ಸಾವು ಮತ್ತು ಜೀವರ ಪಾತ್ರಗಳು ಅದಲು ಬದಲಾದ ಸೋಜಿಗ!

ಉಪನಿಷತ್ತುಗಳ ಹತ್ತಿರದಿಂದ

Team Udayavani, Jul 28, 2019, 5:00 AM IST

q-7

ಉಪನಿಷತ್ತಿನಲ್ಲಿ ಮೇಲ್ನೋಟಕ್ಕೆ ಒಂದು ಕಥೆ ಇದೆ. ಅದೊಂದು ಸಂದರ್ಭ ಸೂಚನೆ. ಅನುಗುಣವಾಗಿ ಕೆಲವು ಮಾತುಕತೆಗಳ ವಿವರಗಳು. ಈ ಮಾತುಕತೆಗಳಾದರೂ ಸಮಗ್ರವಾಗಿ ಪ್ರತಿಯೊಂದು ಹೆಜ್ಜೆಯನ್ನೂ ಚಿತ್ರಿಸುವಂತೆ ಇಲ್ಲ. ನಡುವೆ ನಾವು ಊಹಿಸಿಕೊಳ್ಳಬೇಕಾದ ಅನೇಕ ಸಂಗತಿಗಳಿರುತ್ತವೆ. ಎರಡು ಮನಸ್ಸುಗಳು ಸೇರಿದಾಗ ಎಷ್ಟು ಮಾತು, ಎಷ್ಟು ಮಾತಿಲ್ಲದೆ ಅರ್ಥವಾಗುವಂಥವು, ಮಾತುಗಳ ಅರ್ಥಗಳಾದರೂ ಎಷ್ಟು ಬೇರೆ ಬೇರೆ ಕಡೆ ಚಾಚುವಂಥವು- ಇವೆಲ್ಲ ಸಂಭವಗಳೂ ಇರುತ್ತವೆ. ಈ ಎಲ್ಲ ಸಂಭವಗಳ ನಡುವೆ ಸವಾಲು-ಆತಂಕಗಳ ನಡುವೆ ಉಪನಿಷತ್ತುಗಳನ್ನು ಓದುವುದೇ ಒಂದು ಸಂಭ್ರಮವೂ ಅಲ್ಲವೆ !

ಯಮಧರ್ಮನ ಮುಂದೆ ನಿಂತಿದ್ದ ಎಳೆಯ ನಚಿಕೇತ. ಸಾವಿನ ಸಮ್ಮುಖದಲ್ಲಿ ಮನುಷ್ಯ ಜೀವ! ನಮ್ಮ ಬದುಕಿನ ಅಂಗಳಕ್ಕೆ ಯಾವಾಗ ಕಾಲಿಡಬಹುದೆಂದು ಯಾರೂ ಊಹಿಸಲಾಗದ- ಈ ಕಾರಣಕ್ಕೆ “ಅತಿಥಿ’ ಎನ್ನಬಹುದಾದ ಸಾವು ಈಗ, ತಾನೇ ಆತಿಥೇಯನಾಗಿತ್ತು. ಮರ್ತ್ಯಲೋಕದ ಒಂದು ಜೀವ ಸಾವಿನ ಅತಿಥಿಯಾಗಿ ಯಮನ ಮನೆಯಲ್ಲಿ ಸತ್ಕಾರಗೊಳ್ಳುತ್ತಿತ್ತು. ಪಾತ್ರಗಳು ಅದಲು ಬದಲಾಗಿದ್ದವು. ಮತ್ತು ಈ ಕಾರಣಕ್ಕೆ ಸಾವು ಸುಪ್ರಸನ್ನವಾಗಿತ್ತು. ಕೇಳಿದ್ದನ್ನು ನೀಡುವಂತೆ ಉದಾರವಾಗಿತ್ತು.

