ಬಾಣವು ತನ್ನ ಗುರಿಯಲ್ಲಿ ತನ್ಮಯವಾಗಿರುವಂತೆ- ನೋವಿನಲ್ಲಿ ತನ್ಮಯನಾಗು!

ಉಪನಿಷತ್ತುಗಳ ಹತ್ತಿರದಿಂದ

Team Udayavani, Jul 7, 2019, 5:00 AM IST

ಒಂದು ಘಟನೆಯನ್ನು ಬಣ್ಣಿಸುವಾಗ ಉಪನಿಷತ್ತು ಅದರ ಎಲ್ಲ ಬಹಿರ್ಮುಖ ವಿವರಗಳನ್ನೂ ನಮ್ಮ ಮುಂದಿಡುವುದಿಲ್ಲ. ಉಪನಿಷತ್ತು ಬಾಯ್ತುಂಬ ಮಾತನಾಡುವ ವಾಚಾಳಿಯಲ್ಲ. ಕತೆ ಚಲಿಸುತ್ತಿರುವಂತೆ ಅನೇಕ ನಡೆ-ನುಡಿಗಳನ್ನು ನಾವು ಕಲ್ಪಿಸಬೇಕಾಗುತ್ತದೆ. ಹೀಗೆ ಊಹಿಸಲು ಟಿಪ್ಪಣಿಕಾರರು ನೆರವಾಗುವರು. ತಂದೆ ವಾಜಶ್ರವಸ, ಮಗನನ್ನು ಕುರಿತು, ನಿನ್ನನ್ನು ಸಾವಿಗೆ ಕೊಟ್ಟುಬಿಟ್ಟಿದ್ದೇನೆ ಎಂದು ಕ್ರೂರವಾಗಿ ಉದ್ಗರಿಸಿದ ಮೇಲೆ ಉಳಿದಂತೆ ಯಾರ ಪ್ರತಿಕ್ರಿಯೆಗಳನ್ನೂ ಉಪನಿಷತ್ತು ಬಣ್ಣಿಸುವುದಿಲ್ಲ. ಯಜಮಾನನಿಂದಲೇ ಯಜ್ಞ ಕೆಟ್ಟಿತು ಎಂದು ಹೆಚ್ಚಿನವರಿಗೆ ಅನ್ನಿಸಿರಬೇಕು! ಆದರೆ, ಯಜ್ಞ ಕೆಡಬಾರದೆಂದು ತೀವ್ರವಾಗಿ ಅನ್ನಿಸುತ್ತಿರುವುದು- ಯಜಮಾನನಿಗಿಂತಲೂ ಹೆಚ್ಚು ಅನ್ನಿಸುತ್ತಿರುವುದು- ಬಾಲ ನಚಿಕೇತನಿಗೇ! ಈ “ಯಜಮಾನ’ ಎನ್ನುವ ಪದಕ್ಕೆ ಯಜ್ಞಮಾಡುವವನು- ಮಾಡಿಸುವವನು ಎಂದೇ ಅಕ್ಷರಶಃ ಅರ್ಥವಾಗಿದೆ. ಯಜ್ಞವು ಗೃಹಸ್ಥರ ಕರ್ತವ್ಯವಾದುದರಿಂದ, ಕರ್ಮಕಾಂಡಕ್ಕೂ ಗೃಹಸ್ಥ ಧರ್ಮಕ್ಕೂ ನಿಕಟ ಸಂಬಂಧವಿರುವುದರಿಂದ- ಈ ವ್ಯವಸ್ಥೆಗಳು ಕಾಲಾಂತರದಲ್ಲಿ ಎಷ್ಟು ಬದಲಾಗುತ್ತ ಬಂದರೂ “ಯಜಮಾನ’ ಎನ್ನುವ ಪದ ಇಂದಿನವರೆಗೂ ಉಳಿದುಕೊಂಡು ಬಂದಿದೆ ! ಇದು ವಿಚಾರಮಾಡಬೇಕಾದ್ದು.

