ಪ್ರಬಂಧ: ಮತ ಗಟ್ಟೆಯಲ್ಲಿ ಸೆಲ್ಫಿ

Team Udayavani, Sep 9, 2018, 6:00 AM IST

ಈ ಬಾರಿಯ ವಿಧಾನಸಭಾ ಚುನಾವಣೆ ವೇಳೆ ಚುನಾವಣಾ ಸಿಬ್ಬಂದಿಯನ್ನು ಇಲೆಕ್ಟ್ರಾನಿಕ್‌ ಓಟಿಂಗ್‌ ಮೆಶಿನ್‌ನಷ್ಟೇ ಕಾಡಿದ ಮತ್ತೂಂದು ಯಂತ್ರವೆಂದರೆ ಅದು ಮೊಬೈಲ್‌! ಮೊಬೈಲ್‌ಗ‌ೂ ಚುನಾವಣೆಗೂ ಏನು ಸಂಬಂಧ ಅಂತ ಇನ್ನು ಮುಂದೆ ಯಾರೂ ಕೇಳಲಾಗದ ರೀತಿಯಲ್ಲಿ ಅದರ ಕಬಂಧಬಾಹುಗಳು ಚುನಾವಣಾ ಪ್ರಕ್ರಿಯೆಯ ಮೇಲೆ ಚಾಚಿಕೊಳ್ಳಲಾರಂಭಿಸಿವೆ. ಏಕಕಾಲಕ್ಕೆ ಚುನಾವಣಾ ಸಿಬ್ಬಂದಿಯ ಕೆಲಸ ಸುಲಭಗೊಳಿಸಿದ ಹಿರಿಮೆಯೂ, ಅವರನ್ನು ಪೇಚಿಗೆ ಸಿಲುಕಿಸಿದ ಹಿಡಿಶಾಪವೂ ಮೊಬೈಲಿಗೇ ಸಲ್ಲುತ್ತದೆ.

ಚುನಾವಣಾ ಸಿಬ್ಬಂದಿಗೆ ತರಬೇತಿ ನೀಡುವ ಸಂದರ್ಭದಲ್ಲಿಯೇ ಮೊಬೈಲ್‌ ಬಳಕೆಗೆ ಸಂಬಂಧಿಸಿದಂತೆ ಒಂದಿಷ್ಟು ಸೂಚನೆಗಳನ್ನು ನೀಡಲಾಗಿತ್ತು. ಪಿಆರ್‌ಓ (ಪ್ರಿಸೈಡಿಂಗ್‌ ಆಫೀಸರ್‌) ಹೊರತುಪಡಿಸಿ ಮತಗಟ್ಟೆಯಲ್ಲಿನ ಇತರ ಸಿಬ್ಬಂದಿ ಹಾಗೂ ಮತದಾರರಿಗೆ ಮೊಬೈಲ್‌ ಬಳಸಲು ಯಾವುದೇ ಕಾರಣಕ್ಕೂ ಅವಕಾಶಲ್ಲವೆಂಬುದು ಅದರಲ್ಲಿ ಮುಖ್ಯವಾದುದು. ಮತ ಚಲಾಯಿಸಲು ಬರುವ ಕೆಲ ಕಿಡಿಗೇಡಿಗಳು ತಾವು ಯಾರಿಗೆ ಮತ ಚಲಾಯಿಸಿದೆವು ಎಂಬುದನ್ನು ಮೊಬೈಲ್‌ನಲ್ಲಿ ವೀಡಿಯೋ ತೆಗೆಯುವ ಮೂಲಕ ಜಗತ್ತಿಗೆ ಸಾರಲೂಬಹುದು. ಹಾಗೇನಾದರೂ ಆದರೆ ಅದು ನಿಮ್ಮ ಕುತ್ತಿಗೆಗೆ ಬರುತ್ತದೆ ಎಂಬ ಎಚ್ಚರಿಕೆ ಪಿಆರ್‌ಓಗಳಿಗೆ ತರಬೇತಿ ವೇಳೆ ರವಾನೆಯಾಗಿತ್ತು.