ನಿಜಕ್ಕೂ ದೊಡ್ಡವರು ಯಾರು ಎಂದು ನಾವು ಗೊತ್ತುಮಾಡಿಕೊಳ್ಳುವುದಕ್ಕೆ ಒಂದು ಸೂಚನೆ ಇದೆ. ಯಾರ ಸಮ್ಮುಖದಲ್ಲಿ ನಮ್ಮ ಮೇಲ್ಪದರದ ಮನಸ್ಸು ಸ್ತಬ್ಧವಾಗಿ ಬಿಡುತ್ತದೆ ಮತ್ತು ಒಳಮನದ ನಿಜ ಪ್ರಕಟವಾಗಲು ಹಾತೊರೆಯುತ್ತದೆ- ಅಂಥವರು ದೊಡ್ಡವರು! ತನ್ನೊಳಗನ್ನು ತೋಡಿಕೊಳ್ಳಲು ಇರುವ ಜಾಗವಿದು ಎಂದು ಒಳಮನಕ್ಕೆ ಸೂಕ್ಷ್ಮವಾಗಿ ಅರಿವಾಗುವುದಕ್ಕೆ ಈ ಸ್ತಬ್ಧತೆಯೇ ಒಂದು ಇಂಗಿತ. ಹೊರಗಿನ ವ್ಯಾವಹಾರಿಕತೆ, ಔಪಚಾರಿಕತೆ, ಬಹಿರ್ಮುಖ ಸ್ಥಿತಿಗತಿ, ಸರಿದುಹೋಗದೆ ಒಳಮನಸ್ಸು ತೋರಿಕೊಳ್ಳುವುದು ಹೇಗೆ? ಆದುದರಿಂದ ಒಳಮನದ ಮಾತು ಪ್ರಕಟಗೊಳ್ಳಲಿ ಎಂದು ಆಶಿಸುವವರೇ ದೊಡ್ಡವರಲ್ಲವೆ. ಹಾಗೆ ಪ್ರಕಟಗೊಳ್ಳುವುದೇ ಅವರು ನೀಡುವ “ವರ’ದಂತೆ! ಈ ಬಗೆಗೆ “ಭಾಗವತ’ದಲ್ಲಿ ಒಂದು ಮಾರ್ಮಿಕವಾದ ವಿವರವಿದೆ.