ತಂದೆಯ ಮಾತನ್ನು ಕೇಳಿದ ಮೇಲೆ ನಚಿಕೇತನಾಡಿದ ಎರಡು ಸೊಲ್ಲುಗಳನ್ನು ಉಪನಿಷತ್ತು ನಮ್ಮ ಮುಂದಿಡುತ್ತದೆ. ತನ್ನೊಳಗೇ ತಾನು ಹೇಳಿಕೊಂಡಂತಿರುವ ಒಂದು ಸ್ವಗತ ಗುಣ ಈ ಮಾತುಗಳಿಗಿವೆ. ಇವು ತಂದೆಯನ್ನು ಕುರಿತು ಆಡಿದ ಮಾತುಗಳೂ ಹೌದು. ಸ್ವಗತದ ಗುಣ ಇರುವ ಮಾತುಗಳಿಗೆ ಪರರ ಮನಮುಟ್ಟುವ ಗುಣ ತೀವ್ರವಾಗಿರುತ್ತದೆ! ನಮ್ಮೊಳಗೇ ನಮ್ಮನ್ನು ಕುರಿತೇ ನಾವು ನಿರ್ವಂಚನೆಯಿಂದ ಕೆಲ ಮಾತುಗಳನ್ನಾಡುವುದು ಸಾಧ್ಯವಾದರೆ ಅದನ್ನು ನಮ್ಮೊಳಗಿನ ದೇವರೂ ಕೇಳಿಸಿಕೊಳ್ಳುವುದಿರಬಹುದು! ನಚಿಕೇತನಾಡಿಕೊಂಡ ಮಾತು ಇದು:

ಬಹೂನಾಮೇಮಿ ಪ್ರಥಮಃ ಬಹೂನಾಮೇಮಿ ಮಧ್ಯಮಃ
ಕಿಂ ಸ್ವಿದ್‌ ಯಮಸ್ಯ ಕರ್ತವ್ಯಂ ಯನ್ಮಯಾ ಅದ್ಯ ಕರಿಷ್ಯತಿ
“”ಸಾವಿನ ತೆಕ್ಕೆಗೆ ಹೋಗುತ್ತಿರುವ ಬಹುಜನರಲ್ಲಿ- ಈ ಬಗೆಯಲ್ಲಿ ಈಗ ಹೋಗುತ್ತಿರುವ ನಾನು ಮೊದಲಿಗನಾಗಿ ಹೋಗುತ್ತಿರುವೆನೇನು! ಅಥವಾ ಇಂಥದು ಹಿಂದೆಯೂ ನಡೆದಿರಬಹುದಾಗಿ ನಾನು ಮಧ್ಯಮನಾಗಿ ಹೋಗುತ್ತಿರುವೆನೇನು! ಯಮನ ಭೆಟ್ಟಿಯಾಗಿಯೇ ಆಗುವೆ. ಇದು ನಿಜ. ತಂದೆಯ ಮಾತು ಹುಸಿಹೋಗಬಾರದು. ಆದರೆ ಸಾವಿನ ದೊರೆಗೆ- ಯಮನಿಗೆ ನನ್ನಿಂದ ಸಲ್ಲಬೇಕಾದ ಸೇವೆ ಏನಿದೆ ಅದು ತಿಳಿಯುತ್ತಿಲ್ಲ ; ಅದು ಇನ್ನಷ್ಟೇ ತಿಳಿಯಬೇಕಿದೆ; ಅದನ್ನು ಈಗ ಊಹಿಸುವಂತಿಲ್ಲ”.
ಇದು ಈ ಮಾತುಗಳ ಅರ್ಥ.

