ಮ‌ರಿಯಾನೆ ಕಥೆ


Team Udayavani, Jun 10, 2018, 6:00 AM IST

ee-14.jpg

ಜೀವಜಾಲವನ್ನು ಉತ್ಕಟವಾಗಿ ಪ್ರೀತಿಸುವವ‌ರಿದ್ದಾರೆ. ಅವರದ್ದು “ಮಾನವೀಯ’ ಎಂಬುದಕ್ಕಿಂತ ಹೆಚ್ಚಿನ ಔದಾರ್ಯ. ಜೇಮ್ಸ್‌ ಹಾವರ್ಡ್‌ ವಿಲಿಯಮ್ಸ್‌ (1897-1958)  ಎಂಬ ಬ್ರಿಟಿಶ್‌ ಸೈನಿಕ ಆನೆಗಳ ಪಾಲನೆಗೆ ವಿಶೇಷ ಹೆಸರಾಗಿದ್ದವನು. 1920ರಲ್ಲಿ ಬರ್ಮಾದಲ್ಲಿ ಅರಣ್ಯ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದಾಗ ಈತ ಆನೆಗಳೊಂದಿಗೆ ಒಡನಾಡಿದ  ಅನುಭವಗಳು ಆಕರ್ಷಕ ಕಥನವೇ ಸರಿ. ಜಪಾನ್‌ ವಿರುದ್ಧ ಜಾಗತಿಕ ಮಹಾಯುದ್ಧದಲ್ಲಿ ಭಾಗವಹಿಸಬೇಕಾದಾಗ ಆನೆಗಳನ್ನು ಬಳಸಲಾದ ಸಂದರ್ಭಗಳು ಈ ಕಥನದ ಭಾಗಗಳೇ. ವಿಲಿಯಮ್ಸ್‌ ನ ಅನುಭವಗಳ ಕುರಿತು ಅನೇಕ ಕೃತಿಗಳು ಬಂದಿವೆ. ಅದರಲ್ಲಿ “ಬಂಡೂಲ’ ಪ್ರಮುಖವಾದುದು. ಆ ಕೃತಿಯೀಗ ಕನ್ನಡಕ್ಕೆ ಅನುವಾದಗೊಂಡಿದೆ. ಅದರ ಒಂದು ಭಾಗವನ್ನು ಇಲ್ಲಿ ಕೊಡುತ್ತಿದ್ದೇವೆ. ಆನೆಗಳನ್ನು ಖೆಡ್ಡಾಕ್ಕೆ ಬೀಳಿಸಿ, ಜೀವವಿರೋಧಿ ಕ್ರಮದಲ್ಲಿ ಪಳಗಿಸುವ ವಿಧಾನಕ್ಕಿಂತ, “ಆನೆಶಾಲೆ’ಗಳನ್ನು ರೂಪಿಸಿ, “ಮಾನವೀಯ’ ವಾಗಿ ನಡೆಸಿದ ಉದಾಹರಣೆ ಈ ಬರಹದಲ್ಲಿದೆ.    

ವರ್ಷ ಕಳೆದು, ಮುಂದಿನ ನವೆಂಬರ್‌ ತಿಂಗಳು ಆಗಮಿಸಿತ್ತು. ವಿಲಿಯಮ್ಸ್‌ಗೆ ಎರಡು ಒಳ್ಳೆಯ ಸುದ್ದಿಗಳು ಬಂದು ತಲುಪಿದ್ದವು. ಒಂದು, ಆತ ತನ್ನ ಅರ್ಹತಾ ಪರೀಕ್ಷಣಾ ಸಮಯವನ್ನು (Probation Period) ಯಶಸ್ವಿಯಾಗಿ ಪೂರೈಸಿದ್ದು; ಇನ್ನೊಂದು- ಕಾಡಿನಲ್ಲಿ ಆನೆಗಳ ತರಬೇತಿ ಶಾಲೆಯೊಂದನ್ನು ತಾತ್ಕಾಲಿಕವಾಗಿ ಪರೀಕ್ಷಣಾರ್ಥ ತೆರೆಯಲು ಅನುಮತಿ ಸಿಕ್ಕಿದ್ದು ! ಈ ಆದೇಶ ಬಂದಾಗ ಮೇಲಧಿಕಾರಿ ಹಾರ್ಡಿಂಗ್‌ ಇನ್ನೂ ರಜೆಯಲ್ಲೇ ಇದ್ದ. ಆದರೆ, ಆತನ ಪ್ರಯತ್ನಗಳಿಂದಲೇ ಆನೆಗಳ ಪಾಠಶಾಲೆ ಮಂಜೂರಾದದ್ದು ಎಂಬುದನ್ನರಿತಿದ್ದ ವಿಲಿಯಮ್ಸ್‌ ತನ್ನ ಕೃತಜ್ಞತೆಗಳನ್ನು ಅರ್ಪಿಸಬಯಸಿದ್ದ. ಆದರೆ, ಹಾರ್ಡಿಂಗ್‌ನಂತಹ ಸಮರ್ಥ ಮೇಲಧಿಕಾರಿಗೆ ಕೃತಜ್ಞತೆಗಳನ್ನು ಹೇಳುವುದೆಂದರೆ ಅದು ಜಯಶಾಲಿಯಾಗಿ ಸಾಧಿಸಿ ತೋರಿಸುವುದು ಎಂಬುದನ್ನು ಅರಿತಿದ್ದ.

ಆನೆಶಾಲೆಯ ಶಿಕ್ಷಕರನ್ನೆಲ್ಲ ಮೊದಲೇ ಆರಿಸಲಾಗಿತ್ತು. ಮುಖ್ಯ ಮೇಲ್ವಿಚಾರಕನಾಗಿ ಎಲ್ಲರನ್ನೂ ತರಬೇತುಗೊಳಿಸುವ ಜವಾಬ್ದಾರಿ ಪೊಟೊಕೆಯ ಹೆಗಲೇರಿತ್ತು. ಈ ಹು¨ªೆಯಿಂದಾಗಿ ಬಂಡೂಲನನ್ನು ಗಮನಿಸಿಕೊಳ್ಳಲಾಗದ ಪರಿಸ್ಥಿತಿಯುಂಟಾದರೂ ಆತನ ನಂಬಿಕೆಗಳಿಗೆ, ಸಿದ್ಧಾಂತಗಳಿಗೆ ಅಧಿಕೃತವಾಗಿ ಮನ್ನಣೆ ದೊರೆತದ್ದು ನಿಜಕ್ಕೂ ಆತನಿಗೆ ಸಂತೋಷ ತಂದುಕೊಟ್ಟಿತ್ತು.
ಪೊಟೊಕೆಯ ಕೈಕೆಳಗೆ ಶಾಲೆಯ ಮುಖ್ಯಶಿಕ್ಷಕನಾಗಿ ಕಾರ್ಯವೆಸಗಲು ಓರ್ವ ಅದ್ಭುತ ಮನುಷ್ಯನಿದ್ದ. ಆತನ ಹೆಸರು ಯು ಚಿಟ್‌ ಫೋ. ಅಪಾರ ತಾಳ್ಮೆ, ಸಹನೆಯಿದ್ದ ಬರ್ಮನ್‌ ಆತ ಎಂಬುದನ್ನು ವಿಲಿಯಮ್ಸ್‌ ಗಮನಿಸಿದ್ದ. ಪ್ರತಿ ಆನೆಮರಿಗೂ ಇಬ್ಬರು ಸಹಾಯಕರು ಮತ್ತು ಮುಂದೆ ಊಜೀ (ಮಾವುತ) ಯಾಗಲಿಚ್ಛಿಸುವ  ಮೂವರು ಹನ್ನೆರಡರ ಹರೆಯದ ಬಾಲಕರು ನಿಯುಕ್ತಿಗೊಳಿಸಲ್ಪಟ್ಟಿದ್ದರು. ಸಾಮಾನ್ಯವಾಗಿ ಹಳೆಯ ಪದ್ಧತಿಯಲ್ಲಿ ಈ ಬಾಲಕರು ಉಳಿದ ಊಜೀಗಳೊಡನಿದ್ದು ಪ್ರೌಢ ಆನೆಗಳೊಡನೆ ತರಬೇತಿ ಪಡೆಯುತ್ತಿದ್ದರು. ಆದರೀಗ, ಅವರಿಗೆ ತಂತಮ್ಮ ಆನೆಯೊಡನೆಯೇ ಒಟ್ಟಾಗಿ ಬೆಳೆಯುವ ಸದವಕಾಶ ಒಲಿದುಬಂದಿತ್ತು. ಆನೆಮರಿಗಳೂ ಅವುಗಳ ಊಜೀ ಬಾಲಕರೂ ಒಟ್ಟಿಗೇ ತರಬೇತಿ ಪಡೆದು ಪ್ರಾವೀಣ್ಯ ಪಡೆಯಬಹುದಾಗಿತ್ತು.