ಎಳೆಯ ಹುಡುಗ “ಧ್ರುವ’- ದೇವರನ್ನು ಕುರಿತು ತಪಸ್ಸು ಮಾಡಿದನಂತೆ. ಸಂದರ್ಭ ಹೇಗಿತ್ತೆಂದರೆ- ತನ್ನ ತಂದೆಯ ಮಡಿಲಲ್ಲಿ ಕೂರುವೆನೆಂದರೆ ಹುಡುಗನ ಚಿಕ್ಕತಾಯಿ ಸುರುಚಿ ಅವನನ್ನು ಮಡಿಲೇರದಂತೆ ಎಳೆದು ತಡೆದಿದ್ದಳು. ಇದರಿಂದ ಇನ್ನಿಲ್ಲದಂತೆ ಘಾಸಿಗೊಂಡ ಎಳೆಮನಸ್ಸು ದೇವರನ್ನು ನೆನೆಯುತ್ತಿತ್ತು. ಭಗವಂತ ಈ ಎಳೆಯನ ಮುಂದೆ ಪ್ರಕಟಗೊಂಡನಂತೆ. ಈಗ ಇಂಥಾದ್ದೊಂದು ದೊಡ್ಡ ಅನುಭವದ ಮುಂದೆ ಧ್ರುವನ ಮನಸ್ಸು ಸ್ತಬ್ಧವಾಗಿಬಿಟ್ಟಿತ್ತು! ಮತ್ತೆ ಭಗವಂತನ ಸ್ಪರ್ಶದಿಂದಲೇ ಈ ಸ್ತಬ್ಧತೆ ಕಳೆದು ಅವನಿಂದ ಅಪೂರ್ವವಾದ ಸ್ತುತಿಯೊಂದು ಹೊಮ್ಮಿತ್ತು. ಆ ಸ್ತುತಿ ಹೇಳುವುದು ಇಷ್ಟನ್ನೇ : ಸ್ತಬ್ಧಗೊಂಡಿದ್ದ ನನ್ನ ಚಿತ್ತವೃತ್ತಿಗಳನ್ನೆಲ್ಲ ಮರಳಿ ಉಜ್ಜೀವಿಸಿದವನು ನೀನೇ, ನಿನಗೆ ನಮನ ಎಂಬುದನ್ನೇ, ಸ್ತಬ್ಧವಾದದ್ದೂ ನಿನ್ನಿಂದಲೇ ಮರಳಿ ಸಂಜೀವನ ಉಂಟಾದದ್ದೂ ನಿನ್ನಿಂದಲೇ ಎಂಬುದನ್ನೇ. ಪ್ರಸನ್ನನಾದ ಭಗವಂತ ಏನು ಬೇಕು ಮಗೂ- ಎಂದು ಕೇಳಿದನಂತೆ. ಈಗ ಮತ್ತೆ ಹುಡುಗನಿಗೆ ಏನೂ ತೋಚದಾಯಿತು. ಏಕೆಂದರೆ, ಯಾವಾಗ ಮನಸ್ಸು ಒಳಮುಖವಾಗಿ ತನ್ನ ಅನುಭವವನ್ನೇ ಹೇಳತೊಡಗಿತು ಆಗ ಆ ಅನುಭವದ ಸಂಗಾತಿಯಾಗಿಯೇ ಇತ್ತು- ತಂದೆಯ ಮಡಿಲಿನಿಂದ ತನ್ನನ್ನು ಎಳೆದು ತಳ್ಳಿದ ಗಾಯದ ಹಸಿ ನೆನಪು! ಆದರೆ, ಅದನ್ನು ಬಣ್ಣಿಸಲು ಅವನಲ್ಲಿ ಮಾತುಗಳಿರಲಿಲ್ಲ. ಭಗವಂತನಿಗೆ ಮಾತೂ ಬೇಕಿಲ್ಲ. ಹುಡುಗನ ಆಳದ ನೋವು ತಿಳಿದು, ತಿಳಿಯಿತೆಂಬಂತೆ ನಸುನಗು ಸೂಸುತ್ತ, ಧ್ರುವತಾರೆಯ ಉನ್ನತ ಅಧಿಕಾರ ಸ್ಥಾನವನ್ನು- ಯಾರೂ ಎಳೆದು ಹಾಕಲಾಗದ ಎತ್ತರದ ನೆಲೆಯನ್ನು- ಕರುಣಿಸಿದನಂತೆ.

