ನಕ್ಷತ್ರ ಕೃತಿಕಾ !

Team Udayavani, Sep 9, 2018, 6:00 AM IST

“ಬಿಗ್‌ ಬಾಸ್‌’ನಿಂದ ಹೊರಬಂದು ಎರಡು ವರ್ಷಗಳಾಗಿವೆ. ಆದರೂ ರಾಧಾ ಕಲ್ಯಾಣ ಖ್ಯಾತಿಯ ಕೃತಿಕಾ ರವೀಂದ್ರ ಯಾವೊಂದು ಸಿನೆಮಾದಲ್ಲೂ ಕಾಣಿಸಿಕೊಳ್ಳಲಿಲ್ಲ. ಇನ್ನು “ಬಿಗ್‌ ಬಾಸ್‌’ ಮನೆಗೆ ಹೋಗುವ ಮುನ್ನ ಅವರು ಒಪ್ಪಿದ್ದ  ಕೆಂಗುಲಾಬಿ ಎಂಬ ಮಹಿಳಾ ಪ್ರಧಾನ ಸಿನೆಮಾ ಸಹ ಬಿಡುಗಡೆಯಾಗಲಿಲ್ಲ. ಸಹಜವಾಗಿಯೇ ಕೃತಿಕಾ ಎಲ್ಲಿದ್ದಾರೆ, ಏನು ಮಾಡುತ್ತಿದ್ದಾರೆ ಎಂಬ ಪ್ರಶ್ನೆಗಳು ಕಾಡಿದ್ದು ಸುಳ್ಳಲ್ಲ. ಈಗ ಆ ಎಲ್ಲಾ ಪ್ರಶ್ನೆಗಳಿಗೆ ಕೃತಿಕಾ ಕೊನೆಗೂ ಉತ್ತರ ಕೊಟ್ಟಿದ್ದಾರೆ.

ಕೃತಿಕಾ ಇದೀಗ ಸದ್ದಿಲ್ಲದೆ ಎರಡು ಚಿತ್ರಗಳಲ್ಲಿ ನಟಿಸಿದ್ದು, ಎರಡೂ ಚಿತ್ರಗಳು ಬಿಡುಗಡೆಯಾಗುವುದಕ್ಕೆ ಅಣಿಯಾಗುತ್ತಿವೆ. ಮೊದಲನೆಯದು ಕಿರಣ್‌ ಗೋವಿ ನಿರ್ದೇಶನದ ಯಾರಿಗುಂಟು ಯಾರಿಗಿಲ್ಲ. ಒರಟ ಪ್ರಶಾಂತ್‌ ನಾಯಕನಾಗಿ ಅಭಿನಯಿಸುತ್ತಿರುವ ಈ ಚಿತ್ರದಲ್ಲಿ ಕೃತಿಕಾ ಮೊದಲ ನಾಯಕಿಯಾಗಿ ನಟಿಸುತ್ತಿದ್ದಾರೆ. ಜೊತೆಗೆ ಲೇಖಚಂದ್ರ ಮತ್ತು ಅದಿತಿ ರಾವ್‌ ಸಹ ನಾಯಕಿಯರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದರ ಜೊತೆಗೆ ಕೃತಿಕಾ, ಶಾರ್ದೂಲ ಎಂಬ ಚಿತ್ರದಲ್ಲೂ ನಟಿಸಿದ್ದಾರೆ.  ಶಾರ್ದೂಲ ಚಿತ್ರವನ್ನು ಅರವಿಂದ್‌ ಕೌಶಿಕ್‌ ನಿರ್ದೇಶಿಸಿದ್ದು, ಈ ಚಿತ್ರದ ಚಿತ್ರೀಕರಣವೂ ಮುಗಿದು, ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳು ನಡೆಯುತ್ತಿವೆ. ಇನ್ನು ಹಲವಾರು ಸಮಸ್ಯೆಗಳನ್ನೆದುರಿಸಿದ ಕೆಂಗುಲಾಬಿ ಚಿತ್ರ ಮುಗಿದಿದ್ದು, ಅದೂ ಸಹ ಬಿಡುಗಡೆಯ ಹಂತದಲ್ಲಿದೆ. ಎಲ್ಲ ಅಂದುಕೊಂಡಂತೆ ಆದರೆ, ಮುಂದಿನ ಆರು ತಿಂಗಳುಗಳಲ್ಲಿ ಕೃತಿಕಾ ಅಭಿನಯದ ಮೂರು ಚಿತ್ರಗಳು ಬಿಡುಗಡೆಯಾಗುತ್ತವೆ.