ಮಾನವ ಮುಖ್ಯಶಿಕ್ಷಕನಂತೆ ಆನೆಗಳಲ್ಲೂ ಓರ್ವ ಮುಖ್ಯಶಿಕ್ಷಕ ಬೇಕಾಗಿತ್ತು – ಬಹಳ ಸಹನೆಯಿರುವ ಒಂದು ಪ್ರೌಢ ಗಜರಾಜ ಪುಟಾಣಿ ಆನೆಗಳನ್ನು ಹದ್ದುಬಸ್ತಿನಲ್ಲಿಡುವ ಕಾರ್ಯಕ್ಕೆ ನೇಮಿಸಲ್ಪಟ್ಟಿತ್ತು. ಅದೊಂದು ನಲ್ವತ್ತೈದರ ಹರೆಯದ ದಂತಗಳಿಲ್ಲದ ದೈತ್ಯ ಸಲಗ. ಆನೆಗಳೂ ಅತ್ಯಂತ ಸಹನಾಮೂರ್ತಿಗಳಾಗಿದ್ದು ಪ್ರೀತಿಯಿಂದ ವ್ಯವಹರಿಸಬಲ್ಲವು ಎಂಬುದಕ್ಕೆ ಅದೇ ಉತ್ತಮ ಉದಾಹರಣೆಯಾಗಿತ್ತು.
ಕಂಪೆನಿಯ ಕಡತಗಳಲ್ಲಿ ದಾಖಲಾಗಿದ್ದ ಪ್ರಕಾರ- ಐದು ವರ್ಷ ವಯಸ್ಸಿನ ಮರಿಗಳಿರುವ ಹೆಣ್ಣಾನೆಗಳನ್ನು ಪತ್ತೆ ಮಾಡಿ ಅವುಗಳ ಮರಿಗಳನ್ನು ವಿದ್ಯಾರ್ಥಿಗಳನ್ನಾಗಿ ಆರಿಸಲಾಗಿತ್ತು. ಪ್ರಾರಂಭದಲ್ಲಿ ಕೇವಲ ಮೂರು ವಿದ್ಯಾರ್ಥಿಗಳನ್ನು ಆಯ್ದುಕೊಂಡು ಕಾಡಿನ ನಡುವೆ ಕ್ಯಾಂಪೊಂದನ್ನು ನಿರ್ಮಿಸಿ ಆನೆಗಳ ಪಾಠಶಾಲೆಯನ್ನು ಆರಂಭಿಸಲಾಯಿತು.

ಗಟ್ಟಿಯಾದ ಮರದ ದಿಮ್ಮಿಗಳನ್ನು ಬಳಸಿ ಕೋಟೆಯೊಂದನ್ನು ಕಟ್ಟಿ ಅದರಲ್ಲಿ ಮೂರು ತ್ರಿಕೋನಾಕೃತಿಯ ಕಟಕಟೆಗಳನ್ನು ನಿರ್ಮಿಸಲಾಯಿತು. ಪ್ರತಿಯೊಂದರ ಒಳಗೂ ಒಂದೊಂದು ಹಠಮಾರಿ ಆನೆಮರಿಯು ಆರಾಮಾಗಿ ಹಿಡಿಸುವಷ್ಟು ಸ್ಥಳಾವಕಾಶವಿತ್ತು. ಆನೆಮರಿಗಳನ್ನು ನಿಯಂತ್ರಿಸಲು ತುಸು ಕ್ರೂರವಿಧಾನ ಎಂದೆನಿಸುವ Crushes (ಮರದ ದಿಮ್ಮಿಗಳನ್ನು ಒಂದೆಡೆ ಅದುಮಿ ಹಿಡಿದು ನಿಯಂತ್ರಿಸುವ ಸಾಧನ) ಬಳಸಿದರೂ ಅದರಿಂದ ಅವುಗಳಿಗೆ ತೊಂದರೆಯಾಗದಂತೆ ನೋಡಿಕೊಂಡಿದ್ದರು. ಅದಕ್ಕಾಗಿ ದೊಡ್ಡದೊಡ್ಡ ಮರದ ದಿಮ್ಮಿಗಳನ್ನು ಬಳಸಿ, ಅವುಗಳ ದೊರಗುದೊರಗಾದ ಹೊರಮೈಯನ್ನು ಕೆತ್ತಿ ತೆಗೆದು ಮೃದುವಾಗಿಸಿ ಅದರ ಮೇಲೆ ಹಂದಿಯ ಕೊಬ್ಬನ್ನು ಸವರಿದ್ದರು. ಅವನ್ನು ಜೋಡಿಸುವ ಮೂಲೆಗಳಲ್ಲಿ ಕಬ್ಬಿಣದ ಮೊಳೆಗಳ ಬದಲಾಗಿ ಮರದ ತುಂಡುಗಳನ್ನೇ ಬಳಸಿದ್ದರು. ಒಟ್ಟಾರೆಯಾಗಿ ಆನೆಮರಿಗಳ ಚರ್ಮಕ್ಕೆ ಯಾವುದೇ ರೀತಿಯ ತೊಂದರೆಯಾಗದಂತೆ ನಿರ್ಮಿಸಿದ್ದರು. ಕ್ಯಾಂಪಿನೊಳಗೆ ಆನೆಮರಿಗಳಿಗೆ ಬೇಕಾದಷ್ಟು ಆಹಾರವನ್ನು ಧಾರಾಳವಾಗಿ ತುಂಬಿರಿಸಿದ್ದರು. ಪ್ರತಿದಿನಕ್ಕೆ ಬೇಕಾದಷ್ಟು ಹಸಿರು ಆಹಾರ ಮತ್ತು ಆನೆಗಳ ಪ್ರೀತಿಪಾತ್ರ ತಿಂಡಿಗಳಾದ ಹುಳಿಮು¨ªೆಗಳು, ಕಬ್ಬು, ಮೂಸಂಬಿ ಹಣ್ಣುಗಳು ಮತ್ತು ಬಾಳೆಹಣ್ಣುಗಳನ್ನು ಧಾರಾಳವಾಗಿ ಇರಿಸಿದ್ದರು.

ಮೊದಲ ತರಗತಿ
ಮೊದಲ ತರಗತಿಯು ಮಾಡಿ ಕಲಿ ವಿಧಾನದ ಮೂಲಕ ಹೇಗೋ ಪ್ರಾರಂಭವಾಯಿತು. ಆದರೂ ಮರಿಯಾನೆಗಳು ಹೇಳಿಕೊಟ್ಟದ್ದನ್ನು ಚೆನ್ನಾಗಿ ಕಲಿತುಕೊಂಡವು. ತರಬೇತಿಯನ್ನು ಪೂರ್ಣಮನಸ್ಸಿನಿಂದ ಸ್ವೀಕರಿಸಿಕೊಂಡು ತಂತಮ್ಮ ಪುಟಾಣಿ ಊಜೀಯೊಡನೆ ಚೆನ್ನಾಗಿ ಹೊಂದಿಕೊಂಡವು. ಭವಿಷ್ಯದಲ್ಲಿ ಕಂಪೆನಿಗೆ ಉತ್ತಮ ಆಸ್ತಿಯಾಗಬಲ್ಲ ಸಾಮರ್ಥ್ಯ ತಮ್ಮಲ್ಲಿದೆಯೆಂದು ತೋರಿಸಿಕೊಟ್ಟವು.
ಕಂಪೆನಿಯ ಮೇಲಧಿಕಾರಿಗಳೂ ಇದನ್ನು ಅರ್ಥಮಾಡಿಕೊಂಡು ತಲೆದೂಗಿದರು. ಪಾಠಶಾಲೆಯನ್ನು ಹೀಗೆಯೇ ಸಣ್ಣಪ್ರಮಾಣದಲ್ಲಿ ಮುಂದುವರಿಸಲು ಅನುಮತಿ ನೀಡಿದರು. ಮುಂದೆ ನಿಧಾನವಾಗಿ ಅದನ್ನು ವಿಸ್ತರಿಸಿ ಆನೆಮರಿಗಳ ತರಬೇತಿಯನ್ನು ಕಂಪೆನಿಯ ಯೋಜನೆಗಳ ಭಾಗವಾಗಿಸುವ ಉದ್ದೇಶವಿತ್ತು. ಶಾಲೆಯು ಚೆನ್ನಾಗಿ ನಡೆದು ಪುಟಾಣಿ ಆನೆಮರಿಗಳು ಅತಿಹೆಚ್ಚಿನ ಸಂಖ್ಯೆಯಲ್ಲಿ ಬಂದು ವಿದ್ಯಾರ್ಥಿಗಳಾಗಿ ಸೇರ್ಪಡೆಗೊಂಡವು. ಒಟ್ಟು 29 ಆನೆಮರಿಗಳು ದಾಖಲುಗೊಂಡು ಪಾಠಶಾಲೆಯು ಬೇಗನೇ ತನ್ನ ಲಯವನ್ನು ಕಂಡುಕೊಂಡಿತು. ದೈನಂದಿನ ತರಬೇತಿ ಕಾರ್ಯಗಳು ಉದ್ದೇಶಿತ ರೂಪದಲ್ಲಿ ನಡೆಯತೊಡಗಿದವು.