ಕಥೆ ಇಲ್ಲಿಗೇ ಮುಗಿಯುವುದಿಲ್ಲ. ಇದು ಒಳಮನಸ್ಸಿನ ವಿವರಗಳಿರುವ ಕಥೆಯಲ್ಲವೆ ; ಮುಂದಿರುವುದೇ ನಿಜವಾದ ಕಥೆ. ಅದೇನೆಂದರೆ- ನಕ್ಷತ್ರಲೋಕದ, ಬದುಕಿನ ನೌಕೆಗೆ ದಿಕ್ಕು ತೋರಿಸುವ ಉನ್ನತವಾದ ನೆಲೆಯೇ ತನಗೆ ದೊರಕಿದ ಮೇಲೂ ಧ್ರುವನ ಮನಸ್ಸಿನಲ್ಲಿ ಇನ್ನೊಂದು ಸೂಕ್ಷ್ಮವಾದ ನೋವು ಕಾಣಿಸಿಕೊಂಡಿತಂತೆ. ತನಗೆ ದೇವರು ಸುಪ್ರಸನ್ನನಾಗಿದ್ದ. ಏನು ಬೇಡಿದರೂ ಕೊಡುತ್ತಿದ್ದ. ಆದರೂ ತಾನು ಅವನಲ್ಲಿ ಈ ಎಲ್ಲದರಿಂದ ಬಿಡುಗಡೆಯನ್ನು- ಕೊನೆಯ ಪುರುಷಾರ್ಥವನ್ನು ; ಮುಕ್ತಿಯನ್ನು- ಕೇಳಲಿಲ್ಲ. ತನಗೆ ಕೇಳಲಾಗಲಿಲ್ಲ. ಸಾಂಸಾರಿಕವಾದ ಈ ಗಾಯ ತನ್ನಲ್ಲಿ ಹಸಿಯಾಗಿತ್ತು. ಈ ಸಂಸಾರವೇ ಒಂದು ಮಾಯದ ಗಾಯದಂತಿದೆ! ಈ ಒಳಗಿನ ನಿಜ ಅವನಿಗೆ ಮಾತ್ರ ತಿಳಿಯುವುದು. ಅವನು ಅಂತರ್ಯಾಮಿಯಲ್ಲವೆ? ಅದಕೆಂದೇ ಉನ್ನತವಾದ ನೆಲೆಯೊಂದನ್ನು ಕರುಣಿಸಿದ. ಮತ್ತೇಕೆ ನೋವೆಂದರೆ, ಎಲ್ಲದರಿಂದ ಬಿಡುಗಡೆಯ ಸ್ಥಿತಿಗೆ ಹೋಲಿಸಿದರೆ ಕ್ಷುಲ್ಲಕವೆನಿಸುವ ಈ ಸ್ಥಾನವನ್ನು , ದೇವರನ್ನು ಕಂಡೂ ಪಡೆದಂತಾಯಿತಲ್ಲ ಎಂಬ ನೋವು. ಸಂಸಾರದಲ್ಲಿ ಉಂಟಾಗುವ ನೋವು ಒಂದು ಬಗೆ. ಆಧ್ಯಾತ್ಮಿಕವೆನ್ನಬಹುದಾದ ಈ ಪರಿಯ ನೋವು ಇನ್ನೊಂದು ಬಗೆ! ಭಗವಂತನನ್ನು ಕುರಿತು ಆಳವಾದ ತಪಸ್ಸು ಮಾಡಿದ್ದರಿಂದಲೇ ಅದರ ಫ‌ಲವೆಂಬಂತೆ ಈ ಬಗೆಯ ನೋವು ಕಾಣಿಸಿಕೊಳ್ಳುವುದು. ನಮ್ಮ ಒಳಮನಸ್ಸು ಮತ್ತು ಅಂತರ್ಯಾಮಿ ತಣ್ತೀವಾದ ದೇವರ ಮುಖಾಮುಖೀಯಲ್ಲಿ ಒಳಸತ್ಯದ ಬಗೆಬಗೆಯ ಚಹರೆಗಳು ತೋರಿಕೊಳ್ಳುವವು! ಧ್ರುವನ ಮನದಾಳದಲ್ಲಿದ್ದ ಮಾಯದ ಗಾಯವನ್ನು ನೋಡಿ ವಾತ್ಸಲ್ಯದಿಂದಲೇ ನಸುನಕ್ಕ ದೇವರ ನಸುನಗೆಯಂತೆ ಧ್ರುವತಾರೆಯ ತೃಪ್ತ ತೇಜಸ್ಸಿನಲ್ಲಿ ವಿಷಾದದ ಒಂದು ಎಳೆಯೂ ಸೇರಿಕೊಂಡಿದೆ!

