ಕನಸಲ್ಲಿ ತಿವಿದು ಎಬ್ಬಿಸಿದ ಚೇರಮಾನ್‌ ಮಹಾರಾಜ

Team Udayavani, Dec 8, 2019, 5:28 AM IST

ದೀರ್ಘ‌ವಾದ ಸಮುದ್ರಯಾನವು ಬಹಳ ಮನೋಹರವಾದ ಅನುಭವವಾದರೂ ಹಲವರಿಗೆ ಅದು ತ್ರಾಸದಾಯಕವೂ ಹೌದು. ಹೊಟ್ಟೆ ತೊಳಸುವುದು, ವಾಂತಿ ಬಂದಂತೆನಿಸುವುದು, ತಲೆಯೊಳಗೆ ಎಲ್ಲವೂ ರೊಂಯ್ಯನೆ ತಿರುಗುವಂತಾಗುವುದು ಇತ್ಯಾದಿ ಕಹಿ ಅನುಭವಗಳಿಂದಾಗಿ ಬಹಳಷ್ಟು ಜನ ಹಡಗಲ್ಲಿ ಕೂರುವುದೆಂದರೆ ನೂರು ಬಾರಿ ಯೋಚಿಸುತ್ತಾರೆ. ಈಗಲೇ ಹೀಗಾದರೆ ನೂರಾರು ವರ್ಷಗಳ ಹಿಂದೆ ಹಾಯಿ ಹಡಗುಗಳ ಕಾಲದಲ್ಲಿ ಗಾಳಿಯ ದಿಕ್ಕನ್ನೂ, ವೇಗವನ್ನೂ ಅವಲಂಬಿಸಿ, ಕೆಲವೊಮ್ಮೆ ಅನುಕೂಲಕರವಾದ ಗಾಳಿಯ ದಿಕ್ಕಿಗಾಗಿ ಕಡಲ ನಡುವಲ್ಲಿ ಹಾಯಿ ಬಿಚ್ಚಿ, ವಾರಗಟ್ಟಲೆ ಕಾಯುತ್ತ ವಾರದೊಳಗೆ ತಲುಪಬೇಕಾದ ತೀರವನ್ನು ತಿಂಗಳಿಗೂ ತಲುಪಲಾಗದೆ, ಹಸಿವೆ, ನೀರಡಿಕೆಗಳಿಂದಲೂ ಬಿಸಿಲು ಮಳೆ ಬಿರುಗಾಳಿಗಳಿಂದಲೂ ಜರ್ಜರಿತವಾದವರ ಪಾಡುಗಳನ್ನು ಊಹಿಸಿನೋಡಿ.

ಲಂಗರು ಬಿಚ್ಚಿದ ದೋಣಿ ಕಣ್ಣಿಂದ ಕಣ್ಮರೆಯಾದ ನಂತರ ಅವರು ಹಿಂತಿರುಗಿದ ಮೇಲೆಯೇ ಅವರು ಬದುಕಿರುವರೆಂದು ಖಾತರಿಯಾಗುವುದು. ಹಾಗೆ ಮರಳಿ ಬಂದವರು ಅಲ್ಲಿನ ಸುದ್ದಿಗಳನ್ನು ಹೇಳಿದ ಮೇಲೆಯೇ ಲೋಕದ ವಿದ್ಯಮಾನಗಳು ಗೊತ್ತಾಗುವುದು. ಪೋರ್ಚುಗೀಸರನ್ನು ಸೋಲಿಸಿದ ಬ್ರಿಟಿಷರು ಈಗ ನಾಡನ್ನಾಳುತ್ತಿರುವ ದೊರೆಗಳೆಂದೂ, ಬ್ರಿಟಿಷರನ್ನು ಮಣಿಸಿದ ಮೈಸೂರಿನ ಟಿಪ್ಪುಸುಲ್ತಾನನು ಮಂಗಳೂರಿನ ಬಂದರನ್ನು ವಶಪಡಿಸಿಕೊಂಡು ತನ್ನ ಧ್ವಜವನ್ನು ಹಾರಿಸಿರುವೆನೆಂದೂ, ಅವನನ್ನು ಕತ್ತರಿಸಿಕೊಂದ ಬ್ರಿಟಿಷರು ಮತ್ತೆ ಅರಸರಾಗಿರುವೆಂದೂ ಅವರಿಗೂ ಕಣ್ಣೂರಿನ ಅರಕ್ಕಲ್‌ ರಾಣಿಗೂ ಒಡಂಬಡಿಕೆಯಾಗಿರುವುದರಿಂದ ತಾವೀಗ ಬ್ರಿಟಿಷ್‌ ಸಾಮ್ರಾಜ್ಯದ ಭಾಗವಾಗಿರುವವೆಂದೂ, ಅಂಥ ಬ್ರಿಟಿಷರನ್ನೂ ಮಣಿಸಿದ ಮಹಾತ್ಮಾ ಗಾಂಧಿಯಿಂದಾಗಿ ತಾವೀಗ ಸ್ವತಂತ್ರ ಭಾರತದ ಭಾಗವಾಗಿರುವವೆಂದೂ ಅವರಿಗೆ ಗೊತ್ತಾಗುವುದು ಅವೆಲ್ಲ ನಡೆದು ಬಹಳ ಕಾಲದ ನಂತರ ದ್ವೀಪದಿಂದ ಹೊರಟ ಹಾಯಿದೋಣಿಗಳು ಆ ಸುದ್ದಿಯನ್ನು ಹೊತ್ತುತಂದ ಮೇಲೆಯೇ.

