“ತಾಯಿ ಕರುಳಿನ ಗೆಳೆಯ”

ಇಂದು ಸಿದ್ಧಲಿಂಗ ಪಟ್ಟಣಶೆಟ್ಟಿಯವರಿಗೆ ಎಂಬತ್ತರ ಸಂಭ್ರಮ

Team Udayavani, Nov 3, 2019, 4:08 AM IST

ಇವತ್ತು ನನ್ನ ಗೆಳೆಯ ಸಿದ್ಧಲಿಂಗ ಪಟ್ಟಣಶೆಟ್ಟಿಯ 80ರ ಸಂಭ್ರಮ. ನನಗೀಗಾಗಲೇ ಎಂಬತ್ತಾಗಿದೆ. ಪಟ್ಟಣಶೆಟ್ಟಿ ನನಗಿಂತ ನಾಲ್ಕು ತಿಂಗಳಿನಷ್ಟು ಸಣ್ಣವನು. ಈಗ ನೆನಪಾಗಿ ಉಳಿದಿರುವ ಗಿರಡ್ಡಿ ಗೋವಿಂದರಾಜನೂ ನನಗಿಂತ ಕೊಂಚ ಕಿರಿಯನೇ. ನಾವು “ಹೋಗು, ಬಾ’ ಎನ್ನುವಂತೆ ಸಂಭಾಷಿಸುವವರು. ಬಹುವಚನದಲ್ಲಿ ಸಂಬೋಧಿಸಿದರೆ ಅದೇನೋ ಕೃತಕತೆಯಂತೆ ಭಾಸವಾಗುತ್ತದೆ. ಅದೇ ಸಲುಗೆಯಲ್ಲಿ ಪಟ್ಟಣಶೆಟ್ಟಿಗೆ ಶುಭಾಶಯ ಹೇಳುವುದಕ್ಕೆ ಈ ಪುಟ್ಟ ಬರಹ.

ಪಟ್ಟಣಶೆಟ್ಟಿ ಮತ್ತು ನನ್ನ ಒಡನಾಟ 1957ರಷ್ಟು ಹಿಂದಿನದು. ನಾನು, ಪಟ್ಟಣಶೆಟ್ಟಿ , ಗಿರಡ್ಡಿ ಗೋವಿಂದರಾಜ ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಒಟ್ಟಿಗೆ ಓದಿದವರು. ಗಿರಡ್ಡಿ ಮತ್ತು ಪಟ್ಟಣಶೆಟ್ಟಿ ಒಂದೇ ಹರೆಯದವರು. ನಾನು ಒಂದು ವರ್ಷ ಸೀನಿಯರ್‌. ಅದೇ ಕಾಲೇಜಿನಲ್ಲಿ ನಾವು ಅಧ್ಯಾಪಕರಾಗಿ ಸೇರಿಕೊಂಡೆವು. ನಾನು ಇಂಗ್ಲಿಶ್‌ ಅಧ್ಯಾಪಕ, ಪಟ್ಟಣಶೆಟ್ಟಿ ಹಿಂದಿ ಅಧ್ಯಾಪಕ. ನಾವು ಮೂವರಲ್ಲಿಯೂ ಇದ್ದ ಸಾಮಾನ್ಯವಾದ ಅಂಶವೆಂದರೆ ಹತ್ತಿರದ ಹಳ್ಳಿಗಳಿಂದ ಪಟ್ಟಣಕ್ಕೆ ಬಂದವರು. ನಾನು ಕಲಿತದ್ದು-ಕಲಿಸಿದ್ದು ಇಂಗ್ಲಿಷ್‌; ಪಟ್ಟಣಶೆಟ್ಟಿ ಕಲಿತದ್ದು-ಕಲಿಸಿದ್ದು ಹಿಂದಿ. ಆದರೂ ನಮ್ಮನ್ನು ಬೆಸೆದದ್ದು ಕನ್ನಡ.