ಹಾಗೆಂದು, ಚುನಾವಣಾ ಆಯೋಗವೇನೂ ತನ್ನ ಅನುಕೂಲಕ್ಕೆ ಮೊಬೈಲ್‌ ಬಳಸಿಕೊಳ್ಳಲು ಇರುವ ಯಾವ ಅವಕಾಶವನ್ನೂ ಕೈ ಬಿಡಲು ತಯಾರಿರಲಿಲ್ಲ. ಚುನಾವಣಾ ಸಿಬ್ಬಂದಿಗೆ “ಪೋಲ್‌ ಸ್ಟಾರ್‌’ ಎಂಬ ಆಪ್‌ ಬಳಸಲು ಸೂಚಿಸುವುದರಿಂದ ಹಿಡಿದು ಮತದಾನದ ಅಂಕಿಅಂಶಗಳನ್ನು ಸಂಗ್ರಹಿಸಲು ಸಿಬ್ಬಂದಿಗೆ ಸೂಚನೆಗಳನ್ನು ರವಾನಿಸಲು ಮೊಬೈಲ್‌ ಮೊರೆ ಹೋಗಿತ್ತು.

ಆಯೋಗದ ಕಟ್ಟುನಿಟ್ಟಿನ ಸೂಚನೆಯನ್ನು ಒಂದು ಕಿವಿಯಲ್ಲಿ ಕೇಳಿ ಮತ್ತೂಂದರಲ್ಲಿ ಹೊರ ಹಾಕಿದ್ದ ಸೆಲ್ಫಿ ಪ್ರಿಯ ಚುನಾವಣಾ ಸಿಬ್ಬಂದಿಯ ಆರ್ಭಟವನ್ನು ಕಣ್ತುಂಬಿಕೊಳ್ಳುವ ಸದವ‌ಕಾಶ ಚುನಾವಣೆಯ ಹಿಂದಿನ ದಿನ ಸಾಮಗ್ರಿಗಳನ್ನು ಪಡೆದುಕೊಳ್ಳಲು ಮಸ್ಟರಿಂಗ್‌ ಕೇಂದ್ರದಲ್ಲಿ ಕಾದು ಕುಳಿತಿದ್ದಾಗಲೇ ಒದಗಿ ಬಂತು. ಪಕ್ಕದಲ್ಲೇ ಕುಳಿತಿದ್ದ ಪಿಆರ್‌ಓ ಒಬ್ಬರು ಅದಾಗಲೇ ತಮ್ಮನ್ನು ಮಸ್ಟರಿಂಗ್‌ ಕೇಂದ್ರಕ್ಕೆ ಕರೆತಂದಿದ್ದ ಬಸ್ಸಿನ ಎದುರು ನಿಂತು ತೆಗೆದುಕೊಂಡಿದ್ದ ಸೆಲ್ಫಿಗಳಲ್ಲಿ ಚೆಂದದ ಒಂದನ್ನು ಆರಿಸುವ ಕಾಯಕದಲ್ಲಿ ತಲ್ಲೀನರಾಗಿದ್ದರು. ಕೊನೆಗೂ ಒಂದನ್ನು ಆಯ್ಕೆ ಮಾಡಿ, ಫೇಸ್‌ಬುಕ್‌ಗೆ ಹಾಕಿ ಅದಕ್ಕೊಂದು ಪಂಚ್‌ಲೈನ್‌ ಬರೆಯತೊಡಗಿದ್ದರು. ಅದು ಹೀಗಿತ್ತು, “ಚುನಾವಣೆ ನಡೆಸಲು ನಾವು ರೆಡಿ, ಮತ ಚಲಾಯಿಸಲು ನೀವು ರೆಡಿನಾ?’