1947ರ ಕಠಿಣ ಮಳೆಯ ಕರ್ಕಡ ಮಾಸದ ಆಗಸ್ಟ್‌ ತಿಂಗಳ ಹದಿನೈದರಂದು ಭಾರತ ಸ್ವಾತಂತ್ರ ಆಚರಿಸಿದ ಸುದ್ದಿ ಈ ದ್ವೀಪವಾಸಿಗಳಿಗೆ ತಲುಪಿದ್ದು ಅದಾದ ಮೇಲೆ ಎರಡು -ಮೂರು ತಿಂಗಳುಗಳು ಕಳೆದು ಕೇರಳದ ಕಣ್ಣೂರಿಗೆ ತೆಂಗಿನನಾರು ತುಂಬಿಕೊಂಡು ಹೋಗಿದ್ದ ಓಡಗಳು ಮುಂಗಾರು ಕಳೆದು ವಾಪಸಾದ ಮೇಲೆಯೇ. ಅದಾದ ಮೇಲೆಯೇ ಅವರು ಪಾಯಸ ಮಾಡಿ ತಿಂದು ಸ್ವಾತಂತ್ರೊéàತ್ಸವವನ್ನು ಆಚರಿಸಿದ್ದು. ಹಾಗೆ ಪಾಯಸ ತಿಂದಿದ್ದ ಹಿರಿಯರೊಬ್ಬರು ಈ ಸಂಗತಿಯನ್ನು ಹೇಳಿದ ಮೇಲೆಯೇ ನನಗೆ ಕಡಲ ಪಯಣವೆಂಬುದು ಇನ್ನಷ್ಟು ಮನೋಹರವಾಗಿ ಕಾಣಿಸತೊಡಗಿದ್ದು. ಭೂತಕಾಲದ ಸಂಬಂಧಗಳಿಂದಲೂ, ಸದ್ಯದ ವರ್ತಮಾನಗಳಿಂದಲೂ, ಭವಿಷ್ಯದ ಯೋಚನೆಗಳಿಂದಲೂ ದಿನಗಟ್ಟಲೆ ಸಂಪರ್ಕ ಕಡಿದುಕೊಂಡು ಓಡುವ ಹಡಗು, ಕಾಣುವ ಕಡಲು, ಮುಳುಗುವ ಸೂರ್ಯ, ಏಳುವ ಚಂದ್ರ, ಹೊಳೆಯುವ ತಾರೆಗಳು, ಜಿಗಿಯುವ ಮೀನು ಮತ್ತು ಎಲ್ಲದರಿಂದ ಕಡಿದು ಕೊಂಡು ನನ್ನ ಹಾಗೆಯೇ ಚಲಿಸುತ್ತಿರುವ ಮೌನಿಗಳಾದ ಮನುಷ್ಯರು. ಕಡಲ ನಡುವಿನ ಮಣ್ಣಗುಡ್ಡೆಗಳಲ್ಲಿ ಬದುಕುತ್ತಿರುವ ಮನುಷ್ಯರಿಗೆ ದೇವರು ಇಷ್ಟೊಂದು ಪ್ರಿಯ ಯಾಕೆ ಆಗುತ್ತಾನೆ ಎಂಬುದು ನಾಸ್ತಿಕನಾದ ನನಗೂ ಸಮುದ್ರಯಾನ ಬಹಳ ಮನೋಹರವಾಗಿ ಕಾಣಿಸಿದ್ದು. ಊಹಿಸಲೂ ಆಗದ ಬೃಹತ್‌ ನೀಲಪರದೆಯೊಂದರ ನಡುವೆ ಒಂದು ಪುಟ್ಟ ಚುಕ್ಕಿಯಂತೆ ಉಸಿರಾಡುತ್ತಿರುವ ನಾವು, ನಮ್ಮ ನಿಲುಕಿಗೂ ಸಿಗದೆ ಕಣ್ಣ ಮುಂದೆಯೇ ಸಂಭವಿಸುತ್ತಿರುವ ವ್ಯೋಮ ವರ್ಣ ವ್ಯಾಪಾರ ಗಳು. ನಮ್ಮ ಸಣ್ಣಸಣ್ಣ ಯೋಚನೆಗಳು, ಸುಖ-ದುಃಖ-ಪ್ರೀತಿ-ಪ್ರಣಯ -ವಿರಹ-ವಾತ್ಸಲ್ಯ-ಮಮಕಾರಗಳು ನಮ್ಮ ಉಸಿರೊಳಗೇ ಲಯಗೊಂಡು ನಾಶವಾಗುವುದು. ಸೂರ್ಯಚಂದ್ರ ನಕ್ಷತ್ರಗಳು ಹಗಲುರಾತ್ರಿಗಳು ಮಾತ್ರ ದಿಕ್ಕುಗಳನ್ನೂ ಕಾಲವನ್ನೂ ಹೇಳುವುದು. ಬಹಳ ಆಧುನಿಕ ಎಂದು ಹೇಳುವ ಈ ಕಾಲದಲ್ಲಿ ಕಡಲೊಳಗೆ ಚಲಿಸುತ್ತಿರುವ ನನ್ನಂತಹ ಅವಿಶ್ವಾಸಿಗೇ ಹೀಗೆ ಅನಿಸುವುದಾದರೆ ಬಹಳ ಬಹಳ ವರ್ಷಗಳ ಹಿಂದೆ ಈ ಯಾವ ಸಂಶಯಗಳೂ ಇಲ್ಲದ ಕಾಲದಲ್ಲಿ ತಮ್ಮ ರಟ್ಟೆಯ ಬಲವನ್ನೂ ನಂಬದೆ ಪಡೆದವನ ಕಾರುಣ್ಯವೊಂದೇ ತಮ್ಮನ್ನು ಕರೆದೊಯ್ಯುತ್ತಿದೆ ಎಂದು ಕಡಲೊಳಗೆ ಚಲಿಸುತ್ತಿದ್ದ ಈ ದ್ವೀಪವಾಸಿಗಳ ಸತ್ಯವಿಶ್ವಾಸ ಹೇಗಿರಬಹುದು? ಅವರ ಹೆದರಿಕೆಗಳೂ ಹೇಗಿದ್ದಿರಬಹುದು!