ತೀವ್ರವಾದ ಅನುಭವವೊಂದು ಉಂಟಾದಾಗ ಮೊದಲು ಅನ್ನಿಸುವುದೇ ಇದು ತನಗೆ ಮಾತ್ರ ಸಂಭವಿಸುತ್ತಿದೆ ಎಂಬ ವಿಶಿಷ್ಟವಾದ ಭಾವ! ತೀವ್ರವಾದ ದುಃಖ ಸಂದರ್ಭ ಉಂಟಾದಾಗ ನನಗೇ ಯಾಕೆ ಹೀಗೆ ಆಗಬೇಕು? ಆಗುತ್ತಿದೆ? ಇದಕ್ಕೆಲ್ಲ ನಾನೇ ಆಗಬೇಕೆ? ಈ ದುಃಖಕ್ಕೆ ಬಂದೆರಗಲು ನಾನೇ ಬೇಕಾಯಿತೆ?- ಎಂದು ಎಲ್ಲರಿಗೂ ಅನ್ನಿಸುವುದಿಲ್ಲವೆ? ಅಂದರೆ, ತೀವ್ರವಾದದ್ದು ಯಾವುದೇ ಆದರೂ ನಮ್ಮ ಒಳ ಬಗೆಯಲ್ಲಿ ಅದೊಂದು ರೀತಿಯ ಅಧಿಕೃತತೆಯನ್ನು ಉಂಟುಮಾಡುತ್ತದೆ! ತೀವ್ರವಾದ ಸಂವೇದನೆಯನ್ನು ಇಂದ್ರಿಯಗಳಾಗಲೀ ಮನಸ್ಸಾಗಲೀ ಧಾರಣ ಮಾಡಲಾರವು. ಅವು ಬೆಚ್ಚಿಬೀಳುವವು. ತೀವ್ರವಾದದ್ದು ಜೀವಕ್ಕೆ ಸಂಬಂಧಿಸಿರುತ್ತದೆ. ಆತ್ಮಕ್ಕೆ ಸಂಬಂಧಿಸಿರುತ್ತದೆ. ಆದುದರಿಂದಲೇ ನನಗೇ- ನನಗೆ ಮಾತ್ರ ಹೀಗೆ ಆಗುತ್ತಿದೆ ಎಂಬ ವಿಶಿಷ್ಟವಾದ ಸೊಪಜ್ಞ ಭಾವ! ಇದರಿಂದ ಒಂದು ಬಗೆಯ ಅಧಿಕೃತತೆ.

ಬುದ್ಧ ಭಗವಂತ ಅನುಭವಕ್ಕೆ ಕೊಟ್ಟ ಮಹಣ್ತೀ ಅನನ್ಯವಾದದ್ದು. ಹರಿತವಾದ ಬಾಣವೊಂದು ಒಡಲಲ್ಲಿ ನೆಟ್ಟವನಿಗೆ ಯಾತನೆಯ ಆ ತೀವ್ರವಾದ ಅನುಭವವೊಂದೇ ನಿಜ. ಉಳಿದಂತೆ ಯಾವ ಮಾತುಗಳೂ ಅಲ್ಲ ಎನ್ನುವುದು ಸ್ವಯಂ ಬುದ್ಧನದೇ ಹೇಳಿಕೆ. ಉಳಿದ ಮಾತುಗಳೆಂದರೆ- ಬಾಣವನ್ನು ಎಸೆದವರಾರು? ಯಾವ ದಿಕ್ಕಿನಿಂದ? ಈ ಬಾಣವನ್ನು ಯಾವ ಲೋಹದಿಂದ ಮಾಡಲಾಗಿದೆ ಇತ್ಯಾದಿ ಚಿಂತೆಗಳು. ಇವೆಲ್ಲ ವ್ಯರ್ಥ ಕಲಾಪ. ಅಂದರೆ, ಇಂಥ ಚಿಂತೆಗಳು ಕಾಲ-ದೇಶಬದ್ಧವಾದ ಸನ್ನಿವೇಶವೊಂದನ್ನು ಸೃಷ್ಟಿ ಮಾಡುತ್ತವೆ. ಒಂದು ಚಿತ್ರವನ್ನು ರಚಿಸುತ್ತವೆ. ಅರ್ಥ ಮಾಡಿಸುವ ಪ್ರಯತ್ನ ಮಾಡುತ್ತವೆ. ಆದರೆ, ಈ ಪ್ರಯತ್ನದಲ್ಲಿ ಅನುಭವದಿಂದಲೇ ದೂರ ಹೋಗುತ್ತಿರುವುದು ಮಾತ್ರ ಗೊತ್ತೇ ಆಗದು!

