ಪ್ರಬಂಧ: ಪ್ರಾಯ, ಅಭಿಪ್ರಾಯ

Team Udayavani, Nov 3, 2019, 4:00 AM IST

ಮೊನ್ನೆ ಡಾಕ್ಟರ್‌ ಹತ್ತಿರ ಮಗಳ ಜೊತೆ ಹೋಗಿದ್ದೆ. ಅಲ್ಲಿ ಹೆಸರು, ವಯಸ್ಸು ಕೇಳಿ ಬರೆದು ಕೊಳ್ಳುತ್ತಿದ್ದ ಡಾಕ್ಟರ್‌ ನಾನು ನನ್ನ ಹೆಸರು ಹೇಳಿ, ವಯಸ್ಸು ಹೇಳುವಷ್ಟರಲ್ಲಿ ಅವರೇ ನನ್ನ ವಯಸ್ಸಿಗಿಂತ ಹತ್ತು ವರ್ಷ ಕಡಿಮೆ ವಯಸ್ಸು ಬರೆದುಕೊಂಡು, “ಸರಿ ಅಲ್ಲವಾ?’ ಅಂತ ಕೇಳಿದಾಗ ನನ್ನ ಮಗಳ ಮುಖ ನೋಡಿದೆ. ತುಂಟತನದಿಂದ ಅವಳು ನನ್ನನ್ನೇ ನೋಡುವಾಗ ನಿಜ ವಯಸ್ಸು ಹೇಳಲಾರದೆ ದೃಷ್ಟಿ ತಪ್ಪಿಸಿದೆ. ಇಂತಹ ಹಲವಾರು ಘಟನೆಗಳು ಪದೇ ಪದೇ ನಡೆಯುತ್ತಿದ್ದವು. ಮೊದಮೊದಲು ವಯಸ್ಸು ಕಡಿಮೆ ಅಂದಾಜು ಮಾಡುವಾಗ ಖುಷಿಯಾಗುತ್ತಿತ್ತು. ಆದರೆ, ಅದು ಮುಜುಗರ, ಇರಿಸುಮುರಿಸು ತರಲು ಶುರುವಾಗತೊಡಗಿತು.

