ಚೀನಾ ದೇಶದ ಕತೆ: ಹಾರುವ ಅರಮನೆ

Team Udayavani, Jan 13, 2019, 12:30 AM IST

ಒಂದು ಗ್ರಾಮದಲ್ಲಿ ಲಿನ್‌ ಎಂಬ ಮಹಿಳೆ ಇದ್ದಳು. ಅವಳಿಗೆ ಚಿನ್‌ ಎಂಬ ಮಗನಿದ್ದ. ಗಂಡನನ್ನು ಕಳೆದುಕೊಂಡಿದ್ದ ಲಿನ್‌ಳಿಗೆ ಕಸೂತಿಯಿಂದ ವಿಧವಿಧದ ಉಡುಪುಗಳನ್ನು ತಯಾರಿಸುವ ಕಲೆ ಒಲಿದಿತ್ತು. ದೇವರು ಅದಲ್ಲದೆ ಒಂದು ವಿಶೇಷವಾದ ಶಕ್ತಿಯಿರುವ ಸೂಜಿಯನ್ನಾಕೆಗೆ ಕರುಣಿಸಿದ್ದ. ಅದರಿಂದ ಕಸೂತಿ ಹಾಕಿ ಸಿದ್ಧವಾದ ಬಟ್ಟೆಯಲ್ಲಿರುವ ಮರ, ಗಿಡಗಳು, ಪ್ರಾಣಿ, ಪಕ್ಷಿಗಳು ಬಯಸಿದರೆ ಜೀವಂತಗೊಂಡು ನಿಲ್ಲುತ್ತಿದ್ದವು. ಮನೆಗಳು ತಲೆಯೆತ್ತುತ್ತಿದ್ದವು. ಬೇಡವಾದರೆ ಮತ್ತೆ ಅದರೊಳಗೆ ಸೇರಿಕೊಳ್ಳುತ್ತಿದ್ದವು. ತಾಯಿ ತಯಾರಿಸಿದ ಕಸೂತಿಯ ಉಡುಪುಗಳನ್ನು ಚಿನ್‌ ಪೇಟೆಗೆ ತೆಗೆದುಕೊಂಡು ಹೋಗುತ್ತಿದ್ದ. ಅದರಲ್ಲಿ ಅಡಗಿದ ಅದ್ಭುತ ಶಕ್ತಿಯನ್ನು ಅರಿತಿರುವ ವ್ಯಾಪಾರಿಗಳು ಮುಗಿಬಿದ್ದು ದುಬಾರಿ ಬೆಲೆಗೆ ಎಲ್ಲವನ್ನೂ ಕೊಳ್ಳುತ್ತಿದ್ದರು.

ಒಂದು ಸಲ ಲಿನ್‌ ಮಗನೊಂದಿಗೆ, “”ಎಷ್ಟು ಸಮಯ ಹೆಣಿಗೆ ಹಾಕಿಕೊಂಡು ಈ ಕಷ್ಟದ ಜೀವನ ನಡೆಸುವುದು? ನನಗೆ ಆಕಾಶದಲ್ಲಿ ಹಾರುವ ಸುಂದರವಾದ ಅರಮನೆಯಲ್ಲಿ ವಾಸವಾಗಬೇಕೆಂಬ ಬಯಕೆಯಾಗಿದೆ. ಅದರ ಸುತ್ತಲೂ ಬಗೆಬಗೆಯ ಸುಂದರವಾದ ಹೂಗಳ ಗಿಡಗಳಿರಬೇಕು. ಎಲ್ಲ ಸೌಕರ್ಯವೂ ಅರಮನೆಯೊಳಗಿದ್ದರೆ ಸುಖವಾಗಿ ಕಾಲ ಕಳೆಯಬಹುದೆಂಬ ಆಶೆ ಯಾವಾಗಲೂ ಕಾಡುತ್ತದೆ” ಎಂದು ಹೇಳಿದಳು. ತಾಯಿಯ ಮಾತಿಗೆ ಚಿನ್‌ ನಕ್ಕುಬಿಟ್ಟ. “”ಇದೊಳ್ಳೆಯ ಮಾತು! ನೀನು ಕಸೂತಿ ಹಾಕಿ ಬೇರೆಯವರ ಮನೆಗಳಲ್ಲಿ ಗಿಣಿಗಳನ್ನು, ಮೊಲಗಳನ್ನು ಜೀವಂತಗೊಳಿಸುತ್ತಿದ್ದೀ. ಹೂಗಳನ್ನು ಅರಳಿಸುತ್ತಿದ್ದೀ. ಹಾಗೆಯೇ ನಮಗೂ ಒಂದು ಸುಂದರವಾದ ಅರಮನೆಯನ್ನು ಹೆಣೆದುಬಿಡು, ನಮಗೆ ಇಷ್ಟವಾದ ಜಾಗದಲ್ಲಿ ಅದನ್ನು ಜೀವಂತಗೊಳಿಸಿ ಹಾಯಾಗಿರಬಹುದಲ್ಲವೆ?” ಎಂದು ಕೇಳಿದ.