ವಿವರಣೆಗಳು ಅನುಭವವನ್ನು ತೆಳ್ಳಗೆ ಮಾಡುವ, ಅದರ ತೀವ್ರತೆಯನ್ನು ಕಡಮೆ ಮಾಡುವ, ಅನುಭವದಲ್ಲಿ ನಮ್ಮ ಗಮನವು ನೇರವಾಗಿ ನೆಡದಂತೆ ಮಾಡುವ, ಗಮನವನ್ನು ಬೇರೆಡೆ ಸೆಳೆಯುವ ತಂತ್ರದಂತೆ ಕೆಲಸ ಮಾಡಿ ನೋವಿನಲ್ಲಿಯೂ ಏಕಾಗ್ರವಾಗದ ವಿಲಕ್ಷಣ ಸ್ಥಿತಿಯನ್ನು ಉಂಟುಮಾಡುತ್ತವೆ. ಏಕಾಗ್ರವಾಗಬೇಕಾದ್ದು ಯಾವುದರಲ್ಲಿ? ನೋವಿನಲ್ಲಿಯೋ? ನೋವಿನ ವಿವರಣೆಯಲ್ಲಿಯೋ? ವಿಚಾರ ಮಾಡಿ- ಎಂದಿದ್ದ ಬುದ್ಧ. ಶರವತ್‌ ತನ್ಮಯೋ ಭವೇತ್‌- ಬಾಣದಂತೆ ಗುರಿಯಲ್ಲಿ ತನ್ಮಯನಾಗು ಎಂದು ಉಪನಿಷತ್ತಿನ ಮಾತು! ಆಶ್ಚರ್ಯವಾಗುತ್ತದೆ. ಬಾಣವು ತನ್ನ ಗುರಿಯಲ್ಲಿ ತನ್ಮಯವಾಗಿರುವಂತೆ- ಗುರಿಯನ್ನು ತದೇಕವಾಗಿ ದಿಟ್ಟಿಸುತ್ತಿರುವಾಗಲೂ, ಗುರಿಯತ್ತ ಹಾರುತ್ತಿರುವಾಗಲೂ, ಗುರಿಯಲ್ಲಿ ಕೀಲಿಸಿರುವಾಗಲೂ ಹೇಗೆ ಮೂರು ಅವಸ್ಥೆಗಳಲ್ಲೂ ಅದು ತನ್ಮಯವಾಗಿರುತ್ತದೆ- ಹಾಗೆ ತನ್ಮಯನಾಗು; ಬಾಣದಂತೆ ತನ್ಮಯನಾಗು ಎಂದರೆ ನೋವಿನಲ್ಲಿ ತನ್ಮಯನಾಗು ಎಂದಂತೆಯೇ. ಬುದ್ಧನ ಮಾತು ಉಪನಿಷತ್ತಿನ ಮಾತಿಗೆ ಸಂವಾದದಲ್ಲಿದೆ. ವಿವರಣೆಯಲ್ಲಿ ಕಳೆದು ಹೋಗದಿರು. ಅನುಭವಿಸು. ಅನುಭವಿಸಿ ಟ್ಟಜಿಜಜಿnಚl ಆಗು. ಅನುಭವದ ವಿವರಣೆಕಾರನಾಗಿ sಛಿcಟnಛ ಜಚnಛ ಆಗಬೇಡ -ಎನ್ನುವುದು ಬುದ್ಧನ ಈ ಮಾತುಗಳ ಸಾರ. ಇದು ಉಪಾದೇಯವಾದುದೇ ನಿಜ. ಆದುದರಿಂದಲೇ ತೀವ್ರವಾದ ಅನುಭವವು- ಇದು ನನಗೆ ಮಾತ್ರ ಸಂಭವಿಸುತ್ತಿದೆ ಎಂಬ ರೀತಿಯ- ಪ್ರಥಮಾನುಭವದ ವಿಶಿಷ್ಟತೆಯ ಭಾವವನ್ನುಂಟು ಮಾಡುತ್ತದೆ.