ಅಂತಹದೇ ಕಡಲ ಯಾತ್ರೆಯಲ್ಲಿ ಆಡು ಮಾರುವ ಮುದುಕನೊಡನೆ ನಾನು ಚಲಿಸುತ್ತಿದ್ದುದು. ಮಕ್ಕಾ ಯಾತ್ರೆಯನ್ನು ಮುಗಿಸಿ, ಒಮಾನ್‌ ದೇಶದ ಸಲಾಲಾ ಪಟ್ಟಣದಲ್ಲಿ ಮಣ್ಣಾಗಿ ಮಲಗಿ ಅಂತಿಮ ವಿಶ್ರಾಮದಲ್ಲಿರುವ ಚೇರಮಾನ್‌ ಅರಸನ ಗೋರಿಯನ್ನೂ ಕಂಡು, ಕೊಚ್ಚಿನ್‌ನಲ್ಲಿ ವಿಮಾನ ಇಳಿದು, ತಮ್ಮ ಅಗಾಧವಾದ ಕಬ್ಬಿಣದ ಪೆಟಾರಿಯನ್ನು ಹಡಗಿಗೆ ಹತ್ತಿಸಲು ನನ್ನಿಂದ ಸಹಾಯವನ್ನೂ ಪಡೆದಿದ್ದ ಆಡುಮಾಂಸ ಮಾರುವ ಆ ಹಾಡುಗಾರ ಮುದುಕ ಚಲಿಸುತ್ತಿರುವ ಹಡಗಿನ ಒಂದು ಕೊನೆಯಲ್ಲಿ ಕುಳಿತು ನಡುಗುವ ಧ್ವನಿಯಲ್ಲಿ ನನಗೆ ಇವೆಲ್ಲವನ್ನೂ ವಿವರಿಸುತ್ತಿದ್ದರು. ಅವರೂ ನಾನೂ ಹಡಗಿನ ಕ್ಯಾಂಟೀನಿನಿಂದ ತಟ್ಟೆಯಲ್ಲಿ ಅನ್ನ ಮತ್ತು ಮೀನುಸಾರು ಹಾಕಿಸಿಕೊಂಡು ಹಡಗಿನ ಹೊರ ಹಜಾರದ ಕಬ್ಬಿಣದ ಬೆಂಚಿನಲ್ಲಿ ಕುಳಿತು ರಾತ್ರಿಯ ಊಟವನ್ನು ಮುಗಿಸುತ್ತಿದ್ದೆವು. ಒಂದು ಅಗುಳನ್ನೂ ಬಿಡದೆ ಊಟ ಮುಗಿಸಿದ ಅವರು ತಟ್ಟೆಯಲ್ಲಿ ಉಳಿದ ಮೀನ ಮುಳ್ಳುಗಳನ್ನು ಕಡಲಿಗೆ ಎಸೆದು ಬಂದು ನನ್ನ ಪಕ್ಕವೇ ಕುಳಿತುಕೊಂಡರು. “”ನೋಡು, ಇದು ನಾವು ವಾಸಿಸುತ್ತಿರುವ ಭೂಮಿ ಎಂಬ ಅಲ್ಲಾಹುವಿನ ಸೃಷ್ಟಿ” ಎಂದು ತಮ್ಮ ಕೈಯಲ್ಲಿದ್ದ ಖಾಲಿ ತಟ್ಟೆಯನ್ನು ತೋರಿಸಿದರು. “”ಇದರ ತುಂಬ ನೀರು ತುಂಬಿಕೊಂಡಿದೆ ಅಂತ ಇಟ್ಟುಕೋ. ಅದು ಕಡಲು. ಈ ನೀರಲ್ಲಿ ಒಂದು ಬೊಗಸೆ ಹೊಯ್ಗೆ ಎಂಬ ಬಿಳಿ ಮರಳನ್ನು ಸುರಿ. ಈ ಮರಳಿನ ಪುಟ್ಟ ಗುಡ್ಡೆಗಳೇ ನಾವು ಬದುಕುತ್ತಿರುವ ದ್ವೀಪಗಳು. ಈ ಮರಳ ನಡುವಲ್ಲಿ ಎಲ್ಲಿಂದಲೋ ಬಂದು ಸೇರಿಕೊಂಡ ಇರುವೆಗಳು ಚಲಿಸುತ್ತಿವೆ ಅಂತ ಇಟ್ಟುಕೋ. ಈ ಇರುವೆಗಳೇ ಮನುಷ್ಯರಾದ ನಾವುಗಳು. ಯಾವನೋ ಒಬ್ಬ ರಾಕ್ಷಸ ಊಟ ಮಾಡಲು ಬಂದವನು ತನ್ನ ತಟ್ಟೆಯಲ್ಲಿ ಮರಳೂ ಇರುವೆಗಳೂ ಇರುವುದನ್ನು ಕಂಡು ನೀರಿನ ಸಮೇತ ಚೆಲ್ಲಿ ಬಿಡುತ್ತಾನೆ ಅಂತ ಇಟ್ಟುಕೋ. ಆಗ ಅವನಿಂದ ನಮ್ಮನ್ನು ಕಾಪಾಡುವುದು ಆ ಪಡೆದವನಲ್ಲದೇ ಬೇರೆ ಯಾರು?” ಎಂದು ನಿಟ್ಟುಸಿರು ಬಿಟ್ಟಿದ್ದರು.