ಮಗನ ಮಾತು ಲಿನ್‌ಗೆ ಸರಿಯೆನಿಸಿತು. “”ನಿನ್ನ ಮಾತು ನಿಜ. ಈಗಲೇ ಬಣ್ಣಬಣ್ಣದ ನೂಲು, ಮಣಿಗಳು, ಕನ್ನಡಿಗಳನ್ನು ತಂದುಕೊಡು. ಮನಸ್ಸಿಗೊಪ್ಪುವ ಅರಮನೆಯನ್ನು ಹೆಣಿಗೆ ಹಾಕುತ್ತೇನೆ” ಎಂದು ಹೇಳಿ ಬೇಕಾದುದನ್ನೆಲ್ಲ ಸಿದ್ಧಪಡಿಸಿದಳು. ರಾತ್ರೆ, ಹಗಲು ಬಿಡದೆ ಹೆಣಿಗೆ ಹಾಕುವ ಕೆಲಸ ನಡೆಸಿದಳು. ಊಟ, ನೀರು ಯಾವುದಕ್ಕೂ ಏಳಲಿಲ್ಲ. ಚಂದವಾದ ಅರಮನೆ ರೂಪುಗೊಳ್ಳುತ್ತ ಹೋಯಿತು. ಒಳಗೆ ಕಣ್ಣು ಕೋರೈಸುವಂತಹ ಚೆಲುವಿನ ಕೊಠಡಿಗಳನ್ನು ನೆಯಿಗೆ ಮಾಡಿದಳು. ಉದ್ಯಾನವನ, ಅದರಲ್ಲೊಂದು ಈಜುಕೊಳ ಸೃಷ್ಟಿಯಾಯಿತು. ಅರಮನೆಯ ರಚನೆ ಪೂರ್ಣವಾಗುತ್ತ ಬಂತು. ಅದರಲ್ಲಿ ನೆಲೆಸುವ ಕನಸು ಕಾಣುತ್ತ ಲಿನ್‌ ಕೆಲಸ ಮುಂದುವರೆಸಿದ್ದಾಗ ಒಂದು ಆಕಸ್ಮಿಕ ಘಟನೆ ನಡೆಯಿತು. ಪ್ರಬಲವಾಗಿ ಬೀಸಿ ಬಂದ ಗಾಳಿಗೆ ಅವಳ ಕೈಯಲ್ಲಿದ್ದ ಹೆಣಿಗೆ ಸೂಜಿಯೊಂದಿಗೇ ಕೈಯಿಂದ ಜಾರಿ ಭರ್ರನೆ ಹೊರಗೆ ಹೋಗಿ ಆಕಾಶದಲ್ಲಿ ಮಾಯವಾಯಿತು.