ಆದರೆ, ಅನುಭವದ ನಡೆ ವಿಶಿಷ್ಟತೆಯಲ್ಲಿಯೇ ಕೊನೆಯಾಗಲಾರದು. ಅದು ಸಾಧಾರಣೀಕರಣದ ಅವಸ್ಥೆಯ ಕಡೆಗೆ ಚಲಿಸಲೇ ಬೇಕು. ಅಂದರೆ ಒಂದು ಮಾನವ ದೇಹದಲ್ಲಿ ಸಂಭವಿಸಿದ್ದು- ಯಾವ ಮಾನವ ದೇಹದಲ್ಲೂ ಸಂಭವಿಸಬಹುದೆನ್ನುವ ಸಾಧ್ಯತೆ. ಒಂದು ಕಾಲ-ದೇಶ-ಸನ್ನಿವೇಶಗಳಲ್ಲಿ ಸಂಭವಿಸಿದ್ದು ಎಲ್ಲ ಕಾಲ-ದೇಶಗಳಲ್ಲೂ ಸಂಭವಿಸಬಹುದಾದ ಸಾಧ್ಯತೆ. ವಿಶಿಷ್ಟ-ಸೊÌàಪಜ್ಞ ಅನುಭವವು ತನ್ನ ವಿಶಿಷ್ಟತೆಯನ್ನೂ ಸೊÌàಪಜ್ಞತೆಯನ್ನೂ ದಾಟಿ ಸರ್ವಸಾಧಾರಣಗೊಳ್ಳುವ ಸಾಧ್ಯತೆ ! ಆಶ್ಚರ್ಯವೆಂದರೆ ನಾವು ಸಾಧಾರಣರಂತೆ ಬದುಕಿಯೂ ಸಾಧಾರಣೀಕರಣವು ಒಂದು ಸಾಧ್ಯತೆ ಎಂದು ತಿಳಿಯಲಾಗದೆ ಹೋದದ್ದು ! ಅದನ್ನು ತಿಳಿಯುವುದಕ್ಕಾಗಿಯೇ ಈ ವಿಶಿಷ್ಟತೆಯ ಅನುಭವವು ಉಂಟಾಗುವುದೋ ಏನೋ ! ಸಾಧಾರಣೀಕರಣವು ಒಂದು ಸಾಧ್ಯತೆಯಾಗಿ ಅರಳುವುದಕ್ಕಾಗಿ !

ಅನುಭವವೇ ಪ್ರಮಾಣ-ನೋವಿನಲ್ಲಿ ಏಕಾಗ್ರವಾಗಿರಿ- ಎಂದ ಬುದ್ಧನಾದರೂ, ತಾನು ನೋವಿನಿಂದ ಪಾರಾದ ಮೇಲೆ ತನ್ನಂತೆ ಇರುವ ಇತರ ಜೀವಿಗಳಿಗೆ ತಾನು ತುಳಿದ ಮಾರ್ಗವನ್ನು ವಿವರಿಸಲೇಬೇಕು. ಅಂದರೆ, ಅನುಭವದಲ್ಲಿಯೇ ಅದರ ವಿವರಣೆ ಕೂಡ ಇದೆ, ಅಡಗಿದೆ. ನೋವಿನ ತೀವ್ರತೆ-ವಿಲಕ್ಷಣತೆಯನ್ನು ಅನುಭವಿಸಿಯೇ ಕಚ್ಚಿದ ಹಾವು ವಿಷಯುಕ್ತವೇ ಅಲ್ಲವೇ ಎಂದು ತಿಳಿಯಲಾಗುವ ಹಾಗೆ! ಪರರಿಗೆ ಹೇಳುವಲ್ಲಿ ಬುದ್ಧ ಬಳಸಿದ ಪದ ಸಹಾನುಭೂತಿ. ಈ ಪದ ಬುದ್ಧನಿಗೆ ಇಷ್ಟ. ಸಹಾನುಭೂತಿ ಎಂದರೆ ಸಹ+ಅನುಭೂತಿ. ಅನುಭೂತಿಯು ಪ್ರಮಾಣ ಎಂದವನು ಸಹ+ಅನುಭೂತಿಯೂ ಪ್ರಮಾಣ ಎನ್ನಲೇಬೇಕು! ಅಂದರೆ, ನೊಂದ ಇನ್ನೊಂದು ಜೀವಿಯನ್ನು ತನ್ನಂತೆ ಕಾಣುವ ಸಾಧ್ಯತೆ.