ಧಾರವಾಡದಲ್ಲಿರುವಾಗ ಪ್ರತಿ ವಾರ ಒಂದೆಡೆ ಸೇರಿ ನಾವು ಬರೆದ ಪದ್ಯಗಳನ್ನು ಓದುತ್ತಿದ್ದೆವು. ಪರಸ್ಪರ ವಿಮರ್ಶೆ ಮಾಡಿಕೊಳ್ಳುತ್ತಿದ್ದೆವು. ವಿ. ಕೃ. ಗೋಕಾಕ್‌ ನಮ್ಮ ಮೇಷ್ಟ್ರು. ಅವರ ಮನೆಯಲ್ಲಿಯೂ ಪ್ರತಿ ಶನಿವಾರ ನಾವೆಲ್ಲ ಸೇರುತ್ತಿದ್ದುದಿತ್ತು. ನಮ್ಮ ಗುಂಪಿಗೆ ಕಮಲಮಂಡಲ ಎಂದೇನೋ ಕರೆಯುತ್ತಿದ್ದೆವು.

ಒಮ್ಮೆ ಪಟ್ಟಣಶೆಟ್ಟಿಯೊಂದಿಗೆ ಮೈಸೂರಿಗೆ ಹೋಗಿದ್ದೆ. ಆಗ ಅಲ್ಲಿ ಪೂರ್ಣಚಂದ್ರ ತೇಜಸ್ವಿ ಮತ್ತು ಬಿ. ಎನ್‌. ಶ್ರೀರಾಮ್‌ ನಡೆಸುತ್ತಿದ್ದ ಲಹರಿ ಪತ್ರಿಕೆ ನಮ್ಮನ್ನು ತುಂಬ ಪ್ರಭಾವಿಸಿತು. ಅದು ಕತೆ, ಕಾವ್ಯಗಳ ವಿಮರ್ಶೆಗೆ ಮೀಸಲಾದ ಪತ್ರಿಕೆ. ನಡುವೆ ಕೆಲವು ಸಮಯ ಪ್ರಕಟವಾಗಿರಲಿಲ್ಲ. ನಮಗದು ತುಂಬ ಸ್ಫೂರ್ತಿಯಾಗಿ 1963ರಲ್ಲಿ ಸಾಹಿತ್ಯ ಪತ್ರಿಕೆಯೊಂದರ ಕನಸು ಕಾಣಲು ಕಾರಣವಾಯಿತು. ಹಾಗೆ, 1964ರ ಆಗಸ್ಟ್‌ 15ರಂದು ಸಂಕ್ರಮಣ ಪತ್ರಿಕೆ ಶುರು ಮಾಡಿದೆವು. ಆಮೇಲೆ ನಮ್ಮ ಜೊತೆಗೆ ಗಿರಡ್ಡಿಯೂ ಸೇರಿಕೊಂಡ.

ಸಂಕ್ರಮಣದ ಮೊದಲ ಸಂಚಿಕೆಗೆ ಪದ್ಯ ಕೇಳುವುದಕ್ಕಾಗಿ ನಾನು ಮತ್ತು ಪಟ್ಟಣಶೆಟ್ಟಿ ಬೇಂದ್ರೆಯವರ ಮನೆಗೆ ಹೋಗಿದ್ದೆವು. ಅವರು ಚೆನ್ನಾಗಿ ಬೈದುಬಿಟ್ಟರು. ನಾವು ಸುಮ್ಮನೆ ಕೇಳಿಸಿಕೊಂಡೆವು. “ನಾನು ಇಷ್ಟೆಲ್ಲ ಪುಸ್ತಕ ಬರೆದಿದ್ದೇನೆ. ಅದನ್ನು ಮೊದಲು ಓದಿ’ ಎಂದರು. ಅದು ಬೇಂದ್ರೆಯವರ ಕ್ರಮ. ಆಮೇಲೆ ಸಂಕ್ರಮಣ ಎಂಬ ಶೀರ್ಷಿಕೆಯ ಪದ್ಯವನ್ನೇ ಬರೆದುಕೊಟ್ಟರು. ಅದು ಸಂಕ್ರಮಣದ ಮೊದಲ ಸಂಚಿಕೆಯಲ್ಲಿ ಪ್ರಕಟವಾಯಿತು.