ಇದರಿಂದ ಕಂಗಾಲಾದ ಲಿನ್‌ ನೆಲಕ್ಕೆ ಕುಸಿದುಬಿದ್ದಳು. ಹೆಣಿಗೆಯ ಜೊತೆಗೆ ತನ್ನ ಜೀವನಾಧಾರವಾಗಿದ್ದ ಮಹಿಮೆಯಿರುವ ಸೂಜಿಯೂ ಮಾಯವಾಗಿರುವುದನ್ನು ಕಂಡು ಬಿಕ್ಕಿ ಬಿಕ್ಕಿ ಅಳತೊಡಗಿದಳು. ಅನ್ನಾಹಾರಗಳನ್ನು ತ್ಯಜಿಸಿ ಪ್ರಾಣ ತ್ಯಾಗ ಮಾಡಲು ಮುಂದಾದಳು. ಆಗ ಚಿನ್‌ ತಾಯಿಯನ್ನು ಸಂತೈಸಿದ. “”ನೀನು ಹೆದರಬೇಡ. ಸನಿಹದಲ್ಲೇ ಕಾಡಿನ ನಡುವೆ ಒಬ್ಬ ಸಂತನಿದ್ದಾನೆ. ಅವನು ಮಹಿಮಾವಂತ. ಅವನ ಬಳಿಯಿರುವ ಒಂದು ಸ್ಫಟಿಕವನ್ನು ಕಣ್ಣಿನ ಮುಂದೆ ಇರಿಸಿ ನೋಡಿದರೆ ಇಡೀ ಜಗತ್ತು ಕಾಣುತ್ತದೆ. ನಿನ್ನ ಹೆಣಿಗೆ ಎಲ್ಲಿದೆಯೆಂದು ನೋಡಿ ಹೇಳುತ್ತಾನೆ. ನಾನು ಅವನ ಬಳಿಗೆ ಹೋಗುತ್ತೇನೆ” ಎಂದು ಹೇಳಿ ಸಂತನ ಬಳಿಗೆ ಹೋದ.

ಸಂತನು ಚಿನ್‌ ಹೇಳಿದ ಮಾತುಗಳನ್ನು ಕೇಳಿಸಿಕೊಂಡ ಮೇಲೆ ತನ್ನಲ್ಲಿರುವ ಸ್ಫಟಿಕದಿಂದ ಅದು ಎಲ್ಲಿದೆಯೆಂಬುದನ್ನು ನೋಡಿ ತಿಳಿದುಕೊಂಡ. “”ನೋಡು, ಇದು ಕೇವಲ ಗಾಳಿಯ ಕೃತ್ಯವಲ್ಲ. ಯಕ್ಷಿಣಿಯರು ಗಾಳಿಯ ಮೂಲಕ ಹೆಣಿಗೆಯನ್ನು ಅಪಹರಿಸಿದ್ದಾರೆ. ಎತ್ತರದಲ್ಲಿ ಅದನ್ನು ಅರಮನೆಯಾಗಿ ಮಾಡಿಕೊಂಡು ವಾಸವಾಗಿದ್ದಾರೆ. ಅಲ್ಲಿಗೆ ಹೋಗಲು ಇಡೀ ಜೀವನ ಮುಗಿಯುವ ವರೆಗೂ ನಡೆದರೂ ಕೂಡ ಸಾಧ್ಯವಾಗುವುದಿಲ್ಲ. ದಾರಿಯ ಮಧ್ಯೆ ಒಂದು ಅಗ್ನಿಪರ್ವತವಿದೆ, ಬಳಿಕ ಮೈ ಹೆಪ್ಪುಗಟ್ಟುವ ಮಂಜುಗಡ್ಡೆಯ ನದಿಯಿದೆ. ಇದನ್ನೆಲ್ಲ ದಾಟಿಕೊಂಡು ಹೋಗುವುದು ಕನಸಿನ ಮಾತು. ಅದೂ ಅಲ್ಲದೆ ಹೆಣಿಗೆ ಅರಮನೆಯಾಗಿದೆ, ಅದರಲ್ಲಿ ವಾಸಿಸುವ ಯಕ್ಷಿಣಿಯರಿದ್ದಾರೆ. ಮೊದಲಿನ ಹಾಗೆ ಮಾಡಿ ಹೆಣಿಗೆಯನ್ನು ಮರಳಿ ಹೇಗೆ ತರಬಲ್ಲೆ?” ಎಂದು ಕೇಳಿದ.

ಚಿನ್‌ ಸಂತನ ಕಾಲುಗಳನ್ನು ಗಟ್ಟಿಯಾಗಿ ಹಿಡಿದುಕೊಂಡ. “”ನನಗೆ ನನ್ನ ತಾಯಿಯೆಂದರೆ ಪಂಚಪ್ರಾಣ. ಅವಳನ್ನು ಕಳೆದುಕೊಂಡರೆ ನಾನು ಬದುಕುವುದಿಲ್ಲ. ಆದರೆ ಹೆಣಿಗೆ ಮರಳಿ ಸಿಗದಿದ್ದರೆ ತಾಯಿ ಉಳಿಯುವುದಿಲ್ಲ. ಎಲ್ಲ ಕಷ್ಟಗಳನ್ನು ಎದುರಿಸುವ ದಾರಿ ನೀವೇ ತೋರಿಸಬೇಕು” ಎಂದು ಪ್ರಾರ್ಥಿಸಿದ.