ಈಗೇನಾಯಿತೆಂದರೆ-ಮನುಷ್ಯರಲ್ಲಿ ಪ್ರಥಮರು- ನಾನು ಮೊತ್ತಮೊದಲಿಗ, ಇದು ನನಗೆ ಮಾತ್ರ ಸಂಭವಿಸುತ್ತಿದೆ ಎಂದು ಹೇಳಲಾಗುವವರು ಯಾರೂ ಇಲ್ಲ ಎನ್ನುವ ಅರಿವು ಉಂಟಾಯಿತು. ಇದುವರೆಗೆ ಯಾರೂ ಅನುಭವಿಸದೆ ಇದ್ದುದನ್ನು ನಾನು ಅನುಭವಿಸುತ್ತಿಲ್ಲ. ನಾವು “ಮಂದಿ’ಗಳಾದುದರಿಂದ ಅಂದರೆ ಮಂದೆಯಲ್ಲಿ ಬದುಕಿರುವುದರಿಂದ- ನಮ್ಮ ಹಾಗೆ ಆದವರು ಹಿಂದೆ ಬಹುಮಂದಿ ಇನ್ನು ಮುಂದೆಯೂ ಬಹುಮಂದಿ- ಒಂದು ಮಾನವ ದೇಹದಲ್ಲಿ ಸಂಭವಿಸಿದ್ದು ಅನೇಕ ಮಾನವ ದೇಹಗಳಲ್ಲಿ- ಹಿಂದೆ ಮುಂದೆ ಎಂದಿಲ್ಲದೆ ಸಂಭವಿಸಬಹುದೆನ್ನುವ ಅರಿವು. ಆಗ, “ಪ್ರಥಮ’ ಎನ್ನುವ ಪದ ಕಳಚಿತು. “ಮಧ್ಯಮ’ ಎನ್ನುವ ಪದ ಕಾಣಿಸಿಕೊಂಡಿತು. “ಬಹೂನಾಮೇಮಿ ಮಧ್ಯಮಃ’ ಬುದ್ಧನ “ಮಧ್ಯಮ ಮಾರ್ಗ’ ಎಂಬ ಪರಿಕಲ್ಪನೆಯ ನೆನಪಾಗುತ್ತಿದೆ. ಈ ಅಂಕಣದಲ್ಲಿ ಹಿಂದೆ ನಿವೇದಿಸಿಕೊಂಡಂತೆ ವೇದಗಳಲ್ಲಿ ಬಂದ “ಪೂರ್ವಿಕ-ನೂತನ’ ಎಂಬ ಪದಗಳು ಮತ್ತೆ ನೆನಪಾಗುತ್ತಿವೆ. ಇದೆಲ್ಲ ತನಗೇ ಆಗುತ್ತಿದೆ ಮೊದಲ ಬಾರಿಗೆ- ನಾನು ಪ್ರಥಮ ಎಂದುಕೊಂಡವನು “ನೂತನ’. ಆದರೆ ಪೂರ್ವಿಕರನ್ನು ನೆನೆದ ಕೂಡಲೇ ಈ ನೂತನನು- ಮಧ್ಯಮನಾಗಿಬಿಟ್ಟಿದ್ದಾನೆ! ಪದಗಳು ಬೇರೆ ಬೇರೆ ಸಂದರ್ಭಗಳಲ್ಲಿ ಬೇರೆ ಬೇರೆ ಅರ್ಥಗಳನ್ನು ಪಡೆದು ಹೇಗೆ ಕಣ್ಣಮುಚ್ಚಾಲೆಯಾಡುತ್ತವೆ !