ನಚಿಕೇತನ ಮನಸ್ಸಿನಲ್ಲಿ ನೆಲಸಿದ್ದುದು ತನ್ನ ತಂದೆಯ ಚಿತ್ರ. ತನ್ನ ವಿಪರ್ಯಾಸಗಳನ್ನು ತಾನೇ ಅರಿಯಲಾಗದ, ಸ್ವಮಗ್ನಮನಸ್ಸಿನ, ಶಾಸ್ತ್ರಪರಂಪರೆಗಳನ್ನು ತನಗನುಕೂಲವಾಗಿ ಮಾತ್ರ ನೋಡುವ, ಕೋಪಗೊಳ್ಳುವ, ಕೋಪಗೊಂಡದ್ದಕ್ಕಾಗಿ ಮತ್ತೆ ತಾನೇ ವ್ಯಾಕುಲಗೊಳ್ಳುವ, ತಂದೆ ಎಂಬ ಈ ಅಶಾಂತ ವೃದ್ಧನ ಕುರಿತಾದ ಚಿಂತೆ. ಯಮಧರ್ಮ, “”ಮಗೂ ನಿನಗೆ ಬೇಕಾದುದೇನು? ಕೇಳು”- ಎಂದಾಗ ತಂದೆಯ ಈ ಚಿತ್ರ ಒಳಗಿಂದ ಮೇಲೆದ್ದು ಕಾಣಿಸಿತು. ನಚಿಕೇತ ಹೀಗೆ ಕೋರಿಕೊಂಡನಂತೆ: ಶಾಂತಸಂಕಲ್ಪಃ ಸಮನಾಃ ಯಥಾಸ್ಯಾತ್‌ ವೀತಮನ್ಯುಃ… ಕೋಪ ಅಳಿದು ಉಪಶಾಂತನಾದ, ಕೇಡಿನ ಯೋಚನೆಗಳು ಸುಳಿಯದ, ಶುಭ್ರಮನಸ್ಸಿನ ತಂದೆಯನ್ನು ನಾನು ಕಣ್ತುಂಬ ನೋಡಬಯಸುವೆ. ತನ್ನ ತಂದೆ ಹೇಗಿದ್ದರಾಗುತ್ತಿತ್ತು ಎಂದು ಎಚ್ಚೆತ್ತ ಮನಸ್ಸೊಂದು ಬಯಸಬಲ್ಲುದೋ ಅಂಥದೊಂದು ಸುಸಂಸ್ಕೃತ ಚಿತ್ರವಿದು. ಮಗನೆಂದರೆ ತಂದೆಯ ಇನ್ನೊಂದು ಜನ್ಮವೆನ್ನುವುದಾದರೆ ಇಲ್ಲಿ ಮಗನಿಂದ ತಂದೆಯೇ ಪುನರ್ಜನ್ಮವನ್ನು ಪಡೆದಂತಿರುವ ಚಿತ್ರವಿದೆ. ಇದು ಸಂಸಾರದ ಮಹಿಮೆಯೂ ಹೌದು. ಈ ಚಿತ್ರ ಬಿಡಿಸುವುದು ಉಪನಿಷತ್ತಿಗೆ ಇಷ್ಟ. ಅಲ್ಲದೆ ನಚಿಕೇತನ ಮಾತಿನಲ್ಲಿ ತಾನು ಮತ್ತೆ ತನ್ನ ಲೋಕಕ್ಕೆ , ತನ್ನ ಮನೆಯಂಗಳಕ್ಕೆ ಹಿಂದಿರುಗಬೇಕು; ಸಾವಿನ ಬಾಯಿಂದ ಉಗುಚಿ ಬಂದ ತನ್ನನ್ನು ತನ್ನ ತಂದೆ ನೋಡಿ ಬಾಯ್ತುಂಬ ಮಾತನಾಡಿಸಬೇಕು ಎಂಬ ಹಂಬಲ ವ್ಯಕ್ತವಾಗಿದೆ. ತ್ವತ್‌ಪ್ರಸೃಷ್ಟಂ ಮಾ—ಭಿವದೇತ್‌… ಏಕೆಂದರೆ, ಹಾಗಲ್ಲದೆ ತಂದೆಯ ವ್ಯಾಕುಲತೆ ಇಡಿಯಾಗಿ ಅಳಿಯದು.

ಒಳಮನಸ್ಸಿಗೂ ನಮ್ಮ ಶ್ರದ್ಧೆಗೂ ಸಂಬಂಧ, ವಿಪರ್ಯಾಸಗಳನ್ನು ಕಂಡಾಗ “ನನ್ನನ್ನು ಯಾರಿಗೆ ನೀಡುವೆ’ ಎಂದು ಕೇಳಿದ ಶ್ರದ್ಧೆಯೇ ಈಗ ಯಮಧರ್ಮನಲ್ಲಿ ಹೀಗೆ ಕೇಳಿಕೊಳ್ಳುತ್ತಿದೆ. ಪ್ರೀತಿಗೆ ಮಾತ್ರ ಪ್ರಶ್ನಿಸುವ ಹಕ್ಕು! ಪ್ರೀತಿಯೇ ಪ್ರಶ್ನಿಸುವಂತೆಯೂ ಮಾಡುವುದು! ಪ್ರೀತಿ ಎಂಬ ಮಾರ್ದವತೆ ಉಂಟಾಗುವುದು ಶ್ರದ್ಧೆಯ ಬಲದಿಂದ!