ಕಂಪೆನಿಯ ಆ ವಲಯದ ಕ್ಯಾಂಪುಗಳಲ್ಲಿ ಸರಿಸುಮಾರು ಐನೂರು ಆನೆಗಳಿದ್ದವು. ಅವುಗಳ ಮರಿಗಳೇ ಶಾಲೆಯ ವಿದ್ಯಾರ್ಥಿಗಳಾಗಿದ್ದವು. ವಿಲಿಯಮ್ಸ್‌ ಅಷ್ಟೂ ಆನೆಗಳ ಪಟ್ಟಿಯನ್ನು ಸಂಪೂರ್ಣವಾಗಿ ಪರಿಶೀಲಿಸಿ ಎಲ್ಲಾ ಐದು ವರ್ಷ ಪ್ರಾಯದ ಮರಿಯಾನೆಗಳನ್ನು ಆರಿಸಿಕೊಳ್ಳುತ್ತಿದ್ದ. ಅವನ್ನೆಲ್ಲ ನನ್ನ ಕಂದಮ್ಮಗಳು ಎಂದು ಪ್ರೀತಿಯಿಂದ ಕರೆಯುತ್ತಿದ್ದ. ಶಾಲೆಗೆ ದಾಖಲಾತಿಗೊಳ್ಳುವ ತಾರೀಕುಗಳನ್ನೆಲ್ಲ ನ್ಯಾಟ್‌ಗಳಿಗೆ ನಿರ್ಧರಿಸಲು ಬಿಡಲಾಗಿತ್ತು. ಪ್ರತಿ ಸೆಮಿಸ್ಟರಿನ ಉದ್ಘಾಟನೆಯನ್ನು ದೀಪ ಬೆಳಗಿಸುವುದರ ಮೂಲಕ ನಡೆಸಲಾಗುತ್ತಿತ್ತು. ಶಾಲೆಯ ಒಳಗಡೆ ನ್ಯಾಟ್‌ಗಳನ್ನು ಆರಾಧಿಸಲು ಪುಟ್ಟದೊಂದು ಗುಡಿಯನ್ನು ಕಟ್ಟಿದ್ದರು. ಅದರೆದುರು ಯಾವಾಗಲೂ ಹೂವು ಹಣ್ಣುಗಳನ್ನು ನೈವೇದ್ಯವಾಗಿ ಇರಿಸುತ್ತಿದ್ದರು.

ಅನಂತರ ತಾಯಿ ಆನೆಗಳನ್ನೂ ಅವುಗಳ ಮರಿಗಳನ್ನೂ ಕರೆಸಲಾಗುತ್ತಿತ್ತು. ಎಲ್ಲರೂ ಬಂದು ಸೇರಿದಾಗ ದೊಡ್ಡ ಜಾತ್ರೆಯೇ ಆಗಿ ನಿಭಾಯಿಸಲು ತುಸು ಕಷ್ಟಪಡಬೇಕಾಗಿತ್ತು. ಮರಿಗಳೆಲ್ಲ ಪರಸ್ಪರ ಅಪರಿಚಿತರಾಗಿದ್ದರೂ ಒಂದು ಇನ್ನೊಂದರ ಬಾಲವನ್ನು ಎಳೆಯುತ್ತ ಇನ್ನಿಲ್ಲದ ತುಂಟಾಟಗಳನ್ನು ಪ್ರದರ್ಶಿಸುತ್ತ ದಾಂಧಲೆಗೈಯ್ಯುತ್ತಿದ್ದವು. ಅವೆಲ್ಲ ಶಾಂತವಾಗಲು ಏನಿಲ್ಲೆಂದರೂ ಒಂದು ಗಂಟೆ ಹಿಡಿಯುತ್ತಿತ್ತು. ಆಮೇಲೆ ಹಲವು ದಿನಗಳ ಕಾಲ ತಾಯಿ ಆನೆಗಳ ಊಟದ ಸಮಯದಲ್ಲಿ ಮರಿಗಳನ್ನೆಲ್ಲ ಸ್ವತಂತ್ರವಾಗಿ ಓಡಾಡಲು ಬಿಡಲಾಗುತ್ತಿತ್ತು.

ತಾಯಿ ಆನೆಗಳಾದರೋ ಪ್ರೀತಿಯಿಂದಲೇ ಶಿಸ್ತನ್ನು ಕಲಿಸುವಂತಹವುಗಳು. ಒಂದು ಬಾರಿ ವಿಲಿಯಮ್ಸ್‌ ಗಮನಿಸಿದ್ದ, ಓರ್ವ ಪುಟಾಣಿ ಗಂಡಾನೆ ತನ್ನ ಪಾಡಿಗೆ ಮುಂದುವರಿದು ಕಾಲು-ಮೈಲು ದೂರ ಹೋಗಿ ಅಂಡಲೆಯುತ್ತಿತ್ತು. ಕೈಗೆ ಸಿಕ್ಕಿದ ಎಳೆಬಿದಿರುಗಳನ್ನೆಲ್ಲ ಉತ್ಸಾಹದಿಂದ ಭಕ್ಷಿಸುತ್ತಿತ್ತು. ತಾಯಿ ಆನೆ ಅದನ್ನು ಮರಳಿ ಬರುವಂತೆ ಕರೆದಾಗ ಮೆಲ್ಲನೆ ಒಂದು ಕಿವಿಯನ್ನರಳಿಸಿ ಕೇಳಿಸಿಕೊಂಡು, ಒಂದು ಕ್ಷಣ ಜಗಿಯುವುದನ್ನು ನಿಲ್ಲಿಸಿ, ಸೊಂಡಿಲಿನ ತುದಿಯನ್ನೇ ಬಾಯೊಳಗೆ ಹಾಕಿ (ಹೆಬ್ಬೆರಳು ಚೀಪುವಂತೆ) ಚೀಪಿ ಮತ್ತೆ ತಾಯಿಯ ಕರೆಯನ್ನು ನಿರ್ಲಕ್ಷಿಸಿ ಆಹಾರವನ್ನು ಬಾಯಿಗೆ ತುರುಕುವುದನ್ನು ಮುಂದುವರಿಸಿತು. ಹೀಗೆ ತಾಯಿ ಕರೆಯುವುದೂ ಇದು ಅದನ್ನು ನಿರ್ಲಕ್ಷಿಸಿ ಜಗಿಯುವುದೂ ಸುಮಾರು ಇಪ್ಪತ್ತು ನಿಮಿಷಗಳ ಕಾಲ ನಡೆಯಿತು. ಅನಂತರ ತಾಯಿಯ ದನಿ ತುಸು ಗಡಸಾಗಿ ಬದಲಾದಾಗ ಮರಿಯು ಬಾಲವನ್ನೆತ್ತಿಕೊಂಡು ತಾಯಿಯೆಡೆಗೆ ದುಡುದುಡನೆ ಓಡಿ ಬಂತು. ಮರಳಿ ಬಂದ ಕೂಡಲೇ ತಾಯಿಯ ಸೊಂಡಿಲಿನಿಂದ ದೊಪ್ಪನೆ ಎರಡೇಟು ಬಿತ್ತು. ಅದಕ್ಕೆ ಏರಿದ್ದ ಮತ್ತೆಲ್ಲ ಇಳಿದು, ಆ ದಿನವಿಡೀ ತಾಯಿಯ ಹಿಂಗಾಲುಗಳಿಗೆ ಅಂಟಿಕೊಂಡಂತೆಯೇ ಇದ್ದು ಆಕೆಯನ್ನು ಬಿಟ್ಟು ಸ್ವಲ್ಪವೂ ಕದಲಲಿಲ್ಲ.