ಬದುಕಿಗೆ ವಿಶಿಷ್ಟತೆಯ ಭ್ರಮೆಯನ್ನುಂಟುಮಾಡುವ ಶಕ್ತಿ ಇದೆ ಎಂದು ಸೂಚಿಸುವಂತಿದೆ ಉಪನಿಷತ್ತು. ಆದರೆ, ಸಾವಿಗೆ ಸಾಧಾರಣತೆಯ ಪ್ರಜ್ಞೆಯನ್ನುಂಟುಮಾಡುವ ಶಕ್ತಿ ಇದೆ ಎನ್ನುವುದು ಬಚ್ಚಿಡುವಂಥದಲ್ಲ. ಆದುದರಿಂದಲೇ, ಮಾತುಮಾತಿಗೆ ನನ್ನ ಬದುಕು-ನನ್ನ ಅನುಭವ ಎನ್ನುವ ಏರು ಮಾತುಗಳು ಕೇಳಿಸುತ್ತವೆ. ಆದರೆ ಸಾವಿನ ಪ್ರಶ್ನೆ ಬಂದಾಗ- ಒಂದಲ್ಲ ಒಂದು ದಿನ ಎಲ್ಲರೂ ಹೋಗುವವರೇ-ಉಳಿಯುವವರು ಯಾರು ಎಂಬ ಸಾಧಾರಣೀಕರಣದ ಮಾತುಗಳು. ಆ ಮಟ್ಟಿಗೆ ಉಪನಿಷತ್ತೂ ಹೊರತಲ್ಲ.

ಲಕ್ಷ್ಮೀಶ ತೋಳ್ಪಾಡಿ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

 • ಶ್ರೀಕೃಷ್ಣ ಜನ್ಮಾಷ್ಟಮಿಗೆ ಇನ್ನೇನು ಕೆಲವೇ ದಿನಗಳು! ಮಳೆಯ ದೇವತೆ ಇಂದ್ರ  ಮುನಿಸಿಕೊಂಡಿದ್ದಾನೆ. ನದಿಗಳು ಉನ್ಮಾದದಿಂದ ದಡ ಮೀರಿ ಹರಿದು ಜನರನ್ನು ಕಂಗೆಡಿಸಿವೆ....

 • ಮಲಗಿದ ಮಂಚದ ಮೇಲಿನಿಂದ ಕೆಳಗೆ ಎಳೆದು ಹಾಕಿದಂತಾಗಿ ಕೂಸಜ್ಜಿ ಎದ್ದು ಕುಳಿತಳು. ಕವಿದ ಕತ್ತಲಲ್ಲಿ ಮಗ ಅಸ್ಪಷ್ಟವಾಗಿ ಕಂಡುಬಂದು ತನ್ನ ಕಿವಿಗೆ ಬಾಯಿ ಇಟ್ಟವನಂತೆ...

 • ಸರಕಾರದ ಅನುದಾನ ಪಡೆದು ಕಾರ್ಯಕ್ರಮ ನಡೆಸುವುದೇ ಒಂದು ಕೌಶಲ. ಇಂಥ ಕೌಶಲವಿಲ್ಲದೆಯೂ ಪ್ರಾಮಾಣಿಕವಾಗಿ ಕಾರ್ಯಕ್ರಮಗಳನ್ನು ನಡೆಸುವ ಎಷ್ಟೋ ಸಂಸ್ಥೆಗಳಿಲ್ಲವೆ?...

 • ಧನಲಕ್ಷ್ಮೀ, ಧಾನ್ಯ ಲಕ್ಷ್ಮೀ ಮುಂತಾದ ಅಷ್ಟಲಕ್ಷ್ಮಿಯರ ಬಗ್ಗೆ ನೀವೆಲ್ಲ ತಿಳಿದಿರಬಹುದು. ಆದರೆ ಮೇಲೆ ಹೇಳಿರುವುದು ತುಂಬಾ ಮುಖ್ಯವಾದ ಎಲ್ಲೆಡೆಯೂ ಅವಗಣಿಸಲ್ಪಟ್ಟ...