ಯಮಧರ್ಮನಿಗೆ, ಮರಣಭೀರುಗಳಾದ ಮನುಷ್ಯರೊಡನೆ ವ್ಯವಹಾರದಲ್ಲಿ ಇವೆಲ್ಲ ವಿರಳವಾಗಿ ಎದುರಾಗುವ ವಿದ್ಯಮಾನಗಳು. ಈ ಜೀವವನ್ನು ಯಮಧರ್ಮ ತನ್ನ ಅತಿಥಿ ಎಂದು ಆದರಿಸಿದ್ದ. ಅತಿಥಿ ಹಿಂದಿರುಗಲೇಬೇಕು! ಅಂದರೆ ತಾನು ಅತಿಥಿಯನ್ನು ಮರಳಿಸಬೇಕು; ಉದ್ದಕ್ಕೆ ಕೆಲ ಹೆಜ್ಜೆ ಜೊತೆಯಾಗಿ ನಡೆದು ವಿದಾಯವನ್ನು ಹೇಳಬೇಕು; ಸಾವಿನಗಡಿ ದಾಟಿಸಬೇಕು. ಹಾಗೆಯೇ ಆಗಲಿ; ಅದೇ ನನಗೂ ಇಷ್ಟವೆಂದ ಯಮಧರ್ಮ. ಮೃತ್ಯುಮುಖಾತ್‌ ಪ್ರಮುಕ್ತಂ ತ್ವಾಂ ದದೃಶಿವಾನ್‌ ಎಂದು. ಸಾಕ್ಷಾತ್‌ ಮೃತ್ಯುವೇ ಹೇಳಿದ ಮಾತಿದು. ಸಾವಿನ ಬಾಯೊಳಹೊಕ್ಕು ಹಿಂತಿರುಗಿದವರುಂಟೆ? ನೀನು ಅಂಥವರಲ್ಲೊಬ್ಬನಾಗುವೆ. ಅಂಥ ನಿನ್ನನ್ನು ನಿನ್ನ ತಂದೆ ನೋಡುವನು! ಆಗ ನಿರಾಳನಾಗುವನು. ನೆಮ್ಮದಿಯಾಗಿ ನಿದ್ರಿಸುವನು. ಆ ನಿರಾಳತೆಗೆ ಹೋಲಿಕೆಯುಂಟೆ? ತಂದೆಯಾದವನ ಒಳಸಂಕಟಗಳೇನೆಂದು ಯಮನಿಗೂ ತಿಳಿದಿರಬೇಕು. ಸಾವಿಗೆ ತಿಳಿಯದ ಬದುಕಿನ ರಹಸ್ಯಗಳುಂಟೆ?

ಸಾವಿನ ಬಳಿಗೆ ಹೋಗುವವರಲ್ಲಿ ತಾನು ಮೊದಲಿಗನೇ, ಎರಡನೆಯವನೇ ಎಂದೆಲ್ಲ ಮೊದಲಿಗೆ ತನ್ನಲ್ಲೇ ಜಿಜ್ಞಾಸೆ ಮಾಡಿದ್ದನು- ನಚಿಕೇತ. ಈಗ ಬದುಕಿನ ಗಡಿದಾಟಿ, ಸಾವಿನ ಅಂಗಳ ಹೊಕ್ಕು, ಆ ಅಪೂರ್ವ ಅನುಭವವನ್ನು ಹೊತ್ತು, ಹಿಂತಿರುಗಿದವರಲ್ಲಿ, ಹುಡುಗನನ್ನು ಹಿಮ್ಮರಳಿಸುವ ಹೊಣೆಯನ್ನು ಸಾವು ತಾನೇ ಹೊತ್ತು, ಹಾಗೆ ಹಿಂತಿರುಗಿ ಬಂದವರಲ್ಲಿ ಮಾತ್ರ ನಚಿಕೇತನೇ ಮೊದಲಿಗನಿರಬೇಕು.