ಶಾಲೆಯ ಪಾಠಗಳು ಊಜೀ ಬಾಲಕರು ತಂತಮ್ಮ ಆನೆಮರಿಗಳ ಜತೆಗೆ ಸ್ನೇಹ ಬೆಳೆಸುವುದರಿಂದ ಆರಂಭವಾದವು. ಹುಡುಗರೆಲ್ಲ ಮರಿಗಳೊಡನೆ ಮಜಾ ಮಾಡಿಕೊಂಡು ಅವಕ್ಕೆ ತಮ್ಮ ಕೈಯಾರೆ ತಿಂಡಿ ಕೊಡಹತ್ತಿದ್ದರು. ಆಗಾಗ ಹಣ್ಣುಗಳನ್ನೋ ಮುಷ್ಟಿ ಅನ್ನವನ್ನೋ ತಿನ್ನಿಸುತ್ತಾ ಮರಿಗಳ ಸ್ನೇಹ ಸಂಪಾದನೆ ಮಾಡುತ್ತಿದ್ದರು. ನಿಧಾನವಾಗಿ ಒಂದೊಂದಾಗಿ ಮರಿಗಳನ್ನು ತಾಯಂದಿರಿಂದ ದೂರ ಮಾಡುವ ಪ್ರಕ್ರಿಯೆ ಆರಂಭವಾಗಿತ್ತು. ಸಾಧಾರಣವಾಗಿ ತಾಯಿಯಿಂದ ದೂರವಾಗುವುದನ್ನು ಮರಿಗಳು ಅಷ್ಟು ಬೇಗನೆ ಸ್ವೀಕರಿಸುವುದಿಲ್ಲ. ಹತ್ತು-ಹದಿನಾಲ್ಕು ವರ್ಷಗಳಾದ ನಂತರ ಗಂಡುಮರಿಗಳು ತಂತಮ್ಮ ದಾರಿ ನೋಡಿಕೊಳ್ಳುತ್ತವೆಯಷ್ಟೆ. ಅಲ್ಲಿಯತನಕ ಅಮ್ಮನ ಜತೆಗೇ ಓಡಾಡುತ್ತಿರುತ್ತವೆ.

ಮರಿಗಳು ಇಷ್ಟು ಸಣ್ಣ ಪ್ರಾಯದಲ್ಲಿ ತಾಯಿಯಿಂದ ದೂರವಾಗಬೇಕಲ್ಲ ಎಂಬುದು ಆಗಾಗ ವಿಲಿಯಮ್ಸ್‌ನಲ್ಲಿ ಮರುಕ ಹುಟ್ಟಿಸುತ್ತಿತ್ತು. ಆಗೆಲ್ಲ ಆತ ಹಿಂದಿನ ಅತಿಕ್ರೂರ ಪರಿಸ್ಥಿತಿಯನ್ನು ನೆನಪಿಸಿಕೊಂಡು ಸಮಾಧಾನ ತಾಳುತ್ತಿದ್ದ. ಹಿಂದೆ ಕೆಲಸದಲ್ಲಿ ನಿರತವಾಗಿದ್ದ ತಾಯಂದಿರು ಮರಿಗಳ ಕಡೆಗೆ ಗಮನಹರಿಸಲಾಗದೆ ಅವುಗಳು ತಾಯಿಮಮತೆಯಿಂದ ದೂರವಾಗಿ ಆರೋಗ್ಯಕರ ಬೆಳವಣಿಗೆ ಹೊಂದದೆ ಕ್ಷೀಣವಾಗುತ್ತ ಬಂದು ಸಾಯುತ್ತಿದ್ದುದು ವಿಲಿಯಮ್ಸ್‌ಗೆ ಬಹುದುಃಖದ ಸಂಗತಿಯಾಗಿತ್ತು. ಆದರೀಗ ಕಡೇಪಕ್ಷ ಮರಿಗಳು ತಮ್ಮ ತಾಯಂದಿರ ಆಸುಪಾಸಲ್ಲೇ ಇರುತ್ತವಲ್ಲ ಎಂಬುದೇ ಸಮಾಧಾನದ ವಿಚಾರವಾಗಿತ್ತು.

ಆನೆಮರಿಗಳಿಗೆ ಇದನ್ನೆಲ್ಲ ಗಮನಿಸುವ ವ್ಯವಧಾನವಿರುತ್ತಿರಲಿಲ್ಲ. ಅವು ತಮ್ಮ ಪಾಡಿಗೆ ತಾವು ತುಂಟಾಟದಲ್ಲಿ ಮಗ್ನವಾಗಿರುತ್ತಿದ್ದವು. ಕೆಲವು ಸಿಹಿತಿಂಡಿಗಳ ಪ್ರಲೋಭನೆಗೆ ಒಳಗಾಗಿ ಹೇಳಿದಂತೆ ಕೇಳುತ್ತಿದ್ದವು. ಇನ್ನು ಕೆಲವನ್ನು ಮುಖ್ಯಶಿಕ್ಷಕ ಆನೆಯು ಡ್ರಿಲ್‌ ಮಾಡಿಸಿ ಸರಿದಾರಿಗೆ ತರಬೇಕಾಗಿತ್ತು. ಕಾಲುಗಳೆಡೆಗೆ ಹಗ್ಗಕಟ್ಟಿ ಎಳೆದು ತರುವುದೋ ಅಥವಾ ಭುಜವನ್ನು ಎತ್ತಿಹಿಡಿದು ಪೊಲೀಸರೆಲ್ಲ ಕಳ್ಳರನ್ನು ಅದುಮಿ ಹಿಡಿದು ನಡೆಸಿಕೊಂಡು ಹೋಗುವಂತೆಯೋ ಹೇಗೋ ಏನೋ ಮಾಡಿ ತರಬೇತಿ ಕಣದೊಳಕ್ಕೆ ಕರೆತರಬೇಕಾಗುತ್ತಿತ್ತು. ಅಂತಹ ಸಂದರ್ಭಗಳಲ್ಲಿ ಈ ಮರಿಗಳು ಅತ್ತಿತ್ತ ಎಳೆದಾಡಿ ಅಥವಾ ಕೂಗಿಕೂಗಿ ಗಲಭೆಯೆಬ್ಬಿಸಿ ವಿರೋಧ ವ್ಯಕ್ತಪಡಿಸುವುದು ಮಾಮೂಲು. ಆದರೆ ವಿಲಿಯಮ್ಸ್‌ ಗಮನಿಸಿದಂತೆ ಹತ್ತಿರದಲ್ಲೇ ಅವುಗಳ ತಾಯಂದಿರು ಇರುತ್ತಿದ್ದ ಕಾರಣ ಬೇಗನೇ ಈ ಆರ್ಭಟವೆಲ್ಲ ಕಡಿಮೆಯಾಗುತ್ತಿತ್ತು.

ಹೀಗೆ ಮರಿಯನ್ನು ಕರೆತಂದು ಬಂಧನದಲ್ಲಿಟ್ಟ ಕೂಡಲೇ ಹಿಂದಿನಿಂದ ಅದರ ಬಾಗಿಲು ಹಾಕಲಾಗುತ್ತಿತ್ತು. ಅದು ತಕ್ಷಣ ಪ್ರತಿರೋಧಿಸುತ್ತಾ ಅದರಿಂದ ಹೊರಬರಲು ಪ್ರಯತ್ನಿಸುತ್ತಿತ್ತು. ಎಷ್ಟೇ ತಿಣುಕಾಡಿ ಏನೇ ಮಾಡಿದರೂ ಅದರೊಳಗೆ ಮೆತ್ತಿದ ಹಂದಿಕೊಬ್ಬಿನಿಂದಾಗಿ ಅವು ಅಲ್ಲೇ ಜಾರುತ್ತಿದ್ದವಷ್ಟೇ ವಿನಾ ಏನೂ ಗಾಯಗೊಳ್ಳುತ್ತಿರಲಿಲ್ಲ.
ಅನಂತರ ಲಂಚ ರುಷುವತ್ತಿನ ಸರದಿ. ಒಂದಷ್ಟು ಸಿಹಿತಿಂಡಿಗಳನ್ನು ಕೊಟ್ಟು ಸಿಹಿಮಾತುಗಳನ್ನು ಆಡುತ್ತಾ ಊಜೀಗಳು ಮರಿಗಳನ್ನು ಪುಸಲಾಯಿಸುತ್ತಿದ್ದರು. ಆದರೂ ಅವಕ್ಕೆಲ್ಲ ಮಣೆಹಾಕದೆ ಕೆಲ ಮರಿಗಳು ಮತ್ತೂ ತಿಕ್ಕಾಟ ಮುಂದುವರಿಸಿ ಕೊನೆಗೆ ಒಂದು ತುತ್ತು ಆಹಾರ ಸ್ವೀಕರಿಸಲೂ ನಿರಾಕರಿಸುತ್ತಿದ್ದವು. ಅನಂತರ ಸುಮಾರು ಎರಡು ಗಂಟೆಗಳ ಕಾಲ ನಿರಂತರವಾಗಿ ಒ¨ªಾಡುತ್ತಾ ಬೇಲಿಯನ್ನೆಲ್ಲ ಕಾಲಲ್ಲಿ ಒದೆಯುತ್ತಾ ಮುನಿಸಿಕೊಂಡು ಕೊನೆಗೆ ತುಂಬಾ ಬೇಸರ, ಜುಗುಪ್ಸೆಗಳಿಂದ ಮನಸ್ಸು ತಡೆಯಲಾಗದೆ ಎದುರಿಗಿಟ್ಟಿದ್ದ ಬಾಳೆಹಣ್ಣನ್ನು ತೆಗೆದು ತಿಂದುಬಿಡುತ್ತಿದ್ದವು. ವಿಲಿಯಮ್ಸ್‌ಗೆ ಆಗ ಅವುಗಳ ಮುಖದಲ್ಲಿದ್ದ ಭಾವನೆ ಥೇಟ್‌ ಹಠಮಾರಿ ಮಗು ಬೇಕಾದಷ್ಟು ಹಠಮಾಡಿ ಕೊನೆಯಲ್ಲಿ ತನ್ನೆದುರಿಗಿದ್ದ ಚೀಲದಿಂದ ಸಿಹಿತಿಂಡಿಯನ್ನು ಸ್ವೀಕರಿಸಿಬಿಡುವಾಗಿನ ಮುಖಲಕ್ಷಣದಂತೆಯೇ ಕಾಣುತ್ತಿತ್ತು.