 • ಸುಖಾಂತ್ಯ'ವೆಂಬುದು- ಎಲ್ಲವೂ ಸುಖಾಂತ್ಯಗೊಳ್ಳುವುದೆಂಬುದು- ಸಾಂಸಾರಿಕವಾದ ಒಂದು ಕಲ್ಪನೆ ಅಥವಾ ಎಣಿಕೆಯಾಗಿದೆ. ಮನೆಬಿಟ್ಟುಹೋದ ಮಗ, ಮರಳಿ ಮನೆಗೆ ಬಂದೇ ಬರುವನೆಂಬ...

ಹೊಸ ಸೇರ್ಪಡೆ

 • ಬೆಂಗಳೂರು: ರಾಜ್ಯದಲ್ಲಿ ಪ್ರಾಣಿ, ಮಾನವ ಸಂಘರ್ಷ ಹತೋಟಿಗೆ ಬಂದಿದೆ. ಕಳೆದ ಐದು ವರ್ಷಗಳಿಗೆ ಹೋಲಿಸಿದರೆ ಪ್ರಾಣಿದಾಳಿಯಲ್ಲಿ ಸಾವಿಗೀಡಾದವರ ಸಂಖ್ಯೆ ಶೇ.50 ಇಳಿಕೆ...

 • ಬೆಂಗಳೂರು: ದೇಶದಲ್ಲಿ ಏಕ ಚಕ್ರಾಧಿಪತ್ಯ ವ್ಯವಸ್ಥೆ ಬರುತ್ತಿದ್ದು, ಪ್ರಜಾಪ್ರಭುತ್ವ ಗಂಡಾಂತರದಲ್ಲಿದೆ. ದೇಶದಲ್ಲಿ ಪ್ರಾದೇಶಿಕ ಪಕ್ಷಗಳು ಜೀವಂತವಾಗಿವೆ ಎನ್ನುವುದನ್ನು...

 • ಬೆಂಗಳೂರು: ಮಳೆ ಬಂದರೆ ನೀರು ಅಂಗಡಿಗಳಿಗೆ ನುಗ್ಗುತ್ತದೆ. ರಸ್ತೆ ಸಂಚಾರ ದುಸ್ತರವಾಗುತ್ತದೆ. ಒಳಚರಂಡಿ ನೀರು ರಸ್ತೆ ಮೇಲೆ ನಿಲ್ಲುತ್ತಿದೆ. ಈ ಬಗ್ಗೆ ಜನಪ್ರತಿನಿಧಿಗಳ...

 • ಬೆಂಗಳೂರು: ಬಟ್ಟೆ ವ್ಯಾಪಾರಿಯೊಬ್ಬರನ್ನು ಅವರ ಮನೆಯ ಸ್ನಾನದ ಕೊಣೆಯಲ್ಲಿ ಚಾಕುವಿನಿಂದ ಇರಿದು ಕೊಂದು, ಬೆಂಕಿ ಹಚ್ಚಿ ಸುಟ್ಟ ಘಟನೆ ರಾಜಾಜಿನಗರದ ಬಾಷ್ಯಂ ವೃತ್ತದ...

 • ಕೊರಟಗೆರೆ: "ಮೂರು ಸಲ ಮುಖ್ಯಮಂತ್ರಿಯಾಗುವ ಅವ ಕಾಶವಿದ್ದರೂ ರಾಜಕೀಯ ಕುತಂತ್ರದಿಂದ ಕೈ ತಪ್ಪಿತು' ಎಂದು ಮಾಜಿ ಡಿಸಿಎಂ ಡಾ.ಜಿ. ಪರಮೇಶ್ವರ್‌ ಅಸಮಾಧಾನ ವ್ಯಕ್ತಪಡಿಸಿದರು....

 • ಬೆಂಗಳೂರು: ಸಾರ್ವಜನಿಕರಿಗೆ ರಾಜಭವನ ವೀಕ್ಷಣೆಗೆ ಮತ್ತೂಮ್ಮೆ ಅವಕಾಶ ಕಲ್ಪಿಸಲಾಗಿದ್ದು, ವಾರಾಂತ್ಯದ ಹಿನ್ನೆಲೆಯಲ್ಲಿ ಶನಿವಾರ-ಭಾನುವಾರ ಸಾವಿರಾರು ಮಂದಿ ಭೇಟಿ...