ಸಂತನಿಗೆ ಚಿನ್‌ ಮೇಲೆ ಕನಿಕರವುಂಟಾಯಿತು. “”ತಾಯಿಯ ಮೇಲೆ ನೀನಿರಿಸಿದ ಪ್ರೀತಿ ಕಂಡು ಇಷ್ಟವಾಗಿದೆ. ನಾನು ನಿನಗೆ ಒಂದು ಮಹಿಮೆಯ ಕುದುರೆಯನ್ನು ಕೊಡುತ್ತೇನೆ. ಅದು ಗಾಳಿಗಿಂತಲೂ ವೇಗವಾಗಿ ಹಾರುವ ಶಕ್ತಿ ಪಡೆದಿದೆ. ನಿನ್ನನ್ನು ಸುರಕ್ಷಿತವಾಗಿ ಯಕ್ಷಿಣಿಯರ ಬಳಿಗೆ ಕರೆದುಕೊಂಡು ಹೋಗುತ್ತದೆ. ಆದರೆ ಕುದುರೆ ಧಗಧಗ ಉರಿಯುವ ಅಗ್ನಿಪರ್ವತವನ್ನು ದಾಟುತ್ತದೆ, ಮಂಜಿನ ನದಿಯಲ್ಲಿ ಈಜುತ್ತ ಸಾಗುತ್ತದೆ. ಆಗ ನೀನು ಬೆಂಕಿಯ ಕಾವಿನಿಂದ, ಮಂಜುಗಡ್ಡೆಯ ಶೀತದಿಂದ ಕಂಗೆಟ್ಟು ಕೂಗಿಕೊಳ್ಳಬಾರದು. ಧ್ವನಿ ತೆಗೆದರೆ ಕುದುರೆ ನಿನ್ನನ್ನು ಅಲ್ಲಿಯೇ ಕೆಡವಿ ಬಿಡುತ್ತದೆ. ಮುಂದೆ ಯಕ್ಷಿಣಿಯರು ಅರಮನೆಯಲ್ಲಿರುವಾಗ ಅವರು ಎಚ್ಚರವಾಗಿದ್ದರೆ ಹೆಣಿಗೆಯನ್ನು ಮತ್ತೆ ತರಲು ಬಿಡುವುದಿಲ್ಲ. ಅವರಿಗೆ ನಿದ್ರೆ ಬರಬೇಕು, ಅರಮನೆಯ ಮೇಲೆ ನಾನು ಕೊಡುವ ಮಂತ್ರಿಸಿದ ನೀರನ್ನು ಹಾಕಿ ಮೊದಲಿನಂತೆ ಮಾಡಿ ತರಬೇಕು. ಆ ಧೈರ್ಯ ನಿನಗಿದೆಯೆ?” ಎಂದು ಸಂತ ಕೇಳಿದ.