ಅವರು ಇಪ್ಪತ್ತು ವರ್ಷಗಳ ಹಿಂದೆ ಎರಡನೆಯ ಹೆಂಡತಿಯ ಮಗ್ಗುಲಲ್ಲಿ ಇದನ್ನೇ ಯೋಚಿಸಿಕೊಂಡು ನಿದ್ದೆ ಬಾರದೆ ಮಲಗಿದ್ದರಂತೆ. ಯಾವಾಗ ನಿದ್ದೆ ಹತ್ತಿತು ಎಂಬುದೂ ಗೊತ್ತಾಗಲಿಲ್ಲವಂತೆ. ಫ‌‌ಕ್ಕನೇ ಯಾರೋ ನಿದ್ದೆಯಲ್ಲಿ ಪಕ್ಕೆಲುಬಿನ ಬಳಿ ಸಣ್ಣಗೆ ತಿವಿದು ಎಬ್ಬಿಸಿದ ಹಾಗಾಯಿತಂತೆ. ಎದ್ದು ನೋಡಿದರೆ ಯಾರೂ ಕಾಣಿಸುತ್ತಿಲ್ಲ. “ಪಡೆದವನೇ, ಏನಿದು?’ ಎಂದು ಮತ್ತೆ ಕಣ್ಣುಮುಚ್ಚಿದರೆ ಒಂದು ಧ್ವನಿ. “ಎದ್ದೇಳು’ ಅಂದಿತಂತೆ. ನಿನ್ನ ಇಲ್ಲಿನ ವ್ಯಾಪಾರ- ವ್ಯವಹಾರಗಳನ್ನು ಮುಗಿಸಿ ಒಂದು ದೀರ್ಘ‌ ಪಯಣಕ್ಕೆ ಸಜ್ಜಾಗು ಎಂದಿತಂತೆ. ಇವರಿಗೆ “ಎಲ್ಲಿಗೆ?’ ಎಂದು ಕೇಳಲೂ ಹೆದರಿಕೆ. ಅಷ್ಟು ಕಠಿಣವಾದ ಧ್ವನಿ.