ನಾನು ಮತ್ತು ಗಿರಡ್ಡಿ ಹೆಚ್ಚಿನ ಓದಿಗಾಗಿ ಇಂಗ್ಲೆಂಡ್‌ಗೆ ಹೋದಾಗ ಪಟ್ಟಣಶೆಟ್ಟಿಯೊಬ್ಬನೇ ಸಂಕ್ರಮಣ ನಿರ್ವಹಣೆಯ ಹೊಣೆವಹಿಸಿ ಸಮಯಕ್ಕೆ ಸರಿಯಾಗಿ ಸಂಚಿಕೆ ಹೊರಬರುವಂತೆ ನೋಡಿಕೊಂಡಿದ್ದ.

ಧಾರವಾಡದಲ್ಲಿ ನಾವು ಅಂತರಂಗ ನಾಟಕ ಕೂಟ ಎಂಬ ಸಂಘಟನೆ ಕಟ್ಟಿಕೊಂಡಿದ್ದೆವು. ಪಟ್ಟಣಶೆಟ್ಟಿಯೂ ನಾನೂ ಕೂಡಿಕೊಂಡು ಹೊಸ ಅಲೆಯ ನಾಟಕಗಳನ್ನು ಬಯಲುಸೀಮೆಯ ಧಾರವಾಡಕ್ಕೆ ತಂದೆವು. ಬಂಗಾಲಿಯಿಂದ ಬಾದಲ್‌ ಸರ್ಕಾರ್‌ ಅವರ ಏವಂ ಇಂದ್ರಜಿತ್‌, ಬಾಕಿ ಇತಿಹಾಸ್‌ ಮುಂತಾದ ನಾಟಕಗಳನ್ನು ಕನ್ನಡಕ್ಕೆ ತಂದೆವು. ಪಟ್ಟಣಶೆಟ್ಟಿ ದಂಪತಿ, ನಾನು, ನನ್ನ ಹೆಂಡತಿ- ನಾಟಕಗಳಲ್ಲಿ ಪಾತ್ರ ವಹಿಸುತ್ತಿದ್ದೆವು. ನಾನು ಬರೆದ ಕೊಡೆಗಳು, ಅಪ್ಪ, ಟಿಂಗರ ಬುಡ್ಡಣ್ಣ, ಗುರ್ತಿನವರು ಮೊದಲಾದ ನಾಟಕಗಳನ್ನು ಮೊದಲಬಾರಿಗೆ ರಂಗಕ್ಕೆ ಏರಿಸುವಲ್ಲಿ ಪಟ್ಟಣಶೆಟ್ಟಿ ಮುತುವರ್ಜಿ ವಹಿಸಿದ್ದ. ಪಟ್ಟಣಶೆಟ್ಟಿ ಬೇರೆ ಬೇರೆ ನಾಟಕಗಳಲ್ಲಿ ಪಾತ್ರ ವಹಿಸುತ್ತಿದ್ದ. ಅವನಾದರೋ ತುಂಬ ಪ್ರತಿಭಾವಂತ ಕಲಾವಿದ. ಭಾವಪೂರ್ಣ ಅಭಿನಯದಲ್ಲಿ ಪರಿಣತ. ನನಗೆ ಅಂಥ ಅಭಿನಯ ಸಾಧ್ಯವಾಗುತ್ತಿರಲಿಲ್ಲ. ನಾನು ನಟನೆಯನ್ನು ಮುಂದುವರಿಸಲಿಲ್ಲ.