ಒಮ್ಮೆ ಆನೆಮರಿಯು ಭಕ್ಷÂಗಳನ್ನೆಲ್ಲ ಸ್ವೀಕರಿಸಲು ಪ್ರಾರಂಭಿಸಿದ ತಕ್ಷಣ ನಿಜವಾದ ತರಬೇತಿ ಆರಂಭವಾಗುತ್ತಿತ್ತು. ಪೊಟೊಕೆ ತಾನು ಬಂಡೂಲನನ್ನು ತರಬೇತುಗೊಳಿಸಿದ ಬಗೆಯನ್ನು ಎಲ್ಲರಿಗೂ ವಿವರಿಸಿ ತೋರಿಸಿಕೊಡುತ್ತಿದ್ದ. ಆಯಾಯ ಆನೆಮರಿಯ ಊಜೀ ಹುಡುಗನನ್ನು – ಮುಂದೆ ನಲ್ವತ್ತು ವರ್ಷಗಳ ಕಾಲ ಆ ಆನೆಯ ಮಾವುತನಾಗಿ ಅದರೊಂದಿಗೆ ಬಾಳ್ವೆ ನಡೆಸಲಿರುವವನನ್ನು – ರಾಟೆ ವಿಧಾನದ ಮೂಲಕ ಮೆಲ್ಲನೆ ಆನೆಯ ಬೆನ್ನಮೇಲೆ ಇಳಿಸಲಾಗುತ್ತಿತ್ತು. ಆನೆಯಂತೂ ಏ ಕೆಳಗಿಳಿಯೋ ನನ್ನ ಬೆನ್ನ ಮೇಲಿಂದ ಎಂದು ಸಿಕ್ಕಾಪಟ್ಟೆ ಪ್ರತಿರೋಧ ತೋರುತ್ತಿತ್ತು. ಹಲವು ಬಾರಿ ಹುಡುಗನನ್ನು ಬೆನ್ನ ಮೇಲೆ ಇಳಿಸುವುದು, ಹಗ್ಗ ಎಳೆದು ಮೇಲಕ್ಕೆತ್ತುವುದು, ಹೀಗೆಯೇ ನಡೆಯುತ್ತಿತ್ತು. ಪ್ರತಿಬಾರಿಯೂ ಆನೆಮರಿ ಆತನನ್ನು ಕೂರಿಸಿಕೊಳ್ಳಲು ಬಿಟ್ಟಾಗ ಹೊಗಳಿಕೆಗಳ ಸುರಿಮಳೆಗೈದು ಒಂದೊಂದು ದೊಡ್ಡ ಬಾಳೆಹಣ್ಣನ್ನು ನೀಡಲಾಗುತ್ತಿತ್ತು.

ಅನಂತರ ಮೃದುವಾದ ವಸ್ತುವಿನಿಂದ ಸುತ್ತಲ್ಪಟ್ಟ ದೊಡ್ಡದೊಂದು ಮರದ ದಿಮ್ಮಿಯನ್ನು ಆನೆಯ ಬೆನ್ನಿನ ಮೇಲೆ ಮೆಲ್ಲನೆ ಇಳಿಸಿ ಹಿಡಿದೊತ್ತಲಾಗುತ್ತಿತ್ತು. ಬರ್ಮನ್ನರೆಲ್ಲ ಹ್ಮಟ್‌… ಹ್ಮಟ್‌… (ಕುಳಿತುಕೊ) ಎಂಬ ಮಂತ್ರ ಜಪಿಸುತ್ತಿದ್ದರು. ಕೊನೆಗೆ ಆನೆಮರಿಯು ಬೆನ್ನ ಮೇಲಿನ ಹೊರೆಯ ಒತ್ತಡ ತಾಳಲಾರದೆ ಮೊದಲು ಹಿಂಗಾಲುಗಳನ್ನು ಮಡಚಿ ಅನಂತರ ಮುಂಗಾಲುಗಳನ್ನೂ ಮಡಚುತ್ತ ಕುಳಿತುಕೊಳ್ಳಲಾರಂ ಭಿಸುತ್ತಿತ್ತು. ಹೀಗೆ ಮಾಡಿದ ತಕ್ಷಣ ಬೊಗಸೆ ತುಂಬಾ ಸಿಹಿತಿಂಡಿಗಳನ್ನು ನೀಡಲಾಗುತ್ತಿತ್ತು. ಮತ್ತೆ ದಿಮ್ಮಿಯನ್ನೆತ್ತಿದಾಗ ಆನೆಮರಿ ಎದ್ದು ನಿಂತುಬಿಡುತ್ತಿತ್ತು. ಆಗ ಎಲ್ಲರೂ ಹತಾಹ್‌… ಹತಾಹ್‌ (ಎದ್ದು ನಿಲ್ಲು) ಎಂದು ನಿರಂತರವಾಗಿ ಹೇಳುತ್ತಿದ್ದರು. ಮತ್ತೆ ಒಂದಷ್ಟು ಸಿಹಿತಿಂಡಿಗಳ ಭಕ್ಷೀಸು ನೀಡಲಾಗುತ್ತಿತ್ತು. ಹೀಗೆಯೇ ಮುಂದುವರಿಸಿ ಸಂಜೆ ಸೂರ್ಯ ಮುಳುಗುವ ಹೊತ್ತಿಗೆ ಅದನ್ನು ತರಬೇತಿಯಿಂದ ಬಿಡುಗಡೆ ಮಾಡಿ ನೂರಾರು ಬಾಳೆಹಣ್ಣುಗಳ ಉಡುಗೊರೆ ನೀಡಲಾಗುತ್ತಿತ್ತು.

