, ಪೊಳಲಿ ಶೀನಪ್ಪ ಹೆಗ್ಡೆ ಅವರ ಸಮಗ್ರ ಸಾಹಿತ್ಯ ಸಂಪುಟ, ಕಿಲ್ಲೆ ನೆನಪಿನ ಸಂಪುಟ, ಸೇಡಿಯಾಪು ಅವರ ಬರಹಗಳ ಸಂಪುಟ- ವಿಚಾರ ಪ್ರಪಂಚಮತ್ತು ಇತರ ಕೃತಿಗಳ ಬಿಡಿ ಪ್ರಕಟಣೆಗಳು, ಕಡೆಂಗೋಡ್ಲು ಶಂಕರ ಭಟ್ಟರ ಕೃತಿಗಳ ಬೇರೆ ಬೇರೆ ಸಂಪುಟಗಳು, ಎಸ್‌. ವಿ. ಪರಮೇಶ್ವರ ಭಟ್ಟರ ಸಮಗ್ರ ಸಾಹಿತ್ಯದ ಏಳು ಸಂಪುಟಗಳು- ಇವೆಲ್ಲವುಗಳ ಹಿಂದೆ ಏರ್ಯರಿಗೆ ಆ ಎಲ್ಲ ಹಿರಿಯರ ಬಗ್ಗೆ ಇದ್ದ ಅಭಿಮಾನ ಗೌರವ ಮತ್ತು ಅವರ ಕೃತಿಗಳನ್ನು ಮರುಮುದ್ರಣ ಮಾಡಿ ಮುಂದಿನ ಪೀಳಿಗೆಯ ಓದಿಗೆ ಕಟ್ಟಿಕೊಡುವ ಸಾತ್ವಿಕ ಚಲ ಕಾಣಿಸುತ್ತದೆ. ಅದಕ್ಕಾಗಿ ಅವರು ವಿದ್ವಾಂಸರನ್ನು ಸಂಪರ್ಕಿಸಿ ಅವರ ಮೂಲಕ ಸಂಪಾದನೆಯ ಕೆಲಸವನ್ನು ಮಾಡಿಸುತ್ತಾರೆ. ಈ ಸಂಪುಟಗಳ ಪ್ರಕಟಣೆಗಾಗಿ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದವರ ಸಹಾಯವನ್ನು ಪಡೆಯುತ್ತಾರೆ, ಕನ್ನಡ ಪುಸ್ತಕ ಪ್ರಾಧಿಕಾರದವರ ಬೆನ್ನು ಹತ್ತುತ್ತಾರೆ. ಸೇಡಿಯಾಪು ಮತ್ತು ಕಡೆಂಗೋಡ್ಲು ಸಂಪುಟಗಳ ಪ್ರಕಟಣೆಯನ್ನು ಉಡುಪಿಯ ರಾಷ್ಟ್ರಕವಿಗೋವಿಂದ ಪೈ ಸಂಶೋಧನ ಕೇಂದ್ರ ಮಾಡಿದರೆ, ಎಸ್‌ವಿಪಿ ಸಂಪುಟಗಳ ಪ್ರಕಟಣೆಯ ಜವಾಬ್ದಾರಿಯನ್ನು ಕನ್ನಡ ಪುಸ್ತಕ ಪ್ರಾಧಿಕಾರ ಹೊತ್ತುಕೊಂಡಿತು.

ನನ್ನ ಅಪ್ಪ , ಸಾಹಿತಿ, ಪತ್ರಕರ್ತ ಅಗ್ರಾಳ ಪುರಂದರ ರೈ ಅವರ ಸಮಗ್ರ ಸಾಹಿತ್ಯ ಸಂಪುಟವನ್ನು ಮಂಗಳೂರಿನಲ್ಲಿ ನಮ್ಮ ಮನೆಯ ಅಂಗಳದಲ್ಲಿ 2001ರಲ್ಲಿ ಅಪ್ಪ ನಿಧನ ಆಗುವ ಎರಡು ವಾರಗಳ ಮೊದಲು ಬಿಡುಗಡೆಮಾಡಿದ ಏರ್ಯರು, ಅಪ್ಪನ ಸಾವಿನ ಬಳಿಕ ನುಡಿನಮನದ ತಾತ್ವಿಕ ಮಾತುಗಳನ್ನು ಆಡಿದ್ದು ನನ್ನ ನೆನಪಿನ ಅಂಗಳದಲ್ಲಿ ಇದೆ. ಆಗÓr್ 31, 2016ರಂದು ನಾವು ಮಕ್ಕಳು ಅಪ್ಪನ ನೂರರ ನೆನಪಿನ ಕಾರ್ಯಕ್ರಮವನ್ನು ಮಂಗಳೂರಲ್ಲಿ ಹಮ್ಮಿಕೊಂಡಾಗ ಅದನ್ನು ಉದ್ಘಾಟಿಸಿ, ಗಾಂಧೀಯುಗದ ಮೌಲ್ಯಗಳ ಬಗ್ಗೆ ಮಾತಾಡಿದವರು ಲಕ್ಷ್ಮೀನಾರಾಯಣ ಆಳ್ವರೇ.