ನಾನು ನಿನ್ನ ರಾಜ ಮಾತನಾಡುತ್ತಿರುವುದು. ಸಾವಿರದ ಮುನ್ನೂರು ವರ್ಷಗಳ ಹಿಂದೆ ನಾನೂ ನಿನ್ನ ಹಾಗೆಯೇ ಕಟ್ಟಿಕೊಂಡವಳ ಮಗ್ಗುಲಲ್ಲಿ ಮಲಗಿಕೊಂಡಿದ್ದೆ. ಅವಳನ್ನು ನಂಬಿಕೊಂಡಿದ್ದೇ ಮೋಸವಾಗಿತ್ತು. ನಿದ್ದೆಯಿಲ್ಲದೆ ಹೊರಳಾಡುತ್ತಿದ್ದೆ. ಅದಕ್ಕೆ ಸರಿಯಾಗಿ ಆಕಾಶದಲ್ಲಿ ಪಶ್ಚಿಮ ದಿಕ್ಕಿನಲ್ಲಿ ನಕ್ಷತ್ರವೊಂದು ತುಂಡಾಗಿ ಬೀಳುವುದನ್ನು ಕಂಡೆ. ಮಲಗಿದ್ದಲ್ಲಿಂದ ಎದ್ದೆ. ನಿಂತಿದ್ದ ಹಾಯಿಹಡಗನ್ನು ಹತ್ತಿದೆ. ಆ ಹಡಗು ಪಶ್ಚಿಮ ದಿಕ್ಕಿಗೆ ಹೊರಟಿತು. ಅದು ಹಲವು ತಿಂಗಳುಗಳ ಬಳಿಕ ನನ್ನನ್ನು ಮಕ್ಕಾ ಪಟ್ಟಣಕ್ಕೆ ತಲುಪಿಸಿತು. ಅಲ್ಲಿ ಪ್ರವಾದಿಗಳು ಇನ್ನೂ ಬದುಕಿದ್ದರು. ಕಂಡವನೇ ಹಾರಿ ಹೋಗಿ ಅವರ ಪಾದಗಳನ್ನು ಚುಂಬಿಸಿದೆ. ಅವರಿಗೆ ಅರ್ಪಿಸಲು ನನ್ನ ಬಳಿ ಶುಂಠಿಯ ಉಪ್ಪಿನಕಾಯಿ ತುಂಬಿದ್ದ ಒಂದು ಭರಣಿ ಮಾತ್ರ ಇತ್ತು. ಅದನ್ನು ಅವರಿಗೆ ಅರ್ಪಿಸಿದೆ. ಅವರು ಅದನ್ನು ಆನಂದದಿಂದ ಸೇವಿಸಿದರು. ತಮ್ಮ ಅನುಯಾಯಿಗಳಿಗೂ ಹಂಚಿದರು. ನನ್ನನ್ನು ಅಪ್ಪಿಕೊಂಡು ನನಗೆ ಹೊಸ ಜನ್ಮ ನೀಡಿದರು. “ನಿನ್ನ ರಾಜ್ಯಕ್ಕೆ ತೆರಳಿ ಸತ್ಯವನ್ನೂ ವಿಶ್ವಾಸವನ್ನೂ ಅವರಲ್ಲಿ ಹರಡು’ ಎಂದು ನನ್ನನ್ನು ವಾಪಾಸು ಹಡಗು ಹತ್ತಿಸಿದರು. ತಮ್ಮ ಕೆಲವು ಶಿಷ್ಯಂದಿರನ್ನೂ ಆ ಹಡಗಿನಲ್ಲಿ ಜೊತೆಗೆ ಕಳಿಸಿದರು. ಆದರೆ, ಪಡೆದವನಿಗೆ ನಾನು ನನ್ನ ರಾಜ್ಯಕ್ಕೆ ಮರಳಿ ಬರುವುದು ಇಷ್ಟವಿರಲಿಲ್ಲ ಅನಿಸುತ್ತದೆ. “ವ್ಯಾಧಿಯೊಂದಕ್ಕೆ ಸಿಲುಕಿ ನಾನು ಮಾರ್ಗ ಮಧ್ಯೆಯೇ ಅಸು ನೀಗಿದೆ. ಅಲ್ಲೇ ನನ್ನನ್ನು ಮಣ್ಣು ಮಾಡಿದರು. ನಾನು ಈಗ ಅಲ್ಲೇ ಇರುವೆ. ಆದರೂ ನನಗೆ ಸಮಾಧಾನವಿಲ್ಲ. ಹಾಗಾಗಿ ನಿನ್ನ ಹಾಗಿರುವ ಮನುಷ್ಯರ ಕನಸಿನಲ್ಲಿ ಬಂದು ಎಬ್ಬಿಸುತ್ತಿರುವೆ. ನೀನೂ ಎದ್ದು ಪಶ್ಚಿಮ ದಿಕ್ಕಿಗೆ ಹೊರಡು. ಸಾಕು ನಿನ್ನ ವ್ಯವಹಾರಗಳು’ ಎಂದಿತಂತೆ ಆ ಧ್ವನಿ.

ಇವರಿಗೆ ಒಂದು ಕ್ಷಣ ಏನೂ ಗೊತ್ತಾಗಲಿಲ್ಲ. ಅವರಾದರೆ ಮಹಾರಾಜರು. ಕನಸಿನಲ್ಲಿ ನಕ್ಷತ್ರಗಳು ತುಂಡಾಗುವುದೂ, ಸೂರ್ಯಚಂದ್ರರು ಒಂದಾಗುವುದೂ ಕಾಣಿಸುತ್ತದೆ. ನಾನಾದರೋ ಆಡುಗಳನ್ನು ಕತ್ತರಿಸಿ, ಮಾಂಸವನ್ನು ಮಾರಿ ಬದುಕುವ ಮನುಷ್ಯ ಜೀವಿ. ಒಣ ಮೀನಿನ ತಲೆಯೂ ನನ್ನ ಕನಸಿನಲ್ಲಿ ಕಾಣಿಸುವುದಿಲ್ಲ. ಅವರಿಗಾದರೆ ಮೋಸ ಮಾಡಲು ಮಹಾರಾಣಿಯೂ ಇದ್ದಳು. ನನ್ನ ಮೊದಲಿನವಳೂ, ಈಗಿನವಳೂ ಅಂತಹ ಮೋಸ ಮಾಡುವಂತಹ ಸುಂದರಿಯರೂ ಅಲ್ಲ. ಆದರೂ ಆ ಮಹಾರಾಜ ನನ್ನ ಕನಸಿನಲ್ಲಿ ಬಂದು ಏಕೆ ಎಬ್ಬಿಸಬೇಕು? ಹಾಗಾದರೆ, ಇದರಲ್ಲೇನೋ ಕರಾಮತ್ತಿರಬೇಕು. ಎಂದು ನಿದ್ದೆಯಿಂದ ಎದ್ದು ಕುಳಿತರಂತೆ. ತೀರಿ ಹೋಗಿ ಸಾವಿರದ ಮುನ್ನೂರು ವರ್ಷವಾದರೂ ಚೇರಮಾನ್‌ ಮಹಾರಾಜ ಸಯ್ಯದ್‌ ತಾಜುದ್ದೀನ್‌ ಎಂಬ ಹೆಸರನ್ನು ಪಡೆದುಕೊಂಡು ಓಮಾನ್‌ ದೇಶದಲ್ಲಿ ಮಲಗಿದ್ದರೂ ತನ್ನನ್ನು ಹುಡುಕಿಕೊಂಡು ಬಂದು ದ್ವೀಪದ ಪಾಲಾದ ದ್ವೀಪವಾಸಿಗಳಲ್ಲಿ ಆಯ್ದ ಕೆಲವರನ್ನು ಹೀಗೆ ಆಗಾಗ ನಿದ್ದೆಯಿಂದ ತಿವಿದು ಎಬ್ಬಿಸಿ ಮಕ್ಕಾದ ಕಡೆಗೆ ಪಯಣಿಸಲು ಹೇಳಿ ಮಾಯವಾಗುವುದು ನಡೆದೇ ಇದೆಯಂತೆ. ಇಂತಹ ಹಲವು ಕಥೆಗಳನ್ನು ಕೇಳಿದ್ದ ಅವರಿಗೆ ಈ ಬಾರಿ ಆ ರಾಜನು ತನ್ನನ್ನೇ ಎಬ್ಬಿಸಿದ್ದರ ಹಿಂದಿನ ಮರ್ಮವೇನು ಎಂದು ಗೊತ್ತಾಗಲಿಲ್ಲವಂತೆ. ಅದಕ್ಕಾಗಿ ಇರಬಹುದೇ ಎಂಬ ಒಂದು ಸಂಶಯವೂ ಬಂತಂತೆ. ಛೆ, ಇಲ್ಲ. ಅದು ಇರಲಾರದು ಎಂದೂ ಅನಿಸಿತಂತೆ.