ಕೆಲವು ವರ್ಷಗಳ ಹಿಂದೆ ನಾನು ಕೆಲಸ ಮಾಡುತ್ತಿದ್ದ ಸ್ಥಳದಿಂದ ಪ್ರತಿದಿನ ಶಾಲೆ ಮುಗಿದ ಮೇಲೆ ಎರಡು-ಮೂರು ಶಾಲೆಯವರು ಒಟ್ಟಿಗೆ ಬಸ್ಸಿಗಾಗಿ ಕಾಯುತ್ತಿದ್ದೆವು. ಬಸ್ಸು ಬರುವ ತನಕ ಮಾತುಕತೆ ಆಡುತ್ತ ಸಮಯ ಕಳೆಯುತ್ತಿದ್ದೆವು. ಹಾಗೆ ಮಾತನಾಡುತ್ತ ಇದ್ದಾಗ ಒಂದು ದಿನ ಅಲ್ಲಿಗೆ ಚೆನ್ನಾಗಿ ಡ್ರೆಸ್‌ ಮಾಡಿಕೊಂಡಿದ್ದ ಯುವಕನೊಬ್ಬ ಬಂದ. ಅಲ್ಲಿದ್ದ ಪಕ್ಕದ ಶಾಲೆಯ ಮುಖ್ಯ ಶಿಕ್ಷಕಿಯವರು ನನ್ನೊಬ್ಬಳಿಗೆ ಮಾತ್ರ ಆ ಹುಡುಗನ ಪರಿಚಯ ಮಾಡಿಸಿ, ನನ್ನನ್ನೂ ಆತನಿಗೆ ಪರಿಚಯ ಮಾಡಿಸಿದರು. ಯಾಕೋ ಆ ಯುವಕ ವಿಶೇಷವಾಗಿ ಆಡ್ತಾ ಇದ್ದಾನೆ, ನೋಡ್ತಾ ಇದ್ದಾನೆ ಅಂತ ಅನ್ನಿಸಿತು. “ನನಗ್ಯಾಕೆ ಅದೆಲ್ಲ ’ ಅಂತ ತಲೆಕೆಡಿಸಿಕೊಳ್ಳದೆ ಬಸ್ಸು ಬಂದ ಕೂಡಲೇ ಹೊರಟು ಬಿಟ್ಟೆ. ಮಾರನೆಯ ದಿನ ಸಂಜೆ ಬಸ್ಸಿಗಾಗಿ ಎಲ್ಲರೂ ಕಾಯತ್ತಿದ್ದಾಗ ಪಕ್ಕದ ಶಾಲೆಯ ಮುಖ್ಯ ಶಿಕ್ಷಕಿಯವರು ನನ್ನ ಪಕ್ಕಕ್ಕೆ ಬಂದು, “ನಿನ್ನೆ ಪರಿಚಯ ಮಾಡಿಸಿಕೊಟ್ಟೆನಲ್ಲ , ಅವರ ಬಗ್ಗೆ ನಿಮ್ಮ ಅಭಿಪ್ರಾಯ ಏನು. ಆ ಹುಡುಗ ನಿಮ್ಮನ್ನು ಒಪ್ಪಿಕೊಂಡಿದ್ದಾನೆ. ನೀವು ಒಪ್ಪಿದರೆ ಅವರ ತಂದೆ-ತಾಯಿ ನಿಮ್ಮ ಮನೆಗೆ ಬರುತ್ತಾರೆ’ ಎಂದಾಗ ನನ್ನ ಸಹೋದ್ಯೋಗಿಗಳೆಲ್ಲ ಜೋರಾಗಿ ನಕ್ಕು ಬಿಟ್ಟರು. ಅವರು ನಗುತ್ತಲೇ “ಅವರ ಗಂಡ ಮತ್ತು ಮಗಳು ಒಪ್ಪಿದರೆ ಆಗಬಹುದು ಅನ್ನಿಸುತ್ತದೆ’ ಅಂತ ಹೇಳಿದರು. ಪಾಪ! ಆ ಮೇಡಂ ತಬ್ಬಿಬ್ಟಾಗಿ ಬಿಟ್ಟರು. ಅವರು ಅವರ ಶಾಲೆಗೆ ಬಂದು ಕೆಲವೇ ತಿಂಗಳಾಗಿತ್ತು. ನನಗೆ ಮದುವೆಯಾಗಿರುವ, ಮಗಳಿರುವ ವಿಚಾರ ಪಾಪ ಅವರಿಗೆ ತಿಳಿದಿರಲಿಲ್ಲ.

ಪ್ರತಿದಿನ ಬಸ್ಸಿನಲ್ಲಿ ಓಡಾತ್ತಿರುವುದರಿಂದ ಸಣ್ಣದೊಂದು ಸರಕ್ಕೆ ಮಾಂಗಲ್ಯ ಹಾಕಿಕೊಂಡಿದ್ದೆ. ಅದು ಯಾರಿಗೂ ಕಾಣಿಸುತ್ತಿರಲಿಲ್ಲ. ಅವರು ಮಂಗಳೂರು ಕಡೆಯವರಾದ್ದರಿಂದ ಅಲ್ಲಿ ಮದುವೆಯಾದವರು ಕಡ್ಡಾಯವಾಗಿ ಕರಿಮಣಿಸರ ಹಾಕುವ ಪದ್ಧತಿ ಇರುವುದರಿಂದ ನಾನು ಕರಿಮಣಿಸರ ಹಾಕದೇ ಇದ್ದುದ್ದರಿಂದ, ಜೊತೆಗೆ ವಯಸ್ಸಿನಲ್ಲಿ ಚಿಕ್ಕವವಳಂತೆ ಕಾಣ್ತಾ ಇದ್ದುದ್ದರಿಂದ ಈ ಅವಾಂತರಕ್ಕೆ ಕಾರಣವಾಗಿತ್ತು. ಅದೆಷ್ಟೋ ದಿನಗಳ ತನಕ ನನ್ನ ಸಹೋದ್ಯೋಗಿಗಳಿಗೆ ಈ ಕುರಿತು ನನ್ನನ್ನು ರೇಗಿಸಲು ಒಂದು ವಿಷಯ ಸಿಕ್ಕಿತ್ತು.