ನಾನು ಸದಾ ‘ಅಣ್ಣ’ ಎಂದು ಸಂಬೋಧಿಸುವ ಏರ್ಯ ಲಕ್ಷ್ಮೀನಾರಾಯಣ ಆಳ್ವರು ಮೊನ್ನೆ ಭಾನುವಾರದಂದು ಏರ್ಯಬೀಡಿನಲ್ಲಿ ಮೌನವಾಗಿ ಮಲಗಿದ್ದುದನ್ನು ಕಂಡ ಬಳಿಕ ನಾನು ಹೇಗೆ ತಾನೇ ಹೇಳಲಿ, ‘ಸತ್ತವರ ಸಂಗದಲಿ ಹೊತ್ತು ಹೋಗುವುದೆಂದು?’

ಬಿ. ಎ . ವಿವೇಕ ರೈ

ಟಾಪ್ ನ್ಯೂಸ್

ಸನ್‌ರೈಸರ್ ಹೈದರಾಬಾದ್‌ ವಿರುದ್ದ ಪಂಜಾಬ್‌ ಕಿಂಗ್ಸ್‌ ಗೆ 5 ವಿಕೆಟ್‌ ಜಯ

ಸನ್‌ರೈಸರ್ ಹೈದರಾಬಾದ್‌ ವಿರುದ್ದ ಪಂಜಾಬ್‌ ಕಿಂಗ್ಸ್‌ ಗೆ 5 ವಿಕೆಟ್‌ ಜಯ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌ ಗೆ ಧನ್ಯವಾದ ಹೇಳಿದ ಲಂಕಾ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌ ಗೆ ಧನ್ಯವಾದ ಹೇಳಿದ ಲಂಕಾ

ಕಾರು ಚಾಲಕನ ಆಟಾಟೋಪ: ಮಹಿಳೆಯರು ಕಕ್ಕಾಬಿಕ್ಕಿ; ಆರೋಪಿ ಪೊಲೀಸರ ವಶ

ಕಾರು ಚಾಲಕನ ಆಟಾಟೋಪ: ಮಹಿಳೆಯರು ಕಕ್ಕಾಬಿಕ್ಕಿ; ಆರೋಪಿ ಪೊಲೀಸರ ವಶ

ಸಣ್ಣ ಸಾಧನೆಯಲ್ಲ, ಇದನ್ನು ಮುಂದುವರಿಸಿ: ಮೋದಿ

ಸಣ್ಣ ಸಾಧನೆಯಲ್ಲ, ಇದನ್ನು ಮುಂದುವರಿಸಿ: ಮೋದಿ

ಜಾನುವಾರುಗಳ ಹಾನಿಗೆ ಪರಿಹಾರ: ಸಚಿವ ಪ್ರಭು ಚವ್ಹಾಣ್‌

ಜಾನುವಾರುಗಳ ಹಾನಿಗೆ ಪರಿಹಾರ: ಸಚಿವ ಪ್ರಭು ಚವ್ಹಾಣ್‌

“ಅಭ್ಯುದಯಕ್ಕೆ ಸಾಧು, ಸಂತರು ಪ್ರೇರಣೆ’

“ಅಭ್ಯುದಯಕ್ಕೆ ಸಾಧು, ಸಂತರು ಪ್ರೇರಣೆ’