ನಟ, ನಾಟಕಕಾರ, ಭಾಷಾಂತರಕಾರ, ಪ್ರಬಂಧಕಾರ, ಕವಿ- ಹೀಗೆ ಪಟ್ಟಣಶೆಟ್ಟಿಯ ಪ್ರತಿಭೆಗೆ ಹಲವು ಮುಖಗಳು. ಪಟ್ಟಣಶೆಟ್ಟಿ ಹಿಂದಿ ಮತ್ತು ಕನ್ನಡ ಭಾಷೆಗಳಲ್ಲಿ ವಿದ್ವತ್ತನ್ನು ಸಂಪಾದಿಸಿದ್ದಾನೆ. ಉತ್ತರಭಾರತದ ಕಡೆಯವರು ಮಾತೃಭಾಷೆ ಮಾತನಾಡುವಂತೆ ಸುಲಲಿತ ಶೈಲಿಯಲ್ಲಿ ಹಿಂದಿಯಲ್ಲಿ ಸಂಭಾಷಿಸುತ್ತಾನೆ. ಹಿಂದಿಯಿಂದ ಅನೇಕ ನಾಟಕಗಳನ್ನು ಕನ್ನಡಕ್ಕೆ ತಂದಿದ್ದಾನೆ.

ಪಟ್ಟಣಶೆಟ್ಟಿಯ ಕಾವ್ಯ ನನಗೆ ತುಂಬ ಇಷ್ಟ. ಅವನ ಕವಿತೆಗಳಲ್ಲಿ ಹೊಸತನವಿರುತ್ತದೆ. ರೊಮ್ಯಾಂಟಿಕ್ಸ್‌ ಬಹಳವಿರುತ್ತದೆ. ಸರಳ ರಗಳೆ ಮತ್ತು ಮುಕ್ತಛಂದದಲ್ಲಿ ಎಷ್ಟು ಚೆನ್ನಾಗಿ ಬರೆಯುತ್ತಾನೆ ! ಎಷ್ಟೊಂದು ಗೇಯಗೀತೆಗಳನ್ನು ಬರೆದಿದ್ದಾನೆ ! ನೀ-ನಾ ಎಂಬುದು ಅವನ ಮೊದಲನೆಯ ಸಂಕಲನ. ಅದೇ ಹೊತ್ತಿಗೆ ನನ್ನ ಬಾನುಲಿ ಎಂಬ ಸಂಕಲನ ಬಂತು. ಪಟ್ಟಣಶೆಟ್ಟಿ ಔರಂಗಜೇಬ ಮತ್ತು ಇತರ ಕವನಗಳು ಬರೆದಾಗ ನಾನು ಮಧ್ಯಬಿಂದು ಪ್ರಕಟಿಸಿದೆ. ಆವಾಗಲೆಲ್ಲ ಪಟ್ಟಣಶೆಟ್ಟಿ ಮತ್ತು ನನ್ನದು ಒಂದು ಬಗೆಯ ಜುಗಲ್‌ಬಂದಿ. ಗಿರಡ್ಡಿ ಗೋವಿಂದರಾಜ ಕವಿಯಾಗಿ ಬರವಣಿಗೆಯ ಕಾಯಕ ಶುರುಮಾಡಿದರೂ ಆ ದಾರಿಯಲ್ಲಿ ಮುಂದುವರಿಯಲಿಲ್ಲ. ವಿಮರ್ಶಕನಾಗಿ ಹೆಸರು ಮಾಡಿದ.