“ಬಿಗ್‌ ಬಾಸ್‌’ ಮನೆಯಿಂದ ಬಂದ ಮೇಲೆ ಕೃತಿಕಾಗೆ ಹಿರಿತೆರೆಗೆ ಹೋಗಬೇಕೋ, ಕಿರುತೆರೆಯಲ್ಲಿ ಮುಂದುವರೆಯಬೇಕೋ ಎಂಬ ಜಿಜ್ಞಾಸೆ ಕಾಡಿತ್ತಂತೆ. ಏಕೆಂದರೆ, ಅಷ್ಟರಲ್ಲಾಗಲೇ ಕೃತಿಕಾ ಕಿರುತೆರೆಯಲ್ಲಿ ದೊಡ್ಡ ಮಟ್ಟದಲ್ಲಿ ಗುರುತಿಸಿಕೊಂಡಿದ್ದರು. ರಾಧಾ ಕಲ್ಯಾಣ ಮತ್ತು ಮನೆ ಮಗಳುವಿನಂಥ ಯಶಸ್ವಿ ಧಾರಾವಾಹಿಗಳಲ್ಲಿ ಕಾಣಿಸಿಕೊಂಡಿದ್ದರು. ಅಷ್ಟೇ ಅಲ್ಲ, ರಾಧೆ ಎಂದೇ ಜನಪ್ರಿಯರಾಗಿದ್ದವರು. ಹೀಗಿರುವಾಗ ಅಂತಹ ಗೊಂದಲ ಕಾಡುವುದು ಸಹಜವೇ. ಕೊನೆಗೆ ಸಾಕಷ್ಟು ಯೋಚನೆ ಮಾಡಿದ ನಂತರ ಅವರು ಹಿರಿತೆರೆಯಲ್ಲೇ ಮುಂದುವರೆಯುವುದಕ್ಕೆ ತೀರ್ಮಾನಿಸಿದ್ದಾರೆ. ಹಾಗೆ ನೋಡಿದರೆ, ಅವರಿಗೆ ಹಿರಿತೆರೆ ಹೊಸದೇನಲ್ಲ. ಕೆಂಗುಲಾಬಿ ಚಿತ್ರಕ್ಕೂ ಕೆಲವು ವರ್ಷಗಳ ಮುನ್ನವೇ ಪಟ್ರೆ ಲವ್ಸ್‌ ಪದ್ಮ ಎಂಬ ಚಿತ್ರದಲ್ಲಿ ಕೃತಿಕಾ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ಆ ನಂತರ ಕಿರುತೆರೆಗೆ ಜಂಪ್‌ ಆಗಿದ್ದರು. ಈಗ ಹಿರಿತೆರೆಯಲ್ಲೇ ಮುಂದುವರೆಯುವುದಕ್ಕೆ ತೀರ್ಮಾನಿಸಿದ್ದಾರೆ.

ಹಾಗಾದರೆ, ಕೃತಿಕಾ ಕಿರುತೆರೆಯಲ್ಲಿ ಕಾಣಿಸಿಕೊಳ್ಳುವುದಿಲ್ಲವಾ? ಸದ್ಯಕ್ಕಿಲ್ಲ ಎಂಬ ತೀರ್ಮಾನಕ್ಕೆ ಅವರು ಬಂದಿದ್ದಾರೆ. ಜೊತೆಗೆ ಅಭಿನಯಿಸಿರುವ ಮೂರು ಚಿತ್ರಗಳ ಬಿಡುಗಡೆಗೆ ಅವರು ಎದುರು ನೋಡುತ್ತಿದ್ದಾರೆ. ಈ ಮೂರೂ ಚಿತ್ರಗಳ ಬಗ್ಗೆ ಅವರು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಕೆಂಗುಲಾಬಿ ಚಿತ್ರದಲ್ಲಿ ಅವರದ್ದು ಉತ್ತರ ಕರ್ನಾಟಕದ ಹುಡುಗಿಯ ಪಾತ್ರವಂತೆ. ಮೊದಲ ಬಾರಿಗೆ ವಯಸ್ಸಿಗೆ ಮೀರಿದ ಪಾತ್ರವನ್ನು ಅವರು ಆ ಚಿತ್ರದಲ್ಲಿ ನಿರ್ವಹಿಸಿದ್ದಾರೆ. ಇನ್ನು ಉಳಿದ ಎರಡೂ ಚಿತ್ರಗಳು ಬೇರೆ ಬೇರೆ ಬ್ಯಾನರ್‌ಗೆ ಸೇರಿದ್ದವಾಗಿದ್ದು, ಆ ಚಿತ್ರಗಳಲ್ಲೂ ಬಹಳ ಒಳ್ಳೆಯ ಪಾತ್ರಗಳಿವೆಯಂತೆ.