ನಮ್ಮ ಶಾಲೆಗೆ ಬರುತ್ತಿದ್ದ ನಮ್ಮ ಮೇಲಧಿಕಾರಿಗಳೊಬ್ಬರು ಪ್ರತಿ ಸಲ ಬಂದಾಗಲೂ, “ಫ್ರೆಶ್‌ ಅಪಾಯಿಂಟ್‌ಮೆಂಟ್‌ ಅಲ್ವಾ?’ ಅಂತ ಕೇಳುತ್ತಿದ್ದರು. ನಾನು, “ಅಲ್ಲ ಸಾರ್‌, ಕೆಲಸಕ್ಕೆ ಸೇರಿ ಹತ್ತು ವರ್ಷಗಳಾಯಿತು’ ಅಂತ ಪ್ರತಿ ಸಾರಿ ಹೇಳುತ್ತಲೇ ಇದ್ದೆ. ಅದು ಅವರು ವರ್ಗವಾಗಿ ಬೇರೆ ಕಡೆ ಹೋಗುವ ತನಕ ಅವರು, “ಫ್ರೆಶ್‌ ಅಪಾಯಿಂಟ್‌ಮೆಂಟ್‌ ಅಲ್ವಾ?’ ಅಂತ ಕೇಳುತ್ತಲೇ ಇದ್ದರು. ನಾನು, “ಅಲ್ಲ’ ಅಂತ ಹೇಳುತ್ತಲೇ ಇದ್ದೆ.

ಮೊದಲಿನಿಂದಲೂ ನನಗೆ ಅಲಂಕಾರದಲ್ಲಿ ವಿಪರೀತ ಆಸಕ್ತಿ ಇಲ್ಲದಿದ್ದರೂ ಅಲಂಕರಿಸಿಕೊಳ್ಳುವುದು ಇಷ್ಟವಾದ ವಿಷಯವೇ. ಹಿತಮಿತವಾಗಿ ಚೆನ್ನಾಗಿ ಅಲಂಕರಿಸಿಕೊಳ್ಳುವ ಕಲೆ ನನಗೆ ಕರಗತವಾಗಿತ್ತು. ಸುಂದರವಾಗಿ ಕಾಣಿಸಿಕೊಳ್ಳಲು ಯಾರಿಗೆ ಇಷ್ಟವಿರುವುದಿಲ್ಲ ಹೇಳಿ! ಆದರೆ, ಅದಕ್ಕಾಗಿ ಎಂದೂ ಬ್ಯೂಟಿಪಾರ್ಲರ್‌ನ ಮೆಟ್ಟಿಲುಗಳನ್ನು ಹತ್ತಿರಲಿಲ್ಲ. ಹಾಗಾಗಿ, ಅಲ್ಲಿ-ಇಲ್ಲಿ ಓದಿ ತಿಳಿದುಕೊಂಡಿದ್ದ, ಮನೆಯಲ್ಲಿಯೇ ಸಿಗುವ ವಸ್ತುಗಳಿಂದ ಫೇಶಿಯಲ್‌ ಮಾಡಿಕೊಂಡು ಅಂದವಾಗಿ ಕಾಣುವ ಪ್ರಯತ್ನ ನಡೆಸಿದ ಪ್ರಭಾವವೋ ಏನೋ, ನಾನು ನನ್ನ ವಯಸ್ಸಿಗಿಂತ ಕಡಿಮೆ ಕಾಣಲು ಕಾರಣವಿರಬಹುದು. ನನ್ನ ವಿರುದ್ಧ ಸ್ವಭಾವ ನನ್ನ ಪತಿರಾಯರದ್ದು. ಜನ್ಮದಲ್ಲಿ ಮುಖಕ್ಕೆ ಅದು-ಇದು ಹಚ್ಚಿಕೊಂಡವರಲ್ಲ. ಚಂದ ಕಾಣಬೇಕೆಂಬ ಬಯಕೆ ಲವಲೇಶವೂ ಇಲ್ಲ. ಅವರು ತೊಡುವ ಬಟ್ಟೆಗಳೂ ಕೂಡ ನನ್ನ ಮತ್ತು ಮಗಳ ಆಯ್ಕೆಯೇ. ಯಾವುದಕ್ಕೂ ತಲೆಕೆಡಿಸಿಕೊಳ್ಳದವರು! ಸರ್ಕಾರಿ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿ¨ªಾಗಲೂ ಪತಿರಾಯರು ಅಂದಚಂದ ಬಟ್ಟೆಬರೆಗೆ ಪ್ರಾಮುಖ್ಯ ಕೊಟ್ಟವರೇ ಅಲ್ಲ. ತೋಟಕ್ಕೆ ಹೋಗಿ ಬಿಟ್ಟರಂತೂ ತೋಟದ ಕೆಲಸಕ್ಕೆ ಸರಿಹೊಂದುವ ಬಟ್ಟೆ ಹಾಕಿಕೊಂಡು ಕೆಲಸದವರು ಯಾರು, ತೋಟದ ಒಡೆಯ ಯಾರು ಅಂತ ಪತ್ತೆ ಹಚ್ಚಲೇ ಆಗದಂತೆ ಇದ್ದು ಬಿಡುತ್ತಿದ್ದರು. ಡ್ರೆಸ್‌ ಸೆನ್ಸ್‌ ಹೆಚ್ಚಾಗಿಯೇ ಇರುವ ನಾನು ಆ ಸೆನ್ಸ್‌ ಅಷ್ಟಾಗಿ ಇರದ ಅವರು, ಒಟ್ಟಿನಲ್ಲಿ ನಮ್ಮಿಬ್ಬರ ಆಸಕ್ತಿ, ಅಭಿರುಚಿ ಉತ್ತರ-ದಕ್ಷಿಣ ಧ್ರುವದಂತಿತ್ತು. ಆದರೆ. ನಮ್ಮ ಅನ್ಯೋನ್ಯ ಕ್ಕೇ ನೂ ಕೊರತೆ ಇರಲಿಲ್ಲ. ಬಿಡಿ.