ರೈತರಿಗೆ ಸರ್ಕಾರವನ್ನೇ ಬದಲಿಸುವ ತಾಕತ್ತಿದೆ’: ಚಂದ್ರಶೇಖರ್‌ ರಾವ್‌

ರೈತರಿಗೆ ಸರ್ಕಾರವನ್ನೇ ಬದಲಿಸುವ ತಾಕತ್ತಿದೆ’: ಚಂದ್ರಶೇಖರ್‌ ರಾವ್‌ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

jagada-swasthya

ಮತ್ತೆ ಮರಳಲಿ ಜಗದ ಸ್ವಾಸ್ಥ್ಯ

ಹಾವೇರಿಯ ಹೊಕ್ಕುಳ ಬಳ್ಳಿ ಪಾಟೀಲ ಪುಟ್ಟಪ್ಪ  ಸ್ಮತಿ

ಹಾವೇರಿಯ ಹೊಕ್ಕುಳ ಬಳ್ಳಿ ಪಾಟೀಲ ಪುಟ್ಟಪ್ಪ ಸ್ಮತಿ

Suryana-neralu

ಸೂರ್ಯನ ನೆರಳು

ಚಿತ್ರೋತ್ಸವದಲ್ಲಿ ಮೌನದ ಮಾತು

ಚಿತ್ರೋತ್ಸವದಲ್ಲಿ ಮೌನದ ಮಾತು

ಕತೆ: ಸಹಯಾತ್ರಿ

ಕತೆ: ಸಹಯಾತ್ರಿ

MUST WATCH

udayavani youtube

ಉಡುಪಿಯಲ್ಲಿ ‘ ಮಾವಿನ ಮೇಳ ‘ | ನಾಳೆ ( may 23) ಕೊನೇ ದಿನ

udayavani youtube

ಶಿರ್ವ : ನೂತನ ಹೈಟೆಕ್‌ ಬಸ್ಸು ನಿಲ್ದಾಣ ಲೋಕಾರ್ಪಣೆ

udayavani youtube

ಬೆಳ್ತಂಗಡಿಯಲ್ಲೊಂದು ಗೋಡಂಬಿಯಾಕಾರದ ಮೊಟ್ಟೆ ಇಡುವ ಕೋಳಿ..

udayavani youtube

ಆಗ ನಿಮ್ಮಲ್ಲಿ 2 ಆಯ್ಕೆಗಳಿರುತ್ತವೆ .. ಅದೇನಂದ್ರೆ..

udayavani youtube

ದತ್ತಪೀಠದಲ್ಲಿ ನಮಾಜ್.. ವಿಡಿಯೋ ವೈರಲ್ : ಜಿಲ್ಲಾಧಿಕಾರಿ ಹೇಳಿದ್ದೇನು ?

ಹೊಸ ಸೇರ್ಪಡೆ

ಸನ್‌ರೈಸರ್ ಹೈದರಾಬಾದ್‌ ವಿರುದ್ದ ಪಂಜಾಬ್‌ ಕಿಂಗ್ಸ್‌ ಗೆ 5 ವಿಕೆಟ್‌ ಜಯ

ಸನ್‌ರೈಸರ್ ಹೈದರಾಬಾದ್‌ ವಿರುದ್ದ ಪಂಜಾಬ್‌ ಕಿಂಗ್ಸ್‌ ಗೆ 5 ವಿಕೆಟ್‌ ಜಯ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌ ಗೆ ಧನ್ಯವಾದ ಹೇಳಿದ ಲಂಕಾ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌ ಗೆ ಧನ್ಯವಾದ ಹೇಳಿದ ಲಂಕಾ

ಕಾರು ಚಾಲಕನ ಆಟಾಟೋಪ: ಮಹಿಳೆಯರು ಕಕ್ಕಾಬಿಕ್ಕಿ; ಆರೋಪಿ ಪೊಲೀಸರ ವಶ

ಕಾರು ಚಾಲಕನ ಆಟಾಟೋಪ: ಮಹಿಳೆಯರು ಕಕ್ಕಾಬಿಕ್ಕಿ; ಆರೋಪಿ ಪೊಲೀಸರ ವಶ

ಸಣ್ಣ ಸಾಧನೆಯಲ್ಲ, ಇದನ್ನು ಮುಂದುವರಿಸಿ: ಮೋದಿ

ಸಣ್ಣ ಸಾಧನೆಯಲ್ಲ, ಇದನ್ನು ಮುಂದುವರಿಸಿ: ಮೋದಿ

ಜಾನುವಾರುಗಳ ಹಾನಿಗೆ ಪರಿಹಾರ: ಸಚಿವ ಪ್ರಭು ಚವ್ಹಾಣ್‌

ಜಾನುವಾರುಗಳ ಹಾನಿಗೆ ಪರಿಹಾರ: ಸಚಿವ ಪ್ರಭು ಚವ್ಹಾಣ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.