“ಅಯ್ಯೋ ಮೊಬೈಲೇ, ಏನಿದು ನಿನ್ನ ಮಾಯೆ!’ ಎಂದು ಪಿಳಿ ಪಿಳಿ ಕಣ್ಣು ಬಿಡುವುದಷ್ಟೇ ನನ್ನಿಂದ ಸಾಧ್ಯವಾದದ್ದು. ಈ ಮೊಬೈಲಿನ ದೆಸೆಯಿಂದ ನಮಗೆ ಇನ್ನು ಅದು ಏನೇನು ಕಾದಿದೆಯೋ ಅಂತ ಒಳಗೊಳಗೆ ಆತಂಕಗೊಂಡು, ಅದನ್ನು ಪಕ್ಕದಲ್ಲೇ ಕುಳಿತಿದ್ದ ಸೆಲ್ಫಿ ಪ್ರಿಯರೆದುರಿಗೆ ತೋರಿಸಿಕೊಳ್ಳದೆ ತೆಪ್ಪಗಿದ್ದೆ. 

ಚುನಾವಣಾ ಸಾಮಾಗ್ರಿ ಪಡೆದು ನಮ್ಮ ತಂಡದೊಂದಿಗೆ ನಿಯೋಜಿತ ಮತಗಟ್ಟೆಗೆ ತೆರಳಿದ ಮೇಲೆ, ತರಬೇತಿ ವೇಳೆ ನಮಗೆ ನೀಡಿದ್ದ ಸೂಚನೆಯನ್ನು ತಂಡದ ಇತರ ಸದಸ್ಯರ ಗಮನಕ್ಕೆ ತಂದೆ. “ಸರಿ ಬಿಡಿ, ಬೇಕಿದ್ರೆ ನಿಮ್‌ ಕೈಗೆ ನಮ್‌ ಮೊಬೈಲ್‌ ಕೊಟ್ಟು ಬಿಡ್ತಿವಿ’ ಅಂತ ಒಬ್ಬರು ವ್ಯಂಗ್ಯದ ನಗೆ ಬೀರಿದ್ರು. ನಾನು ಮತ್ತೇನೂ ಮಾತಾಡೋಕೆ ಹೋಗ್ಲಿಲ್ಲ. ಆನಂತರ ಸಿದ್ಧತಾ ಕಾರ್ಯದಲ್ಲಿ ತಲ್ಲೀನರಾದೆವು.

ಈ ನಡುವೆ ಚುನಾವಣಾ ಪ್ರಕ್ರಿಯೆ, ನಿಯಮಾವಳಿಗಳನ್ನು ತಿಳಿಸಿಕೊಡುವ ಸಾಕಷ್ಟು ವೀಡಿಯೋ, ಪಿಪಿಟಿಗಳು ವಾಟ್ಸಾಪ್‌ ಗ್ರೂಪುಗಳಲ್ಲಿ ಹರಿದಾಡುತ್ತಿದ್ದವು. ಅಲ್ಲದೇ ಆಯೋಗದಿಂದ ಹೊರ ಬೀಳುತ್ತಿದ್ದ ಸುತ್ತೋಲೆಗಳು ಕೂಡ ವಾಟ್ಸಾಪ್‌ ಮೂಲಕ ತಲುಪುತ್ತಿದ್ದವು. ಇವುಗಳ ಜೊತೆಗೆ ಕೆಲ ಸುಳ್ಳುಗಳು, ವದಂತಿಗಳು ಹರಡಲು ಕೂಡ ಮೊಬೈಲ್‌ ಮತ್ತದರೊಳಗಿನ ವಾಟ್ಸಾಪು ಕಾರಣವಾಗತೊಡಗಿದ ನಂತರ, ವಾಟ್ಸಾಪ್‌ನಲ್ಲಿ ಬಂದ ಮಾತ್ರಕ್ಕೆ ಅದನ್ನು ಸತ್ಯವೆಂದು ತಿಳಿಯಬೇಡಿ ಎಂಬ ಎಚ್ಚರಿಕೆಯೂ ಚುನಾವಣಾ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗೆ ರವಾನೆಯಾಯಿತು. ಸುಳ್ಳು ಹರಡುವ ಚಾಳಿ ಚುನಾವಣಾ ಸಿಬ್ಬಂದಿಯನ್ನೂ ವ್ಯಾಪಿಸಿಕೊಳ್ಳದೇ ಬಿಡಲಿಲ್ಲ.