ಇತ್ತೀಚೆಗೆ, ನನ್ನ ಸ್ನೇಹಿತೆ ಒಬ್ಬರು ಏನೋ ಮಾತನಾಡುತ್ತ, “ಪಾಪ ಮೇಡಂ! ನಿಮಗೂ ನಿಮ್ಮ ಪತಿಯವರಿಗೂ ತುಂಬಾ ವಯಸ್ಸಿನ ಅಂತರ ಅಲ್ವಾ? ನಿಮಗೆ ಬೇಗ ಮದುವೆ ಮಾಡಿಬಿಟ್ಟಿ¨ªಾರೆ ಅನ್ನಿಸುತ್ತದೆ’ ಅಂತ ಹೇಳಿದಾಗ ನನಗೆ ಆ ಪಾಪ ಎಂಬ ಪದ ಕೇಳಿ ತುಂಬಾ ಕೋಪ ಬಂದು ಬಿಟ್ಟಿತು. ತಕ್ಷಣವೇ, “ನಿಮಗ್ಯಾರು ಹೇಳಿದ್ದು , ನನಗೂ ನನ್ನ ಪತಿಗೂ ತುಂಬಾ ವಯಸ್ಸಿನ ಅಂತರ ಇದೆ ಅಂತ. ಎಲ್ಲ ಗಂಡ-ಹೆಂಡತಿಗೂ ಇರಬಹುದಾದಷ್ಟೇ ವಯಸ್ಸಿನ ಅಂತರ ನಮ್ಮಿಬ್ಬರಿಗೂ ಇದೆ’ ಅಂತ ಚೆನ್ನಾಗಿ ದಬಾಯಿಸಿ ಬಿಟ್ಟೆ. ಇದೇನು ಮೊದಲ ಬಾರಿ ಅಲ್ಲ, ಇಂತಹ ಮಾತುಗಳನ್ನು ಕೇಳುತ್ತಿರುವುದು. ನಾನು ನನ್ನ ವಯಸ್ಸಿಗಿಂತ ಚಿಕ್ಕವಳಂತೆ ಕಾಣೋದೇ ಇಂತಹ ಮಾತುಗಳಿಗೆ ಕಾರಣ ಆಗಿಬಿಟ್ಟಿದೆ ಅಂತ ಅನ್ನಿಸೋಕೆ ಶುರುವಾಯಿತು. ನನ್ನ ನಿಜವಾದ ವಯಸ್ಸು ಹೇಳಿದಾಗಲೂ ಅವರು ನಂಬಲೇ ತಯಾರಿರಲಿಲ್ಲ. ಇಂತಹ ಅನುಭವ ಹಿಂದೆ ಕೂಡ ನನಗೆ ಸಾಕಷ್ಟು ಆಗಿತ್ತು. ಹಾಗಾಗಿ, ನನ್ನ ನಿಜವಾದ ವಯಸ್ಸನ್ನು ಹೇಳುವುದನ್ನೇ ಬಿಟ್ಟು ಬಿಟ್ಟಿದ್ದೆ.