ಪಟ್ರೆ ಲವ್ಸ್‌ ಪದ್ಮ ಚಿತ್ರದ ಮೂಲಕ ಚಿಕ್ಕ ವಯಸ್ಸಿಗೇ ಕನ್ನಡ ಚಿತ್ರರಂಗಕ್ಕೆ ಬಂದ ಕೃತಿಕಾ, ಈಗ ಇಲ್ಲೊಂದಿಷ್ಟು ಹೆಸರು ಮಾಡುವುದಕ್ಕೆ ಎದುರು ನೋಡುತ್ತಿದ್ದಾರೆ. ಅವರ ಆಸೆ, ಕನಸುಗಳೆಲ್ಲಾ ಮೂರು ಚಿತ್ರಗಳ ಮೇಲೆ ನಿಂತಿದೆ. ಅವರ ಕನಸುಗಳೆಲ್ಲಾ ನನಸಾಗುತ್ತದಾ ಎಂಬ ಪ್ರಶ್ನೆ, ಈ ಮೂರು ಚಿತ್ರಗಳು ಬಿಡುಗಡೆಯಾಗುವವರೆಗೂ ಕಾಯಬೇಕು.


ಈ ವಿಭಾಗದಿಂದ ಇನ್ನಷ್ಟು

  • ಪು. ತಿ. ನರಸಿಂಹಾಚಾರ್‌, ಕೆ. ಎಸ್‌. ನರಸಿಂಹಸ್ವಾಮಿ, ಜಿ. ಎಸ್‌. ಶಿವರುದ್ರಪ್ಪ , ಎಂ. ಗೋಪಾಲಕೃಷ್ಣ ಅಡಿಗ ಮೊದಲಾದವರ ಪ್ರೇರಣೆಯಿಂದ, ತಮ್ಮದೇ ಆದ ಕಾವ್ಯಪಥವನ್ನು ರೂಪಿಸಿದ...

  • ಕಾದಂಬರಿ ಎಂದರೆ ಒಂದು ಮಹಾ-ಕತೆ ; ಸೃಷ್ಟಿಯಲ್ಲಿ ಕ್ಷುಲ್ಲಕವಾದದ್ದು ಯಾವುದೂ ಇಲ್ಲ ಎಂಬ ನಂಬಿಕೆಯಲ್ಲಿ ಎಲ್ಲವನ್ನೂ ಒಳಗೊಳ್ಳುವಂಥ ಒಂದು ಜೀವನಗಾಥೆ. ದಿನವೆಂಬ...

  • ದೀರ್ಘ‌ವಾದ ಸಮುದ್ರಯಾನವು ಬಹಳ ಮನೋಹರವಾದ ಅನುಭವವಾದರೂ ಹಲವರಿಗೆ ಅದು ತ್ರಾಸದಾಯಕವೂ ಹೌದು. ಹೊಟ್ಟೆ ತೊಳಸುವುದು, ವಾಂತಿ ಬಂದಂತೆನಿಸುವುದು, ತಲೆಯೊಳಗೆ ಎಲ್ಲವೂ...

  • ಮನೆಯ ಹಿಂದಿನ ಚಿಂಬೈ ರಸ್ತೆಯ ಬದಿಯಲ್ಲಿರುವ ಅಶ್ವತ್ಥ ಮರದ ಅಡಿಯಲ್ಲಿ ಸ್ಥಾಪಿತವಾಗಿದ್ದ ಹನುಮನ ಗುಡಿಯ ಇರವಿನ ಬಗ್ಗೆ ತಿಳಿದುಬಂದದ್ದು ನನಗೆ ಸಹಾಯಕಿಯಾಗಿ ಬರುತ್ತಿದ್ದ...

  • ಕಾರ್ಪೊರೇಟ್‌ ಪ್ರಪಂಚದಲ್ಲಿ ಬಿಜಿಯಾಗಿರುವ ಮಗ ಮೊನ್ನೆ ಕಾಲ್‌ ಮಾಡಿದ್ದ , ""ಈ ವೀಕ್‌ ಎಂಡ್‌ನ‌ಲ್ಲಿ ಬರ್ತಾ ಇದೀನಿ. ಹುರುಳಿಕಾಳಿನ ಬಸ್ಸಾರು ಮಾಡಿರಿ'' ಎಂದು. ಪಿಜ್ಜಾ...

ಹೊಸ ಸೇರ್ಪಡೆ