“ಏನದು ಸಂಶಯ?’ ಎಂದು ನಾ ಕೇಳಿದ್ದೆ. ಮೊದಲನೆಯ ಪರಿಚಯವಾಗಿದ್ದ ರಿಂದ ಅವರ ಮೊದಲನೆಯ ಮತ್ತು ಎರಡನೆಯ ವಿವಾಹಗಳ ಪೂರ್ತಿ ಕಥೆಯೂ ಗೊತ್ತಿರಲಿಲ್ಲ. ಆನಂತರದ ಮಾತುಕತೆಯಲ್ಲಿ ಮೊದಲನೆಯವಳು ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುವವಳೆಂದೂ, ಎರಡನೆಯವಳು ಪ್ರಾಣಕ್ಕಿಂತ ಹೆಚ್ಚಾಗಿ ನೋಡಿಕೊಳ್ಳುವವಳೆಂದೂ ಅವರು ವಿವರಿಸಿದ್ದನ್ನು ಈ ಮೊದಲು ಹೇಳಿದ್ದನಷ್ಟೇ. ಆ ಮೊದಲನೆಯ ವಿವಾಹದಿಂದ ಹೊರನಡೆದ ಪಾಪ ಪ್ರಾಯಶ್ಚಿತ್ತಕ್ಕಾಗಿ ಸಾವಿರದ ಮುನ್ನೂರು ವರ್ಷಗಳ ಹಿಂದೆ ತೀರಿಹೋದ ಮಹಾರಾಜನು ತನ್ನನ್ನು ಮಕ್ಕಾಗೆ ಹೊರಡಲು ತಿವಿದು ಎಬ್ಬಿಸಿರಬಹುದೇ ಎಂಬ ಅನುಮಾನ ಬಂತಂತೆ ಇವರಿಗೆ. ಆದರೆ, ಅದರಲ್ಲೇನೂ ಅವರ ತಪ್ಪಿರಲಿಲ್ಲ. ಹಾಗೆ ನಿಜವಾಗಿ ನೋಡಿದರೆ ಮೋಸವಾಗಿರುವುದು ಮೊದಲ ಹೆಂಡತಿಗಲ್ಲ. ಮೋಸ ಹೋಗಿರುವುದು ನಾನು ಎಂಬುದು ಇವರ ಅನಿಸಿಕೆ.

ಎರಡನೆಯ ಬಾರಿ ಆ ಮಹಾರಾಜ ಕನಸಿನಲ್ಲಿ ಬಂದು ತಿವಿದು ಎಬ್ಬಿಸಿದಾಗ ಇವರು ಇದನ್ನೇ ಹೇಳಿದರಂತೆ. “ಮಹಾರಾಜಾ ಅದರಲ್ಲಿ ನನ್ನದೇನೂ ತಪ್ಪಿಲ್ಲ. ಆ ಮೋಸಗಾರನ ವಂಚನೆಗೆ ಬಲಿಯಾಗಿ ಮೋಸ ಹೋದವನು ನಾನು. ಅವಳದೂ ತಪ್ಪಿಲ್ಲ. ಏನೂ ಅರಿಯದ ಬಾಯಿ ಬಾರದ ಹೆಂಗಸು ಅವಳು. ನನ್ನನ್ನು ನಂಬಿ ಮದುವೆಯಾದಳು. ಆದರೆ, ಬಾಯಿ ಬಾರದ ಹೆಂಗಸನ್ನು ಮೋಸದಿಂದ ನನಗೆ ಕಟ್ಟಿದವನಿಗೆ ಶಿಕ್ಷೆಯಾಗಬೇಕಿತ್ತು. ಅವನಿಗೆ ಶಿಕ್ಷೆಯೂ ಆಗಿ ದೇಶಾಂತರ ಹೊರಟು ಹೋದನು. ಆದರೆ, ಮಹಾರಾಜನಾದ ನೀನು ಪ್ರಾಯಶ್ಚಿತ್ತಕ್ಕಾಗಿ ಮಕ್ಕಾಗೆ ತೆರಳು’ ಎಂದು ಆಜ್ಜಾಪಿಸುತ್ತಿರುವೆ. ಏನಿದರ ಮರ್ಮ ಎಂದು ಕನಸಲ್ಲೇ ಮಹಾರಾಜನ ಜೊತೆ ವಾಗ್ವಾದಕ್ಕೆ ಇಳಿದರಂತೆ.