ನನಗೆ ಬೇಗ ಸರ್ಕಾರಿ ಕೆಲಸ ಸಿಕ್ಕಿತ್ತು. ಪದವಿಯ ಕೊನೆ ವರ್ಷದಲ್ಲಿದ್ದಾಗಲೇ ಸರ್ಕಾರ ಕರೆದು ಕೆಲಸ ಕೊಟ್ಟಿತ್ತು.ಮುಂದೆ ಓದುವ ಮನಸ್ಸಿದ್ದರೂ ಸಿಕ್ಕ ಕೆಲಸ ಬಿಡಬಾರದೆಂಬ ಸಹಪಾಠಿಗಳ ಉಪದೇಶ ಮತ್ತು ಸ್ವಾವಲಂಬನೆಯ ಆಸೆಯಿಂದ ಕೆಲಸಕ್ಕೆ ಸೇರಿ ಬಿಟ್ಟೆ. ಹಳ್ಳಿಯೊಂದಲ್ಲಿ ಶಿಕ್ಷಕಿಯ ಕೆಲಸ. ನನ್ನನ್ನು ನೋಡಿದ ಆ ಊರಿನ ಜನ ಈ ಚಿಕ್ಕ ಹುಡುಗಿಗೆ ಅದ್ಯಾರು ಕೆಲಸ ಕೊಟ್ಟರೊ ಅಂತ ನಾನು ಅಲ್ಲಿಂದ ವರ್ಗವಾಗಿ ಬರುವ ತನಕ ಹೇಳುತ್ತಲೇ ಇದ್ದರು. ಕೆಲಸ ಸಿಕ್ಕು ಎರಡು ವರ್ಷಕ್ಕೆ ಮದುವೆಯೂ ಆಗಿಬಿಟ್ಟಿತು. ಎಲ್ಲಾ ಗಂಡ-ಹೆಂಡತಿಯರಿಗೆ ಇರುವಷ್ಟೇ ವಯಸ್ಸಿನ ಅಂತರ ನನಗೂ ನನ್ನ ಪತಿಗೂ ಇದ್ದರೂ ಚಿಕ್ಕವಳಂತೆ ಕಾಣುವ ನನ್ನಿಂದಾಗಿ ಚಿಕ್ಕ ಹುಡುಗಿಯನ್ನು ಮದುವೆಯಾಗಿದ್ದಾನೆ ಅಂತ ಕೆಲವರು ಬಾಯಿ ಬಿಟ್ಟೆ ಹೇಳುವಾಗ ಅವರಿಗಿರಲಿ ನನಗೇ ಮುಜುಗರವಾಗುತ್ತಿತ್ತು.