“”ನನ್ನ ತಾಯಿಯ ಜೀವ ಉಳಿಸಿಕೊಳ್ಳಲು ಯಾವ ಕೆಲಸವನ್ನಾದರೂ ಮಾಡುತ್ತೇನೆ” ಎಂದ ಚಿನ್‌. ಸಂತ ನೀಡಿದ ಕುದುರೆಯೊಂದಿಗೆ ಮನೆಗೆ ಬಂದ. ಲಿನ್‌ ತಯಾರಿಸಿಟ್ಟಿದ್ದ ಒಂದು ಹೆಣಿಗೆಯ ಮುಸುಕನ್ನು ಕೈಯಲ್ಲಿ ಹಿಡಿದುಕೊಂಡು ಕುದುರೆಯ ಮೇಲೆ ಕುಳಿತ. ಕುದುರೆ ಬಿರುಗಾಳಿಗಿಂತ ವೇಗವಾಗಿ ಹಾರುತ್ತ ಬಹು ದೂರ ಕ್ರಮಿಸಿತು. ಆಗ ಅಗ್ನಿಕುಂಡವಾಗಿದ್ದ ಬೆಟ್ಟ ಎದುರಾಯಿತು. ಅದರ ಬೆಂಕಿಯ ಕಾವಿಗೆ ಬಳಿಗೆ ಸುಳಿಯಲೂ ಸಾಧ್ಯವಿರಲಿಲ್ಲ. ಆದರೆ, ಕುದುರೆ ಭಯಪಡದೆ ಬೆಂಕಿಯ ಕಡೆಗೆ ನುಗ್ಗಿತು. ಚಿನ್‌ ಪ್ರಾಣಭಯದಿಂದ ಚೀರಿಕೊಳ್ಳಬೇಕೆಂದುಕೊಂಡ. ಸಂತ ಎಚ್ಚರಿಸಿದ ಮಾತುಗಳು ನೆನಪಾದವು. ಕಣ್ಮುಚ್ಚಿ ನಾಲಿಗೆ ಕಚ್ಚಿಕೊಂಡು ಕುಳಿತ. ಕುದುರೆ ಅಪಾಯವಾಗದಂತೆ ಅಗ್ನಿ ಪರ್ವತವನ್ನು ದಾಟಿತು. ಮಂಜಿನ ನದಿಯ ಸನಿಹ ತಲುಪಿತು. ನದಿಯ ಶೈತ್ಯದಿಂದ ದೇಹ ನಡುಗತೊಡಗಿದರೂ ಚಿನ್‌ ತುಟಿ ತೆರೆಯದೆ ಸಹಿಸಿಕೊಂಡು ಕುದುರೆಯನ್ನು ಗಟ್ಟಿಯಾಗಿ ಅವಚಿಕೊಂಡ. ಮಂಜಿನ ಗಡ್ಡೆಗಳ ನಡುವೆ ದಾರಿ ಮಾಡಿಕೊಂಡು ಓಡುತ್ತ ಯಕ್ಷಿಣಿಯರ ಅರಮನೆಯ ಅಂಗಳಕ್ಕೆ ತಲುಪಿತು.

ಲಿನ್‌ ನೆಯಿದ ಹೆಣಿಗೆಯನ್ನು ಆಕಾಶದಲ್ಲಿ ಅರಮನೆಯಾಗಿ ಮಾಡಿಕೊಂಡು ಯಕ್ಷಿಣಿಯರು ಸುಖ ಸಂತೋಷದಲ್ಲಿದ್ದರು. ಚಿನ್‌ ತನ್ನ ತಾಯಿ ಹೆಣೆದ ಮುಸುಕನ್ನು ಅವರ ಮೈಮೇಲೆ ಎಸೆದ. ಅದರಿಂದಾಗಿ ಅವರೆಲ್ಲರೂ ನಿದ್ರಾವಶರಾಗಿ ಬಿದ್ದುಕೊಂಡರು. ಬಳಿಕ ಅವನು ಸಂತ ನೀಡಿದ ಮಂತ್ರಿಸಿದ ಜಲವನ್ನು ಮನೆಯ ಮೇಲೆ ಹಾರಿಸಿದ. ಮನೆ ಮತ್ತೆ ಹೆಣಿಗೆಯಾಗಿ ಸೂಜಿಯೊಂದಿಗೆ ಕಾಣಿಸಿಕೊಂಡಿತು.
ಚಿನ್‌ ಹೆಣಿಗೆಯೊಡನೆ ಮತ್ತೆ ಕುದುರೆಯ ಮೇಲೆ ಕುಳಿತುಕೊಂಡು ಸುಲಭವಾಗಿ ಮನೆಗೆ ಬಂದು ತಲುಪಿದ. ಆದರೆ ನಿದ್ರಾಹಾರಗಳಿಲ್ಲದ ಕಾರಣ ಅವನ ತಾಯಿ ಸ್ಮತಿ ಕಳೆದುಕೊಂಡು ಸಾಯುವ ಸ್ಥಿತಿಯಲ್ಲಿದ್ದಳು. ಅವನು ಸಂತನ ಬಳಿಗೆ ಹೋಗಿ ಈ ವಿಷಯವನ್ನು ತಿಳಿಸಿದ. “”ತಾಯಿಗಾಗಿ ನಾನು ಇಷ್ಟೊಂದು ಶ್ರಮ ಅನುಭವಿಸಿದೆ. ಆದರೆ ಅವಳು ಬದುಕುವ ಸ್ಥಿತಿಯಲ್ಲಿ ಇಲ್ಲ. ನನ್ನ ತಾಯಿಯನ್ನು ಬದುಕುವಂತೆ ಮಾಡಿ” ಎಂದು ಬೇಡಿಕೊಂಡ.