ನಾನು ಮತ್ತು ಪಟ್ಟಣಶೆಟ್ಟಿ ಸಕ್ರಿಯವಾಗಿದ್ದª ಮತ್ತೂಂದು ಕ್ಷೇತ್ರ “ಚಳುವಳಿ’ಯದ್ದು. ಜಯಪ್ರಕಾಶ ನಾರಾಯಣ ಅವರ “ನವನಿರ್ಮಾಣ ಚಳುವಳಿ’ಯಲ್ಲಿ ನಾವಿಬ್ಬರೂ ನೇರವಾಗಿ ಪಾಲ್ಗೊಂಡಿದ್ದೆವು. 1974ರಲ್ಲಿ ಕರ್ನಾಟಕ ಕಲಾವಿದರ ಮತ್ತು ಬರಹಗಾರರ ಒಕ್ಕೂಟ ಆರಂಭವಾಯಿತು. ಮೈಸೂರಿನಲ್ಲಿ ಕುವೆಂಪು ಆ ಸಂಘಟನೆಯನ್ನು ಉದ್ಘಾಟನೆ ಮಾಡಿದರು. ಅದು ಮುಂದೆ, 1979ರಲ್ಲಿ ಬಂಡಾಯ ಸಂಘಟನೆಯಾಗಿ ರೂಪು ಪಡೆಯಿತು. ನಾನು ಗಮನಿಸಿದಂತೆ ಪಟ್ಟಣಶೆಟ್ಟಿ ನಾಟಕ, ಸಾಹಿತ್ಯ, ಪತ್ರಿಕೆ ಮತ್ತು ಚಳುವಳಿ- ಈ ನಾಲ್ಕು ನೆಲೆಗಳಲ್ಲಿ ಸಕ್ರಿಯವಾಗಿರುವ ವ್ಯಕ್ತಿ.

ಪಟ್ಟಣಶೆಟ್ಟಿ ನನಗೆ ತುಂಬ ಹತ್ತಿರದವನು. ಗಿರಡ್ಡಿ ಮತ್ತು ಪಟ್ಟಣಶೆಟ್ಟಿಗೆ ಒಂದು ಸೂಕ್ಷ್ಮ ವ್ಯತ್ಯಾಸವಿದೆ. ಗಿರಡ್ಡಿ ಆತ್ಮೀಯನೇ; ಹಚ್ಚಿಕೊಳ್ಳುವ ಗುಣದವನಲ್ಲ. ಆದರೆ, ಪಟ್ಟಣಶೆಟ್ಟಿ ಬಹಳ ಬೇಗ ಆಪ್ತನಾಗಿ ಬಿಡುತ್ತಾನೆ. ಒಂದು ರೀತಿಯ ಇಮೋಶನಲ್‌ ವ್ಯಕ್ತಿ. ಭಾವುಕ ಜೀವಿ ಎನ್ನುತ್ತಾರಲ್ಲ, ಹಾಗೆ. ಅಣ್ಣ-ತಮ್ಮ ಎಂಬ ರೀತಿಯಲ್ಲಿ ಹಚ್ಚಿಕೊಳ್ಳುತ್ತಾನೆ. ಯಾವ ಕೆಲಸ ಹಿಡಿದರೂ ಬಹಳ ಸೀರಿಯಸ್‌ ಆಗಿ ತಗೊಂಡು ಅದನ್ನು ಮುಗಿಸುವವರೆಗೆ ವಿರಮಿಸದ ಮನುಷ್ಯ.

ಈಗಲೂ ನಾನು ಧಾರವಾಡಕ್ಕೆ ಹೋದರೆ ಅವನ ಮನೆಗೆ ಹೋಗುತ್ತೇನೆ. ಅವನು ಬೆಂಗಳೂರಿಗೆ ಬಂದರೆ ನಮ್ಮ ಮನೆಗೆ ಬರುತ್ತಾನೆ. ನನ್ನ ಆರೋಗ್ಯದ ಬಗ್ಗೆ ಕಾಳಜಿಯಿಂದ ವಿಚಾರಿಸುತ್ತಾನೆ. ನಾನು ಅವನ ಕ್ಷೇಮಸಮಾಚಾರ ಕೇಳುತ್ತೇನೆ.

ಸಿದ್ಧಲಿಂಗ ಪಟ್ಟಣ ಶೆಟ್ಟಿ ನನ್ನ ಪಾಲಿಗೆ “ತಾಯಿ ಕರುಳಿನ ಗೆಳೆಯ’.

ಚಂದ್ರಶೇಖರ ಪಾಟೀಲ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