ನನ್ನ ಸಾಹಿತ್ಯ ಗೆಳತಿಯೊಬ್ಬರೊಂದಿಗೆ ಒಮ್ಮೆ ಯಾವುದೋ ಕಾರ್ಯಕ್ರಮಕ್ಕೆ ಹೋಗಿದ್ದಾಗ ಅಲ್ಲಿದ್ದವರು ಕುಶಲೋಪರಿ ಮಾತನಾಡುತ್ತಾ, “ಮೇಡಂ ನಿಮ್ಮ ಮಕ್ಕಳು ಯಾವ ಶಾಲೆಯಲ್ಲಿ ಓದುತ್ತಾ ಇದ್ದಾರೆ’ ಅಂತ ಕೇಳಿದಾಗ “ನನಗೆ ಒಬ್ಬಳೇ ಮಗಳು, ಕಾಲೇಜು ಓದ್ತಾ ಇದ್ದಾಳೆ’ ಅಂದೆ. “ಹೌದಾ ಮೇಡಂ, ನಾನೇನೂ ಪ್ರೀಕೆಜಿ ಓದ್ತಾ ಇರಬೇಕು ಅಂದುಕೊಂಡಿದ್ದೆ’ ಅಂತ ಹೇಳಿ ನನ್ನ ಗೆಳೆತಿಯತ್ತ ತಿರುಗಿ “ನಿಮ್ಮ ಮಕ್ಕಳೂ ಕೂಡಾ ಕಾಲೇಜು ಅಲ್ವಾ’ ಅಂತ ಕೇಳಿ ಬಿಟ್ಟರು. ಅವರು ತಕ್ಷಣವೇ “ಇಲ್ಲ , ಇಲ್ಲ ನನ್ನ ಮಗಳು ಪ್ರೀಕೆಜಿ’ ಅಂತ ಹೇಳಿದರು. ಕಾರ್ಯಕ್ರಮ ಮುಗಿಸಿ ಬರುವಾಗ “ನೋಡಿ ಮೇಡಂ, ನಿಮಗೆ ಪ್ರೀಕೆಜಿ ಮಗಳಿದ್ದಾಳೆ ಅಂತ ಧಾರಾಳವಾಗಿ ಹೇಳಬಹುದು, ನನ್ನ ನೋಡಿದ್ರೆ ನಿಮ್ಮ ಮಕ್ಕಳು ಡಿಗ್ರಿ ಓದ್ತಾ ಇದ್ದಾರಾ ಅಂತ ಎಲ್ಲರೂ ಕೇಳ್ತಾರೆ’ ಅಂತ ಬೇಸರ ಮಾಡಿಕೊಳ್ಳುತ್ತಿದ್ದರು.

ನಾನು ಮಗಳನ್ನು ಕಾರ್ಯಕ್ರಮಕ್ಕೊ, ಮತ್ತೆಲ್ಲಿಗೋ ಜೊತೆಯಲ್ಲಿ ಕರೆದುಕೊಂಡು ಹೋದಾಗ ಗೊತ್ತಿಲ್ಲದ ಕೆಲವರು, “ನಿಮ್ಮ ತಂಗಿಯಾ’ ಅಂತ ಕೇಳಿದರೆ, ಮತ್ತೆ ಕೆಲವರು, “ನಿಮ್ಮ ಸಹೋದ್ಯೋಗಿಯೇ’ ಅಂತ ಕೇಳಿ ಮುಜುಗರ ಉಂಟು ಮಾಡಿಬಿಡುತ್ತಿದ್ದರು. ಆಗಂತೂ ಮಗಳು ಮುನಿಸಿನಿಂದ “ನಿನ್ನ ಜೊತೆ ನಾನು ಬರುವುದೇ ಇಲ್ಲ’ ಅಂತ ಸಿಡಿಮಿಡಿಗೊಳ್ಳುತ್ತಿದ್ದಳು. ಮಗಳು ಕೂಡ ಅಪ್ಪನಂತೆ ಅಲಂಕಾರ ಮಾಡಿಕೊಳ್ಳುವುದರಲ್ಲಿ ನಿರಾಸಕ್ತೆ. ಬೇಗ ಮದುವೆಯಾಗಿ ಮೊಮ್ಮಗುವನ್ನು ಕೊಟ್ಟಿದ್ದರೆ ಅದು ಅಜ್ಜಿ ಅಂತ ಕರೆಯುವಾಗ ನನಗೆ ಅಜ್ಜಿಯಾಗುವಷ್ಟು ವಯಸ್ಸಾಗಿದೆ ಅಂತಲಾದರೂ ಗೊತ್ತಾಗುತ್ತಿತ್ತು. ಮಹಾತಾಯಿ ಮದುವೆಗೆ ಮನಸ್ಸೇ ಮಾಡುತ್ತಿಲ್ಲ. ಆ ಚಿಂತೆಯಲ್ಲಿ ನನಗೆ ಈಗೀಗ ಕೂದಲು ಬೆಳ್ಳಗಾಗಿ ಮುಖದಲ್ಲಿ ನೆರಿಗೆ ಕಾಣಬಹುದು ಅಂತ ಕಾಯುತ್ತಿದ್ದೇನೆ. ಮಗಳು ಕೂಡಾ “ನಿನಗೆ ಯಾವ ಚಿಂತೆಯೂ ಇಲ್ಲವಲ್ಲ ಅದಕ್ಕೆ ನನ್ನ ಅಕ್ಕನಂತೆ ಕಾಣುತ್ತಿದ್ದಿಯಾ, ಇನ್ನೂ ಸ್ವಲ್ಪ ದಿನ ನಾನು ಮದುವೆನೇ ಆಗಲ್ಲ. ಆಗಲಾದರೂ ವಯಸ್ಸಾದವಳಂತೆ ಕಾಣಿಸುತ್ತಿಯಾ’ ಅಂತ ಛೇಡಿಸುತ್ತಿರುತ್ತಾಳೆ. ಹಾಗಾಗಿ ಇತ್ತೀಚೆಗೆ ನಾನು ನನ್ನ ವಯಸ್ಸಿಗಿಂತ ಚಿಕ್ಕವಳಂತೆ ಕಾಣದೆ ನನ್ನ ವಯಸ್ಸಿಗೆ ತಕ್ಕಂತೆ ಕಾಣಬೇಕು ಅಂತ ತೀರ್ಮಾನ ಮಾಡಿಕೊಂಡಿದ್ದೇನೆ.