ಮೊದಮೊದಲು ಹೀಗೆ ಮರಿಗಳನ್ನು ಬೇರ್ಪಡಿಸಿ ತರಬೇತಿಗೆ ಕೊಂಡೊಯ್ದಾಗ ಅಮ್ಮಂದಿರು ಏನೂ ಪ್ರತಿರೋಧ ಒಡ್ಡುತ್ತಿರಲಿಲ್ಲ. ಆದರೆ ದಿನಗಳು ಕಳೆದಂತೆ ಅವು ತಮ್ಮ ಮರಿಗಳನ್ನು ಆಗಾಗ ಕರೆಯುತ್ತಿರುವುದನ್ನು ವಿಲಿಯಮ್ಸ್‌ ಗಮನಿಸಿದ್ದ. ಆದರೀಗ ಆತ ಆನೆಗಳ ಮಾತುಗಳಲ್ಲಿನ ಧ್ವನಿಯನ್ನು ಗುರುತಿಸಬಲ್ಲವನಾಗಿದ್ದ. ಪ್ರೀತಿಯ ಕರೆ ಮತ್ತು ಭಯದ ಕರೆಯ ನಡುವಿನ ಅಂತರವನ್ನು ನಿಖರವಾಗಿ ಅರ್ಥೈಸಿಕೊಳ್ಳಬಲ್ಲಷ್ಟು ಬೆಳೆದಿದ್ದ. ಆದ್ದರಿಂದ ತಾಯಾನೆಗಳ ಇಂತಹ ಕರೆಗಳಿಂದ ಆತ ಕಂಗೆಡುತ್ತಿರಲಿಲ್ಲ. ಇದು ಕೇವಲ ಆಗಾಗ ಮರಿಯನ್ನು ಸಂಬೋಧಿಸುತ್ತ ಅದು ಸುರಕ್ಷಿತವಾಗಿದೆಯೇ ಇಲ್ಲವೇ ಎಂದು ಗಮನಿಸಿಕೊಳ್ಳುವ ವಾತ್ಸಲ್ಯದ ಕರೆಯಾಗಿತ್ತಷ್ಟೆ. ಆದರೂ ಪುಟಾಣಿ ಮರಿಯು ತಮ್ಮಿಂದ ಅಗಲುವಂತಾದ್ದರಿಂದ ಉಂಟಾದ ಅಸಮಾಧಾನ, ದುಃಖಗಳು ತಾಯಾನೆಗಳಿಗೆ ಯಾವಾಗಲೂ ಇದ್ದವು ಎಂಬುದನ್ನು ವಿಲಿಯಮ್ಸ್‌ ಅರ್ಥಮಾಡಿಕೊಳ್ಳಬಲ್ಲವನಾಗಿದ್ದ. ತಾಯಾನೆ ಮತ್ತು ಅದರ ಮರಿಯ ನಡುವಿನ ಅವಿನಾಭಾವ ಸಂಬಂಧ ಅಪೂರ್ವವಾಗಿತ್ತು. ಮರಿಯು ಬೆಳೆದು ಪ್ರೌಢಾವಸ್ಥೆಗೆ ತಲುಪಿದ ಮೇಲೆಯೂ ಕೂಡಾ ಜೀವನಪೂರ್ತಿ ತಾಯಿ ಮಗುವಿನ ನಡುವಿನ ಬೆಸುಗೆ ಬಹಳ ಗಟ್ಟಿಯಾಗಿರುತ್ತಿತ್ತು. ಕ್ಯಾಂಪುಗಳಲ್ಲಿ ಎಷ್ಟೋ ಸಾರಿ ಬಹಳ ಚಿಕ್ಕಂದಿನಿಂದಲೇ ತಾಯಿಯಿಂದ ಬೇರ್ಪಡಿಸಲ್ಪಟ್ಟ ಮರಿಗಳು ತಾಯಿಯ ಪ್ರೀತಿಯಿಂದ ವಂಚಿತರಾಗಿ ಬೆಳೆಯುತ್ತಿದ್ದವು. ಆದರೆ, ಅವುಗಳು ಎಂದಿಗೂ ತಮ್ಮ ನಡುವಿನ ತಾಯಿ-ಮಗುವಿನ ಬಂಧವನ್ನು ಮರೆಯುತ್ತಿರಲಿಲ್ಲ. ಬಹುಕಾಲದ ನಂತರ ಭೇಟಿಯಾದಾಗಲೂ ಅತ್ಯಂತ ಆನಂದದಿಂದ ಒಬ್ಬರನ್ನೊಬ್ಬರು ಬರಮಾಡಿಕೊಂಡು ಕುಶಲೋಪರಿ ನಡೆಸಿ ಸಂಭ್ರಮಾಚರಣೆ ಮಾಡುತ್ತಿದ್ದವು. ವಿಲಿಯಮ್ಸ್‌ನ ತಂಡದಲ್ಲಿದ್ದ ಒಂದು ಹದಿನೆಂಟರ ಪ್ರಾಯದ ಗಂಡಾನೆ, ಕ್ಯಾಂಪಿನಿಂದ ಕ್ಯಾಂಪಿಗೆ ಸುತ್ತುತ್ತಿರುವಾಗ ಒಮ್ಮೆ ತನ್ನ ತಾಯಿಯನ್ನು ಕಂಡು ಖುಷಿಯಿಂದ ಜಿಗಿದಾಡಿಬಿಟ್ಟಿತ್ತು. ವಿಲಿಯಮ್ಸ್‌ ಬರೆದಿದ್ದಂತೆ ನಾವು ಆ ಕ್ಯಾಂಪನ್ನು ಪ್ರವೇಶಿಸಿದ ಕೂಡಲೇ ಈ ಮರಿಯಾನೆ ತನ್ನ ತಾಯಿಯನ್ನು ಗುರುತಿಸಿ ಅದರ ಬಳಿ ಸಾರಿ, ಈರ್ವರೂ ಪ್ರೀತಿಯಿಂದ ಮಾತನಾಡಿಕೊಂಡು ಪರಸ್ಪರ ವಿಯೋಗದ ದುಃಖವನ್ನೆಲ್ಲಾ ಮರೆಯುವಂತೆ ಸಂಭ್ರಮಪಡುತ್ತಿದ್ದವು.

ಕೆಲಸದ ನಂತರ ಮಧ್ಯಾಹ್ನ ಅವುಗಳನ್ನು ಬಿಡುಗಡೆ ಮಾಡಿದ ತಕ್ಷಣ ಅವು ಎಲ್ಲಿದ್ದರೂ ಪರಸ್ಪರ ಹುಡುಕಿ ಪತ್ತೆಹಚ್ಚಿ ಭೇಟಿಯಾಗುತ್ತಿದ್ದವು. ಸಾಧ್ಯವಿದ್ದಷ್ಟು ದಿನ ಒಟ್ಟಿಗೇ ಕಳೆದು ಪ್ರತಿರಾತ್ರಿ ಆಹಾರ ಹುಡುಕುತ್ತ ಅಲೆದಾಡುವಾಗಲೂ ಅಂಟಿಕೊಂಡಂತೆ ಜತೆಗೇ ಇರುತ್ತಿದ್ದವು.
ಹೀಗೆ ಪ್ರೀತಿವಾತ್ಸಲ್ಯಗಳು ಬರೇ ತಾಯಿ- ಮಗುವಿನ ಜೋಡಿಗೆ ಮಾತ್ರ ಸೀಮಿತವಾಗಿರಲಿಲ್ಲ. ವಿಲಿಯಮ್ಸ್‌ನ ತಂಡದ ಗೆಳತಿಯರಾದ ಮೇತೆÌà ಮತ್ತು ಚಿಟ್‌ಮಾ ಎಂದಾದರೂ ಕೆಲಸದ ಕಾರಣದಿಂದ ದೂರವಾಗಿದ್ದರೂ ಮತ್ತೆ ಭೇಟಿಯಾದಾಗ ಮೊದಲಿನಷ್ಟೇ ಸ್ನೇಹದಿಂದ ವ್ಯವಹರಿಸುತ್ತಿದ್ದವು. ಹೀಗೆ ಗೆಳೆಯ/ಗೆಳತಿಯರೋ, ಬಂಧುಗಳ್ಳೋ ಭೇಟಿಯಾದಾಗಲೆಲ್ಲ ಪರಸ್ಪರ ಶುಭಾಶಯ ಹೇಳುತ್ತಿದ್ದವು. ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತ ಪರಸ್ಪರ ಸ್ಪರ್ಶಿಸುತ್ತಾ ಮಾತನಾಡುತ್ತಿದ್ದವು. ಅವುಗಳು ಯಾವಾಗಲೂ ಮುಂಚಿತವಾಗೇ ಮಾತಾಡಿ ನಿಗದಿಗೊಳಿಸಿದಂತೆ ಮಧ್ಯಾಹ್ನ ಕೆಲಸದಿಂದ ಬಿಡುಗಡೆಯಾದ ಮುಂದಿನ ನಿಮಿಷವೇ ಜತೆಗೂಡಿ ರಾತ್ರಿಪೂರ್ತಿ ಜತೆಯಾಗಿಯೇ ಸುತ್ತಾಡುತ್ತ ಆಹಾರ ಸೇವಿಸುತ್ತ ಕಳೆಯುತ್ತಿದ್ದವು.