ಚುನಾವಣೆಯ ದಿನ ಅಂತೂ ಅಣುಕು ಮತದಾನವೆಲ್ಲ ಮುಗಿದು, ಎಲ್ಲವೂ ಸುಸೂತ್ರವಾಗಿ ಸಾಗುತ್ತಿದೆ ಎಂದು ನಿಟ್ಟುಸಿರು ಬಿಡುವಾಗಲೇ ಜೊತೆಗಿದ್ದ ಚುನಾವಣಾ ಸಿಬ್ಬಂದಿಗಳಲ್ಲಿ ಇಬ್ಬರು ಸೆಲ್ಫಿಗೆ ಪೋಸು ನೀಡುವುದರಲ್ಲಿ ತಲ್ಲೀನರಾಗಿದ್ದು ಕಂಡು ಬಂತು. ಕೂಡಲೇ ಮತ್ತೂಮ್ಮೆ ಮೊಬೈಲ್‌ ಬಳಕೆಗೆ ಇರುವ ನಿರ್ಬಂಧದ ಕುರಿತು ಹೇಳಿ, ದಯಮಾಡಿ ಈ ಒಂದು ದಿನದ ಮಟ್ಟಿಗಾದರೂ ತಮ್ಮ ಸೆಲ್ಫಿ ವ್ಯಾಮೋಹವನ್ನು ಬದಿಗಿರಿಸುವ ಮೂಲಕ ಈ ಮತಗಟ್ಟೆಗೆ ನಿಯೋಜಿಸಲ್ಪಟ್ಟಿರುವ ಎಲ್ಲರಿಗೂ ಉಪಕರಿಸಬೇಕಾಗಿ ಪರೋಕ್ಷವಾಗಿ ವಿನಂತಿಸಿದೆ. ಸೆಲ್ಫಿಪ್ರಿಯ ಶಿಕ್ಷಕರು ಬಡಪೆಟ್ಟಿಗೆ ಬಾಗದೆ ಹೋದಾಗ ದನಿ ಎತ್ತರಿಸಿಯೇ ಹೇಳಬೇಕಾಯ್ತು. “ಅಯ್ಯೋ ಮೊಬೈಲೇ, ಏನಿದು ನಿನ್ನ ಮಾಯೆ!’ ಎಂದು ಗೊಣಗಿಕೊಂಡೆ.

ವಿಪರ್ಯಾಸವೆಂದರೆ, ಹಾಗೆ ಸೆಲ್ಫಿ ತೆಗೆದುಕೊಳ್ಳಲು ಮುಂದಾದವರಲ್ಲಿ ಒಬ್ಬರಿಗೆ, ಮತ ಚಲಾಯಿಸಲು ಬರುವವರು ಮತಗಟ್ಟೆಯೊಳಗೆ ಮೊಬೈಲ್‌ ಬಳಸದಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ಆ ಮೊದಲೇ ವಹಿಸಿಬಿಟ್ಟಿದ್ದೆ. ಆ ತಪ್ಪಿಗೆ ಪ್ರಾಯಶ್ಚಿತ್ತವಾಗಿ ಸೆಲ್ಫಿ ಪ್ರಿಯ ಸಿಬ್ಬಂದಿ ಮತ್ತು ಮತದಾರರಿಬ್ಬರ ಮೇಲೂ ಹದ್ದಿನ ಕಣ್ಣಿಡಬೇಕಾದ ಹೊಣೆಗಾರಿಕೆ ಹೆಗಲೇರಿತು. ಅದೃಷ್ಟವಶಾತ್‌ ಮತ್ತೆ ಮೊಬೈಲ್‌ನಿಂದಾಗಿ ಪೇಚಿಗೆ ಸಿಲುಕುವ ಪ್ರಸಂಗ ಎದುರಾಗದೆ ನಿಟ್ಟುಸಿರು ಜೊತೆಯಾಯಿತು.