“”ನಿನ್ನ ತಾಯಿ ಎಷ್ಟು ಕಿತ್ತರೂ ಮರಳಿ ಬದುಕುವ ಗುಣವಿರುವ ಗರಿಕೆಯ ಹೆಣಿಗೆ ಹಾಕಿಟ್ಟಿರುವಳಲ್ಲವೆ? ಆ ಹೆಣಿಗೆಯನ್ನು ಅವಳ ಮೈಯ ಮೇಲೆ ಹೊದಿಸು. ಹೊದಿಕೆ ಜೀವಂತವಾಗಿ ಗರಿಕೆಯ ಹಾಗೆ ಮರುಜೀವ ಪಡೆದು ಏಳುತ್ತಾಳೆ” ಎಂದು ಸಂತನು ಹೇಳಿದ. ಚಿನ್‌ ಕೂಡಲೇ  ಬದುಕಿಸಿಕೊಂಡ. ಲಿನ್‌ ತನ್ನ ಹೆಣಿಗೆಯನ್ನು ಹಾರುವ ಅರಮನೆಯಾಗಿ ಮಾಡಿಕೊಂಡು ಮಗನ ಜೊತೆಗೆ ಸುಖವಾಗಿದ್ದಳು.

ಪ. ರಾಮಕೃಷ್ಣ ಶಾಸ್ತ್ರಿ

ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 8884889444

ಈ ವಿಭಾಗದಿಂದ ಇನ್ನಷ್ಟು

  • ಯಕ್ಷಋಷಿ ಎಂಬ ಬಿರುದಿಗೆ ಪಾತ್ರರಾದ ಹೊಸ್ತೋಟ ಮಂಜುನಾಥ ಭಾಗವತರು ಇತ್ತೀಚೆಗೆ ನಮ್ಮನ್ನಗಲಿದ್ದಾರೆ. 1940ರಲ್ಲಿ ಉತ್ತರಕನ್ನಡ ಜಿಲ್ಲೆಯ ಹನ್ಮಂತಿ ಹೊಸ್ತೋಟದಲ್ಲಿ...

  • ಧಾರ್ಮಿಕ ಸಂಪ್ರದಾಯಗಳ ಆಚರಣೆಯಲ್ಲಿ ಮೇಲ್ಪಂಕ್ತಿಯಲ್ಲಿರುವ ಅದಮಾರು ಮಠ ಸಂಸ್ಥಾನವು ಪೂರ್ಣಪ್ರಜ್ಞ ವಿದ್ಯಾಸಂಸ್ಥೆಗಳ ಮೂಲಕ ಶೈಕ್ಷಣಿಕವಾಗಿ ಮತ್ತು ಸಾಮಾಜಿಕವಾಗಿ...

  • ದಕ್ಷಿಣಕನ್ನಡದ ಜನರು ಬುದ್ಧಿವಂತರೆಂದೂ ವಿದ್ಯಾವಂತರೆಂದೂ ಘಟ್ಟದ ಮೇಲಿನ ಜನರಲ್ಲಿ ಒಂದು ನಂಬಿಕೆಯುಂಟು. ದ.ಕ.ದವರದ್ದು ಸ್ವಚ್ಛವಾದ ಗ್ರಾಂಥಿಕ ಭಾಷೆ, ಕನ್ನಡ...

  • ನಿಜಜೀವನದ ಘಟನೆಗಳು, ಸಂಬಂಧಗಳು, ಸಂದಿಗ್ಧಗಳು- ಕತೆಗಾರರಿಗೆ ಕಥಾವಸ್ತುಗಳಾಗುತ್ತವೆ. ಕತೆ ಬರೆಯುವಾಗ ಕೃತಿಮ- ಅಸಹಜವೆನ್ನಿಸುವಂತಹ ಸನ್ನಿವೇಶಗಳು ಬಾರದಂತೆ ಪ್ರಯತ್ನಿಸುವುದು...

  • ಒಂದು ಕಾಡಿನಲ್ಲಿ ಸಿಂಹವೊಂದು ನೀರು ಕುಡಿಯಲು ಕೆರೆಗೆ ಇಳಿಯಿತು. ನೀರು ಕುಡಿದಾದ ಮೇಲೆ ಕೆರೆಯಿಂದ ಮೇಲೆ ಹೋಗಲು ಹೆಜ್ಜೆ ಇಡುವಾಗ ತನ್ನ ಕಾಲು ಕೆಸರಿನಲ್ಲಿ ಹೂತು...

ಹೊಸ ಸೇರ್ಪಡೆ