ವಿಲಿಯಮ್ಸ್‌ ಗಮನಿಸಿದಂತೆ ಸ್ನೇಹ ಮತ್ತು ಸಂಬಂಧಗಳ ವಿಚಾರದಲ್ಲಿ ಆನೆಗಳು ಹೆಚ್ಚಾಗಿ ಮಾನವರನ್ನು ಹೋಲುತ್ತಿದ್ದವು. ವಿಜ್ಞಾನಿಗಳು ಮುಂದೆ ಈ ವಿಚಾರವನ್ನು ಸಾಕ್ಷಿ ಸಹಿತವಾಗಿ ದೃಢೀಕರಿಸಿದ್ದರು. ಕೆಲವು ಏಷ್ಯಾದ ಆನೆಗಳು ಸಾಮಾಜಿಕವಾಗಿ ಸ್ನೇಹ ಬೆಳೆಸುವುದರಲ್ಲಿ ಬಹಳ ಪರಿಣತಿ ಹೊಂದಿದ್ದು, ಅವಕ್ಕೆ ಐವತ್ತಕ್ಕೂ ಹೆಚ್ಚು ಸ್ನೇಹಿತರಿರುತ್ತಿದ್ದವು. ಉಳಿದವು ಕಡಿಮೆ ಸ್ನೇಹಿತರನ್ನು ಹೊಂದಿದ್ದು, ಅವರೊಳಗೆ ಹೆಚ್ಚು ಗಾಢವಾದ ಗೆಳೆತನವಿರುತ್ತಿತ್ತು. ಆನೆಗಳ ಈ ಸಾಮಾಜಿಕ ಸಂಬಂಧಗಳನ್ನೆಲ್ಲ ವರ್ಗೀಕರಿಸಿದರೆ, ಆಧುನಿಕ ವಿಜ್ಞಾನಿಗಳು ಹೇಳುವ ಪ್ರಕಾರ ಅದು ಆನೆಗಳ ಬುದ್ಧಿಮತ್ತೆ ಅತ್ಯಂತ ಹೆಚ್ಚಿನ ಮಟ್ಟದಲ್ಲಿದೆ ಎಂಬುದನ್ನು ಪುಷ್ಟೀಕರಿಸುತ್ತದೆ.

ಪಾಠಶಾಲೆಯಲ್ಲಿ ತಾಯಿಯಿಂದ ಬೇರಾಗಿ ದುಃಖದಲ್ಲಿದ್ದ ಮರಿಗಳನ್ನು ಬಹಳ ಚೆನ್ನಾಗಿ ನೋಡಿಕೊಳ್ಳಲಾಗುತ್ತಿತ್ತು. ಪ್ರೀತಿಯ ಮಳೆಯನ್ನೇ ಸುರಿಸಿ, ಸಿಹಿತಿಂಡಿಗಳನ್ನೆಲ್ಲ ಕೊಟ್ಟು ಅವನ್ನು ಯಾವಾಗಲೂ ಒಂದÇÉೊಂದು ಕಾರ್ಯದಲ್ಲಿ ಮಗ್ನವಾಗಿರುವಂತೆ ನೋಡಿಕೊಳ್ಳಲಾಗುತ್ತಿತ್ತು. ಕೆಲವೊಮ್ಮೆ ವನವಿಹಾರಕ್ಕೂ ಕರೆದೊಯ್ಯಲಾಗುತ್ತಿತ್ತು. ಆಗೆಲ್ಲ ಮುಖ್ಯಶಿಕ್ಷಕ ಆನೆಯು ಮೂರ್‍ನಾಲ್ಕು ಮರಿಗಳನ್ನು ತನ್ನ ಸುಪರ್ದಿಗೆ ತೆಗೆದುಕೊಂಡು ಮುನ್ನಡೆಸುತ್ತಿತ್ತು. ಅದರ ಬೆನ್ನಿನಿಂದ ಒಂದು ಹಗ್ಗವನ್ನು ಇಳಿಬಿಟ್ಟು ಮರಿಗಳ ಕೊರಳಿಗೆ ಕಟ್ಟಿ ಮೆಲ್ಲನೆ ಎಳೆದುಕೊಂಡು ಮುಂದಕ್ಕೆ ಚಲಿಸುತ್ತಿತ್ತು. ಅಲ್ಲಲ್ಲಿ ನಿಂತು ತುಂಟತನ ಮಾಡುತ್ತ ಮುಂದೆ ಸಾಗಲೊಲ್ಲೆ ಎನ್ನುವ ಮರಿಗಳನ್ನು ಮೆಲ್ಲನೆ ಸೊಂಡಿಲಲ್ಲಿ ದೂಡಿಕೊಂಡೋ ಎಳೆದುಕೊಂಡೋ ಮುಂದುವರಿಯುತ್ತಿತ್ತು. ಒಮ್ಮೆ ಮರಿಗಳಿಗೆ ಮುಖ್ಯಶಿಕ್ಷಕನ ಚರ್ಯೆ ಅರಿವಾದ ನಂತರ ವಿಲಿಯಮ್ಸ್‌ ಗಮನಿಸಿದ ಪ್ರಕಾರ ಮಾನವರ ಮನೆಗಳಲ್ಲಿ ಮಕ್ಕಳನ್ನು ನೋಡಿಕೊಳ್ಳುವ ಆಯಾಳ ಒಂದು ಕಣ್ಣೋಟಕ್ಕೆ ಹೇಗೆ ತುಂಟಮಕ್ಕಳು ಹೆದರಿಕೊಂಡು ಸುಮ್ಮನಿರುತ್ತಾರೋ ಹಾಗೆಯೇ ಇವನ್ನು ನಿಯಂತ್ರಿಸಲು ಮುಖ್ಯಶಿಕ್ಷಕನ ಒಂದು ಕಣ್ಣೋಟವೇ ಸಾಕಾಗುತ್ತಿತ್ತು.

ಪೊಟೊಕೆಯ ಜತೆ ಕುಳಿತು ವಿಲಿಯಮ್ಸ್‌ ಶಾಲೆಯ ಕಾರ್ಯಕ್ರಮಗಳನ್ನು ನಿರ್ಧರಿಸಿ ಒಂದು ಯೋಜನೆಯನ್ನು ಸಿದ್ಧಪಡಿಸಿದ. ಮರಿಗಳು ಸುಮಾರು ಎರಡು ವರ್ಷಗಳ ಕಾಲ ಯಾವ ತರದ ತರಬೇತಿಯನ್ನು ಪಡೆದುಕೊಳ್ಳಬೇಕೆಂದು ನಿರ್ಣಯಿಸಿದ. ತಂತಮ್ಮ ಊಜೀ ಹೇಳಿದಂತೆ ಕೇಳಿ ಆತನ ಆದೇಶಗಳನ್ನು ಪಾಲಿಸುವುದನ್ನು ಕಲಿಯುವುದಕ್ಕೆ ಎರಡು ವರ್ಷಗಳ ತರಬೇತಿ ಮೀಸಲಾಗಿತ್ತು. ಆನೆಯ ಮೇಲೆ ಕುಳಿತ ಊಜೀಯು ತನ್ನ ಪಾದದಿಂದ ಅದರ ಕಿವಿಯ ಮೇಲೆ ಸ್ಪರ್ಶಿಸಿ ಬಲಕ್ಕೆ ತಿರುಗುವಂತೆ ಆದೇಶಿಸುವುದು ಅಥವಾ ತೊಡೆಗಳನ್ನು ಚಲಿಸಿ ಎಡಕ್ಕೆ ತಿರುಗುವಂತೆ ಹೇಳುವುದು- ಹೀಗೆ ಪ್ರಾಥಮಿಕ ಹಂತದ ಆದೇಶಗಳನ್ನು ಮೊದಲು ಹೇಳಿಕೊಡಲಾಗುತ್ತಿತ್ತು. ಮರಿಗಳಿಗೆ ಸುಮಾರು ಎಂಟು ವರ್ಷಗಳಾದ ಮೇಲೆ ಅವನ್ನು ತಿರುಗಾಟದ ಆನೆಗಳೊಂದಿಗೆ ಸಣ್ಣ ಪ್ರಮಾಣದ ಹೊರೆಯನ್ನು ಹೊರಿಸಿ ಕರೆದೊಯ್ಯಲಾಗುತ್ತಿತ್ತು. ಮೊದಮೊದಲು ನೀರು ತುಂಬಿಸಿದ್ದ ಹಳೆ ಸೀಮೆಣ್ಣೆ ಕ್ಯಾನುಗಳನ್ನೋ ಊಜೀಯ ಹಾಸಿಗೆ, ಚಾದರವನ್ನೋ ಅಥವಾ ಪುಟ್ಟ ಕಾಹ್‌ವನ್ನೋ ಅದರ ಬೆನ್ನ ಮೇಲೆ ಹೊರಿಸಲಾಗುತ್ತಿತ್ತು. ಈ ಸಮಯವು ಅವುಗಳ ಪ್ರಾಥಮಿಕ ವಿದ್ಯಾಭ್ಯಾಸವೆಲ್ಲ ಮುಗಿದು ಕಾಲೇಜಿನ ಪದವಿ ತರಗತಿಗಳಿಗೆ ಸೇರಿಕೊಳ್ಳುವ ಸಮಯ. ಸಣ್ಣಸಣ್ಣ ತಿರುಗಾಟಗಳನ್ನು ಮಾಡುತ್ತ ಮುಂದೆ ತೇಗದ ದಿಮ್ಮಿಗಳ ಕೆಲಸಕ್ಕೆ ಅವಶ್ಯವಿರುವ ತಂತ್ರಗಾರಿಕೆಯನ್ನು ಅವಕ್ಕೆ ಕಲಿಸಲಾಗುತ್ತಿತ್ತು. ರಾತ್ರಿಯ ಕ್ಯಾಂಪ್‌ಫೈರ್‌ಗೆ ಬೇಕಾದ ಕಟ್ಟಿಗೆಗಳನ್ನು ತಂದೊಟ್ಟುವುದು ಅಂತಹ ಕೆಲಸಗಳಲ್ಲಿ ಅತಿಸಾಮಾನ್ಯವಾದದ್ದು. ಇವಿಷ್ಟೇ ಅಲ್ಲದೆ ಊಜೀಗಳು ಅವಕ್ಕೆ ಕೆಲಸದ ಉಪಕರಣಗಳ ಪರಿಚಯವನ್ನು ಚೆನ್ನಾಗಿ ಮಾಡಿಕೊಡುತ್ತಿದ್ದರು. ಗರಗಸ, ಕೊಡಲಿ, ಸರಪಳಿಗಳನ್ನು ಅವುಗಳ ಸೊಂಡಿಲಿಗೆ ಕೊಟ್ಟು ಪ್ರತಿ ಉಪಕರಣದ ಹೆಸರನ್ನು ಮನದಟ್ಟು ಮಾಡಿಸುತ್ತಿದ್ದರು.