ಚುನಾವಣಾ ಕೆಲಸ ಮುಗಿಸಿ ಮನೆ ಸೇರಿದ ನಂತರ ಫೇಸ್‌ಬುಕ್‌ ತೆರೆದು ನೋಡಿದರೆ, ಅಲ್ಲೂ ಸೆಲ್ಫಿಪ್ರಿಯರ ಆರ್ಭಟವೇ. ಚುನಾವಣಾ ಕರ್ತವ್ಯ ನಿರ್ವಹಿಸಿದ ಮತ್ತು ಮತ ಚಲಾಯಿಸಲು ಹೋದ ಕೆಲವರು ಮತಗಟ್ಟೆಯಲ್ಲಿಯೇ ಸೆಲ್ಫಿ ಕ್ಲಿಕ್ಕಿಸಿಕೊಂಡು ಅದನ್ನು ಫೇಸ್‌ಬುಕ್‌ನ‌ಲ್ಲೂ ಪೋಸ್ಟ್‌ ಮಾಡುವ ಮೂಲಕ ಮತದಾನದ ಕುರಿತು ಜಾಗೃತಿ ಮೂಡಿಸಿರು ವುದು ಗಮನಕ್ಕೆ ಬಂದು ಮತ್ತೂಮ್ಮೆ, “ಅಯ್ಯೋ ಮೊಬೈಲೇ, ಏನಿದು ನಿನ್ನ ಮಾಯೆ!’ ಅಂತ ನಿರಾಳವಾಗಿ ನಗುವ ಸರದಿ ಎದುರಾಯಿತು.

ಮಾರನೆಯ ದಿನ ಬೆಳಗ್ಗೆ ಪೇಪರ್‌ನಲ್ಲಿ ಓದಿದ ಸುದ್ದಿಯೊಂದು ನನ್ನೆಲ್ಲ ಆತಂಕ ಮತ್ತು ಅದರ ನಡುವಿನಿಂದ ಹೊರಹೊಮ್ಮಿದ ಎಚ್ಚರದ ಪ್ರಜ್ಞೆ ಸಕಾರಣವಾದುದೇ ಎಂಬುದನ್ನು ಸಾರಿ ಹೇಳಿತು. ಮಂಡ್ಯ ಜಿಲ್ಲೆಯ ಮತಗಟ್ಟೆಯೊಂದರಲ್ಲಿ ತನ್ನ ಅಜ್ಜನಿಗೆ ಸಹಾಯಕನಾಗಿ ಮತ ಚಲಾಯಿಸಿದ ಮಹಾನುಭಾವನೊಬ್ಬ ಅದನ್ನೆಲ್ಲ ವೀಡಿಯೋ ಮಾಡಿರುವುದು ಮತ್ತು ಆ ಕಾರಣಕ್ಕೆ ಆ ಮತಗಟ್ಟೆಯ ಪಿಆರ್‌ಓ ವಿರುದ್ಧ ಶಿಸ್ತು ಕ್ರಮ ಜರುಗಿಸಿರುವುದು ಸುದ್ದಿಯಾಗಿತ್ತು.

ಮತ್ತೂಂದು ವಿಪರ್ಯಾಸದ ಕುರಿತು ಹೇಳಲೇಬೇಕು. ಮತಗಟ್ಟೆಯಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಂದಾಗಿ ಗೊಣಗಿಕೊಂಡು ಸುಮ್ಮನಾಗಿದ್ದವರೇ ಆನಂತರ, ಮತಗಟ್ಟೆಯಲ್ಲಿ ಹಾಜರಿದ್ದ ರಾಜಕೀಯ ಪಕ್ಷಗಳ ಏಜೆಂಟರ ಜೊತೆಗಿನ ಮಾತುಕತೆಯ ವೇಳೆ, ಈಗಿನ ಮಕ್ಕಳ ಕೈಗೆ ಮೊಬೈಲು ಸಿಕ್ಕ ಮೇಲೆ ಅವರು ಅಂಗಳದಲ್ಲಿ ಇತರ ಮಕ್ಕಳೊಂದಿಗೆ ಕೂಡಿ ಆಡುವುದರಿಂದ ವಿಮುಖರಾಗಿರುವ ಕುರಿತು ತೀವ್ರ ವಿಷಾದ ವ್ಯಕ್ತಪಡಿಸಿದ್ದರು. ಮಕ್ಕಳು ಮನುಷ್ಯರಿಗಿಂತ ಮೊಬೈಲನ್ನೇ ಹೆಚ್ಚು ಹಚ್ಚಿಕೊಳ್ಳುತ್ತಿ¨ªಾರೆ ಎಂಬ ಅಭಿಪ್ರಾಯಕ್ಕೆ ಎಲ್ಲರೂ ತಮ್ಮ ಸಮ್ಮತಿಯ ಮುದ್ರೆ ಒತ್ತಿದ್ದರು. 

