ಬಿದಿರು ಕೊಳಲಾದದ್ದು !

Team Udayavani, Sep 2, 2018, 6:00 AM IST

ನಾನು ಒಂದು ಬಿದಿರಿನ ಗಿಡ
ಹುಲ್ಲು ಅಥವಾ ದೊಡ್ಡ ಹುಲ್ಲು ಎಂದರೂ ಸರಿಯೆ
ನನಗೆ ಟೊಂಗೆ ರೆಂಬೆಗಳಿಲ್ಲ.
ಹಾಗಾಗಿ ನಾನು ಉದ್ದನೆಯ ಒಂದು ಕೋಲು
ಮೈತುಂಬ ಇರುವ ಅವಕಾಶದಲ್ಲೂ ಚುಚ್ಚುವ ಮುಳ್ಳು.
ಹೀಗಾಗಿ ನಾನು ಯಾರಿಗೂ ಒಂದು ನೆರಳಾಗಲಿಲ್ಲ
ಹಣ್ಣು ಕೊಡುವ ಮರವಾಗಲಿಲ್ಲ
ಅಥವಾ ಕಡಿದುರುಳಿದ ಬಳಿಕ ಆಸನ ಉಪಕರಣ ಆಗಲಿಲ್ಲ
ನಾನು ಬದುಕಿರುವಾಗ ಏನೂ ಆಗಲಿಲ್ಲ
ಕನಿಷ್ಠ ಸತ್ತ ಬಳಿಕದ ಉರುವಲೂ ಆಗಲಿಲ್ಲ
ಅಪಶಕುನದ ಭಯಕ್ಕೆ ನನ್ನನ್ನು ಸುಡುವವರೂ ಇಲ್ಲ
ಅಲ್ಲೊಮ್ಮೆ ಇಲ್ಲೊಮ್ಮೆ ಏಣಿಯಾಗಿದ್ದೇನೆ
ಏರಿದವರು ಮರೆತುಬಿಟ್ಟಿದ್ದಾರೆ ಏರಿದಾಕ್ಷಣ.
ಬಹಳಷ್ಟು ಜನ ನನ್ನ ನೆನೆಯುವುದು ಸತ್ತಾಗ
ಸತ್ತ ಹೆಣ ಹೊರುವ ಚಟ್ಟಕ್ಕೆ
ಚಟ್ಟಕ್ಕಾದರೂ ಎಷ್ಟು ಆಯುಸ್ಸು? ಹೆಣದ ಜತೆಗೆ ಅದೂ ಬೂದಿ
ನನಗೆ ನಾನು ಏನೂ ಆಗಲಿಲ್ಲ ಎಂಬ ಕೊರಗು ಉಳಿಯಿತು.
ನಾನು ಒಳಗೇ ನರಳಿದೆ, ಕೊರಗಿದೆ
ನನ್ನ ಉಸಿರಿಗೆಲ್ಲ ಒಂದೇ ಹಸಿವು
ನಾನು ಸತ್ತ ಬಳಿಕವೂ ಉಳಿಯಬೇಕು
ಸಾಯದಂತೆ ಉಳಿಯಬೇಕು
ನನ್ನ ಒಳಗೆ ಏನೂ ಆಗದ ಒಂದು  ಪೊಳ್ಳುತನ
ಹಾಗಾಗಿ ಕಾಂಡದ ಒಳಗೆ ಒಂದು ಖಾಲಿ ಅವಕಾಶ
ನಾನು ಒಳಗೆ ಖಾಲಿ, ಹೊರಗೆ ಬರಿಯ ಸಿಪ್ಪೆ
ಅದರೊಳಗೆಲ್ಲ ಬದುಕಲೇ ಬೇಕು ಎಂಬ ಹಸಿವಿನ ಉಸಿರು
ಅದೊಂದನ್ನೇ ನಿತ್ಯ ಮಂತ್ರಿಸುತ್ತಿದ್ದೆ
ಉಸಿರೆಲ್ಲ ಸತ್ತ ಬಳಿಕವೂ ಬದುಕುವ ಪ್ರಾಣಾಯಾಮ
ಒಳಗೆಲ್ಲ ಓಡಾಡುತ್ತಿತ್ತು
.
.
ದುಂಬಿ ಮೈತುಂಬ ರಂಧ್ರ ಕೊರೆಯಿತು.
ನಾನು ಅದರ ಒತ್ತಡಕ್ಕೆ ಮುರಿದು ನೆಲಕ್ಕೆ ಬಿದ್ದೆ
ಒಳಗೆ ಹರಿಯುವ ಉಸಿರಿಗೆ ಜೀವವಿತ್ತು
ಅದು ಒಂದೇ ಸಮನೆ ಬದುಕುವ ಮಾತು ಹೇಳುತ್ತಿತ್ತು