ಶೈಲಜಾ ಹಾಸನ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಕನ್ನಡದ ಪ್ರಸಿದ್ಧ ಕತೆಗಾರ ಕೆ. ಸದಾಶಿವರು "ನಲ್ಲಿಯಲ್ಲಿ ನೀರು ಬಂದಿತು' ಎಂಬ ಕತೆ ಬರೆದಿದ್ದರು. "ಹಳ್ಳಿ ಮಾರ್ಗದಲ್ಲಿ ಬಸ್ಸು ಬಂದಿತು' ಎಂಬ ಶೀರ್ಷಿಕೆಯಲ್ಲೇನಾದರೂ...

  • ಯಾಂತ್ರಿಕ ಜೀವನ', "ಕಾಂಕ್ರೀಟ್‌ ಕಾಡು' ಎಂಬ ಹುರುಳಿಲ್ಲದ ಅಪವಾದಗಳನ್ನು ಹೊತ್ತಿರುವ ಮುಂಬಯಿಯಲ್ಲಿ ಪಾರ್ಕುಗಳಿಗೇನೂ ಕೊರತೆ ಯಿಲ್ಲ. ನಮ್ಮ ಬಾಂದ್ರಾ ಪರಿಸರದಲ್ಲೇ-...

  • Trying to use words, and every attempt Is a wholly new start, and a different kind of failure ಕತೆ ಬರೆಯುವ ಪ್ರತಿಯೊಬ್ಬನಿಗೂ ಇದು ಗೊತ್ತಿರುತ್ತದೆ, ಆದರೆ ಟಿ. ಎಸ್‌. ಎಲಿಯಟ್‌ಗಿಂತ ಹೆಚ್ಚು ಯಾರಿಗೆ ತಾನೆ ಗೊತ್ತಿರುತ್ತದೆ?...

  • ರಬ್ಬಿಲ್‌ ಅವ್ವಲ್‌ ತಿಂಗಳ ಹದಿನಾಲ್ಕನೇ ತಿಯದಿ ಪೂರ್ಣ ಚಂದ್ರನ ಇರುಳು ಪ್ರಯಾಣಿಕರ ಸಣ್ಣ ಹಡಗೊಂದರಲ್ಲಿ ದ್ವೀಪಕ್ಕೆ ವಾಪಸು ಹೊರಟಿದ್ದೆ. ಎಲ್ಲಿಂದ ಎಂದು ದಯವಿಟ್ಟು...

  • ಎಂಎ ಓದುತ್ತಿರುವಾಗ ಸಾಹಿತಿ ಅರುಣ್‌ ಕೊಲಾಟ್ಕರ್‌ ಅವರ ಕವಿತೆಗಳನ್ನು ಓದಿದ್ದೆ. ಜೆಜುರಿ ಅನ್ನುವ ಕವಿತಾಸಂಕಲನ ಬಹಳ ಪ್ರಸಿದ್ಧ. ಮಾರ್ಮಿಕವಾಗಿ ಬರೆಯುವ, ಮರಾಠಿ...

ಹೊಸ ಸೇರ್ಪಡೆ