ಶರತ್‌ ಎಚ್‌. ಕೆ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.ಈ ವಿಭಾಗದಿಂದ ಇನ್ನಷ್ಟು

  • ಮೊನ್ನೆ ಮೊನ್ನೆ ಕೇರಳದ ಚಲನಚಿತ್ರ ನಟಿ ಮಂಜು ವಾರಿಯರ್‌ತಂಡ ಇದೇ ಛತ್ರುವಿನಲ್ಲಿ ಪ್ರವಾಹಕ್ಕೆ ಸಿಕ್ಕಿ ಸೆಟಲೈಟ್‌ ಫೋನಿನ ಮೂಲಕ ಅವರನ್ನು ರಕ್ಷಿಸಲಾಯಿತು ಎಂಬ...

  • ದೇವರು ಪ್ರಾಣಿಗಳನ್ನೆಲ್ಲ ಸೃಷ್ಟಿಸಿದ ಬಳಿಕ ಅವುಗಳ ಸಭೆ ಕರೆದ. ""ನಾನು ತುಂಬ ಶ್ರಮವಹಿಸಿ ಬೇರೆ ಬೇರೆ ವಿಧದ ಪ್ರಾಣಿಗಳನ್ನು ಸೃಷ್ಟಿಸಿದ್ದೇನೆ. ನಿಮಗಾಗಿ ಎಲ್ಲ...

  • (ಈ ಕತೆಯಲ್ಲಿ ವರ್ಷಕಾಲದ ಭೀಕರ ಚಿತ್ರಣವಿದೆ. ಇದು ಕತೆಯ ಪೂರ್ಣಪಾಠವಲ್ಲ.) ಸಿಡಿಲು ಗುಡುಗು, ಮಿಂಚು, ಗಾಳಿ, ಮಳೆ- ಇವುಗಳಿಂದ ರಾತ್ರಿ ಹುಚ್ಚೆದ್ದ ಭೈರವಿಯಾಗಿತ್ತು....

  • ಹೊಸ ಅಂಕಣ... ಪ್ರತಿದಿನ ಬೆಳಗ್ಗೆ ಏಳರ ಹೊತ್ತಿಗೆ 70 ಜನ ಕೂರಬಹುದಾದ ಎಟಿಆರ್‌ ವಿಮಾನವೊಂದು ಬೆಂಗಳೂರಿನಿಂದ ಕೊಚ್ಚಿನ್‌ ಮಾರ್ಗವಾಗಿ ಲಕ್ಷದ್ವೀಪ ಸಮೂಹದ ಅಗತ್ತಿ...

  • ತಿರುಗಾಟ ಜಗತ್ತಿನಾದ್ಯಂತ ಹೆಚ್ಚುತ್ತಿದೆ. ಸಹಜವಾಗಿ ನಮಗಾಗುವ ವೈವಿಧ್ಯಮಯ ಅನುಭವಗಳೂ ವಿಸ್ತೃತವಾಗುತ್ತವೆ. ಬಹುಶಃ "ದೇಶ ಸುತ್ತು ಕೋಶ ಓದು' ಎಂಬ ಗಾದೆ ನಮಗೆ ಅರ್ಥ...

ಹೊಸ ಸೇರ್ಪಡೆ