ಅಷ್ಟರಲ್ಲಿ ಯಾರೋ ಒಬ್ಬ ದನಕಾಯುವವ
ಆ ದಾರಿಯಲ್ಲಿ ಸಾಗಿದ, ನನಗೆ ಅವನ ಕಾಲು ತಾಗಿತು
ಅವನು ಥಟ್ಟಂತ ಕಾಲು ಹಿಂದಕ್ಕೆಳೆದ.
ಅವನು ಸಾಮಾನ್ಯ ದನ ಕಾಯುವವನಲ್ಲ , ಶ್ರೀಕೃಷ್ಣ.
ಅವನಿಗೆ ನನ್ನ ಒಳಗಿನ ಉಸಿರು ತಾಕಿರಬೇಕು
ಅದಕ್ಕೆ ಕಾಲಿನಿಂದ ಒದೆದು ಹೋಗಲಿಲ್ಲ
ಮೆತ್ತಗೆ ನನ್ನ ಕಡೆಗೆ ಬಾಗಿದ
ತನ್ನ ಕೈಯಿಂದ ನನ್ನನ್ನು ಎತ್ತಿಕೊಂಡ
ತನ್ನ ಕೈಯಳತೆ ನನ್ನನ್ನು ಮುರಿದ
ಅದೊಂದು ಸುಂದರ ವೇದನೆ, ಅಪೇಕ್ಷಿತ ನೋವಿನ ಹಾಗೆ
ಅಷ್ಟಕ್ಕೆ ನಿಲ್ಲಲಿಲ್ಲ ಅವನು
ಇರುವ ಐದಾರು ರಂಧ್ರಗಳಲ್ಲಿ ಒಂದಕ್ಕೆ ತನ್ನ ತುಟಿ ಹಚ್ಚಿದ
ಅಬ್ಟಾ ! ಅದೆಂಥ ಕೃಪೆ ! ಅದು ಮುತ್ತಲ್ಲ
ಪಂಚಪ್ರಾಣವನ್ನು ನನ್ನೊಳಗೆ ನೂಕಿಬಿಟ್ಟ
ಓಹ್‌! ನನ್ನೊಳಗೆ ಕೋಲಾಹಲ
ಒಳಗೆ ಬದುಕಬೇಕು ಎಂದು ಹಸಿದ ಉಸಿರಿಗೆ ಅವನ ಉಸಿರು ಕೂಡಿತು
ಎರಡರೊಳಗೆ ಒಂದು ಸಮಪಾಕದ ಹಸಿಬಿಸಿ ಬೆಸೆತ
ನಾನು ರುಮುರುಮು ಒಳಗೆ ಬೀಸಿ ಹೊರಗೆ ನೂಕುವಂತಾದೆ
ಇನ್ನೇನು ಜೀವದ ಆರ್ಭಟ ಗಾಳಿಯಾಗಿ ರಭಸ ಪಡೆದಿತ್ತು
ಅದು ಹಾಗೆ ಭರ್ರಂತ ಉಳಿದ ರಂಧ್ರಗಳಲ್ಲಿ ಬಿರುಗಾಳಿಯಾಗಿ ಆರ್ಭಟಿಸಲಿಕ್ಕಿತ್ತು
ಅಷ್ಟರಲ್ಲಿ ಕೃಷ್ಣ…
ತನ್ನ ಎರಡು ಬೆರಳುಗಳಿಂದ ಎರಡು ರಂಧ್ರಗಳನ್ನು ಮುಚ್ಚಿದ
ಹೊರಗೆ ಹೊರಟ ಜೀವದ ನೂಕಿಗೆ ಪಾಕಮಾಡಿ ಹೊಸ ಮಾರ್ಗ ತೋರು
ನಿಧಾನಕ್ಕೆ ಎರಡು ರಂಧ್ರಗಳಲ್ಲಿ ಸಾಂದ್ರವಾಗಿ ಹರಿಯಬಿಟ್ಟ
ಅದು ಹರಿಬಿಟ್ಟ ನಾದವಾಯಿತು
ನಾನು ಆರ್ಭಟವಾಗಬೇಕಾದವನು ಸುಂದರ ನಿನಾದವಾದೆ.
ದನಿಯ ನೂಕಿಗೆ ಸ್ವರ ಕೊಟ್ಟ ಕೊಳಲಾದೆ
ಬರಿಯ ಕೊಳಲಾಗಲಿಲ್ಲ ಕೃಷ್ಣನ ಕೈಯ ಕೊಳಲಾದೆ
ಅವನ ತುಟಿಯ ಸ್ಪರ್ಶಕೆ ಮರುಜೀವ ಪಡೆದೆ
ಎಂದೂ ಸಾಯದಂತೆ ಉಳಿದೆ, ಬದುಕಿದೆ.