ಮನುಷ್ಯ ಜೀವಿಯ ಪ್ರಜ್ಞೆ ನಿಜಕ್ಕೂ ಎಚ್ಚೆತ್ತುಕೊಳ್ಳಬೇಕಾದರೆ ಇಲ್ಲಿನ- ಈ ಲೋಕದ- ಅನುಭವ ಮಾತ್ರ ಸಾಲದು. ಇಲ್ಲಿನದು ನಾವು ಮೈದುಂಬಿ ಕಾಣಿಸಿಕೊಳ್ಳಬೇಕೆನ್ನುವ ಹಂಬಲದ ಲೋಕ. ಇಲ್ಲಿನ ಈ ಹಂಬಲದ ಅನುಭವವನ್ನು ಹೊತ್ತು, ಆದರೆ ಈ ಲೋಕಕ್ಕಿಂತ ಭಿನ್ನವಾದ ಅಂದರೆ ಪರೋಕ್ಷವಾದ ಒಂದು ಎಚ್ಚರದಲ್ಲಿ ನಮ್ಮನ್ನೇ ಗಮನಿಸುವ ಅನುಭವವುಳ್ಳ ಇನ್ನೊಂದು ಲೋಕ- ಸಾವಿನ ಲೋಕ- ಅದರ ಅನುಭವವೂ ನಾವು ಎಚ್ಚೆತ್ತುಗೊಳ್ಳಬೇಕಾದರೆ ಅಗತ್ಯವಾಗಿದೆ. ಅಷ್ಟೂ ಸಾಲದೆನಿಸುತ್ತದೆ ಉಪನಿಷತ್ತಿಗೆ. ಸಾವಿನ ಲೋಕದಿಂದ ಮತ್ತೆ ಇಲ್ಲಿಗೆ ಮರಳಿ, ಆ ಅನುಭವದ ಬುತ್ತಿಯನ್ನು ಉಣ್ಣುತ್ತ ಇಲ್ಲಿ ಬಾಳಬೇಕಾಗಿದೆ. ಅದು ನಿಜವಾದ ಎಚ್ಚರದ ಬದುಕು. ಎಚ್ಚರ ಎನ್ನುವ ಪದವೇ ಯಾವುದೋ ತಂದ್ರಿಯಿಂದ ಎಚ್ಚರ ಎಂಬರ್ಥವನ್ನು ಸೂಚಿಸುತ್ತದೆ. ಈ ಲೋಕ, ಇದು ಸ್ಥಾಯಿಯಾದದ್ದು , ಇದರಾಚೆಗೆ ಇನ್ನೇನೂ ಇರಲಾರದೆನ್ನುವ ಭಾವವೇ ಒಂದು ಬಗೆಯ ನಿದ್ದೆ ; ತಂದ್ರಿ ಇಲ್ಲಿ ಇದ್ದು , ಇಲ್ಲಿಂದ ತೆರಳಿ ಇನ್ನೊಂದು ಬಗೆಯ ಅನುಭವವನ್ನು ಪಡೆದು, ಆ ಅನುಭವದ ಹಿನ್ನೆಲೆಯಲ್ಲಿ ಮರಳಿ ಇಲ್ಲಿಗೆ ಬಂದು ಬಾಳುವ ಜಂಗಮ-ಚರಂತಿ ಜೀವನವೇ ನಿಜವಾದ ಎಚ್ಚರದ ಜೀವನ ಎನ್ನುತ್ತದೆ ಉಪನಿಷತ್ತು. ಹಾಗೆ ಅಲ್ಲಿಂದ ಮರಳಿದವರನ್ನು ಸ್ವಾಗತಿಸುವುದೂ ಇಲ್ಲಿ ಸುಲಭದ ಮಾತಾಗಿ ಉಳಿದಿಲ್ಲ !