ಇಷ್ಟೆಲ್ಲಾ ನಡೆಯುವಾಗ ಮರಿಗಳೆಲ್ಲಾ ನಿರಂತರವಾಗಿ ಗಾತ್ರದಲ್ಲೂ ಎತ್ತರದಲ್ಲೂ ದೈತ್ಯವಾಗಿ ಬೆಳೆಯುತ್ತಾ ಹೋಗುತ್ತಿದ್ದವು. ತಿರುಗಾಟದ ವರ್ಷಗಳು ಮುಗಿದು ಮರಳುವ ಹೊತ್ತಿಗೆ ಅವು ಏನಿಲ್ಲೆಂದರೂ ಐದುನೂರು ಪೌಂಡು ತೂಕ ವನ್ನು ಬೆನ್ನಮೇಲೆ ಹೊರುವಷ್ಟು ಶಕ್ತವಾಗುತ್ತಿದ್ದವು. ತೇಗದ ದಿಮ್ಮಿಯ ಕೆಲಸಕ್ಕೆ ಸೂಕ್ತವಾಗುವ ಪದವಿ ಪಡೆಯಲು ತಯಾರಾಗಿರುತ್ತಿದ್ದವು.

ಮೂಲ : ವಿಕಿ ಕಾನ್‌ಸ್ಟಂಟೇನ್‌ ಕ್ರುಕ್‌
ಅನುವಾದ : ರಾಜ್ಯಶ್ರೀ ಕುಳಮರ್ವ

ಟಾಪ್ ನ್ಯೂಸ್

Ram Navami Procession: ರಾಮನವಮಿ ಮೆರವಣಿಗೆ ವೇಳೆ ಘರ್ಷಣೆ: 20ಕ್ಕೂ ಹೆಚ್ಚು ಮಂದಿಗೆ ಗಾಯ

Ram Navami Procession: ರಾಮನವಮಿ ಮೆರವಣಿಗೆ ವೇಳೆ ಘರ್ಷಣೆ: 20ಕ್ಕೂ ಹೆಚ್ಚು ಮಂದಿಗೆ ಗಾಯ

2-shimoga

Bhadravathi: ಲಾರಿ ಡಿಕ್ಕಿ, ರೈಲು ಹಳಿಗಳು ಏರುಪೇರು; ಎರಡೂವರೆ ತಾಸು ಪ್ರಯಾಣಿಕರು ಹೈರಾಣು

1-24-thursday

Daily Horoscope: ಕೊಟ್ಟ ಮಾತಿಗೆ ತಪ್ಪದಂತೆ ಎಚ್ಚರಿಕೆ ಇರಲಿ,ಅನವಶ್ಯ ವಿವಾದಗಳಿಂದ ದೂರವಿರಿ

Elections; ದೇಶದಲ್ಲಿ ಹಂತ 1: ಬಹಿರಂಗ ಪ್ರಚಾರ ಅಂತ್ಯ, ನಾಳೆ ಮತದಾನ

Elections; ದೇಶದಲ್ಲಿ ಹಂತ 1: ಬಹಿರಂಗ ಪ್ರಚಾರ ಅಂತ್ಯ, ನಾಳೆ ಮತದಾನ

1eqqewe

IPL; ಪಂಜಾಬ್‌ ಕಿಂಗ್ಸ್‌-ಮುಂಬೈ ಇಂಡಿಯನ್ಸ್‌ : ಒಂದೇ ದೋಣಿಯ ಪಯಣಿಗರು

Lok Sabha Polls 2024 ಕರ್ನಾಟಕದ ನಂಟು ಹೊರರಾಜ್ಯದಲ್ಲಿ ಸ್ಪರ್ಧೆ

Lok Sabha Polls 2024; ಕರ್ನಾಟಕದ ನಂಟು ಹೊರರಾಜ್ಯದಲ್ಲಿ ಸ್ಪರ್ಧೆ

ಭಾರತದ ಜಿಡಿಪಿ ಶೇ.6.8 ದರದಲ್ಲಿ ಪ್ರಗತಿ: ಐಎಂಎಫ್ ಅಂದಾಜು

ಭಾರತದ ಜಿಡಿಪಿ ಶೇ.6.8 ದರದಲ್ಲಿ ಪ್ರಗತಿ: ಐಎಂಎಫ್ ಅಂದಾಜು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14

ನಾನು ಕೃಪಿ, ಅಶ್ವತ್ಥಾಮನ ತಾಯಿ…

Road Trip: ಎಲ್ಲಿಗೋ ಪಯಣ… ಯಾವುದೋ ದಾರಿ!

Road Trip: ಎಲ್ಲಿಗೋ ಪಯಣ… ಯಾವುದೋ ದಾರಿ!

Holidays: ಹ್ಯಾಪಿ ಹಾಲಿಡೇಸ್‌!

Holidays: ಹ್ಯಾಪಿ ಹಾಲಿಡೇಸ್‌!

5

ಅರಳುವ ಹೂವುಗಳೆ ಆಲಿಸಿರಿ: ಪರ್ಸೆಂಟೇಜಿಗಿಂತ ಬದುಕು ದೊಡ್ಡದು!

Moryar gudda: ಬಂಡೆಗಳ ಮೇಲೆ ಬೆರಗಿನ ಮನೆಗಳು! 

Moryar gudda: ಬಂಡೆಗಳ ಮೇಲೆ ಬೆರಗಿನ ಮನೆಗಳು! 

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Ram Navami Procession: ರಾಮನವಮಿ ಮೆರವಣಿಗೆ ವೇಳೆ ಘರ್ಷಣೆ: 20ಕ್ಕೂ ಹೆಚ್ಚು ಮಂದಿಗೆ ಗಾಯ

Ram Navami Procession: ರಾಮನವಮಿ ಮೆರವಣಿಗೆ ವೇಳೆ ಘರ್ಷಣೆ: 20ಕ್ಕೂ ಹೆಚ್ಚು ಮಂದಿಗೆ ಗಾಯ

2-shimoga

Bhadravathi: ಲಾರಿ ಡಿಕ್ಕಿ, ರೈಲು ಹಳಿಗಳು ಏರುಪೇರು; ಎರಡೂವರೆ ತಾಸು ಪ್ರಯಾಣಿಕರು ಹೈರಾಣು

1-24-thursday

Daily Horoscope: ಕೊಟ್ಟ ಮಾತಿಗೆ ತಪ್ಪದಂತೆ ಎಚ್ಚರಿಕೆ ಇರಲಿ,ಅನವಶ್ಯ ವಿವಾದಗಳಿಂದ ದೂರವಿರಿ

Elections; ದೇಶದಲ್ಲಿ ಹಂತ 1: ಬಹಿರಂಗ ಪ್ರಚಾರ ಅಂತ್ಯ, ನಾಳೆ ಮತದಾನ

Elections; ದೇಶದಲ್ಲಿ ಹಂತ 1: ಬಹಿರಂಗ ಪ್ರಚಾರ ಅಂತ್ಯ, ನಾಳೆ ಮತದಾನ

1eqqewe

IPL; ಪಂಜಾಬ್‌ ಕಿಂಗ್ಸ್‌-ಮುಂಬೈ ಇಂಡಿಯನ್ಸ್‌ : ಒಂದೇ ದೋಣಿಯ ಪಯಣಿಗರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.