“ಮೊದಲು ನೀನು ನಾನು ಹೇಳಿದ್ದನ್ನು ಮಾಡು. ಸರಿ-ತಪ್ಪುಗಳ ಲೆಕ್ಕಾಚಾರದ ಹೊಣೆಯನ್ನೂ ಪಡೆದವನಿಗೂ ಅವನ ಪವಿತ್ರ ಪ್ರವಾದಿಗೂ ಬಿಟ್ಟು ನೀನು ಹೊರಡಲು ಸಿದ್ಧನಾಗು’ ಎಂದರಂತೆ. ಆವತ್ತಿನಿಂದ ಇವರು ಮಹಾರಾಜ ಕನಸಲ್ಲಿ ಬಂದಾಗಲೆಲ್ಲ ಎದ್ದು ತಮ್ಮ ಪೆಠಾರಿಯನ್ನು ರೆಡಿ ಮಾಡಿಕೊಂಡು ಮಕ್ಕಾಗೆ ಹೊರಟು ವಾಪಾಸಾಗುವ ದಾರಿಯಲ್ಲಿ ಓಮನ್‌ ದೇಶದ ಪ್ರಸಿದ್ಧ ಪಟ್ಟಣದಲ್ಲಿರುವ ಮಹಾರಾಜನ ಗೋರಿಯನ್ನೂ ಕಂಡು ಬರುತ್ತಾರೆ. ಪ್ರತಿವರ್ಷವೂ ಅದೇ ಪೆಠಾರಿ. ಪೆಠಾರಿಯೊಳಗೆ ಅದೇ ಕೊಬ್ಬರಿಯ ಹೋಳುಗಳು ಮತ್ತು ದ್ವೀಪದ ಚಕ್ಕರೆ ಉಂಡೆ. ದಾರಿಯುದ್ದಕ್ಕೂ ಹಸಿದವರಿಗೆ ಅದನ್ನು ಹಂಚುತ್ತಾರೆ, ತಮಗೆ ಹಸಿವಾದಾಗ ನೀರು ಕುಡಿದು ಮಲಗುತ್ತಾರೆ. ದೇಶದೇಶಗಳ ವಿಮಾನ ನಿಲ್ದಾಣಗಳಲ್ಲೂ ಇವರ ಕಬ್ಬಿಣದ ಪೆಠಾರಿಗೆ ತೂಕದಿಂದಲೂ ಸುಂಕದಿಂದಲೂ ವಿನಾಯ್ತಿಯಂತೆ. ಏಕೆಂದರೆ, ಅದರೊಳಗಿರುವುದು ಇವರ ಸ್ವಂತ ಉಪಯೋಗಕ್ಕಲ್ಲ. ಬದಲಾಗಿ ಹಸಿದವರಿಗೆ ಹಂಚಲಿಕ್ಕೆ ಎಂಬುದು ಎಲ್ಲ ಸುಂಕದವರಿಗೂ ಗೊತ್ತಿದೆಯಂತೆ. ತೀರಿ ಹೋದ ಆ ಚೇರನ್‌ ಮಹಾರಾಜನೂ ನಾನಾ ವೇಷಗಳಲ್ಲಿ ಇವರನ್ನು ಹಿಂಬಾಲಿಸಿ ಅಲ್ಲಲ್ಲಿ ಕಾಣಿಸಿಕೊಂಡು ವಿಚಾರಿಸಿಕೊಂಡು ಇದ್ದಕ್ಕಿದ್ದಂತೆ ಮರೆಯಾಗುವರಂತೆ. ಹಾಗಾಗಿ, ಇವರಿಗೆ ಯಾವ ಅಪರಿಚಿತರನ್ನು ಕಂಡರೂ ಅಸಾಧ್ಯ ಗೌರವ ಮತ್ತು ಅಷ್ಟೇ ಭಯ ಮತ್ತು ಸಲುಗೆ. ನನ್ನ ಬಗ್ಗೆಯೂ ಇವನೂ ಮಾರುವೇಷದ ಮಹಾರಾಜನಿರಬಹುದೇ ಎಂಬ ಸಂಶಯ ಅವರಿಗೆ! “ಒಮ್ಮೊಮ್ಮೆ ನನ್ನ ಎದುರು ಕುಳಿತಿರುವ ನೀನೂ ಮಾರುವೇಷದಲ್ಲಿರುವ ಮಹಾರಾಜನಿರಬಹುದೇ ಎಂಬ ಸಂಶಯ ನನಗೆ’ ಎಂದು ನಕ್ಕಿದ್ದರು.

ಅಬ್ದುಲ್‌ ರಶೀದ್‌

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ದೇಶಕ್ಕೊಂದು ಸಂವಿಧಾನವನ್ನು ರೂಪಿಸಿ ಅನುಮೋದಿಸಿದ್ದು 1949 ನವೆಂಬರ್‌ 26ರಂದು. ಹೀಗೆ ಅಂಗೀಕರಿಸಿದ ಸಂವಿಧಾನ ಜಾರಿಗೆ ಬಂದದ್ದು 1950 ಜನವರಿ 26ರಂದು. ಅಪರೂಪಕ್ಕೊಮ್ಮೊಮ್ಮೆ...