ಕಲೆ : ಎಂ. ಎಸ್‌. ಮೂರ್ತಿ
ಲಕ್ಷ್ಮೀಶ ತೋಳ್ಪಾಡಿ

ಟಾಪ್ ನ್ಯೂಸ್

Jammu-Srinagar National Highway; A taxi rolled into a gorge

Jammu-Srinagar National Highway; ಕಮರಿಗೆ ಉರುಳಿದ ಟ್ಯಾಕ್ಸಿ; ಹತ್ತು ಜನರು ಸಾವು

Son claims Mukhtar Ansari was given ‘slow poison’

Banda; ಗ್ಯಾಂಗ್‌ಸ್ಟರ್‌ ಮುಖ್ತಾರ್ ಅನ್ಸಾರಿಗೆ ವಿಷಪ್ರಾಶನ: ಪುತ್ರನ ಆರೋಪ

5-toll-gate

Toll Gate: ಎ.1ರಿಂದ ಟೋಲ್‌ ದರದಲ್ಲಿ ಹೆಚ್ಚಳ

4-naxal-

Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ

3-blthgdy

Belthangady: ತುಮಕೂರು ತ್ರಿಬ್ಬಲ್ ಮರ್ಡರ್ ಪ್ರಕರಣ;ಮನೆಮಂದಿಗೆ ಇಂದು ತಲುಪಿದ ಮೃತದೇಹ

2-mukthar-ansari

Mukhtar Ansari: ಕುಖ್ಯಾತ ಗ್ಯಾಂಗ್‌ಸ್ಟರ್‌, 5 ಬಾರಿ ಶಾಸಕ ಅನ್ಸಾರಿ ಸಾವು

1-24-friday

Horoscope: ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ, ಮಹಿಳಾ ಉದ್ಯಮಿಗಳಿಗೆ ಯಶಸ್ಸು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

World Theatre Day: ರಂಗದಿಂದಷ್ಟು ದೂರ…

World Theatre Day: ರಂಗದಿಂದಷ್ಟು ದೂರ…

Bhuvaneshwari hegde: ಓದುಗರ ಅಭಿರುಚಿಯ ಮಟ್ಟ ಹೆಚ್ಚಿಸುವ  ಹೊಣೆ ಬರಹಗಾರರ ಮೇಲಿದೆ…

Bhuvaneshwari hegde: ಓದುಗರ ಅಭಿರುಚಿಯ ಮಟ್ಟ ಹೆಚ್ಚಿಸುವ  ಹೊಣೆ ಬರಹಗಾರರ ಮೇಲಿದೆ…

Girish Kasaravalli: ತೆರೆ ಸರಿಯುವ ಮುನ್ನ…!

Girish Kasaravalli: ತೆರೆ ಸರಿಯುವ ಮುನ್ನ…!

Holi celebration: ಹೋಳಿ ಎಂಬ ಬಣ್ಣದೋಕುಳಿ!

Holi celebration: ಹೋಳಿ ಎಂಬ ಬಣ್ಣದೋಕುಳಿ!

13

World Sparrow Day: ಮತ್ತೆ ಮನೆಗೆ ಮರಳಲಿ ಗುಬ್ಬಚ್ಚಿ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Jammu-Srinagar National Highway; A taxi rolled into a gorge

Jammu-Srinagar National Highway; ಕಮರಿಗೆ ಉರುಳಿದ ಟ್ಯಾಕ್ಸಿ; ಹತ್ತು ಜನರು ಸಾವು

7-brijesh

Brijesh Chowta; ಎ.4: ಅಧಿಕೃತ ನಾಮಪತ್ರ ಸಲ್ಲಿಕೆ; ಕ್ಯಾ| ಚೌಟರ ಆಸ್ತಿ ಇಷ್ಟು !

Son claims Mukhtar Ansari was given ‘slow poison’

Banda; ಗ್ಯಾಂಗ್‌ಸ್ಟರ್‌ ಮುಖ್ತಾರ್ ಅನ್ಸಾರಿಗೆ ವಿಷಪ್ರಾಶನ: ಪುತ್ರನ ಆರೋಪ

6-good-friday

Good Friday: ಕ್ರೈಸ್ತರಿಂದ ಕೊನೆಯ ಭೋಜನದ ಸ್ಮರಣೆ

Kannada Cinema: ತೆರೆಗೆ ಬಂತು ಯುವ, ತಾರಿಣಿ

Kannada Cinema: ತೆರೆಗೆ ಬಂತು ಯುವ, ತಾರಿಣಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.