ವೀಣಾ ಬನ್ನಂಜೆ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಆಫೀಸು ಕೆಲಸ ಮುಗಿಸಿ ಸಂಜೆ ಮನೆಗೆ ಬಂದು ಗದಗಿನಲ್ಲಿ ಮೆಡಿಕಲ್‌ ಓದುತ್ತಿರುವ ಮಗಳಿಗೆ ಪೋನ್‌ ಮಾಡೋಣ ಅಂತ ಮೊಬೈಲ್‌ ತೆಗೆಯಲು ಪ್ಯಾಂಟಿನ ಬಲ ಜೇಬಿಗೆ ಕೈ ಹಾಕಿದೆ...

  • ವಿಷ್ಣು ಭಟ್ಟ ಗೋಡ್ಸೆಯ ನನ್ನ ಪ್ರವಾಸ ಗ್ರಂಥ ಧಾರಾವಾಹಿಯಾ ಗಿಯೂ, ಇತಿಹಾಸ ಅಧ್ಯಯನಗ್ರಂಥವಾಗಿಯೂ ತೆರೆದು ಕೊಳ್ಳುತ್ತದೆ. ಎಲ್ಲಕ್ಕಿಂತ ಮಿಗಿಲಾಗಿ ಯಾವುದೇ "ಇಸಂ'...

  • ಹೊರಗಡೆ ಧೋ ಧೋ ಎಂದು ಮಳೆ ಸುರಿಯುತ್ತಿತ್ತು. ಜೋರು ಗಾಳಿ-ಮಳೆಗೆ ಕರೆಂಟ್‌ ಹೋದ ಕಾರಣ ಸೊಳ್ಳೆ ಕಾಟ ಬೇರೆ. ಸಾಲದ್ದಕ್ಕೆ ಸಿಗ್ನಲ್‌ ಸಿಗದ ಅಪ್ಪನ ರೇಡಿಯೋ "ಕುಯ್ಯೋ',...

  • ನೂರು ವರ್ಷ ದಾಟಿದರೂ ಕ್ರಿಯಾಶೀಲರಾಗಿರುವವರು ಇದ್ದಾರೆ. ಎಂಬತ್ತು ವರ್ಷದಲ್ಲಿ ಇನ್ನೆಷ್ಟು ಸಾಧಿಸುವುದಕ್ಕಿದೆ ಎಂದು ಕನಸು ಕಾಣುವವರಿದ್ದಾರೆ. ಎಪ್ಪತ್ತು ದಾಟಿದ...

  • ನಾವು ಪ್ರವಾಸ ಕಥನಗಳನ್ನು ಬರೆಯುತ್ತೇವೆ. ವಿಹಾರದ ಅನುಭವಗಳನ್ನು ಬರೆಯುತ್ತೇವೆ. ಆದರೆ, ಇಂಥಾದ್ದೊಂದು ಸಣ್ಣ ಘಟನೆ ಎಲ್ಲರ ಬದುಕಿನಲ್ಲಿಯೂ ಆಗಿರಬಹುದಲ್ಲ ! ಇದನ್ನು...

ಹೊಸ ಸೇರ್ಪಡೆ