  • ಮೆಣಸಿನಕಾಯಿ ಬಸವಣ್ಣ, ಬೆಲ್ಲದ ರಾಮಣ್ಣ , ಉಪ್ಪಿನ ಪುಟ್ಟಪ್ಪ, ಪುರಿ ಪರಮೇಶ, ಈರುಳ್ಳಿ ಗಂಗಾಧರ... ನಮ್ಮೂರಿನಲ್ಲಿ ಅಣೆಕಟ್ಟು ನಿರ್ಮಾಣ ಆರಂಭವಾದಾಗ ಅಲ್ಲಿ ನೆಲೆನಿಂತ...

  • ಮಗಳು ಹೆರಿಗೆಗೆಂದು ಜರ್ಮನಿಯಿಂದ ಬಂದಳು. ಬರುವಾಗ ಹೆತ್ತವರಿಗೆ ಒಂದು ಐಪ್ಯಾಡ್‌ ತಂದಿದ್ದಳು. ಹೆರಿಗೆಯಾಯಿತು. ಮೊಮ್ಮಗ ಹುಟ್ಟಿದ. ಆಸ್ಪತ್ರೆಗೆ ಎಲ್ಲ ಓಡಾಡಿದ್ದು...

  • ಗಂಡಹೆಂಡಿರ ಜಗಳ ಉಂಡು ಮಲಗುವವರೆಗೆ ಅಂತ ಹೇಳುತ್ತಾರೆ. ಒಂದು ವೇಳೆ ಅದು ನೂರೈವತ್ತು ವರ್ಷಗಳವರೆಗೂ ನಡೆದರೆ? ಈಗಂತೂ ಅದು ಸಾಧ್ಯವೇ ಇಲ್ಲ ಅಂತೀರಾ? ಹೌದು! ಅದು ನಡೆದಿರುವುದೂ...

  • ಚಿಕ್ಕವರಿದ್ದಾಗ ಮುಂಬಯಿಯ ಹಡಗು ಪಯಣ, ಅಲ್ಲಿನ ಜನನಿಬಿಡತೆ, ಬೆರಗುಪಡಿಸುವ ಹತ್ತಾರು ಮಹಡಿಗಳ ಕಟ್ಟಡಗಳು, ಸಾಲುಗಟ್ಟಿ ಸಾಗುವ ಕಾರುಗಳು, "ಹ್ಯಾಂಗಿಂಗ್‌ ಗಾರ್ಡನ್ನಿ'ನಂತಹ...

ಹೊಸ ಸೇರ್ಪಡೆ

  • ದೇಶ-ಭಾಷೆಯ ಪ್ರೇಮವನ್ನು ಸಾರುವ, ವ್ಯಕ್ತಿತ್ವ-ಅಭಿಪ್ರಾಯವನ್ನು ಬಿಂಬಿಸುವ, ಓದಿದ ಕೂಡಲೇ ವಾವ್‌ ಅನ್ನಿಸುವ ಚಂದದ ಸಾಲುಗಳನ್ನು ವಸ್ತ್ರದ ಮೇಲೆ ಮೂಡಿಸಿಕೊಳ್ಳಬಹುದು....

  • ಶಿಕ್ಷಣದಲ್ಲಿ ಇಂದು ಹಲವಾರು ಹೊಸತನಗಳು ಬಂದಿವೆ. ಕಲಿಯುವ, ಕಲಿಸುವ ಜವಾಬ್ದಾರಿಗಳು ಹೆಚ್ಚುತ್ತಾ ಹೋಗುತ್ತವೆ. ಕೆಲವೊಂದು ಕಡೆ ಶಿಕ್ಷಣ ಪದ್ಧತಿಗಳು ವಿದ್ಯಾರ್ಥಿಗಳಿಗೆ...

  • ಮಾನಸಿಕವಾಗಿ ಕುಗ್ಗಿರುವ ಹೆಣ್ಣುಮಕ್ಕಳನ್ನು ಖೆಡ್ಡಾಗೆ ಬೀಳಿಸಿಕೊಂಡು ತಮ್ಮ ಬೇಳೆ ಬೇಯಿಸಿಕೊಳ್ಳಲು ಹೊಂಚು ಹಾಕುತ್ತಿರುವ ತೋಳಗಳೇನೂ ಕಡಿಮೆ ಇಲ್ಲ. ತಾನೊಬ್ಬ...

  • ಸಿಟಿಗಳಲ್ಲಿರುವ ಹುಡುಗೀರು, ಈಗಷ್ಟೇ ಮೂವತ್ತಾಯ್ತು. ಎರಡು ವರ್ಷ ಬಿಟ್ಟು ಮದುವೆ ಆದರಾಯ್ತು. ಈಗ್ಲೆ ಏನವಸರ ಅನ್ನುತ್ತಾರೆ. ಆದರೆ, ಹಳ್ಳಿಯಲ್ಲಿರುವ ಹೆಣ್ಣುಮಕ್ಕಳಿಗೆ,...

  • ತೂಕ ಇಳಿಸಲೇಬೇಕು ಅಂತಾದಾಗ, ಅವರಿವರು ಮಾತನಾಡುವ "ಸ್ಲಿಮ್‌ ಸೂತ್ರ'ಗಳನ್ನು ಕಿವಿಗೊಟ್ಟು ಕೇಳ್ಳೋಕೆ ಆರಂಭಿಸಿದೆ. ಒಬ್ಬಳು ಜಿಮ್‌ಗೆ ಹೋಗು ಅಂದ್ರೆ, ಇನ್ನೊಬ್ಬಳು...